ಏಡ್ಸ್’ಗಿಂತ ಭೀಕರ ಹೆಪಟೈಟಿಸ್ ಹೆಮ್ಮಾರಿ
ಯೋಗಕ್ಷೇಮ
ಡಾ.ಕರವೀರಪ್ರಭು ಕ್ಯಾಲಕೊಂಡ
ಹೆಪಟೈಟಿಸ್ ಬಿ ವೈರಸ್ ಸಂಶೋಧನೆ ಮಾಡಿ, ರೋಗಪತ್ತೆಯ ವಿಧಾನ ಮತ್ತು ಈ ರೋಗದ ತಡೆಗೆ ಲಸಿಕೆ ಕಂಡುಹಿಡಿದ ವೈದ್ಯವಿಜ್ಞಾನಿ ಡಾ.ಬಾರೂಚ್ ಬ್ಲಂಬರ್ಗ್ ಅವರ ಜನ್ಮದಿನ ಜುಲೈ ೨೮. ಅದರ ಸವಿನೆನಪಿ ಗಾಗಿ ‘ವಿಶ್ವ ಹೆಪಟೈಟಿಸ್ ದಿನ’ವನ್ನು ಪ್ರತಿ ವರ್ಷ ಆಚರಿಸಲಾಗುತ್ತಿದೆ. ಏಡ್ಸ್‌ಗಿಂತ ಭೀಕರ ವಾದ ಹೆಪಟೈಟಿಸ್ ಬಿ ಹೆಮ್ಮಾರಿ ಸದ್ದುಗದ್ದಲವಿಲ್ಲದೇ ತನ್ನ ಹರಹನ್ನು ಹೆಚ್ಚಿಸಿ ಕೊಳ್ಳುತ್ತಿದ್ದು ಇದು ವೈದ್ಯವಿಜ್ಞಾನಿಗಳಿಗೆ ತಲೆನೋವಾಗಿದೆ.
ಇನ್ನೊಂದು ಜನಾರೋಗ್ಯ ಸಮಸ್ಯೆಯಾಗಿ ಬೆಳೆಯುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿದ ವರದಿಯು ಗಂಡೆದೆಯವರನ್ನೂ ನಡುಗಿಸುವಂತಿದೆ. ವಿಶ್ವದಲ್ಲಿ ೯,೦೦,೦೦೦ ಜನರು ಹೆಪಟೈಟಿಸ್ ಬಿ ಇಂದ ಅಸುನೀಗುವರು. ೩,೨೫,೦೦೦, ೦೦೦ ಜನರು ಸದ್ಯ ಪ್ರಪಂಚದಲ್ಲಿ ಸೋಂಕಿನೊಂದಿಗೆ ಸಹಜೀವನ ನಡೆಸಿರುವರು. ೨೫೦ ಮಿಲಿಯನ್ ಜನರು ಹೆಪಟೈಟಿಸ್ ಬಿ ವೈರಸ್‌ನ ವಾಹಕರಾಗಿದ್ದಾರೆ. ಈ ರೋಗದಿಂದ ಬಳಲಿದವರಲ್ಲಿ ೩,೧೬,೦೦೦ ಜನರು ಯಕೃತ್ ಕ್ಯಾನ್ಸರಿನ ಉಡುಗೊರೆ ಪಡೆಯುತ್ತಿದ್ದಾರೆ.
