ಇಟಲಿಯಲ್ಲಿ ಕ್ರಾಸ್, ಇಂಡಿಯಾದಲ್ಲಿ ಡಬಲ್ ಕ್ರಾಸ್ !
ಚರ್ಚಾ ವೇದಿಕೆ
ತುರುವೇಕೆರೆ ಪ್ರಸಾದ್
ಇತ್ತೀಚೆಗೆ ಹೊಸ ಸಂಸತ್ ಭವನದಲ್ಲಿ ರಾಜದಂಡ ‘ಸೆಂಗೋಲ್’ ಪ್ರತಿಷ್ಠಾಪನೆಯ ಕುರಿತು ವ್ಯಾಪಕವಾದ ಪರ-ವಿರೋಧ ಚರ್ಚೆಗಳು ನಡೆದವು. ‘ಸೆಂಗೋಲ್ ಅಥವಾ ರಾಜದಂಡದ ಸ್ಥಾಪನೆ ಪ್ರಜಾಪ್ರಭುತ್ವದ ತಾತ್ವಿಕ ನಿಲುವು ಎನಿಸಿದ ಸೆಕ್ಯುಲರಿಸಂ ನೀತಿಗೆ ಪೂರಕವಾಗಿಲ್ಲ.
ಅದು ನಿರಂಕುಶ ಪ್ರಭುತ್ವವನ್ನು ವೈಭವೀಕರಿಸುತ್ತದೆ. ಜಗತ್ತಿಗೇ ಮಾದರಿ ಸೆಕ್ಯುಲರ್ ಸ್ಟೇಟ್ ಎನಿಸಿದ ಭಾರತದ ಸಂಸತ್ತಿನಲ್ಲಿ ಒಂದು ಧರ್ಮದ ಚಿಹ್ನೆಯನ್ನು (ಅದರಲ್ಲಿ ನಂದಿ ಇದೆ) ಸ್ಥಾಪನೆ ಮಾಡುವುದು ಪ್ರಜಾಪ್ರಭುತ್ವದ ಕಗ್ಗೊಲೆ. ರಾಜಾಳ್ವಿಕೆಯ ಪುನರುತ್ಥಾನದೊಂದಿಗೆ ನಾವು ಶತಶತಮಾನ ಗಳಷ್ಟು ಹಿಂದೆ ಹೋಗುತ್ತಿದ್ದೇವೆ’ ಎಂದೆಲ್ಲಾ ಕೆಲವು ವಿಚಾರವಂತರು, ಸೆಕ್ಯುಲರಿಸಂ ವಾದಿಗಳು ಕಟುಶಬ್ದಗಳಲ್ಲಿ ಟೀಕಿಸಿದರು.
ಸೆಕ್ಯುಲರಿಸಂ ಹುಟ್ಟಿದ್ದೇ ಯುರೋಪ್‌ನಲ್ಲಾದ್ದರಿಂದ ಮತ್ತು ಭಾರತಕ್ಕೆ ಅದು ವಸಾಹತುಶಾಹಿಯ ಎರವಲಾಗಿ ಬಂದಿರುವುದರಿಂದ ಯುರೋಪ್‌ನ ಸೆಕ್ಯುಲರಿಸಂನ ತಾತ್ವಿಕ ನಿಲುವುಗಳ ಹಿನ್ನೆಲೆಯಲ್ಲೇ ಅಮೆರಿಕ ಮತ್ತು ಯುರೋಪ್‌ನ ಇದೇ ಮಾದರಿಯ ಕೆಲವು ಸಂಘರ್ಷಗಳನ್ನು ಗಮನಿಸೋಣ. ಇಟಲಿಯ ಶಾಲೆಯೊಂದರಲ್ಲಿ ಯೇಸುಕ್ರಿಸ್ತನ ಉಬ್ಬುಶಿಲ್ಪವುಳ್ಳ ಶಿಲುಬೆಯನ್ನು ತರಗತಿಯ ಕೊಠಡಿಗಳಲ್ಲಿ ಪ್ರದರ್ಶಿಸಲಾಗಿತ್ತು.
