ಸಿದ್ದರಾಮಯ್ಯ ಬಿಜೆಪಿಗೆ ರಾಷ್ಟ್ರೀಯ ಎದುರಾಳಿ
ವಿಶ್ಲೇಷಣೆ
ಪ್ರೊ.ಆರ್‌.ಜಿ.ಹೆಗಡೆ
ವಿಷಯ ಹೇಳುವ ಮೊದಲು ಒಂದು ಚಿಕ್ಕ ಕಥೆ. ದೇವರಾಗಿ ಗುಡಿ ಒಳಗೆ ನಿಂತಿದ್ದ ಕಲ್ಲನ್ನು ನೋಡಿ ರಸ್ತೆಯಲ್ಲಿ ಮಲಗಿದ್ದ ಹಾಸು ಗಲ್ಲಿಗೆ ವಿಪರೀತ ಸಿಟ್ಟು ಬಂದು ಹೇಳಿತು-‘ಇದು ಘೋರ ಅನ್ಯಾಯ. ಮೂಲತ ನಾವಿಬ್ಬರೂ ಒಂದೇ ಜಾತಿಯವರು. ಕರಿ ಕಲ್ಲು ಗಳು. ಆದರೆ ಈಗ ನೀನು ನೋಡಿದರೆ ದೇವರು.
ಜನ ನಿನ್ನ ತಲೆಯ ಮೇಲೆ ಜೇನುತುಪ್ಪ, ಹಾಲು ಇತ್ಯಾದಿ ಸುರಿಯುತ್ತಾರೆ. ಆದರೆ ನನ್ನ ತಲೆಯ ಮೇಲೆ ಹೆಜ್ಜೆ ಇಟ್ಟು ತುಳಿದಾಡು ತ್ತಾರೆ. ಇದಕ್ಕೆಲ್ಲ ಕಾರಣ ನೀನು ಯಾರಿಗೋ ಬಕೆಟ್ ಹಿಡಿದಿದ್ದು’ ಎಂದು. ಇದನ್ನು ಕೇಳಿಕೊಂಡ ದೇವರ ಕಲ್ಲು ಶಾಂತವಾಗಿ ಹೇಳಿತು -‘ಬಕೆಟ್ಟು, ಗಿಕೆಟ್ಟು ಏನೂ ಇಲ್ಲ. ಜನ ತಲೆ ಮೇಲೆ ಪಂಚಾಮೃತ ಹಾಕಬೇಕೆಂದಿ ದ್ದರೆ ಮೊದಲು ಚಾಣ ತಿನ್ನಬೇಕು. ಹೀಗೆ ಮೂರ್ತಿಯಾಗುವ ಮೊದಲು ಶರೀರದುದ್ದಕ್ಕೂ ವರ್ಷಗಟ್ಟಲೆ, ಲಕ್ಷಗಟ್ಟಲೆ ಉಳಿ ಪೆಟ್ಟು ಅಂಗುಲಂಗುಲ ತಿಂದಿದ್ದೇನೆ. ದೇವರಾಗುವು ದಿದ್ದರೆ ಹೊಡೆತ ತಿನ್ನಬೇಕು’ ಎಂದು.
ಕಥೆ ಹೇಳಿಕೊಂಡಿದ್ದಕ್ಕೆ ಕಾರಣವಿದೆ. ಈಗ ರಾಜ್ಯದ ಮುಖ್ಯಮಂತ್ರಿ ಆಗಿ ಎರಡನೇ ಬಾರಿ ಅಧಿಕಾರ ವಹಿಸಿಕೊಂಡಿರುವ ಸಿದ್ದರಾಮಯ್ಯ ಇಂಚಿಂಚಾಗಿ ಕೆತ್ತಲ್ಪಟ್ಟು ಪರಿಪೂರ್ಣ ಶಿಲ್ಪವಾಗಿ ರೂಪಿತರಾದವರು. ಏಳುಬೀಳು ಅನುಭವಿಸಿಯೇ ಮತ್ತು ಅದೇ ಕಾರಣ ದಿಂದಲೇ ನಿಜಲಿಂಗಪ್ಪ, ದೇವರಾಜ ಅರಸು, ರಾಮಕೃಷ್ಣ ಹೆಗಡೆ, ದೇವೇಗೌಡ, ಯಡಿ ಯೂರಪ್ಪ ಹಾಗೆ ಕರ್ನಾಟಕದ ಮರೆಯಲಾ ಗದ ಮಾಸ್ ಲೀಡರ್‌ಗಳಲ್ಲಿ ಒಬ್ಬರಾಗಿ ಬೆಳೆದು ನಿಂತವರು.
