ಮೀಸೆ ತಿರುವಿ ಕುಣಿದವರೆಲ್ಲ ಮಣ್ಣಾದರು…!
ವಿಶ್ಲೇಷಣೆ
ವಿನಾಯಕ ಮಠಪತಿ
ಇವರಿಗೆ ಬದುಕು ಕಟ್ಟಿಕೊಳ್ಳಲು ಕನ್ನಡದ ನೆಲ, ಜಲ, ಗಾಳಿ ಬೇಕು. ಜೊತೆಗೆ ಪುಂಡಾಟ ಮೆರೆಯಲೂ ಸಹ ಇದೇ ನಾಡಿನ ಜಾಗವೇ ಬೇಕು. ತಮ್ಮ ರಾಜಕೀಯ ಲಾಭಕ್ಕಾಗಿ ಮುಗ್ಧ ಜನರನ್ನು ಬಳಸಿದ್ದೇ ಇವರ ಈವರೆಗಿನ ಸಾಧನೆ. ಇವರು ಯಾವತ್ತೂ ಕನ್ನಡಿಗರ ವಿಶಾಲ ಹೃದಯದಲ್ಲಿ ನೆಲೆ ಕಂಡುಕೊಳ್ಳುವ ಕೆಲಸ ಮಾಡಲಿಲ್ಲ.
ಸದಾ ಕಾಲವೂ ನಾಡವಿರೋಧಿ ಧೋರಣೆ ತಾಳಿ ನಮ್ಮ ರಾಜ್ಯದಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ಪುಂಡಾಟ ಮೆರೆದರು. ಸದ್ಯ ಮೀಸೆ ತಿರುವಿ ಕುಣಿದು ಮಣ್ಣಾಗಿ ಹೋದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕರಾಳ ಅಧ್ಯಾಯದ ಅವಲೋಕನ ವಿದು. ೧೯೨೪ ರ ಕಾಲಘಟ್ಟ. ಇಡೀ ದೇಶವೇ ಸ್ವಾತಂತ್ರ್ಯ ಪಡೆಯುವ ಕಿಚ್ಚಿನಿಂದ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ತೊಡೆತಟ್ಟಿ ನಿಂತಿತ್ತು.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ದೇಶವಾಸಿಗಳ ತಲೆಯಲ್ಲಿದ್ದಿದ್ದು ಕೇವಲ ಒಂದೇ ಸಂಕಲ್ಪ, ಅದು ಸ್ವಾತಂತ್ರ್ಯ. ಈ ಸಂದರ್ಭ ದಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷರಾಗಿದ್ದ ಏಕೈಕ ಕಾಂಗ್ರೆಸ್ ಅಧಿವೇಶನ ನಡೆದಿದ್ದು ನಮ್ಮ ಕರುನಾಡಿನಲ್ಲೇ. ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚಿನ ಜೊತೆಗೆ ಹುಟ್ಟಿಕೊಂಡಿದ್ದೇ ಕರ್ನಾಟಕ ಏಕೀಕರಣದ ಕನಸು. ಇದೇ ಕಾಂಗ್ರೆಸ್ ಅಧಿವೇಶನದಲ್ಲಿ ಹುಯಿಲಗೋಳ ನಾರಾ ಯಣರಾಯರು ರಚಿಸಿದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆ ಹಾಡಲಾಯಿತು.
ಕನ್ನಡ ಮನಸ್ಸುಗಳನ್ನು ಒಂದುಗೂಡಿಸಿ ಭಾಷಾವಾರು ಪ್ರಾಂತ್ಯ ರಚಣೆಯ ಕೂಗು ಜೋರಾಗತೊಡಗಿತ್ತು. ೧೯೫೩ ರಂದು ಕರ್ನಾಟಕ ಏಕೀಕರಣಕ್ಕೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಶಂಕರಗೌಡ ಪಾಟೀಲ್ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಇದಾದ ಬಳಿಕ ಕರ್ನಾಟಕ ಏಕೀಕರಣಕ್ಕಾಗಿ ಜನಾಂದೋಲನ ಹೆಚ್ಚಿದ್ದಲ್ಲದೆ ನವೆಂಬರ್ ೧, ೧೯೫೬ ರಂದು ಕನ್ನಡ ಭಾಷೆಯಾಡುವ ಹಲವು ಭಾಗಗಳು ಸೇರಿ ಮೈಸೂರು ರಾಜ್ಯ ಉದಯವಾಯಿತು.
