ಮೇಘದೂತ ಎಂಬ ಯಕ್ಷನೊಬ್ಬನ ವಿರಹಗೀತೆ
ಸಾರಸ್ವತ ಲಹರಿ
ಗಣೇಶ ಭಟ್ಟ
ಆಷಾಢ ಮಾಸ ಈಗಾಗಲೇ ಪ್ರಾರಂಭವಾಗಿದೆ. ‘ರಘುವಂಶ’, ‘ಕುಮಾರಸಂಭವ’ ಮಹಾಕಾವ್ಯಗಳು, ‘ಋತುಸಂಹಾರ’, ‘ಮೇಘದೂತ’ ಖಂಡಕಾವ್ಯಗಳು, ‘ಮಾಲವಿಕಾಗ್ನಿಮಿತ್ರ’, ‘ಅಭಿಜ್ಞಾನ ಶಾಕುಂತಲ’ ಎಂಬ ನಾಟಕಗಳನ್ನು ರಚಿಸಿದ ಕಾಳಿದಾಸನು ಆಷಾಢ ಮಾಸದಲ್ಲಿ ಜನಿಸಿದ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಅವನ ‘ಮೇಘದೂತ’ ಕೃತಿಯ ‘ಯಕ್ಷ’ನ ನೆನಕೆ ಇಲ್ಲಿದೆ.
ಆಂಗ್ಲರು ಭಾರತಕ್ಕೆ ಕಾಲಿಟ್ಟಾಗ, ‘ಭಾರತೀಯರೆಂದರೆ, ಸಂಸ್ಕೃತಿ ವಿಹೀನರು, ಗೊಡ್ಡು ಸಂಪ್ರದಾಯದವರು’ ಎಂಬ ಭಾವನೆ ಅವರಲ್ಲಿತ್ತು. ಯಾವಾಗ ವೇದ, ರಾಮಾಯಣ, ಮಹಾಭಾರತ, ಪುರಾಣಗಳಂಥ ಪ್ರಾಚೀನ ಕೃತಿಗಳು, ಅದರಲ್ಲೂ ಕಾಳಿದಾಸನ ‘ಅಭಿಜ್ಞಾನ ಶಾಕುಂತಲ’ ಕೃತಿಯು ಅವರ ಗಮನ ಸೆಳೆಯಿತೋ, ಭಾರತೀಯರ ಮೇಲೆ ಅವರು ಗೌರವಾದರ ಹೊಂದುವಂತಾಯಿತು. ಆ ಕಾಲದ ಪ್ರತಿಭಾವಂತ ರಲ್ಲಿ ಒಬ್ಬರೆಂದು ಖ್ಯಾತರಾಗಿದ್ದ,
೧೫ ಭಾಷೆಗಳನ್ನು ಕಲಿತಿದ್ದ ಸರ್ ವಿಲಿಯಂ ಜೋನ್ಸ್ ಅವರು ಭಾರತದ ಸರ್ವೋಚ್ಚ ನ್ಯಾಯಾಲಯದ ಪ್ರಥಮ ಮುಖ್ಯ ನ್ಯಾಯಾಧೀಶರಾಗಿ ಆಗಮಿಸಿ, ಆರು ವರ್ಷಗಳಲ್ಲಿ ಸಂಸ್ಕೃತವನ್ನು ಕಲಿತು ಕಾಳಿದಾಸನ ‘ಅಭಿಜ್ಞಾನ ಶಾಕುಂತಲ’ ನಾಟಕ ವನ್ನು ಆಂಗ್ಲಭಾಷೆಗೆ ಅನುವಾದಿಸಿದರು. ನಂತರ ಜಾರ್ಜ್ ಫಾಸ್ಟರ್ ಎಂಬಾತ ಇದನ್ನು ಜರ್ಮನ್ ಭಾಷೆಗೆ ಭಾಷಾಂತರಿಸಿದ. ಈ ಅನುವಾದವನ್ನು ಓದಿಯೇ ಜರ್ಮನಿಯ ಶ್ರೇಷ್ಠಕವಿ ಗಯಟೆಯು ಈ ನಾಟಕವನ್ನೂ, ಅದರ ಮೂಲಸೃಷ್ಟಿಕರ್ತನನ್ನೂ ಮೆಚ್ಚಿಕೊಂಡಾಗ ಕಾಳಿದಾಸ ವಿಶ್ವದ ಗಮನ ಸೆಳೆದಿದ್ದ. ಆಂಗ್ಲರು ಸೇರಿದಂತೆ ವಿಶ್ವದ ಜನರು ಭಾರತೀಯರನ್ನು ನೋಡುವ ಬಗೆಯೇ ಬದಲಾಯಿತು.
