ಕೃತಕ ಬುದ್ದಿಮತ್ತೆ ನಮ್ಮ ಆಳಾಗುವುದೋ, ನಮ್ಮನ್ನಾಳುವುದೋ ?
ನವ ಆಯಾಮ
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
‘ಕೃತಕ ಬುದ್ಧಿಮತ್ತೆಯನ್ನು ಸೃಷ್ಟಿಸಿರುವುದು ಮಾನವನ ಇತಿಹಾಸದಲ್ಲಿಯೇ ಬಹಳ ಮುಖ್ಯವಾದ ಘಟನೆ. ಆದರೆ ಇದರಿಂದಾಗುವ ದುಷ್ಪರಿಣಾಮಗಳನ್ನು ಗ್ರಹಿಸಿ ನಿವಾರಿಸಿಕೊಳ್ಳುವುದನ್ನು ಕಲಿಯದಿದ್ದರೆ, ಇದೇ ಮಾನವನ ಕೊನೆಯ ಆವಿಷ್ಕಾರಆಗಬಹುದು’ ಎಂದು ವಿಶ್ವವಿಖ್ಯಾತ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಬಹಳ ಹಿಂದೆಯೇ ಹೇಳಿದ್ದನ್ನು ಮತ್ತೊಮ್ಮೆ ನೆನೆಯಬೇಕಿದೆ.
‘ಓಪನ್-ಎಐ’ ಎಂಬುದು ಮಾನವ ಜಗತ್ತಿಗೆ ಒಟ್ಟಾರೆಯಾಗಿ ಪ್ರಯೋಜನ ವಾಗುವಂತೆ ಕೃತಕ ಬುದ್ಧಿಮತ್ತೆಯನ್ನು ಅಭಿವೃದ್ಧಿ ಪಡಿಸುವ ಒಂದು ಖಾಸಗಿ ಸಂಶೋಧನಾ ಪ್ರಯೋಗಾಲಯ. ಇದು ಅಭಿವೃದ್ಧಿಪಡಿಸಿದ ‘ಚಾಟ್ ಜಿಪಿಟಿ’ ಈಗಾಗಲೇ ಸಾಕಷ್ಟು ಜನಪ್ರಿಯವಾಗಿದೆ. ಓಪನ್-ಎಐ ಸಂಸ್ಥೆ ವಿವಿಧ ವಲಯ ಗಳಲ್ಲಿ ದಕ್ಷತೆ ಹಾಗೂ ನಿಖರತೆಯನ್ನು ಹೆಚ್ಚಿಸುತ್ತಿದೆ; ಮಾನವ ಮತ್ತು ಯಂತ್ರಗಳ ನಡುವಿನ ಸಂವಹನ ಕ್ರಿಯೆಯನ್ನು ಅಗಾಧವಾಗಿ ಬದಲಿಸುವ ಮೂಲಕ ಈ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟು ಮಾಡಿದೆ.
ಇದರ ಜತೆಗೆ ಗೌಪ್ಯತೆ, ಉದ್ಯೋಗ ನಷ್ಟ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳಿಗೆ ಅಸಮಾನ ಪ್ರವೇಶದ ಬಗ್ಗೆ ಕಳವಳಗಳನ್ನೂ ಹುಟ್ಟುಹಾಕಿದೆ. ಈ ಹಿನ್ನೆಲೆಯಲ್ಲಿ ಕೃತಕ ಬುದ್ಧಿಮತ್ತೆಯಿಂದ ಉಂಟಾಗುವ ಸಂಭಾವ್ಯ ಅಪಾಯಗಳು ಹಾಗೂ ಅದರ ಅಪಾರ ಸಾಮರ್ಥ್ಯವನ್ನು ತೂಗುವ ಚಿಂತನಶೀಲ ಚರ್ಚೆಯ ಅಗತ್ಯವಿದೆ. ಇದು ಓಪನ್-ಎಐ ಸಂಸ್ಥೆ ಅಭಿವೃದ್ಧಿ ಪಡಿಸಿರುವ ತಂತ್ರಾಂಶ. ಇಂಥ ನೂರಾರು ಬುದ್ಧಿವಂತಿಕೆ ತಂತ್ರಾಂಶಗಳು ಈಗ ಲಭ್ಯವಿವೆ.
