ಏನಾದರು ಆಗು, ಮೊದಲು ರಕ್ತದಾನಿಯಾಗು
ತನ್ನಿಮಿತ್ತ
ಡಾ.ಕರವೀರಪ್ರಭು ಕ್ಯಾಲಕೊಂಡ
ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಸಾಮಾನ್ಯವಾಗಿ ೫ ಲೀಟರ್ ರಕ್ತ ಇರುತ್ತದೆ. ಒಬ್ಬ ವ್ಯಕ್ತಿಯಿಂದ ಒಂದು ಸಲಕ್ಕೆ ೩೦೦ ಮಿ.ಲೀ. ರಕ್ತ ವನ್ನಷ್ಟೇತೆಗೆದುಕೊಳ್ಳುವರು. ಇದು ಒಟ್ಟು ರಕ್ತದ ಶೇ.೬ರಷ್ಟು ಮಾತ್ರ. ಹೀಗೆ ತೆಗೆದುಕೊಂಡ ರಕ್ತವು ಕೆಲವೇ ಗಂಟೆಗಳಲ್ಲಿ ಪುನರುತ್ಪತ್ತಿಯಾಗುತ್ತದೆ.
ರಕ್ತದಾನಕ್ಕಿಂತ ಶ್ರೇಷ್ಠವಾದ ದಾನ ಇನ್ನೊಂದಿಲ್ಲ ಎಂದು ಹೇಳುತ್ತಾರೆ. ರಕ್ತದಾನ ಮಾಡಿ ಜೀವ ಉಳಿಸುವ ಮಹತ್ವದ ಕೆಲಸವನ್ನು ಯಾರು ಬೇಕಾದರೂ ಮಾಡಬಹುದು. ಅದಕ್ಕೆ ಲಿಂಗ ತಾರತಮ್ಯ ಇಲ್ಲ. ೧೮ರಿಂದ ೬೦ ವರ್ಷ ವಯಸ್ಸಿನೊಳಗಿನ ಎಲ್ಲ ಆರೋಗ್ಯವಂತರೂ ರಕ್ತದಾನ ಮಾಡಬಹುದಾಗಿದೆ. ರಕ್ತದಾನ ಮಾಡುವುದರಿಂದ ದೇಹದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮಗಳು ಆಗುವುದಿಲ್ಲ.
ರಕ್ತದಾನ ಮಾಡಿದ ಕೆಲವು ತಾಸುಗಳೊಳಗೆ ಅಷ್ಟು ಪ್ರಮಾಣದ ರಕ್ತ ದಾನಿಯ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಈ ತಿಳಿವಳಿಕೆ  ಯಿಂದಾಗಿ ಇಂದು ರಕ್ತದಾನದತ್ತ ಹೆಚ್ಚು ಹೆಚ್ಚು ಜನ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಇದರಿಂದಾಗಿ ರಕ್ತದಾನಿಗಳ ಸಂಖ್ಯೆಯಲ್ಲಿಯೂ ಗಮನಾರ್ಹ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ‘ರಕ್ತದಾನಿಗಳ ಸಮೀಪ ಹೃದಯಾಘಾತ ಸುಳಿಯುವುದಿಲ್ಲ‘- ಫಿನ್‌ಲ್ಯಾಂಡ್ ವೈದ್ಯ ವಿಜ್ಞಾನಿಗಳ ಸಂಶೋಧನಾ ಸುದ್ದಿ ವೈದ್ಯವಾರ್ತೆಗಳಲ್ಲಿ ದಪ್ಪಕ್ಷರದಲ್ಲಿ ಅಚ್ಚಾಗಿ ಎಲ್ಲರ ಗಮನ ಸೆಳೆದಿದೆ.