‘ಇದು ಸೆಕ್ಯುಲರಿಸಂ ನೀತಿಗೆ ಮತ್ತು ಮುಕ್ತ ಧಾರ್ಮಿಕ ಸ್ವಾತಂತ್ರ್ಯವನ್ನು ಕಲ್ಪಿಸುವ ಸರಕಾರದ ಸಿದ್ಧಾಂತಕ್ಕೆ ವಿರುದ್ಧವಾದುದು. ಇದರಿಂದ ಕ್ರೈಸ್ತ ಧರ್ಮೀಯರಲ್ಲದವರ ಮೇಲೆ ಆ ಧರ್ಮವನ್ನು ಬಲವಂತದಿಂದ ಹೇರಿ ದಂತಾಗುತ್ತದೆ’ ಎಂದು ಆರೋಪಿಸಿ ೨೦೧೧ರಲ್ಲಿ ಸೋಯಿಲಾ ಲೌಟ್ಸಿ ಎನ್ನುವ (ಫಿನ್ನಿಶ್ ಸಂಜಾತೆ) ಇಟಲಿ ಪ್ರಜೆ ಈ ಧಾರ್ಮಿಕ ಲಾಂಛನಗಳನ್ನು (ಕ್ರುಸೆ-ಕ್ಸ್) ತೆಗೆಸಬೇಕೆಂದು ಕೋರಿ ವೆನೆಟೋ ಆಡಳಿತಾತ್ಮಕ ನ್ಯಾಯಾಲಯದ ಮೊರೆಹೋದರು. ಸರಕಾರದ ಪರ ತೀರ್ಪು ನೀಡಿದ ನ್ಯಾಯಾಲಯ, ‘ಶಾಲೆಗಳಲ್ಲಿ ಪ್ರದರ್ಶಿಸಲಾಗಿರುವ ಧಾರ್ಮಿಕ ಲಾಂಛನ ಯುರೋಪಿಯನ್ ಸಾಂಪ್ರದಾಯಿಕ ಮಾನವ ಹಕ್ಕುಗಳನ್ನು ಉಲ್ಲಂಘಿಸಿಲ್ಲ’ ಎಂದು ತೀರ್ಪಿತ್ತು ಲೌಟ್ಸಿ ಅವರ ಮನವಿಯನ್ನು ತಳ್ಳಿಹಾಕಿತು.
ಈ ತೀರ್ಪನ್ನು ಪ್ರಶ್ನಿಸಿ ಆಕೆ ಉಚ್ಚ ಆಡಳಿತಾತ್ಮಕ ನ್ಯಾಯಾಲಯದಲ್ಲಿ ರಿಟ್ ಸಲ್ಲಿಸಿದರು. ಈ ವೇಳೆ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯಲು ಉಚ್ಚ ನ್ಯಾಯಾಲಯವು ನೀಡಿದ ಸುದೀರ್ಘ ವಿವರಣೆಯು ಸೆಕ್ಯುಲರ್ ಎಂದು ಹೇಳಿಕೊಳ್ಳುವ ಜಗತ್ತಿನ ಎಲ್ಲಾ ಪ್ರಭುತ್ವಗಳಿಗೆ ಮಾದರಿ ಆಗುವಂಥದು. ಅದು ಹೀಗಿದೆ: ‘ಧಾರ್ಮಿಕ ಲಾಂಛನ ಎಂಬುದು ಸಹನೆ, ಪರಸ್ಪರ ಗೌರವಿಸುವಿಕೆ, ಪ್ರಭುತ್ವದ ಮೂಲಕ ಮೌಲ್ಯವರ್ಧನೆ, ವೈಯಕ್ತಿಕ ಹಕ್ಕಿನ ದೃಢೀಕರಣ, ವ್ಯಕ್ತಿಗತ ಸ್ವಾತಂತ್ರ್ಯದ ಪರಿಗಣನೆ, ವ್ಯಕ್ತಿಗತ ನೈತಿಕ ವಿವೇಚನೆಯ ಸ್ವಾಯತ್ತತೆಯ ಸಂರಕ್ಷಣೆ ಮತ್ತು ತನ್ಮೂಲಕ ಮಾನವೀಯ ಸಂಬಂಧ ಗಳನ್ನು ಧೃಡಗೊಳಿಸಿ ಐಕಮತ್ಯ ಸಾಧಿಸುವಿಕೆ ಮತ್ತು ಯಾವುದೇ ಬಗೆಯ ತಾರತಮ್ಯವನ್ನು ತಿರಿಸ್ಕರಿಸುವಿಕೆ ಇಂಥ ಧಾರ್ಮಿಕ ಮೌಲ್ಯಗಳ ಮೂಲವನ್ನು ಪ್ರತಿನಿಧಿಸುತ್ತದೆ.