‘ಕವಿಕುಲಗುರು’, ‘ವರಕವಿ’ ಎಂದೆಲ್ಲಾ ಖ್ಯಾತನಾದ ಕವಿರತ್ನ ಕಾಳಿದಾಸನಿಗೆ ತನ್ನ ಅಮರಕೃತಿಗಳ ಮೂಲಕ ಸಂಸ್ಕೃತ ಸಾಹಿತ್ಯಕ್ಕೆ ವಿಶ್ವಮಟ್ಟದ ಕೀರ್ತಿಯನ್ನು ತಂದುಕೊಟ್ಟ ಶಾಶ್ವತ ಶ್ರೇಯಸ್ಸು ಸಲ್ಲುತ್ತದೆ. ಆದರೆ ತನ್ನ ಹುಟ್ಟು, ವಾಸ, ಜೀವಿತಾ ವಧಿಯ ಕುರಿತಾಗಿ ಕಾಳಿದಾಸ ತನ್ನ ಕೃತಿಯಲ್ಲಿ ಏನನ್ನೂ ಹೇಳಿಕೊಳ್ಳದಿರುವುದು ಈತನ ವಿಷಯವಾಗಿ ಅಧ್ಯಯನಶೀಲ ರಾಗಿರುವವರಿಗೆ ಮತ್ತು ಕುತೂಹಲಿಗಳಿಗೆ ತೊಡಕುಂಟುಮಾಡಿದೆ ಎನ್ನಬೇಕು. ಹೀಗಾಗಿ ಕಾಳಿದಾಸ ರಚಿಸಿದ ಕೃತಿಗಳ ಆಧಾರದಿಂದ ಹಾಗೂ ಇತರ ಕವಿಗಳ ಕೃತಿಗಳಲ್ಲಿ ಕಾಣಬರುವ ಉಲ್ಲೇಖಗಳಿಂದ ಕಾಳಿದಾಸನ ಜನ್ಮಸ್ಥಳ ಮತ್ತು ಕಾಲಗಳ ಕುರಿತು ಸ್ಥೂಲವಾಗಿ ತಿಳಿದುಕೊಳ್ಳಬಹುದು.
‘ಮೇಘದೂತ’ ಕೃತಿಯಲ್ಲಿ ಸಿಪ್ರಾನದೀ ತೀರದ ಉಜ್ಜಯಿನಿ, ಅಲ್ಲಿಯ ಮಹಾಕಾಲದೇವ ಮತ್ತು ಸುತ್ತಮುತ್ತಲ ಪ್ರದೇಶಗಳು ಕಾಳಿದಾಸನ ಮೇಲೆ ಪ್ರಭಾವ ಬೀರಿರುವುದು ಕಾಣಬರುವುದರಿಂದ ಆತನ ಜನ್ಮಸ್ಥಳ ‘ಉಜ್ಜಯಿನಿ’ಯೆಂದೂ, ಕಾಶ್ಮೀರದಲ್ಲಿ ಮಾತ್ರ ಬೆಳೆಯುವ ಕೇಸರಪುಷ್ಪಗಳನ್ನು ಕಣ್ಣಿಗೆ ಕಂಡಂತೆ ವರ್ಣಿಸಿರುವುದರಿಂದ ‘ಕಾಶ್ಮೀರ’ವೇ ಅವನ ಜನ್ಮಸ್ಥಳವೆಂದೂ, ಆತ ಕಾಳಿಯ ಭಕ್ತನಾಗಿದ್ದರಿಂದ ‘ಬಂಗಾಳ’ ಪ್ರದೇಶದಲ್ಲಿ ಜನಿಸಿದವನೆಂದೂ ಹೇಳುವುದುಂಟು. ಹೀಗೆ ಕವಿ ಕಾಳಿದಾಸನ ಜನ್ಮ ಸ್ಥಳದ ಕುರಿತು ಹಲವು ವಾದಗಳಿದ್ದರೂ ಆತ ಸಮಗ್ರ ಭಾರತದ ಕವಿ ಎನ್ನುವುದು ನಿರ್ವಿವಾದ.