‘ಜನರೇಟಿವ್ ಪ್ರಿ-ಟ್ರೈನ್ಡ್ ಟ್ರಾನ್ಸ್ ಫಾರ್ಮರ್’ ನಾಲ್ಕನೇ ಆವೃತ್ತಿಗೆ ಸೇರಿರುವ ಜಿಪಿಟಿ-೪ ಕೃತಕ ಬುದ್ಧಿಮತ್ತೆಯ ಸುಧಾರಿತ ರೂಪವಾಗಿದ್ದು, ಮಾನವ ರೀತಿಯ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತದೆ ಹಾಗೂ ಫಲಿತಾಂಶಗಳನ್ನು ನೀಡುತ್ತದೆ. ೧೦ ಟ್ರಿಲಿಯನ್ ಪ್ಯಾರಾಮೀಟರ್‌ಗಳೊಂದಿಗೆ ಇದುವರೆಗೆ ರಚಿಸಲಾಗಿರುವ ಭಾಷಾಮಾದರಿಯಾಗಿದೆ. ಓಪನ್-ಎಐ ಸಂಸ್ಥೆಯಮುಖ್ಯಸ್ಥ ಸ್ಯಾಮ್ ಆಲ್ಟ್‌ಮನ್, ‘ಕೃತಕ ಬುದ್ಧಿಮತ್ತೆಯು ಉತ್ತಮ ಸಮಾಜವನ್ನು ನಿರ್ಮಿಸುತ್ತದೆ. ನಾವು ಅದರ ಜತೆಗೆ ಹೆಚ್ಚು ಆನಂದಿಸಿ ಉಪಯೋಗವನ್ನು ಗುರುತಿಸಿ ಕೊಳ್ಳಬೇಕು’ ಎನ್ನುತ್ತಾರೆ.
‘ಎಐ’ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಎಂಬ ದೈತ್ಯ ಜೀವಿಯೊಂದು ಬಿಗ್‌ಬ್ಯಾಂಗ್ ರೂಪದಲ್ಲಿ ಸೃಷ್ಟಿಯಾಗುತ್ತಿದೆ. ಆ ಮಹಾಕಂಪನದ ಅಲೆಗಳು ಕಳೆದ ನಾಲ್ಕಾರು ವರ್ಷಗಳಿಂದ ನಮ್ಮಲ್ಲಿ ಕೆಲವರಿಗೆ ತಟ್ಟತೊಡಗಿತ್ತು. ಇತ್ತೀಚಿನ ೩ ತಿಂಗಳಲ್ಲಿ ಅದರ ಸದ್ದು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಮನುಷ್ಯ ಮನುಷ್ಯನ ನಡುವಣ ಯುದ್ಧಗಳೇ ಪರಮಾಣು ಬಾಂಬ್ ಸೃಷ್ಟಿಗೆ ಕಾರಣವಾದಂತೆ, ಈ ದೈತ್ಯನ ಸೃಷ್ಟಿಗೂ ಕಂಪ್ಯೂಟರ್ ಲೋಕದ ಪ್ರಮುಖ ಜಾಗತಿಕ ಸಂಸ್ಥೆಗಳು ಸದ್ದಿಲ್ಲದೆ ಸಿದ್ಧತೆ ನಡೆಸುತ್ತಿದ್ದವು.
ಇದೀಗ ಮೈಕ್ರೋಸಾಫ್ಟ್ ಸಂಸ್ಥೆ ತನ್ನ ಚಾಟ್ ಜಿಪಿಟಿ ಮೂಲಕ ಈ ದೈತ್ಯನ ಒಂದು ಪಾರ್ಶ್ವವನ್ನು ಅನಾವರಣ ಮಾಡಿದ್ದೇತಡ, ಗೂಗಲ್ ಸಂಸ್ಥೆ ತಾನೂ ಯುದ್ಧಕ್ಕೆ ಇಳಿದೆನೆಂದು ಘೋಷಿಸಿತು. ಜಗತ್ತಿನ ಚಿಂತಕರ ವಲಯದಲ್ಲಿ ಈ ‘ಯಾಂಬು’ (ಯಾಂತ್ರಿಕ ಬುದ್ಧಿಮತ್ತೆ) ದೈತ್ಯನ ಕುರಿತು ಆತಂಕದ ಅಲೆಗಳು ಏಳತೊಡಗಿವೆ. ಸದ್ಯಕ್ಕೆ ಈ ಪೈಪೋಟಿ ಯನ್ನು ನಿಲ್ಲಿಸಿರೆಂಬ ಕೂಗೆದ್ದಿದೆ. ಇದು ನಮ್ಮೆಲ್ಲರ ನಿಯಂತ್ರಣದಿಂದ ಬಿಡಿಸಿಕೊಂಡು ಮನುಕುಲವನ್ನು ನಿರ್ನಾಮ ಮಾಡುತ್ತದೆ ಎಂದು ಕಂಪ್ಯೂಟರ್ ತಜ್ಞರೇ ಹೇಳತೊಡಗಿದ್ದಾರೆ.
