ದಕ್ಷಿಣದ ಕನವರಿಕೆಯಲ್ಲಿ ಉತ್ತರವನ್ನು ಕೈಬಿಟ್ಟರೇ ?
ತಂತ್ರ ಪರ್ವ
ರಮಾನಂದ ಶರ್ಮಾ
ಭಾರತದ ಕೆಲವೊಂದು ರಾಜಕಾರಣಿಗಳ ಮಿದುಳು ಯಾವ ರೀತಿ ಕೆಲಸ ಮಾಡುತ್ತದೆ ಎಂಬುದನ್ನು ಊಹಿಸಲು ಸಾಕ್ಷಾತ್ಬ್ರಹ್ಮನಿಂದಲೂ ಸಾಧ್ಯವಿಲ್ಲವೇನೋ?! ರಾಜಕಾರಣಿಗಳು ‘ಉತ್ತರಕ್ಕೆ ಹೋಗುತ್ತೇನೆ’ ಎಂದರೆ ಅದನ್ನು ನಾವು ‘ದಕ್ಷಿಣ’ ಎಂದುಅರ್ಥೈಸಬೇಕು ಎಂದು ನಾಡೋಜ ಪಾಟೀಲ ಪುಟ್ಟಪ್ಪನವರು ಹೇಳುತ್ತಿದ್ದು ದುಂಟು! ಕೆಲ ಅನುಕೂಲಸಿಂಧು ರಾಜಕಾರಣಿಗಳು ಆಯಾ ಕ್ಷಣಕ್ಕೆ ತಕ್ಕಂತೆ, ತಮ್ಮ ಹಾಗೂ ತಮ್ಮ ಪಕ್ಷದ ಹಿತದೃಷ್ಟಿಯಿಟ್ಟುಕೊಂಡು ಹೇಳಿಕೆ ನೀಡುತ್ತಾರೆ, ರಾಜಕೀಯ ನಿಲುವನ್ನು ಪ್ರಕಟಿಸುತ್ತಾರೆ.
ಅವರು ಯಾವಾಗ, ಯಾರನ್ನುದ್ದೇಶಿಸಿ, ಯಾವ ತಂತ್ರಗಾರಿಕೆ ಹೆಣೆಯುತ್ತಾರೆ ಎಂಬುದು ಗೌಪ್ಯವಾಗಿದ್ದು, ಅವರಿಂದ ಹೇಳಿಕೆ ಹೊರಬಿದ್ದಾಗಲಷ್ಟೇ ಅದು ಹೊರಜಗತ್ತಿಗೆ ತಿಳಿಯುತ್ತದೆ. ಕೇಂದ್ರ ಗೃಹಮಂತ್ರಿ, ರಾಜಕೀಯ ಚಾಣಕ್ಯ ಅಮಿತ್ ಶಾ ಅವರು ಕೆಲ ದಿನಗಳ ಹಿಂದೆ ಚೆನ್ನೈಯಲ್ಲಿ, ‘ಭವಿಷ್ಯದಲ್ಲಿ ತಮಿಳರೂ ದೇಶದ ಪ್ರಧಾನಿ ಸ್ಥಾನವನ್ನು ಅಲಂಕರಿಸಬೇಕಿದೆ; ಹಿಂದೆ ಎರಡು ಬಾರಿ ಕೈತಪ್ಪಿದ ಅವಕಾಶ ಮೂರನೇ ಬಾರಿಯಾದರೂ ಅವರಿಗೆ ಒಲಿಯ ಬೇಕಿದೆ’ ಎಂದು ನೀಡಿರುವ ಹೇಳಿಕೆ ಪಾಟೀಲ ಪುಟ್ಟಪ್ಪನವರ ಅಭಿಪ್ರಾಯವನ್ನು ನೆನಪಿಸುತ್ತದೆ.
