ಅಶ್ವಮೇಧದ ಕುದುರೆ ಕಟ್ಟುವ ಕಸರತ್ತು!
ವಿಶ್ಲೇಷಣೆಮಾರುತೀಶ್ ಅಗ್ರಾರ
ಮೋದಿಯವರನ್ನು ಹಣಿಯುವ ವಿಪಕ್ಷಗಳ ಯತ್ನ ನಂತರ ಹಳ್ಳ ಹಿಡಿದ ನಿದರ್ಶನಗಳಿವೆ. ಏಕೆಂದರೆ ಈ ವಿಪಕ್ಷ ನಾಯಕರಲ್ಲೇ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ರಾಹುಲ್ ಗಾಂಧಿಯವರಿಂದ ಹಿಡಿದು, ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ್, ಅರವಿಂದ ಕೇಜ್ರಿವಾಲ್, ಚಂದ್ರಶೇಖರ ರಾವ್ ಇವರೆಲ್ಲ ಪ್ರಧಾನಿ ಅಭ್ಯರ್ಥಿಗಳೇ!
ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ, ನಿದ್ರೆ ಯಲ್ಲಿದ್ದ ಬಿಜೆಪಿಯೇತರ ನಾಯಕರುಗಳನ್ನು ಹಾಗೂ ಮೋದಿ ವಿರೋಧಿಗಳನ್ನು ಅಕ್ಷರಶಃ ಬಡಿದೆಬ್ಬಿಸಿದೆ! ಈ ಕಾರಣದಿಂದಲೇ, ‘ಕರ್ನಾಟಕ ಮಾಡೆಲ್’ (ಉಚಿತ ಗ್ಯಾರಂಟಿ) ಅನ್ನು ಈಗಿನಿಂದಲೇ ದೇಶವ್ಯಾಪಿ ಹಬ್ಬಿಸಿ ಅದರ ಪ್ರಯೋಜನ ಪಡೆದರೆ ಲೋಕಸಭಾ ಚುನಾವಣೆಯಲ್ಲಿ ಮೋದಿಯವರನ್ನು ಎದುರಿಸುವುದು ಸುಲಭ ಎನ್ನುವ ಲೆಕ್ಕಾಚಾರ ಹಾಕುತ್ತಿದೆ ಕಾಂಗ್ರೆಸ್.
ಅಂದಹಾಗೆ, ವಿರೋಧ ಪಕ್ಷಗಳು ಪ್ರಧಾನಿ ಮೋದಿಯವರ ವಿರುದ್ಧ ಎಷ್ಟೇ ಟೀಕೆ-ಟಿಪ್ಪಣಿ ಮಾಡುತ್ತಿದ್ದರೂ, ದೇಶದಲ್ಲಿ ಮೋದಿಯವರ ಜನಪ್ರಿಯತೆ ಕಡಿಮೆಯಾಗಿಲ್ಲ ಹಾಗೂ ರಾಜಕೀಯ ನಾಯಕರ ವಿಚಾರದಲ್ಲಿ ಜಾಗತಿಕ ವಲಯದಲ್ಲೂ ಮೋದಿಯೇ ಈಗಲೂ ನಂಬರ್ ೧. ಮೋದಿ ಪ್ರಧಾನಿಯಾಗಿ ಅಽಕಾರ ವಹಿಸಿಕೊಂಡು ೯ ವರ್ಷಗಳಾಗಿವೆ. ಇಷ್ಟೂ ಅವಧಿ ಯಲ್ಲಿ ಅವರ ಸರಕಾರದ ವಿರುದ್ಧ ಒಂದೇ ಒಂದು ಹಗರಣ ವಾಗಲೀ, ಭ್ರಷ್ಟಾಚಾರದ ಪ್ರಕರಣವಾಗಲೀ ಕೇಳಿಬಂದಿಲ್ಲ. ಅಷ್ಟರಮಟ್ಟಿಗೆ ಮೋದಿ ತಮ್ಮ ಹೊಣೆಗಾರಿಕೆ ಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.
