ಹಿಡಿತ, ಹೊಡೆತ, ನಿರಾಡಳಿತಗಳ ನಡುವೆ ಸರಕಾರದ ಉಚಿತ !
ಜೆ.ಪ್ರತಾಪ್ ಕೊಡಂಚ
ಅಬ್ಬರ, ಆಡಂಬರದ ಪ್ರಚಾರ, ಆಣೆ-ಪ್ರಮಾಣಗಳ ಪ್ರವಾಹದ ನಡುವೆ ಕರ್ನಾಟಕ ವಿಧಾನಸಭೆಯ ಚುನಾವಣೆ ಮುಗಿದು ತಿಂಗಳಾಗಿದೆ. ಅಳೆದೂ, ತೂಗಿ, ಸ್ಪಷ್ಟ ಬಹುಮತದ ಕಾಂಗ್ರೆಸ್ ಸರಕಾರದ ತೀರ್ಪು ಬಂದಿದೆ.
ಗದ್ದುಗೆ ಹಿಡಿದ ಕಾಂಗ್ರೆಸ್, ಕನ್ನಡಿಗರಿಗೆ ಮರೀಚಿಕೆಯಾಗಿದ್ದ ಪೂರ್ಣ ಪ್ರಮಾಣದ ಸರಕಾರ ರಚಿಸಿ ಕಾರ್ಯತತ್ಪರವಾಗಿದೆ. ಸೋತು ಸುಣ್ಣವಾದ ಮೇಲೂ, ಕಳೆದ ಭಾರಿಗಿಂತಲೂ ಹೆಚ್ಚಿನ ಶೇಕಡಾವಾರು ಮತ ಪ್ರಮಾಣ ಸಿಕ್ಕಿದೆಯೆಂದು ಸೋಲ ನೊಪ್ಪಲೂ ಅನುಮಾನಿಸುತ್ತಿರುವ ಕರ್ನಾಟಕದ ಬಿಜೆಪಿ ಕಾಣೆಯಾದಂತಿದೆ!
ಕಾಂಗ್ರೆಸ್ ಬಣಗಳೊಡಗಿನ ಮುಸುಕಿನ ಗುದ್ದಾಟ ಮುಂದಿಟ್ಟುಕೊಂಡು ಸ್ವಯಂಕೃತ ಅಪರಾಧಗಳನ್ನು ಮನ್ನಿಸಿಕೊಳ್ಳುವ ಬಿಜೆಪಿಯ ಆರಂಭಿಕ ಹುನ್ನಾರಕ್ಕೂ ಕಾಂಗ್ರೆಸ್ ಈ ತನಕ ಆಸ್ಪದ ಕೊಟ್ಟಿಲ್ಲ! ವಚನಗಳ ಅನು ಷ್ಠಾನಕ್ಕೆ ಬೇಕಾದ ಬದ್ಧತೆ ತನಗಿದೆಯೆಂಬ ಚಿತ್ರಣ ಮೂಡಿಸುವಲ್ಲಿ ಸರಕಾರ ಸದ್ಯಕ್ಕೆ ಯಶಸ್ವಿಯಾಗಿದೆ. ಸೋಲಿನ ಸುಳಿಯಲ್ಲಿ ಸೊರಗಿರುವ ಕರ್ನಾಟಕ ಬಿಜೆಪಿಗೆ ಪ್ರಾಮಾಣಿಕವಾದ ಅವಲೋಕನ ಮಾಡಿ ಪುಟಿದೇಳುವ ಚೈತನ್ಯವೂ ಇದ್ದಂತಿಲ್ಲ!
ಸರಕಾರ ಉಳಿಯೋಲ್ಲ, ಕಾದು ನೋಡಿ ಎನ್ನುವ ಅವರು, ಇದು ಜನ ವಿರೋಧಿ, ವಚನಭ್ರಷ್ಟ ಸರಕಾರ, ಇದರ ವಿರುದ್ಧ ಜನಾಂದೋಲನ ಮಾಡುತ್ತೇವೆ ಎನ್ನುತ್ತಿದ್ದಾರೆ. ಕೊಡವಿ ನಿಲ್ಲುವ ಮೊದಲೇ ಕೆಡವುವುದರ ಕನಸು ಇವರದ್ದು! ಕಾಂಗ್ರೆಸ್ ಗೆಲುವಿಗೆ ಉಚಿತ ಭರವಸೆಗಳೇ ಕಾರಣವೆಂಬ ಷರಾ, ರಾಜ್ಯ ಬಿಜೆಪಿ ಬರೆದಾಗಿದೆ. ತಮ್ಮ ದುರಾಡಳಿತ, ಆರೋಪಗಳನ್ನು ತಳ್ಳಿ ಹಾಕಲಾಗದ ನಿರ್ಲಜ್ಜತನ, ತಾವೇನೇ ಮಾಡಿದರೂ ಸಿದ್ಧಾಂತಕ್ಕೆ ಅಂಟಿಕೊಂಡ ಕಾರ್ಯಕರ್ತರು, ಮೇಲಿನವರನ್ನು ನೋಡಿ ದಡ ತಲುಪಿಸುತ್ತಾರೆಂಬ ಹುಂಬತನ ಸೋಲಿಗೆ ಕಾರಣವೆನ್ನುವುದನ್ನು ತಿಳಿದೋ, ತಿಳಿಯದೆಯೋ ಮರೆಮಾಚುತ್ತಿದೆ.