ಕೃತಕ ಬುದ್ಧಿಮತ್ತೆಯ ಸೃಷ್ಟಿಗೆ ಹಣ ಹೂಡಿದ ಎಲಾನ್ ಮಸ್ಕ್ ಕೂಡ, ‘ಪರಮಾಣು ಬಾಂಬ್‌ಗಿಂತ ಈ ದೈತ್ಯ ಹೆಚ್ಚು ಅಪಾಯಕಾರಿ’ ಎಂದು ಎಚ್ಚರಿಸಿದ್ದಾರೆ. ಗೂಗಲ್ ಸಂಸ್ಥೆ ತನ್ನ ಶಸಾಸಗಳನ್ನು ತೆರೆದಿಡುತ್ತಾ, ಮಾನವ ಕಲ್ಯಾಣಕ್ಕೆ ಅವೆಲ್ಲಾ ಎಷ್ಟು ಉಪಕಾರಿಯೆಂದು ವಿವರಿಸಿದೆ. ಅದರ ಅಪಾಯಗಳನ್ನು ಚರ್ಚಿಸಲೆಂದು ಅಮೆರಿಕದ ಸೆನೆಟ್ ಸಮಿತಿ ಇದೀಗ ವಿಚಾರಣೆ ಆರಂಭಿಸಿದೆ. ಈ ಭೂತದ ಸೃಷ್ಟಿಯಿಂದಾಗಿ ಮಾನವ ಸಮಾಜ ಮೊದಲಿನಂತಿರುವುದಿಲ್ಲ ಎಂಬುದಂತೂ ಸ್ಪಷ್ಟವಾಗಿದೆ.
ಹೇಗಿದ್ದೀತು ಎಂದು ಕಲ್ಪಿಸುವುದು ಕಷ್ಟವಾಗುತ್ತಿದೆ. ಅಂದಹಾಗೆ, ಈ ದೈತ್ಯನ ಸೃಷ್ಟಿಗೆಂದು ಪೈಪೋಟಿಗೆ ಬಿದ್ದಿರುವ ಮೂರು ಪ್ರಮುಖ ಕಂಪನಿಗಳ (ಮೈಕ್ರೋಸಾಫ್ಟ್, ಗೂಗಲ್ ಮತ್ತು ಐಬಿಎಂ) ಮುಖ್ಯಸ್ಥರೂ ದಕ್ಷಿಣ ಭಾರತದವರೇ. ಅವರು ಕ್ರಮವಾಗಿ ಸತ್ಯ ನಾದೆಲ್ಲ, ಸುಂದರ್ ಪಿಚ್ಬೈ ಮತ್ತು ಅರವಿಂದ ಕೃಷ್ಣ. ಕೃತಕ ಬುದ್ಧಿಮತ್ತೆಯ ಕ್ರಾಂತಿಕಾರಿ ಬೆಳವಣಿಗೆ, ಅದರ ಸಾಮರ್ಥ್ಯ, ಅಪಾಯ ಮತ್ತು ಉಪಯೋಗಗಳ ಕುರಿತು ಚರ್ಚಿಸಲೇಬೇಕಿದೆ. ಈ ಕೃತಕ ಬುದ್ಧಿಮತ್ತೆಯು ವಿವಿಧ ಕೈಗಾರಿಕೆ ವಲಯಗಳನ್ನು ಹೇಗೆ ಮಾರ್ಪಡಿಸಿದೆ ಹಾಗೂ ಇದರಿಂದಾಗುವ ಅತ್ಯಂತ ಮಹತ್ವದ ಪ್ರಗತಿಗಳು ಯಾವುವು? ಈ ತಂತ್ರಜ್ಞಾನದ ಸುತ್ತಲಿನ ನೈತಿಕ ಪರಿಗಣನೆ ಗಳು ಯಾವುವು ಮತ್ತು ಅವನ್ನು ಹೇಗೆ ಪರಿಹರಿಸಬಹುದು? ಮಾನವ-ಯಂತ್ರದ ಪಾರಸ್ಪರಿಕ ಕ್ರಿಯೆಯಭವಿಷ್ಯಕ್ಕೆ ಕೃತಕ ಬುದ್ಧಿಮತ್ತೆ ಹೇಗೆ ಕೊಡುಗೆ ನೀಡುತ್ತದೆ? ಈ ಸಂಬಂಧದಿಂದ ಯಾವ ಸಂಭಾವ್ಯ ಪ್ರಯೋಜನಗಳುಮತ್ತು ಸವಾಲುಗಳು ಉದ್ಭವಿಸುತ್ತವೆ? ದೀರ್ಘಾವಧಿಯ ಪರಿಣಾಮಗಳು ಯಾವುವು? ಕೃತಕ ಬುದ್ಧಿಮತ್ತೆಯ ಅಪ್ಲಿಕೇಶನ್‌ ಗಳಲ್ಲಿ ಗೌಪ್ಯತೆ ಮತ್ತು ಡೇಟಾ ಸುರಕ್ಷತೆಯ ಕುರಿತಾದ ಕಳವಳವನ್ನು ಹೇಗೆ ತಗ್ಗಿಸಬಹುದು? ಕೃತಕ ಬುದ್ಧಿ ಮತ್ತೆಯ ಪ್ರಗತಿಯಿಂದಾಗುವ ಉದ್ಯೋಗ ಪಲ್ಲಟದ ಪರಿಣಾಮಗಳು ಯಾವುವು? ಸಮಾಜವು ಈ ಪರಿವರ್ತನೆಗೆ ಹೇಗೆ ತಯಾರಿ ನಡೆಸಬಹುದು? ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳಿಗೆ ಸಮಾನ ಪ್ರವೇಶವನ್ನು ಹೇಗೆ ಖಚಿತ ಪಡಿಸಿಕೊಳ್ಳಬಹುದು? ಎಂಬ ಸವಾಲುಗಳಿಗೆ ಉತ್ತರ ಹುಡುಕಬೇಕಾಗಿದೆ.
ಯಾಂತ್ರಿಕ ಬುದ್ಧಿಮತ್ತೆಯೆಂದು ಕರೆಯಬಹುದಾದ ಈ ಡಿಜಿಟಲ್ ಲೋಕದಲ್ಲಿನ ಪ್ರವೇಶ ಪ್ರಸಂಗವು ಪ್ರಚಂಡ ಬಿರುಗಾಳಿ ಯನ್ನು ಎಬ್ಬಿಸುತ್ತಿರುವುದಂತೂ ನಿಜ. ಕೃತಕ ಎಂದಾಗ ಅದು ಮನುಷ್ಯನಿಂದ ಸೃಷ್ಟಿಯಾಗಿದ್ದು ಎಂಬ ಭಾವನೆ ಬರುತ್ತದೆ, ನಿಜ. ಆದರೆ ಈಗ ಮನುಷ್ಯನ ಊಹೆಗೂ ಮೀರಿ ಅದು ತನ್ನನ್ನು ತಾನೇ ಸಂವರ್ಧನಗೊಳಿಸುತ್ತಾ ತಾನೇ ತಾನಾಗಿ ಬೆಳೆಯತೊಡಗಿದೆ. ಇದು ನಮ್ಮ ಬುದ್ಧಿವಂತಿಕೆಯಿಂದಲೇ ಅವತರಿಸಿದ ಅನ್ಯ ಜೀವಿಯೇ ಸರಿ.
