2000 ರುಪಾಯಿ ನೋಟು ರದ್ದತಿಯ ವಾಸ್ತವ
ವಿಶ್ಲೇಷಣೆ
ರಮಾನಂದ ಶರ್ಮಾ
ಒಂದೇ ಕಲ್ಲಿನಿಂದ ೩ ಹಕ್ಕಿಗಳನ್ನು ಹೊಡೆದಿದೆ. ಅನುಪಯುಕ್ತವಾಗಿರುವ ನೋಟುಗಳನ್ನು ಹಿಂತೆಗೆದುಕೊಂಡು ಜನರ ಆಶೋತ್ತರಕ್ಕೆ ಸ್ಪಂದಿಸಿರುವ ಸಂದೇಶ ನೀಡುವುದರೊಂದಿಗೆ, ಬಡ ಮತ್ತು ಮಧ್ಯಮ ವರ್ಗದ ಜನರ ಹಣಕಾಸು ವ್ಯವಹಾರ ಗಳಲ್ಲಿನ ಅನನುಕೂಲಗಳನ್ನು ನಿವಾರಿಸಿದ ಕ್ರೆಡಿಟ್ ಪಡೆದಿದೆ. ಅದಕ್ಕೂ ಮಿಗಿಲಾಗಿ ಹುದುಗಿಟ್ಟಿರುವ ಅಪಾರ ಪ್ರಮಾಣದ ಕಪ್ಪು ಹಣ ಬಿಲ ಬಿಟ್ಟು ಹೊರ ಬರುವಂತೆ ಮಾಡಿದೆ.
ತೀರಾ ಇತ್ತೀಚಿನವರೆಗೆ ವದಂತಿಯಾಗಿದ್ದ ೨೦೦೦ ರು. ನೋಟಿನ ಹಿಂಡೆಯುವಿಕೆ ಈಗ ವಾಸ್ತವವಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಘೋಷಿಸಿ ಜನರಿಗೆ, ಬ್ಯಾಂಕಿಂಗ್ ವಲಯಕ್ಕೆ ಶಾಕ್ ನೀಡಿದೆ. ೨೦೧೬ ರಲ್ಲಿ ೧೦೦, ೫೦೦ ನೋಟುಗಳನ್ನು ರದ್ದತಿ ಮಾಡಿದ್ದು ದಿಢೀರ ಕ್ರಮವಾಗಿತ್ತು.
ಆದರೆ, ಈ ಬಾರಿ ಇಂಥದ್ದೊಂದು ಕ್ರಮ ಬರಬಹುದೆಂದು ಜನರು ಬಹುದಿನಗಳಿಂದ ನಿರೀಕ್ಷಿಸಿದ್ದು, ನೋಟು ಹಿಂಪಡೆಯು ವಿಕೆಯ ಶಾಕ್‌ಗೆ ಹಿಂದಿನ ತೀವ್ರತೆ ಕಾಣಲಿಲ್ಲ. ಭಾಜಪದ ರಾಜ್ಯಸಭಾ ಸದಸ್ಯ, ಬಿಹಾರದ ಮಾಜಿ ಹಣಕಾಸು ಸಚಿವ ಸುಶೀಲ್ ಮೋದಿಯವರು ಡಿಸೆಂಬರ್ ೨೦೨೨ ರಲ್ಲಿ, ೨೦೧೬ ರ ನೋಟು ರದ್ದತಿ ನಂತರ ಬಳಕೆಯಲ್ಲಿ ತಂದಿರುವ ೨೦೦೦ ರು. ನೋಟುಗಳನ್ನು ಹಿಂಪಡೆಯಬೇಕು ಎಂದು ರಾಜ್ಯಸಭೆಯಲ್ಲಿ ಬಲವಾಗಿ ಆಗ್ರಹಿಸಿದ್ದರು, ಈ ನೋಟುಗಳನ್ನು ಬದಲಿಸಲು ಜನತೆಗೆ ಹೆಚ್ಚು ಕಾಲಾವ ಕಾಶವನ್ನೂ ನೀಡಬೇಕೆಂದು ಒತ್ತಾಯಿಸಿದ್ದರು.
