ಮಲ್ಲಿಕಾರ್ಜುನ ಖರ್ಗೆ ಇಂಡಿಯ ಸಂಚಾಲಕರಾಗಲಿ
ವಿಶ್ಲೇಷಣೆ
ಪ್ರೊ.ಆರ್‌.ಜಿ.ಹೆಗಡೆ
ಪಕ್ಷದ ಲಕ್ಷ್ಮಣರೇಖೆಯನ್ನು ದಾಟದ ಖರ್ಗೆ ಅಪಾರ ಸಂಯಮದ, ಸಂತುಲನದ ವ್ಯಕ್ತಿ. ಅವರ ರಾಜಕೀಯ ಘರ್ಷಣಾ ತ್ಮಕ ವಾದುದಲ್ಲ, ಹೊಂದಾಣಿಕೆಯದ್ದು. ವೈಯಕ್ತಿಕ ನಿಂದನೆಗಳಲ್ಲಿ, ಬಂಡಾಯವೇಳುವುದರಲ್ಲಿ ನಂಬಿಕೆಯಿಲ್ಲದ ಅವರು ಆಧಾರವಿಲ್ಲದೆ, ಅನವಶ್ಯಕವಾಗಿ ಅತಿಯಾಗಿ ಮಾತಾಡುವವರಲ್ಲ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವ್ಯಕ್ತಿತ್ವವನ್ನು ವಿವಿಧ ಕೋನಗಳಿಂದ ವಿಶ್ಲೇಷಿಸಬೇಕು. ಮೊದಲಿಗೆ, ಅವರು ಅಂದು ನೀರಿಲ್ಲದಿದ್ದ, ಬಿಸಿಲ ನಾಡಾಗಿದ್ದ, ತೀವ್ರ ಬಡತನವಿದ್ದ, ಹಿಂದುಳಿಯುವಿಕೆಗೆ ರೂಪಕವಾಗಿದ್ದ ಕಲಬುರಗಿ ಪ್ರದೇಶದ ಹಿನ್ನೆಲೆ ಯಿಂದ ಬಂದವರು. ಕಲಬುರಗಿ ಇಂದು ಸಾಕಷ್ಟು ಪ್ರಗತಿ ಸಾಧಿಸಿರಬಹುದು. ಆದರೆ ಅಲ್ಲಿ ಒಂದು ಕಾಲಕ್ಕೆ ಅನಕ್ಷರತೆ, ಕಷ್ಟಕಾರ್ಪಣ್ಯ, ಅಸಹಾಯಕತೆ, ನೋವು, ದುಃಖಗಳೇ ತುಂಬಿಹೋಗಿದ್ದನ್ನು ಹತ್ತಿರದಿಂದ ಕಂಡು ಸ್ವತಃ ಅನುಭವಿಸಿ, ಅದರೊಂದಿಗೇ ಬೆರೆತು ಉಸಿರಾಡಿ ಬೆಳೆದು ನಿಂತವರು ಖರ್ಗೆ. ಅಲಂಕಾರಿಕವಾಗಿ ಹೇಳುವುದಾದರೆ ಕಲಬುರಗಿಯ ಕಪ್ಪು ಮಣ್ಣಿನ ಮಗ ಅವರು.
ಮತ್ತೊಂದೆಡೆ, ಇವೇ ಅನುಭವಗಳು ಖರ್ಗೆಯವರಿಗೆ ಅಸಾಧಾರಣ ಜೀವನಪಾಠಗಳನ್ನು ಹೇಳಿ, ಕೌಶಲಗಳನ್ನು ಕಲಿಸಿಬಿಟ್ಟಿವೆ ಅನಿಸುತ್ತದೆ. ಕಷ್ಟಗಳನ್ನು ಎದುರಿಸುವುದು, ಎದುರಿ ಸುತ್ತಲೇ ಮುನ್ನಡೆಯುವುದು ಹೇಗೆಂಬುದನ್ನು ಬಹುಶಃ ಖರ್ಗೆಯವರು ಕಲಿತಿದ್ದು ಅಲ್ಲಿಂದ. ಹಾಗೆಯೇ, ಅಪಾರ ಸಹನೆ, ಸಹಿಷ್ಣುತೆ, ಛಲ, ಹೊಂದಾಣಿಕೆಯ ಮನೋಭಾವ, ಹಾಸ್ಯಪ್ರಜ್ಞೆ, ಎಲ್ಲೂ ನಿಲ್ಲದೆ ಮುನ್ನಡೆವ ಮನೋಭಾವ ಇತ್ಯಾದಿಗಳನ್ನು ಅವರ ವ್ಯಕ್ತಿತ್ವಕ್ಕೆ ಆವಾಹಿಸಿದ್ದೂ ಇಂಥ ಹಿನ್ನೆಲೆಯೇ. ಖರ್ಗೆ ವ್ಯಕ್ತಿತ್ವದ ಬಹುದೊಡ್ಡ ಗುಣ ಸಹನೆ.
