ಭಾರತೀಯ ಕೌಟುಂಬಿಕ ವ್ಯವಸ್ಥೆ: ಒಂದು ಒಳನೋಟ
ಕಳಕಳಿ
ಮಹಾದೇವ ಬಸರಕೋಡ
ಆಧುನಿಕ ಕಾಲಘಟ್ಟದಲ್ಲಿ ಭಾರತೀಯ ಕೌಟುಂಬಿಕ ವ್ಯವಸ್ಥೆ ಅವನತಿಯ ದಾರಿಯಲ್ಲಿ ಸಾಗಿದೆ. ಸ್ವಾರ್ಥವೇ ಬದುಕಿನ ಪರಮೋದ್ದೇಶವಾಗಿರುವ ಇಂದಿನ ನಮ್ಮ ಜೀವನಶೈಲಿಯಲ್ಲಿ ಎಲ್ಲವನ್ನೂ ಹಣದ ಮಾನದಂಡದಿಂದಲೇ ಅಳೆಯುವ ಪ್ರವೃತ್ತಿ ಹೆಚ್ಚಾಗುತ್ತಿರುವ ಕಾರಣಕ್ಕಾಗಿ ಕುಟುಂಬದ ಸದಸ್ಯರ ನಡುವಿನ ಸಂಬಂಧ ಗಳು ತೀರಾ ಸಡಿಲಗೊಳ್ಳುತ್ತಿವೆ.
ಒಂದೆರಡು ವರ್ಷಗಳ ಹಿಂದೆ ನಡೆದ ಘಟನೆಯಿದು. ಅದು ಮೇ ತಿಂಗಳಿನ ಮಧ್ಯಾಹ್ನದ ಸುಡುಬಿಸಿಲು. ಎಲ್ಲೆಡೆಯೂ ಬಿಸಿಯಾದ ಗಾಳಿ. ರಸ್ತೆಯೆಲ್ಲವೂ ಕಾದ ಹಂಚಿನಂತಾಗಿತ್ತು. ಬರಿಗಾಲಲ್ಲಿ ನಡೆದು ಬರುತ್ತಿದ್ದ ಸುಮಾರು ೧೦ ವರ್ಷದ ಬಾಲಕನೊಬ್ಬನನ್ನು ನೋಡಿ ನನ್ನ ಕರುಳು ಒಂದು ಕ್ಷಣ ಚುರ್ ಎಂದಿತು. ಕೈಯಲ್ಲಿ ಥರ್ಮೊಕೋಲ್‌ನಿಂದ ಮಾಡಿದ ಐಸ್‌ಕ್ರೀಂ ಡಬ್ಬಿ. ನನ್ನ ಪಕ್ಕದಲ್ಲಿಯೇ ಕುಳಿತಿದ್ದ, ಅವನಿಗೆ ಪರಿಚಿತನಾಗಿದ್ದ ನನ್ನ ಸ್ನೇಹಿತನೊಬ್ಬನನ್ನು ನೋಡಿ ಬಾಲಕ ಹತ್ತಿರಕ್ಕೆ ಬಂದು ‘ಸರ್ ನಮಸ್ಕಾರ’ ಎಂದ.