ಬಿಜೆಪಿ ಸೋಲಿಗೆ, ಕಾಂಗ್ರೆಸ್‌ನವರ ಉಚಿತಕ್ಕೂ ಮೀರಿದ ಪ್ರಮುಖ ಕಾರಣ ಅವರ ನಿರಾಡಳಿತ! ಆಡಳಿತ ಯಂತ್ರ ಇದೆಯೋ ಇಲ್ಲವೆಂಬ ಅನುಮಾನ ಮೂಡಿಸಿತ್ತು, ಬೊಮ್ಮಾಯಿ ನೇತೃತ್ವದ ಸರಕಾರ! ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿನ ಮೂಲಭೂತ ಸೌಕರ್ಯದ ಅವ್ಯವಸ್ಥೆಗಳನ್ನು ಕಂಡೂ ಕಾಣದಂತಿದ್ದುದು ಅವರದ್ದೇ ಸರ್ಕಾರ. ಪ್ರಧಾನಿ, ಕೇಂದ್ರ ನಾಯಕರ ಸ್ವಾಗತಕ್ಕೆ ರಸ್ತೆ ಸರಿಪಡಿಸುವ ಕಾರ್ಯಗಳನು ಬಿಟ್ಟರೆ, ಬೇರಾವ ಗುಂಡಿಗಳನ್ನು ಮುಚ್ಚಿ ಜೀವ ಉಳಿಸಿ ಎಂಬ ಜನಸಾ ಮಾನ್ಯರ ಕೂಗು ಅಂದಿನ ಆಡಳಿತಕ್ಕೆ ತಲುಪದಿದ್ದುದು ದುರಂತ!
ಪಕ್ಷಾತೀತವಾಗಿ ಸದನದಲ್ಲಿರಬೇಕಿತ್ತೆಂಬ ಮನ್ನಣೆಯ ಹಲವು ಹಿರಿಯ ಬಿಜೆಪಿಗರ ಸೋಲಿಗೆ ಬಹುದೊಡ್ಡ ಕಾರಣ ‘ಹಿಡಿತ’ಮತ್ತು ‘ಹೊಡೆತ’! ತನ್ನವರನ್ನೇ ಮುಂದೆ ತಂದು ಹಿಡಿತ ಸಾಧಿಸುವ ಹಪಾಹಪಿ, ಮತ್ತು ತಮಗಾಗದವರನ್ನು ಒಳಹೊಡೆತ ಗಳ ಮೂಲಕ ಮಣ್ಣುಮುಕ್ಕಿಸುವ ರಾಜಕಾರಣ! ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿದ್ದ ಸಿಟಿ ರವಿ ಕ್ಷೇತ್ರಕ್ಕೆ ಹೋದ ರಾಜ್ಯದ ಸ್ಟಾರ್ ಪ್ರಚಾರಕರೆಂದರೆ ಟಿಕೆಟ್ ಸಿಗದ ಈಶ್ವರಪ್ಪ! ಇನ್ನುಳಿದ ಸ್ಟಾರ್ ಪ್ರಚಾರಕರು ಚಿಕ್ಕಮಗಳೂರಿನತ್ತ ಏಕೆಮುಖ ತೋರಿಸಲಿಲ್ಲವೆಂಬುದು ಅವರವರ ಊಹೆಗೆ ಬಿಡಬೇಕು!
