ಬಿಜೆಪಿಯ ಪತನಕ್ಕೆ ಕಾರಣ- ಜನಸಾಮಾನ್ಯನ ಚಿಂತನ
ಮಂಥನ
ಮಣ್ಣೆಮೋಹನ್
mohan68micropower@.
ಆರು ತಿಂಗಳ ಹಿಂದೆ, ‘ಪತನದ ಅಂಚಿನಲ್ಲಿ ದಕ್ಷಿಣ ಭಾರತದ ಏಕೈಕ ಬಿಜೆಪಿ ಸರಕಾರ’ ಎಂಬ ಶೀರ್ಷಿಕೆಯಡಿ ಲೇಖನ ಬರೆದಿದ್ದೆ. ಅನೇಕ ಬಿಜೆಪಿ ನಾಯಕರು ತಮ್ಮ ವೈಯಕ್ತಿಕ ಚರ್ಚೆಗಳಲ್ಲಿ ಇದು ಸಾಧ್ಯವೇ ಇಲ್ಲವೆಂಬ ಉಡಾಫೆಯ ಮಾತುಗಳನ್ನಾಡಿದ್ದರು. ಚುನಾವಣಾ ಸಮಯದಲ್ಲಿಯೂ ಬಿಜೆಪಿ ನಾಯಕರುಗಳ ಅತಿ ಆತ್ಮ ವಿಶ್ವಾಸವನ್ನು ಎಲ್ಲರೂ ಗಮನಿಸಿದ್ದೇವೆ. ನಾವು ೧೩೦ ಸೀಟುಗಳನ್ನು ಗೆದ್ದೇ ತೀರುತ್ತೇವೆ ಎಂದು ಬಿಜೆಪಿಯ ಮಾಜಿ ಮುಖ್ಯ ಮಂತ್ರಿ, ಹಾಲಿ ಮುಖ್ಯಮಂತ್ರಿಗಳನ್ನು ಒಳಗೊಂಡು ಎಲ್ಲರೂ ಹೇಳಿದ್ದೇ ಹೇಳಿದ್ದು.
ತಾವೇ ಸರಕಾರವನ್ನು ನಡೆಸುತ್ತಿದ್ದರೂ, ತಮ್ಮ ಅಧೀನದ ಇರುವ ಗುಪ್ತಚರ ಇಲಾಖೆಯಿಂದ ಗೆಲುವಿನ ಬಗ್ಗೆ ಕರಾರುವಾಕ್ ವರದಿಯನ್ನೇ ತರಿಸಿಕೊಳ್ಳದ ಈ ನಾಯಕರು, ಗೆದ್ದೇ ಬಿಟ್ಟವರಂತೆ ಬೀಗುತ್ತಿದ್ದುದ್ದನ್ನು ನಿತ್ಯದ ಅವರ ಹೇಳಿಕೆಗಳಿಂದ ಕಂಡಿದ್ದೇವೆ. ಆದರೆ, ಜನಸಾಮಾನ್ಯರ ನಾಡಿಮಿಡಿತ ಬಲ್ಲ ಪ್ರಜ್ಞಾವಂತರು ಈ ಸರಕಾರದ ಪತನ ಖಚಿತವೆಂದು ಭವಿಷ್ಯ ನುಡಿದಿದ್ದರು. ಅಷ್ಟೇ ಏಕೆ? ಬಿಜೆಪಿಯಅನೇಕ ಕಟ್ಟಾ ಅಭಿಮಾನಿಗಳೇ ಈ ಬಾರಿ ನಮ್ಮ ಸರಕಾರ ಮನೆಗೆ ಹೋಗುವುದು ನಿಶ್ಚಿತವೆಂದು ಅತ್ಯಂತ ಸ್ಪಷ್ಟವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಬಿಜೆಪಿ ಸರಕಾರ ಪತನದ ಮೊದಲ ಕಾರಣ ಆ ಪಕ್ಷದ ನಾಯಕರ ಅತಿಯಾದ ಆತ್ಮವಿಶ್ವಾಸ. ಬಿಜೆಪಿ ಧುರೀಣರು ಅತಿ ಆತ್ಮವಿಶ್ವಾಸವನ್ನು ಬಿಟ್ಟು, ಕೆಳ ಹಂತದಿಂದ ಮಾಹಿತಿ ತರಿಸಿಕೊಂಡು, ಒಂದು ವರ್ಷದ ಮೊದಲಿನಿಂದಲೇ ಚುನಾವಣೆಗೆ ತಯಾರಿ ನಡೆಸಿದ್ದರೆ ಖಂಡಿತ ಬಿಜೆಪಿ ಜಯವನ್ನು ತಡೆಯಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ಬಿಜೆಪಿಯೇತರ ಶಾಸಕರಿರುವ ಕ್ಷೇತ್ರಗಳಲ್ಲಿ ಸಭೆಗಳನ್ನು ನಡೆಸಿ, ಒಮ್ಮತದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ವರ್ಷದ ಮೊದಲೇ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದರೆ, ಇನ್ನು ೨೦-೩೦ ಕ್ಷೇತ್ರಗಳಲ್ಲಿ ಬಿಜೆಪಿಯ ಗೆಲುವು ಸಾಧ್ಯವಾಗುತ್ತಿತ್ತು.