ಆದರೆ, ಮನುಷ್ಯನಿಂದಲೇ ಸೃಷ್ಟಿಯಾದ ಇದು ಹೇಗೆ ಮನುಷ್ಯನ ನಿಯಂತ್ರಣ ತಪ್ಪಿ ಬೆಳೆಯಲು ಸಾಧ್ಯ? ತಂತಾನೇ ಹೇಗೆ ವಿಕಾಸವಾಗಲು ಸಾಧ್ಯ? ಸದ್ಯಕ್ಕೆ ಇದು ಕಂಪ್ಯೂಟರ್‌ನ ನರಮಂಡಲದಲ್ಲಿಯೇ ಇದೆ. ಇದೀಗ ನಾವು ಕಂಪ್ಯೂಟರನ್ನು ಉಪಯೋಗಿಸಿಕೊಂಡಂತೆ ಇದನ್ನೂ ಉಪಯೋಗಿಸಿಕೊಳ್ಳಬಹುದಲ್ಲವೇ? ಮೊದಲಿಗೆ ಈ ‘ಯಾಂಬು’ ದೈತ್ಯನ ಇತ್ತೀಚಿನ ಉಪಕಾರ ಮತ್ತು ಉಪಟಳವನ್ನು ತುಸು ದೃಷ್ಟಿ ಹರಿಸಿ ನೋಡಬೇಕಾಗಿದೆ.
ನಾವು ನಮ್ಮ ಕೆಲಸಕ್ಕೆಂದು ಸೃಷ್ಟಿಸಿಕೊಂಡ ಎಲ್ಲಾ ರಂಗಗಳಲ್ಲೂ ಅದು ಪರಿಣತಿ ಪಡೆದು, ನಮಗಿಂತ ಚೆನ್ನಾಗಿ ಹಸ್ತಕ್ಷೇಪ ಮಾಡುತ್ತದೆ. ಸಂಗೀತ, ಕಲೆ, ಸಾಹಿತ್ಯ, ಛಾಯಾಗ್ರಹಣ ಹೀಗೆ ಎಲ್ಲಾ ರಂಗಗಳಲ್ಲೂ ಅದು ನಮ್ಮನ್ನು ಮೀರಿಸುತ್ತದೆ. ನಮಗಿಂತ ಚೆನ್ನಾಗಿ ಪರೀಕ್ಷೆ ಬರೆಯುತ್ತದೆ (ವೈದ್ಯಕೀಯವನ್ನು ಅದು ಓದಿರದಿದ್ದರೂ, ಅಮೆರಿಕನ್ ಜನರಲ್ ಲೈಸೆನ್ಸಿಂಗ್ ಪರೀಕ್ಷೆಯನ್ನು ಅದು ಪಾಸ್ ಮಾಡಿದೆ!). ನಮಗಿಂತ ಚೆನ್ನಾಗಿ ಚೆಸ್ ಆಡುತ್ತದೆ, ನಮಗಿಂತ ಹೆಚ್ಚು ಜವಾಬ್ದಾರಿಯಿಂದ ವಾಹನ ಚಾಲನೆ ಮಾಡುತ್ತದೆ.
ಯಾವ ಕವಿಯನ್ನಾದರೂ ಮೀರಿಸುವಷ್ಟು ಚೆಂದದ ಕವನವನ್ನು ಬರೆಯುತ್ತದೆ. ಚಿತ್ರ, ನೃತ್ಯ, ಶಿಲ್ಪಕಲೆ, ವಿಜ್ಞಾನ, ವೈದ್ಯಕೀಯ ಸಂಶೋಧನೆ ಮತ್ತು ತಂತ್ರಜ್ಞಾನ ರಂಗದಲ್ಲಿ ‘ಯಾಂಬು’ ದೈತ್ಯನ ಕೊಡುಗೆ ಅಪಾರ ಹೆಚ್ಚ ಲಿದೆ. ನಮ್ಮ ಶರೀರದ ೨೦ ಸಾವಿರ ಪ್ರೋಟೀನ್‌ಗಳಲ್ಲಿ ವಿಜ್ಞಾನಿಗಳು ಕಷ್ಟಪಟ್ಟು ಶೇ. ೧೦ರಷ್ಟು ಗುರುತಿಸಿದರೆ, ‘ಯಾಂಬು’ ಶೇ. ೧೦೦ರಷ್ಟನ್ನು ಫಟಾಫಟ್ ಗುರುತಿಸಿ ಯಾವ ಕಾಯಿಲೆಗೆ ಬೇಕಾದರೂ ಔಷಧಸೂತ್ರವನ್ನು ತಿಳಿಸುತ್ತದೆ.
