ಮೋದಿ ಸರಕಾರ ದೇಶದ ಆಸ್ತಿ ಮಾರುತ್ತಿದೆಯಾ ?
ಸಮರ್ಥನೆ
ಪ್ರಕಾಶ್ ಶೇಷರಾಘವಾಚಾರ್‌
ಮೋದಿ ಸರಕಾರವು ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ ದೇಶದ ಆಸ್ತಿಯನ್ನು ವಿಲೇವಾರಿ ಮಾಡುತ್ತಿದೆ ಎಂಬ ಗಂಭೀರ ಆರೋಪವನ್ನು ಪದೇಪದೆ ಕೇಳುತ್ತಿದ್ದೇವೆ. ಕಾಂಗ್ರೆಸ್ ಸರಕಾರಗಳು ಮಾಡಿಟ್ಟ ಆಸ್ತಿಗಳನ್ನು ಮೋದಿಯವರು ಪರಭಾರೆ ಮಾಡುತ್ತಿದ್ದಾರೆ ಎಂಬ ಕೂಗು ಸಾಮಾನ್ಯವಾಗಿದೆ.
ಈ ಆರೋಪದಲ್ಲಿ ಎಷ್ಟು ಹುರುಳಿದೆ? ಸಮಾಜವಾದದಲ್ಲಿ ನಂಬಿಕೆಯಿಟ್ಟಿದ್ದ ನೆಹರುರವರು ಮಿಶ್ರ ಆರ್ಥಿಕ ನೀತಿಯನ್ನು ಅನುಸರಿಸಿದರು. ಉದ್ದಿಮೆ ಸ್ಥಾಪನೆ ಮಾಡಲು ಸರಕಾರ ಮತ್ತು ಖಾಸಗಿಯವರಿಗೆ ಅವಕಾಶವಿತ್ತು. ನೆಹರು ನಂತರ ಇಂದಿರಾ ಗಾಂಧಿಯವರು ಬ್ಯಾಂಕ್ ರಾಷ್ಟ್ರೀಕರಣ, ರಾಜಧನ ರದ್ದತಿ ಮುಂತಾದ ಸಮಾಜವಾದಿ ನೀತಿಗಳನ್ನು ಜಾರಿಗೊಳಿ ಸಿದ್ದರ ಜತೆಗೆ, ಲೈಸನ್ಸ್ ಮತ್ತು ಪರ್ಮಿಟ್ ರಾಜ್ ಸಂಸ್ಕೃತಿಯನ್ನು ಆಳವಾಗಿ ತಳವೂರಿಸಿದರು.
ಸಾರ್ವಜನಿಕ ಉದ್ದಿಮೆಗಳಿಗೆ ಅಂಕುಶವಿಲ್ಲದೆ ಕೇಂದ್ರ ಮತ್ತು ರಾಜ್ಯಗಳಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡವು. ಖಾಸಗಿ ಕಂಪನಿಗಳಿಂದ ಸ್ಪರ್ಧೆಯೇ ಇಲ್ಲದೆ, ಏಕಸ್ವಾಮ್ಯದಿಂದ ಇವುಗಳ ಆಟಕ್ಕೆ ಕಡಿವಾಣವೇ ಇರಲಿಲ್ಲ. ಉದ್ದಿಮೆಗಳ ಸ್ಥಾಪನೆಯು ಚುನಾವಣೆಯಲ್ಲಿ ವೋಟು ಪಡೆಯುವ ಸಾಧನ ವಾಗಿ, ದೇಶದ ಆರ್ಥಿಕ ಪ್ರಗತಿಗೆ ಹೆದ್ದಾರಿಯಾಗಲು ಸೋತಿತ್ತು. ೧೯೯೧ ರಲ್ಲಿ ಆರ್ಥಿಕ ಉದಾರೀಕರಣವಾಗಿ, ದೇಶದ ಆರ್ಥಿಕ ರಂಗವು ತನ್ನ ಮುಚ್ಚಿದ ಬಾಗಿಲು ತೆರೆದ ತರುವಾಯ ಅನೇಕ ಸಾರ್ವಜನಿಕ ಉದ್ದಿಮೆಗಳ ಅಸಲಿ ಬಂಡವಾಳ ಬಯಲಾಗತೊಡಗಿತು.
