ಸಾರ್ವಕಾಲಿಕ ಹೀರೋ ನಮ್ಮ ಶ್ರೀಕೃಷ್ಣ
ಕೃಷ್ಣ ಪ್ರಜ್ಞೆ
ಸಮರ್ಥ್‌ ಐತಾಳ್
ಹುಟ್ಟಿದಾರಭ್ಯ ಹೆಜ್ಜೆಹೆಜ್ಜೆಗೂ ಸವಾಲುಗಳನ್ನು ಎದುರಿಸುತ್ತಲೇ ಬಂದ ಶ್ರೀಕೃಷ್ಣನು ಜರಾಸಂಧ, ಕಂಸ ಮೊದಲಾದ ಕ್ರೂರಿಗಳು ಒಡ್ಡಿದ ಸಮಸ್ಯೆಗಳನ್ನುಎದುರಿಸುತ್ತಾ, ಅವರಿಗೊಂದು ಅಂತ್ಯ ಕಾಣಿಸಿದ. ಇಂಥ ವೇಳೆ ಜನ ಅಪಹಾಸ್ಯ ಮಾಡಿದರೂ ಸ್ಥಿತಪ್ರಜ್ಞತೆಯನ್ನು ಕಳೆದುಕೊಳ್ಳದೆ ಕೆಲಸದಲ್ಲಿ ಮಗ್ನನಾದ.
ಯಾರೋ ಬರೆದ ಡೈಲಾಗುಗಳನ್ನು ಹೊಡೆದು, ನಕಲಿ ಫೈಟುಗಳನ್ನು ಮಾಡಿ ಕೇವಲ ೨ ಗಂಟೆಗಳ ಕಾಲ ಮನರಂಜನೆ ನೀಡುವ ನಟರನ್ನು, ‘ಪಾನ್ ಮಸಾಲಾ ಸೇವಿಸಿ, ಆನ್‌ಲೈನ್ ಜೂಜುಗಳನ್ನು ಆಡಿ’ ಎಂದು ಪ್ರೇರೇಪಿಸುವ ಸೆಲೆಬ್ರಿಟಿಗಳನ್ನು ನಮ್ಮ ರೋಲ್‌ಮಾಡೆಲ್‌ಗಳಾಗಿ ತೆಗೆದುಕೊಳ್ಳುತ್ತೇವೆ. ಸಿನಿಮಾ ದೃಶ್ಯಗಳಲ್ಲಿ ಹೀರೋಗಳು ತೋರುವ ಸ್ಟೈಲ್, ಅವರ ವರ್ತನೆಗಳನ್ನು ಅನುಕರಿಸುವವರೂ ಸಾಕಷ್ಟು ಮಂದಿ ಇದ್ದಾರೆ. ಒಟ್ಟಾರೆ ಹೇಳುವುದಾದರೆ, ಸಿನಿಮಾದಲ್ಲಿ ಹೀರೋ ಆ ಕಥೆಯಲ್ಲಿ ಎದುರಾಗುವ ಸನ್ನಿವೇಶಗಳಿಗೆ ಪ್ರತಿಕ್ರಿಯಿಸುವ ರೀತಿಯನ್ನೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಾಕಷ್ಟು ಮಂದಿ ಇಚ್ಛಿಸುವುದು ಗೊತ್ತಿರುವ ವಿಷಯವೇ.
