ಕಮಲ ಕೆಸರಲ್ಲಿ ಅರಳಬೇಕು, ಹೊಲಸಲ್ಲಲ್ಲ ?
ಬುಲೆಟ್ ಪ್ರೂಫ್
ವಿನಯ್ ಖಾನ್
ದೇಶಾದ್ಯಂತದ ಬಿಜೆಪಿ ಸರಕಾರಗಳನ್ನು ನೋಡಿದರೆ, ಎಷ್ಟು ಜನ ಮಂತ್ರಿ, ಎಂಎಲ್‌ಎ, ಎಂಪಿಗಳು ಬಿಜೆಪಿಯವರೆನ್ನಿಸಿಕೊಳ್ಳುತ್ತಾರೆ? ಎಷ್ಟು ಜನರಿಗೆ ತ್ಯಾಗ, ಧ್ಯೇಯ, ದೇಶಭಕ್ತಿಗಳ ಬಗ್ಗೆ ಗೊತ್ತಿದೆ? ಎಂಬ ಪ್ರಶ್ನೆಗಳು ಮೂಡುತ್ತವೆ. ಈ ಪೈಕಿ ಎಷ್ಟು ಜನಕ್ಕೆ ಹಿಂದುತ್ವದ ಬಗ್ಗೆ ಗೊತ್ತಿದೆ? ಕೆಲವರಿಗಂತೂ ಹಿಂದುತ್ವವೆಂದರೆ, ಮುಸಲ್ಮಾನರನ್ನು ಬೈಯುವಿಕೆ, ಅಷ್ಟೇ!
ಡಾ.ಹೆಡಗೆವಾರ್‌ರವರು ೧೯೨೫ರ ದಸರಾ ಸಂದರ್ಭದಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿನ ಮೋಹಿತೆವಾಡ ದಲ್ಲಿ ಕೆಲ ಯುವಕರು ಮತ್ತು ಸ್ನೇಹಿತರನ್ನು ಸೇರಿಸಿ ಒಂದು ಸಂಘವನ್ನು ಕಟ್ಟುತ್ತಾರೆ. ಹಾಗೇ ಕೆಲ ವರ್ಷದಲ್ಲಿ ಬೆಳೆಯುತ್ತಾ ಬೆಳೆಯುತ್ತಾ ಆ ಸಂಘಟನೆ ನಾಗಪುರದ ಹೊರಗೂ ವಿಸ್ತರಿಸಿ ಯುವಕರನ್ನು, ದೇಶಭಕ್ತ ರನ್ನು ಸೆಳೆಯಲು ಶುರುಮಾಡುತ್ತದೆ. ದಿನಗಳು ಕಳೆದಂತೆಲ್ಲ ಸಂಘ ಬೆಳೆಯುತ್ತಾ ದೇಶಾದ್ಯಂತ ತನ್ನ ಶಾಖೆಗಳನ್ನು ಪ್ರಚುರ ಪಡಿಸುತ್ತದೆ. ಕೆಲ ವರ್ಷಗಳ ನಂತರ, ‘ಮಹಾತ್ಮಗಾಂಧಿಅವರ ಹತ್ಯೆಯ ಸಂಚುಗಾರ’ ಎಂದು ಬಿಂಬಿಸಿ ಸಂಘವನ್ನು ದೇಶಾದ್ಯಂತ ನಿಷೇಧಿಸಲಾಗುತ್ತದೆ. ಮತ್ತೆ ಕೆಲ ವರ್ಷಗಳ ನಂತರ ನಿಷೇಧವನ್ನು ಹಿಂಪಡೆಯಲಾಗುತ್ತದೆ. ಆಮೇಲೆ ಆ ಸಂಘಟನೆಯ ಕೆಲ ಸದಸ್ಯರನ್ನು ಜನಸಂಘದ ಮೂಲಕ ರಾಜಕೀಯಕ್ಕೂ ಸೇರಿಸುತ್ತಾರೆ. ಕೆಲವೇ ರಾಜಕಾರಣಿಗಳಿಂದ ಜನಸಂಘ ಮುನ್ನೆಲೆಗೆ ಬರುತ್ತದೆ.
ಜನಸಂಘದಿಂದ ಕೆಲವರು ಭಾರತೀಯ ಜನತಾ ಪಕ್ಷವನ್ನು ಕಟ್ಟುತ್ತಾರೆ. ಆ ಪಕ್ಷ ಆಗಿನ ಕಾಲದ ಅತ್ಯಂತ ಮಡಿವಂತ ಪಕ್ಷವಾಗಿ, ಬರೀ ಸಿದ್ಧಾಂತವನ್ನೇ ತನ್ನ ರಾಜಕೀಯ ಅಜೆಂಡಾ ಮಾಡಿಕೊಂಡು ಆಡಳಿತಕ್ಕೂ ಬರುತ್ತದೆ. ಆಗಿನ ಕಾಲದಲ್ಲಿ ನಿಸ್ವಾರ್ಥ ರಾಜಕಾರಣ, ಸೇವಾ ಮನೋಭಾವ, ಸೈದ್ಧಾಂತಿಕ ನೆಲೆಗಟ್ಟು, ಹಿಂದುತ್ವ, ರಾಷ್ಟ್ರಪ್ರೇಮ, ಹೋರಾಟ, ದೇಶ ಮೊದಲು ಎಂಬ ಧ್ಯೇಯ ಇವೆಲ್ಲ ಬಿಜೆಪಿಯ ಆಸ್ತಿ ಆಗಿದ್ದವು. ಕೆಲ ವರ್ಷಗಳ ಹಿಂದಿನ ಎಲ್ಲ ಬಿಜೆಪಿ ನಾಯಕರೂ ಧ್ಯೇಯನಿಷ್ಠ ರಾಗಿದ್ದುಕೊಂಡೇ ಕೆಲಸಮಾಡಿದ್ದರು. ಆಗಿನ ಕಾಲದ ಬಿಜೆಪಿಯಲ್ಲಿ ದುಡ್ಡು, ಅಧಿಕಾರ ಕಡಿಮೆಯಿದ್ದರೂ ಸಂಘಟಕರ, ಧ್ಯೇಯನಿಷ್ಠರ ಕೊರತೆಯಿ ರಲಿಲ್ಲ!
ಆಗ ಯಡಿಯೂರಪ್ಪ, ಅನಂತ ಕುಮಾರ್‌ರಂಥ ನಾಯಕರು ಸೈಕಲ್ ತುಳಿದು ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಿದ್ದರು. ಜಗನ್ನಾಥ ರಾವ್ ಜೋಷಿಯವರ ಕಾಲಲ್ಲಿ ಚಪ್ಪಲಿಯೇ ಇರಲಿಲ್ಲ ಅಂತ ಬೇರೆ ಪಕ್ಷದವರೂ ಹೇಳುತ್ತಾರೆ. ಮಾ ಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಒಂದು ಹೊತ್ತಿಗೆ ೨ ಚಪಾತಿ ತಿಂದು, ಯಾವುದೋ ಹಳೇ ಕಾಲದ, ಮುರುಕಲು ಅಂಬಾಸಿಡರ್ ಕಾರಲ್ಲಿ, ಯಾರೋ ಕಾರ್ಯಕರ್ತರು ಹಾಕಿಸಿದ ಡೀಸಲ್ ನಲ್ಲಿ ಊರೂರು ಸುತ್ತಾಡಿಕೊಂಡು, ಯಾವುದೋ ಕಾರ್ಯಕರ್ತರ ಮನೆಯಲ್ಲಿ ಊಟ ಮಾಡಿ, ಇನ್ನೊಂದು ಹೊತ್ತಿಗೆ ಅವರ ಮನೆಯಲ್ಲೇ ಒಂದೆರಡು ಚಪಾತಿಯನ್ನು ತೆಗೆದುಕೊಂಡು ಬುತ್ತಿಮಾಡಿ, ಕೆಲವೊಮ್ಮೆ ಯಾವುದೋ ದೇವಸ್ಥಾನದ ಜಗುಲಿಯ ಮೇಲೆ ಮಲಗಿ ಪಕ್ಷ ಸಂಘಟನೆ ಮಾಡಿದ್ದರು.
