ಮಾರ್ಗ ಉದಾತ್ತವಾಗಿದ್ದರೆ ಸಿಗುವ ಫಲ ಸಿಹಿಯಾಗಿರುತ್ತದೆ
ದಾರಿ ದೀವಿಗೆ
ಡಾ.ಜಗದೀಶ್ ಮಾನೆ
ಪೊಲೀಸ್ ಇಲಾಖೆ ಇರುವುದು ಸಂವಿಧಾನದ ಪರಿಽಯಲ್ಲಿ ಮತ್ತು ಸಾರ್ವಜನಿಕರ ನಂಬಿಕೆಯಲ್ಲಿ. ಪೊಲೀಸರಾಗಲೀ ರಾಜಕಾರಣಿಗಳಾಗಲೀ ಜನಮೆಚ್ಚುವ ಕೆಲಸಮಾಡಿದರೆ ಅವರನ್ನು ಸಮಾಜ ಗೌರವದಿಂದ ಕಾಣುತ್ತದೆ; ಆದರೆ ಕರ್ತವ್ಯಭ್ರಷ್ಟರಾಗಿ ನಡೆದುಕೊಂಡರೆ, ಅಽಕಾರ ಹೋದಮೇಲೆ ಯಾರೂ ಅವರನ್ನುಲಕ್ಷಿಸುವುದಿಲ್ಲ.
ಐಪಿಎಸ್ ಅಽಕಾರಿಯಾಗಲು ಎಷ್ಟು ಮಣ್ಣು ಹೊತ್ತಿರುತ್ತಾರೆಂಬುದು ಪೊಲೀಸರಿಗೇ ಗೊತ್ತು. ಎಂತೆಂಥ ಅಗ್ನಿ ಪರೀಕ್ಷೆಗಳನ್ನು ಎದುರಿಸಿ ಐಪಿಎಸ್ ಹುದ್ದೆಗೆ ಬಂದಿರುತ್ತಾರೆ. ಇಂಥ ಪೊಲೀಸ್ ಅಧಿಕಾರಿಗಳಿಗೆ ಹೇಳಿಕೊಡುವ ಮೊದಲ ಪಾಠವೇ ಒಬ್ಬ ಅಪರಾಧಿಯನ್ನು ಗುರುತಿಸುವ ಪರಿ. ಆತ ನಿಜಕ್ಕೂ ಅಪರಾಧಿಯೇ ಅಪಾಯಕಾರಿಯೇ ಎಂದು ನಿರ್ಧರಿಸುವಷ್ಟು, ನೋಡಿದ ಕೂಡಲೇ ಹೇಳಿಬಿಡುವಷ್ಟು ಚಾಣಾಕ್ಷತೆ ಪೊಲೀಸರಲ್ಲಿರುತ್ತದೆ. ಅನುಮಾ ನಾಸ್ಪದ ವ್ಯಕ್ತಿಯೊಬ್ಬ ಅಮಾಯಕನಂತೆ ಅದೆಷ್ಟೇ ನಾಟಕವಾಡಿದರೂ, ಅವನೊಂದಿಗೆ ಒಂದೈದು ನಿಮಿಷ ಮಾತನಾಡಿದೊಡನೆಯೇ ಆತನ ಕುತ್ತಿಗೆ ಪಟ್ಟಿ ಹಿಡಿದು ಒಳಗೆ ಹಾಕಬಲ್ಲ ಬುದ್ಧಿವಂತಿಕೆ ಪೊಲೀಸರಿಗಿರುತ್ತದೆ.