ಅಮಿತ್ ಶಾ ಅವರ ಈ ಹೇಳಿಕೆ ನಿರೀಕ್ಷೆಯಂತೆಯೇ ರಾಷ್ಟ್ರ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ರಾಜಕೀಯವೀಕ್ಷಕರು, ವಿಮರ್ಶಕರು ಮತ್ತು ಮಾಧ್ಯಮಗಳಿಂದ ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ: ‘ಮೋದಿ-ಶಾಮಧ್ಯೆ ಬಿರುಕು ಉಂಟಾಗಿದೆಯೇ? ಬಿಜೆಪಿಯಲ್ಲಿ ಆಂತರಿಕವಾಗಿ ಏನೋ ನಡೆಯುತ್ತಿದೆಯೇ? ಇನ್ನೊಂದು ಅವಧಿಗೆ ಪ್ರಧಾನಿ ಯಾಗಲು ಮೋದಿ ಮನಸ್ಸು ಮಾಡುತ್ತಿಲ್ಲವೇ? ಕರ್ನಾಟಕದಲ್ಲಾದ ಸೋಲಿನ ನಂತರ ಲೋಕಸಭೆಗೆ ದಿಢೀರ್ ಎಂದು ಮಧ್ಯಂತರ ಚುನಾವಣೆ ನಡೆಸಲು ಬಿಜೆಪಿ ಆಲೋಚಿಸುತ್ತಿದೆಯೇ? ಉತ್ತರ ಭಾರತ ಹಾಗೂ ಗುಜರಾತ್‌ನಲ್ಲಿ ಭದ್ರನೆಲೆ ಹೊಂದಿರುವ ಬಿಜೆಪಿ ದಕ್ಷಿಣದಲ್ಲಿ ತನ್ನ ನೆಲೆಯನ್ನು ಗಟ್ಟಿಗೊಳಿಸಲು ಯತ್ನಿಸುತ್ತಿದೆಯೇ? ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿ ತಮಿಳುನಾಡನ್ನು ತರಲು ಹಾಗೂ ಕರ್ನಾಟಕದಲ್ಲಿ ಕಳೆದುಹೋದ ಮಾನವನ್ನು ತಮಿಳುನಾಡಿನಲ್ಲಿ ಪಡೆಯಲು ಅದು ಯತ್ನಿಸುತ್ತಿದೆಯೇ? ಇದು ಕೂಡ ಚಾಣಕ್ಯನ ಒಂದು ಗಿಮಿಕ್ ಇರಬಹುದೇ?’ ಹೀಗೆ ಹತ್ತಾರು ರೀತಿಯ ಪ್ರತಿಕ್ರಿಯೆಗಳು ಹೊಮ್ಮತ್ತಿವೆ.
ಅಮಿತ್ ಶಾ ಇಂಥ ಹೇಳಿಕೆ ನೀಡಬೇಕಾದರೆ ಅದಕ್ಕೆ ಮೋದಿಯವರ ಸಹಮತ ಇರಬೇಕು ಎನ್ನುವ ತರ್ಕವೂ ಇದೆ. ಕೆಲವು ಮಾಧ್ಯಮಗಳಂತೂ ತಮಿಳುನಾಡಿನಿಂದ ಪ್ರಧಾನಿಯಾಗುವ ಅರ್ಹತೆಯುಳ್ಳವರನ್ನು ಹೆಸರಿಸಲು ಆರಂಭಿಸಿದ್ದು, ಮೊದಲ ಪಟ್ಟಿಯಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾಣಿಸಿ ಕೊಂಡಿದ್ದೂ ಆಗಿದೆ!
