ಜೀವನಾಡಿಗಳ ಜೀವ ಉಳಿಸಬೇಕಿದೆ
ಕೆರೆ ಕಾಳಜಿ
ರಾಘವೇಂದ್ರ ಈ.ಹೊರಬೈಲು
‘ಊರು ಕಟ್ಟುವ ಮುನ್ನ ಕೆರೆ ಕಟ್ಟು’ ಎಂಬ ಮಾತಿನಂತೆ, ನಗರಗಳಲ್ಲಿನ ಅಳಿದುಳಿದ ಕೆರೆಗಳನ್ನು ರಕ್ಷಿಸಬೇಕಾಗಿದೆ. ನಗರಗಳ ಸ್ವಾಸ್ಥ್ಯ ಕಾಪಾಡಿ ಜನರಿಗೆ ಅಗತ್ಯ ನೀರನ್ನು ಒದಗಿಸಬೇಕಾದರೆ ಕೆರೆಗಳ ರಕ್ಷಣೆ ಅವಶ್ಯಕ. ಹಾಗಾಗಿ ಸರಕಾರ ಮಾತ್ರವಲ್ಲದೆಸಾರ್ವಜನಿಕರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗಿದೆ.
ಮಲೆನಾಡಿನಲ್ಲಿ ಅದರಲ್ಲೂ ಹಳ್ಳಿಯಲ್ಲಿ ಹುಟ್ಟಿ ಬೆಳೆದ ನಮಗೆ ಕೆರೆಗಳೆಂದರೆ ಅದೇನೋ ಸೆಳೆತ. ಚಿಕ್ಕವರಿದ್ದಾಗ ಈಜು ಹೊಡೆದಿದ್ದರಿಂದ ಮೊದಲ್ಗೊಂಡು ಅದೆಷ್ಟೋ ಸಂದರ್ಭಗಳಲ್ಲಿ ಮೀನು ಹಿಡಿಯುವವರೆಗೂ ಕೆರೆಗಳು ನಮಗೆ ಆತ್ಮೀಯ ವಾಗಿದ್ದವು. ಗ್ರಾಮೀಣ ಪ್ರದೇಶದವರಿಗೆ ಅವೇ ‘ಸ್ವಿಮ್ಮಿಂಗ್ ಪೂಲು’ ಕೂಡ.
ಅದೂ ಅಲ್ಲದೆ, ತಾವರೆ, ನೈದಿಲೆ ಹೀಗೆ ಬಗೆಬಗೆಯ ಹೂವುಗಳಿಗೆ ಮಡಿ ಲಾಗಿರುತ್ತಿದ್ದವು ಕೆರೆಗಳು. ಇವೆಲ್ಲ ಚಿಕ್ಕವರಾದ ನಮ್ಮ ಮಾತಾದರೆ, ಇಡೀ ಊರಿನ ಹೊಲ-ಗದ್ದೆಗಳಿಗೆ, ಜಾನುವಾರುಗಳಿಗೆ ಮಾತ್ರವಲ್ಲದೆ, ಎಷ್ಟೋ ಸಂದರ್ಭಗಳಲ್ಲಿ ನಮಗೆ ಕುಡಿಯಲು ನೀರೊದಗಿಸುವ ಮೂಲವಾಗಿದ್ದವು ಕೆರೆಗಳು. ಹಾಗಾಗಿ ಕೆರೆ ಎಂದರೆ ಅದೇನೋ ಪವಿತ್ರಭಾವ ಮೂಡುತ್ತಿತ್ತು. ಜತೆಗೆ ಊರಿಗೊಂದಾದರೂ ಕೆರೆ ಇದ್ದೇ ಇರುತ್ತಿತ್ತು. ಎಲ್ಲೆಲ್ಲೂ ಗಿಡ-ಮರಗ ಳಿದ್ದುದರಿಂದ ಮಳೆಯೂ ಚೆನ್ನಾಗಿ ಸುರಿದು ಕೆರೆಗಳೂ ತುಂಬಿ ತುಳುಕುತ್ತಿದ್ದವು.