ಇದೇ ಸಂದರ್ಭದಲ್ಲಿ ಕನ್ನಡ ನಾಡಿಗೆ ಮಗ್ಗಲು ಮುಳ್ಳಾಗಿ ಹುಟ್ಟಿಕೊಂಡಿದ್ದೇ ಮಹಾರಾಷ್ಟ್ರ ಏಕೀಕರಣ ಸಮಿತಿ ಭಾಷಾ ವಿವಾದ ವನ್ನು ಬಂಡವಾಳ ಮಾಡಿಕೊಂಡು ಗಡಿ ಭಾಗದ ಜನರಲ್ಲಿ ಅಶಾಂತಿ ಭಾವ ಮೂಡಿಸುತ್ತಾ ಸಾಗಿತ್ತು. ಮೂಲಭೂತ ಕಾರಣವೇ ಇಲ್ಲದೆ ಕೇವಲ ತಮ್ಮ ರಾಜಕೀಯ ಲಾಭಕ್ಕಾಗಿ ಲಕ್ಷಾಂತರ ಮುಗ್ಧ ಜನರ ಭಾವನೆಗಳ ಜೊತೆ ಚೆಲ್ಲಾಟ ಆಡುವ ಕೆಟ್ಟ ಕೆಲಸ ವನ್ನು ಎಂಇಎಸ್ ಮಾಡಿತು.
ಫಜಲ್ ಅಲಿ ಆಯೋಗದ ಪ್ರಕಾರ ದೇಶದಲ್ಲಿ ಭಾಷಾವಾರು ರಾಜ್ಯ ರಚನೆಯ ನಂತರ ಕರ್ನಾಟಕ ಹಲವು ಭಾಗಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಎಂಇಎಸ್ ಮಾತ್ರ ಗಡಿ ಭಾಗದಲ್ಲಿ ಅಶಾಂತಿ ಸೃಷ್ಟಿಸಿ, ಉಗ್ರ ಹೋರಾಟ ಮೂಲಕವೇತನ್ನ ಅಸ್ತಿತ್ವ ಉಳಿಸಿಕೊಂಡು ಬಂದಿತ್ತು. ಮೈಸೂರು ರಾಜ್ಯ ರಚನೆ ನಂತರ ೧೯೫೭ ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಏಳು ಕ್ಷೇತ್ರಗಳಲ್ಲಿ ಗೆಲುವು ಸಾಽಸಿತ್ತು. ಬಾಲ್ಕಿ, ಹಳಿಯಾಳ, ನಿಪ್ಪಾಣಿ, ಬೆಳಗಾವಿ, ಖಾನಾಪುರ, ಉಚಗಾಂವ ಹಾಗೂ ಬಾಗೇವಾಡಿ ಕ್ಷೇತ್ರದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.
ಕರ್ನಾಟಕದ ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಹಾಗೂ ಸಂಪೂರ್ಣ ಬೆಳಗಾವಿ ಮಹಾರಾಷ್ಟ್ರದಭಾಗವೇ ಎಂದು ಸಾರುವ ಮೂಲಕ ಎಂಇಎಸ್ ಜನರ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿತ್ತು. ೧೯೮೬ ರಲ್ಲಿ ಎಂಇಎಸ್ ನಡೆಸಿದ್ದ ಕರಾಳ ಘಟನೆಗಳನ್ನು ಕನ್ನಡಿಗರು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಇದೇ ವರ್ಷದ ಜೂನ್ ೧ ರಂದು ಅಂದಿನ ಕಾಂಗ್ರೆಸ್ ನಾಯಕ ಶರದ್ ಪವಾರ್ ನೇತೃತ್ವದಲ್ಲಿ ಗಡಿ ಹೋರಾಟ ಸತ್ಯಾಗ್ರಹ ನಡೆಸಿದರು. ಕರ್ನಾಟಕ ಗಡಿ ಪ್ರದೇಶವನ್ನು ಮಹಾರಾಷ್ಟ್ರಕ್ಕೇ ಸೇರಿಸಬೇಕೆಂದು ಉಗ್ರ ಹೋರಾಟ ಕೈಗೊಂಡರು. ಈ ಸಂದರ್ಭದಲ್ಲಿ ಉಂಟಾದ ಗಲಭೆಯಲ್ಲಿ ಹಲವರು ಮೃತಪಟ್ಟರು.