ಜತೆಗೆ, ಮೋದಿಯವರ ಈ ಕಾರ್ಯಾವಧಿಯಲ್ಲಿ ದೇಶ ಸಾಕಷ್ಟು ಅಭಿವೃದ್ಧಿಯನ್ನೂ ಕಾಣುತ್ತಿದೆ. ನೆನಪಿಡಿ, ಈ ೯ ವರ್ಷಗಳಲ್ಲಿ ಮೋದಿ ಯಾವ ಯೋಜನೆ/ಕಾರ್ಯಕ್ರಮವನ್ನೂ ಉಚಿತ ವಾಗಿ ಕೊಟ್ಟಿಲ್ಲ! ಅವರು ಗುಜರಾತ್ ಮುಖ್ಯ ಮಂತ್ರಿಯಾಗಿದ್ದಾ ಗಲೂ ಉಚಿತ ಯೋಜನೆಗಳ ಹೆಸರಿನಲ್ಲಿ ಚುನಾವಣೆ ಗೆದ್ದ ಉದಾಹರಣೆಯಿಲ್ಲ. ಆದರೂ ಜನರಿಗೆ ಇಂದಿಗೂ ಮೋದಿಯವರಆಡಳಿತದ ಮೇಲೆಯೇ ನಂಬಿಕೆ.
ಇತ್ತೀಚೆಗೆ ಭಾರತಕ್ಕೆ ಬಂದಿದ್ದ ಅಮೆರಿಕದ ಖ್ಯಾತ ಉದ್ಯಮಿ ಬಿಲ್ ಗೇಟ್ಸ್ ಅವರು ಮೋದಿಯವರು ಕೈಗೊಂಡಿರುವ ಆರ್ಥಿಕ ಸುಧಾರಣಾ ಯೋಜನೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರ ಜತೆಗೆ ‘ಭಾರತ ಭವಿಷ್ಯದ ಭರವಸೆ’ ಎಂದಿದ್ದರು. ಆ ಮೂಲಕ ಅವರು ಮೋದಿ ಆಡಳಿತಕ್ಕೆ ಬಹಿರಂಗ ವಾಗಿಯೇ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗಾಗಲೇ ಅನೇಕ ಮೂಲಗಳಿಂದ ಬರುತ್ತಿರುವ ಮಾಹಿತಿಗಳ ಪ್ರಕಾರ, ೨೦೨೪ರ ಲೋಕಸಭಾ ಚುನಾವಣೆಯಲ್ಲೂ ಮೋದಿ ನಾಯಕತ್ವದ ಬಿಜೆಪಿ ಸರಕಾರವೇ ೩ನೇ ಅವಧಿಗೂ ಅಧಿಕಾರ ಹಿಡಿಯುವುದು ಖಚಿತ ಎನ್ನಲಾಗುತ್ತಿದೆ. ವಿಪಕ್ಷಗಳನ್ನು ಈಗ ಆತಂಕಕ್ಕೆ ದೂಡಿರುವುದು ಈ ಸಂಗತಿಯೇ.
ಮೋದಿ ನಾಯಕತ್ವದ ಬಿಜೆಪಿಯನ್ನು ಸೋಲಿಸಲು ವಿಪಕ್ಷಗಳು ಇದುವರೆಗೂ ಸಾಕಷ್ಟು ಕಸರತ್ತು ನಡೆಸಿದರೂ, ಅದ್ಯಾವುದೂ ಅವರಂದುಕೊಂಡಷ್ಟು ಯಶಸ್ಸು ತಂದುಕೊಟ್ಟಿರಲಿಲ್ಲ. ಆದರೆ ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ‘ಉಚಿತ ಗ್ಯಾರಂಟಿ’ ಯೋಜನೆಗಳನ್ನು ಘೋಷಿಸಿ ಕಾಂಗ್ರೆಸ್ ಯಶಸ್ವಿಯಾಗಿರುವುದು ದೇಶದ ಮುಂದಿನ ಚುನಾವಣಾ ರಾಜಕಾರಣದ ಚಹರೆ ಯನ್ನೇ ಬದಲಾಯಿಸಬಹುದು ಎನ್ನಲಾಗುತ್ತಿದೆ.
ಇಂಥ ತಂತ್ರಗಾರಿಕೆಯ ಮೂಲಕವಾದರೂ ಮೋದಿಯನ್ನು ಮಣಿಸಬೇಕು ಎಂದು ಹಗಲು ಗನಸು ಕಾಣುತ್ತಿದ್ದಾರೆ ವಿಪಕ್ಷ ನಾಯಕರು. ಏಕೆಂದರೆ, ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈ ತಂತ್ರವನ್ನೇ ಪ್ರಯೋಗಿಸಲು ಕಾಂಗ್ರೆಸ್ ಸನ್ನದ್ಧವಾಗಿದೆ. ಈ ಕಸರತ್ತಿನ ನೆರವಿನಿಂದ ಉಭಯ ರಾಜ್ಯಗಳಲ್ಲಿ ಕಾಂಗ್ರೆಸ್ಬಹುಮತ ಪಡೆದಿದ್ದೇ ಆದರೆ, ೨೦೨೪ರ ಲೋಕಸಭಾ ಚುನಾವಣೆ ಬಿಜೆಪಿಯ ಪಾಲಿಗೆ ಕಬ್ಬಿಣದ ಕಡಲೆಯಾಗೋದಂತೂ ಸತ್ಯ.