ಜೆಡಿಎಸ್ ಮತ್ತು ಕಾಂಗ್ರೆಸ್ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಅನೇಕ ದಿನಗಳ ನಂತರ, ಬಿಜೆಪಿ ಅತ್ಯಂತ ನಿಧಾನಕ್ಕೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿತು. ಇವರ ಅತಿ ಆತ್ಮವಿಶ್ವಾಸದಿಂದ ಕೇವಲ ೨೦- ೨೫ ದಿನಗಳ ಮೊದಲು ಮಾತ್ರ ಅಭ್ಯರ್ಥಿಗಳನ್ನುಘೋಷಿಸಿ, ಚುನಾವಣಾ ಅಖಾಡದಲ್ಲಿ ಮೀಸೆ ತಿರುವಿದರು. ಬಿಜೆಪಿ ಚುನಾವಣಾ ತಂತ್ರದ ಸಂಪೂರ್ಣ ವೈಫಲ್ಯಕ್ಕೆ ಆ ಪಕ್ಷದ ಧುರೀಣರೇ ನೇರ ಹೊಣೆ.ಬಿಜೆಪಿಯಂಥ ಚಾಣಕ್ಯ ತಂತ್ರದಲ್ಲಿ ಖ್ಯಾತ ಪಕ್ಷವೊಂದು, ಮುಂದಾಲೋಚನೆಯಿಂದ, ಉಳಿದ ಇತರೆ ಪಕ್ಷಗಳಿಗಿಂತ ವಿಭಿನ್ನ ರೀತಿಯಲ್ಲಿ ಚುನಾವಣಾ ತಂತ್ರ ಹೆಣೆಯುವ ಅವಕಾಶವೊಂದನ್ನು ತಾನೇ ಕಳೆದುಕೊಂಡಿತು.
ಹೆಚ್ಚು ಪೈಪೋಟಿ ಇರುವ ಕ್ಷೇತ್ರಗಳನ್ನು ಹೊರತುಪಡಿಸಿ, ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಆಖೈರುಗೊಳಿಸಿ, ಅವರಿಗೆ ಗೆಲ್ಲಲೇ ಬೇಕೆಂಬಗುರಿಯನ್ನು ನಿಗದಿಗೊಳಿಸಿ, ಅವಕಾಶ ನೀಡಿದ್ದರೆ ಖಂಡಿತ ಬಿಜೆಪಿ ಚುನಾವಣಾ ಫಲಿತಾಂಶ ಈಗಿನಷ್ಟು ಕಳಪೆಯಂತೂ ಆಗಲು ಸಾಧ್ಯವೇ ಇರಲಿಲ್ಲ.ಬಿಜೆಪಿಯ ರಾಜ್ಯಾಧ್ಯಕ್ಷರು ಎನಿಸಿಕೊಂಡ ವ್ಯಕ್ತಿ, ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಇತರ ಕಡೆ ಪಕ್ಷದ ಸ್ಥಿತಿಗತಿಗಳ ಅವಲೋಕನ ನಡೆಸಿದ್ದು ಅಷ್ಟಕಷ್ಟೆ. ಅಧ್ಯಕ್ಷತೆಯ ಜವಾಬ್ದಾರಿ ಹೊತ್ತ ವ್ಯಕ್ತಿ, ರಾಜ್ಯದ ೨೨೪ ಕ್ಷೇತ್ರಗಳಲ್ಲಿಯೂ ಬಿಜೆಪಿಯ ಅಸಲಿ ಸ್ಥಿತಿಗತಿಯ ಬಗ್ಗೆ ಜನಾಭಿಪ್ರಾಯ ವನ್ನು ಸಂಗ್ರಹಿಸಿ, ಪಕ್ಷವು ಎಲ್ಲಿ ಗೆಲ್ಲುವ ವಾತಾವರಣ ಇಲ್ಲವೋ ಅಂತಹ ಕಡೆಗಳಲ್ಲಿ ಬೂತ್ ಮಟ್ಟದ ಸರಣಿ ಸಭೆಗಳನ್ನು ನಡೆಸುವುದರ ಮೂಲಕ,ಪಕ್ಷವನ್ನು ಬಲಪಡಿಸಬೇಕಾದ ಜವಾಬ್ದಾರಿಯನ್ನು ಸಮರ್ಥವಾಗಿ ಹೊರಬೇಕಾಗುತ್ತದೆ.
