ಮತ್ತೆ ಹಿಂದೂ ವಿರೋಧಿಯಾಗುವ ಉಮೇದಿಯೇ ?!
ವಿನಯ್ ಖಾನ್
ಬುಲೆಟ್ ಪ್ರೂಫ್
vinaykhan078@.
ರಾಜಾಳ್ವಿಕೆಯ ಸಮಯದಲ್ಲಿ ರಾಜ ಸೋತು, ಹೊಸ ರಾಜ ಬಂದಾಗ ಆಡಳಿತದಲ್ಲಿ ಎಲ್ಲವನ್ನೂ ಬದಲಿಸುತ್ತಿದ್ದರು. ಇತಿಹಾಸ ಓದುತ್ತ ಹೋದಂತೆಲ್ಲ ಆಡಳಿತ ಕೈ ಬದಲಾದಾಗೆಲ್ಲ ರಾಜ್ಯದ ಪ್ರತಿಯೊಂದನ್ನೂ ಬದಲಿಸಿದ್ದು ಕಾಣುತ್ತದೆ. ಅದು ನಾಣ್ಯ, ತೆರಿಗೆ ಪದ್ಧತಿ, ರೀತಿ ರಿವಾಜು… ಕೆಲ ಮಟ್ಟಿಗೆ ದೇವರ ಪೂಜೆಯ ವಿಧಾನವನ್ನೂ ಬದಲಿಸಿದ್ದು ದಾಖಲಾಗಿದೆ.
ಹಿಂದೂ ರಾಜನಿದ್ದ ಸಂಸ್ಥಾನವನ್ನು ಮುಸಲ್ಮಾನ್ ಆಳ್ವಿಕೆದಾರರು ವಶಪಡಿಸಿ ಕೊಂಡ ತಕ್ಷಣ ಇಡೀ ರಾಜ್ಯದ ಚಹರೆಯೇ ಬದಲಾಗುತ್ತಿತ್ತು. ಇದು ಬರೀ ಮುಸಲ್ಮಾನ್ ಅಲ್ಲದೇ ಶೈವ, ವೈಶ್ಣವ, ಜೈನ, ಬೌದ್ಧ ಪ್ರತಿಯೊಂದು ಪಂಥದ ಆಳ್ವಿಕೆಯ ಸಂದರ್ಭದಲ್ಲೂ ಆಯಾ ರಾಜರು ತಮ್ಮ ನಂಬಿಕೆಯನ್ನು ಜನರ ಮೇಲೆ ಹೇರಿದ್ದಿದೆ. ರಾಜರನ್ನು ಆಕ್ಷೇಪಿಸುವ ಧೈರ್ಯ ಯಾರಿಗೂ ಇರಲಿಲ್ಲ.
ಅಂಥದ್ದೇ ಸ್ಥಿತಿ ಇವತ್ತು ಕರ್ನಾಟಕ್ಕೆ ಬಂದು ಬಿಟ್ಟಂತಿದೆ. ಹಿಂದಿನ ಬಿಜೆಪಿ ಸರಕಾರದ ಎಲ್ಲ ನಿಯಮ, ಯೋಜನೆ, ಕಾರ್ಯಕ್ರಮ, ದೇಣಿಗೆ ಎಲ್ಲದಕ್ಕೂ ನೂತನ ಕಾಂಗ್ರೆಸ್ ಸರಕಾರ ತಡೆ ಒಡ್ಡುತ್ತಿದೆ.‘ಎಡ’ಬಿಡಂಗಿತನದ ಭರದಲ್ಲಿ ಕಾಂಗ್ರೆಸಿಗರು ಆರೆಸ್ಸೆಸ್, ಬಜರಂಗದಳ ನಿಷೇಧ, ಭಾಷಣಕಾರರನ್ನು ಜೈಲಿಗೆ ಕಳೀಸ್ತೀನಿ…ಎಂಬೆಲ್ಲ ಮಾತುಗಳನ್ನು ಕೇಳಿದಾಗಲೆಲ್ಲ, ‘ತುಘಲಕ್ ದರ್ಬಾರ್’ ನೆನಪಿಗೆ ಬಂದೇ ಬರುತ್ತೆ.