ಇಂಥ ಪೊಲೀಸರು ಯಾವ ರಾಜಕಾರಣಿಗಳ ಮುಲಾಜಿಗೂ ಒಳಗಾಗದಿದ್ದರೆ, ಭಯೋತ್ಪಾದಕರನ್ನೂ ಕಂಗಾಲಾಗಿಸುವಷ್ಟು ಆತ್ಮಶಕ್ತಿ ಅವರಲ್ಲಿ ಕೆನೆಗಟ್ಟಿರುತ್ತದೆ. ಅಷ್ಟರ ಮಟ್ಟಿಗೆ ದುಷ್ಟರನ್ನು ಮಟ್ಟಹಾಕಿ ಕೂರಿಸಬಲ್ಲ ಫೈರ್‌ಬ್ರ್ಯಾಂಡ್ ಪೊಲೀಸರನ್ನೇ ಕೆಲ ರಾಜಕಾರಣಿಗಳು ಪರಮ ದಡ್ಡರನ್ನಾಗಿಸಿ ಕೂರಿಸುತ್ತಿರುವುದು ತರವೇ? ಸಿಸಿಬಿ-ಕೇಂದ್ರ ಗುಪ್ತಚರ ಇಲಾಖೆ ಇತ್ತೀಚೆಗೆ ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ಸುಹೈಲ್, ಉಮರ್, ತಬ್ರೇಜ್, ಮುದಾಸಿರ್, -ಜಲ್ ರಬ್ಬಾನಿ ಎಂಬ ಶಂಕಿತ ಉಗ್ರರನ್ನು ಬಂಽಸಿದ್ದಲ್ಲದೆ ಅವರ ಬಳಿಯಿದ್ದ ೭ ನಾಡ ಪಿಸ್ತೂಲ್, ೪೨ ಜೀವಂತ ಗುಂಡುಗಳು, ೨ ಸ್ಯಾಟಲೈಟ್ ಫೋನ್ ಮಾದರಿಯ ರಿಮೋಟ್, ಮೊಬೈಲ್ ಫೋನ್, ಸಿಮ್‌ಗಳು, ಲ್ಯಾಪ್‌ಟಾಪ್ ಇತ್ಯಾದಿಗಳನ್ನು ವಶಪಡಿಸಿಕೊಂಡಿತು. ಇವರು ಸಮಾಜಘಾತುಕ ಕೃತ್ಯಗಳನ್ನು ಎಸಗಲೆಂದೇ ಸಂಚು ರೂಪಿಸುತ್ತಿರುವ ಭಯೋತ್ಪಾದಕರೆಂದು ಪೊಲೀಸರಿರಲಿ ಜನಸಾಮಾ ನ್ಯರೇ ಹೇಳಿಬಿಡುತ್ತಾರೆ.
ಇಂಥ ದುರುಳರು ಸಿಕ್ಕಿರುವುದಕ್ಕೆ ರಾಜ್ಯವಲ್ಲದೆ ಇಡೀ ದೇಶವೇ ನಿಟ್ಟುಸಿರುಬಿಟ್ಟಿದೆ. ‘ಸದ್ಯ, ಇವರಿಂದ ಆಗುತ್ತಿದ್ದ ಅನಾಹುತಗಳು ತಪ್ಪಿತಲ್ಲ; ಇವರ ಜಾಲಗಳನ್ನು ಇನ್ನಷ್ಟು ಜಾಲಾಡಿ, ಸಹವರ್ತಿಗಳನ್ನೆಲ್ಲಾ ಬಂಽಸಿ ಸರಿಯಾದ ಶಿಕ್ಷೆ ನೀಡಲಿ, ತನ್ಮೂಲಕ ಸಮಾಜವನ್ನು ಕಾಪಾಡಲಿ’ ಎಂದು ಜನತೆ ಬಯಸುತ್ತಿದೆ. ದೌರ್ಭಾಗ್ಯ ವೆಂದರೆ, ‘ಇಷ್ಟಕ್ಕೇ ಇವರನ್ನು ಭಯೋತ್ಪಾದಕರು ಎಂದು ತೀರ್ಮಾನಿಸಲಾಗದು’ ಎಂದು ಸಾಕ್ಷಾತ್ ಗೃಹ ಮಂತ್ರಿಗಳೇ ‘ಅಮಾಯಕರಂತೆ’ ಹೇಳಿಕೆ ನೀಡುತ್ತಾರೆ. ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನಲು ಇವರೇನೂ ಗೃಹಮಂತ್ರಿಗಳ ಸಂಬಂಧಿಕರೇನಲ್ಲ.