ಸುಮಾರು ೪೮ ಮಿಲಿಯನ್ ಭಾರತೀಯರು ಈ ಸೋಂಕಿನ ಸುಳಿಯಲ್ಲಿ ಗಿರಕಿ ಹೊಡೆದಿ ದ್ದಾರೆ ಎಂದು ಅಂದಾಜು ಮಾಡಲಾಗಿದೆ. ಇದಕ್ಕೆ ಬಲಿಯಾದ ವಿಶ್ವದ ಪ್ರತಿಶತ ೫೦ರಷ್ಟು ರೋಗಿಗಳು ಭಾರತೀಯರು ಎಂಬುದನ್ನು ಗಮನಿಸಿದರೆ ಯಾರಿಗಾದರೂ ಭಯವಾಗದೇ ಇರದು. ಇದು ನಮಗರಿವಿಲ್ಲದಂತೆ ಅನೇಕ ಜನರನ್ನು ತನ್ನ ಕಪಿಮುಷ್ಟಿಯಲ್ಲಿ ಬಂಧಿಸುತ್ತದೆ. ಇದರ ಬಗ್ಗೆ ಅರಿವಿಲ್ಲದ ಜನರನ್ನು ಅದು ಆದರದಿಂದ ಅಪ್ಪಿಕೊಳ್ಳು ತ್ತಿರುವುದು ಆಶ್ಚರ್ಯಕರ ವಿಷಯ. ಇನ್ನೂ ದೊಡ್ಡ ದುರಂತವೆಂದರೆ ಇದಕ್ಕೆ ನಿಶ್ಚಿತ ಚಿಕಿತ್ಸೆಯಿಲ್ಲದಿರುವುದು.
ರೋಗಕಾರಕ:ಈ ರೋಗಕಾರಕ ವೈರಸ್ಸನ್ನು ೧೯೬೫ರಲ್ಲಿ ಪತ್ತೆಹಚ್ಚಲಾಯಿತು. ಪ್ರತಿಜನಕಾತ್ಮಕವಾಗಿ ಇದು ಅತ್ಯಂತ ಸಂಕೀರ್ಣವಾಗಿದ್ದು, ಈ ಮೊದಲು ಆಸ್ಟ್ರೇಲಿಯಾ ಪ್ರತಿಜನಕವೆಂದು ಕರೆಯಲಾಗುತ್ತಿದ್ದ ಮೇಲ್ಮೈ ಪ್ರತಿಜನಕ ( ) ಮತ್ತು ಬೀಜಕೋಶ () ಪ್ರತಿಜನಕಗಳನ್ನು ಹೊಂದಿದೆ. ಇತ್ತೀಚೆಗೆ ಈ ವೈರಸ್‌ನಲ್ಲಿ ಹಲವಾರು ಪ್ರಭೇದ ಗಳನ್ನು ಗುರುತಿಸಲಾಗಿದೆ. ಇವನ್ನು ಎ, ಬಿ, ಸಿ, ಡಿ, ಇ, ಎಫ್, ಜಿ ಎಂದೆಲ್ಲಾ ಹೆಸರಿಸಲಾಗಿದೆ. ಹೆಪಟೈಟಿಸ್ ಎ ಮತ್ತು ಇ ಗಳಿಂದ ತಲೆ ದೋರುವ ಸೋಂಕು ಸಾಮಾನ್ಯವಾಗಿದ್ದು ನಿರ್ದಿಷ್ಟ ಅವಧಿಯ ನಂತರ ಕಡಿಮೆಯಾಗಿಬಿಡುತ್ತದೆ. ಈ ವೈರಸ್‌ಗಳು ಹೊದಿಕೆ ಯನ್ನು ಹೊಂದಿರುವುದಿಲ್ಲ. ಹೆಪಟೈಟಿಸ್ ಬಿ, ಸಿ ಮತ್ತು ಡಿ ವೈರಸ್‌ಗಳು ರಕ್ಷಾಕವಚದಂಥ ಹೊರಹೊದಿಕೆ ಪಡೆದಿದ್ದು, ಇವುಗಳಿಂದ ತಲೆದೋರುವ ಸೋಂಕು ಕಾಲಗತಿಸಿದಂತೆ ಆಳವಾಗಿ ಬೇರು ಬಿಡುತ್ತದೆ.