ಆಗ ನನ್ನ ಸ್ನೇಹಿತ, ‘ನಿಮ್ಮೂರು ಬಿಟ್ಟು ಯಾಕೋ ಇಲ್ಲಿಗೆ ಬಂದಿದ್ದೀಯಾ?’ ಎಂದು ಕೇಳಿದ್ದಕ್ಕೆ, ‘ಸರ್, ಐಸ್ ಕ್ರೀಂ ಮಾರಲು’ ಎಂದುತ್ತರಿಸಿದ ಬಾಲಕ. ‘ಹೇಗಾಯಿತು ವ್ಯಾಪಾರ?’ ಎಂಬ ನನ್ನ ಸ್ನೇಹಿತನ ಪ್ರಶ್ನೆಗೆ ‘ಇಲ್ಲ ಸರ್, ಇವತ್ತು ವ್ಯಾಪಾರವೇ ಇಲ್ಲ. ಎಲ್ಲವೂ ಲಾಸ್. ಯಾರೋ ಇಲ್ಲಿ ಜಾತ್ರೆ ಇದೆ ಎಂದು ಸುಳ್ಳು ಹೇಳಿದರು. ವ್ಯಾಪಾರ ಚೆನ್ನಾಗಿ ಆಗಬಹುದೆಂದು ಬಂದೆ. ಒಂದು ಐಸ್‌ಕ್ರೀಂ ಕೂಡ ಮಾರಿಲ್ಲ. ಎಲ್ಲವೂ ಕರಗಿ ಹೋಗಿದೆ’ ಎಂದು ತನ್ನ ಅಳಲು ತೋಡಿಕೊಂಡ. ಆಗ ನಾನು ‘ಯಾಕೋ, ನೀನು ಶಾಲೆಗೆ ಹೋಗೋದಿಲ್ಲವೇನು?’ ಎಂದೆ.
‘ಹೋಗ್ತೀನಿ ಸರ್’ ಎಂದ. ‘ಮತ್ತೆ ಐಸ್‌ಕ್ರೀಂ ಮಾರೋದು ಯಾವಾಗ ಮಾಡ್ತೀಯಾ?’ ಎಂದಾಗ ‘ಶಾಲೆಗೆ ರಜೆ ಇದ್ದಾಗ ಸರ್’ ಎಂದುತ್ತರಿಸಿದ. ‘ಶಾಲೆಯಲ್ಲಿ ಪುಸ್ತಕ, ಬಟ್ಟೆ, ಊಟ ಎಲ್ಲವನ್ನೂ ಕೊಡ್ತಾರೆ. ಐಸ್‌ಕ್ರೀಂ ಮಾರಿ ಬಂದ ಲಾಭದ ಹಣ ಏನ್ ಮಾಡ್ತೀಯಾ?’ ಎಂದೆ. ‘ಸರ್ ಪಿಗ್ಮಿ ತುಂಬಿ ಉಳಿತಾಯ ಮಾಡ್ತೀನಿ’ ಎಂದ. ‘ಯಾಕೆ ನಿಮ್ಮ ಅಪ್ಪ- ಅಮ್ಮ ಇಲ್ಲವೇನು?’ ಎಂದು ಕೇಳಿದ್ದಕ್ಕೆ, ‘ಇದ್ದಾರೆ ಸರ್, ನಮ್ಮದು ಬಡ ಕುಟುಂಬ. ತಂದೆ ಉಡುಪಿಯಲ್ಲಿ ದುಡೀತಾರೆ. ಅಮ್ಮ ಕೂಲಿ-ನಾಲಿ ಮಾಡ್ತಾಳೆ. ಅವರು ದುಡಿದ ಹಣ ಯಾವುದಕ್ಕೂ ಸಾಕಾಗೋಲ್ಲ. ಬೆಳೆದು ನಿಂತ ಅಕ್ಕ ಇದ್ದಾಳೆ ಮನೇಲಿ, ಅವಳ ಮದುವೆ ಸಂದರ್ಭದಲ್ಲಿ ನನ್ನ ಉಳಿತಾಯದ ಸ್ವಲ್ಪವಾದರೂ ಹಣ ಸಹಾಯಕ್ಕೆ ಬರುತ್ತೆ.