ಅನೇಕ ಕಂಪನಿಗಳು ನಷ್ಟಕ್ಕೆ ಜಾರಿದರೆ, ಮತ್ತೆ ಕೆಲವು ಕಾಗದದಲ್ಲಷ್ಟೇ ಉಳಿದುಕೊಂಡವು. ಸಾರ್ವಜನಿಕ ಉದ್ದಿಮೆಗಳಲ್ಲಿನ ಬಂಡವಾಳ ಹಿಂತೆಗೆತವನ್ನು ಮೊದಲು ಶುರುಮಾಡಿದ್ದೇ ಕಾಂಗ್ರೆಸ್ ಸರಕಾರ. ೧೯೯೧ರಲ್ಲಿ ಅದು ೩,೦೭೩ ಕೋಟಿ ರು. ಬಂಡವಾಳವನ್ನು ಹೀಗೆ ಹಿಂತೆಗೆದಿತ್ತು. ಹಣದುಬ್ಬರದ ಲೆಕ್ಕ ಹಿಡಿದರೆ ಇಂದು ಅದರ ಮೊತ್ತ ೧೮,೭೫೦ ಕೋಟಿ ರು. ಆಗುವುದು. ಇದೇ ರೀತಿ ೯೨-೯೩ರಲ್ಲಿ ೧,೯೧೨ ಕೋಟಿ ಮತ್ತು ೯೪-೯೫ರಲ್ಲಿ ೪,೮೪೩ ಕೋಟಿ ರು. ಹಿಂತೆಗೆಯಲಾಯಿತು.
ಇಂದಿನ ಲೆಕ್ಕದಲ್ಲಿ ಇವು ಕ್ರಮವಾಗಿ ೧೦,೯೦೦ ಕೋಟಿ ಮತ್ತು ೨೩,೨೦೦ ಕೋಟಿ ರು. ಆಗುತ್ತವೆ. ೨೦೦೪ರಲ್ಲಿ ಯುಪಿಎ ಸರಕಾರಕ್ಕೆ ಎಡಪಕ್ಷಗಳ ಬೆಂಬಲ ಅನಿವಾರ್ಯವಾಗಿದ್ದ ಕಾರಣ, ಬಂಡವಾಳ ಹಿಂತೆಗೆತಕ್ಕೆ ಮುಂದಾಗಲಿಲ್ಲ. ಹಾಗಿದ್ದರೂ, ೨೦೦೪ರಿಂದ ೨೦೦೯ರೊಳಗೆ ೫,೬೦೦ ಕೋಟಿ ರು.ನಷ್ಟು ಹಿಂತೆಗೆತವಾಯಿತು. ತದನಂತರ, ೨೦೦೯ರಲ್ಲಿ ಯುಪಿಎಗೆ ಎಡಪಕ್ಷಗಳ ಕಿರಿಕಿರಿ ಇಲ್ಲದಿದ್ದ ಕಾರಣ, ೯೭,೦೦೦ ಕೋಟಿ ರು.ಗೂ ಹೆಚ್ಚಿನ ಬಂಡವಾಳವನ್ನು ಅದು ಹಿಂತೆಗೆಯಿತು.