ಬಿಜೆಪಿ ನಡೆದು ಬಂದ ಹಾದಿಯೇ ಬರೀ ಮುಳ್ಳು, ಕಲ್ಲುಗಳಿಂದ ತುಂಬಿತ್ತು. ಆದರೆ, ಈಗ? ಪ್ರತಿವರ್ಷ ನೂರಾರು ಕೋಟಿ ರು. ದೇಣಿಗೆ ಪಡೆದು, ವಿಶ್ವದ ಅತಿದೊಡ್ಡ ರಾಜಕೀಯ ಸಂಘಟನೆ ಯಾಗಿ ಬೆಳೆದು ನಿಂತಿದೆ. ವಿಶ್ವದ ಯಾವುದೇ ಕಾರ್ಪೊರೇಟ್ ಕಂಪನಿಗೂ ಕಡಿಮೆಯಿಲ್ಲದೆ, ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತ ಮತ್ತು ಬೇರೆ ಬೇರೆ ಕೆಲಸಗಳಿಗೆ ದುಡಿಯುವ ನೌಕರರಿಗೂ ಕಡಿಮೆಯಿಲ್ಲದೆ ಭಾರತೀಯ ಜನತಾ ಪಕ್ಷ ಇಂದು ಭಾರಿ ಲಾಭ ಮತ್ತು ಶಕ್ತಿ ಹೊಂದಿದೆ. ಕೇಂದ್ರದಿಂದಹಿಡಿದು ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ಸ್ವಂತ ಅಧಿಕಾರ, ೫ಕ್ಕೂ ಹೆಚ್ಚು ರಾಜ್ಯಗಳಲ್ಲಿ ಮೈತ್ರಿ ಸರಕಾರ, ನೂರಾರು ಎಂಎಲ್‌ಎ, ಎಂಪಿಗಳು ಇದ್ದೂ ಬಿಜೆಪಿಯ ಧ್ಯೆಯ, ರಾಷ್ಟ್ರನಿಷ್ಠೆ ಎಷ್ಟು ಪಕ್ವವಾಗಿದೆ? ದೇಶಾದ್ಯಂತದ ಬಿಜೆಪಿ ಸರಕಾರಗಳನ್ನು ನೋಡಿದರೆ, ಎಷ್ಟು ಜನ ಮಂತ್ರಿ, ಎಂಎಲ್‌ಎ, ಎಂಪಿಗಳು ಬಿಜೆಪಿಯವರೆನ್ನಿಸಿ ಕೊಳ್ಳುತ್ತಾರೆ? ಎಷ್ಟು ಜನಕ್ಕೆ ಹಿಂದುತ್ವದ ಬಗ್ಗೆ ಗೊತ್ತಿದೆ? ಎನಿಸುತ್ತದೆ.
ಕೆಲವರಿಗಂತೂ ಹಿಂದುತ್ವವೆಂದರೆ, ಮುಸಲ್ಮಾನರನ್ನು ಬೈಯುವಿಕೆ, ಅಷ್ಟೇ! ಎಷ್ಟು ಜನಕ್ಕೆ ಆರೆಸ್ಸೆಸ್ ಬಗ್ಗೆ ಗೊತ್ತಿದೆ? ಕೆಲವರಂತೂ ಆರೆಸ್ಸೆಸ್ ಅನ್ನು ‘ಚಡ್ಡಿ’ ಕಾಲದಲ್ಲೇ ನೋಡಿದವರು. ಈಗ ಆ ಚಡ್ಡಿ ಹೋಗಿ ಪ್ಯಾಂಟ್ ಬಂದಿದ್ದೂ ಆಗಿದೆ. ಆದರೆ ಎಷ್ಟು ಜನರಿಗೆ ತ್ಯಾಗ, ಧ್ಯೇಯ, ದೇಶಭಕ್ತಿಗಳ ಬಗ್ಗೆ ಗೊತ್ತಿದೆ? (ಏಕೆಂದರೆ, ಬಿಜೆಪಿ ಚುನಾವಣೆ ನಡೆಯುವುದು ತ್ಯಾಗ, ದೇಶಭಕ್ತಿಯ ಹೆಸರಲ್ಲಿಯೇ ತಾನೆ?), ಎಷ್ಟು ಜನರಿಗೆ ಕಾರ್ಯಕರ್ತರ ಪರಿಚಯ ಇದೆ ಅಥವಾ ಇತ್ತು? ಇಂದಿನ ಎಷ್ಟುಜನ ‘ನಾಯಕರಿಗೆ’ ಬಿಜೆಪಿಯನ್ನು ಕಟ್ಟಿದ ನಾಯಕರ ಬಗ್ಗೆ ಗೊತ್ತು? ಕಳೆದ ಬಾರಿಯ ರಾಜ್ಯ ಬಿಜೆಪಿ ಸರಕಾರದ ಹಣೆಬರಹವನ್ನೇ ನೋಡಿ, ಎಲ್ಲಿಂದಲೋಬಂದವರು ಎಮ್ಮೆಲ್ಲೆ, ಮಿನಿಷ್ಟ್ರು; ಅವರು ಬಿಜೆಪಿ ಒಳಹೊಕ್ಕು ೪ ವರ್ಷಕ್ಕೂ ಮೇಲಾದರೂ, ಎಷ್ಟು ಜನ ಬಿಜೆಪಿ ಸಿದ್ಧಾಂತವನ್ನು ಒಪ್ಪಿಕೊಂಡರು? ಹೋಗಲಿ ಆಗಿನ ಮುಖ್ಯಮಂತ್ರಿ ಆದರೂ ಬಿಜೆಪಿ ಸಿದ್ಧಾಂತವನ್ನು ಒಪ್ಪಿಕೊಂಡಿದ್ದರೇ? ಇನ್ನು ಪಕ್ಷದ ನಾಯಕರ ಹೆಸರನ್ನು ತೊದಲಿಸಿ ನುಡಿಯುವವರ ಯಾವ ಗುಣ-ಸಾಮರ್ಥ್ಯ ನೋಡಿ ಸರಕಾರದಲ್ಲಿ ಸ್ಥಾನಮಾನ ಕೊಡಲಾಯಿತು? ಇವರ ಇಬ್ಬಂದಿ ತನಕ್ಕೆ, ಪ್ರಪಂಚದ ಅತಿದೊಡ್ಡ ರಾಜಕೀಯ ಪಕ್ಷ ದಲ್ಲಿ ಒಬ್ಬನೇ ಒಬ್ಬ ವಿರೋಧ ಪಕ್ಷದ ನಾಯಕನನ್ನು ಹುಡುಕಲು ತಿಂಗಳುಗಳು ಕಳೆದರೂ ಆಗುತ್ತಿಲ್ಲ!
ಸರಿ, ಈ ಸ್ಥಿತಿ ಬರೀ ಕರ್ನಾಟಕದ್ದಷ್ಟೇ ಎಂದಾಗಿದ್ದರೆ ಇಲ್ಲಿನ ನಾಯಕರ ಸಮಸ್ಯೆ ಆಗುತ್ತಿತ್ತು. ಆದರೆ, ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿಯವರ ಕೆಲಸ ಇದೇ ಆಗಿದೆ ಅಲ್ಲವೇ! ಬೇರೆ ಪಕ್ಷದ ನಾಯಕರನ್ನು, ಎಂಎಲ್‌ಎಗಳನ್ನು ಹೆದರಿಸಿ, ಬೆದರಿಸಿ, ಅಧಿಕಾರದಾಸೆಗೆ ಅವರನ್ನು ಕೊಂಡು, ಪಕ್ಷಕ್ಕೆ ಸೇರಿಸಿಕೊಂಡು, ಒಂದು ಕಂತಿನ ಅಧಿಕಾರವನ್ನಂತೂ ಅನುಭವಿಸುತ್ತಿದ್ದಾರೆ. ಅದರ ಮುಂದಿನ ಚುನಾವಣೆಯ ಗೆಲುವೂ ಖಾತ್ರಿಯಿಲ್ಲ. ಇಷ್ಟಿದ್ದರೂ, ‘ಮೇಲೆ’ ಕುಳಿತವರ ಅಧಿಕಾರದ ದಾಹ ಇನ್ನೂ ಕಡಿಮೆಯಾಗಿಲ್ಲ. ಅದೆಷ್ಟು ಜನರನ್ನು ಇನ್ನೂ ‘ಅಬ್ಬೇಸ್’ ಮಾಡಿ ಅಽಕಾರಕ್ಕೇರುವ ಹಪಾಹಪಿ ಇದೇಯೋ, ಆ ಶ್ರೀರಾಮನೇ ಬಲ್ಲ!