ಸರಕಾರ ರಚನೆಯಾಗಿ ಇನ್ನೂ ತಿಂಗಳಾಗಿಲ್ಲ, ಆಗಲೇ ಬರೀ ಇಂಥ ಬದಲಾವಣೆ, ನಿಷೇಧ, ತಿದ್ದುಪಡಿ, ವಾಪಸಾತಿಗಳ ವಿವಾದಗಳೇ ಸುದ್ದಿಯಾಗುತ್ತಿವೆ. ಹೊಸ ಸರಕಾರ ಬಂದಾಗ ಸುಧಾರಣೆ ಮಾಡಬೇಕು ಖರೆ. ಆದರೆ, ಸುಧಾರಣೆ ಹೆಸರಲ್ಲಿ ಉಪಾದ್ಯಾಪಿ ಕೆಲಸಗಳನ್ನೇ ಮಾಡುವುದಲ್ಲ! ‘ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮರುಪರಿಶೀಲಿಸಿ, ಹೊಸ ನೀತಿ ಜಾರಿ ಮಾಡುವ ಜತೆಗೆ ಹಲವು ‘ಜನ ವಿರೋಧಿ ಕಾಯಿದೆ’ಗಳನ್ನು ರದ್ದುಪಡಿಸುವುದಾಗಿ ಸರಕಾರ ಘೋಷಿಸಿದೆ.
‘ರಾಜ್ಯದ ಜನತೆಗೆ ನೆಮ್ಮದಿಯ ವಾತಾವರಣ ಸೃಷ್ಟಿಸಲು, ರೈತರ ಹಿತ ಕಾಪಾಡಲು ಹಾಗೂ ಮಕ್ಕಳ ಭವಿಷ್ಯವನ್ನು ಸುಭದ್ರ ಗೊಳಿಸಲು ನಾವು ಬದ್ಧರಿದ್ದೇವೆ.’ ಅಂತ ಮೊನ್ನೆ ಮೊನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದರು. ಅದರ ಮರುದಿನವೇ ಸರಕಾರ ಮತ್ತೆ ಪಠ್ಯಪರಿಷ್ಕರಣೆಗೆ ಮುಂದಾದ ಸುದ್ದಿಯನ್ನು ಎಲ್ಲ ಪತ್ರಿಕೆಗಳೂ ಛಾಪಿಸಿದ್ದವು. ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಿಸುವುದಾಗಿ ಶಿಕ್ಷಣ ಸಚಿವರೂ ಹೇಳಿದರು.
ಆರೆಸ್ಸೆಸ್ ಸಂಸ್ಥಾಪಕ ಹೆಡಗೇವಾರ್ ಅವರ ಭಾಷಣದ ಭಾಗ, ಸಾವರ್ಕರ ಬಗ್ಗೆ ಇದ್ದ ಪಾಠ, ಚಕ್ರವರ್ತಿ ಸೂಲಿಬೆಲೆಯವರಲೇಖನ, ಶತಾವಧಾನಿ ಗಣೇಶ ಅವರ ಒಂದು ಪಾಠ… ಇತ್ಯಾದಿಗಳನ್ನು ಪಠ್ಯದಿಂದ ಡಿಲೀಟ್ ಮಾಡುವ ಬಗ್ಗೆ ಶಿಕ್ಷಣತಜ್ಞರ ಜತೆ ಸಭೆಯಲ್ಲಿ ಸಲಹೆ ಬಂದಿತ್ತು. ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ಅವರನ್ನು ಭೇಟಿ ಮಾಡಿದ, ಈ ಹಿಂದೆ ಕಾಂಗ್ರೆಸ್ ಆಳ್ವಿಕೆ ಅವಽಯಲ್ಲಿ, ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿದ್ದ ಬರಗೂರು ರಾಮಚಂದ್ರಪ್ಪ ಅವರು, ಚಕ್ರತೀರ್ಥ ಸಮಿತಿ ಸೇರಿಸಿರುವ ಪಠ್ಯದಲ್ಲಿ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವಂತಹ ಕೆಲವು ಅಂಶಗಳಿವೆ.