ಒಟ್ಟಿನಲ್ಲಿ ಮಳೆಗಾಲದಲ್ಲಿ ಕೆರೆಗಳನ್ನು ನೋಡುವುದೇ ಒಂದು ಹಬ್ಬದಂತಿರುತ್ತಿತ್ತು. ಬೇಸಿಗೆಯಲ್ಲೂ ಬತ್ತದ ಕೆರೆಗಳು, ನದಿಗಳಿಲ್ಲದ ಪ್ರದೇಶಗಳಿಗೆಲ್ಲ ಆಸರೆಯಾಗಿದ್ದವು. ಹೀಗಾಗಿ ಕೆರೆಗಳಿಗೂ ಮನುಷ್ಯನಿಗೂ ಅವಿನಾಭಾವ ಸಂಬಂಧವಿತ್ತು.ರಾಜ-ಮಹಾರಾಜರು ತಮ್ಮ ಸಾಮ್ರಾಜ್ಯಗಳಲ್ಲಿ ಕರೆ-ಕಟ್ಟೆಗಳನ್ನು ಕಟ್ಟಿಸಿ, ಜನ-ಜಾನುವಾರುಗಳಿಗೆ ಕುಡಿಯಲು, ರೈತರಿಗೆ ಬೆಳೆ ಬೆಳೆಯಲು ಹೀಗೆ ಇನ್ನೂ ಅನೇಕ ಉಪಯೋಗಗಳಿಗೆ ಕಾರಣವಾಗುತ್ತಿದ್ದರು. ಕೆರೆಗಳನ್ನು ನಿರ್ಮಿಸುವವರಿಗೆ ಮತ್ತು ಕೆರೆಗಳ ರಕ್ಷಕರಿಗೆ ಧನ-ಧಾನ್ಯ, ದಾನ-ದತ್ತಿ-ಭೂಮಿ ಹೀಗೆ ನಾನಾ ಕೊಡುಗೆಗಳಿಂದ ಪ್ರೋತ್ಸಾಹಿಸುತ್ತಿದ್ದರು ಎಂಬ ಐತಿಹ್ಯವಿದೆ.
ಅಲ್ಲದೆ, ಕೆರೆಗಳ ನಿರ್ಮಾಣಕ್ಕಾಗಿ ಭೂಮಿ ಖರೀದಿಸುತ್ತಿದ್ದರು ಎಂಬುದಕ್ಕೂ ಸಾಕ್ಷಿಯಿದೆ. ಹೀಗಾಗಿ ರಾಜ್ಯವೊಂದರಲ್ಲಿನ ಕೆರೆಗಳು ಅಲ್ಲಿನ ಸುಭಿಕ್ಷತೆಯ ಸಂಕೇತವಾಗಿದ್ದವು. ‘ಕೆರೆಗೆ ಭೂಮಿಯನ್ನು ಬಿಟ್ಟುಕೊಟ್ಟವನಿಗೆ, ಕೆರೆಯನ್ನು ರಕ್ಷಿಸಿದವನಿಗೆ ಅಶ್ವಮೇಧ ಯಾಗದ ಪುಣ್ಯ ದೊರೆಯುತ್ತದೆ’ ಎನ್ನುತ್ತದೆ ಕೋಲಾರದ ಕುರುಬರಹಳ್ಳಿ ಶಾಸನ. ಆದರೆ ಬರುಬರುತ್ತಾ ಮನುಷ್ಯನ ದುರಾಸೆಯಿಂ ದಾಗಿ ಅರಣ್ಯ ಪ್ರದೇಶಗಳೆಲ್ಲ ನಾಶವಾಗಿ, ಜಮೀನುಗಳಾಗಿ, ನಗರಗಳಾಗಿ, ಕಟ್ಟಡಗಳಾಗಿಪರಿವರ್ತನೆಯಾದ ಮೇಲೆ ಮಳೆಯೂ ಕಡಿಮೆಯಾಗತೊಡಗಿತು.