ನಾಲ್ಕು ದಶಕಗಳ ನಂತರವೂ ಬಿಜೆಪಿಗೆ ದಕ್ಷಿಣದಲ್ಲಿ ಗಟ್ಟಿಯಾಗಿ ತಳವೂರಲು ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ ಸ್ವಲ್ಪ ನೆಲೆ ಕಂಡಿರುವುದು ಹೌದಾದರೂ, ಆರಂಭದಲ್ಲಿ ಇತರ ಪಕ್ಷಗಳೊಂದಿಗೆ ಮಾಡಿಕೊಂಡ ಹೊಂದಾಣಿಕೆ ಮತ್ತು ‘ಆಪರೇಷನ್ ಕಮಲ’ದ ಮೂಲಕ ಹೆಕ್ಕಿ ತಂದ ಸದಸ್ಯಬಲದ ನೆರ ವಿನಿಂದ ಅದು ಆಡಳಿತ ನಡೆಸಿತೇ ವಿನಾ, ಪರಿಪೂರ್ಣ ಬಹುಮತದ ಸ್ವಂತಬಲದಿಂದ ಅದಿನ್ನೂ ಸಾಧ್ಯವಾಗಿಲ್ಲ. ಈ ಬಾರಿ ಸ್ವಂತಬಲದಿಂದ ಅಧಿಕಾರ ಹಿಡಿಯುವ ಹೆಬ್ಬಯಕೆ ಇಟ್ಟುಕೊಂಡು ಅದಕ್ಕಾಗಿ ಭಗೀರಥ ಪ್ರಯತ್ನವನ್ನೇ ನಡೆಸಿತ್ತು ಬಿಜೆಪಿ; ಆದರೆ, ಕಳಪೆ ಆಡಳಿತ, ತನ್ಮೂಲಕ ಹುಟ್ಟಿಕೊಂಡ ಆಡಳಿತ-ವಿರೋಽ ಅಲೆಯಿಂದಾಗಿ ಮತ್ತು ಕಾಂಗ್ರೆಸ್ ಬೌಲ್ ಮಾಡಿದ ಗ್ಯಾರಂಟಿ ಯೋಜನೆಗಳೆಂಬ ಗೂಗ್ಲಿಗೆ ಕ್ಲೀನ್‌ಬೌಲ್ಡ್ ಆಗಿ ಬಿಜೆಪಿ ಮಕಾಡೆ ಮಲಗಬೇಕಾಯಿತು!
ದಕ್ಷಿಣದ ಇತರ ರಾಜ್ಯಗಳಿಗೆ ಹೋಲಿಸಿದರೆ ಬಿಜೆಪಿಗೆ ಕರ್ನಾಟಕದಲ್ಲಿ ಒಂದಿಷ್ಟು ನೆಲೆಯಾದರೂ ಇದೆ. ಲೋಕಸಭಾಚುನಾವಣೆಯಲ್ಲಿ ೨೮ ಸ್ಥಾನಗಳ ಪೈಕಿ ೨೫ನ್ನು ಮೋದಿಯವರ ಬುಟ್ಟಿಗೆ ಸೇರಿಸಿದ ಶ್ರೇಯಸ್ಸೂ ಇದೆ. ಆದರೆ, ದಕ್ಷಿಣಭಾರತದಲ್ಲಿ ಬಿಜೆಪಿಯ ಹೆಬ್ಬಾಗಿಲು ಎಂದು ಪರಿಗಣಿತವಾಗಿದ್ದ ಕರ್ನಾಟಕದಲ್ಲೇ ಕುಸಿಯುವಂತಾಗಿದ್ದು ಕೇಸರಿಪಡೆಯಜಂಘಾಬಲವನ್ನೇ ಉಡುಗಿಸಿದೆ. ಸುಲಭದ ಕೈತುತ್ತಿನಂತೆ ಕಂಡಿದ್ದ ನೆಲೆಯಲ್ಲೇ ತುತ್ತು ಮಣ್ಣುಪಾಲಾಗಿದ್ದು ಅದರ ನಡುಕವನ್ನು ಇನ್ನೂ ಹೆಚ್ಚಿಸಿದೆ.
ಕೇಂದ್ರದಲ್ಲಿ ಗದ್ದುಗೆಯನ್ನು ಉಳಿಸಿಕೊಳ್ಳಬೇಕೆಂದರೆ, ಕರ್ನಾಟಕದಲ್ಲಿ ಕಳೆದುಕೊಂಡಿದ್ದನ್ನು ದಕ್ಷಿಣದ ಇತರ ರಾಜ್ಯಗಳಲ್ಲಿ ಗಳಿಸಬೇಕಾದ ಅನಿವಾರ್ಯತೆ ಮತ್ತು ಒತ್ತಡದಲ್ಲಿ ಸಿಲುಕಿದೆ ಬಿಜೆಪಿ. ಕೆಲವು ಮಾಧ್ಯಮ ವರದಿಗಳ ಪ್ರಕಾರ ಉತ್ತರ ಭಾರತದಲ್ಲಿ ಬಿಜೆಪಿಯ ವರ್ಚಸ್ಸು ಕ್ರಮೇಣ ಕ್ಷೀಣಿಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದಾದರೂ ೨೦೧೪ ಮತ್ತು ೨೦೧೯ರ ಚಮತ್ಕಾರಿಕ ಯಶಸ್ಸಿನ ಪುನರಾವರ್ತನೆ ಕೊಂಚ ಅನುಮಾನ ಎನ್ನಲಾಗುತ್ತಿದೆ.