 - 
ಯಕೃತ್ ಕ್ಯಾನ್ಸರಿಗೆ ನಾಂದಿ ಹಾಡುತ್ತದೆ. ಈ ವೈರಸ್ ಮುಖ್ಯವಾಗಿ ರಕ್ತ ಮತ್ತು ದೇಹದ ಇತರ ಸ್ರಾವಗಳಲ್ಲಿ ಕಂಡುಬರುತ್ತದೆ. ಹೆಪಟೈಟಿಸ್ ಬಿ (ಎಚ್.ಬಿ.ವಿ) ಪೀಡಿತ ವ್ಯಕ್ತಿಗಳ ಜೊಲ್ಲು, ವೀರ್ಯ, ಯೋನಿಸ್ರಾವ, ಬೆವರು, ಮೊಲೆಹಾಲು, ಕಣ್ಣೀರು ಹಾಗೂ ಗಾಯಗಳಿಂದ ಸೋರುವ ಸ್ರಾವಗಳಲ್ಲಿ ವೈರಸ್‌ನ್ನು ಕಂಡುಹಿಡಿಯಲಾಗಿದೆ.
ರೋಗ ಪ್ರಸಾರ:ಎಚ್.ಬಿ.ವಿ. ರೋಗಾಣು, ರೋಗಿಯ ಅಥವಾ ಸೋಂಕುವಾಹಕರ ರಕ್ತದಲ್ಲಿ ಮತ್ತು ಲೈಂಗಿಕ ಸ್ರಾವಗಳಲ್ಲಿ ಇರುತ್ತದೆ. ಈ ಎರಡು ಮೂಲಗಳಿಂದಲೇ ಎಚ್. ಬಿ.ವಿ. ಬೇರೆಯವರಿಗೆ ಹರಡುವುದು. ಎಚ್.ಐ.ವಿ.ಗಿಂತ ಎಚ್.ಬಿ.ವಿ. ನೂರು ಪಟ್ಟು ಸಾಮಾನ್ಯ. ಕಾರಣ ಏಡ್ಸ್‌ಗಿಂತ ಹೆಪಟೈಟಿಸ್ ಬಿ ಬರುವ ಸಾಧ್ಯತೆ ನೂರುಪಟ್ಟು ಹೆಚ್ಚು ಇರುತ್ತದೆ. ಆದರೆ, ವಾಸ್ತವದಲ್ಲಿ ಏಡ್ಸ್ ರೋಗವೆಂದರೆ ಭಯ-ಭೀತಿ ಮುತ್ತುವುದು. ಅದಕ್ಕಿಂತ ಹೆಚ್ಚಿನ ಹಾವಳಿಯನ್ನು ಸದ್ದು ಗದ್ದಲವಿಲ್ಲದೇ ಎಬ್ಬಿಸಿರುವ ಹೆಪಟೈಟಿಸ್ ಬಿ ರೋಗದ ಬಗ್ಗೆ ಜನರಲ್ಲಿ ತಿಳಿವಳಿಕೆ ಇಲ್ಲದಿರುವುದು ವಿಷಾದನೀಯ. ಜನಜಾಗೃತಿ ಮೂಡಿಸುವಲ್ಲಿ ಪ್ರಚಾರ ಮಾಧ್ಯಮಗಳು ಹೆಚ್ಚು ಒತ್ತುಕೊಡಬೇಕು. ಅಂದಾಗ ಮಾತ್ರ ಭವಿಷ್ಯದಲ್ಲಿ ಬರಬಹುದಾದ ಕರಾಳ ದಿನಗಳು ದೂರ ವಾದಾವು!
ತಾಯಿ ಸೋಂಕಿನ ಸುಳಿಯಲ್ಲಿ ಸಿಕ್ಕಿದ್ದರೆ, ವೈರಸ್‌ಗಳು ಮಾಸಿನ ಮೂಲಕ ಪಿಂಡಕ್ಕೂ ದಂಡೆತ್ತಿ ಹೋಗುವವು. ದಾಳಿ ಮಾಡಿ ಸೋಂಕಿನ ದೇಣಿಗೆ ನೀಡುವುವು. ಸೋಂಕಿನಿಂದ ಕೂಡಿದ ಸೂಜಿಗಳನ್ನು ಬಳಸಿ ಅಕ್ಯು ಪಂಕ್ಚರ್ ಚಿಕಿತ್ಸೆ ನೀಡಿದಾಗ, ರೋಗ ಪೀಡಿತ ಗಂಡಸಿನೊಂದಿಗೆ ಲೈಂಗಿಕ ಸಂಪರ್ಕಕ್ಕೆ ಬಂದ ಹೆಂಗಸಿಗೆ ಅಥವಾ ತದ್ವಿರುದ್ದವಾಗಿ ರೋಗಪೀಡಿತ ಹೆಂಗಸಿನೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ ಗಂಡಸಿಗೆ ಈ ರೋಗ ವಿನಿಮಯ ವಾಗುವುದು. ಹೀಗಾಗಿ ಇದನ್ನು ಪ್ರಮುಖ ರತಿರೋಗವೆಂದು ಪರಿಗಣಿಸಲಾಗಿದೆ.
ರೋಗದ ಲಕ್ಷಣಗಳು:ಆರೋಗ್ಯವಂತ ವ್ಯಕ್ತಿಯ ದೇಹವನ್ನು ವೈರಸ್ ಪ್ರವೇಶಿಸಿದ ತಕ್ಷಣ ರೋಗದ ಲಕ್ಷಣಗಳು ಕಾಣುವುದಿಲ್ಲ. ದೇಹ ಪ್ರವೇಶಿಸಿದ ೫೦-೬೦ ದಿನಗಳವರೆಗೆ ಈ ವೈರಸ್ ವ್ಯಕ್ತಿಯ ದೇಹದಲ್ಲಿ ಸಂಖ್ಯಾಭಿವೃದ್ಧಿ ಹೊಂದಿ, ಶಕ್ತಿಶಾಲಿಯಾಗಿ ಬೆಳೆಯು ತ್ತವೆ. ಈ ನಡುವೆ ಸೋಂಕಿನ ಸುಳಿವಿನ ಸಂಶಯದಿಂದ ದೇಹದ ರಕ್ಷಣಾ ವ್ಯವಸ್ಥೆಯ ಹೊರೆ ಹೊತ್ತ ಬಿಳಿಯ ರಕ್ತಕಣಗಳ ದಾಳಿ ಯೂ ರೋಗಾಣುಗಳ ಮೇಲೆ ಅವ್ಯಾಹತವಾಗಿ ನಡೆದೇ ಇರುತ್ತದೆ. ಅವು ರೋಗಾಣುಗಳನ್ನು ನಾಶಪಡಿಸುತ್ತವೆ.
ಶೇ.೧೦ರಷ್ಟು ಜನರಲ್ಲಿ ಈ ಸಮರದಲ್ಲಿ ವೈರಸ್‌ಗಳು ವಿಜಯೋತ್ಸವ ಆಚರಿಸುವವು. ವ್ಯಕ್ತಿಯ ರೋಗ ಪ್ರತಿರೋಧಕ ಶಕ್ತಿಗೆ ಅನುಗುಣವಾಗಿ ರೋಗ ಲಕ್ಷಣಗಳು ಹೊರಹೊಮ್ಮುವುವು. ಹೆಪಟೈಟಿಸ್ ಹಾವಳಿಗೆ ತುತ್ತಾದ ಅರ್ಧದಷ್ಟು ಜನರಲ್ಲಿ ಯಾವುದೇ ಸೋಂಕು ಲಕ್ಷಣಗಳಿರುವುದಿಲ್ಲ. ಉಳಿದವ ರಲ್ಲಿ ಲಕ್ಷಣಗಳು ಸೌಮ್ಯವಾಗಿರುತ್ತವೆ. ಹೀಗಾಗಿ ಜನರು ಇದನ್ನು ‘-’ ಲಕ್ಷಣಗಳೆಂದು ನಿರ್ಲಕ್ಷಿಸುವುದುಂಟು. ಕೆಲ ವ್ಯಕ್ತಿಗಳು ಸೋಂಕು ತಗಲಿದರೂ, ಹೆಪಟೈಟಿಸ್ ಬಿ ರೋಗಕ್ಕೆ ತುತ್ತಾಗದೇ ಕೇವಲ ರೋಗದ ಪ್ರಸಾರಕರಾಗಿ ಪರಿವರ್ತನೆ ಹೊಂದುತ್ತಾರೆ. ಇವರೇ ‘ರೋಗ ವಾಹಕರು’. ಇಂಥವರ ರಕ್ತ ಅಥವಾ ವೀರ್ಯದ ಸಂಪರ್ಕಕ್ಕೆ ಬರುವ ಇತರ ವ್ಯಕ್ತಿಗಳಿಗೆ ರೋಗ ಹರಡುವುದು.?
