ಸೆಂಗೋಲ್: ಚಾಲುಕ್ಯರ ಮರೆತದ್ದು ಸರಿಯೇ ?
ಡಾ.ಕರವೀರ ಪ್ರಭು ಕ್ಯಾಲಕೊಂಡ
ನೂತನ ಸಂಸತ್ ಭವನದ ಸ್ಪೀಕರ್ ಪೀಠದ ಬಳಿ ಸ್ಥಾಪಿಸಲಾದ ಸೆಂಗೋಲ್(ರಾಜದಂಡ)ದ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಕೇಂದ್ರ ಸರಕಾರದ ಪ್ರಕಾರ ಅದು ಅಧಿಕಾರ ಹಸ್ತಾಂತರದ ಪ್ರತೀಕವಾಗಿ ನೆಹರುಗೆ ಲಾರ್ಡ್ ಮೌಂಟ್‌ಬ್ಯಾಟನ್ನೀಡಿದ್ದು. ಕಾಂಗ್ರೆಸ್ ಪ್ರಕಾರ, ನೆಹರು ಅವರಿಗೆ ‘ಉಡುಗೊರೆ ’ಯಾಗಿ ನೀಡಲಾಗಿದೆ ಎಂದು ತಮಿಳುನಾಡು ಮೂಲದ ತಿರುವವಾಡು ತುರೈ ಅಧಿನಂನ ಸ್ವಾಮಿಜಿ ಹೇಳಿದ್ದಾರೆ.
ಇದಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ತಮಿಳುನಾಡಿನ ಶೈವ ಪರಂಪರೆಯ ಅಧಿನಂ ಮಠದ ಸ್ವಾಮಿಗಳು ಸೆಂಗೋಲ್ ಅನ್ನು ಭಾರತದ ಕೊನೆಯ ವೈಸ್ ರಾಯ್ ಲಾರ್ಡ್ ಮೌಂಟ್ ಬ್ಯಾಟನ್‌ಗೆ ನೀಡಿದ್ದರು. ಅನಂತರ ಅದನ್ನು ವಾಪಸ್ ಪಡೆದು, ನೆಹರು ಅವರಿಗೆ ನೀಡಲಾಗಿತ್ತು ಎಂದು ಹೇಳಿದ್ದರು. ಜಾಲತಾಣ ದಲ್ಲೂ ಈ ಬಗ್ಗೆ ಚರ್ಚೆಯಾಗಿದ್ದು, ಅಧಿಕಾರ ಹಸ್ತಾಂತರಕ್ಕೆ ಸಾಕ್ಷಿಯಾಗಿ ೧೯೪೭ರ ಆಗಸ್ಟ್ ೨೫ರ ಸಂಚಿಕೆಯ ‘ಟೈಮ್ಸ್’ ನಿಯತ ಕಾಲಿಕೆಯ ಲೇಖನದ ಪುಟಗಳು ಹರಿದಾಡುತ್ತಿವೆ.
ಚೋಳರು ಅಧಿಕಾರ ಹಸ್ತಾಂತರದ ಸೂಚಕವಾಗಿ ಬಳಸುತ್ತಿದ್ದರು. ರಾಜರು, ಯುವರಾಜರಿಗೆ ಪಟ್ಟಾಭಿಷೇಕ ಮಾಡುವಾಗ ಸೆಂಗೋಲ್ ಅನ್ನು ಹಸ್ತಾಂತರಿಸುತ್ತಿದ್ದರು ಎಂದೂ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಅದನ್ನು ಪುಷ್ಟೀಕರಿಸಲು ಪುರಾವೆಗಳನ್ನು ಪೂರೈಸುವಲ್ಲಿ ವಿಫಲವಾಗಿವೆ. ಅಂತೆಕಂತೆಗಳ ಮೇಲೆ ಅದು ಇತ್ತೀಚೆಗಷ್ಟೆ ಗೂಡುಗಟ್ಟಿದೆ. ಇತಿಹಾಸವನ್ನು ತಿರುಚಿ ಬರೆಯುವುದು ಇತ್ತಿತ್ತಲಾಗಿ ಒಂದು ಹೊಸ ಉದ್ಯೋಗವೇ ಆಗಿದೆ.