ಅಕ್ಕನ ಮದುವೆ ನನ್ನದೂ ಜವಾಬ್ದಾರಿ ಅಲ್ಲವೇ ಸರ್’ ಎಂಬ ಅವನ ಉತ್ತರಕ್ಕೆ ನನಗೆ ಒಂದು ಕ್ಷಣ ದಿಗ್ಭ್ರಾಂತಿಯಾಯಿತು. ಅಷ್ಟು ಚಿಕ್ಕ ವಯಸ್ಸಿನ ಬಾಲಕನಲ್ಲಿ ಅದೆಷ್ಟು ದೊಡ್ಡ ಚಿಂತನೆ? ಅದೆಂಥ ಜವಾಬ್ದಾರಿಯ ನಡೆ? ತನ್ನನ್ನೂ, ಲೋಕವನ್ನೂ, ಚರಿತ್ರೆಯನ್ನೂ, ಸಾಂಸ್ಕೃತಿಕ ಪರಂಪರೆಯನ್ನೂ ತನಗರಿವಿಲ್ಲದಂತೆ ಒಳಗೊಳ್ಳಲು ತವಕಿಸುವ ಅವನ ಪರಿ ನಿಜಕ್ಕೂ ನನ್ನ ಅಚ್ಚರಿಗೆ ಕಾರಣವಾಗಿತ್ತು.
ತನ್ನ ಮನೆಯಲ್ಲಿರುವ ಪ್ರತಿಯೊಬ್ಬ ಸದಸ್ಯರ ಹಿತ, ಕಾಳಜಿ, ಆಪ್ತತೆಯ ಸಹವಾಸದ ಅನುಭೂತಿ ನೀಡುವ ಬಹುದೊಡ್ಡ ಮೌಲ್ಯವಿದು. ಪರಸ್ಪರ ಹೊಂದಾಣಿಕೆ,ನಿಸ್ವಾರ್ಥದ ಭಾವ, ಕಷ್ಟ-ಸುಖಗಳಲ್ಲಿ ಸಮಾನವಾಗಿ ಪಾಲ್ಗೊಳ್ಳುವಿಕೆಯಂಥ ಅಪರೂಪದ ಮಾನವೀಯ ನಡೆಗಳು ಕೌಟುಂಬಿಕ ವ್ಯವಸ್ಥೆಯಲ್ಲಿ ಮಾತ್ರ ಕಾಣ ಸಿಗಲು ಸಾಧ್ಯ. ಯಾವುದೇ ಸಮಸ್ಯೆ ಎದುರಾದರೂ ಅದನ್ನು ಎಲ್ಲ ರೀತಿಯಲ್ಲಿಯೂ ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುವ ಶಕ್ತಿಯನ್ನು ಒದಗಿಸುವ ಶಕ್ತಿಕೇಂದ್ರಗಳೇ ಕುಟುಂಬಗಳು. ಯಾರಿಗೂ ಒಂಟಿತನ ಕಾಡದಂತೆ, ಭದ್ರತೆಗೆ ಎಂದೂ ಕೊರತೆಯಾಗದಂತೆ, ಆರ್ಥಿಕ ಸಮಸ್ಯೆಗಳು ಎದುರಾಗದಂತೆ, ಅನಿರೀಕ್ಷಿತ, ಅನಪೇಕ್ಷಿತ ಘಟನೆಗಳಿಂದ ತೀರಾ ಹತಾಶರಾಗದಂತೆ, ನೈತಿಕ ಮೌಲ್ಯಗಳನ್ನು ಕಳೆದುಕೊಳ್ಳದಂತೆ, ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲವನ್ನೂ ಸಾಧ್ಯ ವಾದಷ್ಟು ಸಮಚಿತ್ತದಿಂದ ಎದುರಿಸುವ ಎದೆಗಾರಿಕೆಯನ್ನು ಒದಗಿಸುವಲ್ಲಿ ನಮ್ಮ ಕೌಟುಂಬಿಕ ವ್ಯವಸ್ಥೆಯ ಪಾತ್ರ ತುಂಬಾ ಹಿರಿದಾದದ್ದು.