ಈ ಎಲ್ಲಾ ಮೌಲ್ಯಗಳು ಇಟಲಿಯ ನಾಗರಿಕತೆಯ ಗುಣಲಕ್ಷಣಗಳೇ ಆಗಿರುವುದರಿಂದ ಇವೆಲ್ಲದರ ದ್ಯೋತಕ ವಾದ ಧಾರ್ಮಿಕ ಲಾಂಛನದ (ಯೇಸು ಕ್ರಿಸ್ತನ ಶಿಲುಬೆ) ಪ್ರದರ್ಶನವನ್ನು ಯಾವುದೇ ಒಂದು ಧಾರ್ಮಿಕ ಲಾಂಛನದ ಅರ್ಥ್ಯವ್ಯಾಖ್ಯೆಗೆ ಸಂಕುಚಿತಗೊಳಿಸಬಾರದು. ಆದರೆ ಯುರೋಪ್‌ನ ಮಾನವ ಹಕ್ಕುಗಳ ನ್ಯಾಯಾಲಯ, ಮೌಲ್ಯಗಳೆಲ್ಲದರ ನಡುವೆಯೂ ಧಾರ್ಮಿಕ ಉದ್ದೇಶವೇ ಅತಿಮುಖ್ಯವಾಗಿ ಕಾಣುತ್ತದೆ’ ಎಂದು ಲೌಟ್ಸಿ ಪರ ತೀರ್ಪಿತ್ತಿತು. ಆದರೆ ಜಾಗತಿಕ ಒತ್ತಡಗಳ ನಡುವೆ ಗ್ರಾಂಡ್ ಚೇಂಬರ್‌ನ ಪೂರ್ಣಪೀಠ ಮತ್ತೆ ಈ ವಿವಾದದ ವಿಚಾರಣೆ ನಡೆಸಿ ಕೊನೆಗೆ ೧೧-೨ ಬಹುಮತ ದಿಂದ ಇಟಲಿ ಸರಕಾರದ ಪರ ತೀರ್ಪಿತ್ತಿತು.
ಇದೇ ರೀತಿ, ರುಮೇನಿಯಾದ ಎಮಿಲ್ ಮೋಯಿಸೆ ಎಂಬ ಒಬ್ಬ ಶಿಕ್ಷಕಿ ಹಾಗೂ ಪೋಷಕಿ ಸಾರ್ವಜನಿಕ ಶಾಲೆ ಗಳಲ್ಲಿ ಧಾರ್ಮಿಕ ಲಾಂಛನಗಳನ್ನು ಪ್ರದರ್ಶಿಸುವ ವಿರುದ್ಧ ತಗಾದೆ ತೆಗೆದು ‘ನ್ಯಾಷನಲ್ ಕೌನ್ಸಿಲ್ ಫಾರ್ ಕಾಂಬ್ಯಾಟಿಂಗ್ ಡಿಸ್ಕ್ರಿಮಿನೇಷನ್’ಗೆ (ಸಿಎನ್‌ಸಿಡಿ) ದೂರು ನೀಡಿದ್ದರು. ಸಿಎನ್‌ಸಿಡಿ ‘ಇದು ಚರ್ಚ್ ಮತ್ತು ಸ್ಟೇಟ್ ಎರಡನ್ನೂ ಪರಸ್ಪರ ದೂರ ಇಡುವ ರೋಮ್‌ನ ಸೆಕ್ಯುಲರ್ ನೀತಿಯ ಉಲ್ಲಂಘನೆ. ಇದು ಆಸ್ತಿಕರು, ನಾಸ್ತಿಕರು ಮತ್ತು ಅಧಾರ್ಮಿಕ ವ್ಯಕ್ತಿಗಳ ನಡುವೆ ಸೃಷ್ಟಿಸಿರುವ ತರತಮ ನೀತಿ’ ಎಂದು ಹೇಳಿ ಮೋಯಿಸೆ ವಾದವನ್ನು ಎತ್ತಿಹಿಡಿಯಿತು.
ಆ ನಂತರ ವರ್ಜೀನಿಯಾದ ಕಸೇಶನ್ ಮತ್ತು ಜಸ್ಟೀಸ್ ನ್ಯಾಯಾಲಯವು ಶಾಲೆಗಳಲ್ಲಿ ಧಾರ್ಮಿಕ ಲಾಂಛನಗಳನ್ನು ಬಳಸುವುದು ಕಾನೂನಾತ್ಮಕವಾಗಿ ಕ್ರಮಬದ್ಧವಾಗಿದೆ ಎಂದು ಘೋಷಿಸಿ ಸಿಎನ್‌ಸಿಡಿ ನೀಡಿದ್ದ ತೀರ್ಪನ್ನು ವಜಾಗೊಳಿಸಿತು. ವಾಷಿಂಗ್ಟನ್ ಸಬ್‌ಅರ್ಬ್‌ನ ಮೇರಿಲ್ಯಾಂಡ್‌ನ ಬ್ಲೇಡನ್ಸ್‌ಬಗ್ನಲ್ಲಿ ಪ್ರಪಂಚದ ಮೊದಲ ಮಹಾಯುದ್ಧದಲ್ಲಿ ಹುತಾತ್ಮರಾದ ೪೯ ಯೋಧರ ನೆನಪಿಗೆ ನಿರ್ಮಿಸಿದ್ದ ೪೦ ಅಡಿ ಎತ್ತರದ ಬೃಹತ್ ಶಿಲುಬೆಯ ಬಗ್ಗೆ ಕೂಡ ೨೦೧೨ರಲ್ಲಿ ಅಮೆರಿಕನ್ ಹ್ಯೂಮನಿಸ್ಟ್ ಅಸೋಸಿಯೇಷನ್ ತಗಾದೆ ತೆಗೆದಿತ್ತು. ಆದರೆ ಯುನೈಟೆಡ್ ಸ್ಟೇಟ್ಸ್ ಉಚ್ಚ ನ್ಯಾಯಾಲಯ ೨೦೧೯ರಲ್ಲಿ ೭-೨ ಬಹುಮತದ ಆಧಾರದ ಮೇಲೆ ‘ಯೋಧರ ನೆನಪಿನ ಸ್ಮಾರಕದಲ್ಲಿ ಸ್ಥಾಪಿಸಿರುವ ಶಿಲುಬೆಯ (ಕ್ರಾಸ್) ಆಕೃತಿಯನ್ನು ಮುಂದುವರಿಸಬಹುದು.
ಅದು ಸಂವಿಧಾನಕ್ಕೆ ವಿರೋಧವೆನಿಸುವುದಿಲ್ಲ’ ಎಂದು ತೀರ್ಪು ನೀಡಿತು. ಈ ಎಲ್ಲ ತೀರ್ಪುಗಳ ಹಿನ್ನೆಲೆಯಲ್ಲಿ ಕೆಲ ಮುಖ್ಯಅಂಶಗಳನ್ನು ವ್ಯಾಖ್ಯಾನಿಸ ಬಹುದು. ಈ ಮೇಲಿನ ಮೂರೂ ಪ್ರಕರಣದ ತೀರ್ಪುಗಳನ್ನು ನಿರ್ಣಾಯಕ ಮಾದರಿಯ ಉಲ್ಲೇಖನೀಯ ತೀರ್ಪುಗಳು ಎಂದು ಪರಿಗಣಿಸಬಹುದಾಗಿದೆ. ಇವುಗಳ ಪ್ರಸ್ತುತತೆ ಸೆಕ್ಯುಲರಿಸಂ ಸಂಬಂಧ ಉಂಟಾಗುವ ಎಲ್ಲಾ ಜಿಜ್ಞಾಸೆಗಳಿಗೆ, ಸಂಘರ್ಷಗಳಿಗೆ ಒಂದು ಮಾರ್ಗಸೂಚಿಯಾಗಿ ನಿಲ್ಲುತ್ತದೆ.