ಕೆರೆಗಳ ಪ್ರಮಾಣವೂ ತಗ್ಗಿತು, ಜತೆಗೆ ಕೆರೆಗಳಲ್ಲಿ ನೀರೂ ಇಲ್ಲದಂತಾಯಿತು. ಹಳ್ಳಿಗಳು ಮಾತ್ರವಲ್ಲದೆ ನಗರ ಪ್ರದೇಶ ಗಳಲ್ಲೂ ಕೆರೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಮಳೆಗಾಲದಲ್ಲಿ ಪ್ರವಾಹವನ್ನು ತಡೆಯುವ ಮಾರ್ಗೋಪಾಯವಾಗಿ ವರ್ತಿಸಿದರೆ, ಬೇಸಿಗೆಯಲ್ಲಿ ಜಲಾಶಯಗಳಂತೆ ನೀರೊದಗಿಸುತ್ತವೆ. ಅಂತರ್ಜಲದ ಮಟ್ಟ ಹೆಚ್ಚಿಸುವಲ್ಲಿಯೂ ಕೆರೆಗಳ ಪಾತ್ರಅಮೋಘವಾದುದು. ಆದರೆ ಇತ್ತೀಚಿನ ದಿನಗಳಲ್ಲಿ ಪಟ್ಟಣ-ನಗರಗಳಲ್ಲಿನ ಬಹಳಷ್ಟು ಕೆರೆಗಳು ಬಸ್ ನಿಲ್ದಾಣಗಳಾಗಿ,ಕಾರ್ಖಾನೆ-ಅಪಾರ್ಟ್‌ಮೆಂಟುಗಳಾಗಿ ಬದಲಾಗಿವೆ.
ಅಳಿದುಳಿದ ಕೆರೆಗಳು ಇಡೀ ನಗರದ ಕೊಳೆಯನ್ನೆಲ್ಲಾ ತುಂಬಿಸಿಕೊಂಡು ಕೊಳಚೆ ಗುಂಡಿಗಳಾಗಿವೆ. ರಾಜ್ಯದ ಮೂಲೆಮೂಲೆಯ ಹಳ್ಳಿಯ ಯುವಕರು, ಹೊರರಾಜ್ಯ ದವರೆಲ್ಲ ಬಂದು ನಗರಗಳಲ್ಲಿ ನೆಲೆಸಲು ಪ್ರಾರಂಭಿಸಿದ ಮೇಲೆ ಅವರಿಗೆ ಬೇಕಾದ ಊಟ, ವಸತಿ, ನೀರು ಮೊದಲಾದ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಭಾರವೂ ನಗರಗಳ ಮೇಲೆ ಬಿತ್ತು. ಎಲ್ಲೆಂದರಲ್ಲಿ ರಿಯಲ್ ಎಸ್ಟೇಟ್ ಸಾಮ್ರಾಜ್ಯಗಳು ತಲೆಯೆತ್ತಿ, ನಗರಗಳು ಮತ್ತು ಅವುಗಳ ಸುತ್ತಮುತ್ತಲಿನ ಜಾಗಗಳ ಬೆಲೆ ಗಗನಕ್ಕೇರಿತು. ದಿನದಿನಕ್ಕೂ ನಾನಾ ಕಡೆಯಿಂದ ನಗರಗಳಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗತೊಡಗಿತು, ಅದು ಈಗಲೂ ಸಾಗಿದೆ.
