ಪರಿಸರಕ್ಕಾಗಿ ನಮ್ಮ ಜೀವನಶೈಲಿಯ ಬದಲಾವಣೆ ಇಂದಿನ ಅಗತ್ಯ
ಕಾಳಜಿ
ಡಾ.ಶಾಲಿನಿ ರಜನೀಶ್
ಮೊನ್ನೆಮೊನ್ನೆ, ಜೂನ್ ೫ ರಂದು ವಿಶ್ವದೆಡೆ ಪರಿಸರ ದಿನವನ್ನು ನಾವೆಲ್ಲರೂ ಆಚರಿಸಿದ್ದೇವೆ. ಆದರೆ. ಇನ್ನೂ ಕರಾವಳಿಯಲ್ಲಿ ಮಳೆ ಬಂದಿಲ್ಲ. ಜೂನ್ಒಂದರಂದು ಆರಂಭವಾಗುತ್ತಿದ್ದ ಮಳೆಯ ಥಟ.. ಪಟ್ ಸದ್ದು ಎಲ್ಲಿಯೂ ಕೇಳಿಸುತ್ತಿಲ್ಲ. ಪರಿಸರ ದಿನ ದಂದು ಗಿಡನೆಡಲು ಬಿಸಿಲಿನ ತಾಪ ನಮ್ಮನ್ನುಬಿಟ್ಟಿಲ್ಲ.
ಪರಿಸರ ದಿನದಂದು, ಗಿಡ-ನೆಟ್ಟು ಸಂಭ್ರಮಿಸುವ ಸಂಪ್ರದಾಯ ತಪ್ಪಲ್ಲ. ಆದರೆ, ನಾವು ಇಂದು ಅದಕ್ಕಿಂತ ಭಿನ್ನ ರೀತಿಯಲ್ಲಿ ಪರಿಸರವನ್ನು ಅವಲೋಕಿಸಬೇಕಾಗಿದೆ. ಪರಿಸರ ಎಂದರೆ ಗಿಡ-ಮರ-ಮಳೆ ಮಾತ್ರ ಎಂದು ಭಾವಿಸಿದರೆ ತಪ್ಪಾಗುತ್ತದೆ. ಪರಿಸರ ಇಲ್ಲದೆ ನಾವಿಲ್ಲ. ನಾವು ಈ ಗ್ರಹದ ಹಂಗಿನಲ್ಲಿದ್ದೇವೆ ಎಂಬುದನ್ನು ಎಂದಿಗೂ ಮರೆಯು ವಂತಿಲ್ಲ. ಪರಿಸರಕ್ಕೆ ನಾವು ಅಭಾರಿಗಳಾಗಿರಬೇಕೇ ಹೊರತು, ಪರಿಸರ ನಮಗೆ ಅಭಾರಿ ಯಾಗಿರುವುದಲ್ಲ. ನಮ್ಮ ಜೀವನದ ಪ್ರತಿ ಉಸಿರಿನಲ್ಲೂ ಈ ಗ್ರಹದ ಮೇಲಿನ ಚರಾಚರಗಳ ಅನುಗ್ರಹವಿದೆ ಎಂಬುದನ್ನು ಎಂದಿಗೂ ಮರೆಯುವಂತಿಲ್ಲ.
ಪರಿಸರ ನಮಗೆ ಎಲ್ಲವನ್ನೂ ನೀಡಿರುವಾಗ, ನಾವು ಪ್ರತಿಯಾಗಿ ಏನನ್ನು ನೀಡಿದ್ದೇವೆ ಎಂದು ಒಂದು ಬಾರಿ ಆತ್ಮಾವಲೋಕನ ಮಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇಂದು ನಾವು ಕಾಣುವ ಜಾಗತಿಕ ತಾಪಮಾನ ಏರಿಕೆ, ಆಮ್ಲ ಮಳೆ, ವಾಯು ಮಾಲಿನ್ಯ, ಓಝೋನ್ ಪದರ ಸವಕಳಿ, ಜಲಮಾಲಿನ್ಯ, ಹವಾಮಾನ ಬದಲಾವಣೆ, ನಗರ ವಿಸ್ತರಣೆ, ತ್ಯಾಜ್ಯ ಹೀಗೆ ಹತ್ತು ಹಲವು ಸಮಸ್ಯೆಗಳು ಗ್ರಹದಲ್ಲಿರುವ ಜೀವ ಸಂಕುಲದ ಮೇಲೆ ದುಷ್ಪರಿಣಾಮ ಬೀರಿರುವುದು ಮಾತ್ರವಲ್ಲ ನೆಲ-ಜಲ, ಗಾಳಿ ಹೀಗೆ ಎಲ್ಲದರ ಮೇಲೂ ಪರಿಣಾಮ ಬೀರಿದೆ.