ಕರ್ನಾಟಕದಲ್ಲಿಯೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ೨೦೧೯ರ ಸಾಧನೆ ಅಸಂಭವ ಎಂದು ಸಮೀಕ್ಷೆಗಳು, ಮಾಧ್ಯಮ ವರದಿಗಳು ಮತ್ತು ಹಿತಾಸಕ್ತರ ಹಿಮ್ಮಾಹಿತಿಗಳು ಸುಳಿವು ನೀಡಿರುವುದರಿಂದ, ತಮಿಳುನಾಡಿನ ಮೇಲೆ ಬಿಜೆಪಿ ತನ್ನ ಗಮನವನ್ನು ಕೇಂದ್ರೀಕರಿಸುತ್ತಿದೆ. ಮಾತ್ರವಲ್ಲ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಪ್ರಾದೇಶಿಕ ಪಕ್ಷಗಳೊಡನೆ ಸಂಪರ್ಕದಲ್ಲಿದೆ.
ಈ ಹಿಂದೆ ಎನ್‌ಡಿಎ ಮೈತ್ರಿಕೂಟದಲ್ಲಿದ್ದ ಕೆಲವು ಪಕ್ಷಗಳು ಈಗ ಹೊರನಡೆದಿರುವುದರಿಂದ ಬಿಜೆಪಿಯು ಹೊಸಮಿತ್ರರನ್ನುಹುಡುಕಬೇಕಾಗಿದೆ. ಇದರ ಅಂಗವಾಗಿ, ತಮಿಳುನಾಡನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದರೊಂದಿಗೆ, ಮುಂದಿನ ಲೋಕಸಭಾ ಚುನಾವಣೆಯ ನಂತರ ‘ಪ್ಲ್ಯಾನ್-ಬಿ’ ಅವಶ್ಯಕತೆ ಎದುರಾದರೆ ಇರಲಿ ಎಂದು ಈ ತಂತ್ರಗಾರಿಕೆ ಮೆರೆಯಲಾಗಿದೆಎನ್ನಲಾಗುತ್ತಿದೆ. ಕನಿಷ್ಠ ೨೦ ಸೀಟುಗಳನ್ನಾದರೂ ಪಡೆಯಬೇಕು ಎಂದು ದೃಢಸಂಕಲ್ಪ ಮಾಡಿರುವ ಬಿಜೆಪಿ, ತಮ್ಮನ್ನು ಒಲಿಸಿಕೊಳ್ಳಲೆಂದೇ ಪ್ರಧಾನಿ ಹುದ್ದೆಯ ಆಮಿಷ ನೀಡುತ್ತಿದೆ ಎನ್ನುತ್ತಿದ್ದಾರಂತೆ ತಮಿಳರು. ಬಿಜೆಪಿ ನೀಡಿರುವ ಭರವಸೆಯಲ್ಲಿ ತಮಿಳರ ಮೇಲಿನ ಪ್ರೀತಿಗಿಂತ, ಅವರ ಮತವನ್ನು ಬಳಸಿಕೊಂಡು ಗದ್ದುಗೆ ಉಳಿಸಿಕೊಳ್ಳುವ ಚಾಣಾಕ್ಷತನ ಅಡಗಿದೆ ಎಂದೂ ತಮಿಳರು ಅಭಿಪ್ರಾಯಪಡುತ್ತಿದ್ದಾರಂತೆ.