ಕರ್ನಾಟಕದ ಮುಖ್ಯಮಂತ್ರಿಯಾಗುವ ಅವಕಾಶವು ೨-೩ ಬಾರಿ ಕೂದಲೆಳೆಯಷ್ಟು ಅಂತರದಿಂದ ತಪ್ಪಿಹೋದರೂ ಮರು ಮಾತಾಡದೆ, ಭಿನ್ನಮತ ತೋರದೆ, ಖಿನ್ನತೆಗೆ ಒಳಗಾಗದೆ ಬಂದಿದ್ದನ್ನು ಸ್ವೀಕರಿಸುತ್ತ ಸಾಗಿದವರು ಅವರು. ಬರೀ ಸ್ವೀಕರಿಸುತ್ತ ಹೋದವರಲ್ಲ, ಅದರಲ್ಲಿಯೇ ತೃಪ್ತಿ ಕಾಣುತ್ತ, ಸಿಕ್ಕಿದ ಕೆಲಸವನ್ನು ನಿಷ್ಠೆ-ಬುದ್ಧಿವಂತಿಕೆಯಿಂದ ಅಚ್ಚುಕಟ್ಟಾಗಿ ನಿರ್ವಹಿಸುತ್ತ ಮುನ್ನಡೆದವರು. ಬಹುಶಃ ಈ ಗುಣವೇ ಅವರನ್ನು ಗುಲ್ಬರ್ಗಾ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನದಿಂದ ಎಐಸಿಸಿ ಅಧ್ಯಕ್ಷ ಸ್ಥಾನದವರೆಗೆ ಕೊಂಡೊಯ್ದಿದ್ದು. ೫೦ವರ್ಷಗಳಿಗಿಂತಲೂ ಹೆಚ್ಚು ಕಾಲ ಸ್ಪರ್ಧಾತ್ಮಕ ರಾಜಕೀಯದಲ್ಲಿ ಖರ್ಗೆ ಯಶಸ್ವಿಯಾಗಿ ಉಳಿದು ಬಂದಿ ರುವ ಕಾರಣ ಬಹುಶಃ ಇದು.
 - 
ಎರಡನೆಯದಾಗಿ, ಖರ್ಗೆ ಚತುರ ರಾಜಕಾರಣಿ ಮತ್ತು ಆಡಳಿತಗಾರ ಎಂಬುದರಲ್ಲಿ ಎರಡು ಮಾತಿಲ್ಲ. ೧೯೬೯ರಲ್ಲಿ ರಾಜಕೀಯ ಕ್ಕಿಳಿದ ಅವರಿಗೆ ಮೊಟ್ಟಮೊದಲು ದಕ್ಕಿದ್ದು ಗುಲ್ಬರ್ಗಾದ ಕಾಂಗ್ರೆಸ್‌ನ ಅಧ್ಯಕ್ಷಗಿರಿ. ನಂತರ ಅವರು ರಾಜಕೀಯವಾಗಿ ಹಿಂದಿರುಗಿ ನೋಡಿದ್ದಿಲ್ಲ. ಗುರುಮಿಟ್ಕಲ್‌ನಿಂದ ಸತತ ೮ ಬಾರಿ, ಹಾಗೆಯೇ ಮುಂದುವರಿದು ಚಿತ್ತಾಪುರದಿಂದ ೧ ಬಾರಿ ಹೀಗೆ ಒಟ್ಟು ೯ ಸಲಕರ್ನಾಟಕ ವಿಧಾನಸಭೆಗೆ ಆಯ್ಕೆಯಾದ ‘ಸೋಲಿಲ್ಲದ ಸರದಾರ’ ಖರ್ಗೆ. ರಾಜಕೀಯ ಅಧಿಕಾರ ಸ್ಥಾನಗಳೂ ಅವರಿಗೆ ದಕ್ಕುತ್ತಲೇ ಹೋದವು. ಆಧುನಿಕ ಕರ್ನಾಟಕವನ್ನು ರೂಪಿಸಿದ ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್, ಗೃಹ, ಕಂದಾಯ, ಭಾರಿ ನೀರಾ ವರಿ, ಬೃಹತ್ ಕೈಗಾರಿಕೆಯಂಥ ಮಹತ್ವದ ಖಾತೆಗಳನ್ನು ಕರ್ನಾಟಕದ ಸರಕಾರದಲ್ಲಿ ಸುಮಾರು ೩೫ ವರ್ಷ ನಿರ್ವಹಿಸಿದ ಖರ್ಗೆ, ಈ ಎಲ್ಲ ಖಾತೆಗಳಲ್ಲೂ ಸ್ಪಷ್ಟ ಹೆಜ್ಜೆಗುರುತನ್ನು ಮೂಡಿಸಿದವರೇ.