ಮನುಕುಲದ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಗಳ ಹೊರತಾಗಿಯೂ, ನಾವು ನೈಸರ್ಗಿಕ ಪ್ರಪಂಚದ ಪಾಲನೆಯಲ್ಲಿದ್ದೇವೆ ಎಂದು ಕೋವಿಡ್ -೧೯ ಸಾಬೀತು ಪಡಿಸಿದೆ. ಇಂದು, ತಗ್ಗಿಸಲಾಗದ ಹವಾಮಾನ ಬದಲಾವಣೆಯಿಂದ ಉಂಟಾಗುವ ಬೆದರಿಕೆಯು ಹಿಂದೆಂದಿಗಿಂತಲೂ ಹೆಚ್ಚು ಅಪಾಯಕಾರಿ ಯಾಗಿದೆ. ತುರ್ತು ಬದಲಾವಣೆ ಆಗಬೇಕಾಗಿದೆ ಮಾತ್ರವಲ್ಲ ಬದಲಾವಣೆ ಅನಿವಾರ್ಯವೂ ಕೂಡಾ. ನಾವು, ನೀವು, ನಮ್ಮ ಕುಟುಂಬಗಳು, ಸ್ನೇಹಿತರು, ಸಮಾಜಗಳು, ಸಂಸ್ಕೃತಿ ಗಳು ವ್ಯಕ್ತಿಯಿಂದ ಸಾಮಾಜಿಕ ಮಟ್ಟಕ್ಕೆ ಬದಲಾಗಬೇಕಾಗಿದೆ. ಈ ಬದಲಾವಣೆ ಆಗಬೇಕಾದರೆ, ಎಲ್ಲರೂ ಕೆಲವು ಮಾಹಿತಿ ಗಳನ್ನು ತಿಳಿದುಕೊಳ್ಳಲೇ ಬೇಕು.
ದುರಂತ ಸಂಭವಗಳತ್ತ ಎಚ್ಚರಿಸುತ್ತಿವೆ ಅಂಕಿ- ಅಂಶಗಳು:ನೀತಿ ಆಯೋಗ ಮತ್ತು ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾ ಲಯ ಜಂಟಿಯಾಗಿ ಪ್ರಕಟಿಸಿದ ಪರಿಸರಕ್ಕಾಗಿ ಜೀವನಶೈಲಿ ವರದಿಯಂತೆ, ನಾಸಾ ಪ್ರಕಾರ, ಕಳೆದ ೮೦೦,೦೦೦ ವರ್ಷಗಳಲ್ಲಿ ವಾತಾವರಣದ ಇಂಗಾಲದ ಡೈಆಕ್ಸೈಡ್ ಪ್ರತಿ ಮಿಲಿಯನ್‌ಗೆ ೩೦೦ ಭಾಗಗಳಿಗಿಂತ ಹೆಚ್ಚಾಗಿರಲಿಲ್ಲ. ಆದರೆ, ಇಂದು, ಇದು ೪೨೦  ವರೆಗೆ ಹರಿದಾಡುತ್ತಿದೆ. ಹಿಮಾಲಯ ದಾದ್ಯಂತ ಹಿಮದ ಹಾಳೆಗಳು ಕಳೆದ ೭ ಶತಮಾನಗಳಿಗಿಂತ ಕಳೆದ ೪ ದಶಕಗಳಲ್ಲಿ ೧೦ ಪಟ್ಟು ವೇಗವಾಗಿ ಕುಗ್ಗಿವೆ. ೨೧೦೦ ರ ವೇಳೆಗೆ ಜಾಗತಿಕ ಸಮುದ್ರ ಮಟ್ಟವು ೨ ರಿಂದ ೬ ಅಡಿಗಳವರೆಗೆ ಏರುತ್ತದೆ ಎಂದು ನಾಸಾದ ಉಪಗ್ರಹ ಮಾಹಿತಿಯ ಪ್ರಕಾರ ಊಹಿಸಲಾಗಿದೆ.
