ದಾರಿ ತಪ್ಪಿದ ಹೋರಾಟಗಳು ಮತ್ತು ಆಂದೋಲನಗಳು
ವಿಶ್ಲೇಷಣೆ
ಗಣೇಶ್ ಭಟ್, ವಾರಣಾಸಿ
ಭಾರತದಲ್ಲಿ ನಡೆದ ಕೆಲವು ಆಂದೋಲನಗಳು ಸಾಮಾಜಿಕ ಬದಲಾವಣೆ ಹಾಗೂ ಜನಸಾಮಾನ್ಯರ ಒಳಿತಿಗೋಸ್ಕರ ನಡೆದಂಥವು. ಒಂದಷ್ಟು ಆಂದೋಲನಗಳು ಉತ್ತಮ ಉದ್ದೇಶಗಳಿಂದ ಆರಂಭವಾದರೂ ತರುವಾಯದಲ್ಲಿ ಕೆಲವು ವ್ಯಕ್ತಿಗಳುತಮ್ಮ ಹಿತಾಸಕ್ತಿಗೆ ತಕ್ಕಂತೆ ಅವನ್ನು ಹೈಜಾಕ್ ಮಾಡಿಕೊಂಡರು. ಕೆಲವು ಹೋರಾಟಗಳನ್ನು ದುರುದ್ದೇಶಗಳಿಂದಲೇ ಮಾಡಲಾಯಿತು. ಪರಿಸರ ಸಂರಕ್ಷಣಾ ಹೋರಾಟದ ಹೆಸರಿನಲ್ಲಿ ಅಭಿವೃದ್ಧಿ ಯೋಜನೆಗಳನ್ನು ತಡೆಯುವ ಯತ್ನಗಳೂ ನಡೆದಿವೆ. ನರ್ಮದಾ ಬಚಾವೋ ಆಂದೋಲನ ಇದಕ್ಕೊಂದು ಉದಾಹರಣೆ.
ಭಾರತದಲ್ಲಿ ಹೋರಾಟ ಮತ್ತು ಆಂದೋಲನಗಳಿಗೆ ಸುದೀರ್ಘ ಹಿನ್ನೆಲೆ ಇದೆ. ೧೮೫೭ರಲ್ಲಿ ಬ್ರಿಟಿಷರ ವಿರುದ್ಧ ಆರಂಭವಾದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವು ಮುಂದೆ ವಿವಿಧ ಹಂತಗಳಲ್ಲಿ ಸ್ವರಾಜ್ಯ ಆಂದೋಲನ, ಅಸಹಕಾರ ಚಳವಳಿ, ಕಾನೂನು ಭಂಗ ಚಳವಳಿ, ಉಪ್ಪಿನ ಸತ್ಯಾಗ್ರಹ, ಭಾರತ ಬಿಟ್ಟು ತೊಲಗಿ ಮೊದಲಾದ ರೂಪಗಳಲ್ಲಿ ಮುಂದುವರಿದು ೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಗುವವರೆಗೆ ನಡೆಯಿತು.
ಸ್ವಾತಂತ್ರ್ಯಾನಂತರದ ಕಾಲದಲ್ಲಿ ನಡೆದ ಹೋರಾಟಗಳಲ್ಲಿ ಇಂದಿರಾ ಗಾಂಧಿಯವರು ಹೇರಿದ್ದ ತುರ್ತು ಪರಿಸ್ಥಿತಿಯ ವಿರುದ್ಧ ನಡೆದ ಆಂದೋಲನವು ಪ್ರಮುಖವಾಗಿದೆ. ಭಾರತದಲ್ಲಿ ನಡೆದ ಕೆಲವು ಆಂದೋಲನಗಳು ಸಾಮಾಜಿಕ ಬದಲಾವಣೆ ಹಾಗೂ ಜನಸಾಮಾನ್ಯರ ಒಳಿತಿಗೋಸ್ಕರ ನಡೆದಂಥವು. ಒಂದಷ್ಟು ಆಂದೋ ಲನಗಳು ಉತ್ತಮ ಉದ್ದೇಶಗಳಿಂದ ಆರಂಭವಾದರೂ ನಂತರದ ದಿವಸಗಳಲ್ಲಿ ಕೆಲವು ವ್ಯಕ್ತಿಗಳು ತಮ್ಮ ಹಿತಾಸಕ್ತಿಗೆ ಅನುಗುಣವಾಗುವಂತೆ ಹೈಜಾಕ್ ಮಾಡಿಕೊಂಡರು.