ಏಕೆಂದರೆ, ‘ನಮ್ಮ ದೇಶವಿಂದು ಜಗತ್ತಿನ ೫ನೇ ಆರ್ಥಿಕತೆಯಾಗಿದೆ, ೫ಜಿ ತಂತ್ರಜ್ಞಾನಕ್ಕೆ ಭಾರತ ಕಾಲಿಟ್ಟಿದೆ, ಉಕ್ಕಿನ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಅಗ್ರಗಣ್ಯ ರಾಷ್ಟ್ರವಾಗಿದೆ’ ಎಂದರೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದ ಚಿತ್ತಸ್ಥಿತಿ ನಮ್ಮ ಕೆಲ ಜನರಲ್ಲಿ ರೂಪುಗೊಂಡಿದೆ. ‘ಮೋದಿಯವರು ಕೈಗೊಂಡ ಅಭಿವೃದ್ಧಿ ಯೋಜನೆಗಳು ಮತ್ತು ಆರ್ಥಿಕ ಸುಧಾರಣಾ ಕ್ರಮಗಳು ಈ ಸಾಧನೆಗೆ ಕಾರಣ’ ಎಂದರೆ, ‘ಹೌದೇನು? ಇದರಿಂದ ನಮಗೇನು ಸಿಕ್ಕಿತು?’ ಎಂದು ಉಡಾಫೆಯಲ್ಲಿ ಮರುಪ್ರಶ್ನಿಸುವಮೂಲಕ ದೇಶದ ಅಭಿವೃದ್ಧಿಯ ಚಿತ್ರಣವನ್ನೇ ಗಾಳಿಗೆ ತೂರುವ ಧೋರಣೆ ನಮ್ಮ ಜನರಲ್ಲಿ ನಿಧಾನಕ್ಕೆ ಇಣುಕುತ್ತಿದೆ.
ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶವೇ ಇದಕ್ಕೆ ಸಾಕ್ಷಿಯಾಗಿ ನಮ್ಮ ಕಣ್ಣ ಮುಂದಿದೆ. ‘ರಾಷ್ಟ್ರೀಯತೆ, ಹಿಂದುತ್ವ, ಮೋದಿ ವರ್ಚಸ್ಸು, ಗುಜರಾತ್ ಮಾಡೆಲ್ ಹಾಗೂ ಅಭಿವೃದ್ಧಿ’ ಎಂಬ ಮಂತ್ರಜಪಿಸುತ್ತ ಇಷ್ಟು ದಿನ ಬಿಜೆಪಿಯು ಅನೇಕ ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು; ಆದರೆ ಮುಂದಿನ ದಿನಗಳಲ್ಲಿ ‘ಉಚಿತ ಗ್ಯಾರಂಟಿ’ಯ ಮುಂದೆ ದೇಶದ ಅಭಿವೃದ್ಧಿಯು ಜನರಿಗೆ ನಗಣ್ಯವಾಗಿ ಕಾಣುವಂತಾದರೆ ಯಾರೂ ಅಚ್ಚರಿಪಡಬೇಕಿಲ್ಲ.
ಹಾಗಾದಲ್ಲಿ ಭಾರತವನ್ನು ದೇವರೇ ಕಾಪಾಡಬೇಕು! ಏಕೆಂದರೆ, ಗೆಲುವಿನ ಫಾರ್ಮುಲಾವೊಂದನ್ನು ಕಂಡುಕೊಂಡು ಅದರಿಂದ ದಕ್ಕುವ ಯಶಸ್ಸಿನ ರುಚಿ ಕಂಡಿರುವ ಕಾಂಗ್ರೆಸ್ ಪಕ್ಷ, ಮುಂದೆ ಅಧಿಕಾರದ ಆಸೆಗಾಗಿ ಮತದಾರರಿಗೆ ಏನೆಲ್ಲ ಗ್ಯಾರಂಟಿಗಳ ಆಮಿಷವೊಡ್ಡುತ್ತದೋ ಯಾರಿಗೆ ಗೊತ್ತು?! ಆದರೆ ಒಂದಂತೂ ಸತ್ಯ.