ಸ್ವಿಸ್‌ರೆ ಪ್ರಕಾರ, ಯಾವುದೇ ಹವಾಮಾನ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಜಾಗತಿಕ ಆರ್ಥಿಕತೆಯು ೨೦೫೦ ರ ವೇಳೆಗೆ ಒಟ್ಟು ದೇಶಿಯ ಉತ್ಪನ್ನ(ಜಿಡಿಪಿ) ಯ ೧೮% ವರೆಗೆ ಕಳೆದುಕೊಳ್ಳಬಹುದು. ಅಲ್ಲದೆ, ವಾರ್ಷಿಕವಾಗಿ, ಪ್ರಪಂಚದಾದ್ಯಂತ ಸುಮಾರು ೫೦೦ ಶತಕೋಟಿ ಪ್ಲಾಸ್ಟಿಕ್ ಚೀಲಗಳನ್ನುಬಳಸಲಾಗುತ್ತದೆ. ಪ್ರತಿ ನಿಮಿಷಕ್ಕೆ ಒಂದು ಮಿಲಿಯನ್ ಗಿಂತಲೂ ಹೆಚ್ಚು ಚೀಲಗಳನ್ನು ಬಳಸಲಾಗುತ್ತದೆ. ಪ್ಲಾಸ್ಟಿಕ್ ಚೀಲವು ಸರಾಸರಿ ೧೫ ನಿಮಿಷಗಳ ಕೆಲಸದ ಜೀವನವನ್ನು ಹೊಂದಿದೆ. ಇನ್ನು ನೀರಿನ ಬಗ್ಗೆ ಬರುವುದಾದರೆ, ಜಾಗತಿಕವಾಗಿ ಒಬ್ಬ ವ್ಯಕ್ತಿ ದಿನಕ್ಕೆ ಸರಾಸರಿ ೨.೫ ಲೀಟರ್ ನೀರು ಹಲ್ಲುಜ್ಜು ವುದು, ಸ್ನಾನ ಮಾಡುವುದು, ಪಾತ್ರೆಗಳು, ಲಾಂಡ್ರಿ ಇತ್ಯಾದಿಗಳಲ್ಲಿ ವ್ಯರ್ಥ ಮಾಡುತ್ತಾರೆ. ಇಂಧನವನ್ನು ನೋಡುವುದಾದರೆ, ಟ್ರಾಫಿಕ್ ಸಿಗ್ನಲ್‌ ಗಳಲ್ಲಿ ೩೦ ನಿಮಿಷಗಳ ವಾಹನದ ಎಂಜಿನ್ ಗಳನ್ನು ಆ- ಮಾಡದೇ ಇರುವುದರಿಂದ ಸುಮಾರು ೧ ಲೀಟರ್ ಇಂಧನ ವ್ಯರ್ಥವಾಗುತ್ತದೆ.
ಇಷ್ಟೆಲ್ಲ ದುಷ್ಟರಿಣಾಮಗಳನ್ನು ಮಾಡುತ್ತಿರುವುದು ನಾವು-ನೀವೇ ಎಂಬುದನ್ನು ಖಂಡಿತಾ ಮರೆಯುವಂತಿಲ್ಲ. ಹೀಗಿರುವಾಗ ಯಾವ ಕ್ರಮಗಳನ್ನು ಕೈಗೊಂಡರೆ, ಏನನ್ನು ಉಳಿಸಬಹುದು ಎಂಬುದನ್ನು ಕೂಡಾ ತಿಳಿಯುವುದು ಅಷ್ಟೇ ಮುಖ್ಯ.
ನಡವಳಿಕೆ ಬದಲಾವಣೆಯ ಪರಿಸರ ಲಾಭಗಳು:ಸಕ್ರಿಯ ಬಳಕೆಯಲ್ಲಿ ಇಲ್ಲದಿರುವಾಗ ಚಾಲನೆಯಲ್ಲಿರುವ ನಲ್ಲಿಗಳನ್ನು ಆ- ಮಾಡುವುದರಿಂದ ೯ ಟ್ರಿಲಿಯನ್ ಲೀಟರ್‌ಗಳಷ್ಟು ನೀರನ್ನು ಉಳಿಸ ಬಹುದು ಟ್ರಾಫಿಕ್ ಲೈಟ್‌ಗಳು ಮತ್ತು ರೈಲ್ವೇ ಕ್ರಾಸಿಂಗ್ ಗಳಲ್ಲಿ ಕಾರು ಅಥವಾ ಸ್ಕೂಟರ್‌ನ ಎಂಜಿನ್ ಆಫ್ ೨೨.