ಕೆಲವೊಮ್ಮೆ ಇದು ಅತಿರೇಕಕ್ಕೆ ಹೋಗಿ, ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸ್ಥಿತಪ್ರಜ್ಞನಾಗಿ ಎದುರಿಸುವ ಬದಲು, ಎಲ್ಲದಕ್ಕೂ ಮದ್ಯಪಾನವೇ ಪರಿಹಾರ ಎಂದು ಕಂಠಪೂರ್ತಿ ಕುಡಿಯುವ, ಎಲ್ಲರ ಮೇಲೆ ರೇಗುತ್ತಾ ಕೆಲವೊಮ್ಮೆ ಹಲ್ಲೆಯನ್ನೂ ಮಾಡುತ್ತಾ, ತಾಮಸಿಕ ಗುಣಗಳನ್ನೇ ಅಳವಡಿಸಿಕೊಳ್ಳುತ್ತಾ, ತನ್ನ ವ್ಯಕ್ತಿತ್ವವನ್ನೇ ವಿನಾಶದ ಪಥದತ್ತ ತಳ್ಳಿಕೊಳ್ಳುವ ಇಂಥ ಕಥಾನಾಯಕರ ಪಾತ್ರವನ್ನು ಯುವಜನರು ಹೆಚ್ಚು ಇಷ್ಟಪಡುತ್ತಾ, ರೋಲ್‌ಮಾಡೆಲ್‌ಗಳಾಗಿ ಸ್ವೀಕರಿಸುವುದೂ ಇದೆ. ಮತ್ತೆ ಕೆಲವು ಸಿನಿಮಾಗಳಲ್ಲಂತೂ, ಇಂಥ ಘಟನೆ ಗಳಿಂದ ಸಿಡಿದೆದ್ದು, ಅತಿಯಾದ ಹಿಂಸೆಯಿಂದ ಎಲ್ಲರನ್ನೂ ತನ್ನ ಬೆರಳ ತುದಿಯಲ್ಲೇ ಆಡಿಸುತ್ತಾ, ತಾನು ಮಾಡಿದ್ದೆಲ್ಲ ಸರಿ ಎಂದು ಹೇಳುತ್ತಾ, ದುರಂಹಕಾರದ ಪರಮಾವಧಿಯನ್ನೂ ಮೀರಿ, ಸಮಾಜಘಾತುಕನಾಗಿ ಕಥಾನಾಯಕ ಬೆಳೆಯುವುದನ್ನು ವೈಭವೀಕರಿಸಿ ತೋರಿಸಲಾಗುತ್ತದೆ.
ಇಂಥ ಪಾತ್ರಗಳು ಕೇವಲ ಸಿನಿಮಾಗಳಲ್ಲಿ ಯಶಸ್ಸು ಕಾಣುತ್ತವೆಯೇ ವಿನಾ, ನಿಜಜೀವನದಲ್ಲಿ ಅಲ್ಲ.  ಒಮ್ಮೆ ಪ್ರಪಂಚದ ಇತಿಹಾಸದತ್ತ ಗಮನಹರಿಸಿ ನೋಡಿದರೆ, ಇಂಥದೇ ವರ್ತನೆ ಮೆರೆದ ನಾಯಕರ ಅಂತ್ಯ ಎಷ್ಟು ಘೋರವಾಗಿತ್ತು ಎಂಬುದು ಅರಿವಿಗೆ ಬರುತ್ತದೆ. ಇಷ್ಟಾಗಿಯೂ ಇಂದಿನ ಯುವಪೀಳಿಗೆಯ ಕೆಲವರು, ಇಂಥ ಪಾತ್ರಗಳನ್ನೇ ಆದರ್ಶ ವ್ಯಕ್ತಿತ್ವವಾಗಿ ಆರಿಸಿಕೊಳ್ಳುತ್ತಿರುವುದು ವಿಪರ್ಯಾಸ. ನಮ್ಮಲ್ಲಿ ಈ ಪರಿಪಾಠ ದಿನಗಳೆದಂತೆ ಬೆಳೆಯುತ್ತಿದ್ದರೆ, ಪ್ರಪಂಚದ ವಿವಿಧೆಡೆಗಳಲ್ಲಿ ಅನೇಕ ಸಾಧಕರು, ಭಾರತದ ಪುರಾಣೇತಿಹಾಸದ ಪುಟಗಳಲ್ಲಿ ವಿಜೃಂಭಿಸುವ, ಪ್ರಪಂಚಕ್ಕೆ ದಾರಿ ತೋರುವ ಸಂದೇಶಗಳನ್ನುಕೊಟ್ಟ ಯುಗಪುರುಷನನ್ನು ಹಾಗೂ ಆತನ ತತ್ತ್ವಗಳನ್ನು ಪಾಲಿಸುವ ಪರಿಪಾಠಕ್ಕೆ ಒಡ್ಡಿಕೊಂಡಿದ್ದಾರೆ.
