ದಲಿತರನ್ನು ಕಾಂಗ್ರೆಸ್ ಸಿಎಂ ಮಾಡಬಹುದಿತ್ತಲ್ಲವೇ ?
ಅಭಿವ್ಯಕ್ತ
ಮಾರುತೀಶ್ ಅಗ್ರಾರ
ಕಾಂಗ್ರೆಸ್ ದಶಕಗಳ ಕಾಲ ವೇದಿಕೆ-ಸಭೆ-ಸಮಾರಂಭಗಳಲ್ಲಿ ರಾಜಕಾರಣಕ್ಕಾಗಿ ದಲಿತರ ಬಗ್ಗೆ ಸಾಕಷ್ಟು ಅನುಕಂಪದ ಮಾತನಾಡಿ ನಂತರ ಅವರ ಕಡೆ ತಿರುಗಿಯೂ ನೋಡದೆ ಯಮಾರಿಸಿದ್ದು ಇದೆ. ಮಾತೆತ್ತಿದರೆ ಅಂಬೇಡ್ಕರ್ ಹಾಗೂ ಅವರ ಸಿದ್ಧಾಂತ, ಸಂವಿಧಾನದ ಬಗ್ಗೆ ಆಡಿ ಹೊಗಳುವ ಕಾಂಗ್ರೆಸ್ ಮುಖ್ಯಮಂತ್ರಿ ಆಯ್ಕೆ ವಿಚಾರ ಪ್ರಸ್ತಾಪ ವಾದಾಗ ಲೆಲ್ಲ ದಲಿತರಿಂದ ದೂರ ಉಳಿಯುವುದೇಕೆ?
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನಿರೀಕ್ಷೆಗೂ ಮೀರಿದ ಬಹುಮತ ಪಡೆದಿದೆ. ನಾಡಿನ ಮತದಾರ ಬಿಜೆಪಿಯ ಆಡಳಿತಕ್ಕೆ ಬೇಸತ್ತೋ ಅಥವಾ ಕಾಂಗ್ರೆಸ್ಸಿನ ಗ್ಯಾರಂಟಿ ಭಾಗ್ಯಗಳಿಗೆ ತಲೆದೂಗಿ ಕಾಂಗ್ರೆಸ್ ಕಡೆ ಒಲವು ತೋರಿದನೋ ಗೊತ್ತಿಲ್ಲ. ಒಟ್ಟಿನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪ್ರಚಂಡ ಜಯಭೇರಿಯನ್ನಂತು ಬಾರಿಸಿದೆ. ಈ ಬಾರಿ ಬಿಜೆಪಿಯ ಸಿ.ಟಿ. ರವಿ, ಶ್ರೀರಾಮುಲು, ಗೋವಿಂದ ಕಾರಜೋಳ, ವಿ. ಸೋಮಣ್ಣ, ಡಾ. ಕೆ. ಸುಧಾಕರ್, ಮುರುಗೇಶ್ ನಿರಾಣಿ, ಮಾಧುಸ್ವಾಮಿ, ಪಿ. ರಾಜೀವ್ ಹಾದಿಯಾಗಿ ಘಟಾನುಘಟಿ ನಾಯಕರೆಲ್ಲರೂ ಕಾಂಗ್ರೆಸ್ ಅಭ್ಯರ್ಥಿಗಳ ಎದುರು ಮಕಾಡೆ ಮಲಗಿರುವುದು ಅನೇಕರನ್ನು ಅಚ್ಚರಿಗೊಳಿಸಿದೆ.