ಹೀಗಾಗಿ, ಈ ಕೃತಕ ಬುದ್ಧಿಮತ್ತೆಯು ಮುಂದೊಂದು ದಿನ ಜಗತ್ತನ್ನೇ ಸ್ವಾಽನಪಡಿಸಿಕೊಳ್ಳುತ್ತದೆಯೇ ಎಂಬ ಪ್ರಶ್ನೆ ಏಳುತ್ತದೆ. ಜ್ಞಾನಿಗಳು ಅಂಥದೊಂದು ಪರಿಸ್ಥಿತಿಯನ್ನು ಊಹಿಸಿಲ್ಲ. ಕೃತಕ ಬುದ್ಧಿಮತ್ತೆ ಎಷ್ಟೇ ಮುಂದುವರಿದರೂ, ಅದು ಮಾನವನ ಕೈಯಲ್ಲಿ ಒಂದು ಸೂಪರ್ ಟೂಲ್ ಆಗಿ ಉಳಿಯುತ್ತದೆ ಹಾಗೂ ಮಾನವನಿಗೆ ಒಂದು ಸ್ನೇಹಿತನಾಗಿ ಉಳಿಯುತ್ತದೆ ಎಂಬುದು ಪರಿಣತರ ಅಭಿಪ್ರಾಯ.
ಆದರೆ ಈಗ ಸಾಫ್ಟ್ ವೇರ್ ಡೆವಲಪರ್‌ಗಳು ಜಿಪಿಟಿ-೪ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಾಂಶಗಳ ಕೋಡಿಂಗ್ ಸಾಮರ್ಥ್ಯ ವನ್ನು ನೋಡಿ ಚಕಿತರಾಗಿದ್ದಾರೆ. ಆಶ್ಚರ್ಯವೆಂದರೆ, ಈ ಕೃತಕ ಬುದ್ಧಿಮತ್ತೆಯ ತಂತ್ರಾಂಶ ಗಳು ಮನುಷ್ಯರಿಗಿಂತ ಉತ್ತಮ ಕೋಡಿಂಗ್ ಸಾಮರ್ಥ್ಯ ಹೊಂದಿವೆ. ಗೂಗಲ್ ಅಭಿವೃದ್ಧಿಪಡಿಸಿರುವ ‘ಡೀಪ್ ಮೈಂಡ್-ಎಐ’ ಮನುಷ್ಯರಿಗಿಂತ ಉತ್ತಮ ಕೋಡ್ ಬರೆಯಬಲ್ಲದು. ಇದರಿಂದ ಅಭಿವೃದ್ಧಿಯ ಪಥದತ್ತ ದಾಪು ಗಾಲು ಹಾಕಲು ಸಾಧ್ಯವಿದೆ.
ಇದು ಸಾಫ್ಟ ವೇರ್ ಕ್ಷೇತ್ರದ ಎಂಜಿನಿಯರ್‌ಗಳ ವಲಯದಲ್ಲಿ ಆತಂಕವನ್ನು ಸೃಷ್ಟಿಸಿದೆ. ಈ ವೈಜ್ಞಾನಿಕ ಮತ್ತು ತಂತ್ರಜ್ಞಾನದ ಆವಿಷ್ಕಾರಗಳು ವೇಗವನ್ನು ಪಡೆಯುತ್ತಾ ಹೋಗುತ್ತವೆ. ಮಾನವನಿಗೆ ಆಗಸದಲ್ಲಿ ಹಾರಲು ಇನ್ನೂ ಮಿಲಿಯನ್ ವರ್ಷಗಳುಬೇಕು ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ೧೯೦೩ರಲ್ಲಿ ವರದಿಮಾಡಿತ್ತು. ಈ ವರದಿ ಪ್ರಕಟವಾದ ಕೇವಲ ೯ ವಾರಗಳ ಬಳಿಕ ರೈಟ್ ಸೋದರರು ಅದನ್ನು ಸಾಧಿಸಿದರು.