‘ಯುದ್ಧ, ಪ್ರೇಮ ಹಾಗೂ ರಾಜಕಾರಣದಲ್ಲಿ ಯಾವುದೂ ಪಾಪವಲ್ಲ, ಯಾವುದೂ ನಿಷಿದ್ಧವಲ್ಲ’ ಎಂಬುದೊಂದು ಮಾತಿದೆ. ಅಂತೆಯೇ ಮತದಾರರನ್ನು ಒಲಿಸಿ ಕೊಳ್ಳಲು ಯಾವುದೇ ಗಾಳ ನಿಷಿದ್ಧವಾಗಿರದೆ, ಪ್ರಧಾನಿ ಹುದ್ದೆ ಎಂಬ ಗಾಳವನ್ನು ಅಮಿತ್ ಶಾ ತಮಿಳರಿಗೆ ಬೀಸಿದ್ದಾರೆ. ಈ ಭರವಸೆಯಲ್ಲಿ ಎಷ್ಟು ಬದ್ಧತೆ ಇದೆ ಎನ್ನುವುದು ಬೇರೆ ಮಾತು. ಹಿಂದಿ ಹೇರಿಕೆ ವಿಚಾರದಲ್ಲಿಸದಾ ಕಿರಿಕಿರಿ ಮಾಡುವ ಬಿಜೆಪಿ ನೀಡಿರುವ ಪ್ರಧಾನಿ ಹುದ್ದೆಯ ಭರವಸೆಯನ್ನು ತಮಿಳರು ‘ಡಿಸ್ಕೌಂಟ್’ ಮಾಡದೇ ತೆಗೆದುಕೊಳ್ಳುತ್ತಾರೆ ಎನ್ನಲಾಗುತ್ತದೆಯೇ? ಇಂಥ ಗಿಮಿಕ್‌ನಿಂದ ತಮಿಳರನ್ನು ಯಾಮಾರಿಸಲು ಸಾಧ್ಯವಿಲ್ಲ.
ಬಿಜೆಪಿಯು ಚಾಪೆ ಕೆಳಗೆ ನುಸುಳಿದರೆ, ತಮಿಳರು ರಂಗೋಲಿ ಕೆಳಗೆ ನುಸುಳುವವರು! ಪ್ರಧಾನಿ ಹುದ್ದೆಯ ಆಮಿಷ ನೀಡಿ ಸಾಕಷ್ಟು ಸೀಟುಗಳನ್ನು ಪಡೆದು, ಆಮೇಲೆ ಕೈ ಎತ್ತಿದರೆ? ದೋಣಿಯು ತೀರವನ್ನು ಸೇರಿದ ಮೇಲೆ ಅಂಬಿಗನನ್ನು ಕೇರ್ ಮಾಡುವವರು ಕಮ್ಮಿ. ಅಮಿತ್ ಶಾ ಅವರು ಮುಂದುಮಾಡಿರುವುದು ಆಮಿಷವನ್ನೇ ವಿನಾ ಒಪ್ಪಂದವನ್ನಲ್ಲ; ಹೀಗಾಗಿ ಅದು ಚುನಾವಣಾ ಸಮಯ ದಲ್ಲಿ ನೀಡುವ ಆಶ್ವಾಸನೆಗಳಂತೆ ಮಿನುಗಿ ಮರೆಯಾಗಬ ಹುದು.
ಅದಕ್ಕೂ ಮಿಗಿಲಾಗಿ, ಪ್ರಧಾನಿ ಹುದ್ದೆ ಅಲಂಕರಿ ಸಬಲ್ಲ ಮತ್ತು ಅಖಿಲ ಭಾರತ ಮಟ್ಟದಲ್ಲಿ ವರ್ಚಸ್ಸು ಇರುವ ರಾಜಕಾರಣಿ ಗಳು ಸದ್ಯಕ್ಕೆ ತಮಿಳುನಾಡಿನಲ್ಲಿ ಮೇಲ್ನೋಟಕ್ಕೆ ಯಾರೂ ಕಾಣುವುದಿಲ್ಲ. ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಅವರು ರಾಜಕೀಯದಲ್ಲಿ ಇನ್ನೂ ಎಳಸು. ಪಿ. ಚಿದಂಬರಂ ಅವರು ವಿರೋಧಿ ಕ್ಯಾಂಪ್‌ನಲ್ಲಿ ಇದ್ದರೆ, ಜೈಶಂಕರ್ ಹಾಗೂ ನಿರ್ಮಲಾ ಸೀತಾರಾಮನ್ ಅವರು ತಮಿಳುನಾಡಿನಲ್ಲಿ ಅನಿವಾಸಿಗಳು!