ಚಿಕಿತ್ಸೆ:ಈ ಕಾಯಿಲೆಗೆ ನಿಶ್ಚಿತ ಚಿಕಿತ್ಸೆ ಇಲ್ಲ. ಈಗ ಲಭ್ಯವಿರುವ ಚಿಕಿತ್ಸೆಯೆಂದರೆ ತ್ರಾಸಿಗೆ ತಕ್ಕ ಚಿಕಿತ್ಸೆಯನ್ನು ನೀಡುವುದು. ಕೆಲವರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಕೆಲವೇ ದಿನಗಳಲ್ಲಿ ಕಾಯಿಲೆ ತಂತಾನೇ ಮಾಯವಾದ ಉದಾಹಣೆಗಳಿವೆ. ಇದನ್ನೇ ರೋಗದ ಸ್ವರೂಪವೆಂದು ಭಾವಿಸಿ, ಉದಾಸೀನತೆ ತೋರುವುದು ಸರಿಯಲ್ಲ. ಈ ಕಾಯಿಲೆಯ ಕಪಿಮುಷ್ಟಿಯಿಂದ ಪಾರಾಗಲು ಇರುವ ಒಂದೇ ಒಂದು ಸುಗಮ, ಸುರಕ್ಷಿತ ಮಾರ್ಗವೆಂದರೆ ಸೋಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸುವುದು.
ಪ್ರತಿಬಂಧಕೋಪಾಯಗಳು | ಹೆಪಟೈಟಿಸ್ ಸೋಂಕಿನಿಂದ ರಕ್ಷಣೆ ನೀಡಬಲ್ಲ ಲಸಿಕೆಗಳು ಭಾರತದಲ್ಲಿ ಈಗ ಲಭ್ಯ. ಹುಟ್ಟಿದ ತಕ್ಷಣ ಹೆಪಟೈಟಿಸ್ ಬಿ ಲಸಿಕೆಯನ್ನು ಕೊಡಿಸುವುದು. ಮಗುವಿಗೆ ಆರು ವರ್ಷಗಳಾದ ನಂತರ ೪-೬ ವಾರಗಳ ಅಂತರದಲ್ಲಿ ಮೂರು ಬಾರಿ ಪೆಂಟಾವ್ಹೆಲೆಂಟ ಲಸಿಕೆಯನ್ನು ನೀಡಬೇಕು.
| ದೊಡ್ಡವರಿಗೆ ಮತ್ತು ಹತ್ತು ವರ್ಷಗಳ ಮೇಲ್ಪಟ್ಟ ಮಕ್ಕಳಿಗೆ ೨೦ ಮೈಕ್ರೊಗ್ರಾಂನ (೧ಮಿ.ಲೀ) ಲಸಿಕೆಯನ್ನು, ನವಜಾತ ಶಿಶುಗಳಿಂದ ಹಿಡಿದು ೧೦ ವರ್ಷದೊಳಗಿನ ಮಕ್ಕಳಿಗೆ ೧೦ ಮೈಕ್ರೊಗ್ರಾಂನ (೦.೫ ಮಿ.ಲೀ) ಲಸಿಕೆಯನ್ನು ನೀಡಬೇಕು.
| ಹೆಚ್ಚು ಅಪಾಯದ ಅಂಚಿನಲ್ಲಿರುವ ವೈದ್ಯರು, ಪ್ರಸೂತಿ ತಜ್ಞರು ಮತ್ತು ಈ ವಿಭಾಗದ ಇತರ ಸಿಬ್ಬಂದಿ,ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಕೆಲಸ ಮಾಡುವವರು, ರಕ್ತ ಭಂಡಾರದಲ್ಲಿ ಕಾರ್ಯನಿರ್ವಹಿಸುವವರು ತಪ್ಪದೇ ಹೆಪಟೈಟಿಸ್ ಬಿ ಲಸಿಕೆಯನ್ನು ತೆಗೆದುಕೊಳ್ಳಬೇಕು.