ಬಂಡವಾಳ ಹಿಂತೆಗೆತದಲ್ಲಿ ಎರಡು ಮಾದರಿಯಿದೆ. ಸರಕಾರವು ಸಾರ್ವಜನಿಕ ಉದ್ದಿಮೆಯ ಅಲ್ಪಪ್ರಮಾಣದ ಷೇರುಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವುದು ಮೊದಲ ಮಾದರಿ. ಇದರಲ್ಲಿ ಉದ್ದಿಮೆಯ ನಿಯಂತ್ರಣ ಸರಕಾರದ ಬಳಿಯೇ ಇರುತ್ತದೆ. ಉದಾಹರಣೆಗೆ, ರೈಲು ವಿಕಾಸ ನಿಗಮ, ಎಲ್‌ಐಸಿ, ಕೋಲ್ ಇಂಡಿಯಾ ಲಿಮಿಟೆಡ್ ಮುಂತಾದವು. ಉದ್ದಿಮೆ ಯನ್ನು ಸಂಪೂರ್ಣವಾಗಿ ಅಥವಾ ಶೇ. ೫೦ಕ್ಕಿಂತ ಕಡಿಮೆ ಸರಕಾರದ ಪಾಲಿಟ್ಟುಕೊಂಡು ಖಾಸಗಿಯವರಿಗೆ ಮಾರುವುದು ಎರಡನೆಯ ಮಾದರಿ.
ಏರ್ ಇಂಡಿಯಾ, ಮಾರುತಿ ಉದ್ಯೋಗ್, ಭಾರತಿ ಅಲ್ಯೂಮಿನಿಯಂ ಮತ್ತು ವಿಎಸ್‌ಎನ್‌ಎಲ್ ಸಂಸ್ಥೆಗಳು ಸಂಪೂರ್ಣಮಾರಾಟವಾಗಿದ್ದರೆ, ಪವನ್‌ಹನ್ಸ್ ಹೆಲಿಕಾಪ್ಟರ‍್ಸ್ ಕಂಪನಿಯ ಶೇ. ೫೧ರಷ್ಟು ಷೇರುಗಳನ್ನು ಮಾತ್ರ ಮಾರಲಾಗಿದೆ.ಸಾರ್ವಜನಿಕ ಉದ್ದಿಮೆಗಳಲ್ಲಿನ ಬಂಡವಾಳ ಹಿಂತೆಗೆತಕ್ಕೆ ವಾಜಪೇಯಿಯವರ ಸರಕಾರದಲ್ಲಿ ಹೆಚ್ಚು ವೇಗ ದಕ್ಕಿತು.ಬಂಡವಾಳ ಹಿಂತೆಗೆತಕ್ಕಾಗಿ ಸಚಿವ ಖಾತೆಯನ್ನೇ ಸೃಷ್ಟಿಸಲಾಯಿತು. ಅವರ ಅವಧಿಯಲ್ಲಿ ೩೩,೦೦೦ ಕೋಟಿ ರು. ಬಂಡವಾಳದ ಹಿಂತೆಗೆತವಾಯಿತು.
ಹಿಂದುಸ್ತಾನ್ ಜಿಂಕ್, ಇಂಡಿಯನ್ ಪೆಟ್ರೋಕೆಮಿಕಲ್ಸ್ ಮುಂತಾದ ಕಂಪನಿಗಳನ್ನು ಸಂಪೂರ್ಣ ಮಾರಾಟ ಮಾಡಲಾಯಿತು. ೨೦೧೪-೨೨ರ ಅವಧಿಯಲ್ಲಿ ೪.೦೭ ಲಕ್ಷ ಕೋಟಿ ಬಂಡವಾಳದ ಹಿಂತೆಗೆತವಾಗಿದೆ. ಎಚ್‌ಪಿಸಿಎಲ್ ಅನ್ನು ಒಎನ್‌ಜಿಸಿಗೆ ೩೬,೯೦೦ ಕೋಟಿ ರು.ಗೆ ಮಾರಲಾಯಿತು. ೭೦ ಸಾವಿರ ಕೋಟಿ ರು. ನಷ್ಟದಲ್ಲಿದ್ದ ಏರ್ ಇಂಡಿಯಾವನ್ನು ಟಾಟಾ ಸಮೂಹಕ್ಕೆ ಮಾರಲಾಯಿತು. ಈ ಬಿಳಿಯಾನೆಯನ್ನು ಸಾಕಲು ಸರಕಾರವು ೨೦೦೯ರಿಂದ ೧,೧೦,೨೭೫ ಕೋಟಿ ರು. ವೆಚ್ಚಮಾಡಿತ್ತು.