ಆಕ್ಟ್ರಾಯ್ ಕಂದಾಯ ರದ್ದತಿ ಸಮಿತಿಯ ಅಧ್ಯಕ್ಷ ರಾಗಿ ಅದನ್ನು ರದ್ದುಪಡಿಸಿದ್ದು, ರಾಜ್ಯ ಚರ್ಮೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಲಕ್ಷಾಂತರ ಜನರ ಬದುಕಿಗೆ ಬೆಳಕಾಗಿದ್ದು, ಶಿಕ್ಷಣ ಸಚಿವರಾಗಿ ಸುಮಾರು ೧೬,೦೦೦ ಬ್ಯಾಕ್‌ಲಾಗ್ ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ತುಂಬಿ ಸಂಚಲನೆ ಸೃಷ್ಟಿಸಿದ್ದು, ಭಾರಿ ನೀರಾವರಿ ಸಚಿವರಾಗಿ ಉತ್ತರ ಕರ್ನಾಟಕದಲ್ಲಿ ನೀರಾವರಿ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದು ಇವೆಲ್ಲ ಈ ನಿಟ್ಟಿನಲ್ಲಿ ಒಂದಷ್ಟು ಉದಾಹರಣೆಗಳು.
ಕರ್ನಾಟಕ ವಿಧಾನಸಭೆಯಲ್ಲಿ ೨ ಬಾರಿ ವಿಪಕ್ಷ ನಾಯಕರಾಗಿದ್ದ ಅವರು, ಕೆಪಿಸಿಸಿ ಅಧ್ಯಕ್ಷರಾಗಿ ಕರ್ನಾಟಕದ ಚುನಾವಣೆಗಳಲ್ಲಿ ಪಕ್ಷಕ್ಕೆ ಭಾರಿ ಗೆಲುವನ್ನು ತಂದುಕೊಟ್ಟಿದ್ದಾರೆ. ನಂತರ ಹೈಕಮಾಂಡ್ ಅಪೇಕ್ಷೆಯಂತೆ ರಾಷ್ಟ್ರ ರಾಜಕೀಯಕ್ಕೆ ತೆರಳಿದ ಅವರು ಸಿಎಂ ಗಾದಿಯನ್ನೂ ಮೀರಿ ರಾಷ್ಟ್ರೀಯ ನಾಯಕರಾಗಿ ಬೆಳೆದುಬಿಟ್ಟರು. ಪಕ್ಷ ಹಾಕಿದ ಲಕ್ಷ್ಮಣರೇಖೆಯನ್ನು ಅಕ್ಷರಶಃ ಪಾಲಿಸಿ ಕಲಬುರಗಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದರು. ತಮ್ಮ ಗೆಲುವಿನ ಸರಣಿಯನ್ನು ಲೋಕಸಭೆಗೆ ವಿಸ್ತರಿಸಿ ೨೦೦೯ ಮತ್ತು ೨೦೧೪ ಹೀಗೆ ೨ ಬಾರಿ ಬಹುಮತದಿಂದ ಆಯ್ಕೆಯಾದರು.
ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದಲ್ಲಿ ಕಾರ್ಮಿಕ ಮತ್ತು ರೇಲ್ವೆಯಂಥ ದೊಡ್ಡ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದರು. ಮಹಾರಾಷ್ಟ್ರದ ಉಸ್ತುವಾರಿಯಾಗಿ ಅಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದ ಖರ್ಗೆ, ಲೋಕಸಭೆಯಲ್ಲಿ ವಿಪಕ್ಷ ನಾಯಕರಾಗಿಯೂ ಹೊಣೆ ನಿರ್ವಹಿಸಿದ್ದಾರೆ. ೨೦೧೮ರ ಲೋಕಸಭಾ ಚುನಾವಣೆಯಲ್ಲಿ ಖರ್ಗೆಯವರಿಗೆ ಒದಗಿದ ಸೋಲನ್ನುಉಪೇಕ್ಷಿಸಿ, ಅವರ ಅಪಾರ ಅನುಭವ, ಜ್ಞಾನ, ಜಾಣ್ಮೆಯನ್ನು ಪರಿಗಣಿಸಿದ ಹೈಕಮಾಂಡ್ ಕರ್ನಾಟಕದಿಂದ ಅವರನ್ನು ರಾಜ್ಯ ಸಭೆಗೆ ಆಯ್ಕೆಮಾಡಿಸಿ ವಿಪಕ್ಷ ನಾಯಕನ ಹೊಣೆ ಹೊರಿಸಿತು. ಜತೆಗೇ ಒಲಿದುಬಂತು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷಗಿರಿ.
ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಪಕ್ಷದ ಹಿರಿಯ ನಾಯಕರ ಪ್ರೀತಿ-ವಿಶ್ವಾಸ ಗಳಿಸಿರುವ ಖರ್ಗೆ, ತಮಗೆ ತೀವ್ರಸ್ಪರ್ಧೆ ಯೊಡ್ಡಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ಬರಹಗಾರ, ಕಾಂಗ್ರೆಸ್ ನಾಯಕ ಶಶಿ ತರೂರ್‌ರನ್ನು ಬಹುಮತದಿಂದ ಸೋಲಿಸಿ ಈ ಹುದ್ದೆಗೆ ಆಯ್ಕೆಯಾಗಿದ್ದು. ಗಮನಿಸಬೇಕು, ಇವೆಲ್ಲ ಸುಲಭವಲ್ಲ.
ಇವಿಷ್ಟೂ ಸಾಲುಗಳ ತಾತ್ಪರ್ಯವಿಷ್ಟೇ:ಖರ್ಗೆಯವರ ರಾಜಕೀಯ ಕೌಶಲಗಳು ಅಷ್ಟು ಸಮರ್ಥವಾದಂಥವು. ಅವರ ಸಮರ್ಥ ಅಧ್ಯಕ್ಷಗಿರಿಯಲ್ಲಿ ಪಕ್ಷವು ಹಿಮಾಚಲ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳನ್ನು ಗೆದ್ದಿದೆ. ಅವರ ನಾಯಕತ್ವದಲ್ಲಿ ಪಕ್ಷಕ್ಕೆ ಹೊಸ ಉಮೇದು, ಉತ್ಸಾಹ ಮತ್ತು ಆತ್ಮವಿಶ್ವಾಸ ಬಂದಿರುವುದು ದಿಟ. ಪಕ್ಷದ ಲಕ್ಷ್ಮಣರೇಖೆಯನ್ನು ದಾಟದ ಖರ್ಗೆ ಅಪಾರ ಸಂಯಮದ, ಸಂತುಲನದ ವ್ಯಕ್ತಿ. ಅವರ ರಾಜಕೀಯ ಘರ್ಷಣಾತ್ಮಕವಾದುದಲ್ಲ, ಸಹಮತದ್ದು, ಹೊಂದಾಣಿಕೆಯದ್ದು. ವೈಯಕ್ತಿಕ ನಿಂದನೆಗಳಲ್ಲಿ, ಬಂಡಾಯವೇಳು ವುದರಲ್ಲಿ ಅವರಿಗೆ ನಂಬಿಕೆಯಿಲ್ಲ.