ಪರಿಣಾಮ, ಎಲ್ಲಾ ಕಡೆ ಕಟ್ಟಡಗಳು ಹುಟ್ಟಿಕೊಂಡು, ಹೊಸ ಕಟ್ಟಡಗಳು ಮತ್ತು ಮನೆಗಳಿಗೆ ಜಾಗವಿಲ್ಲದಂತಾಗಿ, ನಗರ  ದೊಳಗೆ ಮತ್ತು ಸುತ್ತುಮುತ್ತಲೆಲ್ಲ ಇದ್ದು ನಗರಗಳ ಪಾಲಿಗೆ ನೀರಿನ ಆಗರಗಳಾಗಿದ್ದ ಕೆರೆಗಳು ಒತ್ತುವರಿಗೊಳಪಟ್ಟವು. ಕ್ರಮೇಣ ಭಾರಿ ಕಟ್ಟಡಗಳಿಗೆ ಅವು ಆಹಾರವಾಗುತ್ತ, ಸಂಪೂರ್ಣ ನಿರ್ನಾಮವಾದವು. ಇಂಥ ನಗರಗಳಲ್ಲಿ ಕೆಲವೇ ವರ್ಷಗಳ ಹಿಂದೆ ನೂರರ ಸಂಖ್ಯೆಯಲ್ಲಿದ್ದ ಕೆರೆಗಳು ಬೆರಳೆಣಿಕೆಗೆ ಇಳಿದು, ಅವು ಕೂಡಾ ಜೀವ ಉಳಿಸಿಕೊಳ್ಳಲು ಹೋರಾಡುತ್ತಿವೆ. ಕರ್ನಾಟಕದ ಹೆಮ್ಮೆಯ ನಗರ ಬೆಂಗಳೂರನ್ನೇ ಉದಾಹರಣೆಗೆ ತೆಗೆದುಕೊಂಡರೆ, ಇಲ್ಲಿಯ ಧರ್ಮಾಂಬುಧಿ ಕೆರೆ, ಸಂಪಂಗಿಕೆರೆ, ಕಾರಂಜಿ ಕೆರೆ, ಕೋರಮಂಗಲ ಕೆರೆ, ಚಲ್ಲಘಟ್ಟ ಕೆರೆ, ಕುರುಬರಹಳ್ಳಿ ಕೆರೆ, ಸಿದ್ಧಿಕಟ್ಟೆ ಕೆರೆ ಹೀಗೆ ಇನ್ನೂ ಅನೇಕಕೆರೆಗಳು ಇಂದು ನಾಮಾವಶೇಷವಾಗಿ ಆ ಜಾಗಗಳಲ್ಲಿ ಕೆಂಪೇಗೌಡ ಬಸ್ ನಿಲ್ದಾಣ, ಕಂಠೀರವ ಸ್ಟೇಡಿಯಂ, ಗಾಂಧಿಬಜಾರ್, ಸಿಟಿ ಮಾರ್ಕೆಟ್ ಮುಂತಾದ ಪ್ರತಿಷ್ಠಿತ ಪ್ರದೇಶಗಳಾಗಿ/ಬಡಾವಣೆಗಳಾಗಿ ಬಡಬಡಿಸುತ್ತಿವೆ.
ಉಳಿದಿರುವ ಕೆಲವೇ ಕೆರೆಗಳು ಜನರ ದಾಹ ತಣಿಸುವ ಜೀವಧಾರೆಗಳಾಗುವ ಬದಲು, ಇಡೀ ನಗರ ಹೊರಹಾಕುವಕಸಕಡ್ಡಿ, ಗಲೀಜು, ಬಚ್ಚಲು ನೀರು, ಕಾರ್ಖಾನೆಗಳ ತ್ಯಾಜ್ಯ ಇತ್ಯಾದಿಗಳನ್ನು ತುಂಬಿಕೊಂಡು, ಹತ್ತಿರ ಹೋದರೆ ಮೂಗೇಕಿತ್ತುಬರುವಂಥ ದುರ್ನಾತ ಬೀರುತ್ತಾ, ಕುಡಿಯಲು ಬಳಸುವುದಿರಲಿ ಮುಟ್ಟಿದರೂ ನಾನಾ ಕಾಯಿಲೆಗಳನ್ನು ಹರಡುವ ಆಗರಗಳಾಗಿಬಿಟ್ಟಿವೆ. ಇದು ಬೆಂಗಳೂರಿನಂಥ ಒಂದು ನಗರದ ಕತೆಯಲ್ಲ, ರಾಜ್ಯದ ಬಹುತೇಕ ನಗರಗಳಲ್ಲೂ ಕೆರೆಗಳ ಪರಿಸ್ಥಿತಿ ಹೆಚ್ಚೂಕಮ್ಮಿ ಹೀಗೆಯೇ ಇದೆ.