ಆ ಯುಗಪುರುಷನೇ ನಮ್ಮ ಶ್ರೀಕೃಷ್ಣ. ಅಣುಬಾಂಬ್‌ನ ಪಿತಾಮಹ ಎಂದೇ ಕರೆಯಲ್ಪಡುವ ಜೆ.ರಾಬರ್ಟ್ ಓಪನ್‌ಹೀಮರ್, ಭಗವದ್ಗೀತೆಯನ್ನು ಮೂಲಸ್ವರೂಪದಲ್ಲಿ ಓದಬೇಕೆಂದು ೧೯೩೩ರಲ್ಲಿ ಸಂಸ್ಕೃತವನ್ನು ಕಲಿಯುತ್ತಾರೆ. ಭಗವದ್ಗೀತೆಯು ತಮಗೆ ಜೀವನದ ತತ್ತ್ವಗಳನ್ನು ಹೇಳಿಕೊಟ್ಟಿದೆ ಎಂಬುದು ಓಪನ್‌ಹೀಮರ್ ಅಭಿಪ್ರಾಯ. ಖ್ಯಾತ ಹಾಲಿವುಡ್ ನಟ ವಿಲ್ ಸ್ಮಿತ್ ಅವರಂತೂ, ‘ನನ್ನಲ್ಲಿರುವ ಅರ್ಜುನನು ಶೇ. ೯೦ರಷ್ಟು ಜಾಗೃತನಾಗಿದ್ದಾನೆ’ ಎಂದು ಹೇಳುವ ಮೂಲಕ ತಾವು ಶ್ರೀಕೃಷ್ಣನ ತತ್ತ್ವಗಳನ್ನು ಅರ್ಜುನನಂತೆ ಪಾಲಿಸುತ್ತಿರುವುದನ್ನು ತಿಳಿಸುತ್ತಾರೆ.
ಹುಟ್ಟಿದಾರಭ್ಯ ಹೆಜ್ಜೆಹೆಜ್ಜೆಗೂ ಸವಾಲುಗಳನ್ನು ಹಾಗೂ ಜನರ ಟೀಕೆಗಳನ್ನು ಎದುರಿಸುತ್ತಲೇ ಬಂದ ಶ್ರೀಕೃಷ್ಣನು ಜರಾಸಂಧ, ಕಂಸ ಮೊದಲಾದ ಅಂದಿನ ಕ್ರೂರಿಗಳು ಒಡ್ಡಿದ ಸಮಸ್ಯೆಗಳನ್ನು ಎದುರಿಸುತ್ತಾ, ಅವರಿಗೊಂದು ಅಂತ್ಯ ಕಾಣಿಸಿದ. ಇಂಥ ಹಲವು ಸಂದರ್ಭಗಳಲ್ಲಿ ಜನರ ಅಪಹಾಸ್ಯ ಮುಗಿಲು ಮುಟ್ಟಿದ್ದರೂ ಶಾಂತತೆ ಮತ್ತು ಸ್ಥಿತಪ್ರಜ್ಞತೆಯನ್ನು ಕಳೆದುಕೊಳ್ಳದೆ ಬದುಕನ್ನು ಅದು ಬಂದಂತೆ ಸ್ವೀಕರಿಸುತ್ತ, ಓರ್ವ ಗೋಪಾಲಕನಾಗಿ ಹುಟ್ಟಿದವನು ಸಾಮ್ರಾಜ್ಯವೊಂದರರಾಜಕೀಯ ಚಿತ್ರಣವನ್ನೇ ಬದಲಾಯಿಸುವ ಮಟ್ಟಕ್ಕೇರಿದ.
