ಹಳ್ಳಹಿಡಿದ ಪಾಕ್‌ಗೆ ನೋಟ್ ಬ್ಯಾನ್ ಚಿಂತನೆ
ಅವಲೋಕನ
ಶಶಿಕುಮಾರ್‌ ಕೆ.
ಆಶ್ಚರ್ಯದ ವಿಷಯವೆಂದರೆ ಆರ್‌ಬಿಐ ನೀಡಿದ ಮಾಹಿತಿಯ ಪ್ರಕಾರ ರದ್ದಾಗಿರುವ ನೋಟುಗಳ ಶೇ. ೯೯ ರಷ್ಟು ಹಣವು ಬ್ಯಾಂಕುಗಳಿಗೆ ವಾಪಸ್ ಆಗಿದೆ ಎಂದು ತಿಳಿಸಿತ್ತು. ಕೊನೆಗೆ ಸುಪ್ರೀಂಕೋರ್ಟ್ ಸಂವಿಧಾನಿಕ ಪೀಠ ೪:೧ ಬಹುಮತದ ಆಧಾರದ ಮೇಲೆ ಕೇಂದ್ರ ಸರ್ಕಾರ ಕೈಗೊಂಡ ನೋಟು ಅಮಾನ್ಯೀಕರಣ ಸರಿಯಾ ಗಿದೆ ಎಂದು ತೀರ್ಪು ನೀಡಿತು.
ಪಾಕಿಸ್ತಾನದ ಆರ್ಥಿಕತೆ ಪಾತಾಳಕ್ಕೆ ಕುಸಿದಿದ್ದು ಮಾರ್ಚ್‌ನಲ್ಲಿ ಹಣ ದುಬ್ಬರವು ಶೇಕಡ ೩೫.೪ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ದಿನನಿತ್ಯ ಬಳಕೆಯ ಅಗತ್ಯ ವಸ್ತುಗಳ ಬೆಲೆಗಳು ಕೂಡ ಗಗನಕ್ಕೇರಿವೆ. ಜನರ ತಲಾ ಆದಾಯವು ಕೂಡ ಕಡಿಮೆಯಾಗಿದೆ. ಮತ್ತೊಂದೆಡೆ ಐಎಂಎಫ್ ನಿಂದ ಅಗತ್ಯ ನೆರವು ಸಿಗದ ಕಾರಣ ಪಾಕಿಸ್ತಾನದ ಪರಿಸ್ಥಿತಿ ಮತ್ತಷ್ಟು ಗಂಭೀರ ವಾಗಿದೆ. ಆದ್ದರಿಂದ ಪಾಕಿಸ್ತಾನದ ಆರ್ಥಿಕತೆಯನ್ನು ಮರಳಿ ಸರಿಯಾದ ಹಳಿಗೆ ತರಲು ನೋಟು ಅಮಾನ್ಯತೆ ಮಾಡುವಂತೆ ಬೇಡಿಕೆ ಹೆಚ್ಚುತ್ತಿದೆ.
ಚಾಲ್ತಿಯಲ್ಲಿರುವ ೫,೦೦೦ ರುಪಾಯಿ ಮುಖಬೆಲೆಯ ನೋಟುಗಳ ಚಲಾವಣೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು, ಭಾರತದಲ್ಲಿ ನೋಟು ಅಮಾನ್ಯೀಕರಣದ ನಂತರ ತೆರಿಗೆ ಸಂಗ್ರಹ ಗಣನೀಯವಾಗಿ ಹೆಚ್ಚಳ ವಾಗಿದೆ ಎಂದು ಅಲ್ಲಿನ ಅರ್ಥಶಾಸ್ತ್ರಜ್ಞರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಪಾಕಿಸ್ತಾನವು ೮ ಲಕ್ಷ ಕೋಟಿ ರುಪಾಯಿ ಗಿಂತಲೂ ಹೆಚ್ಚು ಹಣವನ್ನು ನಗದು ರೂಪದಲ್ಲಿ ಹೊಂದಿದೆ.