ಆದರೆ ರಾಜ್ಯಾ ಧ್ಯಕ್ಷರು ಅಂತಹ ಜವಾಬ್ದಾರಿಯನ್ನು ಹೊರುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎನ್ನುವುದಕ್ಕೆ ಚುನಾವಣಾ ಫಲಿತಾಂಶವೇ ಸಾಕ್ಷಿಯಾಗಿದೆ. ‘೪೦% ಸರಕಾರ’ವೆಂಬ ಎದುರಾಳಿ ಪಕ್ಷಗಳ ಟೀಕೆಯನ್ನು ಸಮರ್ಥವಾಗಿ ಎದುರಿಸಲಾರದೆ ಕೈಕಟ್ಟಿ ಕುಳಿತದ್ದು, ಬಿಜೆಪಿಯ ಸೋಲಿಗೆ ಇನ್ನೊಂದು ಕಾರಣ. ಇದು ಕೇವಲ ಆರೋಪವಲ್ಲ, ಅದು ವಸ್ತುಸ್ಥಿತಿ ಎಂಬ ಭಾವನೆಯನ್ನು ಜನರ ಮನದಲ್ಲಿ ಬಿತ್ತಲು ಕಾರಣವಾದದ್ದು, ಎದುರಾಳಿ ಗಳ ಆರ್ಭಟಕ್ಕಿಂತ ಹೆಚ್ಚಾಗಿ ಬಿಜೆಪಿ ನಾಯಕರುಗಳ ಮೌನಾಚರಣೆ. ‘ಮೌನಂ ಸಮ್ಮತಿ ಲಕ್ಷಣಂ’ ಎಂಬಂತೆ ಇವರು ಮಾಡಿರುವುದು ನಿಜ, ಅವರು ಆಡಿಕೊಳ್ಳುತ್ತಿರುವುದು ನಿಜ ಎಂದು ಜನಸಾಮಾನ್ಯರು ಮಾತನಾಡಿಕೊಳ್ಳಲು ಈ ಮೌನವೇ ಆಹಾರವಾಯಿತು.
ಸ್ವಾಮೀಜಿಗಳೇ ನೇರವಾಗಿ ಪತ್ರಿಕಾಗೋಷ್ಠಿ ನಡೆಸಿ ನಾವು ಕೂಡ ಕಮಿ ಷನ್ ಕೊಡದೆ ಈ ಸರಕಾರದಲ್ಲಿ ಯಾವ ಕೆಲಸವೂ ಆಗುತ್ತಿಲ್ಲ ಎಂದು ಅಸಹನೆ ತೋಡಿಕೊಳ್ಳುವ ಮಟ್ಟಕ್ಕೆ ಈ ಸರಕಾರದಲ್ಲಿ ಕಮಿ ಷನ್ ಹಾವಳಿ ಇತ್ತು ಎಂಬುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಈ ಆರೋಪವನ್ನು ಸಾಬೀತು ಪಡಿಸಲು ಪ್ರತಿಪಕ್ಷಗಳಿಗೆ ಸವಾಲನ್ನು ಹಾಕಿ, ಅದನ್ನೇ ಬಲವಾಗಿ ಪ್ರತಿಪಾದಿಸಿ, ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ಕಾಂಗ್ರೆಸ್ ಕಚೇರಿಗಳ ಮುಂದೆ ಧರಣಿ ನಡೆಸುವ ಮೂಲಕ, ಅವರ ಆರೋಪಕ್ಕೆ ದಿಟ್ಟ ದನಿದಲ್ಲಿ ಅತ್ಯಂತ ಸ್ಪಷ್ಟವಾಗಿ ತಿರುಗೇಟು ನೀಡಿದ್ದರೆ, ಪ್ರತಿಪಕ್ಷಗಳ ನಿಜವಾದ ಬಣ್ಣ ಬಯಲಾಗುತ್ತಿತ್ತು.