ಇದು ನಮ್ಮೆಲ್ಲರ ಪಾಲಿಗೆ ಪ್ರೇರಣಾದಾಯಿ ಬೆಳವಣಿಗೆಯಾಗಬೇಕು. ಶ್ರೀಕೃಷ್ಣನಿಗೂ ನಮ್ಮ-ನಿಮ್ಮ ಹಾಗೆ ಬದುಕಿನಲ್ಲಿ ಸಾಕಷ್ಟು ಕಷ್ಟಗಳಿದ್ದವು, ಸವಾಲುಗಳಿದ್ದವು. ತಾನು ಪ್ರೀತಿಸಿದ ಹುಡುಗಿ ಸಿಗದಿದ್ದಾಗ ಈಗಿನವರ ಹಾಗೆ ಹತಾಶನಾಗದೆ, ಮನಸ್ಸಿನ ಸ್ಥಿರತೆಯನ್ನು ಕಳೆದುಕೊಳ್ಳದೆ, ತಾನು ಮುಂದೆ ಸಾಧಿಸಬೇಕಾದ ಗುರಿಯತ್ತ ದೃಷ್ಟಿನೆಟ್ಟು ಪಾಲಿಸಬೇಕಾದ ಕರ್ತವ್ಯದ ಮಾರ್ಗದಲ್ಲಿ ಹೆಜ್ಜೆಹಾಕುತ್ತಾನೆ ಶ್ರೀಕೃಷ್ಣ. ಮಗಧದ ಜರಾಸಂಧನು ತನ್ನ ಮಥುರೆಯ ಮೇಲೆ ಪದೇಪದೆ ದಾಳಿಮಾಡಿದಾಗ, ಯುದ್ಧಪೀಡಿತ ಪ್ರದೇಶಗಳಲ್ಲಿನ ಸಮಾಜದಲ್ಲಿ ಶಾಂತಿ ನೆಲೆಸುವುದು ಅಸಾಧ್ಯ ಮತ್ತು ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ಎಂಬುದನ್ನು ಅರಿತು,ತನ್ನ ರಾಜ್ಯವನ್ನು ದ್ವಾರಕೆಗೆ ಸ್ಥಳಾಂತರಿಸುತ್ತಾನೆ ಶ್ರೀಕೃಷ್ಣ. ಆಗ ಅನೇಕರು ಅವನನ್ನು ಪಲಾಯನವಾದಿ ಎಂದು ಕರೆಯುತ್ತಾರೆ. ಆದರೆ ಈ ಅಪಹಾಸ್ಯಕ್ಕೆ ಶ್ರೀಕೃಷ್ಣ ತಲೆಕೆಡಿಸಿಕೊಳ್ಳದೆ, ರಾಜ್ಯದ ಜನರ ಕ್ಷೇಮಕ್ಕಾಗಿ ತನ್ನ ನಿರ್ಧಾರಕ್ಕೆ ಬದ್ಧನಾಗಿ ನಿಲ್ಲುತ್ತಾನೆ.
ನಾವಾದರೋ, ನಮ್ಮ ಹಿತಕ್ಕಾಗಿ ಕೆಲವೊಂದು ಕಠಿಣ ನಿರ್ಧಾರವನ್ನು ಕೈಗೊಳ್ಳುವಾಗಲೂ, ‘ನಾಲ್ಕು ಜನ ಏನು ಹೇಳುತ್ತಾರೋ?’ ಎಂದು ಭಯಪಡುತ್ತೇವೆ. ನಮ್ಮ ನಡೆ-ನಿರ್ಧಾರಗಳು ಯಾರಿಗೂ ಹಾನಿಮಾಡದಂತಿರಬೇಕು, ಜನರ ನಿಂದನೆಯ ತಾಳಕ್ಕೆ ಕುಣಿಯದೆ ಧೈರ್ಯವಾಗಿ ನಮ್ಮ ನಿರ್ಧಾರಕ್ಕೆ ಬದ್ಧರಾಗಿ ನಿಲ್ಲಬೇಕು ಎಂಬುದನ್ನು ಶ್ರೀಕೃಷ್ಣನ ಈ ನಡೆ ತೋರಿಸಿಕೊಡುತ್ತದೆ. ಕೌರವರು ಸಾರಿದ ಅಧರ್ಮದ ಯುದ್ಧವನ್ನು ಗೆಲ್ಲುವುದಕ್ಕೆ ಶ್ರೀಕೃಷ್ಣ ರಣತಂತ್ರಗಳನ್ನುಹೆಣೆದಾಗಲೂ ಅನೇಕ ಮಂದಿ ಅವನನ್ನು ಕಪಟಿ ಮತ್ತು ಮೋಸಗಾರ ಎಂದು ಆಡಿಕೊಳ್ಳುತ್ತಾರೆ. ಆಗಲೂ ಶ್ರೀಕೃಷ್ಣ ತಲೆಕೆಡಿಸಿಕೊಳ್ಳುವುದಿಲ್ಲ. ಯುದ್ಧ ಗೆದ್ದ ನಂತರಗಾಂಧಾರಿಯು, ‘ನಿನ್ನ ಕಣ್ಣೆದುರೇ ನಿನ್ನ ವಂಶದವರು ಸಾಯಲಿ’ ಎಂದು ಶಾಪಕೊಡುತ್ತಾಳೆ.