ನೋಟು ರದ್ದತಿಯಿಂದ ನಗದು ಹರಿವು ತಗ್ಗುತ್ತದೆ. ನಗದು ಹರಿವು ಕಡಿಮೆಯಾಗಿ ಇದರ ಸ್ವಲ್ಪ ಭಾಗವಾದರೂ ಪಾಕಿಸ್ತಾನದ ಆರ್ಥಿಕತೆಗೆ ಸೇರಿದರೆ ಆಗ ಬದಲಾವಣೆಯಾಗುತ್ತದೆ ಮತ್ತು ಆರ್ಥಿಕತೆ ಸುಧಾರಿಸುತ್ತದೆ. ಪ್ರಸ್ತುತ ಚಲಾವಣೆಯಲ್ಲಿರುವ ಎಲ್ಲಾ ಕರೆನ್ಸಿ ನೋಟುಗಳ ಪೈಕಿ ಮುಂದಿನ ಆರು ತಿಂಗಳಲ್ಲಿ ಕೇವಲ ೫,೦೦೦ ರುಪಾಯಿ ಮುಖಬೆಲೆಯ ನೋಟುಗಳನ್ನು ಸ್ಥಗಿತ ಗೊಳಿಸಬೇಕು.
ಉಳಿದ ನೋಟುಗಳು ಚಲಾವಣೆಯಲ್ಲಿ ಇರುವ ಕಾರಣ ಜನಸಾಮಾನ್ಯರಿಗೆ ತೊಂದರೆ ಆಗದು ಎಂದು ಆರ್ಥಿಕ ತಜ್ಞರು ಸಲಹೆಗಳನ್ನು ನೀಡಿದ್ದಾರೆ. ಪಾಕಿಸ್ತಾನವು ೨೦೧೯ರಲ್ಲಿ ೬.೫ ಶತಕೋಟಿ ಡಾಲರ್‌ನ ಬೇಲ್ ಔಟ್ ನಿಧಿಗೆ ಸಹಿ ಹಾಕಿದೆ. ಈ ನಿಧಿಯಲ್ಲಿ ಸ್ವಲ್ಪ ಭಾಗವನ್ನು ಮಾತ್ರ ಐಎಂಎಫ್ ಬಿಡುಗಡೆ ಮಾಡಿದೆ. ಮುಂದಿನ ಕಂತಿಗೆ ಮಾತುಕತೆ ನಡೆಯುತ್ತಿದೆ. ಪಾಕಿಸ್ತಾನವು ಐಎಂಎಫ್ ಷರತ್ತುಗಳನ್ನು ಪೂರೈಸದ ಕಾರಣ ಬೇಲ್ ಔಟ್ ನೆರವನ್ನು ಐಎಂಎಫ್ ಸ್ಥಗಿತ ಮಾಡಿದೆ. ಜಗತ್ತಿನ ಹಲವು ದೇಶಗಳು ಈಗಾಗಲೇ ನೋಟು ಅಮಾನ್ಯೀಕರಣ ಮಾಡಿ ಕೈಸುಟ್ಟುಕೊಂಡ ಉದಾಹರಣೆಗಳಿವೆ.
೨೦೧೬ ರಲ್ಲಿ ದಕ್ಷಿಣ ಅಮೆರಿಕಾ ಖಂಡದ ರಾಷ್ಟ್ರ ವೆನಿಜುವೆಲಾ ತನ್ನ ದೇಶದ ಗರಿಷ್ಠ ಮುಖಬೆಲೆಯಾದ ನೂರು ಬೊಲಿವರ್ ನೋಟು ಚಲಾವಣೆಯನ್ನು ರದ್ದುಗೊಳಿಸಿತು. ಕೊಲಂಬಿಯಾದ ಮಾಫಿಯಾ ಅಪಾರ ಪ್ರಮಾಣದಲ್ಲಿ ಈ ಹಣವನ್ನು ಸಂಗ್ರಹಿಸಿ ಇಟ್ಟುಕೊಂಡಿದೆ. ಹೀಗಾಗಿ ಮಾಫಿಯಾ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ನೋಟು ರದ್ದು ಮಾಡಲಾಗಿತ್ತು. ನೂರುಬೊಲಿವರ್ ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ ವೆನಿಜುವೆಲಾ ಸರ್ಕಾರದ ಕ್ರಮದಿಂದ ದೇಶದಾದ್ಯಂತ ತೀವ್ರ ನಗದು ಬಿಕ್ಕಟ್ಟು ಸೃಷ್ಟಿಯಾಯಿತು.