ಇದು ವೇಗದ ವಿಷಯವಾದರೆ, ಗೋಲ್ಡ್‌ಮನ್ ಸಾಕ್ಸ್ ಸಂಸ್ಥೆಯ ಆರ್ಥಿಕ ತಜ್ಞರ ಪ್ರಕಾರ ಓಪನ್-ಎಐ ಮತ್ತು ಬಾರ್ಡ್‌ನಂಥ ಕೃತಕ ಬುದ್ಧಿಮತ್ತೆ ತಂತ್ರಾಂಶಗಳಿಂದ ಸುಮಾರು ೩೦ ಕೋಟಿ ಉದ್ಯೋಗಗಳು ಯಾಂತ್ರೀಕರಣ ಗೊಳ್ಳುವ ಅಪಾಯವಿದೆ. ಶೇ. ೧೮ರಷ್ಟು ಕೆಲಸಗಳು ಕೃತಕ ಬುದ್ಧಿಮತ್ತೆಯ ಮುಖೇನ ಗಣಕೀಕರಣಗೊಳ್ಳುತ್ತವೆ. ಯುರೋಪ್‌ನಲ್ಲಿ ಶೇ. ೨೫ರಷ್ಟು ಉದ್ಯೋಗಗಳು ಕೃತಕ ಬುದ್ಧಿಮತ್ತೆಗೆ ಬಲಿಯಾಗಲಿವೆಯಂತೆ.
ಮುಂದೊಂದು ದಿನ ಆಗಬಹುದು ಎಂದುಕೊಂಡಿದ್ದ ಮಹತ್ತರ ಘಟನೆಯೊಂದು ಈಗ ಪಕ್ಕಾ ವಾಸ್ತವವಾಗಿದೆ. ಮನುಕುಲದ ಭವಿಷ್ಯವನ್ನೇ ಬದಲಿಸಬಲ್ಲ ಆವಿಷ್ಕಾರ ವೊಂದು ವಿಜ್ಞಾನಿಗಳ ಪ್ರಯೋಗಾಲಯಕ್ಕಷ್ಟೇ ಸೀಮಿತವಾಗದೆ, ಜನಸಾಮಾನ್ಯರಿಗೇ ನೇರವಾಗಿ ತಲುಪಿಬಿಟ್ಟಿದೆ! ಈ ಚಾಟ್ ಜಿಪಿಟಿ ೨೦೨೨ರ ನವೆಂಬರ್‌ನಲ್ಲಿ ಲೋಕಾರ್ಪಣೆಗೊಂಡು ಜನರಲ್ಲಿ ಸಂಭ್ರಮ, ಅನಿಶ್ಚಿತತೆ, ಶಂಕೆ, ಭಾವೋದ್ವೇಗ, ನಿರೀಕ್ಷೆ, ನಿರಾಕರಣೆಗಳೆಂಬ ತದ್ವಿರುದ್ಧವಾದ ಪ್ರತಿ ಕ್ರಿಯೆಗಳನ್ನು ಹುಟ್ಟುಹಾಕಿದೆ. ಅವು ಮುಂದಿನ ದಿನಗಳಲ್ಲಿ ನಮ್ಮ ಆಳಾಗಿ ಬರುತ್ತವೆಯೋ, ನಮ್ಮನ್ನೇ ಆಳಲು ತಯಾರಾಗಿಬಿಡುವ ಪ್ರಭುಗಳಾಗುತ್ತವೋ ಎಂಬ ಆತಂಕಕಾರಿ ಕಲ್ಪನೆ ಜನರಲ್ಲಿ ಸಹಜವಾಗಿ ಹುಟ್ಟಿಕೊಂಡಿದೆ.
ಕೃತಕ ಬುದ್ಧಿ ಮತ್ತೆಯು ಮಾನವರನ್ನು ಮೀರಿಸುತ್ತದೆ ಎಂಬ ಕಳವಳ ಸಹಜವಾದದ್ದು. ಆದ್ದರಿಂದ ಮುಂದಿನ ಆವಿಷ್ಕಾರ ಗಳನ್ನು ಹಾಗೂ ಅವುಗಳ ಮುನ್ನಡೆಯನ್ನು ಸಮಗ್ರವಾಗಿ ಪರಿಗಣಿಸಿ, ಜವಾಬ್ದಾರಿಯುತವಾಗಿ ಬಳಕೆ ಮಾಡುವುದುಅತ್ಯವಶ್ಯಕವಾಗಿದೆ. ‘ಅವೋ ಅಥವಾ ನಾವೋ?’ ಎಂಬ ಪೈಪೋಟಿಯ ಧೋರಣೆಯನ್ನು ಬೆಳೆಸಿಕೊಳ್ಳದೆ, ‘ನಮ್ಮೊಂದಿಗೆ ಅವು’ ಎಂಬ ದೃಷ್ಟಿಕೋನವನ್ನು ಹೊಂದಬೇಕಾಗಿದೆ.
(ಆಧಾರಗಳು ಮತ್ತು ಮಾಹಿತಿಯಿಂದ)