ಪರೀಕ್ಷಾ ಪದ್ದತಿ ಹೇಗಿದ್ದರೆ ಸೂಕ್ತ ?
ಸದಾಶಯ
ದಿಲೀಪ್ ಕುಮಾರ್‌ ಸಂಪಡ್ಕ
ಆಧುನಿಕ ಶೈಕ್ಷಣಿಕ ವ್ಯವಸ್ಥೆಯಲ್ಲಿ ಗುಣಮಟ್ಟದ ಕಲಿಕೆಗೆ ಪ್ರಾಶಸ್ತ್ಯ ನೀಡಲಾಗುತ್ತಿದೆ. ಈ ಗುಣಮಟ್ಟದ ಸಾಧನೆಯಲ್ಲಿ ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಗಳೆರಡೂ ಪ್ರಮುಖ ಪಾತ್ರ ವಹಿಸುತ್ತವೆ. ಜತೆಗೆ ಅಂಕಗಳಿಗೆಗೂ ಅಷ್ಟೇ ಪ್ರಾಮುಖ್ಯವಿದೆ. ವಿದ್ಯಾರ್ಥಿಯೊಬ್ಬ ಪಠ್ಯವಿಷಯವನ್ನು ಮನನಮಾಡಿಕೊಂಡೋ ಅಥವಾ ಕಂಠಪಾಠ ಮಾಡಿಯೋ, ಕೇಳಲಾದ ಪ್ರಶ್ನೆಗಳಿಗೆ ಸೀಮಿತ ಕಾಲಾವಧಿಯೊಳಗೆ ಉತ್ತರಿಸಿ ಹೆಚ್ಚೆಚ್ಚು ಅಂಕಗಳನ್ನು ಗಳಿಸು  ವಂತಾಗುವುದಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಇದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮೊದಲ ರ‍್ಯಾಂಕ್ ಅಥವಾ ‘ಔಟ್-ಆಫ್-ಔಟ್’ ಅಂಕಗಳನ್ನು ತಮ್ಮ ಮಕ್ಕಳು ಗಳಿಸಬೇಕು ಎಂದು ಹಂಬಲಿಸುವ ಪೋಷಕರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಹೀಗಾಗಿ ಶಾಲೆಯಲ್ಲಿನ ಬೋಧನೆಗೆ ಹೆಚ್ಚುವರಿಯಾಗಿ ಮಕ್ಕಳಿಗೆ ಟ್ಯೂಷನ್ ಕೊಡಿಸುವ ಪರಿಪಾಠವೂ ಬಹಳ ಕಾಲದಿಂದ ಬೆಳೆದುಕೊಂಡು ಬಂದಿದೆ. ಒಟ್ಟಾರೆ ಹೇಳುವುದಾದರೆ, ಇಂದಿನ ಮಕ್ಕಳು ಶೈಕ್ಷಣಿಕ ನೆಲೆಗಟ್ಟಿನಲ್ಲಿ ಹೆಚ್ಚು ಒತ್ತಡಕ್ಕೆ ಒಳಗಾಗಿರುವು ದಂತೂ ಸತ್ಯ!