ಇನ್ನು ಕೆಲವು ಹೋರಾಟಗಳನ್ನು ದುರುದ್ದೇಶಗಳಿಂದಲೇ ಮಾಡಲಾಯಿತು. ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಆದ್ಯತೆ ಸಿಗಬೇಕೆಂಬ ಉದ್ದೇಶದೊಂದಿಗೆ, ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ ಪರಿಗಣಿಸಬೇಕೆಂದು ಆಗ್ರಹಿಸಿ ವಿ.ಕೃ. ಗೋಕಾಕರ ನೇತೃತ್ವದ ಸಮಿತಿಯು ಸಲ್ಲಿಸಿದ್ದ ವರದಿಯ ಆಧಾರದಲ್ಲಿ ಆರಂಭವಾದ ಭಾಷಾ ಚಳವಳಿಯೇ ಗೋಕಾಕ್ ಚಳವಳಿ. ನಟ ರಾಜಕುಮಾರ್ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ಕನ್ನಡದ ಸಾಹಿತಿಗಳು, ಕಲಾವಿದರು, ರಾಜಕೀಯ ಪಕ್ಷಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.
ಈ ಹೋರಾಟಕ್ಕೆ ಮಣಿದ ಅಂದಿನ ಆರ್. ಗುಂಡೂರಾವ್ ನೇತೃತ್ವದ ಸರಕಾರ, ಗೋಕಾಕ್ ವರದಿಯನ್ನು ಪುರಸ್ಕರಿಸಿ ಕನ್ನಡ ಭಾಷೆಗೆ ವಿಶೇಷ ಸ್ಥಾನಮಾನ ಕೊಟ್ಟು ಮೊದಲ ಭಾಷೆಯ ಸ್ಥಾನವನ್ನು ಕಲ್ಪಿಸಿತು. ಇದೇ ರೀತಿ, ಸುಂದರ್ ಲಾಲ್ ಬಹುಗುಣ ಹಾಗೂ ಚಾಂದಿನೀ ಪ್ರಸಾದ್ ಭಟ್ ನೇತೃತ್ವದಲ್ಲಿ ಹಿಮಾಲಯ ಶ್ರೇಣಿಯಲ್ಲಿನ ಮರಗಳ ರಕ್ಷಣೆಗೆ ನಡೆದ ‘ಚಿಪ್ಕೋ ಚಳವಳಿ’ (ಅಪ್ಪಿಕೋ ಚಳವಳಿ) ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ನಡೆದ ಪ್ರಮುಖ ಹೋರಾಟವಾಗಿದೆ.
ಮೇಲೆ ಹೇಳಿದ ಎರಡು ಚಳವಳಿಗಳು ಉತ್ತಮ ಉದ್ದೇಗಳಿಂದ ರೂಪುಗೊಂಡು ಧನಾತ್ಮಕ ಫಲಿತಾಂಶಗಳನ್ನು ಪಡೆದಆಂದೋಲನಗಳಾಗಿವೆ. ಯುಪಿಎ ಸರಕಾರದ ಅವಽಯಲ್ಲಿ ನಡೆದ ವಿವಿಧ ಭ್ರಷ್ಟಾಚಾರ ಪ್ರಕರಣಗಳು ಬೆಳಕಿಗೆ ಬಂದಾಗ ೨೦೧೧ರಲ್ಲಿ ಅಣ್ಣಾ ಹಜಾರೆಯವರ ನೇತೃತ್ವದಲ್ಲಿ ‘ಇಂಡಿಯಾ ಅಗೈನ್ಸ್ಟ್ ಕರಪ್ಷನ್’ ಎಂಬ ಭ್ರಷ್ಟಾಚಾರ ವಿರೋಧಿ ಆಂದೋಲನ ಆರಂಭವಾಗಿ, ನಂತರ ಜನ ಲೋಕಪಾಲ್ ಮಸೂದೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸುವ ಹೋರಾಟ ಶುರುವಾಯಿತು.