೫ ಶತಕೋಟಿ ಕಿಲೋವ್ಯಾಟ್ ಶಕ್ತಿಯನ್ನು ಉಳಿಸಬಹುದು ಬಳಕೆಯಲ್ಲಿಲ್ಲದಿದ್ದಾಗ ಲೈಟ್ಗಳು, ಎಸಿಗಳು ಮತ್ತು ಹೀಟರ್‌ಗಳನ್ನು ಆಫ್ ಮಾಡುವು ದರಿಂದ ದಿನಕ್ಕೆ ೨೮೨ ಕಿಲೋ ವ್ಯಾಟ್‌ಗಳಷ್ಟು ಶಕ್ತಿಯನ್ನು ಉಳಿಸಬಹುದು ಶಾಪಿಂಗ್ ಮಾಡುವಾಗ ಪ್ಲಾಸ್ಟಿಕ್ ಚೀಲದ ಬದಲಿಗೆ ಬಟ್ಟೆಯ ಚೀಲವನ್ನು ಬಳಸುವುದರಿಂದ ೩೭೫ ಮಿಲಿಯನ್ ಟನ್ ಘನತ್ಯಾಜ್ಯವನ್ನು ಭೂಕುಸಿತಕ್ಕೆ ಪ್ರವೇಶಿಸದಂತೆ ಉಳಿಸಬಹುದು ಹತ್ತಿರದ ಇ-ಮರುಬಳಕೆ ಘಟಕದಲ್ಲಿ ಕಾರ್ಯ ನಿರ್ವಹಿಸದ ಗ್ಯಾಜೆಟ್‌ಗಳನ್ನು ತ್ಯಜಿಸುವುದರಿಂದ ೦.೭೫ ಮಿಲಿಯನ್ ಟನ್‌ಗಳಷ್ಟು ಇ-ತ್ಯಾಜ್ಯವನ್ನು ಮರುಬಳಕೆ ಮಾಡಬಹುದು ಆರ್ಥಿಕ ಚಟುವಟಿಕೆಯ ವೃತ್ತಾಕಾರದ ಹರಿವು ( ) ೨೦೩೦ ರ ವೇಳೆಗೆ ಸುಮಾರು ರೂ. ೧೪ ಲಕ್ಷ ಕೋಟಿ ಹೆಚ್ಚುವರಿ ವೆಚ್ಚ ಉಳಿತಾಯವನ್ನು ಉತ್ಪಾದಿಸಬಹುದು ಪರಿಸರದ ಅವನತಿ ಮತ್ತು ಹವಾಮಾನ ಬದಲಾವಣೆಯನ್ನು ಪರಿಹರಿಸಲು ಜಾಗತಿಕವಾಗಿ ಹಲವಾರು ನೀತಿ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ.
ವ್ಯಕ್ತಿಗಳು, ಸಮುದಾಯಗಳು ಮತ್ತು ಸಂಸ್ಥೆಗಳ ಮಟ್ಟದಲ್ಲಿ ಅಗತ್ಯ ವಿರುವ ಕ್ರಮಗಳು, ಅವರ ಅಗಾಧ ಸಾಮರ್ಥ್ಯದ ಹೊರತಾಗಿಯೂ, ಸೀಮಿತ ಗಮನವನ್ನು ಪಡೆದಿವೆ. ವೈಯಕ್ತಿಕ ಮತ್ತು ಸಮುದಾಯದ ನಡುವಳಿಕೆಯನ್ನು ಬದಲಾಯಿಸುವುದು ಪರಿಸರ ಮತ್ತು ಹವಾಮಾನ ಬಿಕ್ಕಟ್ಟಿನ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು.
ಪರಿಸರಕ್ಕಾಗಿ ಜೀವನಶೈಲಿ:‘ಪರಿಸರಕ್ಕಾಗಿ ಜೀವನಶೈಲಿ (ಲೈಫ್) ಪರಿಕಲ್ಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ ೧, ೨೦೨೧ ರಂದು ಗ್ಲಾಸ್ಗೋದಲ್ಲಿ COP26 ನಲ್ಲಿ ಪರಿಚಯಿಸಿದರು. ವ್ಯಕ್ತಿಗಳು ಮತ್ತು ಸಂಸ್ಥೆಗಳ ಜಾಗತಿಕ ಸಮುದಾಯಕ್ಕೆ ಜೀವನವನ್ನು ಅಂತಾರಾಷ್ಟ್ರೀಯ ಸಾಮೂಹಿಕ ಆಂದೋಲನವಾಗಿ ಚಾಲನೆ ಮಾಡಲು ಕರೆ ನೀಡಿದರು. ಲೈಫ್ ಪ್ರತಿಯೊಬ್ಬರ ವೈಯಕ್ತಿಕ ಮತ್ತು ಸಾಮೂಹಿಕ ಕರ್ತವ್ಯವನ್ನು ತಿಳಿಸುತ್ತದೆ. ಅದು ಭೂಮಿಗೆ ಹೊಂದಿಕೆಯಾಗುವ ಮತ್ತು ಹಾನಿಯಾಗದ ಜೀವನವನ್ನು ನಡೆಸಲು ಹುರಿದುಂಬಿಸುತ್ತದೆ. ಪರಿಸರ ಸ್ನೇಹಿ ಜೀವನಶೈಲಿಯನ್ನು ಅಭ್ಯಾಸಮಾಡುವವರನ್ನು ಲೈಫ್ ಅಡಿಯಲ್ಲಿ ಪ್ರೋ ಪ್ಲಾನೆಟ್ ಪೀಪಲ್ ಎಂದು ಗುರುತಿಸಲಾಗುತ್ತದೆ.
ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದಲ್ಲಿ ವಿವಿಧ ದೇಶಗಳ ಸಂಪ್ರದಾಯಗಳು: ಪ್ರಪಂಚದಾದ್ಯಂತ ನೈಸರ್ಗಿಕ ಪರಿಸರದ ಬಗ್ಗೆ ಇರುವ ಹಲವಾರು ದೈನಂದಿನ ಅಭ್ಯಾಸಗಳು ಅವರ ಕಾಳಜಿಯನ್ನು ತೋರಿಸುತ್ತದೆ. ಕೆಲವು ಉದಾಹರಣೆಗಳನ್ನು ಹೀಗೆ ವಿವರಿಸಬಹುದು.
ಫುರೋಶಿಕಿ:ಇದು ಜಪಾನಿನ ಚೌಕಾಕಾರದ ಸಾಂಪ್ರದಾಯಿಕ ಸುತ್ತುವ ಪರಿಸರ ಸ್ನೇಹಿ ಬಟ್ಟೆಯಾಗಿದ್ದು ಸುಮಾರು ೭೧೦ .. ಯಲ್ಲಿ ಹುಟ್ಟಿ ಕೊಂಡಿದೆ. ಉಡುಗೊರೆಗಳನ್ನು ಸುತ್ತಲು, ಸರಕುಗಳನ್ನು ಸಾಗಿಸಲು ಅಥವಾ ಅಲಂಕಾರವಾಗಿ ಬಳಸಲಾಗುತ್ತದೆ. ಮರುಬಳಕೆ ಮಾಡಬಹುದಾದ ಫುರೋಶಿಕಿ ಸಾಂಪ್ರ ದಾಯಿಕ ಪ್ಲಾಸ್ಟಿಕ್ ಸುತ್ತುವ ಕಾಗದಕ್ಕೆ ಪರ್ಯಾಯವಾದ ಬಳಕೆಯಾಗಿದೆ.
ನೆದರ್‌ಲೆಂಡಿನ ಸುಸ್ಥಿರ ಸಾರಿಗೆ:ನೆದರ್ಲೆಂಡ್ ವಿಶ್ವದಲ್ಲಿಯೇ ಯಾವುದೇ ದೇಶಕ್ಕಿಂತ ಹೆಚ್ಚು ತಲಾವಾರು ಬೈಸಿಕಲ್‌ಗಳನ್ನು ಹೊಂದಿರುವ ದೇಶವಾಗಿದೆ. ಈ ದೇಶವು ಸೈಕ್ಲಿಂಗ್ ಮೂಲಸೌಕರ್ಯಕ್ಕೆಂದೇ ೩೩,೦೦೦ ಕಿಮೀಗಳನ್ನು ಹೊಂದಿದೆ. ಇದು ಸೈಕ್ಲಿಂಗ್ ಅನ್ನು ಸುಲಭಗೊಳಿಸುತ್ತದೆ ಮತ್ತು ಸುಸ್ಥಿರ ಸಾರಿಗೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ.
ಪರಿಸರ ಸ್ನೇಹಿ ಭಾರತೀಯ ಸಂಪ್ರದಾಯ:ಸಾಮಾನ್ಯವಾಗಿ ಭಾರತೀಯರಿಗೆ ಬಟ್ಟೆಗಳನ್ನು ಬಿಸಿಲಿಗೆ ಒಣಗಿಸುವುದು ಮತ್ತು ಪಾತ್ರೆಗಳನ್ನು ಕೈಗಳಿಂದ ತೊಳೆಯುವ ರೂಢಿಗಳು ಡ್ರೈಯರ್ಗಳು ಮತ್ತು ಡಿಶ್ವಾಶರ್ಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ. ಹೆಚ್ಚಿನ ಭಾರತೀಯರ ಮನೆಗಳಲ್ಲಿ ಚೀಲಗಳು, ಬಾಟಲಿಗಳು, ಜಾರ್‌ಗಳು ಮತ್ತು ಇತರ ವಸ್ತುಗಳನ್ನು ಮರುಬಳಕೆ ಮಾಡಲಾಗುತ್ತದೆ. ಹಳೆಯ ಬಟ್ಟೆಗಳನ್ನು ಹೆಚ್ಚಾಗಿ ಮರುರೂಪಿಸಲಾಗುತ್ತದೆ, ಉದಾಹರಣೆಗೆ, ಹಳೆಯ ಸೀರೆಗಳನ್ನು ಸುಂದರವಾದ ಕೌದಿಗಳಾಗಿ ಹೊಲಿಯಲಾಗುತ್ತದೆ. ರಗ್ಗುಗಳನ್ನು ಹಳೆಯ ಕಂಬಳಿಗಳು, ಸೆಣಬಿನ ಚೀಲ ಇತ್ಯಾದಿ ಗಳಿಂದ ತಯಾರಿಸಲಾಗುತ್ತದೆ.