ರಾಜಸ್ಥಾನದಿಂದ ಕಾಂಗ್ರೆಸ್‌ನ ಭವಿಷ್ಯದ ನಾಯಕ ಎಂದೇ ಗುರುತಿಸಿಕೊಂಡಿದ್ದ ಜ್ಯೋತಿರಾಧಿತ್ಯ ಸಿಂಧಿಯಾ, ಆಸ್ಸಾಂನಲ್ಲಿ ಕಾಂಗ್ರೆಸ್ ನಿಂದ ಉಪಮುಖ್ಯ ಮಂತ್ರಿ ಆಗಿದ್ದ ಹಿಮಂತ್ ಬಿಸ್ವಾ ಶರ್ಮಾ, ರಾವ್ ಇಂದ್ರಜಿತ್ ಸಿಂಗ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನಾರಾಯಣ್ ರಾಣೆ, ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಶಂಕರ ಸಿಂಘ್ ವಘೇಲಾ, ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ವಿಜಯ್ ಬಹುಗುಣ, ಮಣಿಪುರ ಮುಖ್ಯಮಂತ್ರಿ ಎನ್. ಬೀರೇನ್ ಸಿಂಗ್.. ಪಟ್ಟಿ ಮಾಡುತ್ತ ಹೋದರೆ, ಬೆಳೆಯುತ್ತಲೇ ಹೋಗುತ್ತೆ. ಇವರ‍್ಯಾರೂ ಸಣ್ಣ ಮಟ್ಟದ ನಾಯಕ, ಕಾರ್ಯಕರ್ತರಲ್ಲ. ಮುಖ್ಯಮಂತ್ರಿ, ಕೇಂದ್ರ ಮಂತ್ರಿ ಸ್ಥಾನದಲ್ಲಿದ್ದವರು.ಇನ್ನು ಶಾಸಕ, ಶಾಸಕ ಸ್ಥಾನದ ಆಕಾಂಕ್ಷಿಗಳನ್ನು ಎತ್ತಂಗಡಿ ಮಾಡಿದ್ದರ ಪಟ್ಟಿಯಂತೂ ಇದಕ್ಕಿಂತ ದೊಡ್ಡದಿದೆ.
೨೦೨೧ರ ವರದಿಗಳ ಪ್ರಕಾರ, ಇಂದಿನ ಬಿಜೆಪಿಯಲ್ಲಿರುವ ಶೇ.೪೪ ಶಾಸಕರು ಅಧಿಕಾರ ದಾಹಕ್ಕೋಸ್ಕರ ಬೇರೆ ಪಕ್ಷದಿಂದ ಬಿಜೆಪಿಗೆ ವಲಸೆ ಬಂದವರು. ಅದೂ ೨೦೧೪ರಿಂದಷ್ಟೇ! ಇನ್ನು, ಕರ್ನಾಟಕದಲ್ಲಿಯೂ ೨೦೧೯ರ ಸಮಯದಲ್ಲಿ ಬಿಜೆಪಿಗೆ ಸೇರಿದ ‘ಬಾಂಬೆ ಬಾಯ್ಸ್’ ಬಗ್ಗೆ ಹೇಳುವುದಕ್ಕೆ ಬೇರೆ ಮಾತಂತೂ ಇಲ್ಲ. ಆದಿನಗಳಲ್ಲಿ ರಾಜ್ಯಾದ್ಯಂತ ಆದ ನಾಟಕ, ರಾಜಕೀಯ ಬೆಳವಣಿಗೆ, ನಾಯಕರ ಕಿತ್ತಾಟ, ಹೊಡೆದಾಟ, ಡಿ.ಕೆ. ಶಿವಕುಮಾರ್ ಅವರು ಮುಂಬೈನ ರೋಡಲ್ಲಿ ಕೂತು ಇಡ್ಲಿ ತಿಂದ ಬಗೆ ಇತ್ಯಾದಿಗಳು ಕರ್ನಾಟಕವನ್ನು ಕರ್‘ನಾಟಕ’ ಮಾಡಿದ್ದವು. ಈಗ ಮತ್ತೆ ಆಪರೇಷನ್ ಬಗ್ಗೆ, ಅದರಲ್ಲೂ ಸಿದ್ದರಾಮಯ್ಯನವರ ಸುಭದ್ರ ಸರಕಾರ ವನ್ನು ಬೀಳಿಸುವ ಬಗೆಗಿನ ಮಾತುಗಳು, ಸಿಂಗಾಪುರದಲ್ಲಿ ಕೂತ ನಾಟಕದ ಸೂತ್ರಧಾರನ ಬಗೆಗಿನ ಮಾತುಗಳು, ಕರ್ನಾಟಕದಲ್ಲೂ ಅಜಿತ್ ಪವಾರ್‌ರನ್ನು ಹುಟ್ಟಿಸುವ ಗುಸುಗುಸುಗಳು ಜೋರಾಗಿಯೇ ಬೀಸುತ್ತಿವೆ.