ಕಲ್ಲೆಸೆತದಲ್ಲಿ ಕನ್ನಡದ ದೀಪಕ ಅನಗೋಳಕರ ಎಂಬ ಯುವಕನ್ನು ಕೊಲೆ ಮಾಡಲಾಗಿತ್ತು. ಅಂದಿನ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆ. ನಾರಾಯಣ ಜನರ ರಕ್ಷಣೆಗೆ ಹರಸಾಹಸ ಪಟ್ಟಿದ್ದು ಈಗ ಇತಿಹಾಸ. ೧೯೬೧ ರ ಸಂದರ್ಭದಲ್ಲಿ ಬೆಳಗಾವಿ ಯಲ್ಲಿ ಸುಮಾರು ೫೧ ಪ್ರತಿಶತ ಮರಾಠಿ ಭಾಷಿಕರು ವಾಸವಾಗಿದ್ದರು. ಆದರೆ ಯಾವಾಗ ಜಿಲ್ಲೆಯ ಬೇರೆ, ಬೇರೆ ಭಾಗಗಳ ಜನ ನಗರ ಪ್ರದೇಶಕ್ಕೆ ವಲಸೆ ಬರಲು ಪ್ರಾರಂಭಿಸಿದರು, ಆಗ ನಿಧಾನವಾಗಿ ಕನ್ನಡ ಭಾಷಿಕರ ಹಿಡಿತ ಹೆಚ್ಚುತ್ತ ಸಾಗಿ ಈಗ ಕೇವಲ ೩೧ ಪ್ರತಿ ಶತ ಮಾತ್ರ ಸೀಮಿತವಾಗಿದೆ.
೬೦ ರ ದಶಕದಲ್ಲಿ ಎಂಇಎಸ್ ಪುಂಡಾಟಿಕೆ ಯಾವ ಮಟ್ಟಿಗೆ ಇತ್ತೆಂದರೆ, ಕನ್ನಡಪರ ದಿನಪತ್ರಿಕೆಗಳ ಮೇಲೆ ಸದಾಕಾಲವೂ ದ್ವೇಷ ಸಾಧಿಸುವ ಕೆಲಸ ನಡೆಯುತ್ತಿತ್ತು. ಕನ್ನಡ ಚಲನಚಿತ್ರ ಪ್ರದರ್ಶನ ಸೇರಿದಂತೆ ಕನ್ನಡಕ್ಕೆ ಪ್ರಾಶಸ್ತ್ಯ ಇಲ್ಲದ ಕೆಟ್ಟ ಸಂದರ್ಭ ಅದಾಗಿತ್ತು. ಒಂದು ಕಾಲಘಟ್ಟದಲ್ಲಿ ಅತ್ಯಂತ ಉಗ್ರ ಮನೋಭಾವ ಹೊಂದಿದ್ದ ಎಂಇಎಸ್‌ನ ಪ್ರಾಬಲ್ಯ ಸಮಯ ಕಳೆದಂತೆ ಶಕ್ತಿಹೀನವಾಗುತ್ತಾ ಸಾಗಿತು. ೧೯೮೩ ರ ಹೊತ್ತಿಗೆ ಎಂಇಎಸ್ ಶಾಸಕರ ಬಲ ಐದಕ್ಕೆ ಇಳಿಯಿತು. ಆ ಸಂದರ್ಭದಲ್ಲಿ ಕೆಲ ರಾಜಕೀಯ ಲೆಕ್ಕಾಚಾರ ಹಾಕಿಕೊಂಡಿದ್ದ ಎಂಇಎಸ್ ೧೯೮೩ ರಿಂದ ೮೫ ರವರೆಗೆ ರಾಮಕೃಷ್ಣ ಹೆಗಡೆ ಸರಕಾರಕ್ಕೆ ಬಾಹ್ಯ ಬೆಂಬಲವನ್ನು ಘೋಷಿಸಿದರು.
ಸದಾಕಾಲವೂ ಭಾಷಾ ದ್ವೇಷ ಸಾಧಿಸುತ್ತಿದ್ದ ಎಂಇಎಸ್ ತನ್ನೊಳಗೆ ಕೆಲ ಬದಲಾವಣೆಗಳನ್ನು ಮಾಡಿಕೊಂಡಿತು. ಬದಲಾದನಾಯಕತ್ವ ಹಾಗೂ ರಾಜಕೀಯ ಲಾಭದ ದೃಷ್ಟಿಯಿಂದ ೧೯೯೧ ರಲ್ಲಿ ಎಂಇಎಸ್ ರಾಜಕೀಯ ಧ್ರುವೀಕರಣಗೊಂಡಿತು. ಗಡಿ ಭಾಗದದಲ್ಲಿ ಸದಾಕಾಲವೂ ಪುಂಡಾಟಿಕೆ ಮೆರುತ್ತಿದ್ದ ಎಂಇಎಸ್ ನಾಯಕತ್ವದಲ್ಲಿ ಹಲವು ಬದಲಾವಣೆಗಳಾದವು. ೧೯೮೪ ರಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಎಂಇಎಸ್ ಹಿಡಿತ ಮುಂದುವರಿದಿತ್ತು.
