ತೃತೀಯ ಶಕ್ತಿಗೆ ಸಿಗುತ್ತಾ ಯಡಿಯೂರಪ್ಪ ಗಿಫ್ಟ್ ?
ಮೂರ್ತಿ ಪೂಜೆ
ಬಿಹಾರದ ಮುಖ್ಯಮಂತ್ರಿ, ಸಂಯುಕ್ತ ಜನತಾದಳದ ನಾಯಕ ನಿತೀಶ್ ಕುಮಾರ್ ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಮಾಜಿ ಪ್ರಧಾನಿ ದೇವೇಗೌಡರಿಗೆ ಫೋನು ಮಾಡಿದ್ದರಂತೆ. ‘ರಾಷ್ಟ್ರಮಟ್ಟದಲ್ಲಿ ತೃತೀಯ ಶಕ್ತಿಗಳನ್ನು ಬಲಪಡಿಸುವುದುದಿನ ತುರ್ತು ಅಗತ್ಯ. ಹೀಗಾಗಿ ಕರ್ನಾಟಕಕ್ಕೆ ಬರಲು ನಿರ್ಧರಿಸಿದ್ದೇನೆ.
ನಿಮ್ಮನ್ನು ಭೇಟಿ ಮಾಡುತ್ತೇನೆ’ ಅಂತ ನಿತೀಶ್ ಕುಮಾರ್ ಹೇಳಿದಾಗ ಎತ್ತಿದ ಮಾತಿಗೇ ಗೌಡರು, ‘ನೋ ನೋ, ಅಸೆಂಬ್ಲಿ ಎಲೆಕ್ಷನ್ ಮುಗಿಯುವ ತನಕ ನೀವು ಬರಬೇಡಿ’ ಎಂದುಬಿಟ್ಟರಂತೆ. ಅವರ ಮಾತು ಕೇಳಿ ಅಚ್ಚರಿಪಟ್ಟ ನಿತೀಶ್ ಕುಮಾರ್ ಅವರು, ‘ಯಾಕೆ ಗೌಡರೇ?’ ಅಂತ ಪ್ರಶ್ನಿಸಿದ್ದಕ್ಕೆ ಗೌಡರು ಸುದೀರ್ಘ ವಿವರಣೆ ನೀಡಿದರಂತೆ: ‘ನಿತೀಶ್ ಜೀ, ಈ ಸಲ ಕರ್ನಾಟಕದಲ್ಲಿ ನಡೆಯು ತ್ತಿರುವ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬರುವುದಿಲ್ಲ. ಹಾಗಾದಾಗ ಮೈತ್ರಿ ಸರಕಾರ ರಚಿಸುವುದು ಅನಿವಾರ್ಯವಾಗುತ್ತದೆ. ಇಂಥ ಸಂದರ್ಭದಲ್ಲಿ ಸೆಕ್ಯುಲರ್ ಫೋರ್ಸುಗಳು ಒಂದಾಗಲಿ ಅನ್ನೋದು ನಮ್ಮ ಬಯಕೆ.
ವಸ್ತುಸ್ಥಿತಿ ಎಂದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಣದೀಪ್ ಸಿಂಗ್ ಸುರ್ಜೇವಾಲ ಇದಾರಲ್ಲ? ಅವರು ಈಗಾಗಲೇ ಮೇಡಂ ಸೋನಿಯಾ ಗಾಂಧಿ ಅವರ ಮೆಸೇಜನ್ನು ನಮಗೆ ಮುಟ್ಟಿಸಿದ್ದಾರೆ. ಹೇಗಿದ್ದರೂ ಕರ್ನಾಟಕದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪರಸ್ಪರ ಕೈಗೂಡಿಸಬೇಕು. ಇವತ್ತು ಪರಿಸ್ಥಿತಿ ಏನಾಗುತ್ತದೆ ಅಂತ ಬಿಜೆಪಿಯ ರಾಷ್ಟ್ರೀಯ ನಾಯಕರಿಗೂ ಗೊತ್ತಿದೆ. ಹೀಗಾಗಿ ಅವರು ನಿಮ್ಮ ಬೆಂಬಲ ಕೋರುತ್ತಾರೆ. ಆದರೆ ಯಾವ ಕಾರಣಕ್ಕೂ ನೀವು ಅವರ ಜತೆ ಕಮಿಟ್ ಆಗಬೇಡಿ ಅಂತ ಸುರ್ಜೇವಾಲ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಳಿ ಹೇಳಿದ್ದಾರೆ.
ಇದರರ್ಥ, ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸರಕಾರ ಬರುವುದು ಗ್ಯಾರಂಟಿ. ಹೀಗಾಗಿ ಚುನಾವಣೆಗಿಂತ ಮುಂಚೆ ನೀವಿಲ್ಲಿ ಬರಬೇಡಿ. ಅದು ಇನ್ನೊಂದು ಬಗೆಯ ಸಂದೇಶ ರವಾನಿಸಿ ಪರಿಸ್ಥಿತಿ ಹಾಳುಗೆಡಹುವಂತೆ ಮಾಡಬಹುದು’. ದೇವೇಗೌಡರು ಹೀಗೆ ಹೇಳಿದಾಗ ಪರ್ಯಾಯ ದಾರಿ ಕಾಣದೆ ನಿತೀಶ್ ಕುಮಾರ್ ತಮ್ಮ ಕರ್ನಾಟಕ ಪ್ರವಾಸವನ್ನು ರದ್ದು ಮಾಡಿದರಂತೆ.
ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕರ್ನಾಟಕದಲ್ಲಿ ಅತಂತ್ರ ಸರಕಾರ ರೂಪುಗೊಳ್ಳುವ ಬದಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಹೀಗಾಗಿ ಕರ್ನಾಟಕದಲ್ಲಿ ಜಾತ್ಯತೀತ ಶಕ್ತಿಗಳನ್ನು ಒಗ್ಗೂಡಿಸುವ ಪ್ರಯತ್ನವನ್ನು ಕೇವಲ ನಿತೀಶ್ ಕುಮಾರ್ ಮಾತ್ರವಲ್ಲ, ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯನ್ನು ವಿರೋಧಿಸುವ ಹಲವು ನಾಯಕರು ವಿಧ್ಯುಕ್ತವಾಗಿ ಆರಂಭಿಸಲಿದ್ದಾರೆ.
ಜುಲೈ ತಿಂಗಳ ಎರಡನೇ ವಾರಾಂತ್ಯದ ವೇಳೆಗೆ ಬಿಹಾರದ ನಿತೀಶ್ ಕುಮಾರ್, ತೇಜಸ್ವಿ ಯಾದವ್, ಮಹಾರಾಷ್ಟ್ರದ ಶರದ್ಪವಾರ್, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ತಮಿಳುನಾಡಿನ ಎಂ.ಕೆ. ಸ್ಟಾಲಿನ್ ಸೇರಿದಂತೆ ಹಲ ನಾಯಕರು ಬೆಂಗಳೂರಿ ನಲ್ಲಿ ಸಭೆ ಸೇರಲಿದ್ದಾರೆ. ಅಂದ ಹಾಗೆ, ‘ಕಾಂಗ್ರೆಸ್ ಪಕ್ಷವನ್ನು ಹೊರಗಿಟ್ಟು ಮಹಾಮೈತ್ರಿ ನಡೆಯಬೇಕು’ ಅಂತ ಮಮತಾ ಬ್ಯಾನರ್ಜಿ ಅವರಂಥ ನಾಯಕರು ಕೆಲವು ತಿಂಗಳ ಹಿಂದೆ ಹೇಳುತ್ತಿದ್ದರು. ಆದರೀಗ, ಕಾಂಗ್ರೆಸ್ ಪಕ್ಷವನ್ನು ದೂರವಿಟ್ಟು ಜಾತ್ಯ ತೀತ ಶಕ್ತಿಗಳು ಮೇಲೆದ್ದು ನಿಲ್ಲಲು ಸಾಧ್ಯವಿಲ್ಲ, ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಸತ್ಯ ಮಮತಾ ಅವರಂಥನಾಯಕರಿಗೆ ಅರ್ಥವಾಗಿದೆ. ಹೀಗಾಗಿ ಕಾಂಗ್ರೆಸ್ ವಿಷಯದಲ್ಲಿ ಅವರಿಗೆ ಮುಂಚಿನ ಮಡಿ ಇಲ್ಲ. ಈ ಬಾರಿ ಕರ್ನಾಟಕದಲ್ಲಿ ನಡೆಯಲಿರುವ ಅದರ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಭಾಗವಹಿಸುವುದು ಬಹುತೇಕ ನಿಶ್ಚಿತವಾಗಿದ್ದು, ಈ ಸಂದರ್ಭದಲ್ಲಿ ದೇವೇಗೌಡರ ಹೆಜ್ಜೆ ಏನಿರಲಿದೆ? ಎಂಬ ಕುತೂಹಲ ಶುರುವಾಗಿದೆ.
ಯಾಕೆಂದರೆ ಬದಲಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಎಂದರೆ ಅವರು ಕುದಿಯುತ್ತಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿಯ ವಿಷಯದಲ್ಲಿಅವರ ಮಾತುಗಳೂ ಮೃದುವಾಗಿವೆ. ಈ ಮಧ್ಯೆ ಅವರ ಪುತ್ರ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜತೆ ಮಾತನಾಡಿ ಬಂದಿದ್ದಾರೆ. ದಿಲ್ಲಿ ಮೂಲಗಳ ಪ್ರಕಾರ, ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷ ಎನ್‌ಡಿಎ ಅಂಗಪಕ್ಷವಾಗಲಿದೆ ಮತ್ತು ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರಮೋದಿ ಅವರ ಸಂಪುಟದಲ್ಲಿಸಚಿವರಾಗಲಿದ್ದಾರೆ. ಆದರೆ ಈ ವಿಷಯದಲ್ಲಿ ಗೌಡರೇ ಆಗಲಿ, ಕುಮಾರಸ್ವಾಮಿ ಅವರೇ ಆಗಲಿ ಅಧಿಕೃತವಾಗಿ ಮಾತನಾಡಿಲ್ಲ.
ಆದರೆ ಸದ್ಯದಲ್ಲೇ ಬೆಂಗಳೂರಿನಲ್ಲಿ ನಡೆಯುವ ಮಹಾಮೈತ್ರಿಕೂಟದ ಸಭೆಗೆ ಅವರು ಹಾಜರಾಗುತ್ತಾರೋ, ಇಲ್ಲವೋ? ಎಂಬು ದರ ಮೇಲೆ ಮುಂದಿನ ಚಿತ್ರ ಸ್ಪಷ್ಟವಾಗಲಿದೆ. ಅಂದ ಹಾಗೆ, ಜೆಡಿಎಸ್ ಮೂಲಗಳ ಪ್ರಕಾರ, ಕರ್ನಾಟಕದಲ್ಲಿ ಕಾಂಗ್ರೆಸ್ ಜತೆ ಕೈಗೂಡಿಸುವುದರಿಂದ ತಮಗೆ ಲಾಭವಾಗುವುದಕ್ಕಿಂತ ನಷ್ಟವೇ ಜಾಸ್ತಿ. ಅದರೆ ಬಿಜೆಪಿ ಜತೆ ಕೈ ಜೋಡಿಸಿದರೆ ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲಿ ಲಾಭವಾಗಲಿದೆ ಎಂಬುದು ದೇವೇಗೌಡ-ಕುಮಾರಸ್ವಾಮಿ ಅವರ ಲೆಕ್ಕಾಚಾರ. ಹೀಗಾಗಿ ಅವರ ಮುಂದಿನ ಹೆಜ್ಜೆ ಹೇಗಿರಲಿದೆ? ಎಂಬುದು ಇನ್ನು ಕೆಲವೇ ದಿನಗಳಲ್ಲಿ ಸ್ಪಷ್ಟವಾಗಲಿದೆ.
ಪ್ಲಸ್ ಆಗುತ್ತಾರಂತೆ ಯಡಿಯೂರಪ್ಪ ಅಂದ ಹಾಗೆ, ಬಿಜೆಪಿ-ವಿರೋಧಿ ಶಕ್ತಿಗಳನ್ನು ಒಗ್ಗೂಡಿಸಲು ಕರ್ನಾಟಕಕ್ಕೆ ಬರುತ್ತಿರುವಮಹಾಮೈತ್ರಿಕೂಟದ ನಾಯಕರಿಗೆ ಬಿಜೆಪಿ ನಾಯಕ ಯಡಿಯೂರಪ್ಪ ‘ಪ್ಲಸ್’ ಆಗಿ ಕಾಣಿಸುತ್ತಿದ್ದಾರಂತೆ. ಯಾಕೆಂದರೆ ಕರ್ನಾಟಕ ದಲ್ಲಿ ಬಿಜೆಪಿಯ ಮೇಲಿನ ಹಿಡಿತಕ್ಕಾಗಿ ಬಿ.ಎಲ್. ಸಂತೋಷ್ ಮತ್ತು ಯಡಿಯೂರಪ್ಪ ಬಣದ ಮಧ್ಯೆ ಭೀಕರ ಕಾಳಗ ನಡೆಯು ತ್ತಿದೆ. ಈ ಕಾಳಗ ಹೇಗಿದೆ ಎಂದರೆ, ಇವತ್ತಲ್ಲ ನಾಳೆ ಯಡಿಯೂರಪ್ಪ ಬಿಜೆಪಿಯಲ್ಲಿ ಸೈಡ್‌ಲೈನಿಗೆ ಸರಿಯುವುದು ನಿಶ್ಚಿತಎಂಬಂತಿದೆ.
ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆಗಾಗಿ ಬಿಜೆಪಿ ತಿಂಗಳಾನುಗಟ್ಟಲೆ ಪರದಾಡಿದ್ದು ಮತ್ತು ಇಷ್ಟು ಸುದೀರ್ಘ ಕಾಲ ಯಡಿಯೂರಪ್ಪ ಅವರ ಮಾತು ನಡೆಯದಂತಾಗಿದ್ದು ಇದಕ್ಕೆ ಸಾಕ್ಷಿ. ಅರ್ಥಾತ್, ಇನ್ನು ಮುಂದೆ ಯಡಿಯೂರಪ್ಪ ಅವರು ಏನೇ ಹೇಳಲಿ, ಅದಕ್ಕೆ ಸಂತೋಷ್ ಗ್ಯಾಂಗು ಅಡ್ಡಗಾಲು ಹಾಕುತ್ತದೆ. ಸ್ವತಃ ಮುಖ್ಯಮಂತ್ರಿಯಾಗಿದ್ದಾಗಲೇ ಸಂತೋಷ್ ಬಣದ ಪಿರಿಪಿರಿ ತಡೆಯುವುದು ಅವರಿಗೆ ಕಷ್ಟವಾಗಿತ್ತು. ಅಂದ ಮೇಲೆ ಮುಂದಿನ ದಿನಗಳು ಹೇಗಿರಬಹುದು ಅಂತ ಯಡಿಯೂರಪ್ಪ ಅವರಿಗೆ ಗೊತ್ತಿದೆ. ಅವರ ಬೆಂಬಲಿಗರಿಗೂ ಅರ್ಥವಾಗಿದೆ.
೨೦೨೩ರ ವಿಧಾನಸಭಾ ಚುನಾವಣೆಯನ್ನು ಯಡಿಯೂರಪ್ಪ ಅವರ ನೇತೃತ್ವದಲ್ಲಿ ಎದುರಿಸಬೇಕು. ಇಲ್ಲದಿದ್ದರೆ ಗೆಲ್ಲುವುದು ಕಷ್ಟ ಅಂತ ನೂರಕ್ಕೂ ಹೆಚ್ಚು ಕ್ಷೇತ್ರಗಳ ಸ್ಥಳೀಯ ನಾಯಕರು ಹೇಳುತ್ತಾ ಬಂದಿದ್ದರು. ಆದರೆ ಅದನ್ನು ಲೆಕ್ಕಿಸದ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿತ್ತು. ಈ ಬೆಳವಣಿಗೆಯಾದ ನಂತರದ ದಿನಗಳಲ್ಲಿಬಿಜೆಪಿಯ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು ಮೆಲ್ಲಗೆ ಬೇರೆ ಪಕ್ಷಗಳ ಕಡೆ ವಲಸೆಹೋಗಲು ಶುರುಮಾಡಿದ್ದರು. ಈಗ ಅಂಥ ವಲಸೆಯ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ ಮತ್ತು ಈ ಬೆಳವಣಿಗೆಯಿಂದ ಬಿಜೆಪಿಯೇತರ ಶಕ್ತಿಗಳಿಗೆ ಅನುಕೂಲವಾಗ ಲಿದೆ.
ಅದೇ ರೀತಿ, ಬಿಜೆಪಿಯಿಂದ ವಲಸೆ ಹೋಗುವವರಿಗೆ ಈ ಮುಂಚೆ ಕಾಂಗ್ರೆಸ್ ಇಲ್ಲವೇ ಜೆಡಿಎಸ್ ಕಾಣುತ್ತಿತ್ತು. ಆದರೆ ಈಗ ಜೆಡಿಎಸ್ ಒಲವು ಬಿಜೆಪಿಯತ್ತ ವಾಲಿಕೊಂಡರೆ ಕರ್ನಾಟಕದ ನೆಲೆಯಲ್ಲಿ ಬೇರೆ ರೂಪದೊಂದಿಗೆ ತೃತೀಯ ಶಕ್ತಿಯೊಂದು ಎದ್ದು ನಿಲ್ಲಬಹುದು ಎಂಬುದು ಮಹಾಮೈತ್ರಿಕೂಟದ ಲೆಕ್ಕಾಚಾರ. ಅಂದ ಹಾಗೆ ಇವತ್ತಿಗೂ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಜತೆ ಹೋಗಲಾಗದೆ ಉಳಿದಿರುವ ದೊಡ್ಡದೊಂದು ಗುಂಪಿದೆ. ನಾಳೆ ಬಿಜೆಪಿಯಿಂದ ಯಡಿಯೂರಪ್ಪ ಟೀಮು ವಲಸೆ ಶುರುಮಾಡಿದರೆ ಈ ಗುಂಪೇ ಜೆಡಿಎಸ್‌ಗೆ ಪರ್ಯಾಯವಾಗಿ ತಲೆ ಎತ್ತುತ್ತದೆ ಎಂಬುದು ಮಹಾಮೈತ್ರಿಕೂಟದ ಲೆಕ್ಕಾಚಾರ.
ಸೋಮಣ್ಣ ಕೊಟ್ಟ ‘ಡೋಸ್’ ಇಂಥ ಲೆಕ್ಕಾಚಾರಗಳೇನೇ ಇರಲಿ, ಇತ್ತೀಚಿನ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇದ್ದಕ್ಕಿದ್ದಂತೆ ಆಕ್ಟಿವ್ ಆಗಿರುವುದು ಬಿಜೆಪಿ ಪಾಳಯದಲ್ಲಿ ಕುತೂಹಲ ಮೂಡಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ‘ಕೂಲ್ ಕೂಲ್’ ಆಗಿ ವರ್ತಿಸುತ್ತಿದ್ದ ಯಡಿಯೂರಪ್ಪ, ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತು ಬಂದರೆ, ‘ಕೊಟ್ಟ ಭರವಸೆಯನ್ನು ಅವರು ಈಡೇರಿಸುತ್ತಾರೆ. ಅದರ ಬಗ್ಗೆ ಸಣ್ಣದಾಗಿ ಮಾತನಾಡುವುದು ಸರಿಯಲ್ಲ’ ಎನ್ನುತ್ತಿದ್ದರು.
ಅಂಥ ಯಡಿಯೂರಪ್ಪ ಇದ್ದಕ್ಕಿದ್ದಂತೆ ಆಕ್ಟಿವ್ ಆದರು. ಸರಕಾರ ಅನ್ನಭಾಗ್ಯ ಯೋಜನೆಯಡಿ ಒಂದು ಗ್ರಾಂನಷ್ಟು ಕಡಿಮೆ ಅಕ್ಕಿ ಕೊಟ್ಟರೂ ಉಗ್ರ ಹೋರಾಟಕ್ಕಿಳಿಯುತ್ತೇವೆ ಎಂದರು. ಇದ್ದಕ್ಕಿದ್ದಂತೆ ಅವರು ಆಕ್ಟಿವ್ ಆಗಿದ್ದೇಕೆ ಅಂತ ನೋಡಲು ಹೊರಟವರಿಗೆ ಮಾಜಿ ಸಚಿವ ವಿ. ಸೋಮಣ್ಣ ಕಾಣಿಸಿದರಂತೆ. ಅಂದ ಹಾಗೆ ಇತ್ತೀಚಿನ ದಿನಗಳಲ್ಲಿ ಅಮಿತ್ ಶಾ ಅವರಿಗೆ ತುಂಬ ಹತ್ತಿರವಾಗಿರುವ ಸೋಮಣ್ಣ ಅವರಿಗೆ ಹಲ ಭರವಸೆಗಳು ಸಿಕ್ಕಿವೆಯಂತೆ.
ಬಿಜೆಪಿಯ ರಾಜ್ಯಾಧ್ಯಕ್ಷರಾಗಲು ರೆಡಿ ಇರಿ ಎಂಬುದು ಇಂಥ ಭರವಸೆಗಳಲ್ಲಿ ಒಂದು. ಹೀಗಾಗಿಯೇ ಸೋಮಣ್ಣ ಅವರು, ‘ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಾನೂ ಆಕಾಂಕ್ಷಿ’ ಎಂದುಬಿಟ್ಟರು. ಯಾವತ್ತೂ ಸುಖಾಸುಮ್ಮನೆ ಮಾತನಾಡುವ ಗುಣ ಸೋಮಣ್ಣ ಅವರಿಗಿಲ್ಲ ಅಂತ ಯಡಿಯೂರಪ್ಪ ಅವರಿಗೂ ಗೊತ್ತಲ್ಲ? ಹೀಗಾಗಿ ಅವರು ಧ್ವನಿ ಎತ್ತುತ್ತಿದ್ದಂತೆಯೇ ಅಲರ್ಟ್ ಆದ ಯಡಿಯೂರಪ್ಪ ಉಗ್ರಭಾಷಣಕ್ಕೆ ಇಳಿದರು. ತಾವು ಸೈಡ್‌ಲೈನಿಗೆ ಸರಿಯುತ್ತಿರುವ ಕಾಲದಲ್ಲಿ ಸೋಮಣ್ಣ ಬಿಜೆಪಿ ಅಧ್ಯಕ್ಷರಾಗಿ ಕುಂತರೆ ಏನು ಗತಿ? ತಮ್ಮ ಪುತ್ರ ವಿಜಯೇಂದ್ರ ಅವರ ಸ್ಥಿತಿ ಎನಾಗಬಹುದು? ಎಂಬುದು ಅವರ ಆತಂಕ. ಹೀಗಾಗಿ ದಿನ ಬೆಳಗಾದರೆ ಅವರು ಸರಕಾರದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಅಂದ ಹಾಗೆ, ಇವತ್ತಿನ ಸ್ಥಿತಿಯಲ್ಲಿ ಸೋಮಣ್ಣ ಬದಲು ಬೇರೊಬ್ಬರು ಅಧ್ಯಕ್ಷರಾಗ ಬಹುದು, ಆ ಮಾತು ಬೇರೆ. ಆದರೆ ಈ ಹಂತದಲ್ಲಿ ಸೋಮಣ್ಣ ಕೊಟ್ಟ ’ಡೋಸ್’ ಯಡಿಯೂರಪ್ಪ ಅವರಿಗೆ ಚೆನ್ನಾಗಿ ನಾಟಿರು ವುದು ಮಾತ್ರ ನಿಜ.