ಚುನಾವಣಾ ಪೂರ್ವದಲ್ಲೇ ಇಂಥದೊಂದು ಭರವಸೆ ಡಿದರೆ ಅದು ‘ಪ್ಲಸ್’ ಆಗಿ ಪರಿಣಮಿಸಬಹುದು, ‘ಮೈನಸ್’ ಆಗಿಯೂ ರಾಚಬಹುದು. ಏಕೆಂದರೆ, ಇಂಥ ದೊಂದು ಚುನಾವಣಾಪೂರ್ವ ಆಮಿಷದಿಂದಾಗಿ ಬಿಜೆಪಿಯ ‘ಸಾಂಪ್ರದಾಯಿಕ’ ಬೆಂಬಲದ ಪಾಳಯವಾಗಿ ರುವ ಉತ್ತರದ ಹಿಂದಿ ರಾಜ್ಯಗಳು (೨೨೬ ಸೀಟುಗಳು) ಮತ್ತು ಗುಜರಾತ್ (೨೫ ಸೀಟುಗಳು) ಹೇಗೆ ಪ್ರತಿಕ್ರಿಯಿಸ ಬಹುದು ಎಂಬುದು ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿ ಅಥವಾ ಬೆಳವಣಿಗೆ.
ಏಕೆಂದರೆ, ‘ಈ ಬಾರಿ ಬಿಜೆಪಿಗೆ ಮತ ಹಾಕಿದರೆ ನಮ್ಮವರು ಪ್ರಧಾನಿಯಾಗುವುದಿಲ್ಲ’ ಎನ್ನುವ ಸಂದೇಶ ಶರವೇಗದಲ್ಲಿ ರವಾನೆಯಾಗಿ ಚುನಾವಣಾ ಫಲಿತಾಂಶದ ದೃಶ್ಯಾವಳಿ ಬದಲಾಗಬಹುದು. ಮೇಲ್ನೋಟಕ್ಕೆ ಗೋಚರಿಸದಿದ್ದರೂ, ‘ಉತ್ತರ’ ಮತ್ತು ‘ದಕ್ಷಿಣ’ ಎಂಬ ಚಿತ್ತಸ್ಥಿತಿ ನಮ್ಮ ದೇಶದಲ್ಲಿ ತುಂಬಾ ಆಳವಾಗಿ ಇದೆ. ದಕ್ಷಿಣದವರು ಪ್ರಧಾನಿಯಾಗುತ್ತಾರೆ ಎಂದರೆಮೂಗು ಮುರಿಯುವವರೂ ಕಾಣಸಿಗುತ್ತಾರೆ. ೨೦೧೪ ಮತ್ತು ೨೦೧೯ರಲ್ಲಿ, ತಮ್ಮವರೇ ಆದ ಮೋದಿ ಪ್ರಧಾನಿಯಾಗುತ್ತಾರೆ ಎನ್ನುವ ದೃಢವಿಶ್ವಾಸದಲ್ಲಿ ಗುಜರಾತಿಗಳು ಬಿಜೆಪಿಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ.