ಈ ಎಲ್ಲಾ ಸಂಘರ್ಷಗಳಲ್ಲಿ ಸಾಮಾನ್ಯವಾಗಿರುವ ಆದರೆ ಮಹತ್ತರವಾದ ಒಂದು ಅಂಶವೆಂದರೆ, ಈ ಎಲ್ಲಾ ವಿವಾದಗಳಲ್ಲಿ ಪ್ರಭುತ್ವವು ಧರ್ಮದ ವಿಶಾಲತೆ ಮತ್ತು ಮಾನವೀಯತೆ, ಪರಂಪರೆಯ ಮೌಲ್ಯಗಳ ಪರ ನಿಂತಿರುವುದು ಮತ್ತು ಧರ್ಮದ ಲಾಂಛನವನ್ನು ಸೆಕ್ಯುಲರಿಸಂ ಚೌಕಟ್ಟಿನೊಳಗೇ ಸಾರ್ವಜನಿಕವಾಗಿ ತನ್ನ ದೇಶದ ಸಾಂಸ್ಕೃತಿಕ ಮೌಲ್ಯಗಳ ಒಟ್ಟು ಸಂಕೇತ ಎಂದು ಸಮರ್ಥವಾಗಿ ಸಾಬೀತುಪಡಿಸಿರುವುದು. ಈ ಉದ್ದೇಶಕ್ಕಾಗಿ ಅವು ನ್ಯಾಯಾಲಯದಲ್ಲಿ ಹೋರಾಟ ನಡೆಸಿವೆ. ತೀರಾ ಅಗತ್ಯ ಬಿದ್ದಾಗ ಅವು ಸಂಸತ್ತಿನಲ್ಲಿ ತಮ್ಮ ಧಾರ್ಮಿಕ ಸ್ವಾತಂತ್ರ್ಯದ ಸಂರಕ್ಷಣೆಗೆ ಹೊಸ ಕಾನೂನು ಮಾಡಲೂ ಹಿಂದೆ-ಮುಂದೆ ನೋಡಿಲ್ಲ. ಈ ದೇಶಗಳ ಈ ಅನುಕರಣೀಯ ನಡೆಯನ್ನು ಭಾರತಕ್ಕೆ ಹೋಲಿಸಿ ನೋಡಿ.
ನಮ್ಮ ಪ್ರಭುತ್ವ ಎಂದಾದರೂ ಇಂಥ ಕೆಲಸಕ್ಕೆ ಮುಂದಾಗಿದೆಯಾ? ಇಲ್ಲಿನ ಹಿಂದೂ ಮತ-ಪಂಥಗಳ ಸಾಂಸ್ಕೃತಿಕ, ಪಾರಂಪರಿಕ ಮೌಲ್ಯಗಳ ರಕ್ಷಣೆಗೆ ವಿಶೇಷ ಕಾನೂನು ಮಾಡುವ ಯತ್ನ ಮಾಡಿದೆಯಾ? ಇದೇ ಹಿಂದೂ ಮತ-ಪಂಥಗಳೊಳಗೇ ಅದೇ ಸಾಂಸ್ಕೃತಿಕ ಸೊಗಡಿನಲ್ಲಿ ಬಾಳಿ ಬದುಕಿದ ಪ್ರಭುತ್ವದ ಭಾಗವಾಗಿರುವ ಹಲವು ಮಂದಿಗೆ ಇವೆಲ್ಲ ಸೆಕ್ಯುಲರ್ ನೀತಿಯನ್ನು ಮೀರಿದ ನಾಗರಿಕತೆಯ ಅಖಂಡತೆಯ ಒಂದು ಸಂಕೇತರೂಪ ಎಂದು ಅನಿಸುವುದಿಲ್ಲವೇಕೆ? ಅಧಿಕಾರದ ವ್ಯಾಮೋಹಕ್ಕೆ ಇಷ್ಟೊಂದು ದೊಡ್ಡ ಆತ್ಮವಂಚನೆ ಮಾಡಿಕೊಳ್ಳಬೇಕಾ? ಧಾರ್ಮಿಕ ಸಂಘರ್ಷಗಳು ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲಿ ಧರ್ಮ ಸಹಿಷ್ಣುತೆಯ ಅನನ್ಯ ಮಾದರಿ ಒಂದನ್ನು, ರುಮೇನಿಯಾ ಶಾಲೆಗಳಲ್ಲಿ ಧಾರ್ಮಿಕ ಲಾಂಛನದ ಪ್ರದರ್ಶನ ಕುರಿತಾದ ಸಂಘರ್ಷದಲ್ಲಿ ನಾವು ಕಾಣಬಹುದು.