ವಂಶನಾಶದ ಇಂಥ ಶಾಪವನ್ನೂ ತೆಳುನಗೆಯಿಂದಲೇ ಸ್ವೀಕರಿಸುವ ಶ್ರೀಕೃಷ್ಣ ಎಂಥಾ ಸ್ಥಿತಪ್ರಜ್ಞ! ತನ್ನ ಸುತ್ತಲೂ ಭೀಕರವಾದ ಯುದ್ಧ ನಡೆಯುತ್ತಿದ್ದರೂ,ಅಲ್ಲಿನ ಸಾವುನೋವುಗಳ ಮುಗಿಲು ಮುಟ್ಟುವ ಆಕ್ರಂದನಗಳಿಗೆ ಶ್ರೀಕೃಷ್ಣನೇ ಕಾರಣ ಎಂಬ ಅಪವಾದ ಕೇಳಿಬರುತ್ತಿದ್ದರೂ ಒಂದಿನಿತೂ ವಿಚಲಿತನಾಗದೆ ತನ್ನಪಾಲಿನ ಕೆಲಸಗಳನ್ನು ಪಟ್ಟುಹಿಡಿದು ಮಾಡುತ್ತಾ ಸಾಗಿದ ಶ್ರೀಕೃಷ್ಣ , ಸುತ್ತಲಿನ ಘಟನೆಗಳಿಂದ ತನ್ನ ಮನಸ್ಸಿನ ಶಾಂತಿಯ ಅಲೆಗಳು ಕದಡದಂತೆ ನೋಡಿಕೊಂಡ. ಆತ ಸುಖ-ದುಃಖಕ್ಕೆ, ಹೊಗಳಿಕೆ-ತೆಗಳಿಕೆಗೆ ಮೀರಿದವನಾಗಿದ್ದ. ಬದುಕನ್ನು ಆತ ಕಂಡ ಬಗೆ ಹಾಗೂ ಸ್ಥಿತಪ್ರಜ್ಞನಾಗಿ ಅದನ್ನು ಎದುರಿಸಿದ ರೀತಿಯನ್ನು ನಮ್ಮ ಬದುಕಲ್ಲೂ ಅಳವಡಿಸಿಕೊಳ್ಳಬೇಕು. ಆತನಷ್ಟು ಪರಿಪೂರ್ಣರಾಗಿ ಅಲ್ಲದಿದ್ದರೂ ಕೊಂಚ ಮಟ್ಟಿಗಾದರೂ ಅಳವಡಿಸಿಕೊಳ್ಳಲು ಯತ್ನಿಸಿದರೆ ಮುನ್ನುಗಲು ಧೈರ್ಯ, ಮನದಲ್ಲಿ ಶಾಂತಿ ಹಾಗೂ ಬದುಕಿನಲ್ಲಿ ಸ್ಪಷ್ಟತೆ ಸಿಗುತ್ತದೆ.
ಹಾಗಾಗಿ ಶ್ರೀಕೃಷ್ಣ ನಮ್ಮೆಲ್ಲರ ರೋಲ್‌ಮಾಡೆಲ್ ಆಗಲಿ. ಏಕೆಂದರೆ ಅವನೇ ನಿಜವಾದ ಹೀರೋ!