ಕಿರಣ್ ಬೇಡಿ, ಅರವಿಂದ್ ಕೇಜ್ರಿವಾಲ್, ಕುಮಾರ್ ವಿಶ್ವಾಸ್, ಮನೀಶ್ ಸಿಸೋಡಿಯಾ ಮೊದಲಾದವರು ಈ ಹೋರಾಟದಲ್ಲಿ ಅಣ್ಣಾ ಹಜಾರೆಯವರ ಜತೆಗೆ ಸೇರಿಕೊಂಡರು. ರಾಜಕೀಯ ಮಹತ್ವಾ ಕಾಂಕ್ಷೆ ಹೊಂದಿದ್ದ ಕೇಜ್ರಿವಾಲರು ಅಣ್ಣಾ ಹಜಾರೆ ಯವರ ವಿರೋಧದ ನಡುವೆಯೂ ೨೦೧೨ರಲ್ಲಿ ನೇರವಾಗಿ ರಾಜಕೀಯಕ್ಕೆ ಸೇರುವ ತೀರ್ಮಾನ ಕೈಗೊಂಡು ಆಮ್ ಆದ್ಮಿ ಪಾರ್ಟಿಯನ್ನು ಸ್ಥಾಪಿಸಿದರು. ಮುಂದಿನ ಚುನಾವಣೆಗಳಲ್ಲಿ ಈ ಪಕ್ಷ ಗೆದ್ದಿತಾದರೂ, ಭ್ರಷ್ಟಾಚಾರದ ವಿರುದ್ಧದ ಚಳವಳಿಯ ಮೂಲಕ ರಾಜಕೀಯಕ್ಕೆ ಪ್ರವೇಶ ಪಡೆದ ಕೇಜ್ರಿವಾಲರ ದೆಹಲಿ ಸರಕಾರದ ಉಪಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಸಹಸಂಸ್ಥಾಪಕ ಮನೀಶ್ ಸಿಸೋಡಿಯಾ ಲಿಕ್ಕರ್ ಹಗರಣದಲ್ಲಿ ಜೈಲು ಸೇರಿದ್ದಾರೆ.
ಇನ್ನೋರ್ವ ಮಂತ್ರಿಯಾಗಿದ್ದ ಸತ್ಯೇಂದ್ರ ಜೈನ್ ಕೂಡಾ ಅಕ್ರಮ ವಹಿವಾಟಿನ ಆರೋಪದಲ್ಲಿ ಜೈಲಿನಲ್ಲಿದ್ದಾರೆ. ಉತ್ತಮಉದ್ದೇಶಕ್ಕಾಗಿ ಆರಂಭವಾದ ಆಂದೋಲನವನ್ನು ವ್ಯಕ್ತಿಯೋರ್ವ ತನ್ನ ಲಾಭಕ್ಕೆ ಬಳಸಿಕೊಂಡಿದ್ದಕ್ಕೆ ಕೇಜ್ರಿವಾಲರು ಉತ್ತಮಉದಾಹರಣೆಯಾಗಿದ್ದಾರೆ. ೨೦೦೦ನೇ ಇಸವಿಯಲ್ಲಿ ಪಶ್ಚಿಮ ಬಂಗಾಳವನ್ನು ಆಳುತ್ತಿದ್ದ ಕಮ್ಯುನಿಸ್ಟ್ ಪಕ್ಷದ ಬುದ್ಧದೇಬ್ ಭಟ್ಟಾಚಾರ್ಯ ಸರಕಾರವು ರಾಜ್ಯದ ಸಿಂಗೂರಿನಲ್ಲಿ ೪೦೦ ಎಕರೆ ಕೃಷಿ ಭೂಮಿಯನ್ನು ವಶಪಡಿಸಿಕೊಂಡು ನ್ಯಾನೋ ಕಾರುಗಳ ತಯಾರಿಕೆಗೆ ಟಾಟಾ ಕಂಪನಿಗೆ ಹಸ್ತಾಂತರಿಸಿದ ಪ್ರಕರಣವನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ತಮ್ಮ ಪಕ್ಷದ ರಾಜಕೀಯ ವಿಸ್ತರಣೆಗಾಗಿ ಚೆನ್ನಾಗಿ ಬಳಸಿಕೊಂಡರು. ಆ ಸಂದರ್ಭದಲ್ಲಿ ಟಿಎಂಸಿಯು ಪ್ರಮುಖ ವಿರೋಧ ಪಕ್ಷದ ಸ್ಥಾನದಲ್ಲಿತ್ತು.