ಇಂಥ ಕುಟುಂಬದ ಪರಿಕಲ್ಪನೆ ನಮಗೆ ತೀರ ಪ್ರಾಚೀನವಾದದ್ದು. ಕೌಟುಂಬಿಕ ವ್ಯವಸ್ಥೆ ನಮ್ಮ ದೇಶದ ಅಸ್ಮಿತೆ. ಭಾರತೀಯ ಸಂಸ್ಕೃತಿ ಉಳಿದಿರುವುದೇ ಇಂಥಕೌಟುಂಬಿಕ ಪರಿಕಲ್ಪನೆಯಿಂದಲೇ ಎಂಬ ಮಾತು ಅತಿಶಯೋಕ್ತಿಯೇನಲ್ಲ. ಆಧುನಿಕ ಕಾಲಘಟ್ಟದಲ್ಲಿ ಭಾರತೀಯ ಕೌಟುಂಬಿಕ ವ್ಯವಸ್ಥೆ ಅವನತಿಯ ದಾರಿಯಲ್ಲಿ ಸಾಗಿದೆ. ಸ್ವಾರ್ಥವೇ ಬದುಕಿನ ಪರಮೋದ್ದೇಶವಾಗಿರುವ ಇಂದಿನ ನಮ್ಮ ಜೀವನಶೈಲಿಯಲ್ಲಿ ಎಲ್ಲವನ್ನೂ ಹಣದ ಮಾನ ದಂಡದಿಂದಲೇ ಅಳೆಯುವ ಪ್ರವೃತ್ತಿ ಹೆಚ್ಚಾಗುತ್ತಿರುವ ಕಾರಣಕ್ಕಾಗಿ ಕುಟುಂಬದ ಸದಸ್ಯರ ನಡುವಿನ ಸಂಬಂಧಗಳು ತೀರಾ ಸಡಿಲಗೊಳ್ಳುತ್ತಿವೆ. ಗಂಡ, ಹೆಂಡತಿ ಮತ್ತು ಮಕ್ಕಳು ಎಂಬ ಸಣ್ಣ ಕುಟುಂಬಗಳ ಅವಿಷ್ಕಾರಗಳು ನಮ್ಮ ಮನಸ್ಸನ್ನು ಕೂಡ ತೀರ ಸಣ್ಣದನ್ನಾಗಿ ಮಾಡುತ್ತಿವೆ.
ಒಂದೇ ಮನೆಯಲ್ಲಿದ್ದರೂ ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತನಾಡಲು, ಮಕ್ಕಳ ಜತೆಗೆ ಒಂದಷ್ಟು ಸಮಯ ಕಳೆಯಲು ಪುರುಸೊತ್ತು ಇಲ್ಲದಂತಾಗಿದೆ. ‘ಕೂಡಿ ಬಾಳಿದರೆ ಸ್ವರ್ಗ ಸುಖ’ ಎಂಬ ಮಾತು ನೇಪಥ್ಯಕ್ಕೆ ಜಾರಿಯಾಗಿದೆ. ‘ಮಾತೃದೇವೋಭವ, ಪಿತೃದೇವೋ ಭವ’ ಎಂದು ಜಪಿಸುತ್ತ ಬಂದವರು ನಾವೇನಾ?ಎಂಬುವ ಅನುಮಾನ ಕಾಡತೊಡಗಿದೆ. ನಮಗೆ ಜನ್ಮ ನೀಡಿ ಸಾಕಿ ಸಲುಹಲು ತಮ್ಮತನವನ್ನೆಲ್ಲ ಧಾರೆಯೆರೆದ ನಮ್ಮ ತಂದೆ ತಾಯಿಗಳೇ ಇಂದು ನಮಗೆ ಹೊರೆಯಾಗುತ್ತಿದ್ದಾರೆ. ವೃದ್ಧಾಶ್ರಮಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಮತ್ತೊಂದೆಡೆ ಎಳೆಯ ಮಕ್ಕಳು ಹಿರಿಯರ ಆರೈಕೆ, ತಂದೆ ತಾಯಿಯರ ಪ್ರೀತಿ ಸಿಗದೆ ಶಿಶುಪಾಲನಾ ಕೇಂದ್ರಗಳಲ್ಲಿ ಅನಾಥ ಭಾವದಿಂದ ಬೆಳೆಯುತ್ತಿವೆ.
ಎಲ್ಲವೂ ಇದ್ದೂ ಎನೂ ಇಲ್ಲವೆಂಬಂತೆ ಕೆಲವೊಮ್ಮೆ ತೀರಾ ಒಂಟಿತನದ ಭಾವ ಬಹುತೇಕರನ್ನು ಕಾಡುತ್ತಿದೆ. ಬಾರ್ ಮತ್ತು ಕ್ಲಬ್‌ಗಳು ಮನರಂಜನಾ ಕೇಂದ್ರಗಳಾಗುತ್ತಿವೆ. ಮನೋಚಿಕಿತ್ಸಾ ಕೇಂದ್ರಗಳು ಅಗತ್ಯವೆನಿಸತೊಡಗಿವೆ. ತೀರಾ ಕ್ಷುಲ್ಲಕ ಕಾರಣಗಳಿಗಾಗಿ ಆತ್ಮಹತ್ಯೆಯ ಪ್ರಯತ್ನ ಗಳು ನಡೆಯುತ್ತಲೇ ಇವೆ. ಬದುಕಿನ ತುಂಬ ಜತೆಯಾಗಿ ಕಷ್ಟ-ಸುಖ, ನೋವು-ನಲಿವು ಮಾತ್ರವಲ್ಲದೆ ಎಲ್ಲವನ್ನೂ ಸಮಾನವಾಗಿ ಹಂಚಿಕೊಳ್ಳುವ ಪಣತೊಡುವ ಪವಿತ್ರ ವಾದ ದಾಂಪತ್ಯದ ಸಂಬಂಧದ ಕೊಂಡಿಗಳು ತೀರಾ ಕ್ಷುಲ್ಲಕ ಕಾರಣಕ್ಕಾಗಿ ಕಳಚಿಕೊಳ್ಳುತ್ತಿವೆ.
ವಿಚ್ಛೇದನಗಳು ಪ್ರತಿಷ್ಠೆಯ ಪ್ರತೀಕಗಳಾಗುತ್ತಿವೆ. ಮದುವೆಗೆ ಮುಂಚೆಯೇ ವಿವಾಹ ಸಂಬಂಧಗಳಿಗೆ ಎಳ್ಳು-ನೀರು ಬಿಡಲಾಗುತ್ತಿದೆ. ಬಾಲಾಪರಾಧಿಗಳ ಸಂಖ್ಯೆ ಹೆಚ್ಚುತ್ತಿದೆ. ಚಿಕ್ಕವಯಸ್ಸಿನಲ್ಲಿಯೇ ಮಕ್ಕಳು ಮಾದಕವಸ್ತುಗಳ ದಾಸ ರಾಗುತ್ತಿದ್ದಾರೆ. ಮದ್ಯಪಾನ, ಧೂಮಪಾನದಂಥ ಚಟ ಗಳ ಕಪಿಮುಷ್ಟಿಗೆ ಸುಲಭವಾಗಿ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ಮುಗ್ಧ ಮಕ್ಕಳ ಮೇಲೆ, ಮಹಿಳೆಯರ ಮೇಲೆ ನಡೆಯುವ ಅನಾಚಾರ, ಅತ್ಯಾಚಾರದ ಪ್ರಕರಣಗಳಿಗೆ ಲೆಕ್ಕವೇ ಸಿಗದಂತಾಗಿದೆ. ಹಣ ಆಸ್ತಿಗಾಗಿ ತಂದೆ, ತಾಯಿ, ಅಣ್ಣ, ತಮ್ಮಂದಿರನ್ನು ಹತ್ಯೆಗೈಯುವುದು ಕೂಡ ಸಾಮಾನ್ಯವೆನಿಸುವ ಸಂಗತಿಯಾಗುತ್ತಿದೆ.