ಕರ್ನಾಟಕ ಜನತೆಗೆ ಇದು ದ್ವೇಷಪೂರಿತ ಸುಳ್ಳು ಆರೋಪ ಎಂಬುದು ಮನದಟ್ಟಾಗುತ್ತಿತ್ತು. ಆದರೆ ಅಂತಹ ಅವಕಾಶವನ್ನು ಬಿಜೆಪಿ ಕಳೆದು ಕೊಂಡಿ ದ್ದಂತೂ ನಿಜ. ಒಂದು ವೇಳೆ ಆ ಆರೋಪ ಸಂಪೂರ್ಣವಾಗಿ ನಿಜವಾಗಿದ್ದರೆ, ಆ ರೀತಿ ಗಳಿಸಿದ ಕಮಿಷನ್ ಹಣದಿಂದಲೇ  ಚುನಾವಣೆ ಯನ್ನು ಸುಲಭವಾಗಿ ಗೆದ್ದೇಗೆಲ್ಲುತ್ತೇವೆಂದು ಒಣಜಂಬ ಮತ್ತು ಅಹಂಕಾರ ಪ್ರದರ್ಶಿಸಿದ್ದು ಕೂಡ, ಇವರು ದಾರಿ ತಪ್ಪಿದ ಮಗನಾಗಲು ಕಾರಣವಾಯಿತು. ಹಣವೊಂದೇ ಚುನಾವಣಾ ಗೆಲುವಿನ ಮೂಲ ಮಂತ್ರವಲ್ಲವೆಂಬ ಸತ್ಯವನ್ನು, ಇವರು ತಿಳಿಯದೇ ಹೋದದ್ದು ಚುನಾವಣಾ ರಾಜಕೀಯದ ಬಗೆಗಿನ ಇವರ ಅeನಕ್ಕೆ ಸಾಕ್ಷಿ. ಈ ರಾಜ್ಯದ ಜನ, ಕೋಟಿ ಕೋಟಿ ಸುರಿದರೂ, ಘಟಾನುಘಟಿ ನಾಯಕರಗಳನ್ನೇ ಮನೆಗೆ ಕಳಿಸಿರುವುದನ್ನು, ಇತಿಹಾಸದ ಪುಟಗಳಿಂದ ನಾವು ನೋಡಿ ತಿಳಿಯಬಹುದಾಗಿದೆ.
ಸದಾ ನಮ್ಮ ಜತೆ ನಿಲ್ಲುವ ಹಿಂದೂಪರ ಸಂಘಟನೆಗಳ ಮೇಲಿನ ಅತಿಯಾದ ಅವಲಂಬನೆ ಮತ್ತು ವಿಶ್ವಾಸ ಕೂಡ ಈ ಸರಕಾರದ ಪತನದ ಇನ್ನೊಂದು ಬಹು ಮುಖ್ಯ ಕಾರಣ. ನಮ್ಮ ಸರಕಾರವಿರುವಾಗಲೇ, ನಮ್ಮ ಅನೇಕ ಕಾರ್ಯಕರ್ತರ ಕೊಲೆಯಾಯಿತು. ಅದಕ್ಕೆ ಪ್ರತಿವಾಗಿ ಸರಕಾರ ತೆಗೆದುಕೊಂಡ ಪ್ರತ್ಯುತ್ತರ ಕ್ರಮಗಳು ಅಸಮಂಜಸವಾಗಿದ್ದವು ಎಂಬ ಅಸಂತೋಷ ಹಿಂದೂ ಕಾರ್ಯಕರ್ತರಲ್ಲಿ ಮನೆ ಮಾಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಬಹುದೊಡ್ಡ ಮಟ್ಟಿಗೆ ಈ ಅಸಂತೋಷ ವ್ಯಕ್ತವಾಗಿರುವುದನ್ನು ಕಾಣಬಹುದಾಗಿದೆ.