ಸಿಂಗೂರು ಪ್ರತಿಭಟನೆಯಲ್ಲಿ ಟಿಎಂಸಿ ವ್ಯಾಪಕವಾಗಿ ತೊಡಗಿಸಿಕೊಂಡಿತು. ಭಾರಿ ಹಿಂಸಾಚಾರ ನಡೆದು, ಕಾನೂನುಹೋರಾಟವೂ ನಡೆಯಿತು. ಇದರಿಂದಾಗಿ ಟಿಎಂಸಿಗೆ ವ್ಯಾಪಕ ಪ್ರಚಾರವೂ ಸಿಕ್ಕಿತು. ಹಿಂಸಾಚಾರ ಹಾಗೂ ಪ್ರತಿಭಟನೆಗಳಿಗೆಬೇಸತ್ತು ಟಾಟಾ ಕಂಪನಿಯು ೨೦೦೮ರಲ್ಲಿ ಸಿಂಗೂರಿನ ಉದ್ದೇಶಿತ ಯೋಜನೆಯನ್ನು ಕೈಬಿಟ್ಟು ಪಶ್ಚಿಮ ಬಂಗಾಳವನ್ನು ತೊರೆಯಿತು.
ಸಿಂಗೂರು ಹೋರಾಟದ ಮೂಲಕ ಭಾರಿ ಪ್ರಚಾರ ಪಡೆದ ಟಿಎಂಸಿ, ೨೦೧೧ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿಗೆದ್ದು ಅಧಿಕಾರಕ್ಕೇನೋ ಬಂತು. ಆದರೆ ಸಿಂಗೂರಿನ ಅಂದಿನ ಪ್ರತಿಭಟನೆಗಳಿಂದ ರೋಸಿದ ಉದ್ಯಮಿಗಳು ಇಂದಿಗೂ ಪಶ್ಚಿಮ ಬಂಗಾಳದಲ್ಲಿ ಹೂಡಿಕೆ ಮಾಡಲು ಮುಂದೆ ಬರುತ್ತಿಲ್ಲ. ಪ್ರತ್ಯೇಕ ತೆಲಂಗಾಣ ರಾಜ್ಯ ಬೇಕೆಂಬ ಹೋರಾಟ ಕೈಗೊಂಡು,ತೆಲಂಗಾಣವು ಸ್ವತಂತ್ರ ರಾಜ್ಯವೆಂದು ಘೋಷಿಸಲ್ಪಟ್ಟ ನಂತರ ಇಂದಿನವರೆಗೂ ಅದರ ಮುಖ್ಯಮಂತ್ರಿಯಾಗಿ ಅಧಿಕಾರಅನುಭವಿಸುತ್ತಿರುವವರು ಭಾರತ ರಾಷ್ಟ್ರ ಸಮಿತಿಯ (ಹಿಂದೆ ತೆಲಂಗಾಣ ರಾಷ್ಟ್ರ ಸಮಿತಿ ಆಗಿತ್ತು) ಕೆ. ಚಂದ್ರಶೇಖರ ರಾವ್(ಕೆಸಿಆರ್). ಇವರು ಆಂಧ್ರಪ್ರದೇಶದಿಂದ ತೆಲಂಗಾಣ ಪ್ರದೇಶವನ್ನು ಪ್ರತ್ಯೇಕಿಸಿ ತೆಲಂಗಾಣ ರಾಜ್ಯವೆಂದು ಘೋಷಿಸ ಬೇಕೆಂದು ಹೋರಾಟ ಆರಂಭಿಸಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು. ಪ್ರತ್ಯೇಕ ರಾಜ್ಯಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹೇರಲು ಕೆಸಿಆರ್ ಉಪವಾಸ ಸತ್ಯಾಗ್ರಹವನ್ನೂ ಕೈಗೊಂಡರು.
ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರಕಾರವು ಪ್ರತ್ಯೇಕ ತೆಲಂಗಾಣ ರಾಜ್ಯವನ್ನು ಘೋಷಿಸಿದರೆ, ಟಿಆರ್‌ಎಸ್ ಅನ್ನು ಕಾಂಗ್ರೆಸ್‌ನಲ್ಲಿವಿಲೀನ ಗೊಳಿಸುವ ಭರವಸೆಯನ್ನೂ ನೀಡಿದ್ದರು ಕೆಸಿಆರ್. ಆದರೆ ತೆಲಂಗಾಣವು ಪ್ರತ್ಯೇಕ ರಾಜ್ಯವೆಂದು ಘೋಷಿಸಲ್ಪಟ್ಟಾಗಕೆಸಿಆರ್ ತಾವು ಕೊಟ್ಟ ವಚನದಿಂದ ಹಿಂದೆ ಸರಿದರು. ಟಿಆರ್ ಎಸ್ ಅನ್ನು ವಿಸರ್ಜಿಸಲೂ ಇಲ್ಲ, ಕಾಂಗ್ರೆಸ್ ಪಕ್ಷದಲ್ಲಿ ವಿಲೀನ ಗೊಳಿಸಲೂ ಇಲ್ಲ. ಅವರು ತೆಲಂಗಾಣದ ಮೊದಲ ಮುಖ್ಯಮಂತ್ರಿಯೂ ಆದರು, ಎರಡನೇ ಬಾರಿಯೂ ಗೆದ್ದರು.