ಪ್ರಶ್ನೆಗಳ ಮೂಲಕ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಪರೀಕ್ಷಿಸುವಿಕೆ ಎಂಬುದು ಮೌಲ್ಯಮಾಪನದ ಪರಿಕಲ್ಪನೆಗೆ ಒದಗಿರುವ ಸೀಮಿತ ವ್ಯಾಖ್ಯಾನ. ಆದರೆ, ಮೌಲ್ಯಮಾಪನದ ಹೆಸರಿನಲ್ಲಿ ವಿದ್ಯಾರ್ಥಿಗಳಲ್ಲಿ ಭೀತಿ ಮೂಡಿಸುವುದು ಸಾಧುವಲ್ಲ. ವಿದ್ಯಾರ್ಥಿಗಳು ಕಲಿಕಾ ಪ್ರಕ್ರಿಯೆಯಲ್ಲಿ ಸಂತಸ ದಾಯಕವಾಗಿ ತೊಡಗಿಸಿಕೊಳ್ಳುವುದು ಎಷ್ಟು ಮುಖ್ಯವೋ, ಮೌಲ್ಯಮಾಪನ ಪ್ರಕ್ರಿಯೆಯಲ್ಲೂ ಆತ್ಮವಿಶ್ವಾಸದಿಂದ ಪಾಲ್ಗೊಳ್ಳುವಂತೆ ಅವರನ್ನು ಸಜ್ಜುಗೊಳಿಸ ಬೇಕಾದ್ದೂ ಅಷ್ಟೇ ಮುಖ್ಯ. ವಿದ್ಯಾರ್ಥಿಯ ಸಮಗ್ರ ವ್ಯಕ್ತಿತ್ವ ವಿಕಾಸವನ್ನು ವ್ಯಾಪಕವಾಗಿ ಮತ್ತು ನಿರಂತರವಾಗಿ ಅಳೆಯುವ ಶೈಕ್ಷಣಿಕ ಮಾನದಂಡವೇ ಮೌಲ್ಯಮಾಪನ. ಇದು ಮಕ್ಕಳಲ್ಲಿ ಭೀತಿ ಹುಟ್ಟಿಸುವಂತಿರದೆ, ಅವರ ಕಲಿಕಾ ಬೆಳವಣಿಗೆ ಮತ್ತು ವಿಕಸನಕ್ಕೆ ಒತ್ತು ನೀಡುವಂತಿರಬೇಕು.
ವಿದ್ಯಾರ್ಥಿ ಕೇಂದ್ರಿತ ವಾಗಿದ್ದು, ವೈವಿಧ್ಯಮಯ ಆಸಕ್ತಿದಾಯಕ ಚಟುವಟಿಕೆಗಳನ್ನು ಒಳಗೊಂಡಿರುವ, ಅನ್ವಯ ಮತ್ತು ಕೌಶಲಗಳನ್ನು ಬೆಳೆಸುವಂತಿರುವ, ನೈದಾನಿಕ ಸ್ವರೂಪವನ್ನು ಹೊಂದಿರುವ ಚಟುವಟಿಕೆಯು ಉತ್ತಮ ಮೌಲ್ಯಮಾಪನದ ಲಕ್ಷಣವಾಗಿರುತ್ತದೆ. ೨೦೧೨-೧೩ರ ಶೈಕ್ಷಣಿಕ ವರ್ಷದಿಂದ, ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನವನ್ನು ರಾಜ್ಯಾದ್ಯಂತದ ಎಲ್ಲಾ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲೂ ಆರ್‌ಟಿಐ ಸೆಕ್ಷನ್ ೨೯ (ಎಚ್) ಅನ್ವಯ ಅನುಷ್ಠಾನಕ್ಕೆ ತರಲಾಗಿದೆ.
ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಎಂದರೆ, ವಿದ್ಯಾರ್ಥಿಗಳ ಕಲಿಕಾ ಚಟುವಟಿಕೆ, ಪಠ್ಯೇತರ ಚಟುವಟಿಕೆ ಮತ್ತು ಸಹಜ ವರ್ತನೆಗಳನ್ನು ನಿರಂತರ ಹಾಗೂ ವ್ಯಾಪಕವಾಗಿ ಗಮನಿಸಿ, ನಿರ್ದಿಷ್ಟಪಡಿಸಿದ ಪಠ್ಯಕ್ಕೆ ಸೀಮಿತವಾಗದೆ ವಿದ್ಯಾರ್ಥಿಯನ್ನು ವಿವಿಧ ಆಯಾಮಗಳಲ್ಲಿ ಅರ್ಥೈಸಿಕೊಳ್ಳುವು ದಾಗಿದೆ. ಇದರಿಂದಾಗಿ ವಿದ್ಯಾರ್ಥಿಯ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಪೋಷಿಸಲು ಸಾಧ್ಯವೆಂದು ಮನಗಾಣಲಾಗಿದೆ. ಇದಕ್ಕೂ ಮುಂಚೆ, ಜ್ಞಾನಾತ್ಮಕ ವಲಯಕ್ಕೆ ಮಾತ್ರವೇ ಒತ್ತುನೀಡಿ ಮೌಲ್ಯಮಾಪನ ಮಾಡಲಾಗುತ್ತಿತ್ತು. ಇದರಲ್ಲಿ ‘ಉತ್ತೀರ್ಣ’ ಮತ್ತು ‘ಅನುತ್ತೀರ್ಣ’ ಎಂಬ ಪರಿಭಾಷೆಗಳಿಗೆ ಪ್ರಾಮುಖ್ಯ ದೊರೆಯುತ್ತಿತ್ತು. ಆದರೆ, ಶೈಕ್ಷಣಿಕ ವಿಚಾರಗಳನ್ನು ಮನೋವೈಜ್ಞಾನಿಕ ನೆಲೆಯಲ್ಲಿ ಅವಲೋಕಿಸಿದಾಗ ಹಾಗೂ ಮಕ್ಕಳ ಹಕ್ಕುಗಳಿಗೆ ಮಾನ್ಯತೆ ಹೆಚ್ಚಾದಾಗ ‘ಪರೀಕ್ಷೆ’ ಎಂಬ ಪರಿಕಲ್ಪನೆಗೆ ವಿಶಾಲವಾದ ಅರ್ಥ ಹಾಗೂ ವ್ಯಾಪ್ತಿಯನ್ನು ಕಂಡುಕೊಳ್ಳಲಾಯಿತು.
ವಿದ್ಯಾರ್ಥಿಯು ಶಾಲೆಯಲ್ಲಿ ಕಲಿಯುವ ಪ್ರತಿಯೊಂದು ವಿಚಾರವೂ ಶಿಕ್ಷಣವೇ ಎಂಬ ಗ್ರಹಿಕೆಗೆ ಹೆಚ್ಚು ಒತ್ತುನೀಡಲಾಯಿತು. ವಿದ್ಯಾರ್ಥಿಯಲ್ಲಿ ಹುಟ್ಟಿ ನಿಂದಲೇ ಹತ್ತು ಹಲವು ವಿಚಾರಗಳು ಮತ್ತು ಸಾಮರ್ಥ್ಯಗಳು ಹುದುಗಿರುತ್ತವೆ, ಶಿಕ್ಷಕರು ಅವನ್ನು ಹೊರತೆಗೆಯುವಂತಾಗಬೇಕು ಎಂದು ಪ್ರತಿಪಾದಿಸ ಲಾಯಿತು. ಇದರಿಂದ ವಿದ್ಯಾರ್ಥಿಯು ಅನುತ್ತೀರ್ಣ ಎಂಬ ಪರಿಧಿಯಿಂದ ಹೊರಬರುವ ದಾರಿ ಸುಗಮವಾದಂತಾಯಿತು. ಅನುತ್ತೀರ್ಣ ಗೊಳಿಸದೆ ಎಲ್ಲ ಮಕ್ಕಳನ್ನೂ ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡುವ ಅಂಶವನ್ನು ಜಾರಿಗೊಳಿಸಲಾಯಿತು.
ಶೈಕ್ಷಣಿಕ ವ್ಯವಸ್ಥೆಯಲ್ಲಿ ‘ಅನುತ್ತೀರ್ಣ ಪದ್ಧತಿ’ಯನ್ನು ಕೈಬಿಟ್ಟ ನಂತರ ಪರೀಕ್ಷೆಯ ವಿಷಯದಲ್ಲಿ ವಿವಿಧ ಆಯಾಮದಲ್ಲಿ ಚರ್ಚೆಗಳು ಶುರುವಾದವು. ‘ಶೈಕ್ಷಣಿಕ ಅರ್ಹತೆಯನ್ನು ನೋಡದೆಯೇ ಮಕ್ಕಳನ್ನು ಮುಂದಿನ ತರಗತಿಗಳಿಗೆ ಬಡ್ತಿ ನೀಡುವುದು ಸರಿಯಾದ ಕ್ರಮವಲ್ಲ. ಅನುತ್ತೀರ್ಣ ಪದ್ಧತಿ ಇಲ್ಲದಿರುವುದರಿಂದ ಇಂದಿನ ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿಯಿಲ್ಲ. ಕಲಿಕೆ ಉತ್ತಮವಾಗಬೇಕಾದರೆ ಉತ್ತೀರ್ಣ/ಅನುತ್ತೀರ್ಣ ಪದ್ಧತಿ ಇರಲೇಬೇಕು. ಇಲ್ಲದಿದ್ದರೆ ಕಲಿಕೆಯಲ್ಲಿ ಮುಂದಿರುವ ಮಕ್ಕಳಿಗೆ ಅನ್ಯಾಯವಾಗುತ್ತದೆ.