ಅಪರಾಧಿಗಳ ಕುರಿತಾಗಿ ಬ್ರಹ್ಮಜ್ಞಾನ ಹೊಂದಿರುವ ಪೊಲೀಸರು, ‘ಸ್ವಾಮಿ ಗೃಹಮಂತ್ರಿಗಳೇ, ಆ ವಿಷಯ ನಮಗೆ ಬಿಡಿ. ಇವರ ಯೋಗ್ಯತೆಯೇನೆಂದು ನಮಗೆ ಗೊತ್ತಿದೆ. ಇವರು ಅಮಾಯಕರೋ ಭಯೋತ್ಪಾದಕರೋ ಎಂದು ತೀರ್ಮಾನಿಸಲು ಕಾನೂನಿದೆ, ನ್ಯಾಯಾಲಯವಿದೆ’ ಎಂದು ಹೇಳಬಹುದಿತ್ತು. ಏಕೆಂದರೆ, ಸಿಕ್ಕಿಬಿದ್ದ ಶಂಕಿತರನ್ನು ಒದ್ದು ವಿಚಾರಣೆ ಮಾಡುವ ಹಕ್ಕನ್ನು ಸಂವಿಧಾನ ಪೊಲೀಸರಿಗೆ ನೀಡಿದೆ. ಇಷ್ಟಕ್ಕೂ ಅವರು ಭಯೋತ್ಪಾದಕರೋ, ಅಮಾಯಕರೋ, ತಮಾಷೆ ಮಾಡುವವರೋ ಎಂದು ತೀರ್ಮಾನಿಸಬೇಕಿರುವ ವರು ಯಾರು? ಪೊಲೀಸರೋ ಅಥವಾ ರಾಜಕಾರಣಿಗಳೋ? ಇದೇ ರೀತಿ, ಉಡುಪಿಯ ಕಾಲೇಜಿನಲ್ಲಿ ಮುಸ್ಲಿಂ ಯುವತಿಯರು ಹಿಂದೂ ಯುವತಿಯರಿಗೆ ಸ್ನೇಹದ್ರೋಹವೆಸಗಿ ಶೌಚಾಲಯದಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದು ತಮಾಷೆಗಷ್ಟೇ ಎಂದಕಾಂಗ್ರೆಸ್‌ನಂತೆಯೇ, ‘ಅಂಥ ವಿಡಿಯೋ ವೈರಲ್ ಆಗಿಲ್ಲ’ ಎಂಬ ತಮಾಷೆಯ ಹೇಳಿಕೆ ನೀಡಿಬಿಟ್ಟರು ಉಡುಪಿ ಜಿಲ್ಲಾ ಎಸ್‌ಪಿ ಅಕ್ಷಯ್ ಮಚ್ಚೀಂದ್ರ.
ಇವರ ಡ್ರಾಮಾಗಳ ವಿರುದ್ಧ ಸಮಾಜ ತಿರುಗಿ ಬೀಳುತ್ತಿದ್ದಂತೆ, ಮುಸ್ಲಿಂ ಯುವತಿಯರ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ. ಇದರರ್ಥ, ನಮ್ಮ ಬ್ರಿಲಿಯಂಟ್ ಪೊಲೀಸರನ್ನು ರಾಜಕಾರಣಿಗಳು ದಡ್ಡರಾಗಿಸುತ್ತಿದ್ದಾರೆ ಎಂದಾಯಿತಲ್ಲವೇ? ಹದ್ದಿನ ಕಣ್ಣಿನಂತೆ ತೀಕ್ಷ್ಣವಾಗಿರಬೇಕಾದ ಪೊಲೀಸರನ್ನು ಈ ರಾಜಕಾರಣಿಗಳು ಸೇರಿಕೊಂಡು ಅನೈತಿಕ ಪ್ರಭಾವ ಬೀರಿ ಅಮಾಯಕರನ್ನಾಗಿಸುವ ಮೂಲಕ ಸಮಾಜಕ್ಕೂ ತಪ್ಪುಸಂದೇಶ ನೀಡುತ್ತಿದ್ದಾರಲ್ಲವೇ? ಗೃಹಮಂತ್ರಿ ಜಿ. ಪರಮೇಶ್ವರ್ ಅವರು, ರಾಜಕಾರಣದಲ್ಲಿ ತಮ್ಮನ್ನು ಸೋಲಿಸಿ, ದೊಡ್ಡ ಅವಕಾಶಗಳನ್ನು ತಪ್ಪಿಸಿದವರ ಕುರಿತಾಗಿ ಆರೋಪಿಸಲಾಗದಷ್ಟು ಮುಗ್ಧರಾಗಿದ್ದರೆ ಅದು ಅವರ ವೈಯಕ್ತಿಕ ವಿಷಯ, ಪಕ್ಷದ ಮೇಲಿನ ಶ್ರದ್ಧಾಭಕ್ತಿಯ ಬಾಬತ್ತು; ಆದರೆ ಜಿಹಾದಿಗಳು ಆಧಾರಗಳ ಸಮೇತ ಸಿಕ್ಕಿಬಿದ್ದಿದ್ದರೂ ‘ಇವರನ್ನು ಭಯೋತ್ಪಾದಕರೆಂದು ತೀರ್ಮಾನಿಸಲಾಗದು’ ಎಂದು ಅವರು ಅಮಾಯಕರಂತೆ ಹೇಳಿಕೆ ನೀಡಿದರೆ ಏನನ್ನುವುದು?! ಇದು ದೇಶದ ಭದ್ರತೆಯ ವಿಚಾರ, ಸಮಾಜಯ ಸುರಕ್ಷತೆಯ ವಿಚಾರ, ಸಾರ್ವಜನಿಕರ ಸಾವುಬದುಕಿನ ವಿಚಾರ, ಅಲ್ಲವೇ? ‘ಸಿಕ್ಕಿಬಿದ್ದ ಶಂಕಿತರು ಭಯೋತ್ಪಾದಕರಲ್ಲ’, ‘ಆ ಮುಸ್ಲಿಂ ಹುಡುಗಿಯರು ಹಿಂದೂ ಗೆಳತಿಯರಅಶ್ಲೀಲ ವಿಡಿಯೋ ಮಾಡಿದ್ದು ತಮಾಷೆಗಾಗಿ’ ಎಂದೆಲ್ಲಾ ತಿಪ್ಪೆ ಸಾರಿಸುವುದಕ್ಕೆ ರಾಜ್ಯವೇನು ಇವರೇ ಸೃಷ್ಟಿಸಿಕೊಂಡಿರುವ ಒಂದು ಕೋಮಿನ ತೋಟವಲ್ಲ.
ಇದು ಸರ್ವಜನಾಂಗದ ಶಾಂತಿಯ ತೋಟ, ಬಾಬಾ ಸಾಹೇಬ್ ಅಂಬೇಡ್ಕರ್ ಸೃಷ್ಟಿಸಿರುವ, ‘ಸರ್ವರೂ ಸಮಾನರು’ ಎಂದಿರುವ ಸಂವಿಧಾನದ ತೋಟ. ಸಿಕ್ಕಿಬಿದ್ದಿರುವ ದುಷ್ಟರ ಬಗ್ಗೆ ಅಷ್ಟೊಂದು ಮಮಕಾರವಿದ್ದರೆ, ಬೇಕಿದ್ದವರು ಅವರೊಂದಿಗೆ ಮದುವೆ-ಮುಂಜಿ ಮಾಡಿಕೊಂಡು ಸಂಬಂಧ ಕಟ್ಟಿಕೊಳ್ಳಲಿ!ಬೇರೆಯದಕ್ಕೆಲ್ಲಾ ಬೆಂಕಿ ಹಚ್ಚುವುದು ಇದ್ದೇ ಇದೆ. ಆದರೆ ಸಮಾಜವನ್ನು ಕಾಯುವ ಪೊಲೀಸ್ ಠಾಣೆಗೆ, ದಲಿತ ಶಾಸಕರ ಮನೆಗೇ ಬೆಂಕಿಹಚ್ಚುವ ಮಹಾ ‘ಅಮಾಯಕರು’, ಹುಬ್ಬಳ್ಳಿಯಲ್ಲಿ ಪೊಲೀಸ್ ವಾಹನವನ್ನೇ ಪಲ್ಟಿಹೊಡೆಸಿ ದಾಂಧಲೆ ಯೆಬ್ಬಿಸಿದ ‘ಶಾಂತಿದೂತರು’, ಶಿವಮೊಗ್ಗದಲ್ಲಿ ಕೋಮುಗಲಭೆ-ಹತ್ಯೆಗಳನ್ನು ನಡೆಸಿದ ‘ಶಾಂತಿಯ ತೋಟದ’ ಕುಡಿಗಳ ಪೈಕಿ ಸಿಕ್ಕಿಬಿದ್ದು ಜೈಲು ಸೇರಿರುವುದು ಕೆಲವೇ ಮಂದಿಯಷ್ಟೇ.
ಪೊಲೀಸರು ಸ್ವಯಂಪ್ರೇರಿತರಾಗಿ ಜಾಲಾಡಿದರೆ ಜಿಹಾದಿ ಮನಸ್ಥಿತಿಯ ಅದೆಷ್ಟೋ ‘ಬ್ರದರ‍್ಸ್’ ಸಿಕ್ಕಿಬಿದ್ದು, ಸಂಭವಿಸಲಿರುವ ದುರಂತಗಳು ತಪ್ಪಿಹೋಗುತ್ತವೆ.ಹಾಗಂತ ದೇಶವೇ ಹರಕೆ ಹೊತ್ತಿದೆ. ಕೇಂದ್ರ ಸರಕಾರವು ಪಿಎಫ್ ಐ ಸಂಘಟನೆಯನ್ನು ನಿಷೇಧಿಸಿ ಸಾರ್ವಜನಿಕರ ಹಿತ ಕಾಪಾಡುವ ಕೆಲಸ ಮಾಡಿದೆ.ಇಂಥ ಪರಿಸ್ಥಿತಿಯಲ್ಲಿ ಜೈಲಿನಲ್ಲಿರುವ ಆರೋಪಿಗಳನ್ನು ಅಮಾಯಕರೋ ಅಲ್ಲವೋ ಎಂದು ತೀರ್ಮಾನಿಸುವ ಅಧಿಕಾರ ನ್ಯಾಯಾಲಯಕ್ಕಲ್ಲದೆ ರಾಜಕಾರಣಿಗಳಿ ಗಿದೆಯೇ? ಭಯೋತ್ಪಾದನೆ ಮತ್ತು ಜಿಹಾದಿ ಚಿತ್ತಸ್ಥಿತಿಯ ಬೀಜ ಬಿತ್ತುವವರನ್ನು ವೋಟ್‌ಬ್ಯಾಂಕ್ ತೆವಲುಗಳಿಗಾಗಿ ಬಿಡುಗಡೆ ಗೊಳಿಸಿದರೆ, ಪೊಲೀಸರು-ಕಾನೂನು- ನ್ಯಾಯಾಲಯ ಯಾವ ಪುರುಷಾರ್ಥಕ್ಕಾಗಿ? ಸಾವಿರ ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ, ಒಬ್ಬ ನಿರಪರಾಽಗೆ ಶಿಕ್ಷೆಯಾಗಕೂಡದು ಎಂಬ ಸಿದ್ಧಾಂತ ನಮ್ಮ ನ್ಯಾಯ ವ್ಯವಸ್ಥೆಯದ್ದು.