ಇದು ಖಂಡಿತವಾಗಿ ಅವಸರದ ಹೇಳಿಕೆಯಲ್ಲ. ಹತ್ತಾರು ವರ್ಷಗಳ ಅಧ್ಯಯನದ ಫಲ. ಸಹಸ್ರಾರು ಜನರನ್ನು ಅಭ್ಯಸಿಸಿ, ವಿವರ ಸಂಗ್ರಹಿಸಿ, ವಿಷಯ ವಿಶ್ಲೇಷಿಸಿ, ವಿಮರ್ಶಿಸಿ ಈ ನಿರ್ಣಯಕ್ಕೆ ವೈದ್ಯ ವಿಜ್ಞಾನಿಗಳು ಬಂದಿರುವರು. ಈ ಸುದ್ದಿಯು ರಕ್ತ ಕೊಡಲು ಹೆದರುತ್ತಿದ್ದವರಿಗೆ ಹುರುಪು, ಹುಮ್ಮಸ್ಸು, ಧೈರ್ಯ ತುಂಬುವಂಥದ್ದಾಗಿದೆ. ‘ರಕ್ತದಾನವ ಮಾಡಿ ದೀರ್ಘಾಯುವಾಗು, ನಿರಕ್ತ ಜೀವನಗಳಿಗೆ ಭರವಸೆಯ ಬೆಳಕು ಕೊಡು, ಯುಕ್ತ ಕರ್ತವ್ಯವನ್ನೆಸಗಿ ಸಾರ್ಥಕವಾಗು, ಶಕ್ತರಿಗೆ ದಾನವೇ ಮುಕ್ತಿಪಥ ಅತ್ರಿಸೂನು’ ಎನ್ನುತ್ತದೆ ಒಂದು ಕವಿವಾಣಿ.
ರಕ್ತ ಜೀವದ್ರವ್ಯ. ಅಪಘಾತಗಳಿಂದ ಅಪಾಯದ ಅಂಚಿನಲ್ಲಿದ್ದವರಿಗೆ, ಶಸಚಿಕಿತ್ಸೆ ಮಾಡುವಾಗ ರಕ್ತಪೂರಣ ಅವಶ್ಯ. ಇದರಿಂದ ಜೀವದಾನ ಮಾಡಿ ದಂತಾಗುವುದು. ಈ ತಂತ್ರ ವೈದ್ಯಕೀಯ ಕ್ಷೇತ್ರದಲ್ಲಿ ದಿನಗಳೆದಂತೆ ಅಪರಿಮಿತವಾಗಿ ಬೆಳೆದಿದೆ, ಮಹತ್ವ ಪಡೆದಿದೆ. ಪ್ರಾರಂಭದ ಕೆಲದಿನಗಳಲ್ಲಿ ರಕ್ತವನ್ನು ಹೆಚ್ಚು ಕಾಲದವರೆಗೆ ಇಡಲು ಸಾಧ್ಯವಿರಲಿಲ್ಲ. ಮುಂದೆ ಶೀತಾಗಾರಗಳಲ್ಲಿ ರಕ್ತವನ್ನು ಇಟ್ಟರೆ ಅದು ಬೇಗನೆ ಕೆಡದು ಎಂಬ ಸಂಗತಿ ತಿಳಿಯಿತು. ರಕ್ತ ಶೇಖರಣೆ ಮಾಡುವ ಹಾಗೂ ಕೆಡದಂತೆ ಇಡುವ ಸ್ಥಳಕ್ಕೆ ‘ಬ್ಲಡ್ ಬ್ಯಾಂಕ್’ ಅಥವಾ ‘ರಕ್ತ ಭಂಡಾರ’ ಎಂದು ಕರೆಯುವರು.