ಮುಂಬರುವ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಅದೇನೇ ಉಚಿತ ಯೋಜನೆಗಳನ್ನುಘೋಷಿಸಿದರೂ, ಲೋಕಸಭಾ ಚುನಾವಣೆಯಲ್ಲಿ ಮೋದಿ ಸರಕಾರವನ್ನು ಸೋಲಿಸಬೇಕೆಂಬ ಗುಪ್ತ ಕಾರ್ಯಸೂಚಿ ಅವುಗಳಲ್ಲಿ ಅಡಗಿರುತ್ತದೆಯೇ ಹೊರತು ಜನಕಲ್ಯಾಣದ ಆಶಯವಲ್ಲ. ‘ಜನಪರ ಸರಕಾರ’, ‘ನುಡಿದಂತೆ ನಡೆಯುತ್ತೇವೆ’ ಎಂಬುದೆಲ್ಲ ಇಲ್ಲಿ ಬೂಟಾಟಿಕೆಯಾಗಿರುತ್ತದೆ.
ಹೀಗಾಗಿಯೇ, ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳೆಲ್ಲವೂ ಈ ಸಲ ಶತಾಯಗತಾಯ ಮೋದಿಯವರನ್ನು ಅರ್ಥಾತ್ ಬಿಜೆಪಿಯನ್ನು ಸೋಲಿಸಲೇಬೇಕು ಎಂದು ನಾನಾ ತಂತ್ರಗಳನ್ನು ಹೆಣೆಯುತ್ತಿವೆ. ಇದರ ಭಾಗವಾಗಿಯೇ ಕಾಂಗ್ರೆಸ್, ಟಿಎಂಸಿ,ಜೆಡಿಯು, ಎಸ್‌ಪಿ, ಡಿಎಂಕೆ, ಆಮ್‌ಆದ್ಮಿ, ಆರ್ ಜೆಡಿ, ಎನ್‌ಸಿಪಿ, ಜೆಎಂಎಂ, ಐಯುಎಂಎಲ್ ಸೇರಿದಂತೆ ಒಟ್ಟು ೧೮ ಪಕ್ಷಗಳು ಮೋದಿ ವಿರುದ್ಧ ಒಂದಾಗುತ್ತಿವೆ. ಈ ಎಲ್ಲ ಪಕ್ಷಗಳ ನಾಯಕರು ಈ ಉದ್ದೇಶವಿಟ್ಟುಕೊಂಡೇ ಜೂನ್ ೨೩ರಂದು ಪಟನಾದಲ್ಲಿ ಸಭೆ ಸೇರಿ, ಮೋದಿ ವಿರುದ್ಧ ಒಗ್ಗಟ್ಟು ಪ್ರದರ್ಶಿಸುವ ತಯಾರಿಯಲ್ಲಿದ್ದಾರೆ.
ತಮಾಷೆಯೆಂದರೆ, ಈ ಹಿಂದೆ ಕೂಡ ಮೋದಿ ವಿರುದ್ಧ ಹೀಗೆ ಒಗ್ಗಟ್ಟು ಪ್ರದರ್ಶಿಸಿದ ಅದೆಷ್ಟೋ ಸಭೆಗಳು ನಂತರ ಹಳ್ಳ ಹಿಡಿದಿವೆ. ಏಕೆಂದರೆ ಈ ವಿಪಕ್ಷ ನಾಯಕರುಗಳಲ್ಲೇ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ‘ಮುಸ್ಲಿಂ ಲೀಗ್ ಜಾತ್ಯತೀತ ಪಕ್ಷ’ ಎಂಬ ಹೊಸವ್ಯಾಖ್ಯಾನ ಕೊಟ್ಟಿರುವ ರಾಹುಲ್ ಗಾಂಽಯವರಿಂದ ಹಿಡಿದು, ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ್, ಅರವಿಂದ ಕೇಜ್ರಿವಾಲ್, ಚಂದ್ರಶೇಖರ ರಾವ್ ಇವರೆಲ್ಲ ಪ್ರಧಾನಿ ಅಭ್ಯರ್ಥಿಗಳೇ! ಜತೆಗೆ, ಕಾಂಗ್ರೆಸ್ ಮತ್ತು ಕೇಜ್ರಿವಾಲ್ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ.