ದಾಖಲೆಯಿಲ್ಲದೆ, ಆಧಾರವಿಲ್ಲದೆ, ಅನವಶ್ಯಕವಾಗಿ ಅತಿಯಾಗಿ ಮಾತಾಡುವವರಲ್ಲ. ೫೦ ವರ್ಷಗಳಿಂದ ರಾಜಕೀಯದಲ್ಲಿದ್ದರೂ ಅವರ ಮೇಲೆ ಭ್ರಷ್ಟಾಚಾರದ ಆರೋಪಗಳಿಲ್ಲ, ಕಳಂಕಗಳಿಲ್ಲ ಅಥವಾ ವೈಯಕ್ತಿಕ ಬದುಕಿಗೆ ಸಂಬಂಧಿಸಿದ ಆಪಾದನೆಗಳಿಲ್ಲ.ಗಾಂಭೀರ್ಯದ ಗಣಿಯಾಗಿದ್ದರೂ ಹಾಸ್ಯಮಿಶ್ರಿತ ಮಾತುಗಳಿಗೆ ಅವರಲ್ಲಿ ಕೊರತೆಯಿಲ್ಲ. ‘ಆರ್ ಆರ್ ಆರ್’ ಚಿತ್ರದ ‘ನಾಟು ನಾಟು’ ಹಾಡಿಗೆ ಆಸ್ಕರ್ ಪುರಸ್ಕಾರ ದಕ್ಕಿದಾಗ ರಾಜ್ಯಸಭೆಯಲ್ಲಿ ಅಭಿನಂದನಾ ಭಾಷಣಕ್ಕೆ ಎದ್ದು ನಿಂತ ಖರ್ಗೆ, ‘ಹಾಡಿಗೆ ಆಸ್ಕರ್ ದಕ್ಕಿದ್ದಕ್ಕೆ ನಾವು ತುಂಬಾ ಹೆಮ್ಮೆಪಡುತ್ತೇವೆ. ಆದರೆ ನನ್ನ ಏಕೈಕ ವಿನಂತಿಯೆಂದರೆ, ಈ ಕ್ರೆಡಿಟ್ ಅನ್ನು ಬಿಜೆಪಿ ಮೋದಿಯವರಿಗೆನೀಡಬಾರದು’ ಎಂದು ಚಟಾಕಿ ಹಾರಿಸಿ, ‘ಹಾಡನ್ನು ನಾವು ಬರೆದಿದ್ದೇವೆ, ನಿರ್ದೇಶಿಸಿದ್ದೇವೆ ಅಥವಾ ಮೋದಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ ಎಂದು ಆಡಳಿತ ಪಕ್ಷ ಕ್ರೆಡಿಟ್ ತೆಗೆದುಕೊಳ್ಳಬಾರದು’ ಎಂದಾಗ ಆಡಳಿತ ಪಕ್ಷದವರೂ ಮನದುಂಬಿ ನಕ್ಕಿದ್ದಿದೆ.
ಹಾಗೆಯೇ ಖರ್ಗೆಯವರ ಭಾಷಣಗಳಲ್ಲಿ ಶಾಯರಿ, ಗಜಲ್ ತುಣುಕುಗಳೂ ಇಣುಕುತ್ತವೆ ಎಂಬುದು ಗಮನಾರ್ಹ. ಅಭಿವೃದ್ಧಿ ರಾಜಕೀಯ ಅವರ ವ್ಯಕ್ತಿತ್ವದ ಇನ್ನೊಂದು ಗುಣ. ಖರ್ಗೆ ಪ್ರತಿನಿಧಿಸಿದ ಗುರುಮಿಟ್ಕಲ್ ವಿಧಾನಸಭಾ ಕ್ಷೇತ್ರ ಹೇಗೆ ಸರ್ವತೋ ಮುಖ ಪ್ರಗತಿ ಸಾಧಿಸಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗೆಯೇ, ಬಿಸಿಲಿನಲ್ಲಿ ಬಳಲಿ ಬೆಂಡಾಗಿದ್ದ ಕಲಬುರಗಿಗೆ ಇಂದಿನ ಆಧುನಿಕ ರೂಪ ಕೊಟ್ಟಿದ್ದೂ ಅವರೇ. ಕಲಬುರಗಿಯಲ್ಲೀಗ ಉತ್ತಮ ನೀರಿನ ವ್ಯವಸ್ಥೆಯಿದೆ, ವಿಮಾನ ನಿಲ್ದಾಣ ಮೈದಳೆದಿದೆ. ರಾಷ್ಟ್ರೀಯ ಮಹತ್ವದ ಬೃಹತ್ ಬಂಡವಾಳ ಯೋಜನೆಗಳು ಬಂದಿವೆ, ಹೈದರಾಬಾದ್‌ನಂಥ ನಗರಗಳಿಗೆ ಸಂಪರ್ಕ ಕಲ್ಪಿಸಿರುವಅತ್ಯುತ್ತಮ ರಸ್ತೆ, ರಿಂಗ್-ರೋಡ್ ಬಂದಿವೆ. ಕೇಂದ್ರೀಯ ವಿಶ್ವವಿದ್ಯಾಲಯವನ್ನು ಇಲ್ಲಿಗೆ ತಂದಿರುವ ಖರ್ಗೆಯವರು ನಗರದ ಹೊರವಲಯದಲ್ಲಿ ಸ್ಥಾಪಿಸಿರುವ ಬುದ್ಧವಿಹಾರ ಇಂದು ಪ್ರಮುಖ ಪ್ರವಾಸಿ ತಾಣವಾಗಿದೆ.
ಹೀಗೆ, ಸಂಕಷ್ಟಗಳೇ ತುಂಬಿದ್ದ ಹಳೆಯ ಗುಲ್ಬರ್ಗಾದ ನೆನಪನ್ನು ಅಳಿಸಿಹಾಕಿರುವ ಇಂದಿನ ಕಲಬುರಗಿ ರಾಜ್ಯದ ಪ್ರಮುಖವಾಣಿಜ್ಯ ನಗರಗಳಲ್ಲೊಂದು ಎನಿಸಿಕೊಂಡಿದೆ. ಇಷ್ಟೆಲ್ಲ ಅನುಪಮ ಸಾಧನೆ ಮಾಡಿರುವ ಖರ್ಗೆ ಯವರಿಗೆ ಈಗ ಕಾಂಗ್ರೆಸ್ ಪಕ್ಷವನ್ನು ‘ಇಂಡಿಯ’ ಮಹಾ ಮೈತ್ರಿಕೂಟದ ಕೇಂದ್ರವಾಗಿಸುವ ಹೊಸ ಜವಾಬ್ದಾರಿ ಒದಗಿದೆ. ಹಾಗೆ ನೋಡಿದರೆ ಅದರ ಸಂಚಾಲಕರಾಗಲು ಅವರೇ ಸೂಕ್ತವ್ಯಕ್ತಿ. ಜತೆಜತೆಗೆ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ದೇಶದೆಲ್ಲೆಡೆ ಎದ್ದು ನಿಲ್ಲಿಸಬಲ್ಲ ಸಾಮರ್ಥ್ಯ, ಸರ್ವಾನುಮತ ರೂಪಿಸುವ ಶಕ್ತಿಯೂ ಅವರಿಗಿದೆ. ಮಹಾಮೈತ್ರಿಕೂಟದ ನಾಯಕರಾಗಿ ಒಂದೊಮ್ಮೆ ಆಯ್ಕೆ ಯಾದಲ್ಲಿ, ಪ್ರಧಾನಿ ಹುದ್ದೆಗೆ ಅಭ್ಯರ್ಥಿಯಾಗಿಯೂ ಖರ್ಗೆಯವರು ಆಯ್ಕೆಯಾದಲ್ಲಿ ಅಚ್ಚರಿಯೇನೂ ಇಲ್ಲ. ಏಕೆಂದರೆ, ಅಪಾರ ರಾಜಕೀಯ ಅನುಭವವಿರುವ, ಸುಲಲಿತವಾಗಿ ಹಿಂದಿ ಮಾತಾಡಬಲ್ಲ, ರಾಷ್ಟ್ರೀಯ ರಾಜಕೀಯ ಬಲ್ಲ, ಎಲ್ಲರಿಗೂ ಒಪ್ಪಿಗೆಯಾ ಗಬಲ್ಲ ವ್ಯಕ್ತಿತ್ವ ಅವರದು.