ಭಾರತದ ಹವಾಮಾನ ಸ್ನೇಹಿ ವಿಧಾನಗಳು:ಶತಮಾನಗಳಿಂದ, ಭಾರತೀಯ ನಾಗರಿಕತೆಗಳು ಸುಸ್ಥಿರ ಜೀವನ ಶೈಲಿಯನ್ನು ಅಭ್ಯಾಸ ಮಾಡಿವೆ. ನಮ್ಮ ಸಂಸ್ಕೃತಿಯಲ್ಲಿ ಪರಿಸರ ಸ್ನೇಹಿ ಅಭ್ಯಾಸಗಳನ್ನು ಡಿಕೋಡ್ ಮಾಡಲಾಗಿದೆ. ಭಾರತದ ತಲಾ ಇಂಗಾಲದ ಹೆಜ್ಜೆಗುರುತು ಜಾಗತಿಕ ಸರಾಸರಿಗಿಂತ ೬೦% ಕಡಿಮೆಯಾಗಿದೆ. ಏಕೆಂದರೆ ನಮ್ಮ ಜೀವನಶೈಲಿಯು ಇನ್ನೂ ಸುಸ್ಥಿರ ಸಾಂಪ್ರದಾಯಿಕ ಆಚರಣೆಗಳಲ್ಲಿ ಬೇರೂರಿದೆ. ವಾಸ್ತವವಾಗಿ, ಸುಸ್ಥಿರತೆಯು ಯಾವಾಗಲೂ ನಮ್ಮ ಸಂಪ್ರದಾಯ, ಸಂಸ್ಕೃತಿ ಮತ್ತು ಮೌಲ್ಯಗಳ ಭಾಗವಾಗಿದೆ. ಭಾರತದ ತಲಾ CO2 ಹೊರಸೂಸುವಿಕೆ ೧.೮ ಟನ್ಗಳಾಗಿದ್ದು, ಜಾಗತಿಕ ಸರಾಸರಿ ೪.೫ ಟನ್ಗಳಿಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ.
ಜನರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಮಳೆ ನೀರು ಕೊಯ್ಲು ರಚನೆಗಳನ್ನು ರಚಿಸಲು ರಾಜ್ಯಗಳನ್ನು ಉತ್ತೇಜಿಸಲು ಪ್ರಧಾನ ಮಂತ್ರಿಗಳು ಈಗಾ ಗಲೇ ’   ಅಭಿಯಾನವನ್ನು ಪ್ರಾರಂಭಿಸಿರುತ್ತಾರೆ. ಸ್ವಚ್ಛ ಭಾರತ್ ಮಿಷನ್ ನಂತಹ ಅಭಿಯಾನಗಳು ಹವಾಮಾನ ಬದಲಾವಣೆ ಯನ್ನು ಪರಿಹರಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಗೋಬರ್ಧನ್ ಯೋಜನೆಯು ಜಾನುವಾರು ಮತ್ತು ಜೈವಿಕ ವಿಘಟನೀಯ ತ್ಯಾಜ್ಯ ವನ್ನು( ) ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ಹಳ್ಳಿಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.
ಮನಸ್ಸಿದ್ದರೆ ಮಾರ್ಗ:ನಮ್ಮ ಜೀವನಶೈಲಿಯನ್ನು ಬದಲಾಯಿಸುವುದು ಸುಲಭವಲ್ಲ. ನಮ್ಮ ಅಭ್ಯಾಸಗಳು ನಮ್ಮ ದೈನಂದಿನ ಜೀವನದಲ್ಲಿ ಆಳವಾಗಿ ಬೇರೂರಿದೆ. ಪರಿಸರಕ್ಕೆ ಒಳ್ಳೆಯದನ್ನು ಮಾಡುವ ನಮ್ಮ ಉದ್ದೇಶವನ್ನು ಅಳವಡಿಸಿಕೊಂಡು ಯಾವಾಗಲೂ ಕಾರ್ಯರೂಪಕ್ಕೆ ಅಳವಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಆದಾಗ್ಯೂ, ಇದು ಅಸಾಧ್ಯವಲ್ಲ. ಒಂದು ಸಮಯ ದಲ್ಲಿ ಒಂದು ಕ್ರಮವನ್ನು ತೆಗೆದುಕೊಳ್ಳುವ ಮೂಲಕ ಮತ್ತು ಪ್ರತಿದಿನ ಒಂದು ಬದಲಾವಣೆಯನ್ನು ಮಾಡುವ ಮೂಲಕ, ನಾವು ನಮ್ಮ ಜೀವನಶೈಲಿಯನ್ನು ಬದಲಾಯಿಸಬಹುದು ಮತ್ತು ದೀರ್ಘಕಾಲೀನ ಪರಿಸರ ಸ್ನೇಹಿ ಅಭ್ಯಾಸ ಗಳನ್ನು ಬೆಳೆಸಿಕೊಳ್ಳಬಹುದು.