ಹಳೆಯ ನೋಟುಗಳನ್ನು ಜಮಾ ಮಾಡಲು ಮೂರು ದಿನಗಳ ಕಾಲಾವಕಾಶ ನೀಡಲಾಗಿತ್ತು. ಎಟಿಎಂನಿಂದ ಹಣ ಹಿಂಪಡೆಯು ವಾಗ ನೂರು ಬೊಲಿವರ್ ಮೌಲ್ಯದ ಹಳೆಯ ನೋಟುಗಳೇ ಬಂದಿದ್ದರಿಂದ ಅನೇಕರು ಅವುಗಳನ್ನು ಮರಳಿ ಖಾತೆಗೆ ಜಮಾ ಮಾಡಲು ಪುನಃ ಸರತಿಯಲ್ಲಿ ನಿಲ್ಲಬೇಕಾದ ಸಂಕಷ್ಟಕ್ಕೆ ಸಿಲುಕಿದರು. ಬ್ಯಾಂಕುಗಳ ಮುಂದೆ ದರೋಡೆಗಳಾದವು. ವೆನಿಜುವೆಲಾ ಸುತ್ತಮುತ್ತಲ ದೇಶಗಳ ಗಡಿಗಳನ್ನು ಮುಚ್ಚಿದ್ದರಿಂದ ಅಗತ್ಯ ವಸ್ತುಗಳಿಗೆ ಹಾಹಾಕಾರ ಉಂಟಾಯಿತು.
ಇದರಿಂದ ವೆನಿಜುವೆಲಾ ಸರ್ಕಾರ ಅನಿವಾರ್ಯವಾಗಿ ನೋಟು ರದ್ದತಿಯ ಕ್ರಮವನ್ನು ಹಿಂತೆಗೆದುಕೊಳ್ಳಬೇಕಾಯಿತು.ಅದೇ ರೀತಿ ೨೦೧೫ರಲ್ಲಿ ಜಿಂಬಾಂಬೆ ಹಣದುಬ್ಬರ ಅಸಾಧ್ಯ ಸೀಮೆಯನ್ನು ದಾಟಿ ಹೈಪರ್-ಹಣದುಬ್ಬರದ ಹಂತ ತಲುಪಿತ್ತು. ಅಲ್ಲಿನ ಹಣ ಎಷ್ಟು ಬೇಗ ಮೌಲ್ಯ ಕಳೆದುಕೊಂಡಿತ್ತು ಎಂದರೆ ಒಂದು ಹಂತದಲ್ಲಿ ೧೦೦ ಟ್ರಿಲಿಯನ್ ಡಾಲರ್ ಮುಖಬೆಲೆಯ ನೋಟುಗಳನ್ನು ಮುದ್ರಿಸಬೇಕಾಗಿತ್ತು. ಈ ಒಂದು ನೋಟಿನ ಮೌಲ್ಯ ಎಷ್ಟು ಕಳಪೆಯಾಗಿತ್ತು ಎಂದರೆ ಒಂದು ಬಸ್ ಟಿಕೆಟ್ಕೂಡ ಖರೀದಿಸಲು ಸಾಧ್ಯವಾಗದ ಸ್ಥಿತಿ ಬಂದಿತ್ತು. ಉಳಿದ ನೋಟುಗಳಂತೂ ಕೇಳುವವರೇ ಇರಲಿಲ್ಲ.
ಹೀಗಾಗಿ ಕೊನೆಯಲ್ಲಿ ಜಿಂಬಾಂಬೆ ಸರ್ಕಾರ ಎಲ್ಲಾ ನೋಟುಗಳನ್ನೂ ರದ್ದು ಮಾಡಿ ದಕ್ಷಿಣ ಆಫ್ರಿಕಾದ ರಾಂಡ್ ಮತ್ತು ಅಮೆರಿಕಾದ ಡಾಲರ್‌ಗಳನ್ನು ದೇಶದಲ್ಲಿ ಚಲಾವಣೆಗೆ ತಂದಿತು. ಜಿಂಬಾಂಬೆ ಈ ಮುಖಬೆಲೆಯ ೧೦ ಲಕ್ಷ ನೋಟುಗಳನ್ನುಮಾತ್ರ ಚಲಾವಣೆಗೆ ತಂದಿತ್ತು. ಪ್ರಸ್ತುತ ಈ ನೋಟುಗಳು ಕೆಲವು ಡಾಲರ್ ಗಳಿಗೆ ಮಾರಾಟವಾಗುತ್ತಿವೆ. ವ್ಯಾಪಕ ನಕಲಿ ನೋಟುಗಳ ಹಾವಳಿಯನ್ನು ತಡೆಯುವ ಸಲುವಾಗಿ ೧೯೯೬ ರಲ್ಲಿ ಆಸ್ಟ್ರೇಲಿಯಾ ಸರ್ಕಾರ ಹಳೆಯ ನೋಟುಗಳ ಜಾಗದಲ್ಲಿ ಪ್ಲಾಸ್ಟಿಕ್ ನೋಟುಗಳನ್ನು ತಂದಿತ್ತು. ಇಲ್ಲಿ ಚಲಾವಣೆಯಲ್ಲಿದ್ದ ಎಲ್ಲಾ ಹಳೆಯ ನೋಟುಗಳನ್ನು ಕ್ರಮಬದ್ಧವಾಗಿ ರದ್ದು ಮಾಡಿ ನಕಲು ಮಾಡಲಾಗದ ದೀರ್ಘಬಾಳ್ವಿಕೆಯ ಪಾಲಿಮರ್ ನೋಟುಗಳನ್ನು ಚಲಾವಣೆಗೆ ತಂದ ಈ ಸಾಹಸ ವಿಶ್ವದಲ್ಲಿಯೇ ಪ್ರಪ್ರಥಮದ್ದಾಗಿತ್ತು.