ಮಾತು ವಿವರಿಸಲು ಸಿದ್ದರಾಮಯ್ಯನವರ ಜೀವನ ಕಥೆ ತುಸು ಹೇಳಿಕೊಳ್ಳಬೇಕು. ೧೯೪೭ರ ಆಗಸ್ಟ್ ೩ ರಂದು ಮೈಸೂರಿನ ಸಿದ್ದರಾಮನಹುಂಡಿಯಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಸಿದ್ದರಾಮಯ್ಯ ಕಷ್ಟಕಾರ್ಪಣ್ಯಗಳನ್ನು, ಅವಮಾನವನ್ನು ನೋಡಿ, ಅನುಭವಿಸಿ ಮೇಲೆ ಬಂದವರು. ವಿಕಿಪೀಡಿಯ ಮಾಹಿತಿ ಪ್ರಕಾರ ಅವರಿಗೆ ಫಾರ್ಮಲ್ ಆದ ಪ್ರಾಥಮಿಕ ಶಿಕ್ಷಣ ಸಿಗಲಿಲ್ಲ. ಕುರಿ ಕಾಯುತ್ತ ಬೆಳೆದವರು.
ಆದರೂ ನಂತರ ಹಟ ಹಿಡಿದು ಬಿಎಸ್ಸಿ ಮತ್ತು ಲಾ ಓದಿ ಮುಗಿಸಿ ಕೆಲವು ಕಾಲ ಮೈಸೂರಿನಲ್ಲಿ ಪ್ರಾಕ್ಟೀಸ್ ಹಾಗೂ ಕಾನೂನು ಪ್ರಾಧ್ಯಾಪಕರಾಗಿ ಕೂಡ ಕೆಲಸ ಮಾಡಿದರು. ದುಡ್ಡಿಲ್ಲದ, ಕಷ್ಟದ ದಿನಗಳು ಅವು. ಸಮಾಜವಾದಿ, ಲೋಹಿಯಾವಾದಿ ತತ್ವ, ಆದರ್ಶಗಳಿಂದ ಸಿದ್ದರಾಮಯ್ಯ ಆಕರ್ಷಿತರಾಗಿದ್ದು, ಅದಕ್ಕೆ ತಮ್ಮ ಜೀವಮಾನ ಕಾಲದ ಬದ್ಧತೆ ಬೆಳೆಸಿಕೊಂಡಿದ್ದು ಆಗ. ಕರ್ನಾಟಕದಲ್ಲಿ ಜನಪರ ಚಳುವಳಿಗಳು ಗಾಳಿಯಲ್ಲಿದ್ದ ಸಮಯ ಅದು.
ರಾಜಕೀಯದ ಗೀಳು ಹಿಡಿಸಿಕೊಂಡಿದ್ದ ಅವರು ೧೯೮೩ರಲ್ಲಿ ಭಾರತೀಯ ಲೋಕದಳ ಪಕ್ಷದಿಂದ ಚಾಮುಂಡೇಶ್ವರಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿಬಿಟ್ಟರು. ನಂತರ ಜನತಾ ಪಕ್ಷ ಸೇರಿದ ಅವರನ್ನು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ರಾಜ್ಯದ ಮೊದಲ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದರು. ಆ ಹುದ್ದೆಯಲ್ಲಿನ ಒಳ್ಳೆಯ ಕೆಲಸದಿಂದಾಗಿಯೇ ಸಿದ್ದರಾಮಯ್ಯ ಅವರಿಗೆ ರಾಜ್ಯಮಟ್ಟದ ವ್ಯಕ್ತಿತ್ವ ಪ್ರಾಪ್ತವಾಗಿದ್ದು. ೮೫ರ ಚುನಾವಣೆಯಲ್ಲಿ ಮರು ಆಯ್ಕೆಯಾದ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಪಶುಸಂಗೋಪನೆ ಸಚಿವರಾದರು.