ಅದೇನೇ ಇರಲಿ, ಆದರೆ ನಿಜವಾಗಿ ‘ಸೆಂಗೋಲ್ ಅಧಿಕಾರ ಹಸ್ತಾಂತರದ ಪ್ರತೀಕ’ ಚಾಲುಕ್ಯರ ಕಾಲದಲ್ಲಿ ಆಗಿತ್ತು. ಉತ್ತರವಾಹಿನಿಯಾಗಿ ಹರಿಯುವ ಮಲಪ್ರಭೆಯ ದಡದಲ್ಲಿರುವ ವಿಶ್ವಪರಂಪರೆಯ ತಾಣಪಟ್ಟದಕಲ್‌ನಲ್ಲಿ ಯುವರಾಜರ ಪಟ್ಟಾಭಿಷೇಕ ನಡೆಯುತ್ತಿತ್ತು. ಅಧಿಕಾರ ಹಸ್ತಾಂತರದ ಪ್ರತೀಕವಾಗಿ ಸೆಂಗೋಲ್ ಅನ್ನು ಚಾಲುಕ್ಯರು ಬಳಸುತ್ತಿದ್ದರು. ಇದಕ್ಕೆಪುಷ್ಟಿ ನೀಡುವ ಪುರಾವೆಗಳು ಪಟ್ಟದಕಲ್ ಗುಡಿಗಳ ಸಂಕೀರ್ಣದ ಶಿಲ್ಪಗಳಲ್ಲಿ ಕಾಣ ಸಿಗುತ್ತವೆ.
ಶಿಲ್ಪಕಲೆಯ ರಸಗಟ್ಟಿಯಾದ ವಿರೂಪಾಕ್ಷ ದೇವಾಲಯ ಪಟ್ಟದಕಲ್‌ನಲ್ಲಿದೆ. ಇದನ್ನು ಕಂಚಿ ಪಲ್ಲವರ ಮೇಲೆ ಚಾಲುಕ್ಯಅರಸ ಎರಡನೇ ವಿಕ್ರಮಾದಿತ್ಯ ಜಯ ಸಾಧಿಸಿದ ನಂತರ, ಅದರ ಸವಿನೆನಪಿಗಾಗಿ ಮಹಾರಾಣಿ ಲೋಕಮಹಾದೇವಿ ಕ್ರಿ.ಶ .೭೪೦ ರಲ್ಲಿ ಈ ದೇವಾಲಯ ಕಟ್ಟಿಸಿದಳು. ಈ ವಿರೂಪಾಕ್ಷ ದೇವಾಲಯದ ಹೊರಗೋಡೆಯ ಬಲಭಾಗದಲ್ಲಿ ಚತುರ್ಭುಜ ಶಿವನ ಮೂರ್ತಿಯಿದ್ದು, ನಟರಾಜನ ನೃತ್ಯ ಶೈಲಿಯಲ್ಲಿ ಮನಮೋಹಕವಾಗಿದೆ.