ರವಿ, ಪರಿಸ್ಥಿತಿಯ ಹೊಡೆತ ಬಿದ್ದಿದೆಯೆಂದರೆ, ಸೋಮಣ್ಣ, ತಿಪ್ಪಾರೆಡ್ಡಿ ಖೆಡ್ಡಾಕ್ಕೆ ಕೆಡವಿದವರು ನಮ್ಮವರೇ ಎಂದಿದ್ದಾರೆ!ಮಾಜಿಮಂತ್ರಿ ಪ್ರಭು ಚವ್ಹಾಣ್ ಅಳುತ್ತಲೇ, ಸ್ಥಳೀಯ ಸಂಸದ, ಕೇಂದ್ರ ಮಂತ್ರಿ, ತಮ್ಮ ಸೋಲಿಗೆ ಶ್ರಮಿಸಿದ್ದಲ್ಲದೇ, ನನಗೆ ಜೀವ ಬೆದರಿಕೆ ಹಾಕಿದ್ದಾರೆಂದು ಗೆದ್ದು ಬಂದ ನಂತರ ನೊಂದು ನುಡಿದಿದ್ದಾರೆ. ಕಾರ್ಯಕರ್ತರೇ ನಮ್ಮ ಜೀವಾಳವೆಂದ ಬಿಜೆಪಿ, ಪುತ್ತೂರಿನಲ್ಲಿ, ಕಾರ್ಯಕರ್ತರ ಮುನಿಸಿನತ್ತ ಕಣ್ಣ್ಮುಚ್ಚಿ, ಕಾಂಗ್ರಸಿನವರಿಗೆ ಬಾಳೆಲೆಯ ಮೇಲೆ ಮೃಷ್ಟಾನ್ನ ಬಡಿಸಿದೆ!
ಪುತ್ತಿಲ, ಸವದಿ, ಶೆಟ್ಟರ್ ಸೋಲಿಸಲು ಬಳಸಿದ ಸಂಪನ್ಮೂಲ, ತಂತ್ರಗಾರಿಕೆ, ಶ್ರಮಬೇರೆಡೆಗೆ ಹಾಕಿದ್ದರೆ ಕಡಿಮೆ ಅಂತರದಲ್ಲಿಸೋತಿದ್ದ ಇಪ್ಪತ್ತು-ಇಪ್ಪತ್ತೈದು ಕ್ಷೇತ್ರಗಳನ್ನು ಬಿಜೆಪಿ ಉಳಿಸಿಕೊಳ್ಳಬಹುದಿತ್ತು. ಶಿಸ್ತಿನ ಪಕ್ಷವೆಂದೇ ಬಿಂಬಿಸಿಕೊಳ್ಳುವ ಬಿಜೆಪಿಯ ರಾಜ್ಯ ಸಂಘಟನೆ ಆತ್ಮಾವಲೋಕನದ ನೇಪಥ್ಯಕ್ಕೆ ಸರಿದಂತಿದೆ. ವಿಧಾನ ಸಭೆ ಚುನಾವಣೆಯ ಮೊದಲಿನ ಬೆಳವಣಿಗೆಗಳು, ಲೋಕಸಭೆ ಚುನಾವಣೆಯ ಹೊಸ್ತಿಲಲ್ಲೂ ಮುಂದುವರಿಯುತ್ತಿರುವ ವಿದ್ಯಮಾನವನ್ನು ಹಿರಿಯ ಬಿಜೆಪಿಗ, ಸದಾನಂದ ಗೌಡರು ಬಿಚ್ಚಿಟ್ಟಿದ್ದಾರೆ.
ಮೈ ಕೊಡವಿ ಎದ್ದು ನಿಲ್ಲುವ ಲಕ್ಷಣ ಬಿಜೆಪಿಗರಲ್ಲಿ ಕಾಣದಿರುವುದು, ಈಗಲಾದರೂ ಎಚ್ಚೆತ್ತು ಸಮರ್ಥ ವಿಪಕ್ಷವಾಗಿಕಾರ್ಯತತ್ಪರ ವಾಗಬೇಕೆಂಬ ಜವಾಬ್ದಾರಿ ಕಾಣಿಸದಿರುವುದು ವಿಪರ್ಯಾಸ. ಅಧಿಕಾರದ ಚುಕ್ಕಾಣಿ ಹಿಡಿದ ಒಂದುತಿಂಗಳೊಳಗೆ ಕಾಂಗ್ರೆಸ್ ವಚನಭ್ರಷ್ಟವಾಗಿದೆ ಎನ್ನುವ ಧಾವಂತದಲ್ಲಿರುವ ಬಿಜೆಪಿಗರಿಗೆ, ವಿಪಕ್ಷ ನಾಯಕನ ಆಯ್ಕೆಯ ಧಾವಂತವಿಲ್ಲ! ಯಾರಲ್ಲಿ? ಬಲ್ಲಿನೇರಯ್ಯ? ನಾನು ರಾಜ್ಯಾಧ್ಯಕ್ಷನೆಂದು, ಗಿರಿಕಿ ಹೊಡೆಯುತ್ತಿದ್ದ ನಳೀನ್ ಕುಮಾರರುಸೋಲಿನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದ್ದಾರೆ.