ತಕ್ಷಣ ಸರ್ಕಾರ ಇವರ ಬೇಡಿಕೆಗೆ ಸ್ಪಂದಿಸದಿದ್ದರೂ, ಈ ಪ್ರಸ್ತಾವ ಆಡಳಿತ ಪಕ್ಷದ ಸದಸ್ಯರಿಂದ, ಅದರಲ್ಲೂ ಅವರ ಹಿರಿಯಸದಸ್ಯರಿಂದ ಪ್ರಸ್ತಾಪವಾಗಿರುವುದರಿಂದ, ಈ ವದಂತಿಗೆ ತೂಕ ದೊರೆತು, ಇದು ಆಗಬಹುದು ಎನ್ನುವ ನಿರೀಕ್ಷೆ ಮೊಳಕೆ ಯೊಡೆದು ವದಂತಿಗಳು ಹರಿಯತೊಡಗಿದ್ದವು. ಕಾಕತಾಳೀಯ ಎನ್ನುವಂತೆ ೨೦೧೮ ರಿಂದ ರಿಸರ್ವ್ ಬ್ಯಾಂಕ್ ೨೦೦೦ ರು. ಮುಖ ಬೆಲೆಯ ನೋಟುಗಳನ್ನು ಮುದ್ರಿಸುವುದನ್ನು ನಿಲ್ಲಿಸಿದ್ದು ವದಂತಿಗಳಿಗೆ ರೆಕ್ಕೆ ಪುಕ್ಕಗಳು ಬಂದಿದ್ದವು. ಇತ್ತೀಚಿನ ದಿನಗಳಲ್ಲಿ ಎಟಿಎಂಗಳಲ್ಲಿ ಈ ನೋಟುಗಳು ಅಪರೂಪವಾಗಿದ್ದು, ಬ್ಯಾಂಕುಗಳಲ್ಲಿ ಕೂಡ ಚಲಾವಣೆ ಪ್ರಮಾಣ ಕಡಿಮೆ ಯಾಗಿತ್ತು ಎಂದು ಹೇಳಲಾಗುತ್ತದೆ.
ಅಂತೆಯೇ ಈ ನೋಟುಗಳ ಹಿಂಪಡೆಯುವಿಕೆ ೨೦೧೬ ರ ೧೦೦, ೫೦೦ ರು. ನೋಟುಗಳ ಹಿಂಪಡೆದಷ್ಟು ಆತಂಕಕಾರಿಆಗದು ಎನ್ನುವ ಅಭಿಪ್ರಾಯ ಮಾರುಕಟ್ಟೆಯಲ್ಲಿ ವ್ಯಕ್ತ ವಾಗುತ್ತಿದೆ. ಜನಸಾಮಾನ್ಯರ ಕೈಯಲ್ಲಿ ಈ ನೋಟುಗಳು ಗಮನಾರ್ಹ ವಾಗಿ ಇರದಿರುವುದೇ ಕಾರಣ ಎನ್ನಬಹುದು. ಹಣ ದುಬ್ಬರದ ದಿನಗಳಲ್ಲಿ ೨೦೦೦ ರು. ನೋಟನ್ನು ವ್ಯಾಲೆಟ್‌ನಲ್ಲಿ ಅಥವಾ ಕಿಸೆಯಲ್ಲಿ ಇಟ್ಟಿರುವುದು ಲಕ್ಸುರಿ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಹಾಗೆಯೇ ೨೦೦೦ ರು. ಮುಖಬೆಲೆಯ ನೋಟುಗಳನ್ನು ಹೆಚ್ಚಾಗಿ ದಿನನಿತ್ಯದ ವ್ಯವಹಾರಗಳಿಗೆ ಬಳಸದೆ ಇರುವುದು ರಿಸರ್ವ್ ಬ್ಯಾಂಕ್ ಮತ್ತು ಸರ್ಕಾರದ ಗಮನಕ್ಕೆ ಬಂದಿರುವುದು, ದೇಶದ ಕರೆನ್ಸಿ ನೋಟುಗಳ ಗರಿಷ್ಠ ಮುಖಬೆಲೆ ದಿನಗೂಲಿ ನೌಕರನ ಸಂಬಳ ಮೀರಬಾರದು ಎನ್ನುವ ಕೆಲವು ತಜ್ಞರ ಅಭಿಪ್ರಾಯಗಳೂ ಸರ್ಕಾರದ ಈ ಕ್ರಮದ ಹಿಂದೆ ಇದೆ ಎಂದು ಹೇಳಲಾಗುತ್ತದೆ.