ಚಂದ್ರಶೇಖರರಾವ್ ಮತ್ತು ಮಮತಾ ಬ್ಯಾನರ್ಜಿ ಕಾಂಗ್ರೆಸ್‌ನ ನಿರ್ಧಾರಗಳಿಗೆ ಅಷ್ಟು ಸುಲಭವಾಗಿ ತಲೆಯಾಡಿಸುವುದಿಲ್ಲ. ಏಕೆಂದರೆ, ತಂತಮ್ಮ ರಾಜ್ಯಗಳಲ್ಲಿ ಬಿಜೆಪಿಯೇ ಪ್ರಬಲ ವಿರೋಧಿಯಾಗಿರುವುದರಿಂದ, ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡು ಅಲ್ಲಿ ಪುನಃ ಅದನ್ನು ಬೆಳೆಯಲು ಬಿಟ್ಟರೆ ತಮಗೇ ಕಂಟಕ ಎಂಬುದು ಚಂದ್ರಶೇಖರ ರಾವ್ ಮತ್ತು ಮಮತಾಬ್ಯಾನರ್ಜಿ ಇಬ್ಬರಿಗೂ ಚೆನ್ನಾಗಿ ಗೊತ್ತು. ನಿತೀಶ್ ಕುಮಾರರಿಗೆ ಈ ಬಾರಿ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುವುದು ಬಿಟ್ಟರೆ ಬೇರೆ ದಾರಿಯಿಲ್ಲ.
ಹಾಗಾಗಿಯೇ ಅವರು ಕಾಂಗ್ರೆಸ್ ನಾಯಕರ ಜತೆ ಹೆಚ್ಚು ಆಪ್ತರಾಗುತ್ತಿದ್ದಾರೆ. ಇನ್ನು ಸಮಾಜವಾದಿ ಪಕ್ಷದ ಅಖಿಲೇಶ್ಯಾದವ್ ಕೂಡ ಕಾಂಗ್ರೆಸ್‌ನ ಮರ್ಜಿಗೆ ಒಳಗಾಗುವುದು ಡೌಟು. ಏಕೆಂದರೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಈಗಾಗಲೇ ಧರಾಶಾಯಿಯಾಗಿದೆ! ಬಿಎಸ್‌ಪಿಯ ಮಾಯಾವತಿ ಕೂಡ ಸಕ್ರಿಯ ರಾಜಕಾರಣದಿಂದ ಅದ್ಯಾಕೋ ದೂರವಿದ್ದಾರೆ. ಹೀಗಾಗಿಅಲ್ಲಿ ಬಿಜೆಪಿಗೆ ಖಡಕ್ ಎದುರಾಳಿಯೆಂದರೆ ಸಮಾಜವಾದಿ ಪಕ್ಷ ಮಾತ್ರ. ಈ ಹಿಂದೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡು ನಷ್ಟ ಅನುಭವಿಸಿದ್ದನ್ನು ಅಖಿಲೇಶ್ ಮರೆತಿಲ್ಲ.
ಹೀಗಾಗಿ, ಬರೋಬ್ಬರಿ ೮೦ ಲೋಕಸಭಾ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಲೋಕಸಭಾ ಚುನಾವಣಾದೃಷ್ಟಿಯಿಂದ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಮತ್ತೊಮ್ಮೆ ಪೆಟ್ಟು ತಿನ್ನಲು ಅಖಿಲೇಶ್ ಸಿದ್ಧರಿಲ್ಲ ಎನಿಸುತ್ತದೆ. ಸದ್ಯಕ್ಕೆ ಅವರು ಪಟನಾದ ಸಭೆಗೆ ಹೋದರೂ, ಚುನಾವಣೆಯ ಆಸುಪಾಸಿನಲ್ಲಿ ಏನು ಬೇಕಾದರೂ ಆಗಬಹುದು! ಮಹಾರಾಷ್ಟ್ರದ ಶಿವಸೇನೆಯೂ ಪಟನಾ ಸಭೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿಲ್ಲ.