ಗೃಹ ಸಚಿವರಾಗಿದ್ದ ಆರಗ eನೇಂದ್ರ ಅವರನ್ನು ಕುರಿತ ಅಸಮರ್ಥ ಗೃಹಸಚಿವರೆಂಬ ಅನೇಕ ಕಾಮೆಂಟ್‌ಗಳು, ಸಾಮಾಜಿಕ ಜಾಲತಾಣಗಳಲ್ಲಿಕಾಣಿಸಿಕೊಂಡಿರುವುದೇ ಇದಕ್ಕೆ ನಿದರ್ಶನ. ಚುನಾವಣೆಯಲ್ಲಿ ಅದು ಆಕ್ರೋಶದ ರೂಪದಲ್ಲಿ ಹೊರಹೊಮ್ಮಿದೆ. ಇತರೆ ಸರಕಾರಗಳಿzಗ ಯಾವ ರೀತಿಯ ಕ್ರಮಕೈಗೊಳ್ಳುತ್ತಿದ್ದವೋ, ಅದಕ್ಕಿಂತ ಭಿನ್ನರೀತಿಯ ಕ್ರಮವನ್ನು ನಮ್ಮದೇ ಸರಕಾರ ತೆಗೆದುಕೊಳ್ಳಲಿಲ್ಲವೆಂಬ ಹಿಂದೂ ಪರ ಸಂಘಟನೆಗಳ ಅಸಹನೆಬಹುವಾಗಿ ಕಾಡಿದೆ. ಅನೇಕ ಬಿಜೆಪಿ ಕಾರ್ಯಕರ್ತರೇ ತಮ್ಮ ಸರಕಾರದ ವಿರುದ್ಧ ವೈಯಕ್ತಿಕ ಮಟ್ಟದಲ್ಲಿ ಬಲವಾದ ಟೀಕಾ ಪ್ರಹಾರವನ್ನೇ ನಡೆಸಿದ್ದರು. ಮೋದಿಜಿಯವರಂತೆ ಪ್ರಾಮಾಣಿಕತೆಯನ್ನು ಕೊಡಲಾಗದ, ಯೋಗಿಜಿಯವರಂತೆ ಖಡಕ್ ಆಡಳಿತ ನೀಡಲಾಗದ, ನಪುಂಸಕರ ರೀತಿಯಲ್ಲಿ ಆಡಳಿತ ನಡೆಸುತ್ತಿರುವ ಇಂತಹ ಸರಕಾರ ಇದ್ದರೆಷ್ಟು? ಬಿದ್ದರೆಷ್ಟು? ಎಂಬ ನೇರವಾದ ಅನಿಸಿಕೆಯನ್ನು ಬಿಜೆಪಿ ಕಾರ್ಯಕರ್ತರು ವ್ಯಕ್ತಪಡಿಸುತ್ತಿದ್ದರು.
ಬಸವರಾಜ ಬೊಮ್ಮಾಯಿಯವರು ಅಧಿಕಾರ ವಹಿಸಿಕೊಂಡ ತಕ್ಷಣ ನಡೆದಂತಹ ಡ್ರಗ್ಸ್ ಮಾಫಿಯಾದ ಮೇಲಿನ ದಾಳಿ ಯಾವ ತಾರ್ಕಿಕ ಅಂತ್ಯವನ್ನು ಮುಟ್ಟಿತು ಎಂಬುದು ಇಲ್ಲಿಯ ವರೆಗೂ ಗೊತ್ತಿಲ್ಲ. ಅನೇಕ ದೊಡ್ಡ ದೊಡ್ಡ ರಾಜಕಾರಣಿಗಳ ಮಕ್ಕಳೇ ಈ ಮಾಫಿಯಾದಲ್ಲಿ ಸಿಕ್ಕಿದ್ದಾರೆಂಬ ಗುಸು-ಗುಸುಮಾತ್ರ ಜೋರಾಗಿತ್ತು. ಆದರೆ ಅವರ ಹೆಸರು ಮಾತ್ರ ಬಹಿರಂಗ ವಾಗಲೇ ಇಲ್ಲ. ಒಟ್ಟಾರೆ ಆ ಹಗರಣ ಯಾವ ಹಂತಕ್ಕೆ ತಲುಪಿತು ಎಂಬುದೇ ಗೋಪ್ಯ ವಾಗುಳಿಯಿತು.