೧೯೮೭ ರಲ್ಲಿ ಮಯನ್ಮಾರ್‌ನ ಮಿಲಿಟರಿ ಸರ್ಕಾರ ಆಗ ಚಲಾವಣೆಯಲ್ಲಿದ್ದ ಹಣಕಾಸಿನ ಶೇಕಡ ೮೦ ರಷ್ಟು ಹಣವನ್ನು ರದ್ದು ಮಾಡಿತ್ತು. ಇದರ ಫಲವಾಗಿ ದೇಶದ ಸುತ್ತ ವಿದ್ಯಾರ್ಥಿಗಳ ಚಳುವಳಿ ಆರಂಭವಾಗಿತ್ತು. ಆದರೆ ಮಿಲಿಟರಿ ಸರ್ಕಾರ ಈ ಪ್ರತಿಭಟನೆ ಯನ್ನು ಉಗ್ರವಾಗಿ ಹತ್ತಿಕ್ಕಿತು. ೧೯೮೨ ರಲ್ಲಿ ಘಾನ ದೇಶವು ಭ್ರಷ್ಟಾಚಾರ, ತೆರಿಗೆಗಳ್ಳತನ ತಡೆಗಟ್ಟಲು ಮತ್ತು ದೇಶದಲ್ಲಿ ಚಲಾ ವಣೆಯಲ್ಲಿದ್ದ ಅಧಿಕ ನೋಟುಗಳನ್ನು ಹತೋಟಿಗೆ ತರಲು ತನ್ನ ೫೦ ಸೆಡಿ ನೋಟುಗಳನ್ನು ರದ್ದು ಮಾಡಿತ್ತು. ಈ ಕ್ರಮದಿಂದ ಜನರು ದೇಶದ ಬ್ಯಾಂಕ್ ವ್ಯವಸ್ಥೆಯಲ್ಲೇ ನಂಬಿಕೆ ಕಳೆದುಕೊಂಡು ವಿದೇಶಿ ಹಣಕಾಸಿನತ್ತ ತಿರುಗಿದ್ದರು. ಹೊಸ ನೋಟುಗಳು ಚಲಾವಣೆಗೆ ಬಂದಾಗ ಹೊಸದಾಗಿ ಕಳ್ಳ ಮಾರುಕಟ್ಟೆ ಆರಂಭ ವಾಗಿತ್ತು.
೧೯೯೦ ರಲ್ಲಿ ಜೈರೇ ಎಂಬ ಆಫ್ರಿಕಾ ದೇಶದ ಸರ್ವಾಧಿಕಾರಿ ಮೋಬೂಟು ಸೇಸೆ ಸೀಕೋನ ಸರ್ಕಾರ ಹಲವಾರು ಆರ್ಥಿಕ ಸುಧಾರಣೆ ಗಳನ್ನು ತರಲು ಪ್ರಯತ್ನಿಸಿತ್ತು. ಈ ನೆಲೆಯಲ್ಲಿ ೧೯೯೩ರಲ್ಲಿ ಹಳೆಯ ಹಣಕಾಸನ್ನು ರದ್ದು ಮಾಡಿತ್ತು. ಆರ್ಥಿಕ ಸುಧಾರಣೆಗಳು ದೇಶದ ಅರ್ಥ ವ್ಯವಸ್ಥೆಯನ್ನೇ ಹದಗೆಡಿಸಿ ಕೊನೆಗೆ ೧೯೯೭ರಲ್ಲಿ ಮೊಬುಟು ಪದಚ್ಯುತಿಗೆ ಕಾರಣವಾಗಿತ್ತು. ಇನ್ನು ಭಾರತದ ವಿಚಾರಕ್ಕೆ ಬರುವುದಾದರೆ ಭಾರತದಲ್ಲಿ ಒಟ್ಟು ಮೂರು ಬಾರಿ ನೋಟು ಅಮಾನ್ಯೀಕರಣ ಮಾಡಲಾಗಿದೆ. ಜನವರಿ ೧೯೪೬ರಲ್ಲಿ ಅಂದಿನ ಬ್ರಿಟಿಷ್ ಸರ್ಕಾರ ೧೦೦೦, ೫೦೦೦ ಮತ್ತು ೧೦,೦೦೦ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದು ಕೊಂಡಿತ್ತು. ೧೯೭೭ ರಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಮಂತ್ರಿಯಾಗಿದ್ದ ಜನತಾಪಕ್ಷದ ಗುಜರಾತಿನ ಮೊರಾರ್ಜಿ ದೇಸಾಯಿ ಕಾಳಧನ ಮತ್ತು ಭ್ರಷ್ಟಾಚಾರದ ವಿರುದ್ಧ ವಜ್ರಾ ಪ್ರಹಾರಕ್ಕೆ ಮುಂದಾದರು.