ಬದಲಾಗಲಿ ನಿಮ್ಮ ಜೀವನ ಶೈಲಿ:ನೀವು ಜಗತ್ತನ್ನು ಬದಲಾಯಿಸಲು ಬಯಸುವಿರಾದರೆ, ಅದು ನಿಮ್ಮೊಂದಿಗೇ ಪ್ರಾರಂಭವಾಗಲಿ. ಹವಾಮಾನದತ್ತ ನಿಮ್ಮ ಜವಾಬ್ದಾರಿಯುತವಾದ ವೈಯಕ್ತಿಕ ಕ್ರಿಯೆಯು ಸಮಾಜದ ಜನರ ಸಾಮೂಹಿಕ ಭವಿಷ್ಯವನ್ನು ರಕ್ಷಿಸುವ ಕೀಲಿಯಾಗಿದೆ ಈ ಗ್ರಹದಲ್ಲಿ ಆರೋಗ್ಯ ಕರ ಗಾಳಿಯನ್ನು ಸವಿಯಲು, ಶುದ್ಧ ನೀರನ್ನು ಕುಡಿಯಲು, ವಿಷಪೂರಿತ ಆಹಾರದಿಂದ ಪೌಷ್ಟಿಕ ಆಹಾರವನ್ನು ತಿನ್ನಲು, ಉತ್ತಮ ಆರೋಗ್ಯವನ್ನು ಪಡೆಯಲು ಮಾತ್ರವಲ್ಲ, ಜಲ-ಚರ ಪ್ರಾಣಿ, ಪಕ್ಷಿ ಜೀವಸಂಕುಲಗಳು ಮತ್ತೆ ಮರುಜೀವ ಪಡೆಯಲು ನಾವು ಸಂಕಲ್ಪ ಮಾಡಲೇಬೇಕು. ಇದು ಅನಿವಾರ್ಯ. ಯಾವುದೇ ಕಾರಣ ನೀಡಿ ಇದನ್ನು ಮುಂದಕ್ಕೆ ಹಾಕಿದ್ದಲ್ಲಿ ನಮ್ಮ ಭವಿಷ್ಯ ಮಾತ್ರವಲ್ಲ, ಮುಂದೆ ಬರುವ ಇಡೀ ಮಾನವಕುಲದ ಭವಿಷ್ಯ, ಜೀವ ಸಂಕುಲದ ಭವಿಷ್ಯವನ್ನು ನಾವು ಕೊಂದಂತೆ!
ಎಲ್ಲವೂ ಒಂದೇದಿನ ಚಾಲ್ತಿಯಲ್ಲಿ ತರಲು ಸಾದ್ಯವಿಲ್ಲದಿದ್ದಲ್ಲಿ ದಿನಕ್ಕೆ ಒಂದು ಸರಳ ಪರಿಸರ ಸ್ನೇಹಿ ಕ್ರಮವನ್ನು ನಿಮ್ಮದಾಗಿಸಿ. ನಡವಳಿಕೆ ಬದಲಾ ವಣೆಗೆ ೨೧ ದಿನಗಳು ಬೇಕೆನ್ನುವುದು ವಾಡಿಕೆ. ಪರಿಸರ ಸ್ನೇಹಿ ಜೀವನಶೈಲಿಯನ್ನು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡಲು  21-ದಿನದ ಚಾಲೆಂಜ್ ಅನ್ನು ಕೇಂದ್ರ ಸರಕಾರ ನೀಡಿದೆ.
ಪ್ಲಾಸ್ಟಿಕ್ ಅಲ್ಲದ ಬಾಟಲಿ ಬಳಕೆ ಶಾಪಿಂಗ್‌ಗಾಗಿ ಬಟ್ಟೆಯ ಚೀಲದ ಬಳಕೆಲಿ-ಬದಲು ಮೆಟ್ಟಲುಗಳ ಬಳಕೆ ಹಳೆ ಬಟ್ಟೆ ಮತ್ತು ಪುಸ್ತಕಗಳ ದಾನಒಣ ಮತ್ತು ಹಸಿ ಕಸ ವಿಂಗಡನೆ ಬಳಕೆ ಮುಗಿದಾಗ ವಿದ್ಯುತ್ ಸ್ವಿಚ್ಛಗಳನ್ನು ಆಫ್ ಮಾಡುವುದು ಸಾರ್ವಜನಿಕ ಸಾರಿಗೆ ಬಳಕೆ ಟ್ರಾಫಿಕ್ ಸಿಗ್ನಲ್ / ರೈಲ್ವೆ ಕ್ರಾಸಿಂಗ್‌ಗಳಲ್ಲಿ ಕಾರು / ಸ್ಕೂಟರ್ ಎಂಜಿನ್‌ಗಳನ್ನು ಸ್ವಿಚ್ ಆಫ್ ಮಾಡಿ ಗಿಡಗಳನ್ನು