ಇಂಗ್ಲಿಷ್ ಮಾಧ್ಯಮ ಶಾಲೆ 6ನೇ ’ಗ್ಯಾರಂಟಿ’ಯಾಗಲಿ
ವಿಚಾರ ವೇದಿಕೆ
ರಮಾನಂದ ಶರ್ಮಾ
ಇಂಗ್ಲಿಷ್ ವ್ಯಾಮೋಹ ಸಮೂಹಸನ್ನಿಯಂತೆ ವ್ಯಾಪಿಸುತ್ತಿದೆ. ಪಟ್ಟಣ-ನಗರಗಳಿಗಷ್ಟೇ ಸೀಮಿತವಾಗಿದ್ದ ಈ ಮೋಹ ವೀಗ ಹಳ್ಳಿಹಳ್ಳಿಗೂ ಹಬ್ಬುತ್ತಿದ್ದು, ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೇ ಸೇರಿಸಲು ಪಾಲಕರು ಧಾವಿಸು ತ್ತಿದ್ದಾರೆ. ಕನ್ನಡ ಮಾಧ್ಯಮದ ಮನೆಗೆ ಸನಿಹವಿದ್ದರೂ ಹತ್ತಿಪ್ಪತ್ತು ಕಿ.ಮೀ. ದೂರದಲ್ಲಿರುವ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೇ ಕಳಿಸುತ್ತಿದ್ದಾರೆ.
ಶಾಸಕ ಶಿವಲಿಂಗೇಗೌಡರು ಇತ್ತೀಚೆಗೆ ಬಜೆಟ್ ಮೇಲಿನ ತಮ್ಮ ಭಾಷಣದಲ್ಲಿ, ‘ಚುನಾವಣೆ ವೇಳೆ ಘೋಷಿಸಿದ ೫ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಸರಕಾರವು ನೀಡಿದ್ದು, ೬ನೇ ಗ್ಯಾರಂಟಿಯಾಗಿ ಪ್ರತಿ ಪಂಚಾಯಿತಿಗೆ ಒಂದರಂತೆ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ಕೊಡಬೇಕಾಗಿತ್ತು’ ಎಂದು ಆಗ್ರಹಿಸಿದ್ದಾರೆ.
ಇದಕ್ಕೆ ಸದನದೊಳಗೆ ಮಾತ್ರ ವಲ್ಲದೆ, ಜನಸಾಮಾನ್ಯರು, ಪ್ರಜ್ಞಾವಂತರು, ಗ್ರಾಮೀಣ ಪ್ರದೇಶಗಳಲ್ಲಿ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಕನಸು ಕಟ್ಟುವವರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅಸ್ಮಿತೆ, ಸ್ವಂತಿಕೆ, ವಿದೇಶಿ ಭಾಷೆ, ಗುಲಾಮಿತನ ಮುಂತಾಗಿ ಯಾರೆಷ್ಟೇ ಕೊರೆಯಲಿ, ಇಂಗ್ಲಿಷ್ ಭಾಷೆಯು ಈ ಎಲ್ಲಾ ಭಾವನಾತ್ಮಕ ತಡೆಗೋಡೆಗಳನ್ನು ಹತ್ತಿಕ್ಕಿ ಭಾರತೀಯರ ಮನಸ್ಸಿನಲ್ಲಿ ಆಳವಾಗಿ ಬೇರೂರಿರುವುದರ ಜತೆಗೆ, ಒಂದು ಭಾರತೀಯ ಭಾಷೆಯೇ ಆಗಿಬಿಟ್ಟಿದೆ ಎನ್ನುವುದು ದಿಟ.