೧೯೮ ಸಾರ್ವಜನಿಕ ಉದ್ದಿಮೆಗಳು ೨,೦೦,೪೧೯ ಕೋಟಿ ರು. ನಷ್ಟ ಅನುಭವಿಸಿವೆ ಮತ್ತು ೮೮ ಕಂಪನಿಗಳ ನಿವ್ವಳ ಮೌಲ್ಯಸಂಪೂರ್ಣ ಅಳಿಸಿಹೋಗಿದೆ ಎಂದು ಸಿಎಜಿ ೨೦-೨೧ರ ವರದಿಯಲ್ಲಿ ತಿಳಿಸಲಾಗಿದೆ. ಸಿಎಜಿ ವರದಿಯ ಪ್ರಕಾರ, ೨೫೧ ಸರಕಾರಿ ಕಂಪನಿಗಳು ೧,೯೫,೬೭೭ ಕೋಟಿ ರು. ಲಾಭವನ್ನು ಗಳಿಸಿವೆ; ಆದರೆ ಶೇ. ೭೨ರಷ್ಟು ಲಾಭವು ಪವರ್, ಪೆಟ್ರೋಲಿಯಂ ಮತ್ತು ಹಣಕಾಸು ಸೇವಾವಲಯದ ಮೂಲಕ ದಕ್ಕಿದೆ.
ಎಚ್‌ಎಂಟಿ ಗಡಿಯಾರ, ಟ್ರಾಕ್ಟರ್, ಬೇರಿಂಗ್ ಘಟಕಗಳು ಕೊನೆಯುಸಿರೆಳೆದಿವೆ. ಟೈಟನ್ ಬರುವ ಮೊದಲು ಅತ್ಯಂತಜನಪ್ರಿಯವಾಗಿದ್ದ ಮತ್ತು ದಶಕಗಳಿಂದ ಮಾರುಕಟ್ಟೆ ಆಳಿದ್ದ ಎಚ್‌ಎಂಟಿ, ಕಾಲಕ್ಕೆ ತಕ್ಕಂತೆ ತಂತ್ರಜ್ಞಾನದ ಉನ್ನತೀಕರಣಕ್ಕೆಮುಂದಾಗದೆ ಆಕರ್ಷಕ ವಿನ್ಯಾಸದ ಗಡಿಯಾರಗಳನ್ನು ಉತ್ಪಾದಿಸುವಲ್ಲಿ ವಿ-ಲವಾಗಿ ಟೈಟನ್ ಕಂಪನಿಯ ಮುಂದೆಮಂಡಿಯೂರಬೇಕಾಯಿತು. ಕೇಂದ್ರ ಸರಕಾರದ ಮತ್ತೊಂದು ಬಿಳಿಯಾನೆ ಬಿಎಸ್‌ಎನ್‌ಎಲ್. ೧,೭೮,೦೦೦ ನೌಕರರ ಅತಿಭಾರದಿಂದ ಕುಗ್ಗಿಹೋಗಿದ್ದ ಈ ಸಂಸ್ಥೆಯಲ್ಲಿ ಸ್ವಯಂನಿವೃತ್ತಿ ಯೋಜನೆ ತಂದ ಪರಿಣಾಮ ೯೨,೦೦೦ ನೌಕರರ ಭಾರತಗ್ಗಿತು. ಏಕಸ್ವಾಮ್ಯವಿದ್ದಾಗ ಲಾಭದಲ್ಲಿದ್ದ ಈ ಸಂಸ್ಥೆ, ಖಾಸಗಿಯವರು ದೂರಸಂಪರ್ಕ ಕ್ಷೇತ್ರಕ್ಕೆ ಬಂದ ತರುವಾಯ ನಷ್ಟದಹಾದಿ ಹಿಡಿಯಿತು. ‘ಮರಳಿ ಯತ್ನವ ಮಾಡು’ ಎಂಬಂತೆ ಸಂಸ್ಥೆಯನ್ನು ಹಳಿಗೆ ತರಲು ಸರಕಾರ ಮೂರು ಪ್ಯಾಕೇಜ್‌ಗಳಮೂಲಕ ೩.೨ ಲಕ್ಷ ಕೋಟಿ ರು. ನೀಡಲು ಅನುಮೋದಿಸಿದೆ.