ಹಾಗೆಯೇ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಯ ಮೇಲೆ ನಡೆದ ದಾಳಿಯ ತನಿಖೆ ಯಾವ ಹಂತದಲ್ಲಿದೆ ಎಂಬುದು ಕೂಡ ಜನರಿಂದ ಮರೆ ಮಾಚಲಾಯಿತು. ಹಗರಣದಲ್ಲಿ ತಪ್ಪಿತಸ್ಥರಾಗಿದ್ದ ಎಲ್ಲರನ್ನೂ ಕೋರ್ಟಿನಿಂದ ಬಿಡಿಸಿಕೊಂಡು ಬರಲು ಮುತುವರ್ಜಿ ವಹಿಸಿದ ಮಹಾನುಭಾವ, ಹೊಸ ಸರಕಾರದಲ್ಲಿ ಮಂತ್ರಿಯಾಗಿದ್ದಾರೆಂಬುದೇ ವ್ಯವಸ್ಥೆಯ ಕ್ರೂರ ವ್ಯಂಗ್ಯ. ಇದಕ್ಕೆ ನೇರವಾಗಿ ಬಿಜೆಪಿಯೇ ಕಾರಣವಾಗಿದೆ. ರಾಜ್ಯದ ಗಮನ ಸೆಳೆದಿದ್ದ ಇಂತಹ ವಿಚಾರಗಳ ತನಿಖೆಯ ಪ್ರಗತಿಯನ್ನು ಆಯಾ ಹಂತಗಳಲ್ಲಿ ತಿಳಿಸುವ ಕನಿಷ್ಠ ಸೌಜನ್ಯವೂ ಆಡಳಿತಕ್ಕೆ ಇಲ್ಲದೇ ಹೋದದ್ದು ಅಪಹಾಸ್ಯಕ್ಕೆ ಈಡಾಗಿದ್ದಂತೂ ಸತ್ಯ. ಇತರೆ ಸರಕಾರಗಳ ಅವಧಿಯಲ್ಲಿ ನಡೆಯುತ್ತಿದ್ದ ತನಿಖೆಗಿಂತ ವಿಭಿನ್ನ ರೀತಿಯ ತನಿಖೆಯು ಬಿಜೆಪಿ ಸರಕಾರದ ನೇತೃತ್ವದಲ್ಲಿ ನಡೆಯಲಿಲ್ಲ ಎಂಬುದೇ ಈ ಸರಕಾರ ತುಳಿದ ಹಾದಿಗೊಂದು ಸ್ಪಷ್ಟ ನಿದರ್ಶನ.
ಆಶ್ಚರ್ಯವೆಂದರೆ ವರಿಷ್ಠರು ಸಹ ಇಲ್ಲಿನ ಸರಕಾರದ ತಪ್ಪು ಹೆಜ್ಜೆಗಳನ್ನು ಗುರುತಿಸಿ ಇವರ ಕಿವಿಹಿಂಡುವ ಕೆಲಸವನ್ನು ಮಾಡದೆ ಹೋದದ್ದು. ಇಡೀ ದಕ್ಷಿಣ ಭಾರತಕ್ಕೆ ಮೊಟ್ಟಮೊದಲ ಬಿಜೆಪಿ ಸರಕಾರವನ್ನು ನೀಡಿದ ಕರ್ನಾಟಕ ಜನತೆಗೆ ನಿಜಕ್ಕೂ ದ್ರೋಹ ಬಗೆಯಿತು. ಅತ್ಯಂತ ಮಾದರಿಯಾದ ಸರಕಾರ ನೀಡುವುದರ ಮೂಲಕ, ದಕ್ಷಿಣ ಭಾರತದ ಇತರ ರಾಜ್ಯಗಳಿಗೂ ಬಿಜೆಪಿ ಬಗ್ಗೆ ಒಲವು ಬೆಳೆಯುವಂತೆ ಮಾಡುವ ದೊಡ್ಡ ಜವಾಬ್ದಾರಿ ರಾಜದ ಮೇಲಿತ್ತು. ಆದರೆ ನಮ್ಮ ರಾಜ್ಯಗಳಲ್ಲಿ  ಬಿಜೆಪಿಯನ್ನು ದೂರ ಇಟ್ಟಿರುವುದರ ಕಾರಣ ಇದೇ ಎಂದು ಇತರೆ ರಾಜ್ಯದವರು ಹೇಳುವ ಮಟ್ಟಿಗೆ ಕರ್ನಾಟಕದ ಬಿಜೆಪಿ ಭ್ರಷ್ಟಹಾದಿ ಹಿಡಿಯಿತು.
ಚುನಾವಣಾ ಸೋಲಿನ ಇನ್ನೊಂದು ಬಹು ಮುಖ್ಯ ಕಾರಣ, ಬಿಜೆಪಿಯ ಐಟಿ ಸೆಲ್‌ನ ನಿಷ್ಕ್ರಿಯತೆ ಮತ್ತು ವೈಫಲ್ಯ. ದೇಶದಲ್ಲಿಯೇ ವಿನೂತನ ಚುನಾ ವಣಾ ಜಾಹೀರಾತುಗಳನ್ನು ನೀಡಿದ ಕೊಡುಗೆ ಬಿಜೆಪಿಗೆ ಸೇರುತ್ತದೆ. ಆದರೆ ಈ ಬಾರಿ ರಾಜ್ಯ ಬಿಜೆಪಿಯ ಐಟಿ ಸೆಲ್ ಎಷ್ಟೊಂದು ನಿಷ್ಕ್ರಿಯ ವಾಗಿತ್ತೆಂದರೆ ಪತ್ರಿಕೆಗಳು, ರೇಡಿಯೋ, ದೂರದರ್ಶನಗಳಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರದ ಜಾಹೀರಾತುಗಳು ಪ್ರಕಟಗೊಳ್ಳಲು ಆರಂಭವಾಗಿ ಅನೇಕ ದಿನಗಳಾದರೂ, ಬಿಜೆಪಿಯ ಜಾಹೀರಾತುಗಳು ಸಿದ್ಧಗೊಂಡಿರಲೂ ಇಲ್ಲ. ಪ್ರಸಾರವಾಗಿರಲೂ ಇಲ್ಲ.
ಕಾಂಗ್ರೆಸ್ ಜಾಹೀರಾತುಗಳ ಆರ್ಭಟದ ನಂತರ ಎಚ್ಚೆತ್ತುಕೊಂಡರೂ, ಬಿಜೆಪಿಯ ಜಾಹೀರಾತುಗಳು ಇತರೆ ಪಕ್ಷಗಳ ಜಾಹೀರಾತುಗಳ ಎದುರು ಅತ್ಯಂತ ಪೇಲವವಾಗಿದ್ದವು. ಆದ್ದರಿಂದ ಜನರ ಮನಸ್ಸನ್ನು ಗೆಲ್ಲಲು ವಿಫಲವಾದವು. ಬಿಜೆಪಿಯ ಅನೇಕ ಗೋಡೆ ಜಾಹೀರಾತುಗಳನ್ನು ನೀವು ಗಮನಿಸಿರಬಹುದು. ಅಲ್ಲಿ ಮೋದಿ, ಅಮಿತ್ ಶಾ ರವರಿಗಿಂತ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಜೆ ಪಿ ನಡ್ಡಾರವರ ಭಾವಚಿತ್ರವೇ ಪ್ರಧಾನವಾಗಿರುವುದು ಎದ್ದು ಕಾಣಿಸುತ್ತದೆ. ಪ್ರೊಟೋ ಕಾಲ್ ಪ್ರಕಾರ ಇದು ಸರಿಯಿದ್ದರೂ, ಕರ್ನಾಟಕದ ಜನತೆಯ ಬಾಯಲ್ಲಿ ಅದರಲ್ಲೂ ಯುವ ಜನತೆಯ ಬಾಯಲ್ಲಿ ಹೆಚ್ಚುಪ್ರಚಲಿತವಿರುವುದು ಮೋದಿ, ಅಮಿತ್ ಶಾ ಮತ್ತು ಯೋಗಿಯವರು ಮಾತ್ರ.
ಇವರ ಭಾವಚಿತ್ರಗಳನ್ನು ಹೆಚ್ಚು ಬಳಸುವು ದರ ಮೂಲಕ ಯುವ ಜನತೆಯನ್ನು ಇನ್ನಷ್ಟು ಹತ್ತಿರವಾಗಿಸಿಕೊಂಡು, ಅವರ ಮನಸ್ಸನ್ನು ಗೆಲ್ಲುವ ಪ್ರಯತ್ನವನ್ನು ಮಾಡದೇ ಇದ್ದದ್ದು ಕೂಡ, ಬಿಜೆಪಿಯ ಮತ ಪರಿವರ್ತನೆಯಲ್ಲಿ ಲೋಪವಾಗಲು ಕಾರಣವಾಗಿದೆ. ದೇಶಪ್ರೇಮ ಮತ್ತು ಸಮಾಜ ಸೇವೆಯ ಹಿನ್ನೆಲೆಯುಳ್ಳ ಆರೆಸ್ಸೆಸ್ ಸಂಘಟನೆಯ ಗರಡಿಯಲ್ಲಿ ಪಳಗಿದ್ದರೂ, ಬಿಜೆಪಿ ಸರಕಾರದ ಅನೇಕ ಮಂತ್ರಿಗಳು ಅಧಿಕಾರ ಸಿಗುತ್ತಿದ್ದಂತೆಯೇ, ಆ ಎರಡ ರಿಂದ ಮೂರು ಮಾರು ವಿಮುಖರಾಗಿದ್ದು ಕರ್ನಾಟಕದ ಪ್ರಜ್ಞಾವಂತ ಮತದಾರರೆಲ್ಲರಿಗೂ ತಿಳಿದ ವಿಷಯವೇ ಆಗಿತ್ತು. ಇದು ನಿಜಕ್ಕೂ ನಮ್ಮ ಸರಕಾರವೇ? ಎಂದು ಅನೇಕ ಆರೆಸ್ಸೆಸ್ ಮುಖಂಡರುಗಳೇ ತಮ್ಮ ಗೌಪ್ಯಸಭೆಗಳಲ್ಲಿ ಮಾತನಾಡಿದ್ದು ಕೂಡ ಸುಳ್ಳಲ್ಲ.