ಇತರ ಮುಖ ಬೆಲೆಯ ನೋಟುಗಳ ಪೂರೈಕೆ ಬೇಡಿಕೆಗೆ ಸ್ಪಂದಿಸುತ್ತಿರುವುದು ಇನ್ನೊಂದು ಕಾರಣ ಎನ್ನಲಾಗುತ್ತದೆ. ೨೦೧೮ ರ ಮಾರ್ಚ್ ೩೧ ಕ್ಕೆ ೨೦೦೦ ರು. ಮುಖ ಬೆಲೆಯ ೬.೭೩ ಲಕ್ಷ ಕೋಟಿ ಮೌಲ್ಯದ ನೋಟುಗಳು ಇದ್ದರೆ, ೨೦೨೩ ಮಾರ್ಚ್ ೩೧ ಕ್ಕೆ ಇದು ೩.೬೨ ಲಕ್ಷ ಕೋಟಿಗೆ ಇಳಿದಿದ್ದು, ಇದು ಒಟ್ಟೂ ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳ ೧೦.೮% ಆಗಿದ್ದು, ಇದು ೨೦೧೭ ರ ಮೊದಲು ಮುದ್ರಿಸಲಾದ ಈ ನೋಟುಗಳ ೮೯% ಆಗಿದ್ದು , ರಿಸರ್ವ್ ಬ್ಯಾಂಕ್‌ನ ‘ಕ್ಲೀನ್ ನೋಟ್’ ಪಾಲಿಸಿ ಅನುಗುಣವಾಗಿ ೪-೫ ವರ್ಷ ಗಳ ಜೀವಿತಾವಧಿ(ಟಜಿ ಠಿಚಿಟಿ)ಯನ್ನು ಮುಗಿಸಿರುತ್ತವೆ.
ಅಂತೆಯೇ ಆರ್ಥಿಕ ತಜ್ಞರು, ಬ್ಯಾಂಕರುಗಳು ೨೦೦೦ ರು. ಮುಖಬೆಲೆಯ ನೋಟುಗಳನ್ನು ಸರ್ಕಾರ ಹಿಂಪಡೆಯುವ ಸಾಧ್ಯತೆಯನ್ನು ಚರ್ಚಿಸುತ್ತಿದ್ದರು. ಇದಕ್ಕೆ ಪೂರಕವಾಗಿ ಊಹಾಪೋಹಗಳನ್ನು ಆಧರಿಸಿ ಕೆಲವು ದೃಶ್ಯ, ಮುದ್ರಣ ಮಾಧ್ಯಮ ಗಳು ಈ ಧಾಟಿ ಯಲ್ಲಿ ಚಿಂತನ- ಮಂಥನಗಳನ್ನು ಕೂಡ ನಡೆಸುತ್ತಿದ್ದವು. ಕಪ್ಪು ಹಣವನ್ನು ಹೊರತರಲು, ಅಪಾರ ಹಣವನ್ನು ಹೋರ್ಡಿಂಗ್ ಮಾಡುವುದನ್ನು ನಿಯಂತ್ರಿಸಲು ಮತ್ತು ನಿಲ್ಲಿಸಲು, ೧೦೦೦, ೫೦೦ ಮುಖಬೆಲೆಯ ನೋಟುಗಳನ್ನು೨೦೧೬ ನವೆಂಬರ್‌ನಲ್ಲಿ ರದ್ದು ಗೊಳಿಸಲಾಗಿತ್ತು.