ಮುಂದೆಯೂ ಅಧಿಕಾರ ತಮ್ಮ ಕುಟುಂಬದ ಕೈಯಲ್ಲೇ ಇರಬೇಕೆಂದು ತಮ್ಮ ಮಗ ಕೆ.ಟಿ. ರಾಮರಾವ್ ಅನ್ನು ಪಕ್ಷದಕಾರ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಪರಿಸರ ಸಂರಕ್ಷಣೆಗಾಗಿ ನಡೆಸುವ ಹೋರಾಟದ ಹೆಸರಿನಲ್ಲಿ ದೇಶದ ಅಭಿವೃದ್ಧಿಗೆ ಪೂರಕವಾಗುವ ಯೋಜನೆಗಳನ್ನು ತಡೆಹಿಡಿಯುವ ಪ್ರಯತ್ನಗಳು ಭಾರತದಲ್ಲಿ ನಡೆದಿವೆ. ನರ್ಮದಾ ಬಚಾವೋ ಆಂದೋಲನ ಇದಕ್ಕೆ ಒಂದು ಉದಾಹರಣೆ. ನರ್ಮದಾ ನದಿಗೆ ಸರ್ದಾರ್ ಸರೋವರ್ ಅಣೆಕಟ್ಟನ್ನು ಕಟ್ಟದಂತೆ ತಡೆಹಿಡಿ ಯಲು ಮೇಧಾ ಪಾಟ್ಕರ್ ನೇತೃತ್ವದ ನರ್ಮದಾ ಬಚಾವೋ ಆಂದೋಲನವು ಶ್ರಮಿಸಿತು.
ಮೇಧಾ ಪಾಟ್ಕರ್ ಈ ಯೋಜನೆಯ ವಿರುದ್ಧ ಜನರನ್ನು ಸಂಘಟಿಸಿ ಪ್ರತಿಭಟನೆ ನಡೆಸಿದರು, ಯೋಜನೆಗೆ ತಡೆಯಾಜ್ಞೆತರಲು ಕಾನೂನು ಹೋರಾಟ ನಡೆಸಿದರು ಹಾಗೂ ಯೋಜನೆಗೆ ಹಣಕಾಸಿನ ನೆರವನ್ನು ಘೋಷಿಸಿದ್ದ ವರ್ಲ್ಡ್ ಬ್ಯಾಂಕ್ ತಾನುಆಶ್ವಾಸನೆ ನೀಡಿದ್ದ ಹಣಕಾಸಿನ ನೆರವನ್ನು ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾದರು. ಆದರೆ ೨೦೦೧ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ನರೇಂದ್ರ ಮೋದಿ, ನರ್ಮದಾ ಬಚಾವೋ ಆಂದೋಲನದ ಎಲ್ಲ ಅಡೆತಡೆಗಳನ್ನು ಮೀರಿ ೨೦೦೭ರಲ್ಲಿ ಅಣೆಕಟ್ಟು ಯೋಜನೆಯನ್ನು ಪೂರ್ಣಗೊಳಿಸಿ ದೇಶಕ್ಕೆ ಸಮರ್ಪಿಸಿದರು.
ಇಂದು ಸರ್ದಾರ್ ಸರೋವರ ಅಣೆಕಟ್ಟು ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಮಹಾರಾಷ್ಟ್ರಗಳ ೪೫ ಲಕ್ಷ ಎಕರೆ ಕೃಷಿಭೂಮಿಗೆ ನೀರುಣಿಸುತ್ತಿದೆ, ಈ ರಾಜ್ಯಗಳ ೨ ಕೋಟಿ ಜನರಿಗೆ ಕುಡಿಯುವ ನೀರನ್ನು ಪೂರೈಸುತ್ತಿದೆ. ಈ ಅಣೆಕಟ್ಟು ನೆರೆ ಹಾಗೂ ಪ್ರವಾಹವನ್ನು ತಡೆಯುತ್ತಿದೆ ಮತ್ತು ೧೪೫೦ ಮೆಗಾವ್ಯಾಟ್ ವಿದ್ಯುತ್ ಅನ್ನು ಉತ್ಪಾದಿಸುತ್ತಿದೆ. ಇಂಥ ಮಹತ್ವದ ಯೋಜನೆಯನ್ನು ಆಂದೋಲನದ ಹೆಸರಿನಲ್ಲಿ ಮೇಧಾಪಾಟ್ಕರ್ ೨ ದಶಕಗಳ ಕಾಲ ಜಾರಿಯಾಗದಂತೆ ತಡೆಹಿಡಿದಿದ್ದರು.