ನೆಟ್ಟು ಬೆಳೆಸಿ ಉಪಯೋಗಿಸದ ತರಕಾರಿಗಳನ್ನು ಹಸುಗಳಿಗೆನೀಡಿ ಭಾರೀ ಮಡಿಕೆಗಳು ಮತ್ತು ಹರಿವಾಣಗಳನ್ನು ತೊಳೆಯುವ ಮೊದಲು ಅವುಗಳನ್ನು ಮೊದಲೇ ನೆನೆಸಿ ಸ್ಟೀಲ್ / ಮರುಬಳಕೆ ಮಾಡಬಹುದಾದಪ್ಲಾಸ್ಟಿಕ್ ಊಟದ ಪೆಟ್ಟಿಗೆಗಳು ಮತ್ತು ನೀರಿನ ಬಾಟಲಿಗಳನ್ನು ಬಳಸಿ ಹಾಲು, ಮಜ್ಜಿಗೆ ಪ್ಯಾಕ್ ನ ತುದಿಯ ತುಂಡನ್ನು ಕತ್ತರಿಸದೆ ಉಪಯೋಗಿಸಿಫ್ರಿಜ್ ಅಥವಾ ಫ್ರೀಜರ್ ಅನ್ನು ನಿಯಮಿತವಾಗಿಡಿ-ಮಾಡಿ ಮನೆ/ಶಾಲೆ/ಕಚೇರಿಗಳಲ್ಲಿ ಕಿಚನ್ ಗಾರ್ಡನ್/ ಟೆರೇಸ್ ಗಾರ್ಡನ್‌ಗಳನ್ನು ರಚಿಸಿ ಪಾತ್ರೆ ಗಳನ್ನು ಸ್ವಚ್ಛಗೊಳಿಸಲು, ನೀರುಹಾಕಲು / ನಿಂದ ಹೊರಹಾಕಿದ ನೀರನ್ನು ಬಳಸಿ ಪ್ರಿಂಟರ್ ಅನ್ನು ಡಬಲ್-ಸೈಡ್ ಪ್ರಿಂಟಿಂಗ್ಗೆ ಹೊಂದಿಸಿ ಸ್ಥಳೀಯ ಗಿಡಮೂಲಿಕೆಗಳು ಮತ್ತು ಔಷಧಿಯ ಸಸ್ಯಗಳನ್ನು ಬೆಳೆಸಿ ನಿಮ್ಮ ವಸತಿ ಪ್ರದೇಶ/ಶಾಲೆ/ಕಚೇರಿಯಲ್ಲಿ ಹಸಿರು ಕ್ಲಬ್‌ಗಳನ್ನು ಪ್ರಾರಂಭಿಸಿ ನಗರಗಳು ಮತ್ತು ಜಲಮೂಲಗಳ ಸ್ವಚ್ಛತಾ ಅಭಿಯಾನಗಳಲ್ಲಿ ಭಾಗವಹಿಸಿ ಮತ್ತು ಸಜ್ಜುಗೊಳಿಸಿ ನಾವು ಒಬ್ಬರಿಗೊಬ್ಬರು ಅವಲಂಬಿತ ರಾಗಿದ್ದೇವೆ ಎಂದು ಕೋವಿಡ್ ನಮಗೆ ಕಲಿಸಿಕೊಟ್ಟಿದೆ.
ಪರಿಸರಕ್ಕಾಗಿ ಜೀವನಶೈಲಿ-ಲೈಫ್ ಆಂದೋಲನ ಒಂದು ಜಗತ್ತಿನ ಜನಾಂದೋಲನವಾಗಿ ಪರಿವರ್ತಿಸಬೇಕು. ನಮ್ಮ ಜೀವ ನವು ನಮ್ಮ ಆಯ್ಕೆಗಳಿಂದ ನಿಯಂತ್ರಿಸಲ್ಪಡುತ್ತದೆ. ಹಾಗಾಗಿ ಪರಿಸರ ಜೀವನಶೈಲಿಯನ್ನು ನಮ್ಮದಾಗಿಸಲು ಈ ಕೆಲವು ನಡವಳಿಕೆ ಬದಲಾವಣೆಗಳನ್ನು ನಮ್ಮ ಜೀವನದಲ್ಲಿ ಮಾಡಲು ಪಣತೊಡೋಣ. ನೀವು ತೆಗೆದುಕೊಳ್ಳುವ ಸಣ್ಣದೊಂದು ಹೆಜ್ಜೆ ಆರೋಗ್ಯಕರ ಪರಿಸರಕ್ಕೆ ಕಾರಣವಾಗುತ್ತದೆ ಎಂಬುದನ್ನು ಮರೆಯದಿರಿ. ನಿಮ್ಮ ಹೆಜ್ಜೆ ನಿಮ್ಮ ಹೆಮ್ಮೆಯಾಗಲಿ.
(ಲೇಖಕರು ಕರ್ನಾಟಕ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ)