ಹಂಗಿಸಿದವರ ಮುಂದೆ ಸಾಧಿಸಿ ತೋರಿಸಿದ ನವೀನ್ ಪಟ್ನಾಯಕ್
ಅವಲೋಕನ
ವಿನಾಯಕ ಮಠಪತಿ
ಸ್ವಚ್ಛ ಹಾಗೂ ನಿಷ್ಪಕ್ಷಪಾತ ಆಡಳಿತಕ್ಕೆ ಯಾವತ್ತೂ ಗೌರವ ಇದ್ದೇ ಇರುತ್ತದೆ. ಅಧಿಕಾರದಲ್ಲಿರುವ ವ್ಯಕ್ತಿ ಮೊದಲಿಗೆ ತಾನು ಭ್ರಷ್ಟನಲ್ಲ ಎಂಬುದನ್ನು ಸಾಬೀತುಪಡಿಸಬೇಕು. ಜನರಿಗೆ ನಂಬಿಕೆ ಬಂದಾಗ ಮಾತ್ರವೇ ಆತನ ಆಡಳಿತ ವ್ಯವಸ್ಥೆಗೆ ಒಂದು ಗೌರವ. ನವೀನ್ ಪಟ್ನಾಯಕ್ ಅವರು ಕಳೆದ ೨೩ ವರ್ಷಗಳಿಂದ ಒಂದು ಸಣ್ಣ ಭ್ರಷ್ಟಾಚಾರದಆರೋಪವನ್ನೂ ಹೊತ್ತಿಲ್ಲ.
ಶಾಸಕನಾಗಿ ಆಯ್ಕೆಯಾದವ ತನ್ನ ಐದು ವರ್ಷದ ಅವಧಿ ಮುಗಿದ ನಂತರ ಕೆಲವೊಮ್ಮೆ ಬೇಡವಾಗುತ್ತಾನೆ. ಮುಖ್ಯ ಮಂತ್ರಿ ಯಾಗಿ ಹಗಲಿರುಳು ಶ್ರಮಿಸಿದರೂ ಮುಂದಿನ ಚುನಾವಣೆಯಲ್ಲಿ ಜನ ಕೆಲವೊಮ್ಮೆ ತಿರಸ್ಕರಿಸುತ್ತಾರೆ. ಎಷ್ಟೇ ಭಾಗ್ಯ ಕೊಟ್ಟರೂ ಜನತಾ ನ್ಯಾಯಾಲಯ ಕೆಲವೊಮ್ಮೆ ವ್ಯತಿರಿಕ್ತ ಆದೇಶ ಕೊಟ್ಟು ಮನೆಗೆ ಕಳುಹಿಸುತ್ತದೆ. ಇಂಥ ಕಾಲಘಟ್ಟದಲ್ಲಿ ಎರಡು ದಶಕಗಳ ಕಾಲ ರಾಜ್ಯದ ಚುಕ್ಕಾಣಿ ಹಿಡಿದು ಜನ ಬೇಸರಿಸದಂತೆ ಆಡಳಿತ ನಡೆಸುವುದು ಸಾಮಾನ್ಯ ಮಾತಲ್ಲ.
ಪ್ರತಿ ಪ್ರಯತ್ನವೂ ಮೊಸಳೆಯಿಂದ ತಪ್ಪಿಸಿಕೊಂಡು ಬದುಕುಳಿದ ಅನುಭವವೇ. ಹೌದು, ಇಷ್ಟೆಲ್ಲಾ ಪೀಠಿಕೆ ಹಾಕಲು ಕಾರಣ, ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಸುದೀರ್ಘ ರಾಜಕೀಯ ಬದುಕು. ೨೩ ವರ್ಷ ೧೪೩ ದಿನ ಮುಖ್ಯಮಂತ್ರಿಯಾಗಿ, ದೇಶದಲ್ಲೇ ಎರಡನೆಯ ಅತಿ ಹೆಚ್ಚು ಅವಧಿಯ ಸಿಎಂ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಇವರು ಸರಳ ವ್ಯಕ್ತಿತ್ವದ ಮೂಲಕ ಕಳೆದ ಎರಡು ದಶಕಗಳಿಂದ ಒಡಿಶಾ ಜನರ ನಾಡಿ ಮಿಡಿತದಂತೆ ಕಾರ್ಯ ನಿರ್ವಹಿಸುತ್ತಿರುವುದು ಸಾಮಾನ್ಯ ಸಂಗತಿಯಲ್ಲ.
ಅನಿರೀಕ್ಷಿತವಾಗಿ ರಾಜಕಾರಣಕ್ಕೆ ಬಂದು, ದೀರ್ಘಾವಧಿ ಅಧಿಕಾರದ ಚುಕ್ಕಾಣಿ ಹಿಡಿದು, ಯಶಸ್ವಿಯಾಗಿ ಮುನ್ನಡೆಯುವುದು ಭಾರತದಂಥ ದೇಶದಲ್ಲಿ ಇತಿಹಾಸವೇ ಹೌದು. ಜನರು ಅತ್ಯುತ್ಸಾಹದಿಂದ ಓರ್ವ ರಾಜಕಾರಣಿಯನ್ನು ಮೊದಲ ಬಾರಿಗೆ ಚುನಾ ವಣೆಯಲ್ಲಿ ಆಯ್ಕೆ ಮಾಡಿ ಕಳುಹಿಸಿದ ಹುಮ್ಮಸ್ಸನ್ನು ಎರಡನೇ ಬಾರಿಗೆ ತೋರಿಸುವು ದಿಲ್ಲ. ನೀರು ಹರಿದಂತೆ ಎಲ್ಲವೂ ಬದಲಾ ಗಿರುತ್ತದೆ. ಆ ಸಂದರ್ಭದಲ್ಲಿ ಹೊಸಬರ ಆಲೋಚನೆಗಳು ಕೆಲಸ ಮಾಡುತ್ತಿರುತ್ತವೆ. ಕೊಟ್ಟ ಮಾತು ಉಳಿಸಿಕೊಳ್ಳದ ಪರಿಸ್ಥಿತಿ ಆಯ್ಕೆಯಾದ ನಾಯಕನಿಗೂ ಬಂದಿರುತ್ತದೆ. ಆಗ ಸಾಮಾನ್ಯವಾಗಿ, ಜತೆಗಿದ್ದವರು ದೂರ ಹೋಗುವುದು ಸಹಜ.
 - 
ಸಕ್ಕರೆಗೆ ಇರುವೆ ಮುತ್ತಿಕೊಂಡಂತೆ ಅಧಿಕಾರದಲ್ಲಿದ್ದವರ ಜತೆಗೆ ಹಲವರು ಸುತ್ತುವರಿಯುವುದು ಸಾಮಾನ್ಯ. ಇಂಥ ಎಲ್ಲ ಅಡೆತಡೆ ದೂರಮಾಡಿ ಯಶಸ್ವಿಯಾಗಿ ದೀರ್ಘಾವಧಿ ಅಧಿಕಾರ ನಡೆಸುವುದು ಸಾಮಾನ್ಯ ಮಾತಲ್ಲ. ಆದರೆ ನವೀನ್ ಪಟ್ನಾಯಕ್ ಎಂಬ ಸರಳ, ಸಜ್ಜನ ರಾಜಕಾರಣಿ ಅಸಾಧ್ಯವನ್ನು ಸಾಧಿಸಿ ತೋರಿಸಿದ್ದಾರೆ. ೧೯೯೭ರ ಕಾಲಘಟ್ಟ. ನವೀನ್ ಪಟ್ನಾಯಕ್ ಅವರ ತಂದೆ ಹಾಗೂ ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ನಿಧನರಾಗುತ್ತಾರೆ. ಇವರ ಸಾವಿನ ನಂತರ ತೆರವಾದಲೋಕಸಭಾ ಕ್ಷೇತ್ರಕ್ಕೆ ಅನಿರೀಕ್ಷಿತವಾಗಿ ಸ್ಪರ್ಧಿಸಿ ನವೀನ್ ಪಟ್ನಾಯಕ್ ರಾಜಕೀಯ ಪ್ರವೇಶಿಸುತ್ತಾರೆ. ಆದರೆ ೧೯೯೭ರ ಸಂದರ್ಭ ದಲ್ಲಿ ಎನ್‌ಡಿಎ ಭಾಗವಾಗಲು ಜನತಾದಳ ಒಪ್ಪದ ಕಾರಣ, ತಂದೆಯ ಹೆಸರಿನ ಬಿಜು ಸೇರಿಸಿ ‘ಬಿಜು ಜನತಾದಳ’ ಎಂಬ ಸ್ವಂತ ಪಕ್ಷ ಕಟ್ಟಿ ಚುನಾವಣೆಗೆ ಸ್ಪರ್ಧಿಸಿ ಲೋಕಸಭೆಗೆ ಮರು ಆಯ್ಕೆ ಯಾಗುತ್ತಾರೆ. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ನವೀನ್ ಪಟ್ನಾಯಕ್ ಸಚಿವಸ್ಥಾನ ಅಲಂಕರಿಸುತ್ತಾರೆ.
ಅನಿರೀಕ್ಷಿತವಾಗಿ ರಾಜ್ಯ ರಾಜಕೀಯ ಪ್ರವೇಶಿಸುವ ನವೀನ್ ಪಟ್ನಾಯಕ್ ೨೦೦೦ನೇ ಇಸವಿಯಲ್ಲಿ ಒಡಿಶಾ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಮೈತ್ರಿ ಕೂಟದ ಜತೆ ಸೇರಿಗೆಲುವು ಸಾಧಿಸುತ್ತಾರೆ. ಕಾಂಗ್ರೆಸ್ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಇವರು ಈವರೆಗೂ ಮತ್ತೊಬ್ಬರನ್ನು ಸಿಎಂ ಕುರ್ಚಿ ಹತ್ತಿರಕ್ಕೂ ಸುಳಿಯಲು ಬಿಟ್ಟಿಲ್ಲ. ೨೩ ವರ್ಷ ಗಳ ಸುದೀರ್ಘ ಅವಧಿಗೆ ಸಿಎಂ ಪಟ್ಟ ಅಲಂಕರಿಸಿ, ಇಂದಿಗೂ ಜನರಿಗೆ ಬೇಸರವಾಗದಂತೆ ಅಧಿಕಾರ ಮುನ್ನಡೆ ಸಿದ್ದು ಇವರ ದಕ್ಷ ಆಡಳಿತ ವೈಖರಿಗೆ ಹಿಡಿದ ಕೈಕನ್ನಡಿ.
ಭಾರತ ಯಾವತ್ತೂ ಹೊಸ ಪರಿಕಲ್ಪನೆಗಳಿಗೆ ಒಗ್ಗಿಕೊಂಡು ಸಾಗುವ ನೆಲ. ಇಲ್ಲಿ ತಲೆ ಮೇಲೆ ಹೊತ್ತು ಸಾಗಿಸುವ ಜನರೇ ಕೆಲ ವೊಮ್ಮೆ ಕಾಲ ಬುಡಕ್ಕೆ ಹಾಕುತ್ತಾರೆ. ಸಾಮಾನ್ಯನನ್ನು ಗೆಲ್ಲಿಸಿ, ನಂತರದಲ್ಲಿ ಆತ ಅಸಾಮಾನ್ಯ ವಾದ ಎಂದು ಗೊತ್ತಾಗು ತ್ತಿದ್ದಂತೆ ಸೋಲಿಸಿ ಮನೆಗೆ ಕಳುಹಿಸುವ ಚಾಣಾಕ್ಷ ಮನೋಭಾವ ನಮ್ಮ ಜನರಲ್ಲಿದೆ. ಇದೇ ಕಾರಣಕ್ಕೆ ದೇಶದ ಮಹಾನ್ ನಾಯಕಿಯಾಗಿದ್ದ ಇಂದಿರಾ ಗಾಂಧಿ ಸೋಲಿನ ಕಹಿಯನ್ನು ಅನುಭವಿಸಿದ್ದು. ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅಷ್ಟೇ ಏಕೆ, ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ರಾರಾಜಿಸಿದ ರಾಮಕೃಷ್ಣ ಹೆಗಡೆ, ಎಸ್. ಬಂಗಾರಪ್ಪ, ಬಿ.ಎಸ್. ಯಡಿಯೂರಪ್ಪ ಅಲ್ಲದೆ ಪ್ರಸ್ತುತ ಸಿಎಂ ಸ್ಥಾನದಲ್ಲಿರುವ ಸಿದ್ದರಾಮಯ್ಯ ಕೂಡಾ ಒಂದು ಹಂತದಲ್ಲಿ ಸೋಲಿನ ಕರಾಳ ಮುಖ ನೋಡಿದವರೇ.
ಭಾರತದ ರಾಜಕೀಯ ಇತಿಹಾಸದಲ್ಲಿ ೧೯೯೪ರಿಂದ ೨೦೧೯ರ ವರೆಗಿನ ದೀರ್ಘಾವಧಿ ಸಿಎಂ ಎಂಬ ದಾಖಲೆ ಹೊಂದಿದ್ದು ಸಿಕ್ಕಿಂನ ಮಾಜಿ ಮುಖ್ಯ ಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್. ಇವರು ಬರೋಬ್ಬರಿ ೨೪ ವರ್ಷ ೧೬೫ ದಿನಗಳವರೆಗೆ ಆಡಳಿತ ನಡೆಸಿ ದ್ದಾರೆ. ಆದರೆ ೨೦೧೯ರ ಚುನಾವಣೆ ಸೋಲಿನಿಂದ ಇವರ ಗೆಲುವಿನ ಓಟ ನಿಂತಿತ್ತು. ನಂತರದ ಎರಡನೇ ಸ್ಥಾನದಲ್ಲಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ೨೩ ವರ್ಷ ೧೩೭ ದಿನಗಳವರೆಗೆ ಸಿಎಂ ಆಗಿ ಆಡಳಿತ ನಡೆಸಿದ್ದರು. ಸದ್ಯ ಜ್ಯೋತಿ ಬಸು ಅವರ ದಾಖಲೆ ಸರಿಗಟ್ಟಿರುವ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅತ್ಯಂತ ದೀರ್ಘಾವಧಿ ಸಿಎಂ ಪಟ್ಟಿ ಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.
ನವೀನ್ ಪಟ್ನಾಯಕ್ ೧೬ ಅಕ್ಟೋಬರ್ ೧೯೪೬ರಲ್ಲಿ ಒಡಿಶಾದ ಕಟಕ್‌ನಲ್ಲಿ ಜನಿಸಿದರು. ಮೊದಲಿಗೆ ರಾಜಕಾರಣದಿಂದ ದೂರ ಇದ್ದ ನವೀನ್ ಪಟ್ನಾಯಕ್ ೫೦ನೇ ವಯಸ್ಸಿನ ವರೆಗೆ ರಾಜಕಿಯೇತರ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದರು. ಬಿಎ ಪದವಿ ಪಡೆದಿದ್ದ ಇವರು ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ಯಾವಾಗ ತಂದೆ ಬಿಜು ಪಟ್ನಾಯಕ್ ನಿಧನರಾದರೋ, ಆಗ ಅನಿವಾರ್ಯವಾಗಿ ರಾಜಕೀಯ ಜೀವನಕ್ಕೆ ನವೀನ್ ಕಾಲಿಡಬೇಕಾಗಿ ಬಂತು. ಆದರೆ, ಮೊದಲ ಬಾರಿಗೆ ಲೋಕ ಸಭಾ ಉಪ ಚುನಾವಣೆ ಸ್ಪರ್ಧಿಸಿ ಗೆದ್ದ ಇವರು ನಂತರದ ದಿನಗಳಲ್ಲಿ ತಿರುಗಿ ನೋಡುವ ಪ್ರಮೇಯ ಬರಲಿಲ್ಲ.