ಏಕೆಂದರೆ ಸಾವರ್ಕರ್ ವಿಚಾರದಲ್ಲಿ ಶಿವಸೇನೆ ಮತ್ತು ಕಾಂಗ್ರೆಸ್ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಸಾವರ್ಕರ್ ವಿಷಯದಲ್ಲಿ ರಾಹುಲ್ ಗಾಂಽ ಸಾಕಷ್ಟು ತೆಗಳಿಕೆಯ ಮಾತಾಡುತ್ತಿರುವುದು ಮಹಾರಾಷ್ಟ್ರದಲ್ಲಿ ತನಗೆ ಸಾಕಷ್ಟು ಪೆಟ್ಟು ಕೊಡಬಹುದು ಎಂದು ಭಾವಿಸಿರುವ ಶಿವಸೇನೆಯು ಕಾಂಗ್ರೆಸ್ ಜತೆಗಿನ ಮೈತ್ರಿ ಬೇಕೋ ಬೇಡವೋ ಎಂಬ ಗೊಂದಲದಲ್ಲಿದೆ. ಹೀಗಾಗಿ ಪಟನಾ ಸಭೆಯಿಂದ ಅದು ಹಿಂದೆ ಸರಿದಿದೆ. ನ್ಯಾಷನಲ್ ಕಾನರೆನ್ಸ್ ಪಕ್ಷದ ಒಮರ್ ಅಬ್ದುಲ್ಲಾ ಕೂಡ ಈ ಮೈತ್ರಿಕೂಟದಿಂದ ಹೊರಗುಳಿಯುವ ಸೂಚನೆ ನೀಡಿದ್ದಾರೆ; ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ೩೭೦ನೇ ವಿಧಿ ರದ್ದಾದಾಗ ಎಲ್ಲಾ ವಿಪಕ್ಷಗಳು ಸುಮ್ಮನಿದ್ದವು ಎಂದಿದ್ದ ಒಮರ್, ಈಗ ಅದೇ ಕಾರಣಕ್ಕೆ ವಿಪಕ್ಷಗಳ ಕೂಟವನ್ನು ಬೆಂಬಲಿಸ ದಿರಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಅವರ ಈ ನಿರ್ಧಾರವನ್ನು ಯಾರೂ ಗಂಭೀರವಾಗಿ ಪರಿಗಣಿಸಬೇಕಿಲ್ಲ, ಏಕೆಂದರೆ ಯಾವ ಕ್ಷಣದಲ್ಲಾದರೂ ಅವರು ಯು-ಟರ‍್ನ್ ತೆಗೆದುಕೊಳ್ಳುವುದು ಗ್ಯಾರಂಟಿ! ಒಳಗೊಳಗೇ ಇಷ್ಟೆಲ್ಲಾ ಅಪಸ್ವರ, ಭಿನ್ನಾಭಿಪ್ರಾಯ ಇಟ್ಟುಕೊಂಡಿರುವ ವಿಪಕ್ಷ ನಾಯಕರು, ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಒಮ್ಮತದ ನಿರ್ಧಾರ ಕೈಗೊಳ್ಳುವುದು ಸಾಧ್ಯವೇ?! ಇನ್ನೊಂದು ಆಶ್ಚರ್ಯಕರ ಸುದ್ದಿಯೆಂದರೆ, ವಿಪಕ್ಷಗಳೆಲ್ಲಾ ಸೇರಿ ರಾಷ್ಟ್ರವ್ಯಾಪಿ ೪೫೦ ಲೋಕಸಭಾ ಕ್ಷೇತ್ರಗಳಲ್ಲಾದರೂ ಬಿಜೆಪಿ ವಿರುದ್ಧ ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ತಂತ್ರಗಾರಿಕೆಯನ್ನು ಹೆಣೆಯುತ್ತಿವೆಯಂತೆ.
ಇದು ದೆಹಲಿ ರಾಜಕೀಯ ಪಡಸಾಲೆಯಿಂದ ಬಂದಿರುವ ಮಾಹಿತಿ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ನೇತೃತ್ವದಲ್ಲಿ ಕಳೆದ ಮಾರ್ಚ್ ಕೊನೆಯಲ್ಲಿ ನಡೆದ ವಿಪಕ್ಷ ನಾಯಕರ ಸಭೆಯಲ್ಲಿ ಇಂಥ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ. ನರೇಂದ್ರ ಮೋದಿ ಎಂಬ ‘ಅಶ್ವಮೇಧದ ಕುದುರೆ’ಯನ್ನು ಈ ಮೂಲಕವಾದರೂ ೨೦೨೪ರ ಚುನಾವಣೆಯಲ್ಲಿ ಕಟ್ಟಿಹಾಕುವಗುಪ್ತ ಕಾರ್ಯಸೂಚಿಯ ಭಾಗವಿದು.
ಆದರೆ, ‘ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆಯಿತು’ ಎನ್ನುವ ಹಾಗೆ ದಿನಕ್ಕೊಂದು ನಡೆ ಬದಲಿಸುವ ವಿಪಕ್ಷಗಳ ನಾಯಕ ರಿಂದ ಇದು ಸಾಧ್ಯವಾ? ಕಾದು ನೋಡೋಣ…