ನಕಲಿ ಪರಿಸರ ಹೋರಾಟಗಾರರು ಹಾಗೂ ಕೆಲವು ಚರ್ಚುಗಳು, ವೇದಾಂತ ರೆಸೋರ್ಸಸ್ ಕಂಪನಿಯು ತಮಿಳುನಾಡಿನತೂತುಕುಡಿಯಲ್ಲಿ ಕಾರ್ಯಾಚರಿಸುತ್ತಿದ್ದ ತನ್ನ ತಾಮ್ರದ ಅದಿರು ಸಂಸ್ಕರಣಾ ಘಟಕವಾದ ಸ್ಟೆರ್ಲೈಟ್ ಅನ್ನು ಮುಚ್ಚಲು ಕಾರಣ ವಾದವು. ಈ ಸಂಸ್ಕರಣಾ ಘಟಕವು ನೀರನ್ನು ಕಲುಷಿತಗೊಳಿಸುತ್ತಿದೆ ಎಂಬ ಆರೋಪದೊಂದಿಗೆ ಪ್ರತಿಭಟನೆ ಆರಂಭವಾಗಿ ತೀವ್ರಗೊಂಡು ಹಿಂಸೆಗೆ ತಿರುಗಿ ಕೊನೆಗೆ ಪೊಲೀಸರು ಗೋಲಿಬಾರ್ ಮಾಡುವ ಹಂತಕ್ಕೆ ತಲುಪಿತು.
ಈ ಹೋರಾಟಕ್ಕೆ ‘-ಯಿಲ್ ವೇದಾಂತ’ (ವೇದಾಂತ ಸಂಸ್ಥೆಯನ್ನು ಹಿಮ್ಮೆಟ್ಟಿಸು) ಹೆಸರಿನ ವಿದೇಶಿ ಸಂಸ್ಥೆಯು ಹಣಕಾಸಿನ ನೆರವನ್ನು ನೀಡುತ್ತಿತ್ತು. ಈ ಹೋರಾಟಗಳಿಂದ ಬೇಸತ್ತ ವೇದಾಂತ ಕಂಪನಿಯು ೨೦೧೭ರಲ್ಲಿ ಸ್ಟೆರ್ಲೈಟ್ ಅನ್ನು ಮುಚ್ಚಿತು. ಈ ಸಂಸ್ಥೆಯು ದೇಶದ ಅವಶ್ಯಕತೆಗೆ ಬೇಕಾಗುವಷ್ಟು ತಾಮ್ರವನ್ನು ಉತ್ಪಾದಿಸುತ್ತಿತ್ತು ಹಾಗೂ ಸಂಸ್ಕರಣೆಗೊಂಡ ತಾಮ್ರವನ್ನು ವಿದೇಶಗಳಿಗೆ ರಫ್ತು ಮಾಡುತ್ತಿತ್ತು. ಸ್ಟೆರ್ಲೈಟ್ ಮುಚ್ಚಿಹೋದ ಕಾರಣ ಈಗ ಭಾರತವು ತಾಮ್ರವನ್ನು ವಿದೇಶಗಳಿಂದ ಆಮದುಮಾಡಿಕೊಳ್ಳಬೇಕಿದೆ!
ತಮಿಳುನಾಡಿನ ಕೂಡಂಕುಳಂನಲ್ಲಿ ಅಣುವಿದ್ಯುತ್ ಸ್ಥಾವರವನ್ನು ನಿರ್ಮಿಸುವ ಸಂದರ್ಭದಲ್ಲೂ ಇದೇ ರೀತಿಯ ಹೋರಾಟ ಗಳು ನಡೆದಿದ್ದವು. ಇದರಲ್ಲಿ ಕೆಲವು ಭಾರತವಿರೋಧೀ ಸಂಘಟನೆಗಳು ಪಾಲ್ಗೊಂಡಿದ್ದು ಸಾಬೀತಾಗಿತ್ತು. ಎರಡು ವರ್ಷಗಳ ಮೊದಲು ಹೊಸ ಕೃಷಿ ಕಾಯಿದೆಗಳ ವಿರುದ್ಧ ನಡೆದ ಹೋರಾಟಗಳ ಹಿಂದೆಯೂ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಪ್ರತ್ಯೇಕತಾವಾದಿ ಸಂಘಟನೆಯಾದ ಖಲಿಸ್ತಾನ್‌ನ ಕೈವಾಡವಿತ್ತು. ರೈತರು ಬೆಳೆದ ವಸ್ತುಗಳಿಗೆ ಮುಕ್ತ ಮಾರುಕಟ್ಟೆಯನ್ನು ಕಲ್ಪಿಸಿಕೊಟ್ಟು ರೈತರನ್ನು ಎಪಿಎಂಸಿಗಳ ದಳ್ಳಾಳಿಗಳ ವಂಚನೆಯಿಂದ ರಕ್ಷಿಸುವ ಉದ್ದೇಶದಿಂದ ಕೇಂದ್ರ ಸರಕಾರವು ಹೊಸ ಕೃಷಿ ಕಾಯಿದೆಗಳನ್ನು ಜಾರಿಗೊಳಿಸಿತ್ತು.