ರಕ್ತ ದಾನಿಗಳನ್ನು ರಕ್ತ ಭಂಡಾರದ ವೈದ್ಯರು ಪರೀಕ್ಷಿಸುತ್ತಾರೆ. ದಾನಿಯ ವಯಸ್ಸು, ಲಿಂಗ, ತೂಕ ದಾಖಲಿಸುತ್ತಾರೆ. ನೆಗಡಿ, ಕೆಮ್ಮು, ಜ್ವರ, ಗಣಜಲಿ, ಮಂಗನ ಬಾವು ಮುಂತಾದ ರೋಗಗಳಿಂದ ಬಳಲುತ್ತಿರುವರೋ ಹೇಗೆ ಎಂಬುದನ್ನು ಪರೀಕ್ಷಿಸುತ್ತಾರೆ. ಮನುಕುಲದ ಮಾರಕ ರೋಗಳಾದ ಎಚ್‌ಐವಿ, ಏಡ್ಸ್ ಸೋಂಕಿಗೆ ಸಿಲುಕಿಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳುತ್ತಾರೆ. ವಯಸ್ಸು ಹೆಚ್ಚಾಗಿದ್ದರೆ ಹೃದಯಾಘಾತ ಹಾಗೂ ಮಧುಮೇಹ ಮುಂತಾದರೋಗಗಳ ಬಗ್ಗೆ ಪರೀಕ್ಷಿಸುತ್ತಾರೆ.
ದೀರ್ಘಾವಧಿ ರೋಗಗಳಾದ ಸಿಫಿಲಿಸ್, ಮಲೇರಿಯಾ, ಹೆಪಟೈಟಿಸ್-ಬಿ, ಬ್ರುಸೆಲ್ಲೊಸಿಸ್, ಹೆಪಟೈಟಿಸ್-ಸಿ ಮುಂತಾದ ರೋಗಗಳಿಂದ ದಾನಿಯು ಬಳಲುತ್ತಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುತ್ತಾರೆ. ದಾನಿಯ ರಕ್ತವನ್ನು ಪರೀಕ್ಷಿಸಿ ಸಾಕಷ್ಟು ಹಿಮೋಗ್ಲೋಬಿನ್ ಇದೆಯೋ ಇಲ್ಲವೋ ಎಂಬುದನ್ನುನಿರ್ಧರಿಸುತ್ತಾರೆ. ದಾನಿಯ ರಕ್ತದ ಗುಂಪು ಮತ್ತು ರಕ್ತಗೋತ್ರ ನಿಖರ ಪಡಿಸುತ್ತಾರೆ. ಇವೆಲ್ಲ ಪರೀಕ್ಷೆಗಳನ್ನು ಮುಗಿಸುವುದೆಂದರೆ, ಸಂಪೂರ್ಣ ಆರೋಗ್ಯ ಪರೀಕ್ಷೆಯೇ ಆಗುವುದು. ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಸಾಮಾನ್ಯವಾಗಿ ಐದು ಲೀಟರ್ ರಕ್ತ ಇರುತ್ತದೆ. ಒಬ್ಬ ವ್ಯಕ್ತಿಯಿಂದ ಒಂದು ಸಲಕ್ಕೆ ೩೦೦ ಮಿ.ಲೀ. ರಕ್ತವನ್ನು ಮಾತ್ರ ತೆಗೆದುಕೊಳ್ಳುವರು.