ಅವರಿನ್ನೂ, ಕಾಂಗ್ರೆಸಿಗರು ತಾಕತ್ತಿದ್ದರೆ ನುಡಿದಂತೆ ನಡೆಯಲಿ, ಸರಕಾರ ಲೋಕಸಭೆ ಚುನಾವಣೆಯವರೆಗೆ ಉಳಿಯುವುದಿಲ್ಲ ನೋಡ್ತಾ ಇರಿ ಎಂಬ ಭವಿಷ್ಯ ನುಡಿಯುತ್ತಿzರೆ! ಉತ್ತರ ಪ್ರದೇಶ, ಗುಜರಾತ್ ಮಾದರಿಗಳ ಜಾಡಿನಲ್ಲಿ ಜಾದು ನಡೆಯಲುಕಾತರಿಸುತ್ತಿದ್ದ ಸಂಘಟನೆ, ಬಹುಪಾಲು ಟಿಕೇಟ್ ವಂಚಿತರಿಗೆ ಸೂಕ್ತ ಮಾಹಿತಿ ಒದಗಿಸಿ, ವಿಶ್ವಾಸಕ್ಕೆ ತೆಗೆದುಕೊಳ್ಳುವಜವಾಬ್ದಾರಿಯನ್ನೂ ನಿಭಾಯಿಸರಲಿಲ್ಲ. ಅವಕಾಶ ವಂಚಿತ ಹಿರಿಯ ಬಿಜೆಪಿಗರು ಟಿವಿ ನೋಡಿ ಸುದ್ದಿ ತಿಳಿಯಿತೆಂದ್ದದ್ದು, ರಾಜ್ಯ, ಜಿ ಮಟ್ಟದ ಸಂಘಟನೆಗಳ ನಿಷ್ಕ್ರಿಯತೆಗೆ ಸಾಕ್ಷಿ.
ಚುನಾವಣೆ ಮುಗಿದಿದೆ. ಸರಕಾರ ರಚನೆಯಾಗಿದೆ. ಪ್ರಣಾಳಿಕೆಯ ಜಾರಿಯಲ್ಲಿ ಹೊಸ ಸರಕಾರ ನಿರತವಾಗಿದೆ. ಈಗಲೂ ಚುನಾವಣೆ ಹೊತ್ತಿನ, ಪರ-ವಿರೋಧ, ತಾಕತ್ತಿದ್ದರೆ, ಧಮ್ಮಿದ್ದರೆ, ಮಾಡಿ ತೋರಿಸಿಯೆನ್ನುವ ಬಾಲಿಶ ಹೇಳಿಕೆಗಳನ್ನು ಬಿಟ್ಟು, ಪ್ರತಿಪಕ್ಷವಾಗಿ ಜವಾಬ್ದಾರಿ ನಿಭಾಯಿಸುವ ಹೊಣೆಗಾರಿಕೆ ಬಿಜೆಪಿಗಿದೆ. ವಿರೋಧ ಪಕ್ಷವೆಂದರೆ ಎಲ್ಲವನ್ನೂ ವಿರೋಧಿಸಿ,ಜನಾಕ್ರೋಶ ಸೃಷ್ಟಿಸಬೇಕಿಲ್ಲ. ಸರಕಾರ ಆಡಳಿತಾತ್ಮಕವಾಗಿ ಎದ್ದು ನಿಲ್ಲಲು ಬೆಂಬಲಿಸಿ, ಜನಪರ ಆಡಳಿತ ಕೊಡುವಂತ ಸುಭದ್ರ ವ್ಯವಸ್ಥೆ ನಿರ್ಮಾಣ ಮಾಡುವ ಜವಾಬ್ದಾರಿ ಚುನಾಯಿತ ಪ್ರತಿಪಕ್ಷಕ್ಕಿದೆ.
ಸರಕಾರ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಟ್ಟು, ಎಡವಿದರೆ ಎಚ್ಚರಿಸಿ, ಜನಜೀವನದ ಉನ್ನತಿಗೆ ಶಾಸನಬದ್ದವಾಗಿ ಶ್ರಮಿಸಿ ಸಮಾಜಕ್ಕೆ ಹತ್ತಿರವಾಗುವ ಪ್ರಯತ್ನ ಪ್ರಬುದ್ಧತೆ ಅವಶ್ಯವೆನಿಸುತ್ತದೆ. ಸರಕಾರವನ್ನು ವಿಫಲಗೊಳಿಸುವ ಧ್ಯೇಯ ವಿಪಕ್ಷಗಳzಗಬಾರದು. ವಿಫಲಗೊಂಡ ಸರಕಾರವನ್ನು ಎಚ್ಚರಿಸುವ, ತಿದ್ದಿಕೊಳ್ಳದಿದ್ದರೆ ಜನಾಭಿಪ್ರಾಯ ಮೂಡಿಸುವಪ್ರಬುದ್ಧತೆಯನ್ನು ಪ್ರತಿಪಕ್ಷಗಳು ತೋರಿಸಿದಾಗ ಮಾತ್ರ ಪ್ರಜಾಪ್ರಭುತ್ವ ಪರಿಣಾಮಕಾರಿಯೆನಿಸಬಲ್ಲದು.