ಅಜ್ಞಾನದ ಸಂಕೇತವಾದ ಮೂರ್ತಿಯನ್ನು ಕಾಲಲ್ಲಿ ತುಳಿದು ನಾಶಪಡಿಸುವ ನೃತ್ಯ ಬಂಗಿಯಲ್ಲಿ ಶಿವ ಕೆತ್ತಲ್ಪಟ್ಟಿದ್ದಾನೆ.ಅವನ ಮಗ್ಗಲ ಸೆಂಗೋಲ್‌ನ ಪ್ರತಿರೂಪವಿರುವುದನ್ನು ನೋಡಬಹುದು. ‘ಚಾಲುಕ್ಯರು ಸೆಂಗೋಲ್’ ಅಧಿಕಾರ ಹಸ್ತಾಂತರದಪ್ರತೀಕ ಎಂಬುದನ್ನು ಏಳನೇ ಶತಮಾನದಲ್ಲಿಯೇ ಪ್ರಪಂಚಕ್ಕೆ ಪರಿಚಯಿಸಿದ್ದರು. ಚಾಲುಕ್ಯರ ಯುವ ರಾಜರ ಪಟ್ಟಾಭಿಷೇಕ ನಡೆಯುತ್ತಿದ್ದ ಪಟ್ಟದಕಲ್ಲಿನ ಗುಡಿಗಳ ಸಂಕೀರ್ಣದಲ್ಲಿರುವ ಶಿಲ್ಪಕಲೆಯ ರಸಗಟ್ಟಿಯಾದ ವಿರೂಪಾಕ್ಷ ದೇವಾಲಯದಲ್ಲಿಸೆಂಗೋಲ್ ಇರುವುದು. ಚಾಲುಕ್ಯರು ರಾಜ್ಯಭಾರ ಹಸ್ತಾಂತರಿಸುವಾಗ ‘ಸೆಂಗೋಲ್ ’ ಬಳಸುತ್ತಿದ್ದರು ಎಂಬುದಕ್ಕೆ ಪುಷ್ಟಿ ನೀಡುವ ಪುರಾವೆ ಇದಾಗಿದೆ.
ಆದರೆ, ಯಾವುದೇ ಪುರಾವೆ, ಪುರಸ್ಕಾರಗಳಿಲ್ಲದೇ ನಮ್ಮ ಕೇಂದ್ರ ಗೃಹಮಂತ್ರಿಗಳು ಚೋಳರು ಸೆಂಗೋಲ್ ಅನ್ನುಅಽಕಾರ ಹಸ್ತಾಂತರದ ಪ್ರತೀಕ ಎಂದು ಹೇಳಿರುವುದು, ಅದಕ್ಕೆ ಚಕಾರವೆತ್ತದೆ ಕಣ್ಣು, ಕಿವಿ, ಬಾಯಿ ಮುಚ್ಚಿಕೊಂಡು ಕರ್ನಾಟಕ ಪ್ರತಿನಿಽಸುವ ಸಂಸತ್ ಸದಸ್ಯರು ಕುಳಿತಿರುವುದು ದೊಡ್ಡ ದುರಂತವೇ ಸರಿ !
ಕನ್ನಡಿಗರಿಗಾದ ದೊಡ್ಡ ಅಪಚಾರ !!
ಸೆಂಗೋಲ್ ಪ್ರತಿಷ್ಠಾಪಿಸುವ ಮೂಲ ಉದ್ದೇಶ ಎಲ್ಲ ರೀತಿಯ ಅಸಮಾನತೆಯನ್ನು ಹೋಗಲಾಡಿಸುವುದು. ಆದರೆ, ಅದರ ಮಹತ್ವ ಕಡಿಮೆ ಮಾಡುವ ಘಟನೆಗಳು ಇತ್ತೀಚೆಗೆ ಅಧಿಕಗೊಂಡಿವೆ. ಹಿಂದೆ ರಾಜಗುರುಗಳು, ಋಷಿಮುನಿಗಳು ರಾಜ ಹದ್ದು ಮೀರಿ, ಧರ್ಮ ಮೀರಿ ವರ್ತಿಸದಂತೆ ಆಗಾಗ ಎಚ್ಚರಿಸುತ್ತಿದ್ದರು. ಈಗ ಆ ವ್ಯವಸ್ಥೆಯಿಲ್ಲ, ಈಗಿರುವುದು ಪ್ರಜಾಪ್ರಭುತ್ವ.ಜನ ಮತ ನೀಡಿದ ಮೇಲೆ ಆಡಳಿತದಲ್ಲಿರುವವರನ್ನು ಅಡ್ಡಗಟ್ಟಿ ಪ್ರಶ್ನಿಸುವಂತಿಲ್ಲ ಎನ್ನುವಂತಾಗಿದೆ.