ಇದು ಒಟ್ಟು ರಕ್ತದ ಶೇ.೬ರಷ್ಟು ಮಾತ್ರ. ೩೦೦ ಮಿ.ಲೀ. ರಕ್ತವನ್ನು ಒಂದು ‘ಯುನಿಟ್’ ಎಂದು ಕರೆಯುತ್ತಾರೆ. ಈ ರೀತಿ ತೆಗೆದುಕೊಂಡ ರಕ್ತವು ಕೆಲವೇ ಗಂಟೆಗಳಲ್ಲಿ ಪುನರುತ್ಪತ್ತಿಯಾಗುತ್ತದೆ. ಒಬ್ಬ ವ್ಯಕ್ತಿ ಮೂರು ತಿಂಗಳಿಗೊಮ್ಮೆ ಒಂದೊಂದು ಯುನಿಟ್ ರಕ್ತವನ್ನು ದಾನಮಾಡಬಹುದು.ರಕ್ತದಾನ ದಿಂದ ಶಕ್ತಿ ಕಳೆದುಕೊಳ್ಳುತ್ತೇವೆ ಎಂಬುದು ತಪ್ಪು ಕಲ್ಪನೆಯಷ್ಟೇ! ಅಸ್ವಾಭಾವಿಕ ನಾಡಿಬಡಿತ (ಅಚ್ಞಿಟ್ಟಞZ moಛಿ) ಹೊಂದಿರುವವರು ರಕ್ತದಾನಿಯಾಗುವ ಅರ್ಹತೆ ಪಡೆಯುವುದಿಲ್ಲ. ದಾನಿಯ ನಾಡಿಬಡಿತವು ಪ್ರತಿ ನಿಮಿಷಕ್ಕೆ ೯೦ಕ್ಕಿಂತ ಹೆಚ್ಚು ಇರಬಾರದು. ರಕ್ತದೊತ್ತಡ ಹೆಚ್ಚಿದ್ದವರು(ವಿಕುಂಚನ ಒತ್ತಡ ೯೦ ಮಿ.ಮೀ.ಗಿಂತ ಹೆಚ್ಚು) ರಕ್ತದಾನ ಮಾಡಿದರೆ ಮಿದುಳಿನಲ್ಲಿ ರಕ್ತಸ್ರಾವವಾಗುವ ಸಾಧ್ಯತೆಗಳಿರುವುದರಿಂದ ಅಂಥವರ ರಕ್ತವನ್ನು ತೆಗೆಯಲಾಗುವುದಿಲ್ಲ.
ಮಧುಮೇಹಿ ಹಾಗೂ ಹೃದ್ರೋಗಿಗಳು ರಕ್ತದಾನಿಯಾಗಲು ಯೋಗ್ಯರಲ್ಲ. ರಕ್ತದಾನದಿಂದ ಪ್ರಸಾರವಾಗಬಹುದಾದ ರೋಗಗಳಿಂದ ಅಂದರೆ ಎಚ್‌ಐವಿ, ಏಡ್ಸ್, ಸಿಫಿಲಿಸ್, ಮಲೇರಿಯಾ ಸೋಂಕು, ಯಕೃತ್ ಉರಿತ ಇತ್ಯಾದಿಗಳಿಂದ ರಕ್ತದಾನಿ ಮುಕ್ತವಾಗಿರಬೇಕು. ರಕ್ತದಾನಿಯಾಗಲು ಇವೆಲ್ಲ ಅರ್ಹತೆಗಳನ್ನುಪಡೆದಿರಬೇಕು. ಇಷ್ಟೆಲ್ಲಾ ಚೌಕಸಿ ಮಾಡಿ ತೀರ್ಮಾನಿಸುವ ಉದ್ದೇಶ- ರಕ್ತದಾನದಿಂದ ರಕ್ತ ಪಡೆದವನಿಗೆ ಜೀವದಾನ ವಾಗಬೇಕೆ ವಿನಾ ಸಾವಿನ ಬೀಜ ಬಿತ್ತಬಾರದು ಎಂಬುದು.
ಆರೋಗ್ಯವಂತ ಯುವಕ-ಯುವತಿಯರು ರಕ್ತದಾನ ಮಾಡುವುದು ಒಂದು ಸಾಮಾಜಿಕ ಕರ್ತವ್ಯ ಎಂದು ಭಾವಿಸಬೇಕು. ಇದಕ್ಕಾಗಿ ಆಸ್ಪತ್ರೆಗಳಲ್ಲಿ ರಕ್ತ ಬ್ಯಾಂಕುಗಳು ಇವೆ. ಇವನ್ನು ಸಂಪರ್ಕಿಸಿದರೆ ದಾನವೂ ಪೂರಣವೂ ವ್ಯವ ಸ್ಥಿತವಾಗಿ ನಡೆದು ದಾನಿಗೆ ತೃಪ್ತಿಯೂ ಗ್ರಾಹಿಗೆ ಪುನರ್ಜ ನ್ಮವೂ ಒದಗುತ್ತದೆ. ಲಕ್ಷಾಂತರ ಮಂದಿ ಪ್ರಾಣಾಪಾಯದಿಂದ ಪಾರಾಗುತ್ತಾರೆ.