೧೯೯೦ ರಲ್ಲಿ ಎಂಇಎಸ್ ಮುಖಂಡ ಸಂಭಾಜಿ ಪಾಟೀಲ್ ಮೇಯರ್ ಸ್ಥಾನ ಅಲಂಕರಿಸಿದರು. ಆ ನಂತರ ಗಡಿಭಾಗದಲ್ಲಿ ಮಹತ್ವದ ವಿದ್ಯಮಾನಕ್ಕೆ ಬೆಳಗಾವಿ ಸಾಕ್ಷಿಯಾಯಿತು. ೧೯೯೧ ರಲ್ಲಿ ಎಂಇಎಸ್ ಮಹಾಪೌರ ಅಂದಿನ ಕರ್ನಾಟಕ ಮುಖ್ಯಮಂತ್ರಿ ಬಂಗಾರಪ್ಪ ಅವರನ್ನು, ಹಿಡಕಲ್ ಡ್ಯಾಮ್‌ನ ೨೫ ಕೋಟಿ ನೀರಾವರಿ ಯೋಜನೆ ಕಾಮಗಾರಿ ಅಡಿಗಲ್ಲು ಸಮಾರಂಭಕ್ಕೆ ಆಹ್ವಾ ನಿಸಿದರು. ಈ ಮಹತ್ವದ ಘಟನೆಯಿಂದ ಗಡಿ ಭಾಗದಲ್ಲಿ ಮತ್ತೊಂದು ಹೊಸ ಆಶಾಕಿರಣವನ್ನು ಮೂಡಿಸಿದ್ದು ವಿಶೇಷ.
ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ಮಹಾನಗರ ಪಾಲಿಕೆ ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ೧೯೯೧ ರಲ್ಲಿ ನಡೆದ ರಾಜಕೀಯ ಧ್ರುವೀಕರಣದಿಂದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮೊದಲ ಕನ್ನಡದ ವ್ಯಕ್ತಿ ಮೇಯರ್ ಸ್ಥಾನ ಅಲಂಕರಿಸಿದರು. ಕನ್ನಡ ಹಾಗೂ ಉರ್ದು ಸಮೀಕರಣದ ಜೊತೆಗೆ ಎಂಇಎಸ್‌ನ ಆರು ಸದಸ್ಯರ ಬೆಂಬಲ ದೊಂದಿಗೆ, ಒಟ್ಟು ೨೮ ಸದಸ್ಯ ಬಲದಿಂದ ಸಿದ್ದನಗೌಡ ಪಾಟೀಲ್ ಮಹಾಪೌರರಾಗಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಎಂಇಎಸ್ ಮುಖಂಡ ಸಂಭಾಜಿ ಪಾಟೀಲ್ ನೀಡಿದ್ದ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ.
ಎಂಇಎಸ್ ಕರಾಳ ಅಧ್ಯಾಯ ಅಂತ್ಯವಾಗುವಲ್ಲಿ ಕರ್ನಾಟಕ ರಾಜಕೀಯ ನಾಯಕರ ಪಾತ್ರ ಮಹತ್ವದ್ದಾಗಿದೆ. ಪಕ್ಷಾತೀತವಾಗಿ ಅನೇಕ ಮುಖ್ಯಮಂತ್ರಿಗಳು ಕೈಗೊಂಡ ಮಹತ್ವದ ನಿರ್ಧಾರದ ಫಲವಾಗಿ ಎಂಇಎಸ್ ಇಂದು ರಾಜಕೀಯ ಹಾಗೂ ಜನರ ನೈತಿಕ ಬೆಂಬಲ ಕಳೆದುಕೊಂಡು ಬೆತ್ತಲೆಯಾಗಿ ನಿಂತಿದೆ. ಅಂದು ರಾಮಕೃಷ್ಣ ಹೆಗಡೆ ಹಾಗೂ ವೀರೇಂದ್ರ ಪಾಟೀಲರ ಅಧಿಕಾರ ಅವಧಿ ಯಲ್ಲಿ ಕೈಗೊಂಡ ಶಿಕ್ಷಣ ಕ್ರಾಂತಿ, ದೇವರಾಜ ಅರಸು ಹಾಗೂ ಜೆ.ಎಚ್. ಪಟೇಲ್ ಅವರ ಕಾಲ ಘಟ್ಟದಲ್ಲಿ ಕೈಗೊಂಡ ಆಡಳಿತಾ ತ್ಮಕ ನಿರ್ಧಾರದ ಫಲವಾಗಿ ಎಂಇಎಸ್ ಬಾಲ ಮುದುಡಿಕೊಂಡಿದ್ದು ಅಷ್ಟೇ ಸತ್ಯ.