ಈ ಸರಕಾರ ಬಂದು ೨ ತಿಂಗಳೂ ಆಗಿಲ್ಲ, ಆಗಲೇ ಬಿಜೆಪಿಯವರು ಸರಕಾರ ಪತನ ಮಾಡಲು ಕೈ ಹಾಕುತ್ತಿದ್ದಾರೆ. ಬಿಜೆಪಿಯೇತರ ಸರಕಾರ ಕಂಡರೆ, ಕೇಂದ್ರ ಬಿಜೆಪಿಗರಿಗೆ ಕಣ್ಣು ಕೆಂಪಾಗುವುದೇಕೆ? ಜನರ ವಿಶ್ವಾಸವನ್ನು ಗಳಿಸಿ, ಮ್ಯಾಜಿಕ್ ನಂಬರ್‌ಗಿಂತಲೂ ಹೆಚ್ಚು ಸೀಟನ್ನು ಪಡೆದ ಪಕ್ಷಗಳ ಮೇಲೂ ಇವರ ಜಂಬೂಸವಾರಿ ಏಕೆ? ಸರಿ ಒಪ್ಪೋಣ, ಬೇರೆ ಪಕ್ಷದವರು ಭ್ರಷ್ಟಾಚಾರ ಮಾಡುತ್ತಾರೆಂಬ ಮಾತಿದೆ. ಆದರೆ, ಬಿಜೆಪಿಯವರೇನು ಸಾಚಾಗಳೇ? ಕರ್ನಾಟಕದಲ್ಲಿಕಾಂಗ್ರೆಸ್‌ನವರು, ಬಿಜೆಪಿ ಮೇಲೆ ಒಂದು ಲಕ್ಷ ಐವತ್ತು ಸಾವಿರ ಕೋಟಿಗೂ ಅಽಕ ಮೊತ್ತದ ಭ್ರಷ್ಟಾಚಾರದ ಆರೋಪದ ಸುರಿಮಳೆಗೈದಿದ್ದರು, ಬಿಜೆಪಿಯ ಯಾರೂ ಅದರ ವಿರುದ್ಧ ಮಾತನಾಡಲಿಲ್ಲ! ಆ ಸಮಯದಲ್ಲಿ ಅದರ ವಿರುದ್ಧ ಮಾತನಾಡುವ ನೈತಿಕತೆ ಯಾರಲ್ಲಿತ್ತು? ೪೦% ಭ್ರಷ್ಟಾಚಾರ, ಲಂಚದ ವಿಷಯವಾಗಿಯೂಕಾಂಗ್ರೆಸ್‌ನವರು ರಾಜ್ಯಾದ್ಯಂತ ಹೋರಾಟ ಮಾಡಿದರು, ಅದಕ್ಕೂ ಬಿಜೆಪಿಯವರಲ್ಲಿ ವಿರೋಧ ಮೂಡಿತಾ? ಊಹೂಂ. ಎಲ್ಲರೂ ಗಣಪತಿ ಪ್ರಸಾದದಂತೆ ತಿಂದು ತೇಗಿದವರೇ!