ಸಿಎನ್‌ಡಿಸಿ ವಿರುದ್ಧ ತೀರ್ಪು ನೀಡಿದಾಗ ಅದನ್ನು ವಿರೋಧಿಸಿದವರಲ್ಲಿ ರುಮೇನಿಯಾದ ಇಸ್ಲಾಮಿಕ್ ಸಮುದಾಯ ಕೂಡ ಒಂದು. ಅಲ್ಲಿನ ಮುಫ್ತಿ ಮುರಾತ್ ಯೂಸ-, ‘ರುಮೇನಿಯಾ ಧಾರ್ಮಿಕ ಸಹನೆ ಮತ್ತು ಸಹಿಷ್ಣುತೆಗೆ ಒಂದು ಅನುಕರಣೀಯ ಮಾದರಿಯಾಗಿದೆ. ನಾವು ೮೦೦-೯೦೦ ವರ್ಷಗಳಿಂದ ಈ ಜನರೊಂದಿಗೆ ಸೌಹಾರ್ದಯುತವಾಗಿ ಬದುಕುತ್ತಿದ್ದೇವೆ. ಅವರ ಭಾವನೆಗಳನ್ನು ನಾವೂ ಗೌರವಿಸಬೇಕು. ಶಾಲೆಗಳಲ್ಲಿ ಶಿಲುಬೆಗಳನ್ನು ಬಳಸಿದರೆ ತಪ್ಪೇನಿಲ್ಲ’ ಎಂಬ ಉದಾರ ಹೇಳಿಕೆ ನೀಡುತ್ತಾರೆ. ಅದೇ ರೀತಿ, ವರ್ಣಭೇದ ನೀತಿ ಮತ್ತು ಜನಾಂಗೀಯ ನಿಂದನೆಗೆ ಗುರಿಯಾಗಿದ್ದ ಅಲ್ಲಿನ ಜ್ಯೂಯಿಷ್ಜನರೂ ಸಿಎನ್‌ಡಿಸಿ ತೀರ್ಪನ್ನು ಖಂಡಿಸಿ ಏಕತೆಯ ರಾಷ್ಟ್ರೀಯತೆಯನ್ನು ಮೆರೆಯುತ್ತಾರೆ.
ಒಂದು ಕಾಲಕ್ಕೆ ಇಂಥ ಸೌಹಾರ್ದ ಸಹಿಷ್ಣುತೆಯ ಮೌಲ್ಯವನ್ನು ಜಗತ್ತಿಗೆ ಬೆಳಕಾಗಿ ಕೊಟ್ಟಿದ್ದ ನಮ್ಮ ದೇಶದಲ್ಲಿ ಈಗ ಇದು ಸಾಧ್ಯವೇ? ಪ್ರಭುತ್ವಗಳುಇಂಥ ಸುರಕ್ಷತೆ ಮತ್ತು ಐಕಮತ್ಯದ ಭಾವನೆಯನ್ನು ಧರ್ಮ-ಧರ್ಮಗಳ ಮಧ್ಯೆ ಸ್ಥಾಪಿಸುವ ಪ್ರಯತ್ನ ಮಾಡಲಿಲ್ಲವೇಕೆ? ಇಟಲಿಯ ಶಾಲೆಗಳಲ್ಲಿನ ಧಾರ್ಮಿಕ ಲಾಂಛನವನ್ನು ಉಳಿಸಿಕೊಳ್ಳಲು ಅಲ್ಲಿನವರು ಇನ್ನಿಲ್ಲದ ಪ್ರಯತ್ನ ನಡೆಸುತ್ತಾರೆ. ಆದರೆ, ಭಾರತದ ಶಾಲೆಗಳ ಗೋಡೆಗಳನ್ನು ತಲೆತಲಾಂತರ ದಿಂದ ಅಲಂಕರಿಸಿರುವ, ವಿದ್ಯೆ-ಬುದ್ಧಿಯೆಂಬ ಮೌಲ್ಯಗಳ ಸ್ವರೂಪವಾದ ತಾಯಿ ಸರಸ್ವತಿಯ ಫೋಟೋ ತೆಗೆಸಿಹಾಕಲು ಬುದ್ಧಿಜೀವಿಗಳು ರಸ್ತೆಗಿಳಿದು ಧರಣಿ ಮಾಡುತ್ತಾರೆ. ಎಂಥಾ ವಿಪರ್ಯಾಸ?!