ಮುಗ್ಧ ಮರಾಠಿ ಭಾಷಿಕರನ್ನು ಕರ್ನಾಟಕ ಸರಕಾರದ ಮೇಲೆ ಎತ್ತಿಕಟ್ಟಿ ಜನರ ಸಮಸ್ಯೆಗಳಿಗೆ ಧ್ವನಿಯಾಗದೆ ಕೇವಲ ರಾಜಕೀಯ ಲಾಭ ಕ್ಕಾಗಿ ಗಲಭೆ ಸೃಷ್ಟಿಸುವುದೇ ಎಂಇಎಸ್‌ನ ಕಾಯಕವಾಗಿತ್ತು. ಎಂಇಎಸ್ ಮಹಾನಗರ ಪಾಲಿಕೆ ಮೇಲೆ ಹಿಡಿತ ಹೊಂದಿದ್ದ ಸಂದರ್ಭದಲ್ಲಿ ರಾಜ್ಯ ಸರಕಾರಗಳು ಸರಿಯಾದ ಏಟು ಕೊಟ್ಟಿದ್ದರು. ೨೦೦೫ ರ ಧರ್ಮಸಿಂಗ್ ಸರಕಾರ ಹಾಗೂ ೨೦೧೧ ರಲ್ಲಿ ಆಗಿನ ಮುಖ್ಯಮಂತ್ರಿ ಸದಾನಂದಗೌಡ ಇಬ್ಬರು ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡುವ ಮೂಲಕ ಎಂಇಎಸ್‌ಗೆ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದರು. ಜೊತೆಗೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರ ಗಟ್ಟಿ ನಿರ್ಧಾರಗಳು ಎಂಇಎಸ್ ಅವನತಿಗೆ ಭದ್ರ ಬುನಾದಿ ಹಾಕಿತ್ತು.
ಯಾವಾಗ ಬೆಳಗಾವಿ ನಗರದಲ್ಲಿ ಶಕ್ತಿ ಸೌಧ ನಿರ್ಮಾಣ ಮತ್ತು ವರ್ಷದಲ್ಲಿ ಒಂದು ಬಾರಿ ಅಧಿವೇಶನ ಮಾಡುವುದರ ಜೊತೆಗೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಸಾರಿದ ನಂತರವೇ, ಎಂಇಎಸ್ ನಡೆಸುತ್ತಿದ್ದ ಪುಂಡಾಟಕ್ಕೆ ಸಂಪೂರ್ಣ ತಡೆ ಬಿತ್ತು. ಕರಾಳ ದಿನಾಚರಣೆ ಮೂಲಕ ಗಡಿ ಭಾಗದ ಜನರ ಭಾವನೆಗೆ ದಕ್ಕೆ ತರುತ್ತಿದ್ದ ಎಂಇಎಸ್ ಸಂಪೂರ್ಣ ನೆಲಕಚ್ಚಿದೆ. ಜೊತೆಗೆ ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿಯೂ ಜನ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ತಿರಸ್ಕರಿಸಿದದ್ದು ಕನ್ನಡ ನೆಲದಲ್ಲೇ ಪ್ರಶಾಂತತೆಯ ಬದುಕು ಕಟ್ಟಿಕೊಳ್ಳಲು ಗಡಿ ಭಾಗದ ಜನ ಸಜ್ಜಾಗಿದ್ದಾರೆ. ಇನ್ನೂ ನಾಲ್ಕು ದಶಕಗಳ ಕಾಲ ಕನ್ನಡಿಗರಸ್ವಾತಂತ್ರ್ಯ ಹರಣ ಮಾಡಿದ್ದ ಎಂಇಎಸ್ ತನ್ನ ಶವ ಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದುಕೊಂಡಿದೆ.