ಸೋಲಿನ ನಂತರ ಎಲ್ಲವೂ ಅಯೋಮಯ, ಕಲಸುಮೇಲೋಗರ
ವಿಶ್ಲೇಷಣೆ
ರಮಾನಂದ ಶರ್ಮಾ
ರಾಜಕಾರಣದಲ್ಲಿ ಗೆಲುವು ಕಾಯಂ ಆಗಿ ಖಾತೆ ಹಾಕಿ ಕೂತಿರುವುದಿಲ್ಲ. ಹಾಗೆಯೇ ಸೋಲು ಕೂಡ ತಿರುಪತಿ ಬೆಟ್ಟದಂತೆ ನಿಲ್ಲುವುದಿಲ್ಲ. ಇವು ಸಣ್ಣ ಮಕ್ಕಳು ಆಡುವ ಅದಲು-ಬದಲು ಆಟದಂತೆ ಬದಲಾಗುತ್ತಿರುತ್ತದೆ. ಈ ಬದಲಾವಣೆ ಒಮ್ಮೊಮ್ಮೆ ತಡವಾದರೆ, ಒಮ್ಮಮ್ಮೆ ತೀವ್ರಗತಿಯಲ್ಲಿ ಅಗುತ್ತದೆ. ಇದು ಬದುಕಿನ ನಿಯಮವಾಗಿದ್ದು ಕಾಲಘಟ್ಟದಲ್ಲಿ ಪ್ರತಿಯೊಬ್ಬರೂ ಇದನ್ನು ಅನುಭವಿಸಲೇಬೇಕು.
ಸೋತವರು ಯಗಾಂತ್ಯವಾದಂತೆ ತಲೆಮೇಲೆ ಕೈಇಟ್ಟು ಕೂರಬಾರದು ಮತ್ತು ಗೆದ್ದವರು ಇನ್ನು ಜಗತ್ತು ತಮ್ಮದೇ ಎಂದು ಬೀಗುತ್ತ ಕುಣಿಯಬಾರದು. ಇಂದು ಕರ್ನಾಟಕದಲ್ಲಿ ವಿಧಾನಸಭೆ ಚುನಾವಣಾ ಫಲಿತಾಂಶ ಹೊರ ಬಿದ್ದಮೇಲೆ ಭಾರತೀಯ ಜನತಾ ಪಕ್ಷ ಗರಬಡಿದಂತಾಗಿದ್ದು, ವೆಂಟಿಲೇಟರ್ ಸಪೋರ್ಟ್‌ನಲ್ಲಿ ಇದ್ದಂತೆ ಕಾಣುತ್ತಿದೆ. ಕಪ್ ನಮ್ಮದೇ ಎಂದು ಅತೀವ ವಿಶ್ವಾಸದಲ್ಲಿದ್ದಾಗ, ಅದರಲ್ಲೂ ವಿರಾಟ್ ಕೊಹ್ಲಿ, ಧೋನಿ (ಮೋದಿ, ಅಮಿತ ಶಾ) ಇದ್ದಾಗಲೂ ಕಪ್ ಬದಲು ಚಿಪ್ ಸಿಕ್ಕರೆ ಇಂಥ ಆಘಾತ ಸಹಜ. ಭಾಜಪ ಒಂದು ರೀತಿಯಲ್ಲಿ ದಾರಿ ಕಾಣದಾಗಿದೆ ರಾಘವೇಂದ್ರನೇ ಎನ್ನುವಂತೆ ಚಡಪಡಿಸುತ್ತಿದೆ.
ಫಲಿತಾಂಶ ಹೊರಬಿದ್ದು ತಿಂಗಳು ಸಮೀಪಿಸುತ್ತಿದೆ. ಇಷ್ಟರೊಳಗೆ ಮೈಕೊಡವಿ ಏಳುವ ಪ್ರಯತ್ನವಾಗಬೇಕಿತ್ತು. ಬೆಳಗಾದರೆ ಇನ್ನೊಂದು ಮಹಾಯುದ್ಧ (ಲೋಕಸಭಾ ಚುನಾವಣೆ) ಇದ್ದು ಅ ನಿಟ್ಟಿನಲ್ಲಿ ಪಕ್ಷ ಸಂಘಟನೆ, ಗೆಲುವಿನ ತಂತ್ರಗಾರಿಕೆ ರೂಪಿಸಿಕೊಳ್ಳುವ ಪ್ರಯತ್ನವಾಗಬೇಕಿತ್ತು. ಏಕೋ ಎನೋಎಲ್ಲವೂ ನಿಸ್ತೇಜವಾಗಿ ಕಾಣುತ್ತಿದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಟೀಕೆ ಮತ್ತು ಲೇವಡಿಗಳನ್ನು ಬಿಟ್ಟರೆ ಮುಂದಿನ ದಿನಗಳಲ್ಲಿ ಪಕ್ಷವನ್ನು ಹಳಿ ಏರಿಸುವ ಬಗೆಗೆ ಯಾವುದೇ ಚಟುವಟಿಕೆಗಳೂ ಗೋಚರಿಸುತ್ತಿಲ್ಲ. ವಿಪರ್ಯಾಸವೆಂದರೆ ಇಂಥ ಹೀನಾಯ ಸೋಲಾದರೂ ಪಕ್ಷದ ವರಿಷ್ಠರು ರಾಜ್ಯದ ನಾಯಕರನ್ನು ದೆಹಲಿಗೆ ಕರೆದು ವಿಚಾರಿಸಲಿಲ್ಲ. ಯಾರನ್ನೂ ತರಾಟೆಗೆ ತೆಗೆದುಕೊಂಡ ಮಾಹಿತಿ ಇಲ್ಲ.
ಆಂತರಿಕವಾಗಿ ಮಾದ್ಯಮದ ಕಣ್ಣು ತಪ್ಪಿಸಿ ವಿಚಾರಿಸಿದ್ದರೆ ಅದು ಬೇರೆ ಮಾತು. ಈ ಸೋಲಿನ ಬಗೆಗೆ ಗಂಭೀರ ಸಮಾಲೋಚನೆ ಆದಂತೆಯೂ ಕಾಣುವುದಿಲ್ಲ. ಸಾಮಾನ್ಯವಾಗಿ ಇಂಥ ಹೀನಾಯ ಸೋಲು ಕಂಡಾಗ ಪಕ್ಷದ ವರಿಷ್ಠರು ರಾಜ್ಯ ಘಟಕವನ್ನು ವಿಸರ್ಜಿಸಿ, ಚುನಾವಣೆಗಳನ್ನು ಗೆಲ್ಲಬಹುದಾದ ಕ್ರಿಯಾಶೀಲ ತಂಡ ಕಟ್ಟುತ್ತಾರೆ. ಅದರೆ, ಎಲ್ಲವೂ ಊಹಾಪೋಹಗಳಲ್ಲಿ ಇದೆಯೇ ವಿನಾ ಯಾವುದರಲ್ಲೂ ಖಚಿತತೆ ಕಾಣುತ್ತಿಲ್ಲ. ಇಂಥ ಸನ್ನಿವೇಶದಲ್ಲಿ ರಾಜ್ಯ ಘಟಕವು ಸಾಮಾನ್ಯವಾಗಿ ರಾಜೀನಾಮೆಗೆ ಮುಂದಾಗುತ್ತದೆ ಮತ್ತು ತಮ್ಮ ವರಿಷ್ಠರಿಗೆ ರಾಜ್ಯ ಘಟಕವನ್ನು ಪುನಾರಚಿಸಲು ಫ್ರೀ ಹ್ಯಾಂಡನ್ನು ನೀಡುತ್ತದೆ. ರಾಜ್ಯ ಘಟಕದ ಅಧ್ಯಕ್ಷರ ರಾಜೀನಾಮೆಯ ವದಂತಿಗಳು ಕೆಲವು ಮಾಧ್ಯಮದಲ್ಲಿ ಕೇಳಿದೆಯಷ್ಟೆ: ಅದರ ಸತ್ಯಾಸತ್ಯತೆ ತಿಳಿಯದು.
ವಿಪರ್ಯಾಸವೆಂದರೆ, ರಾಜ್ಯ ಘಟಕದ ಆತ್ಮಾವಲೋಕನ ಸಭೆಯೂ ಶ್ರದ್ಧಾಂಜಲಿ ಸಭೆಯಂತಿದ್ದು ಯಾವುದೇ ಆರೋಪ- ಪ್ರತ್ಯಾರೋಪಗಳ ಕಿಡಿಹಾರಿದ ಮಾಹಿತಿ ಇಲ್ಲ. ಯಾರನ್ನೂ ಹೊಣೆ ಗಾರರನ್ನಾಗಿ ಧೂಷಿಸಿದ ವರದಿಗಳಿಲ್ಲ. ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿ ಸೋತ ಮಂತ್ರಿ ವಿ.ಸೋಮಣ್ಣ, ಯಾರನ್ನೂ ಹೆಸರಿಸದೇ ಯಾರನ್ನೋ ಗುರಿ ಇಟ್ಟು ಅಸಮಾಧಾನವನ್ನು ವ್ಯಕ್ತಮಾಡಿದ್ದನ್ನು ಬಿಟ್ಟರೆ, ಯಾರೂ ಇನ್ನೂವರೆಗೂ ಬಹಿರಂಗವಾಗಿಯಾರನ್ನೂ ಬೊಟ್ಟು ಮಾಡಿ ತೋರಿಸಲಿಲ್ಲ.
ಪಕ್ಷವು ದಯನೀಯವಾಗಿ ಸೋಲನ್ನು ಅನುಭವಿಸಿದಾಗ ಸೋಲಿಗೆ ಗೂಬೆ ಕೂರಿಸುವ ಯತ್ನ ನಡೆಯುತ್ತದೆ. ಬೊಮ್ಮಾಯಿಯವರೇನೋ ತಾನೆ ಹೊಣೆ ಎಂದು ಹೇಳಿದರೂ ಅದರಲ್ಲಿ ಅನಿವಾರ್ಯವಾದ -ರ್ಮಾಲಿಟಿ ಇತ್ತೇ ವಿನಾ ಗಂಭೀರತೆ ಮತ್ತು ಬದ್ಧತೆ ಕಾಣಲಿಲ್ಲ ಎಂದು ವಿಶ್ಲೇಷಕರು ಶರಾ ಬರೆದರು.ಲೋಕಸಭಾ ಚುನಾವಣೆಗೆ ಹಾಲಿ ಸಂಸದರಲ್ಲಿ ಅರ್ಧ ದಷ್ಟು ಸಂಸದರಿಗೆ ಟಿಕೆಟ್ ನಿರಾಕರಣೆ ಸುದ್ದಿ ಹರಡುತ್ತಿದ್ದು, ಸ್ವಲ್ಪ ನಿದ್ರಾವಸ್ಥೆಯಲ್ಲಿದ್ದ ಪಕ್ಷವು ಮತ್ತು ಕೆಲವು ನಾಯಕರು ದಿಢೀರ್ ಎಂದು ಎದ್ದು ಕುಳಿತಿzರೆ. ಇದು ನಿಜವಾಗಿ ಪಕ್ಷದ ಅಧಿಕೃತ ಮಾಹಿತಿಯೋ, ಕಿಡಿಗೇಡಿಗಳು, ಆಸಕ್ತರು ಮತ್ತುಹಿತಾಸಕ್ತರು ಆಡಿದ ಆಟವೋ ಎನ್ನುವ ಗೊಂದಲದಲ್ಲಿ ಕೆಲ ವರು ತೊಳಲಾಡುತ್ತಿದ್ದಾರೆ.
ಕೆಲವರನ್ನು ಚುನಾವಣೆಯಿಂದ ಹೊರಗಿಡಲು ದೆಹಲಿ ದೊರೆಗಳು ಆಡಿದ ಆಟ ಎಂದು ಹೇಳಲಾಗುತ್ತದೆ. ಒಂದಿಬ್ಬರು ಹಿರಿಯ ಮತ್ತು ಪ್ರಭಾವಿ ನಾಯಕರತ್ತ ಬೊಟ್ಟು ತೋರಿಸಲಾಗುತ್ತಿದೆ. ಅನಂತ ಕುಮಾರ ಹೆಗಡೆ, ಶಿವಕುಮಾರ ಉದಾಸಿ, ಶ್ರೀನಿವಾಸ ಪ್ರಸಾದ್ ಸ್ಪರ್ಧಿಸಲು ಆಸಕ್ತಿ ತೋರುತ್ತಿಲ್ಲವಂತೆ. ಇತ್ತೀಚೆಗೆ ಚುನಾವಣಾ ಪ್ರಚಾರಕ್ಕೆ ಮೋದಿಯವರು ಉತ್ತರ ಕನ್ನಡ ಜಿಗೆ ಬಂದಾಗ, ಅನಂತ ಕುಮಾರ್ ಹೆಗಡೆ ಸಭೆಗೂ ಬರಲಿಲ್ಲವಂತೆ. ಶಿವಕುಮಾರಉದಾಸಿ ತಮ್ಮ ವೈಯಕ್ತಿಕ ಬಿಜಿನೆಸ್‌ನಲ್ಲಿ ಹೆಚ್ಚಿನ ಸಮಯ ಕಳೆಯಲು ಚುನಾವಣಾ ರಾಜಕೀಯಕ್ಕೆ ಬೈ ಎನ್ನುತ್ತಿದ್ದಾರಂತೆ.
ಶ್ರೀನಿವಾಸ ಪ್ರಸಾದ್ ವರ್ಷಗಳ ಹಿಂದೆಯೇ ತಮ್ಮ ನಿವೃತ್ತಿಯ ಬಗೆಗೆ ಮುನ್ಸೂಚನೆ ನೀಡಿದ್ದರಂತೆ… ಇನ್ನು ಅನುಕಂಪದ ಅಲೆಯ ಹೊರತಾಗಿಯೂ ಕಳೆದ ಬಾರಿ ಕೂದಲೆಳೆಯಷ್ಟು ಅಂತರದಿಂದ ಗೆದ್ದ ಬೆಳಗಾವಿಯ ಮಂಗಳಾ ಅಂಗಡಿಯವರಿಗೆ ಗೆಲುವಿನ ಸಾಧ್ಯತೆ ಇಲ್ಲ ಎಂದು ಟಿಕೆಟ್ ನಿರಾಕರಿಸಲಾಗುತ್ತಿದೆ ಎನ್ನಲಾಗಿದೆ. ರಾಜ್ಯಾದ್ಯಕ್ಷ ನಳಿನ್ ಕಟೀಲರಿಗೆ ಸ್ಥಳೀಯವಾಗಿ ಸಂಸದರ ವಿರೋಧಿ ಅಲೆ ಜೋರಾಗಿರುವುದನ್ನುಲ್ಲರೂ ಬಲ್ಲರು. ರಮೇಶ್ ಜಿಗಜಿಣಗಿ, ದೇವೆಂದ್ರಪ್ಪ ಮತ್ತು ಗದ್ದಿಗೌಡರ್ ಅವರನ್ನು ಪಕ್ಷದಲ್ಲಿ ಸರಿಯಾಗಿ ತೊಡಗಿ ಸಿಕೊಳ್ಳದಿರುವುದಕ್ಕೆ ಕೈಬಿಡಲಾಗುತ್ತಿದ್ದರೆ, ಕರಡಿ ಸಂಗಣ್ಣನವರಿಗೆ ಅವರ ಸೊಸೆಗೆ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡಿರುವುದರಿಂದ ಕೊಕ್ ನೀಡಲಾಗುತ್ತಿದೆ.
ಸಿದ್ದೇಶ್ವರಗೆ ವಯಸ್ಸು ಅಡ್ಡ ಬಂದರೆ, ಸದಾನಂದ ಗೌಡರು ಈವರೆಗೆ ಎಲ್ಲ ಹುದ್ದೆಗಳನ್ನು ಅಲಂಕರಿಸಿದ್ದು, ಅಂತೆಯೇ ಅವರಿಗೆ ಟಿಕೆಟ್ನಿರಾಕರಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಜಿ.ಎಸ್. ಬಸವರಾಜ್ ಮತ್ತು ಬಚ್ಚೇಗೌಡರಿಗೆ ವಯಸ್ಸು ಮತ್ತು ಆರೋಗ್ಯ ಎರಡೂ ಕೈಕೊಡುತ್ತಿದೆ.ಈ ಮಾಹಿತಿ ಅಥವಾ ವದಂತಿ ಬಗೆಗೆ ಸದಾನಂದಗೌಡರು ಮತ್ತು ಸಂಗಣ್ಣ ಕರಡಿ ತೀವ್ರ ಅಕ್ರೋಶ ವ್ಯಕ್ತಮಾಡಿದ್ದು, ಈ ಸುದ್ದಿ ಹರಿಬಿಟ್ಟವರ ಹಿಂದೆ ಯಾರಿzರೆ ಎಂದು ಕಂಡು ಹಿಡಿಯಲು ವರಿಷ್ಠರು ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೆಲವು ಸಂಸದರ ತೇಜೋವಧೆಯನ್ನು ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ ಎಂದು ವ್ಯಾಕುಲತೆ ವ್ಯಕ್ತಮಾಡಿದ್ದಾರೆ. ದಿನ ಬೆಳಗಾಗುವುದರೊಳಗೆ ತಾವು ಅಸಮರ್ಥರು, ಮುದುಕರು, ಅಯೋಗ್ಯರು ಮತ್ತು ರೋಗಿಗಳು ಆಗಿದ್ದು ಹೇಗೆ ಎಂದು ಆಶ್ಚರ್ಯವ್ಯಕ್ತ ಮಾಡುತ್ತಿದ್ದಾರೆ. ತಮ್ಮ ಮನೋಸ್ಥೈರ್ಯವನ್ನು ಕುಗ್ಗಿಸಿ ನಿರ್ವೀರ್ಯರನ್ನಾಗಿ ಮಾಡಲಾಗುತ್ತಿದೆ ಎಂದು ಯಾರನ್ನೂ ಹೆಸರಿಸದೇ ತರಾಟೆಗೆ ತೆಗೆದುಕೊಂಡಿದ್ದಾರೆ. ಇವರ ಆರೋಪ ಮುಂದಿನ ದಿನಗಳಲ್ಲಿ ಗಂಭೀರ ಸ್ವರೂಪ ಪಡೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ನಡುವೆ ಆರ್‌ಎಸ್‌ಎಸ್ ಮತ್ತು ಭಾಜಪದ ಮುಖವಾಣಿ ಇಂಗ್ಲಿಷ್ ಸಾಪ್ತಾಹಿಕ ‘ಅರ್ಗನೈಸರ್’ ೨೦೨೪ರ ಚುನಾವಣಾ ಫಲಿತಾಂಶದ ಬಗೆಗೆ ಭಾಜಪಕ್ಕೆ ಗಂಭಿರ ಎಚ್ಚರಿಕೆಯನ್ನು ನೀಡಿದೆ.
ಲೋಕಸಭಾ ಚುನಾವಣೆ ಗೆಲ್ಲಲು ಕೇವಲ ಮೋದಿ ಮೋಡಿ ಮತ್ತು ಹಿಂದುತ್ವ ಸಾಲದು ಎಂದು ದಪ್ಪಕ್ಷರ ಗಳಲ್ಲಿ ಬರೆದಿದೆ. ಲೋಕಲ್ ವೋಕಲ್ ಆಗಬೇಕು. ಸ್ಥಳೀಯ ಧುರೀಣರನ್ನು ಉಪೇಕ್ಷಿಸಿ, ಹೊರಗಿನ ಧುರೀಣರನ್ನು ಹೇರಿ ಚುನಾವಣೆಯನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದೆ. ವರ್ಷಗಳ ಹಿಂದೆ ಕೇಂದ್ರ ಮಂತ್ರಿ ನಿತಿನ್ ಗಡ್ಕರಿಯವರು, ಇದೇ ಧಾಟಿಯಲ್ಲಿ ಮಾತನಾಡಿದ್ದರು ಮತ್ತು ಅದಕ್ಕಾಗಿ ಬೆಲೆ ತೆತ್ತಿದ್ದು ಬೇರೆ ಮಾತು. ನಿನ್ನೆ ಮೊನ್ನೆಯವರೆಗೆ ಕ್ಲೌಡ್ ನೈನ್ ದಲ್ಲಿ ಇದ್ದ ಪಕ್ಷವು ಇಂದು ದಾರ ಹರಿದ ಗಾಳಿಪಟದಂತೆ ದಿಕ್ಕುದೆಸೆ ಇಲ್ಲದಂತೆ ಕಾಣುತ್ತಿದೆ. ಪಕ್ಷದಲ್ಲಿ ಅಶಿಸ್ತು ದೊಡ್ಡಪ್ರಮಾಣದಲ್ಲಿ ಗೋಚರಿಸುತ್ತಿದೆ. ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾದ ಹುಬ್ಬಳ್ಳಿ ಧಾರವಾಡದ ಪ್ರಹ್ಲಾದ ಜೋಷಿಯ ವರಿಗೆ ಟಿಕೆಟ್ ಸಿಗಬಹುದೇ ಎನ್ನುವ ಸಂಶಯ ಕಾಣುತ್ತಿದೆ.
ಅವರಿಗೆ ಟಿಕೆಟ್ ನೀಡಬಾರದು ಎಂದು ಕೆಲವು ಪ್ರಭಾವಿ ಸಂಘ ಟನೆಗಳು ಟ್ವೀಟ್ ಮಾಡಿದ್ದು, ಮುಂದಿನ ದಿನಗಳಲ್ಲಿ ಅದರ ಕಾವು ಹೆಚ್ಚುವ ಸಾಧ್ಯತೆ ಕಾಣುತ್ತಿದೆ. ಜಗದೀಶ್ ಶೆಟ್ಟರ್‌ಗೆ ಭಾಜಪದ ಟಿಕೆಟ್ ನಿರಾಕರಣೆಯಲ್ಲಿ ಅವರ ಪಾತ್ರದ ಬಗೆಗೆ ಪ್ರಶ್ನೆಗಳು ಇದ್ದು, ಅದು ಅವರಿಗೆ ತೊಡಕಾಗ ಬಹುದು.ಅಕಸ್ಮಾತ್ ಟಿಕೆಟ್ ದೊರಕಿದರೂ ಆಯ್ಕೆಯಾಗಲು ಬೆವರು ಸುರಿಸಬೇಕಾಗಬಹುದು ಮತ್ತ ಏಳು ಕೆರೆ ನೀರು ಕುಡಿಸಬಹುದು ಎನ್ನಲಾಗುತ್ತದೆ.
ರಾಜಕೀಯವೇ ಹಾಗೆ; ಒಮ್ಮೆ ಜನಪ್ರಿನಿಧಿಯಾದವರು ತಮ್ಮ ಕೊನೆಯ ಉಸಿರು ಇರುವವರೆಗೂ ಗೂಟದ ಕಾರಿನಲ್ಲೇ ಇರಬಯಸುತ್ತಾರೆ. ಸಕಲ ಸರಕಾರಿ ಗೌರವದೊಂದಿಗೆ ತಾವು ಮಣ್ಣು ಸೇರಬೇಕು ಎಂದು ಇಚ್ಛಿಸುತ್ತಾರೆ. ಚೋ ರಾಮಸ್ವಾಮಿಯವರ ಈ ಜೋಕ್ ಎಂದಿಗೂ ಪ್ರಸ್ತುತ. ವಿಧಾನಸಭೆಚುನಾವಣೆಯಲ್ಲಿ ಸೊತವರು ಲೋಕಸಭೆಗೆ, ಲೋಕಸಭೆ ಯಲ್ಲಿ ಸೋತವರು ರಾಜ್ಯಸಭೆಗೆ, ಅಲ್ಲೂ ಸೋತವರು ವಿಧಾನ ಪರಿಷತ್ತಿಗೆ ಸ್ಪರ್ಧಿಸುವುದು ಈ ದೇಶದಲ್ಲಿ ತೀರಾ ಸಾಮಾನ್ಯ. ವಿಧಾನಸಭೆ ಚುನಾವಣೆಯಲ್ಲಿ ಸೋತ ಹಲವಾರು ಘಟಾನುಘಟಿಗಳು ಮುಂದಿನ ವಿಧಾನಸಭೆ ಚುನಾವಣೆಗಾಗಿ ೫ ವರ್ಷಕಾಯವ ವ್ಯವಧಾನ, ತಾಳ್ಮೆ ಇಲ್ಲದೇ ಮುಂದಿನ ವರ್ಷದ ಲೋಕಸಭೆ ಚುನಾವಣೆಗಾಗಿ ಟಾವೆಲ್ ಹಾಕತೊಡಗಿದ್ದಾರೆ. ಮುರುಗೇಶ ನಿರಾಣಿ, ಸೋಮಣ್ಣ, ಬಿ.ಸಿ. ಪಾಟೀಲ, ಅನಂದ ಸಿಂಗ್ , ಕಾಗೇರಿ, ಶ್ರೀ ರಾಮುಲು, ಕಾರಜೋಳ, ರೇಣುಕಾಚಾರ್ಯ ಮತ್ತು ಡಾ.ಸುಧಾಕರ್ ಹೆಸರಗಳು ಉಹಾಪೋಹದ ಪಟ್ಟಿಯಲ್ಲಿ ಕಾಣುತ್ತಿದೆ.
ಈ ಹತಾಶ ಸ್ಥಿತಿ ಕೇವಲ ಭಾಜಪಕ್ಕೆ ಸೀಮಿತವಾಗಿಲ್ಲ. ಜಾತ್ಯತೀತ ಜನತಾದಳವೂ ಇದನ್ನೇ ಅನುಭವಿಸುತ್ತಿದೆ. ಅಧಿಕಾರಕ್ಕೆ ಬರದಿದ್ದರೆ ಪಕ್ಷವನ್ನು ವಿಸರ್ಜಿಸುವುದಾಗಿ ಹೇಳಿದ್ದ ಕುಮಾರಸ್ವಾಮಿಯವರು ಈಗ ಉಲ್ಟಾ ಹೇಳಿದ್ದು, ರಾಜ್ಯಾದ್ಯಂತ ತಿರುಗಾಡಿ ಜಿ ಮತ್ತು ತಾಲೂಕು ಪಂಚಾಯತ್ಚುನಾವಣೆಗಾಗಿ ಪಕ್ಷವನ್ನು ಸಂಘಟಿಸುವುದಾಗಿ ಹೇಳುತ್ತಿದ್ದಾರೆ. ದೇವೇಗೌಡರು ಮುಂದಿನ ಲೋಕಸಭಾ ಚುನಾ ವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿರುವುದು ಒಂದು ವಿಶೇಷವಾದರೆ, ದಳ ಮತ್ತು ಭಾಜಪ ಗಳು ೬-೮: ೨೦-೨೨ ಅನುಪಾತದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಸ್ಪರ್ಧಿಸುವ ವದಂತಿಗಳೂ ರಾಜಕೀಯ ವಲಯದಲ್ಲಿ ಹರಿಯುತ್ತಿದೆ. ರಾಜಕೀಯ ವಿಶ್ಲೇಷಕರು, ಈ ಬೆಳವಣಿಗೆಯನ್ನು ವೈರಿಯ ವೈರಿ, ಮಿತ್ರ ಎನ್ನುವ ಹಳೇ ನಾಣ್ಣುಡಿಯ ಹಿನ್ನಲೆಯಲ್ಲಿ ನೋಡುತ್ತಿದ್ದಾರೆ.
ಪ್ರಭಾವಿ ಮತ್ತು ಜನಪ್ರಿಯ ಎರಡು ರಾಷ್ಟ್ರೀಯ ಇಂಗ್ಲಿಷ್ ಚಾನೆಲ್‌ಗಳು ಈ ಹಿಂದೆ ಭಾಜಪಕ್ಕೆ ಮತ ಹಾಕಿದವರಲ್ಲಿ ೩೭% ಜನ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನತ್ತ ಒಲವು ತೋರಿಸಿzರೆಂಬ ಸಮೀಕ್ಷೆ ಹೊರ ಹಾಕಿವೆ. ಹಾಗೆಯೇ ಕಾಂಗ್ರೆಸ್ ೧೮ ಮತ್ತು ಭಾಜಪ ೮ ಸೀಟುಗನ್ನುಪಡೆಯಬಹುದು ಎಂದು ಲೆಕ್ಕ ಹಾಕಿದ್ದಾರಂತೆ. ರಾಜಕೀಯ ಅಯೋಮಯವಾಗಿದ್ದು, ಯಾವುದೇ ಖಚಿತತೆ ಕಾಣುತ್ತಿಲ್ಲ. ಎಲ್ಲವೂ ವದಂತಿಗಳು, ಊಹಾಪೋಹ ಗಳು ಮತ್ತು ವಿಶ್-ಲ್ ಚಿಂತನೆಯಲ್ಲಿ ಕಾಣುತ್ತಿದ್ದು, ಅಂತೆಕಂತೆಗಳದ್ದೇ ಕಾರುಭಾರು. ಗ್ಯಾರಂಟಿಗಳ ಅನುಷ್ಠಾನದಿಂದ ಹಿಡಿದು, ಮುಂದಿನ ಸಂಸತ್ ಚುನಾವಣೆ ಫಲಿತಾಂಶ ಹೇಗಿರಬಹುದು ಎನ್ನುವುದರವರೆಗೆ ಎಲ್ಲವೂ ಗೊಂದಲಕಾರಿಯಾಗಿದ್ದು, ಎಲ್ಲರೂ ತಾನು ನಿರೀಕ್ಷಿಸಿದಂತೆ ನಡೆಯುತ್ತದೆ ಎಂಬ ಆಶಾ ಗೋಪುರ ಕಟ್ಟುತ್ತಿದ್ದಾರೆ.