ನಂತರದ ದಿನಗಳಲ್ಲಿ ೨೦೦೦ ರು. ಮುಖ ಬೆಲೆಯ ನೋಟುಗಳನ್ನು ಬಳಕೆಯಲ್ಲಿ ತರಲಾಗಿತ್ತು. ಆದರೆ, ದಿನ ನಿತ್ಯದಜೀವನದಲ್ಲಿ ಈ ನೋಟುಗಳ ಉಪಯುಕ್ತತೆ ನಿರೀಕ್ಷೆಯಷ್ಟು ಇರದಿರುವುದು, ದಿನ ನಿತ್ಯದ ವ್ಯವಹಾರದಲ್ಲಿ ಇದರ ಬಳಕೆಯಲ್ಲಿ ಆಗುವ ಅನನುಕೂಲದ ಬಗೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಮುಖ ಬೆಲೆಯ ನಕಲಿ ನೋಟುಗಳು ಭಾರೀ ಪ್ರಮಾಣ ದಲ್ಲಿ ಚಲಾವಣೆಯಲ್ಲಿರುವುದರಿಂದ ಈ ನೋಟುಗಳನ್ನು ಬಳಸಿಕೊಂಡು ದೊಡ್ಡ ಪ್ರಮಾಣದಲ್ಲಿ ಅಕ್ರಮ ಸಂಪತ್ತು ಹೋರ್ಡಿಂಗ್ಆಗುವುದನ್ನು ತಜ್ಞರು ಸರ್ಕಾರದ ಗಮನಕ್ಕೆ ತಂದಿದ್ದರು.
ಕಪ್ಪುಹಣವನ್ನು ನಿಯಂತ್ರಿಸುವುದು ಮತ್ತು ಹೋರ್ಡಿಂಗ್ ತಡೆಯುವುದು ೧೦೦೦, ೫೦೦ ರು. ನೋಟುಗಳ ಹಿಂಪಡೆಯ ವಿಕೆಯ ಹಿಂದಿನ ಕಾರಣವಾದರೆ, ೨೦೦೦ ರು. ನೋಟುಗಳನ್ನು ಈ ಕಾರಣಕ್ಕಾಗಿಯೇ ನಿಲ್ಲಿಸಬೇಕು ಎನ್ನುವುದು ಸುಶೀಲ್ ಮೋದಿಯವರ ವಾದವಾಗಿತ್ತು. ಕೇವಲ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಮಾತ್ರ ದೊಡ್ಡ ಡಿನಾಮಿನೇಷನ್ ನೋಟುಗಳು ಇದ್ದು, ಈ ರಾಷ್ಟ್ರಗಳಲ್ಲಿ ೫೦೦೦ ರು. ಡಿನಾಮಿನಾಷನ್‌ವರೆಗೂ ನೋಟುಗಳಿವೆ. ಆದರೆ ಮುಂದುವರಿದ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿ ಸಣ್ಣ ಡಿನಾಮಿನೇಷನ್ ನೋಟುಗಳು ಇರುವುದನ್ನು ಅವರು ತೋರಿಸಿದ್ದರು.