ಕಲಿಕೆಯಲ್ಲಿ ಹಿಂದೆ ಬಿದ್ದಿರುವ ಮಕ್ಕಳನ್ನು ಉತ್ತೀರ್ಣಗೊಳಿಸುವುದರಿಂದ ಎಸ್‌ಎಸ್‌ಎಲ್‌ಸಿಯ ಪಬ್ಲಿಕ್ ಪರೀಕ್ಷೆಯ ಸಮಯದಲ್ಲಿ ಅವರಿಗೆ ದಿಕ್ಕು ತೋಚದಂತಾಗುತ್ತದೆ. ಆರಂಭಿಕ ತರಗತಿಗಳಲ್ಲೇ ಮಕ್ಕಳಿಗೆ ಪರೀಕ್ಷೆಯ ಬಗ್ಗೆ ಸರಿಯಾದ ಕಲ್ಪನೆ ಮೂಡಿಸದೆ ಪ್ರೌಢಾವಸ್ಥೆಯಲ್ಲಿ ಒಮ್ಮೆಲೇ ಫೇಲ್ ಮಾಡಿದರೆ, ಮಕ್ಕಳಿಗೆ ಆ ಅನುಭವವನ್ನು ತಡೆದುಕೊಳ್ಳುವ ಗಟ್ಟಿತನ ಅಥವಾ ತಾಳ್ಮೆಯಿಲ್ಲದೆ, ದಾರಿಗಾಣದೆ ಆತ್ಮಹತ್ಯೆಯಂಥ ದುಡುಕಿನ ಹೆಜ್ಜೆ ಯಿಡುತ್ತಾರೆ’ ಎಂಬೆಲ್ಲ ಮಾತುಗಳು ಈ ವೇಳೆ ಬಂದಿದ್ದುಂಟು. ಆದರೆ ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಯು ತೊಡಗಿಸುವ ಪ್ರತಿ ಹೆಜ್ಜೆ ಯನ್ನೂ ಮೌಲ್ಯಮಾಪನ ಮಾಡಿ ಅಂತಿಮ ಫಲಿತಾಂಶವನ್ನು ನೀಡಲಾಗುತ್ತಿದೆ.
ಇದರ ಮಧ್ಯದಲ್ಲಿ, ‘ಇಂದಿನ ಮಕ್ಕಳಿಗೆ ವಿಷಯವನ್ನು ತುರುಕುವ ಕೆಲಸವಾಗುತ್ತಿದೆ; ಆದ್ದರಿಂದ ತೆರೆದ ಪುಸ್ತಕದ ಪರೀಕ್ಷೆ ಅಳವಡಿಸುವುದು ಸೂಕ್ತ’ ಎಂಬ ಮಾತುಗಳೂ ಕೇಳಿಬರುತ್ತಿವೆ. ವಿಷಯ-ವಸ್ತುಗಳನ್ನು ಪರೀಕ್ಷಿಸಲು ಪಠ್ಯ ಪುಸ್ತಕಗಳಿಂದ ನೇರವಾಗಿ ಪ್ರಶ್ನೆಗಳನ್ನು ಕೇಳಿದರೆ, ಮಕ್ಕಳು ಕಂಠಪಾಠ ಮಾಡುವ ಅಭ್ಯಾಸಕ್ಕೆ ಅಂಟಿಕೊಳ್ಳುತ್ತಿದ್ದಾರೆ. ಇದರ ಬದಲಿಗೆ ಅನ್ವಯಿಕ ಪ್ರಶ್ನೆಗಳನ್ನು ಕೇಳಬೇಕು ಎನ್ನಲಾಗುತ್ತಿದೆ. ಇನ್ನೊಂದೆಡೆ, ವರ್ಷಪೂರ್ತಿ ಓದಿರುವ ವಿಷಯಗಳ ಕುರಿತಾದ ಪ್ರಶ್ನೆಗಳಿಗೆ ವಿದ್ಯಾರ್ಥಿಯೊಬ್ಬ ಮೂರು ಗಂಟೆಯೊಳಗೆ ಉತ್ತರಿಸಿ ತಾನೊಬ್ಬ ಬುದ್ಧಿವಂತ ಎಂಬ ಪಟ್ಟ ಪಡೆಯುವನಮ್ಮ ಶಿಕ್ಷಣ ವ್ಯವಸ್ಥೆಯು ಸಾಧುವೇ? ಎಂಬ ವಿಮರ್ಶಾತ್ಮಕ ಮಾತುಗಳೂ ಕೇಳಿಬರುತ್ತಿವೆ.