ನಂತರ ರೇಷ್ಮೆ ಹಾಗೂ ಸಾರಿಗೆ ಸಚಿವರಾಗಿಯೂ ಕೆಲಸ ನಿರ್ವಹಿಸಿದರು. ಹಾಗೆಂದು ಸಿದ್ದರಾಮಯ್ಯನವರ ರಾಜಕೀಯ ಸರಳರೇಖೆಯಲ್ಲಿ ಮೇಲಕ್ಕೇರುತ್ತಲೇ ಹೋಗಿದ್ದು ಅಲ್ಲ. ಅವರಿಗೆ ಅಕಸ್ಮಾತ್ ಆದ, ಆಘಾತಕಾರಿಯಾದ ಹೊಡೆತಗಳು ಪದೇ ಪದೇ ಬಂದಿವೆ. ಅವರ ರಾಜಕೀಯವೇ ಮುಗಿದು ಹೋಯಿತು ಎನ್ನುವ ಮಟ್ಟದ ಶಾಕ್‌ಗಳು ಬಂದಿದ್ದು ಇದೆ. 1989ರಲ್ಲಿ ಅಸೆಂಬ್ಲಿ ಚುನಾವಣೆ ಸೋತುಬಿಟ್ಟ ಸಿದ್ದರಾಮಯ್ಯ ಎದ್ದು ನಿಲ್ಲಲು ೯೨ರಲ್ಲಿ ಜನತಾ ಪಕ್ಷದ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗುವ ತನಕ ಕಾಯಬೇಕಾಯಿತು. ಚೇತರಿಸಿಕೊಂಡು ೯೪ರಲ್ಲಿ ವಿಧಾನ ಸಭೆಗೆ ಮತ್ತೆ ಆಯ್ಕೆಯಾದ ಅವರು, ದೇವೇ ಗೌಡ ಸಂಪುಟದಲ್ಲಿ ಹಣಕಾಸು ಸಚಿವರಾದರು.
ದೇವೇಗೌಡ ಪ್ರಧಾನಿಯಾದ ನಂತರ ಜೆ.ಎಚ್. ಪಟೇಲ್ ಕ್ಯಾಬಿನೆಟ್ ನಲ್ಲಿ ಉಪಮುಖ್ಯಮಂತ್ರಿಯಾಗಿ ಹಣಕಾಸು ಹುದ್ದೆಹೊಂದಿದರು. 99ರ ಸುತ್ತಮುತ್ತ ಮತ್ತೆ ತೀವ್ರ ಹಿನ್ನೆಡೆ ಬಂತು. ಪಟೇಲ್ ಸಂಪುಟದಿಂದ ಹೊರತಳ್ಳಲ್ಪಟ್ಟ ಅವರು 99ರಲ್ಲಿ ಮತ್ತೆ ಚುನಾವಣೆಯಲ್ಲಿ ಸೋತುಬಿಟ್ಟರು. ಆದರೆ ನಡುವೆಯೇ ಹೊಸದಾಗಿ ರಚಿತವಾದ ಜನತಾ ದಳ(ಸೆಕ್ಯುಲರ್)ಗೆ ಅಧ್ಯಕ್ಷರಾದರು. 2004 ರಲ್ಲಿ ಮರಳಿ ಗೆದ್ದ ಸಿದ್ದರಾಮಯ್ಯ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಧರಂಸಿಂಗ್ ಸರಕಾರದಲ್ಲಿ ಮತ್ತೆ ಹಣಕಾಸು ಇಲಾಖೆಹೊಂದಿ ಉಪಮಂತ್ರಿಗಳಾದರು. ಹಿಂದಿನಂತೆ ಈಗಲೂ ಮುಖ್ಯಮಂತ್ರಿ ಹುದ್ದೆ ಎದೆ ಬಡಿತದಷ್ಟು ಹತ್ತಿರದಲ್ಲಿಯೇ ತಪ್ಪಿಹೋ ಯಿತು.
ನಂತರ ಕುಮಾರಸ್ವಾಮಿ ಯಡಿಯೂರಪ್ಪ ನೇತೃತ್ವದಲ್ಲಿ ಜನತಾದಳ ಬಿಜೆಪಿ ಸಂಯಕ್ತ ಸರಕಾರ ಸಿದ್ದರಾಮಯ್ಯ ಅವರನ್ನು ಹೊರಗಿಟ್ಟೇ ರಚನೆಯಾಯಿತು. ಆಮೇಲಿನ ಘಟನೆಗಳಲ್ಲಿ ಜೆಡಿಎಸ್‌ನಿಂದ ಹೊರ ದೂಡಲ್ಪಟ್ಟ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದರು. 2006ರ ಉಪಚುನಾವಣೆ ಗೆದ್ದರು. ಆ ಚುನಾವಣೆ ಸೋತರೆ ಬಹುಶಃ ಅಲ್ಲಿಗೆ ಸಿದ್ದರಾಮಯ್ಯನವರ ರಾಜಕೀಯ ಮುಕ್ತಾಯಕ್ಕೆ ಬರುತ್ತಿತ್ತೇನೋ! ಭಾರಿ ರಾಜಕೀಯ ಶಕ್ತಿಗಳು ಆಗ ಅವರ ವಿರುದ್ಧ ನಿಂತಿದ್ದವು. ಆಮೇಲೆ 2008ರಲ್ಲಿ ಮತ್ತು ಹದಿಮೂರರಲ್ಲಿ ಗೆದ್ದ ಅವರು 2013ರಲ್ಲಿ ರಾಜ್ಯದ ಮುಖ್ಯಮಂತ್ರಿಯಾದರು.
ಪೂರ್ಣ ಅವಧಿ ಸರಕಾರ ಮುಗಿಸಿದ ರಾಜ್ಯದ ಎರಡನೆಯ ಮುಖ್ಯಮಂತ್ರಿ ಸಿದ್ದರಾಮಯ್ಯ. ಹಗರಣವಿಲ್ಲದ, ದೀನ ದಲಿತರ ಪರವಾಗಿದ್ದ ಸರಕಾರ ನೀಡಿದವರು. ರಾಜ್ಯಕ್ಕೆ ಅನ್ನಭಾಗ್ಯ, ಶಾದಿ ಭಾಗ್ಯ, ಭಾಗ್ಯಜ್ಯೋತಿ, ಇಂದಿರಾ ಕ್ಯಾನ್ಟೀನ್ ಅಂತಹ ಯೋಜನೆಗಳನ್ನು ನಿರೂಪಿಸಿದವರು. 2018ರಲ್ಲಿ ಕೂಡ ಮತ್ತೆ ಮುಖ್ಯಮಂತ್ರಿ ಆಗುವ ಯೋಗ ಬಹಳ ಹತ್ತಿರದಿಂದ ತಪ್ಪಿ ಹೋಯಿತು. ಹೀಗೆ ರಾಜಕೀಯ ಬೆಂಕಿಯಲ್ಲಿ ಅರಳಿದ ಸಿದ್ದರಾಮಯ್ಯ ಎರಡನೆ ಬಾರಿಗೆ ಮುಖ್ಯಮಂತ್ರಿ ಆಗಿದ್ದಾರೆ. ಈಗಕೂಡ ಗೆಲುವು ಸುಲಭ ವಾಗಲಿಲ್ಲ. ಕಠಿಣ ವಿರೋಧವನ್ನೆಲ್ಲ ಎದುರಿಸಿ ಹಿಮ್ಮೆಟ್ಟಿಸಿ ನಿಲ್ಲಬೇಕಾಯಿತು. ಗೆದ್ದು ನಿಂತರೂ ಕೂಡ ಕಾಂಗ್ರೆಸ್ ಪಕ್ಷ ನೀಡಿದ್ದ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಬೇಕಾದ ಬೆಟ್ಟದಂತಹ ಸವಾಲು ಅವರ ಮುಂದೆ ಈಗ ಇದೆ.ಗಮನಿಸಬೇಕು.