ಅದೆಲ್ಲವನ್ನೂ ತಗೆಯಬೇಕು ಎಂದು ಬಿಳಿತೆಲೆಗೆ ತಕ್ಕುದಾದ ಒಂದು ಸಲಹೆ ನೀಡಿಬಿಟ್ಟರು. ಸ್ವಾಮಿ ಬರಗೂರರೇ, ದೇಶದಬಗ್ಗೆ, ರಾಷ್ಟ್ರೀಯತೆಯ ಬಗ್ಗೆ ಬರೆದರೆ ಅದು ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆಯೇ? ಭಗತ್ ಸಿಂಗ್,ರಾಜ್ ಗುರು, ಸುಖದೇವ್‌ರಂಥವರ ಬಗ್ಗೆ ಬರೆದ ಪಠ್ಯ ಮಕ್ಕಳ ಮೇಲೆ ಯಾವ ರೀತಿ ‘ದುಷ್ಪರಿಣಾಮ’ವನ್ನು ಬೀರುತ್ತೇ? ಸ್ವಾತಂತ್ರ್ಯ ಹೋರಾಟದ ಕೀರ್ತಿಯೇನಿದ್ದರೂ ಕೇವಲ ಗಾಂಧಿ-ನೆಹರು ಕುಟುಂಬದ ಹಕ್ಕುದಾರಿಕೆಯೇ? ಒಂದು ಮಗುವಿನ ಭವಿಷ್ಯ ನಿಮ್ಮದೇ ಆದ ಸ್ಟೀರಿಯೋಟೈಪಿಕ್ ಪ್ರಬುದ್ಧತೆಯಿಂದ, ‘ಜಾತ್ಯತೀತತೆ’ ಯಿಂದ ಸುಭದ್ರವಾಗಲು ಸಾಧ್ಯವೇ? ನೆನಪಿಡಿ, ನೀವು ನಖಶಿಕಾಂತವಾಗಿ ವಿರೋಧಿಸುತ್ತಿರುವ ರೋಹಿತ್ ಚಕ್ರತೀರ್ಥ ಅವರೂ ನಿಮ್ಮ ಕಾಂಗ್ರೆಸ್ ಪ್ರೇರಿತ, ಸೋಕಾಲ್ಡ್ ಜಾತ್ಯತೀತ ಪಠ್ಯವನ್ನು ಓದಿಯೇ ಬೆಳೆದವರು.
ಹಾಗೆಯೇ ನಿಮ್ಮಂಥವರಿಂದ ಕೋಮುವಾದಿಗಳೆಂಬ ಬಿರುದು ಹೊಂದಿರುವ ಎಷ್ಟೋ ಯುವಕರೂ ನಿಮ್ಮ ಪಠ್ಯವನ್ನೇ ಓದಿ ಬೆಳೆದವರು. ಹಾಗಿದ್ದರೆ ಅವರ ಮೇಲೆ ಬೀರಿದ ‘ದುಷ್ಪರಿಣಾಮ’ ಎಲ್ಲಿಯದು? ಮಕ್ಕಳು ಅದು ಹೇಗೆ ಪಠ್ಯದ ಮೂಲಕ ಬದಲಾಗುತ್ತಾರೆಂದುಕೊಳ್ಳುತ್ತೀರಿ? ಕೊನೆಪಕ್ಷ ಇತಿಹಾಸದ ಸತ್ಯವನ್ನು ಹೇಳಬೇಕೆಂಬ ವಿಚಾರ ನಿಮ್ಮ ಬಿಳಿತಲೆಗೆ ಹೋಗಲಿಲ್ಲವೆಂದರೆ ಹೇಗೆ? ಇರಲಿಬಿಡಿ, ಎಲ್ಲಕ್ಕಿಂತ ಮುಖ್ಯವಾಗಿ ಈಗ ಪಠ್ಯ ಪರಿಷ್ಕರಣೆ ಮಾಡಿ, ಯಾವೆಲ್ಲ ಪಾಠಗಳನ್ನು ಸೇರಿಸುತ್ತೀರಿ? ಮತ್ತದೇ ಟಿಪ್ಪು ಮತ್ತು ಮೊಘಲ್ ರಾಜರ ಸಾಹಸಗಾಥೆ (?!)