ಬಿಜೆಪಿ ಹೈಕಮಾಂಡ್ ರಾಜ್ಯದ ಹಿರಿಯ ನಾಯಕರನ್ನು ಬದಿಗೆ ಸರಿಸಿ ಹೊಸ ಮುಖಗಳನ್ನು ಚುನಾವಣೆಗೆ ಇಳಿಸುವ ಪ್ರಯೋಗಕ್ಕೆ ಮುಂದಾದ ಪರಿಣಾಮ ಹಾಗೂ ಯಡಿಯೂರಪ್ಪ ನವರ ನಂತರ ರಾಜ್ಯ ಬಿಜೆಪಿಯಲ್ಲಿ ಮಾಸ್ ಲೀಡರ್‌ನ ಕೊರತೆ ಕಾಡಿದ್ದು ಹಾಗೂ ಎಲ್ಲದ್ದಕ್ಕೂ ಮೋದಿ-ಶಾ ಅವರ ಮೇಲೆಯೇ ಅವಲಂಬಿತವಾಗಿದ್ದುದರ ಪರಿಣಾಮ ಬಿಜೆಪಿ ಈ ಬಾರಿಯ ಚುನಾವಣೆ ಯಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯುವುದರಲ್ಲಿ ವಿಫಲ ವಾಯಿತು.
ಆದರೆ ಕಾಂಗ್ರೆಸ್‌ನಲ್ಲಿ ಹಾಗಾಗಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಸ್ಥಳೀಯವಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಂಥ ಗಟ್ಟಿ ನಾಯಕತ್ವ ಇತ್ತು. ಶಾಮನೂರು ಶಿವಶಂಕರಪ್ಪ, ಟಿ.ಬಿ. ಜಯಚಂದ್ರ ಅವರಂಥ ಹಿರಿಯರಿಗೂ ಕಾಂಗ್ರೆಸ್ ಮಣೆಹಾಕಿತು. ಇನ್ನು ಕುರುಬ ಹಾಗೂ ಒಕ್ಕಲಿಗ ಸಮುದಾಯ ಕಾಂಗ್ರೆಸ್ಸಿನತ್ತ ಹೆಚ್ಚಿನ ಸಂಖ್ಯೆಯಲ್ಲಿ ಮುಖ ಮಾಡಿದ ಪರಿಣಾಮ ಹಾಗೂ ಎಂದಿ ನಂತೆ ದಲಿತರು ಹಾಗೂ ಅಲ್ಪಸಂಖ್ಯಾತ ಸಮುದಾಯ ಕಾಂಗ್ರೆಸ್ ಕಡೆಗೆ ಒಲವು ತೋರಿದ್ದರಿಂದ ಕಾಂಗ್ರೆಸ್ ೧೩೫ ಸೀಟುಗಳನ್ನು ಗೆಲ್ಲಲು ಸಾಧ್ಯವಾಯಿತು ಎನ್ನುವ ಅಭಿಪ್ರಾಯ ರಾಜಕೀಯ ವಿಶ್ಲೇಷಕರಿಂದ ಕೇಳಿ ಬರುತ್ತಿದೆ.
ಯಡಿಯೂರಪ್ಪ ಅವರು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದ ಕಾರಣ ಲಿಂಗಾಯತ ಮತಗಳು ಸಹ ಕಾಂಗ್ರೆಸ್ ಕಡೆ ಒಲಿದವು. ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಿತು. ಆದರೆ ವಿಷಯ ಅದಲ್ಲ. ಕಾಂಗ್ರೆಸ್ ಹೇಗೋ ಬಹುಮತ ಪಡೆದಿದ್ದು ಆಗಿದೆ. ಈಗ ಕಾಂಗ್ರೆಸ್ ಹೈಕಮಾಂಡ್ ಮುಂದೆ ಸಿಎಂ ಆಯ್ಕೆ ಇದೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದರಿಂದ ಇಬ್ಬರಿಗೂ ನೋವಾಗುವುದು ಬೇಡವೆಂದು ಸಾಕಷ್ಟು ಕಸರತ್ತು ನಡೆಸಿ ಹೇಗೋ ಸದ್ಯಕ್ಕೆ ತೇಪೆ ಹಚ್ಚುವ ಕೆಲಸವನ್ನು ಕಾಂಗ್ರೆಸ್ ಹೈಕಮಾಂಡ್ ಮಾಡಿದೆ.