ಹಾಗೆಯೇ, ಬದಲಾದ ಕಾಲಘಟ್ಟದಲ್ಲಿ ಅದು ಬದುಕಿನ ಭಾಷೆಯಾಗಿ ಅಗ್ರಸ್ಥಾನದಲ್ಲಿರು ವುದೂ ಅಷ್ಟೇ ಸತ್ಯ. ಇಂಗ್ಲಿಷ್ ಗೊತ್ತಿರದ ಬದುಕು ಬದುಕೇ? ಎಂಬ ಪ್ರಶ್ನೆ ಎದೆಯೆತ್ತರ ದಲ್ಲಿ ಕಾಣುವಾಗ, ಇಷ್ಟವಿರಲಿ ಇಲ್ಲದಿರಲಿ ಮುಖ್ಯವಾಹಿನಿಯಲ್ಲಿ ಧುಮುಕಲೇ ಬೇಕಾಗುತ್ತದೆ. ಬಹುಶಃ, ಶಿವಲಿಂಗೇಗೌಡರ ಈ ಬೇಡಿಕೆಯ ಹಿಂದೆ ಇಂಥ ಚಿಂತನೆಗಳು ಇರಬಹುದೇನೋ? ಭಾನುವಾರದ ‘ವಾರದ ರಜೆ’ ಮತ್ತು ಕ್ರಿಕೆಟ್‌ನಂತೆ ಇಂಗ್ಲಿಷ್ ಕೂಡ ಭಾರತೀಯ ರನ್ನು ಆಳವಾಗಿ ಆವರಿಸಿದೆ. ಭಾನುವಾರವನ್ನು ಬಿಟ್ಟು ಅನ್ಯದಿನವನ್ನು ‘ವಾರದ ರಜೆ’ಯೆಂದು ಒಪ್ಪುವವರು, ಕ್ರಿಕೆಟ್ ಬಿಟ್ಟು ಅನ್ಯಕ್ರೀಡೆಯನ್ನು ಮನಸ್ವೀ ಆಡುವವರು ನಮ್ಮಲ್ಲಿ ವಿರಳವೇ. ಇಂಗ್ಲಿಷ್ ಕೂಡ ಅದೇ ಹಾದಿಯಲ್ಲಿದೆ.
ಅನ್ಯಕ್ರೀಡೆಯಲ್ಲಿ ೧೦ ಚಿನ್ನದ ಪದಕಗಳನ್ನು ಪಡೆದಿರಬಹುದು, ಆದರೆ ಕ್ರಿಕೆಟ್ ಪಂದ್ಯದಲ್ಲಿನ ಒಂದು ಶತಕಕ್ಕೆ ಅಥವಾ ಐದು ವಿಕೆಟ್‌ಗೆ ಅದು ಸಮನಲ್ಲ! ಹಾಗೆಯೇ, ನಾಲ್ಕಾರು ಭಾಷೆಗಳಲ್ಲಿ ಮಾತುಗಾರನಾಗಿದ್ದರೂ ಇಂಗ್ಲಿಷ್ ನಲ್ಲಿ ಸ್ಫುಟವಾಗಿ ಮಾತನಾ ಡಲು ಬಾರದಿದ್ದರೆ ಆ ಬದುಕು ವ್ಯರ್ಥ ಎಂಬಂತಿರುವ ಇಂದಿನ ವಾತಾವರಣದಲ್ಲಿ ಶಿವ ಲಿಂಗೇಗೌಡರು ಜನರ ನಾಡಿಮಿಡಿತ ವನ್ನು ಸರಿಯಾಗೇ ಗ್ರಹಿಸಿ ಸರಕಾರದ ಮುಂದೆ ಅನಾವರಣಗೊಳಿಸಿದ್ದಾರೆ.
 - 
ಆಂಧ್ರಪ್ರದೇಶ ಸರಕಾರವು ೨೦೨೨ರ ಆಗಸ್ಟ್‌ನಲ್ಲಿ ೪೪,೫೧೨ ಸರಕಾರಿ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸಿದರೆ, ಉತ್ತರ ಪ್ರದೇಶದಲ್ಲಿ ಇಂಗ್ಲಿಷ್-ವಿರೋಧಿ ಯೋಗಿ ಆದಿತ್ಯನಾಥ ಸರಕಾ ರವು ಶಿಕ್ಷಣ ವ್ಯವಸ್ಥೆಯ ಆಧುನೀಕರಣದ ಹೆಸರಲ್ಲಿ ೧೫,೦೦೦ ಸರಕಾರಿ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು ಹೀಗೆಯೇ ಮಾರ್ಪಡಿಸಿದೆಯಂತೆ. ಹಲವು ಶಾಲೆಗಳಲ್ಲಿ ‘ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್’ಗಳನ್ನೂ ಆರಂಭಿಸಿ, ಮಿಷನರಿ ಮತ್ತು ಕಾನ್ವೆಂಟ್ ಶಾಲೆಗಳೊಂದಿಗೆ ಪೈಪೋಟಿ ನಡೆಸುವಷ್ಟರ ಮಟ್ಟಿಗೆ ಮಕ್ಕಳ ಇಂಗ್ಲಿಷ್ ಮಾತುಗಾರಿಕೆಯ ಕೌಶಲ ವರ್ಧಿಸಲು ಸರಕಾರ ಯೋಜಿಸಿದೆಯಂತೆ.