ಇರುವ ಕೆರೆಗಳನ್ನು ಸೂಕ್ತ ರೀತಿಯಲ್ಲಿ ಬಳಸಕೊಳ್ಳದ ಕಾರಣ ಅವೆಲ್ಲ ಕೊಳಚೆಯ, ಕೆಸರಿನ ಗುಂಡಿಗಳಾಗಿವೆ. ಹೀಗಾಗಿ ನೀರಿನ ಹಾಹಾಕಾರ ಮುಗಿಲು ಮುಟ್ಟಿದೆ. ‘ಊರು ಕಟ್ಟುವ ಮುನ್ನ ಕೆರೆ ಕಟ್ಟು’ ಎನ್ನುವ ಗಾದೆಯನ್ನು ಮರೆಯದೆ, ಪಟ್ಟಣ-ನಗರಗಳಲ್ಲಿ ಅಳಿದುಳಿದಿರುವ ಕೆರೆಗಳನ್ನು ರಕ್ಷಿಸಿಕೊಳ್ಳಲೇಬೇಕಾದ ಅನಿವಾರ್ಯತೆಯಿದೆ. ನಗರಗಳ ಸ್ವಾಸ್ಥ್ಯವನ್ನುಕಾಪಾಡಬೇಕಾದರೆ, ಜನರಿಗೆ ಅಗತ್ಯ ನೀರನ್ನು ಒದಗಿಸಬೇಕಾದರೆ ಕೆರೆಗಳ ರಕ್ಷಣೆ ಅವಶ್ಯಕ. ಹಾಗಾಗಿ ಸರಕಾರ ಮಾತ್ರವಲ್ಲದೆ ಸಾರ್ವಜನಿಕರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾದ ಜರೂರತ್ತಿದೆ.
ನಗರದ ಹೊಲಸುನೀರು ಮತ್ತು ಕಾರ್ಖಾನೆಗಳ ತ್ಯಾಜ್ಯವಸ್ತುಗಳು ಕೆರೆಗಳಿಗೆ ಹರಿಯದಂತೆ ತಡೆಯ ಬೇಕಿದೆ. ಕೆರೆಗಳಲ್ಲಿ ತುಂಬಿಕೊಂಡಿರುವ ಕಸ-ಕಡ್ಡಿ ಮತ್ತು ಗಲೀಜನ್ನು ತೆಗೆದು ಸ್ವಚ್ಛಗೊಳಿಸುವುದರ ಜತೆಗೆ, ಹೂಳೆತ್ತುವ ಕಾರ್ಯ ಆಗಾಗ ನಡೆಯಲೇಬೇಕು. ಮಳೆನೀರು ಸೀದಾ ಕೆರೆಗೆ ಹರಿದು ಹೋಗುವಂಥ ಸರಿಯಾದ ವ್ಯವಸ್ಥೆಯಾಗಬೇಕು. ಕೆರೆಗಳನ್ನು ಮಲಿನಗೊಳಿಸು ವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.
ಕೆರೆಗಳ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಯಬೇಕು. ಕೆರೆಯನ್ನು ಹೀಗೆ ಉಳಿಸುವ ಮೂಲಕ ನಗರಗಳ ನೀರಿನ ಸಮಸ್ಯೆ ಬಗೆಹರಿಸುವ, ಜನ-ಜಾನುವಾರುಗಳ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಹೊಣೆ ಹೊರಬೇಕು. ಆಗ ಕೆರೆಗಳೂ ಉಳಿಯುತ್ತವೆ, ನಗರಗಳೂ ಆರೋಗ್ಯಯುತವಾಗಿ ಸೌಂದರ್ಯದಿಂದ ನಳನಳಿಸುತ್ತವೆ. ಎರಡು ಸಾವಿರ ವರ್ಷಗಳ ಹಿಂದೆಯೇ ನಮ್ಮ ದೇಶದಲ್ಲಿ ಕೆರೆಗಳ ನಿರ್ಮಾಣ ಶುರುವಾಯಿತು ಎಂದು ಪ್ರಾಗೈತಿಕಾಸಿಕ ಸಂಶೋಧನೆ,ಉತ್ಖನನ, ಶಾಸನ, ಪ್ರವಾಸಿಗಳ ಬರಹ ಮತ್ತು ಅರಸು ಯುಗದ ದಾಖಲೆಗಳು ತಿಳಿಸುತ್ತವೆ. ಇಂಥ ಮಹತ್ವವಿರುವಕೆರೆಗಳ ಸಂರಕ್ಷಣೆ ನಮ್ಮ ಉಸಿರಾಗಬೇಕಲ್ಲವೇ?