ಏಳು ಬೀಳುಗಳ ನಡುವೆ ನಿಂತ ಸಿದ್ದರಾಮಯ್ಯ ಕರ್ನಾಟಕ ಕಂಡ ಶ್ರೇಷ್ಠ ಲೀಡರ್‌ಗಳಲ್ಲಿ ಒಬ್ಬರು. ಹಾಗೆ ನೋಡಿದರೆ ನಿಜ ನಾಯಕತ್ವ ಬೆಳೆಯುವುದು ಹೀಗೆಯೇ. ನಾಯಕ ತನ್ನ ಒಳಗಿನ ನಂಬುಗೆಗಳಿಗಾಗಿ ಬಹಿರಂಗದ ಅದಕ್ಕಾಗಿ ತ್ಯಾಗ ಮಾಡಲು ಸಿದ್ಧವಾಗಿ ನಿಂತಾಗ ಮಾತ್ರ. ನಾಯಕತ್ವ ಬೆಳೆಯುವುದು ಹೀಗೆಯೇ. ಕಷ್ಟಗಳಿಗೆ, ಸವಾಲುಗಳಿಗೆ, ರಿಸ್ಕ್‌ಗಳಿಗೆ, ಸೋಲಿಗೆ, ಗೆಲುವಿಗೆ ತಲೆಯೊಡ್ಡಿ ನಿಂತಾಗ. ಅವರು ಮತ್ತೆ ಮುಖ್ಯಮಂತ್ರಿ ಆಗಿ ನಿಂತಿರುವುದಕ್ಕೆ ಕಾರಣ ಅದೇ. ಎಂತಹ ಸಂಕಷ್ಟ ಬಂದರೂ, ಏರಿಳಿತ ಬಂದರೂ ಅಲುಗಾಡದ, ಬದ್ಧತೆ ಕಳೆದುಕೊಳ್ಳದ, ಘನತೆ ಕಳೆಕೊಳ್ಳದ ಮತ್ತು ಅಥೆಂಟಿಕ್ ಆದ ಅವರ ವ್ಯಕಿತ್ವದ ಬಲದಿಂದಾಗಿ.
ಅಧಿಕಾರಕ್ಕಾಗಿ ಕಾಂಪ್ರಮೈಸ್ ಮಾಡಿಕೊಳ್ಳದ, ಮೌಲ್ಯ, ಸಿದ್ಧಾಂತಗಳನ್ನು, ಬದ್ಧತೆಯನ್ನು ಕಳೆದುಕೊಳ್ಳದ, ತಮ್ಮ ಜಾತ್ಯತೀತ, ಬಡವರ ಪರ ನಿಲುವುಗಳನ್ನು ಬಿಟ್ಟುಕೊಡದ ನಿಲುವಿಗಾಗಿ. ಹಾಗೆಯೇ ಭ್ರಷ್ಟಾಚಾರದ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿಯತನಕ ನಡೆದು ಅಲ್ಲಿನ ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಕಾರಣರಾದವರು. ಹಾಗೆಯೇ ತಮ್ಮ ಆರ್ಥಿಕ ಸಿದ್ಧಾಂತಗಳಿಗೆ ಬದ್ಧ ರಾಗಿ ನಿಂತು ರಾಜ್ಯದಲ್ಲಿ ಹದಿಮೂರು ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಬಡವರ ಪರ ಕಾರ್ಯಕ್ರಮಗಳಿಗೆ ದುಡ್ಡು ಒದಗಿಸಲು ಸಾಧ್ಯವಿದೆ ಎನ್ನುವುದನ್ನು ಸಿದ್ಧಪಡಿಸಿ ತೋರಿಸಿದವರು.