ಪರೀಕ್ಷೆಯಲ್ಲಿ ಬರುವ ಪ್ರಶ್ನೆಗಳು ಮಾತ್ರ ವಿದ್ಯಾರ್ಥಿಗಳ ಜೀವನವನ್ನು ರೂಪಿಸುತ್ತವೆಯೇ? ಪರೀಕ್ಷೆಗಳು ಜೀವನ ಕೌಶಲವನ್ನು ತಿಳಿಸಿಕೊಡುತ್ತಿವೆಯೇ? ಇಂದಿನ ಪರೀಕ್ಷೆಯಲ್ಲಿ ಅನುತ್ತೀರ್ಣ ಪದ್ಧತಿ ಇಲ್ಲದಿರುವುದರಿಂದ ಪರೀಕ್ಷೆಯ ಗೌರವ ಉಳಿಯುತ್ತದೆಯೇ? ಒಂದು ವೇಳೆ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳುಗಳಿಸುವ ಅಂಕಗಳಿಂದ ಅವರ ಬುದ್ಧಿವಂತಿಕೆಯನ್ನು ಅಳೆಯುವುದಾದರೆ, ಪಾಠಗಳನ್ನು ಬೋಧಿಸುವ ಅವಶ್ಯಕತೆಯೇನು? ಪಾಠಗಳ ಬದಲಿಗೆ ಆಯ್ದ ಪ್ರಶ್ನೆಗಳ ಉತ್ತರಗಳನ್ನು ಕಂಠಪಾಠ ಮಾಡಿಸಿ ಉತ್ತಮ ಅಂಕಗಳನ್ನು ದೊರಕಿಸಿಕೊಡುವ ವ್ಯವಸ್ಥೆ ಮಾಡಬಹುದಲ್ಲವೇ? ಗ್ರೇಡ್ ಪದ್ಧತಿಯ ಜಾರಿಯನಂತರವೂ ಅಂಕಗಳನ್ನು ನೀಡುವುದು ಸರಿಯಾದ ಕ್ರಮವೇ? ಹೀಗೆ ಪರೀಕ್ಷೆಯ ಕುರಿತಾಗಿ ಹತ್ತು ಹಲವು ಪ್ರಶ್ನೆಗಳು ಉದ್ಭವವಾಗುತ್ತಿರುತ್ತವೆ.