| ಮಾದಕ ವ್ಯಸನಿಗಳು, ಸಲಿಂಗರತಿಯಲ್ಲಿ ತೊಡಗಿರುವವರು, ವ್ಯಭಿಚಾರ ವೃತ್ತಿಗಿಳಿದವರು, ಹಚ್ಚೆಬಟ್ಟು ಹಾಕಿಸಿ ಕೊಂಡವರು, ಹಿಮೊಫಿಲಿಯಾ, ಥಲಸೀಮಿಯಾ ರೋಗಗಳ ಬಾಹುಬಂಧನದಲ್ಲಿ ತತ್ತರಿಸಿ ಮೇಲಿಂದ ಮೇಲೆ ರಕ್ತ ಅಥವಾ ರಕ್ತ ಘಟಕಗಳನ್ನು ಸ್ವೀಕರಿಸುವವರು, ಹೆಪಟೈಟಿಸ್ ಬಿ ಸೋಂಕಿಗೆ ತುತ್ತಾದ ತಾಯಂದಿರ ಹಸುಗೂಸುಗಳಿಗೆ, ಕುಟುಂಬದಲ್ಲಿ ಹೆಪಟೈಟಿಸ್ ಬಿ ರೋಗವಾಹಕರು ಇದ್ದರೆ ಕುಟುಂಬದ ಎಲ್ಲ ಸದಸ್ಯರಿಗೆ ತಪ್ಪದೇ ಲಸಿಕೆ ನೀಡಿ ರಕ್ಷಿಸಬೇಕು.
| ಆಸ್ಪತ್ರೆಗಳಲ್ಲಿ ಬಳಸುವ ಸೂಜಿ, ಸಿರಿಂಜು, ಶಸಚಿಕಿತ್ಸೆಯ ಸಲಕರಣೆಗಳನ್ನು ಸೂಕ್ತ ರೀತಿಯಿಂದ ಶುದ್ಧೀಕರಣಗೊಳಿಸಬೇಕು. ಬಳಸಿ ಬಿಸಾಡುವ ಸೂಜಿ ಮತ್ತು ಸಿರಿಂಜು ಗಳನ್ನು ಬಳಸಬೇಕು.
| ರಕ್ತದಾನಿಯ ರಕ್ತದಲ್ಲಿ ಈ ವೈರಸ್ ಇಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಈ ಪ್ರತಿಬಂಧಕೋಪಾಯಗಳನ್ನು ಅಲಕ್ಷಿಸಿದಲ್ಲಿ ಏಡ್ಸ್ ಭೀತಿಯಿಂದ ತತ್ತರಿಸಿ ಹೋಗಿರುವ ಜನತೆ, ಹೆಪಟೈಟಿಸ್ ಬಿ ಹೆಮ್ಮಾರಿಯ ಹಿಡಿತದಿಂದ ಸಾವಿನ ನೆರಳಲ್ಲೆ ನರಳುತ್ತ, ನಲಗುತ್ತ ನಡೆಯಬೇಕಾಗಿರುವ ದಿನಗಳು ದೂರವಿಲ್ಲ. ಸರಕಾರ ಈ ರೋಗದ ಬಗ್ಗೆ ತಳೆದಿರುವ ಉದಾಸೀನತೆ ಜನತೆಯ ಜೀವಕ್ಕೆ ಉರುಳಾದೀತು. ಸಣ್ಣ ರಂಧ್ರ ಇಡೀ ದೋಣಿಯನ್ನೇ ಮುಳುಗಿಸಬಲ್ಲದು. ಹೆಪಟೈಟಿಸ್ ಬಿ ಮಾರಿ ಇದಕ್ಕೆ ಹೊರತಾಗಿಲ್ಲ.