೧೦೦೦, ೫೦೦೦ ಮತ್ತು ೧೦,೦೦೦ ರುಪಾಯಿ ಮೌಲ್ಯದ ನೋಟುಗಳನ್ನು ಮೌಲ್ಯ ವಿಹೀನವಾಗಿ ಮಾಡುವ ದಿಟ್ಟ ಕ್ರಮ ಜಾರಿಗೆ ತಂದು ಕತ್ತಲ ಮರೆಯ ಅರ್ಥ ವ್ಯವಸ್ಥೆಯಲ್ಲಿ ಕೋಲಾಹಲ ಹುಟ್ಟಿಸಿದ್ದರು. ೧೯೭೮ ಜನವರಿ ೧೫ರ ರಾತ್ರಿ ರಾಷ್ಟ್ರಪತಿಯಾಗಿದ್ದ ನೀಲಂ ಸಂಜೀವ್ ರೆಡ್ಡಿಯವರಿಂದ ಸುಗ್ರೀವಾeಗೆ ಸಹಿಬಿದ್ದ ಬಳಿಕ ಈ ವಿಷಯ ಮರುದಿನ ಬೆಳಗ್ಗೆ ೯ ಗಂಟೆಗೆ ಆಲ್ ಇಂಡಿಯಾ ರೇಡಿಯೋದ ನ್ಯೂಸ್ ಬುಲೆಟಿನ್‌ನಲ್ಲಿ ಬಹಿರಂಗವಾಗಿತ್ತು.
ನೋಟುಗಳನ್ನು ತುಂಬಲು ಒಂದು ದಿನದ ಅವಕಾಶ, ಸಂಜೆ ಬ್ಯಾಂಕ್ ಮೆಚ್ಚಿದ ಬಳಿಕ ನೋಟುಗಳ ರದ್ದು, ಮರುದಿನ ಬ್ಯಾಂಕ್ ಶಾಖೆಗಳನ್ನು ಮುಚ್ಚಿಡುವ ನಿರ್ಧಾರ ದೇಶದ ಸುತ್ತ ವಿದ್ಯುತ್ ಸಂಚಾರ ಹರಿಸಿತ್ತು. ಕಾಂಗ್ರೆಸ್ ಪಕ್ಷ ಕಳ್ಳ ಹಣವನ್ನು ನೀರಿನಂತೆಖರ್ಚು ಮಾಡುತ್ತಿದೆ ಎಂದು ಮೊರಾರ್ಜಿ ದೇಸಾಯಿ ಆ ಸಮಯದಲ್ಲಿ ಆರೋಪಿಸಿದ್ದರು. ಇಂದಿರಾ ಗಾಂಧಿಯವರ ಕಾಂಗ್ರೆಸ್ ಪಕ್ಷದ ಬಳಿ ಇರುವ ಅಪಾರ ಮೊತ್ತದ ಕಳ್ಳ ಹಣವನ್ನು ನಾಶ ಮಾಡಲು ಮೊರಾರ್ಜಿ ಈ ಕ್ರಮ ಕೈಗೊಂಡಿದ್ದಾರೆ ಎಂಬ ವದಂತಿ ಹರಡಿತ್ತು. ಆ ಸಮಯದಲ್ಲಿ ೧೦೦೦, ೫೦೦೦ ಮತ್ತು ೧೦,೦೦೦ ರುಪಾಯಿ ಮೌಲ್ಯದ ನೋಟುಗಳು ಭಾರತದಲ್ಲಿ ಚಲಾವಣೆ ಯಲ್ಲಿದ್ದ ಒಟ್ಟು ಬ್ಯಾಂಕ್ ನೋಟುಗಳ ಶೇ.೨ ರಷ್ಟು ಕೂಡ ಇರಲಿಲ್ಲ.