‘ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಮಾರಾಟ ಮಾಡಲಾಗುತ್ತಿದೆ. ಇದೊಂದು ರಾಷ್ಟ್ರವಿರೋಧಿ ಕೃತ್ಯ. ಎಸ್‌ಸಿ,ಎಸ್‌ಟಿ ಹಾಗೂ ಹಿಂದುಳಿದವರ ಉದ್ಯೋಗಾವಕಾಶವನ್ನು ಕಿತ್ತುಕೊಳ್ಳಲಾಗುತ್ತಿದೆ’ ಎಂದು ಮಲ್ಲಿಕಾರ್ಜುನ ಖರ್ಗೆಯವರು ಟ್ವೀಟ್ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ, ಅಪಾರ ನಷ್ಟದಲ್ಲಿದ್ದ ಉದ್ದಿಮೆಗಳನ್ನು ಲಾಭ ಬರುವಂತೆ ಮಾಡುವ ಅವಕಾಶವಿತ್ತು, ಆ ಪ್ರಯತ್ನವನ್ನೇ ಮಾಡಲಿಲ್ಲ.
ಅವಕಾಶವಿದ್ದಾಗ ಅವನ್ನು ಶೋಷಿಸಿ, ಸೊರಗುವಂತೆ ಮಾಡಿ, ಈಗ ‘ಉದ್ದಿಮೆಗಳನ್ನು ಮಾರುತ್ತಿದ್ದಾರೆ’ ಎಂದು ಸುಳ್ಳಿಗೆ ಮೊರೆಹೋಗುವುದು ಒಪ್ಪತಕ್ಕ ಮಾತಲ್ಲ. ಕೇಂದ್ರ ಸರಕಾರ ದೇಶದ ಆಸ್ತಿಯನ್ನು ಮಾರುತ್ತಿದೆ ಎಂಬ ತಪ್ಪುಕಲ್ಪನೆ ಬರುವ ಮಾತು ಮೋದಿ ವಿರೋಧಿಗಳಿಂದ ಪದೇಪದೆ ಹೊಮ್ಮುತ್ತಿದೆ. ಹೀಗೆ ಆಪಾದಿಸುವವರು ಸರಕಾರ ಮಾರಾಟ ಮಾಡಿರುವ ಉದ್ದಿಮೆಗಳ ವಿವರವನ್ನು ಹಂಚಿಕೊಳ್ಳಬೇಕು. ಅಸಲಿ ವಿಷಯವೆಂದರೆ, ಮಾರಾಟವಾಗಿರುವುದು ಏರ್ ಇಂಡಿಯಾ ಕಂಪನಿ ಮಾತ್ರ. ೭೦,೦೦೦ ಕೋಟಿ ರು. ಸಾಲ ವೇ ಇದರ ಆಸ್ತಿಯಾಗಿತ್ತು. ಎಲ್‌ಐಸಿಯ ಶೇ. ೩.೫ರಷ್ಟು ಷೇರುಗಳನ್ನಷ್ಟೇ ಮಾರಾಟ ಮಾಡಲಾಗಿದೆ.
ಕಟುಸತ್ಯವೆಂದರೆ, ಲಾಭದಲ್ಲಿದ್ದ ಏರ್ ಇಂಡಿಯಾವನ್ನು ನಷ್ಟಕ್ಕೆ ತಳ್ಳಿ, ಅದನ್ನು ಮಾರಾಟ ಮಾಡುವಂಥ ಅನಿವಾರ್ಯ ಪರಿಸ್ಥಿತಿಗೆ ನೂಕಿದ್ದೇ ಯುಪಿಎ ಸರಕಾರ. ಸರಕಾರಿ ಉದ್ದಿಮೆಗಳ ಷೇರುಗಳನ್ನು ಮಾರುವುದರಿಂದ, ಷೇರುದಾರರಿಗೆ ಕಂಪನಿಯ ಆಡಳಿತವು ಉತ್ತರದಾಯಿಯಾಗಿರುವ ಕಾರಣ ಪಾರದರ್ಶಕತೆಯ ಬರುತ್ತದೆ, ಕಂಪನಿಯ ಕಾರ್ಯಕ್ಷಮತೆ ಹೆಚ್ಚುತ್ತದೆ.