‘ಹೃದಯದಬ್ಬರವೇನು ಹೊಟ್ಟೆಯುಬ್ಬರದಂತೆ, ಅದರಿಳಿತ ಕೊರಳ ನಾಳದ ಸದ್ದಿನಿಂದ, ಅದೆ ನಗುವುದುಗುಡಗಳು, ಅದೆ ಹೊಗಳು ತೆಗಳುಗಳು, ಅದನಿಳಿಸೆ ಶಾಂತಿಯಲೊ ಮಂಕುತಿಮ್ಮ’ ಎಂದಿದ್ದಾರೆ ಡಿವಿಜಿ. ರಕ್ತದಾನ ಇಂಥ ಶಾಂತಿದಾಯಕ ಸೇವೆ. ಇದರಿಂದ ಹೃದಯ ನಿಜವಾಗಿ ಸಹೃದಯ ವಾಗುತ್ತದೆ.
ಸಮೀಕ್ಷಕರ ಪ್ರಕಾರ ಒಬ್ಬ ಭಾರತೀಯ ವರ್ಷದಲ್ಲಿ ಒಂದು ಸಲವಾದರೂ ರಕ್ತದಾನ ಮಾಡಿದರೆ ದೇಶದಲ್ಲಿ ಅವಶ್ಯವಿರುವ ೯೮ ಲಕ್ಷ ಯುನಿಟ್ ರಕ್ತ ಸಂಗ್ರಹ ಅಸಾಧ್ಯವೇನಲ್ಲ! ರಕ್ತದಾನ ಮಾಡಲು ಜನರು ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು. ಸ್ವಯಂ ರಕ್ತದಾನಿಗಳ ದಳಗಳನ್ನು ತಯಾರು ಮಾಡಬೇಕು. ಆರೋಗ್ಯ ಇಲಾಖೆ, ಭಾರತೀಯ ವೈದ್ಯ ಸಂಘ, ರೋಟರಿ, ಲಯನ್ಸ್ ಸಂಸ್ಥೆ, ರೆಡ್ ಕ್ರಾಸ್ ಸೊಸೈಟಿ ಇನ್ನಿತರ ಸಮಾಜ ಸೇವಾ ಸಂಸ್ಥೆಯವರು ನಡೆಸುವ ರಕ್ತದಾನದ ಶಿಬಿರಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ರಕ್ತದಾನ ಮಾಡಬೇಕು. ರಕ್ತದ ತುರ್ತುಕರೆಗೆ ಓಗೊಡುವ ಸಂಪ್ರದಾಯ ಬೆಳೆಯಬೇಕು. ಈ ರೀತಿಯ ಕ್ರಮಗಳಿಂದ ನಾವು ರಕ್ತದಾನವನ್ನು ಮಾಡುವ ಅಭ್ಯಾಸ ರೂಢಿಸಿಕೊಂಡರೆ, ಅದು ನಮ್ಮ ಸಮಾಜಕ್ಕೆ ಮತ್ತುದೇಶಕ್ಕೆ ಸಲ್ಲಿಸಬಹುದಾದ ಅತ್ಯಂತ ಪ್ರಾಮಾಣಿಕ ಹಾಗೂ ಉಲ್ಲೇಖನೀಯ ಸೇವೆಯಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.
ನೆನಪಿಡಿ:ಬೇರೆ ಯಾವುದೇ ದಾನಕ್ಕಿಂತ ರಕ್ತದಾನವೇ ಹೆಚ್ಚು ಶ್ರೇಷ್ಠ. ಇದು ಸಾರ್ವಕಾಲಿಕ ಸತ್ಯ.