ಏಡ್ಸ್’ಗಿಂತ ಭೀಕರ ಹೆಪಟೈಟಿಸ್ ಹೆಮ್ಮಾರಿ…ಇದನ್ನು ಓದಿ
://.//hepatitis_aids/
ಇಂಗ್ಲಿಷ್ ಮಾಧ್ಯಮ ಶಾಲೆಗಳಿಗಾಗಿನ ಮಕ್ಕಳ ಮತ್ತು ಪಾಲಕರ ನಿರಂತರ ಆಗ್ರಹಕ್ಕೆ ಸ್ಪಂದಿಸಿ ಉತ್ತರ ಪ್ರದೇಶ ಸರಕಾರವು ಭಾಷಾ ವಿಷಯದಲ್ಲಿನ ತನ್ನ ಪೂರ್ವಗ್ರಹಗಳು, ಸಿದ್ಧಾಂತ ಗಳನ್ನೆಲ್ಲ ಬದಿಗೊತ್ತಿ ಇಂಥ ಕ್ರಾಂತಿಕಾರಿ ಬದಲಾವಣೆ ತಂದಿದೆ. ‘ಸೋಲಿಸ ಲಾಗದಿದ್ದರೆ ಸೇರಿಕೋ’ ಎನ್ನುವ ನೀತಿ ಪಾಠವಿಲ್ಲಿ ಮೇಲುಗೈ ಸಾಧಿಸಿದಂತಿದೆ. ಆಂಧ್ರ ಸರಕಾರವು ೨೦೨೪-೨೫ರ ಹೊತ್ತಿಗೆ ತನ್ನೆಲ್ಲಾ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ಪರಿವರ್ತಿಸುವೆಡೆಗೆ ದಾಪುಗಾಲು ಹಾಕಿದೆ.
ನ್ಯಾಯಾಲಯದ ಮೊರೆ ಹೋಗಿರುವ ಕೆಲವರ ಹೋರಾಟದ ಹೊರತಾಗಿಯೂ ಈ ಕ್ರಮವನ್ನು ಸರಕಾರ ಬಿಗಿಪಟ್ಟಿನಂತೆ ಹಿಡಿದಿದೆ. ಈ ಕ್ರಮಕ್ಕೂ ಮೊದಲು ನಡೆಸಲಾದ ಸಮೀಕ್ಷೆಯಲ್ಲಿ ಶೇ. ೯೬.೧೭ರಷ್ಟು ಜನರು ಇಂಗ್ಲಿಷ್ ಮಾಧ್ಯಮವನ್ನು ಆಯ್ಕೆ ಮಾಡಿದರೆ, ಶೇ. ೩.೦೬ರಷ್ಟು ಜನ ಮಾತ್ರ ತೆಲುಗುಮಾಧ್ಯಮಕ್ಕೆ ಅಸ್ತು ಎಂದರಂತೆ. ಭಾಷೆಗಳ ಪೈಕಿ ಇಂಗ್ಲಿಷ್‌ಗೆ ಹೆಚ್ಚಿನ ಮಹತ್ವ ಮತ್ತು ತೂಕವಿದೆ. ಇಂಗ್ಲಿಷ್ ಜ್ಞಾನವಿರುವವರನ್ನು, ಸ್ಫುಟವಾಗಿ ಮಾತಾಡುವವರನ್ನು ಇತರರಿಗಿಂತ ಭಿನ್ನವಾಗಿ ಕಾಣಲಾಗು ತ್ತದೆ. ಚೆನ್ನಾಗಿ ಇಂಗ್ಲಿಷ್ ಬಲ್ಲವರಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚು ಎಂಬುದು ನಿರ್ವಿವಾದ ಸತ್ಯ.