ಸರಕಾರವು ಅಲ್ಪಪ್ರಮಾಣದ ಷೇರುಗಳನ್ನು ಮಾರುವ ಮೂಲಕ ವಿತ್ತೀಯ ಕೊರತೆಯನ್ನು ತಗ್ಗಿಸಿಕೊಳ್ಳಬಹುದು. ಖಾಸಗಿ ಕಂಪನಿಯೊಂದಿಗೆ ಪಾಲುದಾರನಾಗಿ ಆದಾಯವನ್ನೂ ಹೆಚ್ಚಿಸಿಕೊಳ್ಳಬಹುದು. ಕಳೆದ ೯ ವರ್ಷಗಳಲ್ಲಿ ಬಂಡವಾಳ ಹಿಂತೆಗೆತದಿಂದಾಗಿ ಸರಕಾರವು ೪.೦೭ ಲಕ್ಷ ಕೋಟಿ ರು. ಗಳಿಸಿದ್ದು, ಸದ್ಯ ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ, ಐಡಿಬಿಐ, ಎನ್ ಡಿಎಂಸಿ ಸ್ಟೀಲ್ ಲಿಮಿಟೆಡ್ ಮತ್ತು ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾ ಕಂಪನಿಗಳನ್ನು ಸಂಪೂರ್ಣಮಾರುವ ಪ್ರಕ್ರಿಯೆ ಆರಂಭವಾಗಿದೆ.
ಕರ್ನಾಟಕದ ಎನ್ ಜಿಇಎಫ್, ಮೈಸೂರು ಲ್ಯಾಂಪ್ಸ್, ಮೈಸೂರು ಪೇಪರ್ ಮಿಲ್ಸ್, ಮೈಸೂರು ಇಲೆಕ್ಟ್ರಿಕ್ ಕಂಪನಿ ಮುಂತಾದ ಕಂಪನಿಗಳು ಕೊನೆಯುಸಿರೆಳೆದಿವೆ. ಜಿಗಣೆಯ ಹಾಗೆ ತೆರಿಗೆ ಹಣ ಹೀರುತ್ತಿದ್ದ ಈ ಉದ್ಯಮಗಳಿಗೆ ಸರಕಾರ ಬೀಗಹಾಕಿ ಲಾಭ ಗಳಿಸಿದೆ. ರಾಜ್ಯದ ಒಟ್ಟು ೩೧ ಉದ್ಯಮಗಳು ಬಾಗಿಲು ಹಾಕಿದ್ದು, ಇವುಗಳಲ್ಲಿ ಹೆಚ್ಚಿನವು ಉತ್ತರ ಕರ್ನಾಟಕಕ್ಕೆ ಸೇರಿದವಾ ಗಿದ್ದವು.