ಕ್ರಿ.ಶ. ೪ನೇ ಶತಮಾನದ ಅಂತ್ಯ ಹಾಗೂ ೫ನೇ ಶತಮಾನದ ಆದಿಯಲ್ಲಿದ್ದ ಕಾಳಿದಾಸ, ‘ರಘುವಂಶ’, ‘ಕುಮಾರಸಂಭವ’ ಮಹಾಕಾವ್ಯಗಳನ್ನೂ, ‘ಋತುಸಂಹಾರ’, ‘ಮೇಘದೂತ’ ಖಂಡಕಾವ್ಯಗಳನ್ನೂ, ‘ವಿಕ್ರಮೋರ್ವಶೀಯ’, ‘ಮಾಲವಿಕಾಗ್ನಿಮಿತ್ರ’, ‘ಅಭಿಜ್ಞಾನ ಶಾಕುಂತಲ’ ಎಂಬ ನಾಟಕಗಳನ್ನೂ ರಚಿಸಿದ್ದಾನೆ. ಋಗ್ವೇದದಲ್ಲಿ ಸರಮೆ ಎಂಬ ನಾಯಿಯ ಮೂಲಕ ಒಂದುಸಂದೇಶವನ್ನು ಕಳುಹಿಸಿದುದಾಗಿ ನಿರೂಪಿತವಾಗಿದೆ.
ರಾಮಾಯಣದಲ್ಲಿ ರಾಮನು ಆಂಜನೇಯನ ಮೂಲಕ, ಮಹಾಭಾರತದಲ್ಲಿ ಯುಧಿಷ್ಠಿರನು ಕೃಷ್ಣನ ಮೂಲಕ, ನಳನು ಹಂಸದ ಮೂಲಕ ಸಂದೇಶಗಳನ್ನು ಕಳುಹಿಸಿದರೆಂದು ನಿರೂಪಿತವಾದಂತೆ, ‘ಮೇಘದೂತ’ ಕಾವ್ಯದಲ್ಲಿ ವಿರಹಿಯಾದ ಯಕ್ಷನೊಬ್ಬನು ಮೇಘವನ್ನೇ ದೂತನನ್ನಾಗಿ (ಅಂದರೆ ಸಂದೇಶವಾಹಕನಾಗಿ) ಪ್ರಾರ್ಥಿಸಿ, ವಿರಹಿಣಿಯಾದ ತನ್ನ ಭಾರ‍್ಯೆಗೆ ಕ್ಷೇಮಸಂದೇಶ ವನ್ನು ತಲುಪಿಸುವಂತೆ ಕೇಳಿಕೊಳ್ಳುವ ಕಾಲ್ಪನಿಕ ಪ್ರಸಂಗವನ್ನು ಕಾಣಬಹುದು.