ಹೀಗಿರುವಾಗ, ಬಂಧಿತ ಆರೋಪಿಗಳು ಕಳಂಕದಿಂದ ಮುಕ್ತರಾಗಿ ಅಥವಾ ಶಿಕ್ಷೆ ಅನುಭವಿಸಿ ಹೊರಬಂದರೆ ಅವರಿಗೇ ಮರ್ಯಾದೆ. ಆದರೆ, ಪೊಲೀಸರು-ಕಾನೂನು- ನ್ಯಾಯಾಲಯವನ್ನೇ ಅಪಮಾನಿಸುವ ಪರಿಯಲ್ಲಿ, ರಾಜಕಾರಣಿಗಳ ಮುಲಾಜಿನಲ್ಲಿ ಹೊರಬಂದರೆ, ಅಂಥವರನ್ನು ಸಮಾಜ ಇನ್ನೂ ಹೆಚ್ಚು ಅಸಹ್ಯವಾಗಿ ನೋಡುತ್ತದೆ. ‘ಮೊನ್ನೆ ವಿಧಾನಸಭೆಯಲ್ಲಿ ಅಸ್ವಸ್ಥರಾದ ಶಾಸಕ ಬಸನಗೌಡ ಪಾಟೀಲ್ ಯತ್ನಾಳರಿಗೆ ಚಿಕಿತ್ಸೆ ನೀಡಿದ ವೈದ್ಯರು ಮುಸಲ್ಮಾನರು, ನೆನಪಿರಲಿ’ ಎನ್ನುವ ಅವಿವೇಕಿಗಳಿಗೆ, ಸಿಕ್ಕಿಬಿದ್ದ ಉಗ್ರರ ಧರ್ಮವನ್ನು ಅದೇ ಬಾಯಲ್ಲಿ ಹೇಳುವ ಗುಂಡಿಗೆ ಇದೆಯೇ? ಬಂದೂಕು-ಬಾಂಬುಗಳನ್ನು ಯಾವತ್ತಿಗೂಮುಟ್ಟದ ಆರೆಸ್ಸೆಸ್ ಕಾರ್ಯಕರ್ತರನ್ನು ‘ಕೋಮು ವಾದಿಗಳು, ಭಯೋತ್ಪಾದಕರು’ ಎಂದು ಜರೆದು ತಾಲಿಬಾನಿಗಳಿಗೆ ಹೋಲಿಸುವ ಇಂಥ ಮಾನಸಿಕಅಸ್ವಸ್ಥರು, ಅದೇ ಬಂದೂಕು-ಬಾಂಬುಗಳ ಸಮೇತ ಸಿಕ್ಕಿಬಿದ್ದವರನ್ನು ಭಯೋತ್ಪಾದಕರು ಎಂದು ಸಂಬೋಧಿಸಲಾಗದೆ ಹಲುಬುತ್ತಿದ್ದಾರೆ. ಈ ‘ಮಾತೃ’ ಹೃದಯಿಗಳ ಇಂಥ ‘೩-ಡಿ’ ನಾಟಕವನ್ನು ಜನ ಕನ್ನಡಕವಿಲ್ಲದೆಯೇ ಕಾಣುತ್ತಿದ್ದಾರೆ.
ಮಾತ್ರವಲ್ಲ, ರಾಜಕಾರಣಿಗಳು ಹೀಗೆ ಕಣ್ಣುಮುಚ್ಚಿಕೊಂಡು ಹಾಲುಕುಡಿಯುವುದನ್ನು, ಅವರ ಕೋಮುಮಮತೆಯನ್ನು ಗಾಬರಿಯಿಂದ ನೋಡುತ್ತಿದ್ದಾರೆ. ಆದರೆ ಜನರಿಗೆ ಪೊಲೀಸರ ಮೇಲೆ ದೊಡ್ಡ ನಂಬಿಕೆ-ವಿಶ್ವಾಸಗಳಿವೆ. ಭಯೋತ್ಪಾದಕರು ಬಾಂಬುಗಳನ್ನಿಟ್ಟು ಹತ್ತಾರು ಜನರನ್ನು ಕೊಂದರೆ, ಸತ್ತವರ ಮನೆಯ ಶಾಪವು ಆ ಭಯೋತ್ಪಾದಕ ಪಾಪಿಗಳಿಗೆ ಮತ್ತು ಅವರನ್ನು ಸಮರ್ಥಿಸಿಕೊಂಡವರಿಗೆ ತಟ್ಟುತ್ತದೆ. ಅಂಥ ಶಾಪ ಪೊಲೀಸರ ಕುಟುಂಬಕ್ಕೆ ತಟ್ಟುವುದು ಬೇಡ. ಮುಸಲ್ಮಾನರಆಶೀರ್ವಾದದಿಂದಲೇ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದ್ದರೆ ಅದು ಅವರ ಹೆಮ್ಮೆ; ಆದರೆ ಪೊಲೀಸ್ ಇಲಾಖೆ ಇರುವುದು ಸಂವಿಧಾನದ ಪರಿಧಿಯಲ್ಲಿ ಮತ್ತು ಸಾರ್ವಜನಿಕರ ನಂಬಿಕೆಯಲ್ಲಿ. ಪೊಲೀಸರಾಗಲೀ ರಾಜಕಾರಣಿಗಳಾಗಲೀ ಜನ ಚ್ಚುವ ಕೆಲಸ ಮಾಡಿದರೆ ಅವರನ್ನು ಸಮಾಜ ಗೌರವದಿಂದ ಕಾಣುತ್ತದೆ; ಆದರೆ ಕರ್ತವ್ಯ ಭ್ರಷ್ಟರಾಗಿ ನಡೆದುಕೊಂಡರೆ, ಅಧಿಕಾರ ಹೋದ ಮೇಲೆ ಯಾರೂ ಲಕ್ಷಿಸುವುದಿಲ್ಲ!
ಪೊಲೀಸರೇ, ಸೇನೆಯಲ್ಲಿರುವ ನಮ್ಮ ಯೋಧರನ್ನೇ ಒಮ್ಮೆ ನೋಡಿ; ತಂದೆ-ತಾಯಿ, ಹೆಂಡತಿ-ಮಕ್ಕಳು, ಮನೆ-ಮಠ, ಊರು-ಕೇರಿ ಎಲ್ಲವನ್ನೂ ಬಿಟ್ಟು, ಮಳೆ-ಚಳಿ-ಬಿಸಿಲು-ಗಾಳಿ ಎನ್ನದೆ, ಸಂಬಳ ಹೊರತುಪಡಿಸಿ ಒಂದು ಪೈಸೆಯನ್ನೂ ಅಪೇಕ್ಷಿಸದೆ, ಜೀವದಾಸೆ ಬಿಟ್ಟು ಶತ್ರುಸೈನಿಕರ ಸಂಭಾವ್ಯ ದಾಳಿಗೆ ಎದೆಯೊಡ್ಡಿಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ವಿಚಾರದಲ್ಲಿ ಪೊಲೀಸರೇ ನೀವೇ ಅದೃಷ್ಟವಂತರು, ನಿಮಗೆ ಕುಟುಂಬದ ಜತೆಗಿದ್ದು ಸೇವೆ ಸಲ್ಲಿಸುವ ಅವಕಾಶವಿದೆ.
ಯಾವ್ಯಾವ ಆರೋಪಿಗಳು ಎಂತೆಂಥವರೆಂಬ ಸಂಪೂರ್ಣ ಜಾತಕ ನಿಮಗೆ ತಿಳಿದಿರುತ್ತದೆ. ಹೀಗಿರುವಾಗ, ಅಂಥವರನ್ನು ಬಿಡುಗಡೆಗೊಳಿಸಲು ಯಾರೇ ರಾಜಕಾರಣಿ ಪತ್ರ ಬರೆದರೂ ಅದಕ್ಕೆ ಸಾರ್ವಜನಿಕವಾಗಿ ಪತ್ರ ಬರೆದು ನಿರಾಕರಿಸಿ ಅಥವಾ ಅಂಥ ಪತ್ರಗಳನ್ನು ನ್ಯಾಯಾಲಯದ ಗಮನಕ್ಕೆ ತನ್ನಿ. ಅದನ್ನೂ ಮೀರಿ ನಿಮ್ಮ ಮೇಲೆ ಒತ್ತಡ ಹೇರಿ, ಸೇವೆಗೆ ಸಂಬಂಽಸಿದಂತೆ ಬೆದರಿಸಿದರೆ ನೇರವಾಗಿ ಪತ್ರಿಕಾಗೋಷ್ಠಿ ಕರೆದು ಅದನ್ನು ಬಹಿರಂಗಗೊಳಿಸಿ. ಇಂಥ ದಿಟ್ಟತನ ತೋರಿದರೆ ಜನತೆ ಮತ್ತು ಪತ್ರಿಕಾರಂಗ ಸದಾ ನಿಮ್ಮೊಂದಿಗಿರುತ್ತದೆ.
ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿದು ಪ್ರಮೋಷನ್ ಗಿಟ್ಟಿಸಿ ಸ್ಟಾರುಗಳನ್ನು ಹೆಗಲಿಗೇರಿಸಿ ಕೊಳ್ಳುವುದಕ್ಕಿಂತ ಜನರ ಬೆಂಬಲ ಗಳಿಸುವುದು ಅತ್ಯಂತ ಪ್ರಭಾವಶಾಲಿ. ಒಂದು ದುರ್ಘಟನೆಗೆ ಹೇಗೆ ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡುತ್ತಾರೋ, ಹಾಗೆಯೇ ನಿಮ್ಮ ಪ್ರಾಮಾಣಿಕ ಕರ್ತವ್ಯಕ್ಕೆ ರಾಜಕಾರಣಿಗಳೇ ತೊಡಕಾದರೆ ಅದನ್ನು ಮುಲಾಜಿಲ್ಲದೆ ಮೆಟ್ಟಿನಿಂತು ಸಾರ್ವಜನಿಕರಿಗೆ ಒಪ್ಪಿಸಿ. ಜನ ಯಾವತ್ತಿಗೂ ಸ್ಮರಿಸುವುದು ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನೇ ವಿನಾ ಭ್ರಷ್ಟರನ್ನಲ್ಲ, ಕರ್ತವ್ಯಭ್ರಷ್ಟರನ್ನಲ್ಲ.
ಜನಪ್ರತಿನಿಧಿಗಳ ಸಮಷ್ಟಿರೂಪವಾದ ಶಾಸಕಾಂಗಕ್ಕೆ ಅದರದ್ದೇ ಆದ ಸ್ವಾತಂತ್ರ್ಯ ಮತ್ತು ಹಕ್ಕುಗಳಿರುತ್ತವೆ; ಆದರೆ ಅದು ಕಾನೂನು ಕಾಪಾಡುವ ಪೊಲೀಸರ ಹಕ್ಕು- ಕರ್ತವ್ಯದ ಪಾಲನೆಯನ್ನೇ ಕಬಳಿಸುವಷ್ಟು ದೊಡ್ಡ ದಾದರೆ ಪ್ರಜಾಪ್ರಭುತ್ವಕ್ಕೇ ಅಪಾಯ. ಎದ್ದರೆ ಕೂತರೆ ಲಾಠಿ ಬೀಸುತ್ತಿದ್ದ ಬ್ರಿಟಿಷರ ವಿರುದ್ಧ ಎಂತೆಂಥ ಮಹನೀಯರು ಸಡ್ಡುಹೊಡೆದು ನಿಂತು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಅಂಥ ಅಪ್ರತಿಮ ದೇಶಭಕ್ತರ ನಾಡು ನಮ್ಮದು. ರಾಜಕಾರಣಿಗಳೂ ಸೇರಿದಂತೆ ಯಾರಾದ್ದಾದರೂ ಅನೈತಿಕತೆಯನ್ನು ಪೊಲೀಸರು ಮೆಟ್ಟಿನಿಂತರೆ, ಸಾವಿರಾರು ಮಂದಿ ದೇಶಭಕ್ತರು ಬಂದು ಪೊಲೀಸರ ಬೆನ್ನಿಗೆ ನಿಲ್ಲುತ್ತಾರೆ. ದೇಶ ಬದಲಾಗಬೇಕಿರುವುದು ಹೀಗೆಯೇ. ಅಷ್ಟು ನೆನಪಿರಲಿ.