ಅಮೆರಿಕಾ, ಆಸ್ಟ್ರೇಲಿಯಾಗಳಲ್ಲಿ ಗರಿಷ್ಠ ೧೦೦ ಡಿನಾಮಿನೇಷನ್‌ನ ನೋಟುಗಳು ಇದ್ದರೆ, ಕೆನಡಾದಲ್ಲಿ ಇದು ೨೦೦ ಡಾಲರ್ ಮಾತ್ರ. ದೇಶದಲ್ಲಿ ಇತ್ತೀಚೆಗೆ ಡಿಜಿಟಲ್ ಬ್ಯಾಂಕಿಂಗ್ ಶರವೇಗದಲ್ಲಿ ನೆಲೆ ಕಾಣುತಿದ್ದು, ನಗದು ವ್ಯವಹಾರ ಕ್ರಮೇಣ ಕ್ಷೀಣಿಸುತ್ತಿದೆ. ದೊಡ್ಡ ಮೊತ್ತದ ವ್ಯವಹಾರಗಳು ಡಿಜಿಟಲ್ ರೂಪದಲ್ಲಿ ಆಗುತ್ತಿದ್ದು, ೨೦೦೦ ರು. ನೋಟುಗಳ ಅವಶ್ಯಕತೆ ಕಾಣುತ್ತಿಲ್ಲ. ಸುಮಾರು ೬೦ % ಬ್ಯಾಂಕಿಂಗ್ ವ್ಯವಹಾರಗಳು ಡಿಜಿಟಲ್ ಆಗಿದ್ದು, ನಗದು ವ್ಯವಹಾರ ಕ್ರಮೇಣ ನೇಪಥ್ಯಕ್ಕೆ ಸರಿಯುತ್ತಿರುವಾಗ, ದೊಡ್ಡ ಮೊತ್ತದ ನೋಟುಗಳ ಅವಶ್ಯಕತೆ ಕೂಡ ಕಡಿಮೆಯಾಗುತ್ತಿದೆ.
ಬ್ಯಾಂಕುಗಳ ಕ್ಯಾಷ್ ಕೌಂಟರಿನಲ್ಲಿ ಹಿಂದಿನ ದಟ್ಟನೆ ಕಾಣುವುದಿಲ್ಲ. ಅಂತೆಯೇ ೨೦೦೦ ರು. ನೋಟುಗಳನ್ನು ಹಿಂಪಡೆಯಬೇಕು ಎನ್ನುವ ಒತ್ತಾಯ ೨೦೦೦ ರು. ನೋಟುಗಳು ಬಿಡುಗಡೆಯಾದ ದಿನದಿಂದಲೂ ಕೇಳಿ ಬರುತ್ತಿತ್ತು. ಸರ್ಕಾರವು ಒಂದೇ ಕಲ್ಲಿನಿಂದ ಮೂರು ಹಕ್ಕಿಗಳನ್ನು ಹೊಡೆದಿದೆ. ದಿನನಿತ್ಯದ ಬಳಕೆಗೆ ಅನುಪಯುಕ್ತವಾಗಿರುವ ನೋಟುಗಳನ್ನು ಹಿಂತೆಗೆದುಕೊಂಡು ಜನರ ಆಶೋತ್ತರಕ್ಕೆ ಸ್ಪಂದಿಸಿರುವ ಸಂದೇಶ ನೀಡುವುದರೊಂದಿಗೆ, ಬಡ ಮತ್ತು ಮಧ್ಯಮವರ್ಗದ ಜನರ ಹಣಕಾಸು ವ್ಯವಹಾರಗಳಲ್ಲಿನ ಅನನುಕೂಲಗಳನ್ನು ನಿವಾರಿಸಿದ ಕ್ರೆಡಿಟ್ ಪಡೆದಿದೆ.
ಅದಕ್ಕೂ ಮಿಗಿಲಾಗಿ ಹುದುಗಿಟ್ಟಿರುವ ಅಪಾರ ಪ್ರಮಾಣದ ಕಪ್ಪು ಹಣ ಬಿಲ ಬಿಟ್ಟು ಹೊರ ಬರುವಂತೆ ಮಾಡಿದೆ. ಅಕ್ರಮವಾಗಿ ಹಣ ಹುದುಗಿಟ್ಟವರು ಅನಿವಾರ್ಯವಾಗಿ ಅದನ್ನು ಹೊರ ಹಾಕಿ ಲೆಕ್ಕ ತೋರಿಸಿ ಬಿಳಿ ಮಾಡಿ ತೆರಿಗೆ ನೀಡಲೇಬೇಕಾಗುತ್ತದೆ ಅಥವಾ ಅಷ್ಟು ಹಣವನ್ನು ಮರೆಯಬೇಕಾಗುತ್ತದೆ. ಇದು ಒಂದು ರೀತಿಯಲ್ಲಿ ಹಣಕಾಸು ವಲಯದಲ್ಲಿ ‘ಬ್ಲಡ್ ಲೆಸ್ ಕೂಪ್’ ಎನ್ನಬಹುದು.
ಇದು ಬೆಣ್ಣೆಯಲ್ಲಿ ಕೂದಲು ತೆಗೆಯುವಂಥ ನಯವಾದ ನೋವಿಲ್ಲದಶಸ್ತ್ರಕ್ರಿಯೆ. ಸರ್ಕಾರ ಹೆಚ್ಚು ಶ್ರಮವಿಲ್ಲದೆ ‘ಆಪರೇಷನ್ ಕಪ್ಪು ಹಣ’ವನ್ನು ಮಾಡಿ ದೇಶದ ಬೊಕ್ಕಸವನ್ನು ತುಂಬುತ್ತಿದೆ. ತಮ್ಮಲ್ಲಿರುವ ನಗದನ್ನು ಬ್ಯಾಂಕುಗಳಲ್ಲಿ ಠೇವಣಿ ಮಾಡುವ ಅನಿವಾರ್ಯತೆಯಿಂದಾಗಿ, ಬ್ಯಾಂಕುಗಳಲ್ಲಿ ಠೇವಣಿ ಏರುವ ಸಾಧ್ಯತೆ ಇದ್ದು, ಠೇವಣಿ ಮೇಲಿನ ಬಡ್ಡಿದರ ಸ್ವಲ್ಪ ಮಾಡರೇಟ್ ಆಗುವುದನ್ನು ನಿರೀಕ್ಷಿಸಬಹುದು ಎಂದು ಬ್ಯಾಂಕರ್‌ಗಳು ಅಭಿಪ್ರಾಯ ಪಡುತ್ತಿದ್ದಾರೆ.
ಠೇವಣಿ ಮೇಲೆ ಬಡ್ಡಿದರವನ್ನು ಏರಿಸುವ ತುರ್ತು ಅಗತ್ಯದಿಂದ ಬ್ಯಾಂಕುಗಳು ಸ್ವಲ್ಪ ದಿನ ಪಾರಾಗಬಹುದು ಎನ್ನುವ ಸಾಧ್ಯತೆಕಾಣುತ್ತದೆ. ಇದರ ಪರಿಣಾಮ ಮುಂದಿನ ತಿಂಗಳು ನಡೆಯುವ ರಿಸರ್ವ್ ಬ್ಯಾಂಕ್‌ನ ದ್ವೈಮಾಸಿಕ ಆರ್ಥಿಕ ನೀತಿ ನಿಯಾವಳಿ ಪರಿಶೀಲನೆ ಸಮಯದಲ್ಲಿ ಗೊತ್ತಾಗುತ್ತದೆ. ಕಳೆದ ಬಾರಿಯ ಕಹಿ ಅನುಭವದಿಂದ ರಿಸರ್ವ್ ಬ್ಯಾಂಕ್ ಈ ಬಾರಿ ತೀವ್ರ ಎಚ್ಚರಿಕೆ ವಹಿಸಿದ್ದು, ನೋಟುಗಳ ವಿನಿಮಯ ಮತ್ತು ಠೇವಣಿಗೆ ೪ ತಿಂಗಳಷ್ಟು ಸುದೀರ್ಘ ಸಮಯವನ್ನು ನೀಡಿದೆ.