ಇದು ಡಿ.ಕೆ. ಶಿವಕುಮಾರ್ ಅವರಿಗೆ ಸುತಾರಾಂ ಇಷ್ಟವಿಲ್ಲದಿದ್ದರೂ ಹೈಕಮಾಂಡಿನ ಮಾತಿಗೆ ಬೆಲೆ ಕೊಟ್ಟು ತಲೆದೂಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಡಿ.ಕೆ.ಶಿವಕುಮಾರ್ ಅವರ ಸಹೋದರ ಸುರೇಶ್ ಸಿದ್ದರಾಮಯ್ಯನವರಿಗೆ ಸಿಎಂ ಪಟ್ಟ ಕಟ್ಟಿರುವುದಕ್ಕೆ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಡಿಕೆಶಿ ಬೆಂಬಲಿಗರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಹೈಕಮಾಂಡಿಗೆ ಇಬ್ಬರನ್ನು ಸಮಾನವಾಗಿ ಕೊಂಡೊಯ್ಯುವ ಜವಾಬ್ದಾರಿ ಇದ್ದಿದ್ದರಿಂದಲೇ ಡಿಕೆಶಿಯವರ ಮನವೊಲಿಸುವಲ್ಲಿ ಯಶಸ್ವಿಯಾಗಿದೆ.
ಆದರೆ ಕಾಂಗ್ರೆಸ್ ಈ ಬಾರಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿದೆ. ೨೦೧೩ರಲ್ಲಿ ಕುರುಬ ಸಮಾಜದ ನಾಯಕ ಸಿದ್ದರಾಮಯ್ಯನವರ ಮುಂದಾಳತ್ವದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆ ಎದುರಿಸಿದ್ದ ಪರಿಣಾಮ ಆಗ ಮುಖ್ಯಮಂತ್ರಿ ಆಯ್ಕೆವಿಚಾರದಲ್ಲಿ ಸಿದ್ದರಾಮಯ್ಯನವರನ್ನು ಹೊರತುಪಡಿಸಿ ಬೇರೆ ಯಾರೂ ಕೂಡ ಸಿಎಂ ರೇಸಿನಲ್ಲಿ ಇರಲಿಲ್ಲ. ಆಗ ಪಕ್ಷ ಬಹುಮತ ಪಡೆದಿದ್ದರಿಂದ ಸಹಜವಾಗಿಯೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು.
ಇನ್ನು ೨೦೧೮ರ ಚುನಾವಣೆಯನ್ನು ಕಾಂಗ್ರೆಸ್ ಸಿದ್ದರಾಮಯ್ಯನವರ ಮುಂದಾಳತ್ವದಲ್ಲೇ ಎದುರಿಸಿತಾದರೂ ಕಾಂಗ್ರೆಸ್’ಗೆ ಸ್ಪಷ್ಟ ಬಹುಮತ ಬರಲಿಲ್ಲ. ಹಾಗಾಗಿ ಇನ್ನೊಂದು ಬಾರಿ ಮುಖ್ಯಮಂತ್ರಿಯಾಗುವ ‘ಭಾಗ್ಯವನ್ನು ಸಿದ್ದರಾಮಯ್ಯನವರು ಕಳೆದು ಕೊಂಡಿದ್ದು ನಮಗೆಲ್ಲ ಗೊತ್ತಿರುವಂತದ್ದೆ.
ಆದರೆ ಈ ಬಾರಿ ಕಾಂಗ್ರೆಸ್ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಇನ್ನು ಅನೇಕ ರಾಷ್ಟ್ರ-ರಾಜ್ಯ ನಾಯ ಕರುಗಳ ನೇತೃತ್ವದಲ್ಲಿ ಚುನಾವಣೆಗೆ ಇಳಿಯಿತು. ಸಾಲದ್ದಕ್ಕೆ ಉಭಯ ನಾಯಕರುಗಳೇ ಈ ಬಾರಿ ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದು ಘೋಷಿಸಿದ್ದರು. ಸಾಮೂಹಿಕ ನಾಯಕತ್ವವೂ ಈ ಬಾರಿಯ ಕಾಂಗ್ರೆಸ್ ಗೆಲುವಿಗೆ ಸಹಕಾರಿ ಯಾಗಿದೆ ಎಂದರೆ ತಪ್ಪಲ್ಲ.