ಯನ್ನೇ ಅಥವಾ ಸಂಪೂರ್ಣ ಇತಿಹಾಸವನ್ನೆಲ್ಲ ಮುಂದೆ ಇಡುತ್ತೀರೋ? ಮೋಘಲರು ಒಂದು ಸಾಮ್ರಾಜ್ಯವನ್ನು ಗೆದ್ದ ತಕ್ಷಣ ಅಲ್ಲಿನ ಹೆಂಗಸರನ್ನು ಅತ್ಯಾಚಾರ ಮಾಡಿ, ಗಂಡಸರನ್ನು ಕೊಂದು, ಗುಡಿ ಗುಡಾರವನ್ನೆಲ್ಲ ಧ್ವಂಸ ಮಾಡಿ, ಕೆಲವೊಂದಿಷ್ಟರಲ್ಲಿ ಮಸೀದಿ ಕಟ್ಟಿಸಿದ್ದನ್ನೆಲ್ಲ ಪಠ್ಯದಲ್ಲಿ ಸೇರಿಸು ತ್ತೀರೋ? ದೀಪಾವಳಿ ದಿನ ಮೇಲುಕೋಟೆಯಲ್ಲಿ ನೂರಾರು ಜನರನ್ನ ಟಿಪ್ಪು ಕೊಂದನಲ್ಲ ಅದೂ ಆ ಪಠ್ಯದಲ್ಲಿ ಇರುತ್ತಾ? ಮಲಬಾರ್ ಮತ್ತು ಕೊಡಗಿನಲ್ಲಿ ಲಕ್ಷಾಂತರ ಹಿಂದೂಗಳನ್ನು ಬಲವಂತವಾಗಿ ಮತಾಂತರಿಸಿದ್ದನಲ್ಲ ಆ ವಿಚಾರದ ಬಗ್ಗೆ ಮಕ್ಕಳಿಗೆ ತಿಳಿಹೇಳುತ್ತೀರಾ? ಎಲ್ಲದಕ್ಕಿಂತ ಹೆಚ್ಚಾಗಿ ಟಿಪ್ಪುವನ್ನು ಮಹಾನ್ ದೇಶಭಕ್ತನೆನ್ನುವ ಉಪಾದ್ಯಾಪಿತನ ಯಾಕೆ ಬೇಕು ನಿಮಗೆ? ಒಂದು ರಾಜ್ಯದ ರಾಜ ತನ್ನ ರಾಜ್ಯವನ್ನು ಉಳಿಸಿಕೊಳ್ಳಲು ಹೋರಾಡಲೇ ಬೇಕು, ಬರೀ ಅದೊಂದೇಅಳತೆಗೋಲನ್ನಿಟ್ಟುಕೊಂಡು ಟಿಪ್ಪುವನ್ನು ದೇಶಭಕ್ತನೆನ್ನುವುದು ಎಷ್ಟು ಸರಿ? ಕನ್ನಡವನ್ನು ಬಿಟ್ಟು ಉರ್ದು, ಪಾರ್ಸಿ ಭಾಷೆಯನ್ನು ವ್ಯಾವಹಾರಿಕ ಭಾಷೆ ಮಾಡಿ, ಇರಾನ್, ಅಫ್ಘಾನಿಸ್ತಾನ್, ಟರ್ಕಿ ಮೊದಲಾದ ದೇಶಗಳ ರಾಜರಿಗೆ ಭಾರತದ ಮೇಲೆ ದಾಳಿ ಮಾಡಿ ಎಂದು ರಾಯಭಾರಿಗಳನ್ನು ಕಳಿಸಿದ್ದನಲ್ಲ ಅವನ್ಯಾವ ಸೀಮೆಯ ದೇಶ ಭಕ್ತ? ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಪ್ರಕಾರ ತಜ್ಞರ ಶಿಫಾರಸ್ಸಿನ ಮೇಲೆ ಪರಿಷ್ಕರಣೆ ಕೈಗೊಳ್ಳಲಾಗುತ್ತಿದೆ.
ಇಷ್ಟಕ್ಕೂ ಪರಿಷ್ಕರಣೆಗೆ ಶಿಫಾರಸು ಮಾಡಿದ ಈ ತಜ್ಞರು ಯಾರು? ಒಂದೊಂದು ಸರಕಾರಕ್ಕೂ ಬೇರೆ ಬೇರೆ ತಜ್ಞರು ಇರುತ್ತಾರಾ? ಒಂದು ಪಕ್ಷದ ವಕ್ತಾರರ ರೀತಿಯಲ್ಲಿ ಮಾತಾಡುವ ಈ ತಜ್ಞರು, ಮಾರ್ಕ್ಸಿಸ್ಟ್ ವಿಚಾರಧಾರೆಗಳನ್ನು ಯಾವ ದೃಷ್ಟಿಯಲ್ಲಿ ನಮ್ಮ ದೇಶದ ಇತಿಹಾಸ ಎಂದು ಪರಿಗಣಿಸುತ್ತಾರೆ? ಇತಿಹಾಸ ಮತ್ತು ಶಿಕ್ಷಣಗಳೆಲ್ಲ ಬೇರೆ ಬೇರೆ ತಜ್ಞರ ಕಣ್ಣಲ್ಲಿ ಬೇರೆ ಬೇರೆಯಾಗೇ ಕಾಣುತ್ತದೆಯೋ ಅಥವಾ ಸರಕಾರ ಬದಲಾದಂತೆ ಇತಿಹಾಸವೂ ಬದಲಾಗುತ್ತದೆಯೋ ಗೊತ್ತಿಲ್ಲ.