ಹಾಗಾಗಿ ಅವರ ಒಂದು ಕಡೆಯಿಂದ ಅವರ ಸೆಕ್ಯುಲರ್ ನಿಲುವಿಗೆ ಬಂದ ವಿರೋಧದ ಜತೆಯೇ ಭ್ರಷ್ಟಾಚಾರದ ಲಾಬಿಯಿಂದಲೂ ಅವರಿಗೆ ಭಾರಿ ವಿರೋಧ ಬಂತು. ಎಲ್ಲರಿಗೂ ಗೊತ್ತಿದೆ. ಕಳೆದ ಐದು ವರ್ಷಗಳಲ್ಲಿ ವಿರೋಧಿ ದಾಳಿಗಳ ಕೇಂದ್ರ ಬಿಂದುವಾದ ವರು, ಟಿಪ್ಪು ಸುಲ್ತಾನ್ ಕುರಿತ ವಿವಾದದ ಕೇಂದ್ರದಲ್ಲಿ ಇದ್ದವರು ಸಿದ್ದರಾಮಯ್ಯನವರೇ. ಸಿದ್ರಾಮುಲ್ಲಾ ಖಾನ್ ಎನ್ನುವ ಬಿರುದಾವಳಿ ಅವರಿಗೆ ಬಂತು. ಅವರು ಒಂದು ಧರ್ಮದ ವಿರೋಧಿ ಎಂದು ಬಿಂಬಿಸುವ ಸತತ ಪ್ರಯತ್ನಗಳು ನಡೆದವು.
ಅದರ ಭಾಗವಾಗಿಯೇ ಬಾಡೂಟ ಮಾಡಿ ಅವರು ದೇವಸ್ಥಾನಕ್ಕೆ ಹೋದರು ಎನ್ನುವ ಮಾತು ಬಂತು. ಬೆನ್ನು ಬಿದ್ದ ವಿರೋಧಿ ಗಳಿಂದ ಆವರ ಮೇಲೆ ಸತತ ದಾಳಿ ನಡೆಯಿತು. ಇವನ್ನೆಲ್ಲ ಮೀರಿ ನಿಂತು ತಮ್ಮ ವೈಯಕ್ತಿಕ ಘನತೆಯಲ್ಲಿ ಎಲ್ಲೂ ಕಾಂಪ್ರಮೈಸ್ ಮಾಡಿಕೊಳ್ಳದೆ ಎದ್ದು ನಿಂತವರು ಸಿದ್ದರಾಮಯ್ಯ. ಬಹುಶಃ ವ್ಯಂಗ್ಯವೆಂದರೆ ದಾಳಿ ಮಾಡುವವರು ಬಿಜೆಪಿಗೆ ವಿರುದ್ಧವಾದ ಒಂದು ಗಟ್ಟಿಯಾದ ರಾಷ್ಟ್ರೀಯ ಬದಲಿ ರಾಜಕೀಯ ತತ್ವಜ್ಞಾನದ ನಾಯಕನನ್ನಾಗಿ ತಾವೇ ಸಿದ್ದರಾಮಯ್ಯ ನವರನ್ನು ಕಟ್ಟುತ್ತಿದ್ದೇವೆ.
ತಾವು ಅವರನ್ನು ಬೀಳಿಸಿದಷ್ಟೂ ಜನ ಅವರನ್ನು ಏಳಿಸುತ್ತಾರೆ ಎನ್ನುವುದನ್ನು ಗಮನಿಸಲೇ ಇಲ್ಲ. ಬಿಜೆಪಿಯಂತಹ ಪ್ರಬಲ ರಾಷ್ಟೀಯ ಪಕ್ಷದ ಸವಾಲುಗಳ ನಡುವೆ ನಿಂತವರು ಸಿದ್ದರಾಮಯ್ಯ. ಲಕ್ಷ್ಯ ಕೊಟ್ಟು ಗಮನಿಸಬೇಕು. ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಿರುವುದು ಕೇವಲ ಒಂದು ರಾಜ್ಯಮಟ್ಟದ ಘಟನೆಯಲ್ಲ. ದೇಶದ ಇತಿಹಾಸದ ದೃಷ್ಟಿಯಿಂದ ಕೂಡ ಒಂದು ಮಹತ್ವದ ಘಟನೆ. ಏಕೆಂದರೆ ಕೇಂದ್ರದಲ್ಲಿ ಕೂಡ ಬಿಜೆಪಿಯನ್ನು ಸೋಲಿಸಿಬಿಡಬಹುದಾದ ಸೂತ್ರ ಅವರ ಬಳಿ ಇದೆ. ದೇಶದ ಪ್ರಬಲ ಅಹಿಂದ ಶಕ್ತಿಗಳನ್ನು ಕೂಡಿಸಿಬಿಡುವ ಶಕ್ತಿ ಹೊಂದಿರುವರು ಸಿದ್ದರಾಮಯ್ಯ. ಇದು ಹಗುರವಾಗಿ ಹೇಳಿದ ಮಾತಲ್ಲ.