ಇದೇ ಕಾರಣಕ್ಕೆ ಈ ಬಾರಿ ಮುಖ್ಯಮಂತ್ರಿ ಆಯ್ಕೆ ಕಾಂಗ್ರೆಸ್ ಹೈಕಮಾಂಡ್‌ಗೆ ಇಷ್ಟು ಇಕ್ಕಟ್ಟು ತಂದೊಡ್ಡಿತ್ತು. ಒಂದು ಕಡೆ ಡಿ.ಕೆ. ಶಿವಕುಮಾರ್ ತಾನು ಪಕ್ಷಕ್ಕಾಗಿ ಹಗಲು-ರಾತ್ರಿ ಕೆಲಸ ಮಾಡಿದ್ದೀನಿ, ಪಕ್ಷಕ್ಕಾಗಿ ಜೈಲಿಗೆ ಹೋಗಿದ್ದೇನೆ, ತಾನು ಮೂಲ ಕಾಂಗ್ರೆಸ್ಸಿಗ, ತನು- ಮನ-ಧನ ಎಲ್ಲವನ್ನೂ ಪಕ್ಷಕ್ಕೆ ಅರ್ಪಿಸಿದ್ದೇನೆ. ಹಾಗಾಗಿ ಶತಾಯಗತಾಯ ತಾನೇ ಮುಖ್ಯಮಂತ್ರಿ ಆಗಬೇಕು ಎಂದು ಪಟ್ಟು ಹಿಡಿದಿದ್ದು, ಇನ್ನೊಂದು ಕಡೆ ಸಿದ್ದರಾಮಯ್ಯನವರು ಇದು ನನಗೆ ಕೊನೆ ಅವಕಾಶ, ಮುಂದಿನ ದಿನಗಳಲ್ಲಿ ತಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಹಾಗಾಗಿ ಈ ಬಾರಿ ನಾನೇ ಮುಖ್ಯಮಂತ್ರಿಯಾಗಬೇಕು ಎಂದು ಬಿಗಿಪಟ್ಟು ಹಾಕಿದ್ದು ಎಲ್ಲವೂ ಕಾಂಗ್ರೆಸ್ ಹೈಕಮಾಂಡಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿತ್ತು.
ಆದರೆ ಹೇಗೋ ಎಲ್ಲವನ್ನೂ ನಿಭಾಯಿಸಿದೆ ಎಂದು ಕೊಳ್ಳೋಣ. ಆದರೆ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ದಲಿತರ ನ್ನು ಕಡೆಗಣಿಸಿದ್ದೇಕೆ? ಕಾಂಗ್ರೆಸ್ ಹೈಕಮಾಂಡ್‌ಗೆ ಸುವರ್ಣ ಅವಕಾಶವೊಂದು ಸಿಕ್ಕಿತ್ತು. ಅದೇನಪ್ಪಾ ಅಂದರೆ ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ ಅನ್ನೋ ಮಾತಿನಂತೆ ದಲಿತ ಸಮುದಾಯದ ನಾಯಕರೊಬ್ಬರನ್ನು ಮುಖ್ಯಮಂತ್ರಿ ಮಾಡುವ ಅವಕಾಶ ಕಾಂಗ್ರೆಸ್ ಪಾಲಿಗೆ ವರವಾಗೋ ಅಥವಾ ನೆಪವಾಗೋ ಲಭಿಸಿತ್ತು. ಜೊತೆಗೆ ಡಿ.ಕೆ.ಶಿವಕುಮಾರ್ ಕೂಡ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಆಗ್ತೀನಿ ಅಂದ್ರೆ ತನ್ನದೇನೂ ಅಭ್ಯಂತರವಿಲ್ಲ.
ಆದರೆ ಸಿದ್ದರಾಮಯ್ಯ ಮಾತ್ರ ಮುಖ್ಯಮಂತ್ರಿ ಆಗಬಾರದು ಎನ್ನುವ ಮೂಲಕ ದಲಿತ ಮುಖ್ಯಮಂತ್ರಿ ಆಯ್ಕೆಯ ವಿಚಾರದಲ್ಲಿ ತಾನು ಖರ್ಗೆಯವರ ಜೊತೆಗಿರುತ್ತೇನೆ ಹಾಗೂ ಅದಕ್ಕಾಗಿ ಎಂತಹ ತ್ಯಾಗಕ್ಕೂ ಸಿದ್ಧ ಎಂದಿದ್ದರು. ಕಾಂಗ್ರೆಸ್ ಸಹ ಅನೇಕ ದಶಕಗಳ ಕಾಲ ವೇದಿಕೆ-ಸಭೆ-ಸಮಾರಂಭಗಳಲ್ಲಿ ವೋಟಿನ ರಾಜಕಾರಣಕ್ಕಾಗಿ ದಲಿತರ ಬಗ್ಗೆ ಸಾಕಷ್ಟು ಅನುಕಂಪದ ಮಾತನಾಡಿ ನಂತರ ಅವರ ಕಡೆ ತಿರುಗಿಯೂ ನೋಡದೆ ಯಮಾರಿಸಿದ್ದು ಇದೆ.
ಮಾತೆತ್ತಿದರೆ ಅಂಬೇಡ್ಕರ್ ಹಾಗೂ ಅವರ ಸಿದ್ಧಾಂತ, ಸಂವಿಧಾನದ ಬಗ್ಗೆ ಆಡಿ ಹೊಗಳುವ ಕಾಂಗ್ರೆಸ್ ಮುಖ್ಯಮಂತ್ರಿ ಆಯ್ಕೆ ವಿಚಾರ ಪ್ರಸ್ತಾಪವಾದಾಗಲೆಲ್ಲ ದಲಿತರಿಂದ ದೂರ ಉಳಿಯುವುದೇಕೆ? ಬಿಜೆಪಿ, ಜೆಡಿಎಸ್‌ನವರಿಗೆ ದಲಿತರ ಬಗ್ಗೆ ಕಿಂಚಿತ್ತೂ ಅಭಿಮಾನವಿಲ್ಲ ಹಾಗೂ ಅವರೆಂದೂ ಮುಖ್ಯಮಂತ್ರಿಯಾಗಿ ದಲಿತರನ್ನು ಆರಿಸುವುದಿಲ್ಲ, ದಲಿತರ ಏಳಿಗೆಯನ್ನು ಅವರು ಸಹಿಸುವುದಿಲ್ಲ ಎಂದೆಲ್ಲಾ ಕಾಂಗ್ರೆಸ್ ನಾಯಕರು ವೇದಿಕೆಗಳಲ್ಲಿ ಪುಂಗಿರುವುದು ದಲಿತರನ್ನು ಮೆಚ್ಚಿಸುವುದಕ್ಕಷ್ಟೇ ಸೀಮಿತ ವಾಗಬಾರದು ಎನ್ನುವ ಭಾವನೆ ಕಿಂಚಿತ್ತಾದರೂ ಆ ಪಕ್ಷದ ಹೈಕಮಾಂಡ್ ನಾಯಕ ರಿಗೆ ಇದ್ದಿದ್ದರೆ ದಲಿತ ನಾಯಕರೊಬ್ಬರನ್ನು ಈಗಲಾದರೂ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಬಹುದಿತ್ತಲ್ವಾ? ಅಂಥ ಅವಕಾಶವೊಂದು ಕಾಂಗ್ರೆಸ್ ಪಾಲಿಗೆ ಒದಗಿ ಬಂದಿತ್ತಲ್ಲವೇ? ಆದರೂ ಕಾಂಗ್ರೆಸ್ ಸುಮ್ಮನಾಗಿದ್ದೇಕೆ?  ಕಾಂಗ್ರೆಸ್ ಪಕ್ಷದಲ್ಲಿ  ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ಡಾ. ಜಿ. ಪರಮೇಶ್ವರ್ ಅವರಂಥ ಪ್ರಬಲ ದಲಿತ ಸಮುದಾಯದ ನಾಯಕರಿದ್ದಾರೆ.
ಜೊತೆಗೆ ಇವರೆಲ್ಲರೂ ಕೂಡ ದಶಕಗಳ ಕಾಲ ಕಾಂಗ್ರೆಸ್ ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದಾರೆ. ಮೂಲ ಕಾಂಗ್ರೆಸ್ಸಿಗರು ಕೂಡ.ಸಾಲದ್ದಕ್ಕೆ ನೆಹರೂ ಕಾಲದಿಂದಲೂ ದಲಿತ ಸಮುದಾಯದ ವೋಟುಗಳು ಕಾಂಗ್ರೆಸ್‌ಗೆ ಖಾಯಂ ಆಗಿವೆ. ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲೂ ಹೆಚ್ಚಿನ ದಲಿತರು ಕಾಂಗ್ರೆಸ್‌ಗೆ ಮತ ನೀಡಿದ್ದಾರೆ. ಹೀಗಿದ್ದರೂ ಕಾಂಗ್ರೆಸ್ ದಲಿತರನ್ನು ಕಡೆಗಣಿಸು ತ್ತಿರುವುದೇಕೆ? ಅನ್ನೋ ಪ್ರಶ್ನೆ ಹುಟ್ಟುತ್ತದೆ. ಜೊತೆಗೆ ಕಾಂಗ್ರೆಸ್ ಇಷ್ಟು ವರ್ಷಗಳ ಕಾಲ ದಲಿತರಿಗಾಗಿ ಏನು ಮಾಡಿದೆ? ಎನ್ನುವ ಚರ್ಚೆಗಳು ಯಾವಾಗಲೂ ಕೇಳಿ ಬರುತ್ತಲೇ ಇರುತ್ತವೆ.
ಹಾಗಾಗಿ ಈಗ ತನಗೆ ಒದಗಿ ಬಂದಿರುವ ಅವಕಾಶವನ್ನು ಕಾಂಗ್ರೆಸ್ ಪಕ್ಷ ಸದುಪಯೋಗ ಪಡಿಸಿಕೊಂಡು ದಲಿತ ಸಮುದಾಯದ ನಾಯಕನನ್ನು ಸಿಎಂ ಮಾಡಿದ್ದರೆ ಮುಂದಿನ ದಿನಗಳಲ್ಲಿ ದಲಿತ ಸಮುದಾಯ ಇನ್ನು ಹೆಚ್ಚು ಗಟ್ಟಿಯಾಗಿ ಕಾಂಗ್ರೆಸ್ ಕಡೆ ನಿಲ್ಲುವುದು ಖಚಿತವೆಂದು ಹೇಳಬಹುದಿತ್ತು. ಜೊತೆಗೆ ದಲಿತರನ್ನು ಮುಖ್ಯಮಂತ್ರಿ ಮಾಡಿದ ಕೀರ್ತಿ ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿತ್ತು. ಇದು ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದಲೂ ಕಾಂಗ್ರೆಸ್‌ಗೆ ವರವಾಗಿ ಪರಿಣಮಿಸುತ್ತಿತ್ತು.
ಆದರೆ ಕಾಂಗ್ರೆಸ್ ಎಂದಿನಂತೆ ದಲಿತರನ್ನು ಹಾಗೂ ಅಲ್ಪಸಂಖ್ಯಾತರನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕೆ ಸೀಮಿತ ಮಾಡಿ ಕೊಂಡಿರುವುದರಿಂದ ದಲಿತ ಸಿಎಂ ಎಂಬ ಕೂಗು ಕೇವಲ ವೇದಿಕೆಗಳಿಗಷ್ಟೇ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ. ಅಂದಹಾಗೆ ರಾಜ್ಯದಲ್ಲಿ ದಶಕಗಳ ಕಾಲ ಕೇಳಿಬರುತ್ತಿದ್ದ ದಲಿತ ಸಿಎಂ ಕನಸಿಗೆ ಕಾಂಗ್ರೆಸ್ ಕೂಡ ಕೊಳ್ಳಿ ಇಟ್ಟು ಆ ಸಮುದಾಯವನ್ನು ಕಡೆಗಣಿಸಿದೆ!