ಉರ್ದುವಿನಲ್ಲಿ ಇದ್ದ ನಗರಗಳ ಹೆಸರನ್ನು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬದಲಿಸಿದಾಗ, ದೊಡ್ಡ ಖುಗೆಬ್ಬಿಸಿದ ಮಂದಿಯೇ ಈಗ ತಮ್ಮ ಮೂಗಿನ ನೇರಕ್ಕೆ ಪಠ್ಯವನ್ನು ಬದಲಿಸಲು ಹೊರಟಿರುವುದಕ್ಕೆ ಏನೆನ್ನಬೇಕು? ಕಾಂಗ್ರೆಸಿನ ಹಲವು ನಾಯಕರು ಸಾವರ್ಕರ್‌ರಂತಹ ಮಹಾನ್ ಸ್ವಾತಂತ್ರ್ಯ ಹೋರಾಟಗಾರನನ್ನು ಹೇಡಿ ಅನ್ನುತ್ತಿದ್ದಾರೆ. ಹಾಗಿದ್ದರೆ ಈ ಕಾಂಗ್ರೆಸಿ ಗರು ಮಾಡಿದ್ದೇನು? ಪ್ರತಿಯೊಂದು ಹೋರಾಟಕ್ಕೂ ಬ್ರಿಟಿಷರ ಅನುಮತಿ ಪಡೆದದ್ದು ಶೂರತ್ವವೇ? ಆಗ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸಿಗರೆಲ್ಲ ನಂತರ ರಾಜಕಾರಣೆಗಳಾದರು, ಅಂಥದ್ದೇ ಒಂದು ಕುಟುಂಬ ಇಂದಿಗೂ ಕಾಂಗ್ರೆಸ್ ಅನ್ನು ಆಳುತ್ತಿದೆ.
ಆಗಿನ ಹೋರಾಟಗಾರರ ಸರ್ ನೇಮ್ ಹೆಸರಿನ ಮುಂದಿದೆ ಎಂಬ ಒಂದೇ ಕಾರಣಕ್ಕೆ ಸ್ವಾತಂತ್ರ್ಯ ಹೋರಾಟ ಎಂದರೆಏನೆಂಬುದೇ ಗೊತ್ತಿಲ್ಲದ ಮಂದಿ ಇಂದಿಗೂ ದೇಶಭಕ್ತ ನಾಯಕರೆನಿಸಿಕೊಂಡಿದ್ದಾರೆ. ಇನ್ನು ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ ಕಾರಣಕ್ಕಾಗಿ ದೇಶ ಭಕ್ತ ಎನ್ನುವುದಾದರೆ, ಮರಾಠರೂ ಅದನ್ನೇ ಮಾಡಿದ್ದರಲ್ಲ? ಸಾವರ್ಕರ್ ಸಹ ಅದನ್ನೇ ಮಾಡಿದ್ದು, ಹಾಗಿದ್ದರೆ ಅವರನ್ನು ಹೇಡಿ ಅನ್ನುವುದು ಯಾವೂರ ನ್ಯಾಯ? ಅಲ್ಲ ಸ್ವಾಮಿ, ನಿಮ್ಮ ಸರಕಾರದ ತಜ್ಞರಿಗೆ ಪಠ್ಯದ ಪುಸ್ತಕದ ಪರಿಷ್ಕರಣೆ ಮಾಡಲು ಇರುವ ಹುಮ್ಮಸ್ಸು, ಶಾಲಾ ಕಾಲೇಜುಗಳ ಅಭಿವೃದ್ಧಿ ಮಾಡುವೆಡೆಗೆ ಯಾಕಿಲ್ಲ? ಇನ್ನಷ್ಟುಪರಿಣಾಮಕಾರಿ ಬೋಧನೆ, ಮೂಲಸೌಕರ್ಯಗಳ ಬಗ್ಗೆ ತಲೆ(ಇದ್ದರೆ)ಯಾಕೆ ಕೆಡಿಸಿಕೊಳ್ಳುತ್ತಿಲ್ಲ? ಎಷ್ಟೋ ಸಾವಿರಶಾಲೆಗಳಲ್ಲಿ ಕುಡಿಯುವ ನೀರಿನಿಂದ ಹಿಡಿದು ಶೌಚಾಲಯ, ಕ್ಲಾಸ್ ರೂಮ್‌ಗಳು ಏನೂ ಇಲ್ಲ. ಅದರ ಬಗ್ಗೆ ಸ್ವಲ್ಪವಾದರೂಕಾಳಜಿ ವಹಿಸಬೇಕಲ್ಲ. ಇನ್ನು ಎಷ್ಟೋ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ, ಕೆಲವೊಂದಿಷ್ಟು ಕಡೆ ಒಬ್ಬ ಶಿಕ್ಷಕನೇ ೨-೩ ವಿಷಯದಬೋಧನೆ ಮಾಡುತ್ತಿದ್ದಾನೆ.