ಅಷ್ಟರಮಟ್ಟಿಗೆ ಈ ಸರಕಾರ ಹಿಂದೂಪರ ಸಂಘಟನೆಗಳ ವಿಶ್ವಾಸವನ್ನು ಕಳೆದುಕೊಂಡದ್ದು ಸುಸ್ವಷ್ಟವಾಗಿತ್ತು. ಪ್ರಚ್ಚನ್ನ ದೇಶಪ್ರೇಮ ಮತ್ತು ಸಂಪನ್ನ ಪ್ರಾಮಾಣಿಕತೆಗೆ ಇನ್ನೊಂದು ಹೆಸರಾದ ಆರೆಸ್ಸೆಸ್‌ನ ಭಾಗವಾಗಿ ಬಿಜೆಪಿಇದ್ದರೂ, ತಮ್ಮ ಪಕ್ಷ ತಪ್ಪು ಹಾದಿಯಲ್ಲಿ ನಡೆಯುವಾಗ ಅದರ ಕಿವಿಹಿಂಡುವ ಕೆಲಸವನ್ನು ಆರೆಸ್ಸೆಸ್ ಮುಖಂಡರು ಏಕೆ ಮಾಡುವುದಿಲ್ಲ ಎಂಬುದೇ ಒಗಟಾಗಿ ಉಳಿದಿದೆ. ತಮ್ಮ ನಡೆ ಮತ್ತು ನುಡಿಯಲ್ಲಿ ಅತ್ಯಂತ ಪ್ರಾಮಾಣಿಕತೆಯನ್ನು ಪ್ರದರ್ಶಿಸುವ ಆರೆಸ್ಸೆಸ್ ಮುಖಂಡರು, ಅದೇ ಪ್ರಾಮಾಣಿಕತೆಯನ್ನು ತಮ್ಮ ಸರಕಾರದ ಮಂತ್ರಿಗಳಿಂದ ಬಯಸದೇ ಹೋದದ್ದು ಕೂಡ ಬಿಜೆಪಿ ಸರಕಾರದ ಪತನಕ್ಕೆ ಮೂಲ ಕಾರಣವಾಗಿದೆ.
ಕೇವಲ ಪ್ರಾಮಾಣಿಕತೆ ಬೋಧಿಸುವುದಷ್ಟೇ ನಮ್ಮ ಕೆಲಸ, ಅದನ್ನು ಕಾರ್ಯರೂಪಕ್ಕೆ ತರುವುದು ಆಡಳಿತ ನಡೆಸುವವರಿಗೆ ಬಿಟ್ಟದ್ದು ಎಂಬ ಆರೆಸ್ಸೆಸ್ ನಾಯಕರ ಧೋರಣೆಯೇ ದೋಷ ಪೂರಿತವಾಗಿದೆ. ತಮ್ಮ ನಡೆಗಳಲ್ಲಿರುವ ಸ್ವಚ್ಛತೆ ಮತ್ತು ಸ್ಪಷ್ಟತೆಯನ್ನು, ತಮ್ಮ ಪಕ್ಷದ ನಾಯಕರಲ್ಲಿಯೂ ತರುವಪ್ರಯತ್ನವನ್ನು ಮುಂದಿನ ದಿನಗಳಲ್ಲಿ ಆರೆಸ್ಸೆಸ್ ಮಾಡದೇ ಹೋದರೆ, ನಿಜಕ್ಕೂ ಬಿಜೆಪಿ ಇತರೆ ರಾಜ್ಯಗಳಲ್ಲಿಯೂ ಕರ್ನಾಟಕದಂತೆ ಪತನಗೊಳ್ಳುವುದು ಖಚಿತವಾಗಿದೆ. ಈ ಬಗ್ಗೆ ಆರೆಸ್ಸೆಸ್ ಮುಖಂಡರು ಆತ್ಮವಿಮರ್ಶೆ ಮಾಡಿಕೊಳ್ಳುವ ಕಾಲ ಇದೀಗ ಬಂದಿದೆ.