ವಿ.ಪಿ. ಸಿಂಗ್ ಪ್ರಧಾನಿಯಾಗಿದ್ದು ಅಹಿಂದದ ಬಲದ ಮೇಲೆ. ಬಿಜೆಪಿ ಸೋತುಬಿಡಬಹುದಾದ ಸಾಧ್ಯತೆ ತಂದಿಡುವುದು ಅಂತಹ ಸೂತ್ರ. ದೇಶದ ಹಿಂದಿ ಹಾರ್ಟ್‌ಲ್ಯಾಂಡ್ ಅಂದರೆ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ತಾನಗಳಲ್ಲಿ ಮುಲಾಯಂ ಸಿಂಗ್, ಲಾಲೂ ಯಾದವ್ ಬಿಜೆಪಿಯನ್ನು ತಡೆದಿದ್ದು ಇದೇ ಶಕ್ತಿಗಳ ಬಲದಿಂದ. ಈ ಶಕ್ತಿಗಳು ಬಹಳ ಬಲವಾಗಿವೆ. ಪಶ್ಚಿಮಬಂಗಾಲದಿಂದ ಹಿಡಿದು ಕೇರಳದವರೆಗೂ ಈಗ ಅಧಿಕಾರದಲ್ಲಿರುವ ಪಕ್ಷಗಳ ಹಿನ್ನೆಲೆಯಲ್ಲಿರುವ ಶಕ್ತಿಗಳು ಇವೇ. ಇಂತಹ ಶಕ್ತಿಗಳು ಈಗ ಹುಡುಕುತ್ತಿರುವುದು ಈ ಎಲ್ಲ ಎಳೆಗಳನ್ನು ಜೋಡಿಸಬಲ್ಲ, ರಾಷ್ಟ್ರೀಯ ಪಕ್ಷದಿಂದ ಬರುವ ಅಹಿಂದ ಹಿನ್ನೆಲೆ ಯಿಂದ ಬರುವ ನಂಬಿಗಸ್ತ, ಗೌರವಾನ್ವಿತ ಬ್ರಹತ್ ನಾಯಕನಿಗಾಗಿ.
ಈ ದೃಷ್ಟಿಯಿಂದ ಸಿದ್ದರಾಮಯ್ಯ ಪ್ರಧಾನಿ ಮಟೀರಿಯಲ್. ಬಿಜೆಪಿಗೆ ಮತ್ತು ಮೋದಿಯವರಿಗೆ ಒಂದು ಐಡಿಯಾ ಲಾಜಿಕಲ್ ರಾಷ್ಟ್ರೀಯ ಎದುರಾಳಿ. ಅವರು ಕರ್ನಾಟಕದ ಮುಖ್ಯಮಂತ್ರಿ ಮಾತ್ರವೇ ಅಲ್ಲ. ಮೋದಿಯವರ ಎದುರು ನಿಲ್ಲಬಲ್ಲ ರಾಷ್ಟ್ರೀಯ ದಂಡನಾಯಕ. ಅದೆಲ್ಲ ವೈಯಕ್ತಿಕವಾಗಿ ಸಿದ್ದರಾಮಯ್ಯ ನವರಿಗೆ ಬೇಕಿದೆಯೋ ಇಲ್ಲವೋ ಮಾತು ಬೇರೆ. ಆದರೆ ಅವರ ನಾಯ ಕತ್ವ ಅಂತಹ ಸಾಧ್ಯತೆಗಳನ್ನು ಹೊರಸೂಸಿಬಿಟ್ಟಿದೆ. ಬಹುಶಃ ವಿಷಯ ಬಿಜೆಪಿಗೆ ಗೊತ್ತಿದೆ ಕೂಡ.