ಹೆಚ್ಚೂಕಡಿಮೆ ಬಿಜೆಪಿಯಲ್ಲಿರುವ ಅರ್ಧಕ್ಕೂ ಹೆಚ್ಚು ಮಂದಿ ಬೇರೆ ಪಕ್ಷದವರೇ! ಹಿರಿಯರು, ನಾಯಕರು ಎಂಬ ಹಣೆಪಟ್ಟಿಯಲ್ಲಿರುವವರು ಅಧಿಕಾರಕ್ಕಾಗಿ ತಮ್ಮ ಸಿದ್ಧಾಂತವನ್ನು ಬಿಟ್ಟು, ಬೇರೆ ಸಿದ್ಧಾಂತಿಗರ ಜತೆ ರಾಜಿ ಮಾಡಿಕೊಂಡು, ಸ್ನೇಹ ಬೆಳಸಿ, ಅದರಲ್ಲೇ ತಮ್ಮ ಬೇಳೆ ಬೇಯಿಸಿಕೊಂಡು, ಅಧಿಕಾರವನ್ನು ಅನುಭವಿಸಿ, ತೇಗಿ, ಸಿದ್ಧಾಂತಕ್ಕಾಗಿ, ಪಕ್ಷಕ್ಕಾಗಿ, ರಾಷ್ಟ್ರಹಿತಕ್ಕಾಗಿ ದುಡಿಯುವುದರ ಬಗ್ಗೆ ಕಾರ್ಯಕರ್ತರಿಗೆ ಭಾಷಣಗಳನ್ನು ಕೊಡುತ್ತಿದ್ದಾರೆ. ಹಾಗೆಯೇ, ಬೇರೆ ಪಕ್ಷದಿಂದ ನಾಯಕರನ್ನು ಹೆದರಿಸಿ, ಬೆದರಿಸಿ ಕರೆತಂದವರಿಗೆ ‘ಚಾಣಕ್ಯ’ ಎಂಬ ರುದೂ ಬೀಳುತ್ತಿದೆ. ಆದರೆ, ಆ ಚಾಣಕ್ಯನಿಗೆ ಸರಿಯಾದ ದಾರಿಯಲ್ಲಿ ನಡೆದು, ಪಕ್ಷವನ್ನುಬೆಳೆಸುವ, ಅಽಧಿಕಾರಕ್ಕೆ ತರುವ ಮಾರ್ಗಗಳು ಗೊತ್ತಿಲ್ಲವೇ? ಹಾಗೆಯೇ ಇಂದು ಬಿಜೆಪಿ ಅನುಸರಿಸುತ್ತಿರುವ ಹಾದಿಯನ್ನು ನಾಳೆ ಬೇರೆ ಪಕ್ಷದವರು ಮಾಡಿದರೆ, ಇವರು ಸುಮ್ಮನಿರುತ್ತಾರೆಯೇ? ಹಾಗೇ, ಬೇರೆ ಪಕ್ಷದಿಂದ ಜನರನ್ನು ಕರೆತಂದಿದ್ದಕ್ಕೆ ಚಾಣಕ್ಯ ಎನ್ನುವ ಹಾಗಿದ್ದರೆ, ಕಳ್ಳತನ ಮಾಡಿಕೊಂಡವನ್ನು ಶ್ರೀ/ಮಂತ ನೆಂದೋ, ಧಣಿ ಎಂದೋ ಹೇಳಿದಂತಾಗುವುದಿಲ್ಲವೇ?ಏನೇ ಹೇಳಿ, ಭಾರತದ ಬೇರೆ ಎಲ್ಲ ಪಕ್ಷಗಳಿಗಿಂತ ಬಿಜೆಪಿ ತನ್ನನ್ನು ಯಾವತ್ತೂ ಬೇರೆಯಾಗಿಯೇರೂಪಿಸಿಕೊಂಡಿದೆ.
ಅದಕ್ಕೆಂದೇ ಬಿಜೆಪಿಯನ್ನು ಶಿಸ್ತಿನ ಪಕ್ಷ,     ಎಂದೂ ಕರೆಯುತ್ತಾರೆ. ಭಾರತದ ಹೆಚ್ಚೂ ಕಡಿಮೆ ಎಲ್ಲ ಪಕ್ಷಗಳೂ ತಮ್ಮನ್ನು ತಾವು, ಡೆಮಾಕ್ರಟಿಕ್, ಸೆಕ್ಯುಲರ್ ಎಂದೇ ಬಿಂಬಿಸಿಕೊಳ್ಳುತ್ತವೆ. ಆದರೆ, ಬಿಜೆಪಿ ಯಾವಾಗಲೂ ಹಿಂದುತ್ವ, ರಾಷ್ಟ್ರೀಯವಾದಿ ಎಂಬ ಸಿದ್ಧಾಂತಗಳನ್ನು ತಲೆಮೇಲೆ ಹೊತ್ತುಕೂತಿದೆ. ಅಂಥ ಬೇರೆ ಸಿದ್ಧಾಂತಗಳ ಜನರನ್ನು ಪಕ್ಷಕ್ಕೆ ಸೇರಿಸಿಕೊಂಡು, ತಮ್ಮದೇ ಪಕ್ಷವನ್ನು ಮಲಿನ ಮಾಡುವ ದರ್ದು ಬಿಜೆಪಿಗೆ ಏಕಿದೆ? ಹೀಗೆಲ್ಲ ಮಾಡುತ್ತಾ ಹೋದರೆ, ತಮ್ಮ ಪಕ್ಷಕ್ಕೆ ತಾವೇ ಗೋರಿ ತೋಡಿದಂತೆ ಆಗುವುದಿಲ್ಲವೇ?