ಆದರೆ ಪಂಜಾಬ್ ಹರಿಯಾಣಗಳ ಎಪಿಎಂಸಿಗಳ ಮಧ್ಯವರ್ತಿಗಳು ಈ ಕಾಯ್ದೆಯು ರೈತವಿರೋಧಿ ಎಂದು ಬಿಂಬಿಸಿ ಯೋಜನೆಯ ವಿರುದ್ಧ ರೈತರನ್ನು ಎತ್ತಿಕಟ್ಟಿದವು, ಇದಕ್ಕೆ ಪ್ರತಿಪಕ್ಷಗಳು ಹಾಗೂ ಕೆಲವು ರೈತಸಂಘಟನೆಗಳು ಕೈಜೋಡಿಸಿ ದವು. ಪ್ರತ್ಯೇಕವಾದಿ ಸಂಘಟನೆಯಾದ ಖಲಿಸ್ತಾನ್ ಈ ಅವಕಾಶವನ್ನು ಉಪಯೋಗಿಸಿಕೊಂಡು ಸಿಕ್ಖರನ್ನು ದೇಶದ ವಿರುದ್ದ ಎತ್ತಿಕಟ್ಟುವ ಹುನ್ನಾರ ಮಾಡಿತು. ಈ ಅಪಾಯವನ್ನು ಮನಗಂಡ ಭಾರತ ಸರಕಾರವು ಹೊಸ ಕೃಷಿ ಕಾಯಿದೆಯನ್ನು ಹಿಂದೆಗೆದುಕೊಂಡಿತು.
ಪರಿಣಾಮ? ಮಧ್ಯವರ್ತಿಗಳಿಂದ ರೈತರ ಮೇಲೆ ನಡೆಯುತ್ತಿದ್ದ ವಂಚನೆ ಹಾಗೂ ಶೋಷಣೆ ಮುಂದುವರಿಯಿತು. ಇತ್ತೀಚೆಗೆ ನಡೆಯುತ್ತಿರುವ ಕುಸ್ತಿಪಟುಗಳ ನಾಟಕೀಯ ಪ್ರತಿಭಟನೆಗಳನ್ನು ಗಮನಿಸಿದಾಗ, ಹೋರಾಟಗಳ ಅಸಲಿ ಕತೆಗಳನ್ನು ಹೇಳಬೇಕೆನಿಸಿತು. ತಿಂಗಳುಗಳ ಹಿಂದೆ ಕೆಲವು ಮಹಿಳಾ ಕುಸ್ತಿಪಟುಗಳು ಭಾರತೀಯ ಕುಸ್ತಿ ಫೆಡರೇಷನ್‌ನ ಅಧ್ಯಕ್ಷ ಹಾಗೂ ಬಿಜೆಪಿಯ ಎಂಪಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಮೇಲೆ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿ, ಅವರನ್ನು ಬಂಧಿಸಲು ಆಗ್ರಹಿಸಿ ಪ್ರತಿಭಟನೆಗಳನ್ನು ಆರಂಭಿಸಿದ್ದರು.
ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶ್ ಪೋಗಟ್ ಹಾಗೂ ಬಜರಂಗ್ ಪೂನಿಯಾ ಈ ಪ್ರತಿಭಟನೆಯ ನೇತೃತ್ವವಹಿಸಿದ್ದರು. ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ಬ್ರಿಜ್ ಭೂಷಣ್ ಮೇಲೆ ತನಿಖೆ ನಡೆಯುತ್ತಿದ್ದರೂ ಜಂತರ್ ಮಂತರ್ನಲ್ಲಿ ಇವರ ಪ್ರತಿಭಟನೆ ಮುಂದುವರಿಯಿತು. ಪ್ರತಿಭಟನಾನಿರತ ಎಲ್ಲಾ ಕುಸ್ತಿಪಟುಗಳು ಜಾಟ್ ಸಮುದಾಯಕ್ಕೆ ಸೇರಿದವರಾಗಿದ್ದು ಆ ಸಮುದಾಯದ ಮುಖಂಡರು, ರಾಕೇಶ್ ಟಿಕಾಯತ್‌ನಂಥ ವ್ಯಕ್ತಿಗಳು ಹಾಗೂ ಪ್ರತಿಪಕ್ಷಗಳು ಇವರ ಹೋರಾಟಕ್ಕೆ ಬೆಂಬಲ ಕೊಟ್ಟವು. ಈ ನಡುವೆ, ಹೊಸ ಸಂಸತ್ ಭವನದ ಉದ್ಘಾಟನೆಯ ಕಾರ್ಯಕ್ರಮಕ್ಕೆ ಪ್ರತಿಭಟನಾಕಾರರು ನುಗ್ಗಿ ಕಾರ್ಯಕ್ರಮವನ್ನು ಹಾಳುಗೆಡವಲು ಹವಣಿಸಿ ಪೊಲೀಸರಿಂದ ಬಂಧಿಸಲ್ಪಟ್ಟರು.
ಈ ಹಿಂದೆ ಬ್ರಿಜ್ ಭೂಷಣ್ ಮೇಲೆ ಲೈಂಗಿಕ ಶೋಷಣೆಯ ಆರೋಪ ಹೊರಿಸಿದ್ದ ಅಪ್ರಾಪ್ತ ವಯಸ್ಸಿನ ಮಹಿಳಾ ಕುಸ್ತಿಪಟುವಿನ ತಂದೆಯು ತನ್ನ ಮಗಳಿಗೆ ಬ್ರಿಜ್ ಭೂಷಣ್ ಲೈಂಗಿಕ ಕಿರುಕುಳ ನೀಡಿಲ್ಲವೆಂದು ಸ್ಪಷ್ಟೀಕರಿಸಿ, ತನಗೆ ಬ್ರಿಜ್ ಭೂಷಣ್ ಮೇಲೆ ಕೋಪವಿದ್ದುದರಿಂದ ಇಂಥ ದೂರನ್ನು ಕೊಡಬೇಕಾಯಿತು ಎಂದು ಹೇಳಿದ್ದಾರೆ. ಕುಸ್ತಿಪಟು ಗಳ ಹೋರಾಟವು ಪಡೆಯುತ್ತಿರುವ ತಿರುವುಗಳನ್ನು ನೋಡಿದಾಗ ಈ ಪ್ರತಿಭಟನೆಯು ಹಲವು ಆಯಾಮಗಳ ಹಿನ್ನೆಲೆಯನ್ನು ಹೊಂದಿದೆ ಎನಿಸುತ್ತಿದೆ.
ಹರಿಯಾಣ ರಾಜ್ಯ ವಿಧಾನಸಭಾ ಚುನಾವಣೆಯು ಸಮೀಪಿಸುತ್ತಿದ್ದು ಅಲ್ಲಿನ ಪ್ರಬಲ ಸಮುದಾಯವಾದ ಜಾಟರನ್ನು ಬಿಜೆಪಿಯಿದ ದೂರ ಸರಿಸುವುದು, ಭಾರತೀಯ ಕುಸ್ತಿ ಫೆಡರೇಷನ್ ಮೇಲೆ ಜಾಟರ ಪ್ರಾಬಲ್ಯವನ್ನು ಸಾಧಿಸುವುದು ಮತ್ತು ವಿನೇಶ್ ಪೋಗಟ್, ಸಾಕ್ಷಿ ಮಲಿಕ್ ಹಾಗೂ ಬಜರಂಗ್ ಪೂನಿಯಾರಂಥ ಕುಸ್ತಿಪಟುಗಳಿಗೆ ದೇಶೀಯ ಹಂತದ ಆಯ್ಕೆಯ ಸ್ಪರ್ಧೆಗಳಿಂದ ವಿನಾಯಿತಿ ಪಡೆದು ನೇರವಾಗಿ ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಆಯ್ಕೆ ಪಡೆಯುವುದು ಮೊದಲಾದ ಗುಪ್ತ ಅಜೆಂಡಾಗಳನ್ನು ಈ ಪ್ರತಿಭಟನೆಯು ಹೊಂದಿದೆ.