ಹಾಗೆಯೇ, ಈ ಭಾಷೆ ತಿಳಿದಿದ್ದರೆ ಜಗತ್ತಿನ ಯಾವುದೇ ಮೂಲೆಯಲ್ಲಿ ಬದುಕಿನ ಬಂಡಿಯನ್ನು ನಡೆಸಬಹುದು ಎಂಬುದೂ ನಿತ್ಯಸತ್ಯ. ಭಾರತದಲ್ಲಿ ಇಂಗ್ಲಿಷ್ ವ್ಯಾಮೋಹ ಸಮೂಹ ಸನ್ನಿಯಂತೆ ವ್ಯಾಪಿಸುತ್ತಿದೆ. ಒಂದು ಕಾಲಕ್ಕೆ ಪಟ್ಟಣ-ನಗರಗಳಿಗಷ್ಟೇ ಸೀಮಿತವಾಗಿದ್ದ ಈ ಮೋಹವೀಗ ಹಳ್ಳಿಹಳ್ಳಿಗೂ ಪಸರಿಸುತ್ತಿದ್ದು, ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆ ಗಳಿಗೇ ಸೇರಿಸಲು ಪಾಲಕರು ಧಾವಿಸುತ್ತಿದ್ದಾರೆ, ಪರದಾಡುತ್ತಿದ್ದಾರೆ. ಕನ್ನಡ ಮಾಧ್ಯಮದ ಶಾಲೆ ಮನೆಗೆ ಸನಿಹವಿದ್ದರೂ ಕಳಿಸದೆ ಹತ್ತಿಪ್ಪತ್ತು ಕಿ.ಮೀ. ದೂರದ ನೆಲೆಯಲ್ಲಿನ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೇ ಕಳಿಸುತ್ತಿದ್ದಾರೆ.
ಆ ಮಕ್ಕಳು ಮಣಭಾರದ ಸ್ಕೂಲ್‌ಬ್ಯಾಗ್ ಹೊತ್ತು ಮಳೆ-ಗಾಳಿ-ಚಳಿ-ಬಿಸಿಲನ್ನು ಸಹಿಸಿಕೊಂಡು ಮಾರ್ಗಮಧ್ಯದಲ್ಲಿ ಬಸ್ ಬದಲಿ ಸುತ್ತಾ ಅಲ್ಲಿಗೆ ತೆರಳುವುದನ್ನು ನೋಡಿದಾಗ, ಇಂಗ್ಲಿಷ್ ಮಾಧ್ಯಮ ಶಾಲೆಗಳ ಬಗ್ಗೆ ಇರುವ ಮೆಚ್ಚುಗೆಯ ಆಳ-ಅಗಲಗಳು ಅರ್ಥ ವಾಗುತ್ತವೆ. ಮಲೆನಾಡಿನ ಕೊಂಪೆಯೊಂದರಲ್ಲಿನ ನನ್ನ ಗೆಳೆಯನ ಮಗಳು ಹೀಗೆಯೇ ಮೂರು ಬಾರಿ ವಾಹನ ಬದಲಿಸಿ ಪಟ್ಟಣದ ಶಾಲೆಗೆ ಹೋಗುತ್ತಾಳೆ. ‘ಅವಳ ಉಜ್ವಲ ಭವಿಷ್ಯಕ್ಕೆಂದು, ಈ ಅನನುಕೂಲತೆ ಮತ್ತು ವಿದ್ಯಾಭ್ಯಾಸಕ್ಕಾಗಿನ ವೆಚ್ಚ ಎಲ್ಲವನ್ನೂ ಸಹಿಸುತ್ತೇನೆ’ ಎಂದು ಆತ ಹೆಮ್ಮೆಯಿಂದ ಹೇಳುತ್ತಾನೆ. ಹೀಗಾಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳೀಗ ಉಳ್ಳವರ ಅಖಾಡ ವಾಗಿ ಉಳಿದಿಲ್ಲ; ಕಡು ಬಡವರು, ಕೂಲಿಕಾರರು ಕೂಡ ಸಾಲ- ಸೋಲ ಮಾಡಿ, ತಮ್ಮ ಮಕ್ಕಳು ಇಂಗ್ಲಿಷ್ ಶಾಲೆಯಲ್ಲಿ ಓದಿ ದೊಡ್ಡ ನೌಕರಿ ಗಿಟ್ಟಿಸಬೇಕು ಎಂದು ಕನಸು ಕಟ್ಟುತ್ತಿದ್ದಾರೆ.
ಈ ಶಾಲೆಗಳು ವಿಧಿಸುವ ದುಬಾರಿ ಶುಲ್ಕ, ವಂತಿಗೆ ಮತ್ತು ಇತರ ಖರ್ಚುಗಳು ತಮ್ಮ ಸಾಮರ್ಥ್ಯಕ್ಕೆ ಮೀರುವಂತಿದ್ದರೂ ಮಕ್ಕಳನ್ನು ಅಲ್ಲಿಗೆ ಸೇರಿಸುತ್ತಿದ್ದಾರೆ. ಮಹಾಭಾರತದಲ್ಲಿ ಗುರಿಕಾರ ಅರ್ಜುನ ನಿಗೆ ಪಕ್ಷಿಯ ಕಣ್ಣು ಮಾತ್ರವೇ ಕಂಡಂತೆ ಮಕ್ಕಳ ಉಜ್ವಲ ಭವಿಷ್ಯದತ್ತಲೇ ದೃಷ್ಟಿನೆಟ್ಟಿರುವ ಪಾಲಕರು ತಮಗಾಗುವ ಆರ್ಥಿಕ ಹೊರೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ‘ನಮಗೆ ಕಲಿಯಲಾಗದಿದ್ದುದಕ್ಕೆ ಮಣ್ಣು-ಗೊಬ್ಬರ ಹೊರುವಂತಾಗಿ ಹೇಗೋ ಬದುಕು ಸಾಗಿಸುತ್ತಿದ್ದೇವೆ; ಮಕ್ಕಳಾದರೂ ಇಂಗ್ಲಿಷ್ ಕಲಿತು ದೊಡ್ಡ ಉದ್ಯೋಗ ಹಿಡಿದು ನೆಮ್ಮದಿಯ ಜೀವನ ನಡೆಸಲಿ’ ಎಂಬುದು ಇವರ ಆಶಯ.
ಇಂಥ ಕ್ರೇಜ್‌ನ ಫಲವಾಗಿಯೇ ಇಂಗ್ಲಿಷ್ ಮಾಧ್ಯಮ ಶಾಲೆಗಳು ತುಂಬಿ ತುಳುಕುತ್ತಿದ್ದರೆ, ವಿದ್ಯಾರ್ಥಿಗಳಿಲ್ಲದೆ ಅನೇಕ ಸರಕಾರಿ ಶಾಲೆಗಳು ಬಾಗಿಲು ಮುಚ್ಚಿವೆ. ಈ ಎಲ್ಲ ಕಾರಣಗಳಿಂದಾಗಿ, ಬಡವರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಹಾಗೂ ಅವರೂ ಶಿಕ್ಷಣದ ಮುಖ್ಯವಾಹಿನಿಯಲ್ಲಿ ಸೇರುವಂತಾಗಲು ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ತೆರೆಯಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ದುಬಾರಿ ಶುಲ್ಕ ಮತ್ತು ವಂತಿಕೆಯನ್ನು ಭರಿಸಲಾಗದ, ಆರ್ಥಿಕವಾಗಿ ಹಿಂದುಳಿದ ಜನರು ಉತ್ತಮ ಶಿಕ್ಷಣದಿಂದ ವಂಚಿತರಾಗದಿರಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಶಿವಲಿಂಗೇಗೌಡರು ಸರಕಾರವನ್ನು ಒತ್ತಾಯಿಸಿದ್ದಾರೆ. ಈ ಆಗ್ರಹಕ್ಕೆ ಬಹುಸಂಖ್ಯಾತ ಕನ್ನಡಿಗರ ಒತ್ತಾಸೆಯಿದೆ ಎಂಬುದು ವಿಶೇಷ.