‘ಶಿಕ್ಷಣ, ಉದ್ಯೋಗದಲ್ಲಿ ಬದಲಾವಣೆ, ನಗರದ ಬದುಕಿನ ಅನಿವಾರ್ಯತೆಯಿಂದಾಗಿ ಚಿಕ್ಕ ಕುಟುಂಬಗಳು ಅನಿವಾರ್ಯ’, ‘ಪರಿವರ್ತನೆ ಜಗದ ನಿಯಮ’ ಎಂಬನಮ್ಮ ಏನೆಲ್ಲಾ ಸಮರ್ಥನೆಗಳ ನಡುವೆಯೂ ಕೌಟುಂಬಿಕ ವ್ಯವಸ್ಥೆಯಲ್ಲಿನ ಶಿಥಿಲತೆಯೂ ಇಂದಿನ ಬಹುತೇಕ ಸಮಸ್ಯೆಗಳಿಗೆ ಮೂಲ ಕಾರಣ ಎಂಬ ಮಾತನ್ನುಅಲ್ಲಗಳೆಯಲಾಗುವುದಿಲ್ಲ. ಈ ಹೊತ್ತಿನ ಸಂಕೀರ್ಣವಾದ ಒತ್ತಡಗಳನ್ನು ಸಮರ್ಥವಾಗಿ ನಿಭಾಯಿಸಲು ಕುಟುಂಬ ವ್ಯವಸ್ಥೆಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯ ನಮ್ಮೆದುರಿಗಿಂದು ಮತ್ತೊಮ್ಮೆ ಬಂದು ನಿಂತಿದೆ ಎಂಬುದು ಕೂಡ ಸತ್ಯ ಸಂಗತಿಯೇ ಆಗಿದೆ.
ಕೌಟುಂಬಿಕ ವ್ಯವಸ್ಥೆಯ ಮಹತ್ವವನ್ನು ಜಾಗೃತಿಗೊಳಿಸುವ, ನಮ್ಮೆಲ್ಲರ ಮನದಾಳದಲ್ಲಿ ಕೌಟುಂಬಿಕತೆಯ ಭಾವವನ್ನು ಬಿತ್ತುವ ಪ್ರಯತ್ನಗಳನ್ನು ಜಾರಿಗೊಳಿಸ ಬೇಕಿದೆ. ನಮ್ಮ ಒಳ ಅಗತ್ಯಗಳನ್ನು ಪೂರೈಸಬಲ್ಲ, ನಮ್ಮತನವನ್ನು ಉಳಿಸಿಕೊಳ್ಳಲು ನೆರವಾಗಬಲ್ಲ, ಮಾನವೀಯ ಸಂಬಂಧಗಳನ್ನು ಪೋಷಿಸಬಲ್ಲ ನಮ್ಮ ನೆಲದ ಶ್ರೇಷ್ಠ ಅಸ್ಮಿತೆಯಾದ ಕೌಟುಂಬಿಕ ವ್ಯವಸ್ಥೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಮುಕ್ತ ಮನಸ್ಸಿನಿಂದ ಯೋಚಿಸಬೇಕಿದೆ. ವರ್ತಮಾನ ಬದಲಾಯಿಸಲು ಚರಿತ್ರೆಯ ಸಹಾಯ ಪಡೆಯ ಬೇಕು. ಇದು ವಿಲಕ್ಷಣವಾಗಿ ಕಂಡರೂ ಭರವಸೆ ಯದ್ದೇ ಆಗಿದೆ. ನಮ್ಮ ಸುತ್ತಣ ಪರಿಸರದಲ್ಲಿ ಸಂಭವಿಸುತ್ತಿರುವ ಎಲ್ಲ ವಿದ್ಯ ಮಾನಗಳ ಗಾಢ ಅರಿವಿನಲ್ಲಿ ಚಲನಶೀಲತೆಯ ಸಾಧ್ಯತೆಯೂ ಮತ್ತು ಖಚಿತತೆಯೂ ಇರುವ, ಘನವಾದ ಕೌಟುಂಬಿಕ ವ್ಯವಸ್ಥೆಯನ್ನು ಮರು ಸೃಷ್ಟಿಸಬೇಕಿದೆ.