ಅಕಸ್ಮಾತ್ ಮೋದಿ ಈ ಬಾರಿ ಪ್ರಧಾನಿಯಾಗುವುದಿಲ್ಲ ಎನ್ನುವ ಸುಳಿವು ದೊರಕಿದರೆ ಈ ಬೆಂಬಲ ಪುನರಾವರ್ತನೆ ಯಾದೀತೇ? ಒಂದು ರೀತಿಯಲ್ಲಿ ಇದು, ‘ಕಾಣದ ಕುದುರೆಯನ್ನು ಬೆನ್ನತ್ತಿ, ಕೈಯಲ್ಲಿರುವ ಕುದುರೆಯನ್ನು ಕಳೆದುಕೊಂಡರು’ಎಂದಂತೆ ಆಗುವುದಿಲ್ಲವೇ? ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಒದಗಿದ ಫಲಿತಾಂಶದ ಬಗ್ಗೆ ಮಾಜಿ ಬಿಜೆಪಿ ನಾಯಕ ಹಾಗೂ ಹಾಲಿ ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ ಅವರು ಪ್ರತಿಕ್ರಿಯಿಸುತ್ತಾ, ‘ಒಬ್ಬರಿಗೆ ಟಿಕೆಟ್ ನಿರಾಕರಿಸಿ, ಅವರ ಸೋಲಿಗೆ ಶಕ್ತಿಯನ್ನೆಲ್ಲಾ ವ್ಯಯಿಸಿ, ಇಡೀ ಪಕ್ಷವೇ ನೆಲಕಚ್ಚುವಂತೆ ಮಾಡಿದರು’ ಎಂದು ಹೇಳಿದ ಮಾತು ಈ ಕ್ಷಣದಲ್ಲಿ ನೆನಪಿಗೆಬರುತ್ತಿದೆ. ದಕ್ಷಿಣದಲ್ಲಿನ ಬಿಜೆಪಿಯ ಕಸರತ್ತನ್ನು ನೋಡಿ, ‘ಮಾಯಾಮೃಗದಂತಿರುವ ದಕ್ಷಿಣ ಭಾರತವನ್ನು ಜಯಿಸಲು ಹೋಗಿ, ಭರವಸೆಯ ಗುಜರಾತ್ ಹಾಗೂ ಉತ್ತರ ಭಾರತದ ರಾಜ್ಯಗಳನ್ನು ಕಳೆದುಕೊಳ್ಳುವ ದುಸ್ಸಾಹಸ ಇದು’ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ.
ತಮಿಳುನಾಡಿನ ೩೯ ಸೀಟುಗಳಿಗಾಗಿ, ಉತ್ತರ ಭಾರತದ ಹಿಂದಿ ರಾಜ್ಯಗಳ ೨೨೬ ಸೀಟುಗಳಲ್ಲಿ ತೊಂದರೆ ಅನುಭವಿಸು ವುದು ರಾಜಕೀಯ ಅಪಕ್ವತೆಯನ್ನು ತೋರಿಸಬಹುದೇ? ಈ ವಾಸ್ತವ ಅಮಿತ್ ಶಾ ಅವರಿಗೆ ತಿಳಿದಿಲ್ಲ ಎಂದೇನಲ್ಲ. ಇದರಲ್ಲೇನೋ ತಂತ್ರಗಾರಿಕೆ ಅಡಗಿರಬಹುದು ಎನ್ನುವ ಮಾತೂ ಕೇಳಿಬರುತ್ತಿದೆ. ಮುಂದೆ ಏನಾಗುತ್ತದೋ ತಿಳಿಯದು; ಆದರೆ ಬಿಜೆಪಿಗೆ ತಮಿಳುನಾಡಿನ ಬಗ್ಗೆ ವಿಶೇಷ ಒಲವಿದೆ ಎಂದು ತೋರಿಸಿಕೊಳ್ಳುವ ಪ್ರಹಸನದಲ್ಲಿ ‘ಬಿಜೆಪಿಯು ಹಿಂದಿ-ಹಿಂದುಸ್ತಾನಿ-ಹಿಂದುಗಳಿಗೆ ಸೀಮಿತ ವಾಗಿಲ್ಲ, ಇದು ಅಖಿಲಭಾರತ ಪಕ್ಷ ಎಂದು ಜಗತ್ತಿಗೆ ತೋರಿಸುವ ಯತ್ನ ಅಡಗಿದೆ’ ಎಂದು ಬಿಜೆಪಿಯೇತರ ಪಕ್ಷಗಳು ಟೀಕಿಸುವಂತಾಗಿದೆ.
ಇಂಥ ಮಾತು, ಅಭಿಪ್ರಾಯ ಅಥವಾ ಹೇಳಿಕೆಗಳು ಮುಂದಿನ ದಿನಗಳಲ್ಲಿ ಪಡೆದುಕೊಳ್ಳುವ ತಿರುವನ್ನು ರಾಜಕೀಯಾಸಕ್ತ ಜನರು ಕುತೂಹಲದಿಂದ ಎದುರುನೋಡುತ್ತಿರುವುದಂತೂ ದಿಟ!