ಹಾಗಾದರೆ ನವೀನ್ ಪಟ್ನಾಯಕ್ ಇಷ್ಟೊಂದು ಆಳವಾಗಿ ಒಡಿಶಾ ಜನರ ಮನಸ್ಸು ಗೆಲ್ಲಲು ಏನು ಕಾರಣ? ಎಂಬ ಪ್ರಶ್ನೆ ಮೂಡ ಬಹುದು. ಸರಳ ವ್ಯಕ್ತಿತ್ವ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ಇವುಗಳನ್ನೇ ತಮ್ಮ ಮೂಲ ಧ್ಯೇಯವಾಗಿಸಿಕೊಂಡು ಅಧಿಕಾರ ನಡೆಸುತ್ತಿರುವ ಕಾರಣಕ್ಕೆ, ಜನ ಇವರನ್ನು ಮತ್ತೆ ಮತ್ತೆ ಸಿಎಂ ಹುದ್ದೆಗೆ ಆಯ್ಕೆಮಾಡುತ್ತಿದ್ದಾರೆ. ಇಷ್ಟು ಖ್ಯಾತಿಯಿರುವ ನವೀನ್ ಪಟ್ನಾಯಕ್ ಆರಂಭದ ದಿನಗಳಲ್ಲಿ ತಿರಸ್ಕಾರಕ್ಕೆ ಒಳಗಾದ ವರೇ. ತಂದೆ ೧೯೯೭ರಲ್ಲಿ ಮೃತಪಟ್ಟಾಗ ಅವರ ರಾಜಕೀಯ ವಿರೋಧಿಗಳು ಹಾಗೂ ತಂದೆಯ ಜತೆಗಾರರು ನವೀನ್ ಅವರನ್ನು ಅವಮಾನಿಸಿದ್ದರು, ಅನನುಭವಿ ಎಂದು ತಿರಸ್ಕಾರದ ಭಾವ ದಿಂದ ನೋಡಿದ್ದರು. ಈ ಎಲ್ಲಾ ಬೆಳವಣಿಗೆ ಗಳನ್ನು ಶಾಂತಚಿತ್ತರಾಗಿಯೇ ವೀಕ್ಷಿಸುತ್ತಿದ್ದ ನವೀನ್ ಪಟ್ನಾಯಕ್ ಸ್ವಂತಪಕ್ಷ ಕಟ್ಟಿ ಅಧಿಕಾರ ಹಿಡಿಯುವ ಮೂಲಕ ಪ್ರತ್ಯುತ್ತರ ನೀಡಿದರು.
ನವೀನ್ ಪಟ್ನಾಯಕ್ ಒಡಿಶಾ ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಅಲ್ಲಿ ಹೇರಳವಾಗಿ ದೊರೆಯುವ ಖನಿಜ ಸಂಪನ್ಮೂಲಗಳಿಂದ ಅಂತರಾಷ್ಟ್ರೀಯ ಮಟ್ಟದ ಹೂಡಿಕೆದಾರರನ್ನು ರಾಜ್ಯದತ್ತ ಸೆಳೆಯುತ್ತಿದ್ದಾರೆ. ಜತೆಗೆ ಬುಡಕಟ್ಟು ಜನರ ಅಭಿವೃದ್ಧಿ ದೃಷ್ಟಿಯಿಂದ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಸ್ವಚ್ಛ ಹಾಗೂ ನಿಷ್ಪಕ್ಷಪಾತ ಆಡಳಿತಕ್ಕೆ ಯಾವತ್ತೂ ಗೌರವ ಇದ್ದೇ ಇರುತ್ತದೆ. ಅದಿಕಾರದಲ್ಲಿರುವ ವ್ಯಕ್ತಿ ಮೊದಲಿಗೆ ತಾನು ಭ್ರಷ್ಟನಲ್ಲ ಎಂಬು ದನ್ನು ಸಾಬೀತುಪಡಿಸಬೇಕು. ಜನರಿಗೆ ನಂಬಿಕೆ ಬಂದಾಗ ಮಾತ್ರವೇ ಆತನ ಆಡಳಿತ ವ್ಯವಸ್ಥೆಗೆ ಒಂದು ಗೌರವ. ನವೀನ್ ಪಟ್ನಾ ಯಕ್ ಅವರು ಕಳೆದ ೨೩ ವರ್ಷ ಗಳಿಂದ ಒಂದು ಸಣ್ಣ ಭ್ರಷ್ಟಾಚಾರದ ಆರೋಪವನ್ನೂ ಹೊತ್ತಿಲ್ಲ. ಹಾಗೆಯೇ ಸಂಪುಟದ ಸದಸ್ಯ ರಿಂದ ಸಾಧ್ಯವಾದಷ್ಟು ಜನೋಪಯೋಗಿ ಕೆಲಸ ಮಾಡಿಸುವ ಇವರು ಶಾಸಕರನ್ನು ನಿಯಂತ್ರಣದಲ್ಲಿಟ್ಟು ಕೊಂಡು ಕಾರ್ಯ ನಿರ್ವಹಿಸುವ ರೀತಿ ಅದ್ಭುತ. ಒಬ್ಬ ಸರಳವಾದ ವ್ಯಕ್ತಿಯಿಂದ ಜನ ಹೇಗೆಲ್ಲ ಪ್ರಭಾವಿತರಾಗು ತ್ತಾರೆ ಎಂಬುದಕ್ಕೆ ಒಡಿಶಾ ರಾಜಕಾರಣವೇ ಸಾಕ್ಷಿ.