ಅದು ಯಕ್ಷರು ವಾಸಿಸುವ ಅಲಕಾಪಟ್ಟಣ ಎಂಬ ಪ್ರದೇಶ. ಕುಬೇರ ಅದರ ಅಧಿಪತಿ. ಕುಬೇರನ ಪ್ರಾತಃ ಕಾಲದ ಶಿವಪೂಜೆಗೆ ಹೊಸ ಕಮಲಗಳನ್ನು ಕೊಯ್ದು ಸಿದ್ಧಪಡಿಸುವುದು ಯಕ್ಷನೊಬ್ಬನ ಕೆಲಸವಾಗಿತ್ತು. ಆದರೆ ನವವಿವಾಹಿತನಾದ ಆ ಯಕ್ಷನು ಮುಂಜಾನೆ ಸಮಯದಲ್ಲಿ ಪತ್ನಿಯನ್ನು ಅಗಲಿರಲಾರದೆ, ಕುಬೇರನ ಮರುದಿನದ ಪೂಜೆಗೆಂದು ಹಿಂದಿನ ದಿನವೇ ಕಮಲಗಳನ್ನು ಕೊಯ್ದಿಟ್ಟ. ರಸಾಸ್ವಾದಕ್ಕೆಂದು ಬಂದಿದ್ದ ದುಂಬಿಯೊಂದು ಕಮಲ ದೊಳಗೇ ಬಂದಿಯಾಗಿದ್ದುದನ್ನು ಅರಿಯದೇ ಅದನ್ನು ಯಕ್ಷ ಕೊಯ್ದು ತಂದಿದ್ದ! ಮರುದಿನದ ಪೂಜೆಯಲ್ಲಿ ಪುಷ್ಪವನ್ನು ಅರ್ಪಿಸುವಾಗ ದುಂಬಿ ಕುಬೇರನ ಕೈಯನ್ನು ಕಚ್ಚಿತು.
ಇದರಿಂದ ಕೆರಳಿದ ಕುಬೇರ, ‘ನೀನು ಯಾರನ್ನು ಅರೆಕ್ಷಣವೂ ಅಗಲಿರಲಾರೆಯೋ, ಆಕೆಯಿಂದ ಒಂದು ವರ್ಷ ದೂರವಿರು’ ಎಂದು ಶಾಪವಿತ್ತ. ಅದರ ಪರಿಣಾಮ, ಯಕ್ಷನು ತನ್ನ ಕಾಂತೆಯನ್ನು ಬಿಟ್ಟು ದೂರದ ರಾಮಗಿರಿ ಆಶ್ರಮದಲ್ಲಿ ಕಾಲ ಕಳೆಯು ತ್ತಿದ್ದ. ಪತ್ನಿಯ ನೆನಪಲ್ಲೇ ಹೇಗೋ ಎಂಟು ತಿಂಗಳು ಕಳೆಯುವ ಹೊತ್ತಿಗೆ, ಮುಂಗೈಯಲ್ಲಿದ್ದ ಚಿನ್ನದ ಕಡಗವು ಮೊಳಕೈಗೆ ಏರುವಷ್ಟು ಆತ ಸೊರಗಿದ್ದ. ಹೀಗಿರುವಾಗ ಆಷಾಢದ ಮೊದಲ ದಿನ ಮೋಡವೊಂದು ಕಾಣಿಸಿತು. ದಂತಗಳಿಂದದಿಣ್ಣೆಗಳನ್ನು ಕೆದರುತ್ತಾ ಗೂಟಯಾಟವಾಡುವ ಮದ್ದಾನೆಯಂತೆ ಅದು ಆತನ ಕಂಗಳಿಗೆ ಅತ್ಯಂತ ಸೊಗಸೆನಿಸಿತು. ಮಳೆಗಾಲವೂ ಬಂದೇಬಿಟ್ಟಿತು.
ಸುಖವಾಗಿರುವವರೂ ಭೋಗಕ್ಕಾಗಿ ಚಿಂತೆ ಮಾಡುವ ಈ ಕಾಲದಲ್ಲಿ, ‘ವಿರಹದಿಂದ ಕೊರಗುತ್ತಿರುವ ನನ್ನ ಹೆಂಡತಿಯ ಜೀವಿತಕ್ಕೆ ಅಪಾಯವಾಗದಂತೆ ನೋಡಿಕೊಳ್ಳಬೇಕು, ನಾನು ಕ್ಷೇಮವಾಗಿರುವೆನೆಂಬ ಸುದ್ದಿಯನ್ನು ಈ ಮೇಘದ ಮೂಲಕವೇ ತಿಳಿಸುವೆನು’ ಎಂದುಕೊಂಡು, ಅಲ್ಲೇ ಬೆಳೆದಿದ್ದ ಕಾಡು ಕುಸುಮಗಳನ್ನು ತಂದು, ಮೋಡಕ್ಕೆ ಪೂಜಿಸಿ ಪ್ರೀತಿಯಿಂದಸ್ವಾಗತಿಸಿದ. ಈ ಮೋಡ ತನ್ನ ಸಂದೇಶವನ್ನು ಒಯ್ಯಬಲ್ಲದೇ? ಎಂಬ ಸಂಶಯವೂ ಯಕ್ಷನಿಗೆ ಬರಲಿಲ್ಲ. ತನ್ನ ದುಃಖವನ್ನೆಲ್ಲ ಮೋಡದ ಬಳಿ ಹೇಳಿಕೊಂಡು, ‘ನನ್ನ ಕೆಲಸ ಮಾಡಿಕೊಡು’ ಎಂದು ಯಾಚಿಸಿದ.
‘ಕಾಮಾರ್ತರಾದವರು ಚೇತನ, ಅಚೇತನ ಎನ್ನುವುದನ್ನು ನೋಡದೆ ಎಲ್ಲವನ್ನೂ ಆಶ್ರಯಿಸುವುದಿಲ್ಲವೇ?’ ಎಂದು ಮೋಡ ವನ್ನು ಕುರಿತು ತಾನು ಪ್ರಾರ್ಥಿಸಿದ್ದಕ್ಕೆ ಯಕ್ಷ ತನ್ನನ್ನು ಸಮರ್ಥಿಸಿಕೊಳ್ಳುತ್ತಾನೆ. ‘ಎಲೈ ಮೇಘವೇ, ನೀನು ತ್ರಿಲೋಕಾಧಿಪತಿ ಯಾದ ಇಂದ್ರನ ಸಚಿವನು, ಇಚ್ಛೆ ಬಂದ ರೂಪ ಧರಿಸುವವನು. ನಾನಾದರೋ ಪ್ರಭುವಿನ ಕೋಪಕ್ಕೆ ಗುರಿಯಾಗಿ ಪತ್ನಿಯಿಂದ ಅಗಲಿ ಬಂದವನು. ನನ್ನ ಕೋರಿಕೆ ನೆರವೇರಿಸು. ನೀನು ಉತ್ತಮನು. ನಿನ್ನಲ್ಲಿ ನನ್ನ ಪ್ರಾರ್ಥನೆಯು ವಿಫಲವಾದರೂ ಚಿಂತೆಯಿಲ್ಲ.
ಅಧಮರಲ್ಲಿ ಸಫಲವಾಗುವ ಪ್ರಾರ್ಥನೆಗಿಂತಲೂ ಅದೇ ಶ್ರೇಷ್ಠವು. ನನ್ನ ಪ್ರಿಯೆಗೆ ಒಂದು ಸಂದೇಶವನ್ನು ಕೊಂಡೊಯ್ಯು ವೆಯೋ? ಯಕ್ಷೇಶ್ವರರ ವಸತಿಯಾಗಿ, ನಗರೋದ್ಯಾನದಲ್ಲಿ ನೆಲೆಸಿದ ಪರಶಿವನ ಶಿರಶ್ಚಂದ್ರನ ಚಂದ್ರಿಕೆಯಿಂದ ಮಡಿಯಾದ ಅಲಕಾಪಟ್ಟಣಕ್ಕೆ ನೀನು ಹೋಗಬೇಕು. ಅಲ್ಲಿ ದಿನಗಳನ್ನು ಲೆಕ್ಕ ಮಾಡುತ್ತಿರುವ, ವಿರಹದಿಂದ ಹಾರಿಹೋಗುವ ಜೀವವನ್ನು ಆಶೆಯಿಂದ ತಡೆದು ನಿಲ್ಲಿಸಿಕೊಂಡಿರುವ ಪತಿವ್ರತೆಯಾದ ನನ್ನ ಭಾರ‍್ಯೆಯನ್ನು ನೀನು ನೋಡುವೆ’ ಎಂದು ತಿಳಿಸಿ, ಅಲ್ಲಿಗೆ ಸಾಗುವ ದಾರಿಯನ್ನು ಮೋಡಕ್ಕೆ ವಿಸ್ತಾರವಾಗಿ ಹೀಗೆ ಹೇಳುವನು: “ಆ ಅಲಕಾಪಟ್ಟಣದ ಅರಮನೆಯ ಉತ್ತರ ದಿಕ್ಕಿನಲ್ಲಿ ನನ್ನ ಮನೆಯಿದೆ.
ಕಾಮನಬಿಲ್ಲಿನಂತೆ ಮನೋಹರವಾಗಿರುವ ಹೆಬ್ಬಾಗಿಲಿನಿಂದ ಆ ಮನೆಯನ್ನು ದೂರದಿಂದಲೇ ಗುರುತಿಸಬಹುದು. ಅಲ್ಲಿ ನನ್ನ ಪತ್ನಿಯನ್ನು ಕಾಣುವೆ. ನಿನ್ನನ್ನು ನೋಡುವ ಆ ಮಾನವತಿಯನ್ನು ಮಿಂಚಿನಿಂದ ಕೂಡಿದ ನಿನ್ನ ಗುಡುಗಿನ ನುಡಿಗಳಿಂದ ಧೈರ್ಯವಾಗಿ ಮಾತನಾಡಿಸು. ಕುಶಲವೇ ಎಂದು ಕೇಳಿ, ‘ರಾಮಗಿರಿ ಆಶ್ರಮದಲ್ಲಿ ವಿಯೋಗ ದುಃಖ ಅನುಭವಿಸುತ್ತಿರುವ ನಿನ್ನ ಪತಿಯು, ನಿನ್ನ ಕುಶಲವನ್ನು ವಿಚಾರಿಸುತ್ತಿದ್ದಾನೆ’ ಎಂದು ತಿಳಿಸು.
ಜಾನಕಿಯು ಹನುಮನನ್ನು ನೋಡಿದಂತೆ ಆಕೆಯೂ ನಿನ್ನನ್ನು ತಲೆಯೆತ್ತಿ ನೋಡಿ ನಿನ್ನನ್ನು ಗೌರವಿಸಿ, ನೀನು ಹೇಳುವುದನ್ನು ಮನಸ್ಸಿಟ್ಟು ಕೇಳುವಳು. ‘ಈಗ ಒದಗಿರುವ ದುಃಖವನ್ನು ಸಹಿಸಿಕೋ. ಏಕೆಂದರೆ, ಯಾರಿಗೆ ತಾನೇ ಸುಖವೇ ಆಗಲಿ ದುಃಖವೇ ಆಗಲಿ ಒಂದೇ ಬರುವುದೇ? ಸುಖ-ದುಃಖಗಳು ಚಕ್ರನೇಮಿ ಕ್ರಮದಲ್ಲಿ ಒಂದಾಗುತ್ತಲೊಂದು ಪ್ರಾಪ್ತವಾಗುವುದು. ಆದುದರಿಂದಈಗ ದುಃಖ ಪ್ರಾಪ್ತವಾಗಿದೆ. ಮುಂದೆ ದುಃಖ ದೂರವಾಗಿ ಸುಖ ದೊರಕವುದು. ಈ ಆಶೆಯಿಂದ ಧೈರ್ಯತಾಳು’ ಎಂದು ಹೇಳಿ ಆಕೆಯನ್ನು ಸಮಾಧಾನಪಡಿಸು.
ನನ್ನ ವೃತ್ತಾಂತವು ಆಕೆಗೆ ಸಂತಸ ಉಂಟುಮಾಡುವುದು. ಹೀಗೆ ಆಕೆಯನ್ನು ಸಂತೈಸಿ, ಆಕೆ ಹೇಳಿದ ಗುರುತಿನ ಮಾತು ಗಳನ್ನು ನನಗೂ ಹೇಳಿ, ವಿರಹದಿಂದ ಬೆಂದ ನನ್ನ ಪ್ರಾಣವನ್ನು ಉಳಿಸು” ಎಂದು ಯಕ್ಷನು ಮೇಘನಲ್ಲಿ ಪ್ರಾರ್ಥಿಸು ತ್ತಾನೆ. ಮಂದಾಕ್ರಾಂತ ವೃತ್ತದಲ್ಲಿ, ಪ್ರಧಾನರಸವಾದ ವಿಪ್ರಲಂಭ ಶೃಂಗಾರದ ಮೂಲಕ ವಿರಹಾವಸ್ಥೆಯ ಸೂಚನೆಗೆ ತಕ್ಕಂತೆಹೇಳಬೇಕಾದುದನ್ನು ಹೇಳುವಲ್ಲಿ ಕವಿರತ್ನ ಕಾಳಿದಾಸ ಅಪೂರ್ವ ಕೌಶಲವನ್ನೇ ಮೆರೆದಿದ್ದಾನೆ.
ಸಕಲವೇದ, ಶಾಸ, ಪುರಾಣೇತಿಹಾಸಗಳ ಸಾರಸ್ವತ ನಿಧಿಯೇ ಆಗಿದ್ದ, ಅಲೌಕಿಕ ಪ್ರತಿಭಾ ಸಂಪನ್ನನಾಗಿದ್ದ ಕಾಳಿದಾಸ,ದೇಶಪ್ರೇಮ, ಈಶಪ್ರೇಮ ಹಾಗೂ ಅಪಾರವಾದ ಪ್ರವಾಸಾನುಭವ ಪಡೆದಿದ್ದ. ಸರಳ-ಸುಂದರ, ಸರಸತೆಯಿಂದ ಕೂಡಿದ, ಅರ್ಥಮಾಧುರ್ಯಭರಿತ ವೈದರ್ಭಿ ಶೈಲಿಯ ಪದಗಳನ್ನು ತನ್ನೆಲ್ಲಾ ಕಾವ್ಯಗಳಲ್ಲಿ ಬಳಸುವ ಮೂಲಕ ಕಾಳಿದಾಸ ಸರ್ವ ಸಹೃದಯರನ್ನೂ ಆಕರ್ಷಿಸಿದ್ದಾನೆ.
ಉಪಮಾ ಮುಂತಾದ ಔಚಿತ್ಯಪೂರ್ಣ ಅಲಂಕಾರಗಳ ಮೂಲಕ ಆಯಾ ರಸಕ್ಕೆ ಉಚಿತವಾದ ಛಂದಸ್ಸಿನ ಮೂಲಕ ತನ್ನ ಕಾವ್ಯದ ಸೊಬಗನ್ನು ತೆರೆದಿಟ್ಟಿದ್ದಾನೆ. ಈ ಕಾರಣದಿಂದಲೇ ವರಕವಿ ಕಾಳಿದಾಸನು ಸಹಸ್ರಾರು ವರ್ಷ ಗಳಿಂದ ತನ್ನ ಕಾವ್ಯದ ಮೂಲಕ ವಿಶ್ವವನ್ನೇ ತನ್ನತ್ತ ಸೆಳೆದು ವಿಶ್ವವಂದ್ಯನಾಗಿದ್ದಾನೆ, ವಿಶ್ವಕವಿಯಾಗಿದ್ದಾನೆ ಎಂದರೆ ಅತಿಶಯೋಕ್ತಿಯಲ್ಲ.