ಹೆಡ್ ಮಾಸ್ಟರ್‌ಗಳಿಲ್ಲ, ಮಕ್ಕಳಿಗೆ ಕಂಪೂಟರ್ ಜ್ಞಾನ, ನೈರ್ಮಲ್ಯಯುತ ಶಾಲಾ ಕಟ್ಟಡ, ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್‌ಗಳ ಬಗ್ಗೆ ಕೇಳುವುದೇ ಬೇಡ. ಮುಖ್ಯಮಂತ್ರಿಯವರು ಒಂದು ವಿಷಯವನ್ನು ರಾಜ್ಯದ ಜನತೆಯ ಮುಂದೆ ಸ್ಪಷ್ಟ ಪಡಿಸಲೇಬೇಕು; ಅದು ಈ ಸರಕಾರ ರಾಜ್ಯದ ಜನರಿಗೋಸ್ಕರ ಕೆಲಸ ಮಾಡುತ್ತಿದೆಯೋ ಅಥವಾ ಬಿಜೆಪಿ ಮಾಡಿದ್ದ ಎಲ್ಲ ಕೆಲಸಗಳನ್ನೂ ವಿರೋಽಸಿ, ಸೇಡಿನ ರಾಜಕಾರಣ ಮಾಡುತ್ತಿದೆಯೋ ಅಂತ. ಯಾಕೆಂದರೆ, ಸಿದ್ದರಾಮಯ್ಯ ಸಾಹೇಬ್ರೇ, ಧರ್ಮಾದ ವಿಚಾರದಲ್ಲಿ ತುಂಬಾ ಜನರ ವಿರೋಧ ಕಟ್ಟಿಕೊಳ್ಳಬೇಡಿ.
ಏಕೆಂದರೆ, ಕೊನೆ ಅವಧಿಯಲ್ಲೇ ಜನ ನಿಮ್ಮನ್ನು ಸೋಲಿಸಿದ್ದೂ ಧರ್ಮದ ಕಾರಣಕ್ಕೇ, ಈಗ ಬಿಜೆಪಿ ಸೋತಿದ್ದೂ ಧರ್ಮ-ಜಾತಿಗಳ ವಿಷಯಕ್ಕೆ ಕೈ ಹಾಕಿದ್ದಕ್ಕೆ. ಮತ್ತೊಮ್ಮೆ ಅದಕ್ಕೇ ಅಂಟಿಕೊಳ್ಳಬೇಡಿ. ‘ಉಚಿತ-ಖಚಿತ- ನಿಶ್ಚಿತ’ಗಳಿಂದ ಪಟ್ಟಕ್ಕೆಹೋದವರು ಅದನ್ನು ಸರಿಯಾಗಿ, ಎಲ್ಲರಿಗೂ ದಕ್ಕುವ ರೀತಿಯಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಯೋಚಿಸಿ. ನೀವೇ ಹೇಳುವ ಹಾಗೆ ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ನೋಟ ಮಾಡಿ. ಬದಲಾಗಿ ಕೇವಲ ಸಾಬ್ರ ಜನಾಂಗದ ಶಾಂತಿಯ ನೋಟ ಅಲ್ಲ! ಯಾಕೆಂದರೆ, ಯಾವಾಗ ಬೇಕಾದರೂ ನಿಮ್ಮದೇ ಸರಕಾರದ ಜನ ನಿಮ್ಮ ವಿರುದ್ಧ ಬೇಗುದಿ ಎದ್ದು ನೀವು ಅಽಕಾರದಿಂದ ಕೆಳಗಿಳಿಯಬಹುದು, ಆದಷ್ಟು ಐದು ವರ್ಷ ಪೂರ್ತಿಗೊಳಿಸಲು ಪ್ರಯತ್ನಿಸಿ.