ಯಾರು ಎಲ್ಲಿ, ಯಾವಾಗ ಎಷ್ಟು ಗರಿಷ್ಠ ವಿನಿಮಯ ಮಾಡಬಹು ಹುದು ಎನ್ನುವ ಬಗೆಗೆ ವಿಸ್ತೃತವಾಗಿ ಪ್ರಶ್ನೋತ್ತರ ಮಾದರಿ ಯಲ್ಲಿ ಮಾಧ್ಯಮದ ಮೂಲಕ ವಿವರಿಸಿದೆ. ಹಾಗೆಯೇ ಎಲ್ಲಾ ಬ್ಯಾಂಕುಗಳಿಗೆ ತಕ್ಷಣದಿಂದಲೇ ೨೦೦೦ ರು. ನೋಟುಗಳನ್ನು ಗ್ರಾಹಕರಿಗೆ ನೀಡದಂತೆ ಸೂಚಿಸಿದೆ. ಬ್ಯಾಂಕ್‌ಗಳಲ್ಲಿ ಈ ರೀತಿ ಹಣ ವಿನಿಮಯಕ್ಕೆ ಯಾವುದೇ ಶುಲ್ಕ ಇರುವುದಿಲ್ಲ ಮತ್ತು೨೦೦೦೦ ರು.ವರೆಗೆ ವಿನಿಮಯ ಮಾಡಿಕೊಂಡು, ಬಾಕಿ ಇದ್ದರೆ ತಮ್ಮ ಖಾತೆಗೆ ಜಮಾ ಮಾಡಿಕೊಳ್ಳಬಹುದು.
ಈ ಬಾರಿ ಹಳ್ಳಿಗಾಡಿನಲ್ಲಿ ಅಡ್ಡಾಡುವ ಬ್ಯಾಂಕಿಂಗ್ ಕರೆಸ್ಪಾಂಡೆಂಟ್ ಬಳಿ ಕೂಡ ೪೦೦೦ ರು. ವರೆಗೆ ವಿನಿಮಯ ಮಾಡಬಹು ದಾಗಿದೆ. ಹಿಂದಿನ ಬಾರಿ ನೋಟು ರದ್ದತಿ ಘೋಷಣೆಯಾದ ತಕ್ಷಣದಿಂದ ೧೦೦೦, ೫೦೦ ರು. ನೋಟುಗಳು ಅಮಾನ್ಯ ವಾಗಿದ್ದವು. ಅದರೆ, ಈ ಬಾರಿ ಜನತೆಗೆ ನಾಲ್ಕು ತಿಂಗಳ ಸಮಯವನ್ನು ನೀಡಲಾಗಿದ್ದು, ಯಾವುದೇ ಒತ್ತಡವಿಲ್ಲದೆ ಪರಿವರ್ತಿಸಿಕೊಳ್ಳಬಹುದು ಅಥವಾ ಠೇವಣಿ ಮಾಡಬಹುದು. ಈ ನಾಲ್ಕು ತಿಂಗಳ ಸಮಯವನ್ನೂ ವಿಸ್ತರಿಸುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಮಾಧ್ಯಮದಲ್ಲಿ ಕಾಣುತ್ತಿದೆ. ೧೦೦೦ ರು. ನೋಟುಗಳು ದಿನನಿತ್ಯದ ಹಣಕಾಸು ವ್ಯವಹಾರದಲ್ಲಿ ಭಾರೀ ಬೇಡಿಕೆ ಇರುವ ನೋಟುಗಳು. ಹಿಂದಿನ ಬಾರಿ ಇವುಗಳನ್ನು ಹಿಂಪಡೆದಿದ್ದು ಭಾರೀ ಆಕ್ರೋಶಕ್ಕೆ ಕಾರಣ ವಾಗಿತ್ತು.
ಜನರ ಭಾವನೆಗಳಿಗೆ ಮತ್ತು ಬೇಡಿಕೆಗಳಿಗೆ ಸ್ಪಂದಿಸಿ ೧೦೦೦ ರು. ನೋಟುಗಳನ್ನು ಪುನಾ ಚಲಾವಣೆ ತರುವ ಸಾಧ್ಯತೆಯನ್ನುಜನತೆ ನಿರೀಕ್ಷಿಸುತ್ತಿದೆ. ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಕೂಡ ಇದೇ ಧಾಟಿಯಲ್ಲಿ ಹೇಳಿಕೆ ನೀಡಿದ್ದಾರೆ.