ಸೆಂಗೋಲ್ ಪ್ರತಿಷ್ಠಾಪಿಸುವುದು ಸುಲಭ. ಆದರೆ, ಅದಕ್ಕೆ ಗೌರವ ನೀಡಿ, ಅದರ ಘನತೆಗೆ ಧಕ್ಕೆ ಬರದಂತೆ ನಡೆದು ಕೊಳ್ಳುವುದು ಕಷ್ಟ. ಹಿಂದೆ ರಾಜಮಹಾರಾಜರು ಸೆಂಗೋಲ್ ಮಹತ್ವ ಅರಿತು, ತಗ್ಗಿ ಬಗ್ಗಿ ನಡೆಯುತ್ತಿದ್ದರು. ಯಾರಿಗೂ ಅನ್ಯಾಯವಾಗದಂತೆ ವರ್ತಿಸುತ್ತಿದ್ದರು. ಜನರ ಭಾವನೆಗಳಿಗೆ ಸ್ಪಂದಿಸುತ್ತಿದ್ದರು. ಈಗ ನೇರವಾಗಿ ಜನ ಹೇಳಿದರೂ, ಜನಪ್ರತಿನಿಧಿಗಳು ‘ಕ್ಯಾರೆ’ ಅನ್ನುವುದಿಲ್ಲ. ಕೋರ್ಟು ಮೂಗು ತೂರಿಸುವುದು ಅನಿವಾರ್ಯವಾಗಿದೆ.
ಈ ಸಂಕ್ರಮಣ ಕಾಲದಲ್ಲಿ ಜನಪ್ರತಿನಿಧಿಗಳಿಗೆ ಸೆಂಗೋಲ್ ಮಹತ್ವ ಕುರಿತು ಅರಿವು ಮೂಡಿಸಬೇಕಾಗಿದೆ. ಸಂಸತ್ತು, ಶಾಸನ ಸಭೆಗಳನ್ನು ದೇವಾಲಯಕ್ಕೆ ಹೋಲಿಸುತ್ತೇವೆ. ಅಲ್ಲಿ ಜನಪ್ರತಿನಿಽಗಳು ದೆವ್ವದಂತೆ ವರ್ತಿಸುವುದನ್ನು ಬಿಡಬೇಕು. ಎಲ್ಲಡೆ ಅಕ್ರಮ, ಭ್ರಷ್ಟಾಚಾರ ಆವರಿಸಿ ಬಿಟ್ಟಿದೆ. ಸತ್ಯ, ಶ್ರದ್ಧೆ ಸತ್ತುಹೋಗಿವೆ. ಇವೆಲ್ಲವುಗಳ ಕಟ್ಟನ್ನು ಕಡಿದು ಹೊರಬರಬೇಕಿದೆ. ಪ್ರಾಮಾಣಿಕತೆ ಪ್ರಜ್ವಲಿಸಬೇಕಿದೆ.
ಹಿಂದಿನ ಪರಂಪರೆ, ಸಂಸ್ಕಾರ, ಸಂಸ್ಕೃತಿ ಜನಪ್ರತಿನಿಧಿಗಳ ಅಂತರಂಗದ ಆಳಕ್ಕೆ ಇಳಿಯಬೇಕಿದೆ. ಅಂದಾಗ ಪ್ರಜಾ ಪ್ರಭುತ್ವದ ಉಳಿವು. ಸೆಂಗೋಲ್ ಪ್ರತಿಷ್ಠಾಪನೆ ಪ್ರತಿಷ್ಠೆಯ ಪ್ರಶ್ನೆಯಾಗದಿರಲಿ. ನ್ಯಾಯಸಮ್ಮತ ನಡೆಗೆ ನಾಂದಿಯಾಗಲಿ.