೧೯೯೯ರಲ್ಲಿ ಅಪ್ಪಳಿಸಿದ ಒಂದು ಚಂಡಮಾರುತ ನವೀನ್ ಪಟ್ನಾಯಕ್ ರಾಜಕೀಯ ದಿಕ್ಕನ್ನೇ ಬದಲಿಸಿತ್ತು. ಆ ಭೀಕರ ಚಂಡ ಮಾರುತಕ್ಕೆ ೧೦ ಸಾವಿರಕ್ಕೂ ಅಧಿಕ ಜನ ಬಲಿ ಯಾದರು. ಅದೇ ಸಂದರ್ಭದಲ್ಲಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷದ ಸಾಲು ಸಾಲು ವಿವಾದಗಳು ಮತ್ತು ಜನರಿಗೆ ಬದುಕು ಕಟ್ಟಿ ಕೊಡುವಲ್ಲಿ ವಿಫಲವಾದ ಸರಕಾರದ ವರ್ತನೆಯಿಂದ ಬೇಸತ್ತ ಜನ, ಹೊಸ ಭರವಸೆಯಾಗಿ ಕಾಣಿಸಿದ ನವೀನ್ ಪಟ್ನಾಯಕ್ ಅವರ ಬಿಜು ಜನತಾದಳವನ್ನು ಬಿಗಿದಪ್ಪಿಕೊಂಡರು.
ಹಾಗೆಯೇ, ಮುಖ್ಯಮಂತ್ರಿಯಾದ ಸಂದರ್ಭದಿಂದ ಈವರೆಗೂ ನವೀನ್ ತಮ್ಮ ಆಪ್ತರನ್ನು ಹಾಗೂ ಕುಟುಂಬದವರನ್ನು ಅಧಿಕಾರ ವಲಯದಿಂದ ದೂರವಿಟ್ಟ ಪರಿಣಾಮ ಅವರೆಡೆಗಿನ ಜನರ ನಂಬಿಕೆ ಮುಂದುವರಿಯಿತು ಎನ್ನಬೇಕು. ಪ್ರಸ್ತುತ ದಿನಮಾನಗಳಲ್ಲಿ ಒಬ್ಬ ರಾಜಕಾರಣಿ ನಿರಂತರವಾಗಿ ಗೆಲುವು ಸಾಧಿಸುವುದರ ಜತೆಗೆ ಪ್ರಭಾವಿ ಹುದ್ದೆಯನ್ನು ತನ್ನತ್ತ ಸೆಳೆದು ಕೊಂಡು ಅಧಿಕಾರ ನಡೆಸುವುದು ಸಾಮಾನ್ಯ ಕೆಲಸವಲ್ಲ.
ಹಿತಶತ್ರುಗಳನ್ನು ಸದೆಬಡಿದು ಜನರ ಆಶೋತ್ತರ ಪೂರೈಸುವ ಎದೆಗಾರಿಕೆ ಇಂಥವರಲ್ಲಿ ಇರಬೇಕಾಗುತ್ತದೆ. ಈ ಎಲ್ಲಾ ಕಾರಣ ಗಳಂದ ನವೀನ್ ಪಟ್ನಾಯಕ್‌ರಂಥ ರಾಜಕಾರಣಿಗಳು ವಿಭಿನ್ನರಾಗಿ ನಿಲ್ಲುತ್ತಾರೆ. ೭೬ರ ಹರೆಯದ ಅವರ ನೇತೃತ್ವದ ಬಿಜೆಡಿ ಮುಂಬರುವ ೨೦೨೪ರ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ದೇಶದಲ್ಲಿ ಸುಧೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿದ್ದವರು ಎಂಬ ಹೆಗ್ಗಳಿಗೆ ನವೀನ್ ಪಟ್ನಾಯಕ್ ಪಾತ್ರರಾಗುತ್ತಾರೆ.