ಇಟಲಿಯ ಸಂಘರ್ಷದ ಸಂದರ್ಭದಲ್ಲಿ ೨೦ಕ್ಕೂ ಹೆಚ್ಚು ದೇಶಗಳು ಅದರ ಬೆಂಬಲಕ್ಕೆ ನಿಲ್ಲುತ್ತವೆ. ರುಮೇನಿಯಾದಲ್ಲಿ ಅಲ್ಲಿನ ಪ್ರಭುತ್ವದ ಪರ ದನಿಯೆತ್ತಿ ೧೫೦ಕ್ಕೂ ಹೆಚ್ಚು ಸಂಘಟನೆಗಳು ಬೀದಿಗಿಳಿಯುತ್ತವೆ. ನಮ್ಮಲ್ಲಿ ಹೀಗೆ ಒಂದು ಪಾರಂಪರಿಕ ಮೌಲ್ಯವನ್ನು ಕಾಪಾಡಲು ಎಷ್ಟು ಸಂಘಟನೆಗಳನ್ನು ಪ್ರಭುತ್ವ ಸಹಿಸುತ್ತದೆ? ಪ್ರಭುತ್ವಕ್ಕೇ ಇದು ಬೇಕಾಗಿಲ್ಲದ ಅಪಸವ್ಯವಾದ್ದರಿಂದ ಹೀಗೆ ಬೆಂಬಲಕ್ಕೆ, ಹೋರಾಟಕ್ಕೆ ನಿಲ್ಲುವ ಸಂಸ್ಥೆಗಳಿಗೆ ಕೇಸರಿಬಣ್ಣ ಬಳಿದು, ಕೋಮುವಾದಿ ಎಂದು ಹಳಿದು ಅವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತವೆ.
ಇಂಥ ಹೋರಾಟಕ್ಕೇ ಬ್ರಾಂಡ್ ಆದ ಬೆರಳೆಣಿಕೆಯ ಸಂಘಟನೆ ಗಳನ್ನು ಬಿಟ್ಟರೆ ನಾಗರಿಕ ಸಂಘಟನೆಗಳು, ಧಾರ್ಮಿಕತೆ-ಅಧ್ಯಾತ್ಮದ ಮುಖವಾಣಿಯಾದ ಮಠ-ಮಾನ್ಯಗಳು ತುಟಿಪಿಟಿಕ್ಕೆನ್ನದೆ ಸುಮ್ಮನೆ ಕೂರುವುದೇಕೆ? ಪ್ರಭುತ್ವದಿಂದ ಕಾಲಕಾಲಕ್ಕೆ ಸಿಗುವ ಲಾಭವಷ್ಟೇ ಮುಖ್ಯವೇ ಹೊರತು ಮೌಲ್ಯಗಳ ರಕ್ಷಣೆ ಯಾರಿಗೆ ಬೇಕಾಗಿದೆ? ನಮ್ಮಲ್ಲಿನ ಬಹುತೇಕ ಪತ್ರಿಕೆಗಳು ಇಲ್ಲಿ ಏನೇ ಕಡ್ಡಿ ಅಲ್ಲಾಡಿದರೂ ಅದನ್ನು ಗುಡ್ಡ ಮಾಡುತ್ತವೆ. ಅವುಗಳಿಗೆ ದೇಶೀಯ ಸಂಸ್ಕೃತಿ,ಪರಂಪರೆ, ಮತ-ಧರ್ಮಗಳನ್ನು ಹೀಯಾಳಿಸುವುದು, ಅವನ್ನು ಗೌರವಿಸುವವರ ತೇಜೋವಧೆ ಮಾಡುವುದೇ ರೂಢಿ. ಇಲ್ಲಿಯ ಪತ್ರಿಕೆಗಳು ಸಾಲದೆಂಬಂತೆ ಪರದೇಶದ ಪತ್ರಿಕೆಗಳಲ್ಲೂ ಭಾರತದ ಮಾನ ಹರಾಜು ಹಾಕಿಸುವ ‘ಪೇಯ್ಡ್’ ವಿಚಾರವಂತರು ಇದ್ದಾರೆ.