ಸರಕಾರಿ ಮತ್ತು ಖಾಸಗಿ ಶಾಲೆಗಳು ಒಂದೇ ಮಂಡಳಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಹೆಚ್ಚಿನ ಖಾಸಗಿ ಶಾಲೆಗಳು ಖಾಸಗಿ ಪಬ್ಲಿಕೇಷನ್‌ನ ಪಠ್ಯಪುಸ್ತಕಗಳನ್ನು ಮಕ್ಕಳಿಗೆ ನೀಡುತ್ತಿವೆ. ಇದರಿಂದ ಮಕ್ಕಳು ಜ್ಞಾನವನ್ನು ದಕ್ಕಿಸಿ ಕೊಳ್ಳುವ ಹಂತದಲ್ಲಿ ಶೈಕ್ಷಣಿಕ ಅಸಮಾನತೆ ಉಂಟಾಗುತ್ತಿದೆ.ಇದು ಪರೀಕ್ಷಾ ಪದ್ಧತಿಯ ಮೇಲೂ ಪ್ರಭಾವ ಬೀರುತ್ತದೆ. ಇಂದಿನ ಬಹುತೇಕ ಪೋಷಕರು ಬೋರ್ಡ್ ಪರೀಕ್ಷೆಗಳನ್ನು ಪ್ರಾಥಮಿಕ ಹಂತದಲ್ಲಿಯೇ ಆರಂಭಿಸಬೇಕು ಎಂಬ ವಿಚಾರಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಆದರೆ ಆರ್‌ಟಿಇ ಕಾಯ್ದೆಯ ಕೆಲವೊಂದು ಅಂಶಗಳು ಇದಕ್ಕೆ ಅವಕಾಶವನ್ನು ನೀಡುತ್ತಿಲ್ಲ.
ಇನ್ನೂ ಮುಂದುವರಿದು, ಒಂದೊಮ್ಮೆ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡರೆ ಒಂದೆರಡು ತಿಂಗಳಲ್ಲಿ ಸಪ್ಲಿಮೆಂಟರಿ ಪರೀಕ್ಷೆ ಬರೆದು ಪಾಸು ಮಾಡಿ ಕೊಳ್ಳುವ ವ್ಯವಸ್ಥೆ ನಮ್ಮಲ್ಲಿದೆ. ಒಂದು ವರ್ಷದ ಅವಧಿಯಲ್ಲಿ ಓದಿ ಪರೀಕ್ಷೆಯನ್ನು ಪಾಸು ಮಾಡಿಕೊಳ್ಳಲಾಗದ ವಿದ್ಯಾರ್ಥಿ,ಎರಡು ತಿಂಗಳ ಅಲ್ಪಾವಧಿಯಲ್ಲಿ ಓದಿ ಏಕಾಏಕಿ ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಹೇಗೆ ಪಾಸಾಗುತ್ತಾನೆ ಎನ್ನುವುದರ ಬಗ್ಗೆಯೂ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ.
ಒಟ್ಟಿನಲ್ಲಿ, ಇಂದಿನ ಪರಿಸ್ಥಿತಿಯಲ್ಲಿ ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅಷ್ಟೊಂದು ಒಲವಿಲ್ಲ. ಪೋಷಕರು ಮಾತ್ರ ತಮ್ಮ ಮಕ್ಕಳು ಹೆಚ್ಚೆಚ್ಚು ಅಂಕಗಳನ್ನು ಪಡೆಯಬೇಕು ಎಂದು ಬೊಬ್ಬೆ ಹೊಡೆಯುತ್ತಿರುತ್ತಾರೆ. ಅಂಕಗಳ ಸುತ್ತ ಗಿರಕಿ ಹೊಡೆಯುತ್ತಿರುವ ನಮ್ಮ ಪರೀಕ್ಷಾ ಪದ್ಧತಿಯ ಬಗ್ಗೆ ಸಮಾಜದಲ್ಲಿ ಮಿಶ್ರ ಪ್ರತಿಕ್ರಿಯೆಯಿದೆ. ಹೀಗಾಗಿ ಪರೀಕ್ಷೆಯನ್ನು ನಡೆಸುವ ವಿಷಯದಲ್ಲಿ ಸೂಕ್ತ ನಿರ್ಧಾರವನ್ನು ಕೈಗೊಳ್ಳುವ ಬಗ್ಗೆ ಕ್ಷೇತ್ರತಜ್ಞರು ಅವಲೋಕನಕ್ಕೆ ಮುಂದಾಗಬೇಕಿದೆ. ಪರೀಕ್ಷೆಗಳ ಬಗೆಗಿನ ಉತ್ತಮ ನಿರ್ಧಾರವು ಮುಂದಿನ ದಿನಗಳಲ್ಲಿ ಜಾರಿಯಾಗಲಿ ಎಂದು ಆಶಿಸೋಣ.