ಸರಕಾರದ ಉದ್ದಿಮೆಗಳು ಕಾಲಕಾಲಕ್ಕೆ ಬದಲಾಗುವ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದಿಲ್ಲ ಮತ್ತು ಅಧಿಕಾರಿಶಾಹಿ ಆಡಳಿತದಿಂದಾಗಿ ಕಾರ್ಪೊರೇಟ್ ಶೈಲಿಯ ಆಡಳಿತ ನಡೆಯಲು ಬಿಡುವುದಿಲ್ಲ. ಯಥಾಪ್ರಕಾರ ಆಡಳಿತ ಪಕ್ಷದವರು ಸಾರ್ವಜನಿಕ ಉದ್ದಿಮೆಗಳನ್ನು ಎಟಿಎಂನಂತೆ ಬಳಸಿ ಅದರ ಜೀವ ತೆಗೆದುಹಾಕಿರುತ್ತಾರೆ. ಆದರೆ ಕಳೆದ ೯ ವರ್ಷಗಳಲ್ಲಿ ಮೋದಿ ಸರಕಾರವು ಯಾವುದೇ ಸಾರ್ವಜನಿಕ ಉದ್ದಿಮೆಯ ಅಧ್ಯಕ್ಷ ಸ್ಥಾನಕ್ಕೆ ರಾಜಕೀಯ ನೇಮಕಾತಿ ಕೈಗೊಂಡಿಲ್ಲ. ಮಂತ್ರಿಯಾಗಲೀ ಪ್ರಧಾನಿಯಾಗಲೀ ಯಾರೊಬ್ಬರಿಗೆ ವಿವೇಚನಾ ಕೋಟಾದಲ್ಲಿ ದೊರೆಯುತ್ತಿದ್ದ ವಿಶೇಷ ಸೌಲಭ್ಯಗಳನ್ನು ಹಿಂಪಡೆಯಲಾಗಿದೆ.
ಕಂಪನಿಯ ಆಡಳಿತದಲ್ಲಿ ಸರಕಾರವು ಮೂಗು ತೂರಿಸುವ ಪ್ರವೃತ್ತಿಯು ಗಣನೀಯವಾಗಿ ತಗ್ಗಿ, ಉದ್ದಿಮೆಗಳನ್ನು  ವೃತ್ತಿಪರತೆಯಿಂದ ನಡೆಯುವಂತೆ ಮಾಡಿರುವ ಶ್ರೇಯಸ್ಸು ಮೋದಿ ಸರಕಾರಕ್ಕೆ ಸಲ್ಲುತ್ತದೆ. ‘ಸರಕಾರ ವ್ಯಾಪಾರದಲ್ಲಿ ಇರಬಾರದು. ಅದರ ಕೆಲಸವೆಂದರೆ ನೀತಿ-ನಿಯಮಾವಳಿಯನ್ನು ರೂಪಿಸುವುದು, ಉದ್ದಿಮೆಗಳ ಆರಂಭಕ್ಕೆ ಮೂಲಸೌಕರ್ಯ ಕಲ್ಪಿಸುವುದು. ಆರೋಗ್ಯ, ಶಿಕ್ಷಣ, ಬಡವರಿಗೆ ಮನೆಗಳು, ಸ್ವಚ್ಛ ಕುಡಿಯುವ ನೀರು ಒದಗಿಸಿ ರೈತರ ಹಿತ ಕಾಯುವುದು ಸರಕಾರದ ಕೆಲಸ’ ಎಂಬುದು ಮೋದಿಯವರ ಸ್ಪಷ್ಟ ಅಭಿಪ್ರಾಯ.
ಕೇಂದ್ರ ಸರಕಾರ ಹೂಡುವ ಬಂಡವಾಳದ ಕಾರಣದಿಂದಲೇ ಸಾರ್ವಜನಿಕ ಉದ್ದಿಮೆಗಳು ಜೀವಂತವಾಗಿರವುದು. ನಷ್ಟ ದಲ್ಲಿರುವ ಉದ್ದಿಮೆಗಳಿಗೆ ತೆರಿಗೆ ಹಣವನ್ನು ಮತ್ತೆಮತ್ತೆ ಹರಿಸಿ ಅಮೂಲ್ಯ ಸಂಪನ್ಮೂಲವು ವ್ಯರ್ಥವಾಗುತ್ತಿದೆ. ಸರಕಾರವು ವ್ಯಾಪಾರದ ವೃತ್ತಿಯಿಂದ ಹೊರಬಂದು ಜನಪರ ಆಡಳಿತ ನೀಡಲು ತನ್ನ ಗಮನಹರಿಸಬೇಕಾದ್ದು ಇಂದಿನ ಕಾಲಮಾನದ ಅಗತ್ಯವಾಗಿದೆ.