ಇದಾದ ೩೮ ವರ್ಷಗಳ ಬಳಿಕ ಭಾರತದಲ್ಲಿ ಮತ್ತೊಂದು ನೋಟು ಅಮಾನ್ಯೀಕರಣ ನಡೆಯಿತು. ೨೦೧೬ ನವೆಂಬರ್ ೮ ರಾತ್ರಿ ೯ಗಂಟೆ ಸಮಯದಲ್ಲಿ ಗುಜರಾತ್ ರಾಜ್ಯದವರೇ ಆದ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಉದ್ದೇಶಿಸಿ ಮಾತನಾ ಡುತ್ತಾ ೫೦೦ ಮತ್ತು ೧೦೦೦ ರು. ಮುಖಬೆಲೆಯ ನೋಟುಗಳ ರದ್ದತಿಯನ್ನು ಘೋಷಿಸಿದರು. ಈ ನೋಟುಗಳ ಮೌಲ್ಯ ೧೪ಲಕ್ಷ ಕೋಟಿ ರುಪಾಯಿಯಾಗಿದ್ದು, ಭಾರತದಲ್ಲಿ ಚಲಾವಣೆಯಲ್ಲಿರುವ ಹಣಕಾಸಿನ ಶೇಕಡ ೮೬ ರಷ್ಟು ಹಣ ಒಂದೇ ರಾತ್ರಿಯಲ್ಲಿ ಮೌಲ್ಯ ಕಳೆದುಕೊಂಡಿತು. ಈ ನೋಟುಗಳನ್ನು ಹಿಂದಿರುಗಿಸಲು ೫೨ ದಿನಗಳ ಕಾಲಾವಕಾಶವನ್ನು ದೇಶದ ಜನತೆಗೆ ನೀಡಲಾ ಗಿತ್ತು.
ಆಶ್ಚರ್ಯದ ವಿಷಯವೆಂದರೆ ಆರ್‌ಬಿಐ ನೀಡಿದ ಮಾಹಿತಿಯ ಪ್ರಕಾರ ರದ್ದಾಗಿರುವ ನೋಟುಗಳ ಶೇ. ೯೯ ರಷ್ಟು ಹಣವು ಬ್ಯಾಂಕುಗಳಿಗೆ ವಾಪಸ್ ಆಗಿದೆ ಎಂದು ತಿಳಿಸಿತ್ತು. ಕೊನೆಗೆ ಸುಪ್ರೀಂಕೋರ್ಟ್ ಸಂವಿಧಾನಿಕ ಪೀಠ ೪:೧ ಬಹುಮತದ ಆಧಾರದ ಮೇಲೆ ಕೇಂದ್ರ ಸರ್ಕಾರ ಕೈಗೊಂಡ ನೋಟು ಅಮಾನ್ಯೀಕರಣ ಸರಿಯಾಗಿದೆ ಎಂದು ತೀರ್ಪು ನೀಡಿತು.
ನೋಟು ಅಮಾನ್ಯೀಕರಣ ಎಂಬುದು ಹಗ್ಗದ ಮೇಲಿನ ನಡಿಗೆ ಎನ್ನುವಂತಿದ್ದು ಜಗತ್ತಿನ ಹಲವಾರು ದೇಶಗಳು ನೋಟು ಅಮಾನ್ಯೀಕರಣಗೊಳಿಸಿ ಯಶಸ್ವಿಯಾದ ಉದಾಹರಣೆಗಳು ಬಹಳ ಕಡಿಮೆ ಎನ್ನಬಹುದು. ಪಾಕಿಸ್ತಾನದಲ್ಲೂ ಈಗಾಗಲೇ ಆರ್ಥಿಕ ಹೊಡೆತದಿಂದ ಅರಾಜಕತೆ ಉಂಟಾಗಿದ್ದು ನೋಟು ಅಮಾನೀಕರಣಗೊಳಿಸಿದರೆ ಮತ್ತಷ್ಟು ಸಮಸ್ಯೆಗಳು ಎದುರಿಸುವು ದಂತು ಖಚಿತ.