೬೬ ರಾಜ್ಯೋತ್ಸವಗಳು ಕಳೆದರೂ, ‘ಕರ್ನಾಟಕದಲ್ಲಿ ಬದುಕಲು ಕನ್ನಡ ಭಾಷೆ ಅನಿವಾರ್ಯ’ ಎಂಬ ಪರಿಸ್ಥಿತಿಯನ್ನು ಮೂಡಿ ಸಲು ಈವರೆಗೆ ರಾಜ್ಯವನ್ನಾಳಿದ ಎಲ್ಲಾ ಸರಕಾರಗಳು ವಿಫಲಗೊಂಡಿರುವುದು ನಿಜ. ಇತ್ತೀಚೆಗೆ ಜಾರಿಗೆ ತರಲಾದ ಸಮಗ್ರ ಕನ್ನಡದ ವಿಧೇಯಕ ಸೇರಿದಂತೆ ಈ ನಿಟ್ಟಿನಲ್ಲಿ ಹಲವಾರು ಕಾನೂನುಗಳನ್ನು ರೂಪಿಸಲಾಗಿದೆ. ಆದರೆ ಮಸೂದೆಗಳ ಅನು ಮೋದನೆಗೆ ತೋರಿದ ಉತ್ಸಾಹವನ್ನು ಅದರ ಅನುಷ್ಠಾನದ ವಿಷಯದಲ್ಲಿ ತೋರದಿರುವುದೇ ಸರಕಾರಗಳ ಈ ವೈಫಲ್ಯಕ್ಕೆ ಕಾರಣ.
ಜಾಹೀರಾತು ಫಲಕಗಳಲ್ಲಿ ಕನ್ನಡವು ಬಿಂಬಿತವಾಗುವಂತೆ ಮಾಡಲಾಗದಷ್ಟು, ಕಚೇರಿ-ಅಂಗಡಿ-ಮುಂಗಟ್ಟುಗಳಲ್ಲಿ ಕನ್ನಡದ ನಾಮಫಲಕಗಳನ್ನು ಹಾಕಿಸಲಾಗದಷ್ಟು ಬಲಹೀನತೆ ಕಾಣುತ್ತಿರುವಾಗ, ಪರರಾಜ್ಯದವರು ಕನ್ನಡ ಕಲಿಯದೆಯೇ ಬದುಕಿನ ಬಂಡಿಯನ್ನು ಸರಾಗವಾಗಿ ಓಡಿಸಲು ಸಾಧ್ಯವಿರುವ ವಾತಾವರಣ ಇರುವಾಗ, ಕನ್ನಡ ಮಾಧ್ಯಮ ಶಾಲೆಗಳ ಅವಶ್ಯಕತೆ ಇದೆಯೇ? ಅಂತೆಯೇ, ಬದುಕನ್ನು ಸರಾಗವಾಗಿ ನಡೆಸಲು ಅನುವುಮಾಡಿಕೊಡುವ ಇಂಗ್ಲಿಷ್ ಮಾಧ್ಯಮ ಶಾಲೆಗಳ ಬಗೆಗಿನ ಬೇಡಿಕೆಯಲ್ಲಿ ಅರ್ಥವಿದೆ. ಶಾಸಕರು ಹೀಗೆ ಆಗ್ರಹಿಸುವಾಗ, ಪ್ರಾಯಶಃ ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹೇಳಿರಬೇಕು.
ಪ್ರತಿ ಪಂಚಾಯಿತಿಗೆ ಒಂದು ಇಂಗ್ಲಿಷ್ ಮಧ್ಯಮ ಶಾಲೆಯನ್ನು ನೀಡಬೇಕು ಎಂಬ ಅವರ ಆಗ್ರಹವು ಅರ್ಥಪೂರ್ಣವೂಸಮಯೋಚಿತವೂ ಆಗಿದೆ. ಆಳವಾಗಿ ಚಿಂತನೆ ನಡೆಸಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿದರೆ, ಅದು ಈಗಿನ ಐದು ‘ಗ್ಯಾರಂಟಿ’ ಯೋಜನೆಗಳಿಗಿಂತ ಹೆಚ್ಚು ತೂಕ ಪಡೆಯಬಲ್ಲದು.