ರುಮೇನಿಯನ್ ಶಾಲಾ ವಿವಾದಕ್ಕೆ ಸಂಬಂಧಿಸಿದ ಸಿಎನ್‌ಸಿಡಿ ತೀರ್ಪಿನ ವಿರುದ್ಧ ‘ಸಿವಿಕ್ ಮೀಡಿಯಾ’ ಎಂಬ ಸಮೂಹ ಮಾಧ್ಯಮದ ಎನ್‌ಜಿಒ ಒಂದುಅಂತರ್ಜಾಲ ಆಂದೋಲನವನ್ನೇ ಪ್ರಾರಂಭಿಸಿ ಶಾಲೆಗಳಲ್ಲಿ ಧಾರ್ಮಿಕ ಲಾಂಛನ ಪ್ರದರ್ಶನವನ್ನು ಮುಂದುವರಿಸಬೇಕು ಎಂದು ಒತ್ತಾಯಿಸುತ್ತದೆ. ನಮ್ಮಲ್ಲಿ ಪ್ರಭುತ್ವದ ತುತ್ತೂರಿಯಾಗಿರುವ ಬಹಳಷ್ಟು ಪತ್ರಿಕೆಗಳಿಂದ ಇಂಥ ಬೇಷರತ್ ದೇಶಾಭಿಮಾನದ ಬೆಂಬಲವನ್ನು ನಿರೀಕ್ಷಿಸಲು ಸಾಧ್ಯವೇ?ಈಗ ನಮ್ಮ ಸಂಸತ್ತಿನ ರಾಜದಂಡದ ವಿಷಯಕ್ಕೆ ಮರಳೋಣ. ಈ ದೇಶದ ಬಹುತೇಕ ರಾಜರು ಶೌರ್ಯ, ಪರಾಕ್ರಮಕ್ಕೆ ಹೆಸರಾದಂತೆ ಕರುಣೆ, ದಯೆಗೂ ಹೆಸರಾದವರು, ಜನಹಿತ ಬಯಸಿ ಕಲ್ಯಾಣ ರಾಜ್ಯಗಳನ್ನು ನಿರ್ಮಿಸಿದವರು.
ನಮ್ಮ ಸಂಸ್ಕೃತಿ, ಪರಂಪರೆಗೆ ಆಶ್ರಯ ಕೊಟ್ಟು ಸಾವಿರಾರು ವರ್ಷಗಳ ಕಾಲ ಬಾಳಿ ಬದುಕುವಂತೆ ನೀರೆರೆದು ಪೋಷಿಸಿದವರು. ಇಟಲಿ, ರುಮೇನಿಯಾದ ಜನ ಅಲ್ಲಿನ ಶಿಲುಬೆಯಲ್ಲಿ ಈ ಎಲ್ಲಾ ಮೌಲ್ಯಗಳನ್ನು ಕಾಣಬಲ್ಲವರಾದರೆ ಅಂಥ ಎಲ್ಲಾ ಮೌಲ್ಯ, ಅಖಂಡತೆ, ಸಮಗ್ರತೆಯ ಒಟ್ಟಾರೆ ಪ್ರತೀಕವೇ ‘ಸೆಂಗೋಲ್’ ರಾಜದಂಡ ಎಂದು ನಮಗೇಕೆ ಅನಿಸುವುದಿಲ್ಲ? ಹೊರದೇಶದಲ್ಲಿ ಕುಳಿತು ಭಾರತದ ಪ್ರಜಾತಂತ್ರ, ಅಲ್ಪಸಂಖ್ಯಾತರ ಸುರಕ್ಷತೆ ಬಗ್ಗೆ ಪುಂಖಾನುಪುಂಖವಾಗಿ ಟೀಕಿಸುವ ರಾಹುಲ್ ಗಾಂಧಿಯವರಿಗೆ ತಮ್ಮ ಅಮ್ಮ-ಅಜ್ಜಿಯ ಊರಿನ ನಾಗರಿಕ ಮೌಲ್ಯಗಳು ತಾವು ಘನತೆಯಿಂದ ಬದುಕಲು ಅವಕಾಶ ಮಾಡಿಕೊಟ್ಟಿರುವ ಭಾರತ ದೇಶಕ್ಕೂ ಇದೆ ಎಂದು ಏಕೆ ಅನಿಸುವುದಿಲ್ಲವೋ?!