ಶಿಕ್ಷಕರ ವರ್ಗಾವಣೆ: ಒಂದು ಕಿರುನೋಟ
ಒಡಲಾಳ
ರಾಘವೇಂದ್ರ ಈ.ಹೊರಬೈಲು
ತುಂಬಾ ಬೇಸರದಲ್ಲಿದ್ದಂತೆ ಕಾಣುತ್ತಿದ್ದ ನನ್ನ ಶಿಕ್ಷಕ ಮಿತ್ರರೊಬ್ಬರನ್ನು ಅದರ ಕಾರಣ ಕೇಳಿದಾಗ, ‘ಏನ್ ಮಾಡೋದು ಸರ್, ಸ್ವಂತ ಊರಿಂದ ಐನೂರು ಕಿ.ಮೀ. ಇರೋ ಈ ಊರಲ್ಲೇ ೧೯ ವರ್ಷದಿಂದ ಒಂದೇ ಶಾಲೇಲಿ ಇದ್ದೀನಿ. ಟ್ರಾನ್ಸ್ ಫರ್ ಮಾತ್ರ ಸಿಗ್ತಿಲ್ಲ. ಊರಲ್ಲಿ ವಯಸ್ಸಾಗಿರೋ ಅಪ್ಪ, ಹುಷಾರಿಲ್ದಿರೋ ಅಮ್ಮನನ್ನು ನೋಡಿಕೊಳ್ಳೋರು ಯಾರೂ ಇಲ್ಲದೆ, ನನಗೂ ವರ್ಗಾವಣೆಯಾಗದೆ ಜೀವನ ನರಕವಾಗಿಬಿಟ್ಟಿದೆ’ ಅಂದ್ರು.
ನನ್ನ ಈ ಮಿತ್ರರಂತೆ ಹತ್ತಾರು ವರ್ಷಗಳಾದರೂ ತಮ್ಮ ಊರಿನ ಸಮೀಪವಿರಲಿ, ಕನಿಷ್ಠ ತಮ್ಮ ಸ್ವಂತ ಜಿಲ್ಲೆಯೊಳಗೂ ವರ್ಗಾವಣೆಯಾಗಲು ಸಾಧ್ಯವಾಗದೆ, ವಯಸ್ಸಾಗಿರುವ ಮತ್ತು ಕಾಯಿಲೆಯಿಂದ ಬಳಲುತ್ತಿರುವ ಹೆತ್ತವರಿಂದ ದೂರ ವುಳಿದು ಪರಿತಪಿಸುತ್ತಿರುವ, ಖಿನ್ನತೆಗೊಳಗಾಗಿರುವ, ಅಷ್ಟೇಕೆ ಸಂಗಾತಿಯಿಂದ ವಿಚ್ಛೇದನಕ್ಕೆ ಒಳಗಾಗಿರುವ ಶಿಕ್ಷಕರ ಸಂಖ್ಯೆ ಅಪಾರ. ಅದರಲ್ಲೂ, ಹೊರಜಿಲ್ಲೆಗಳಲ್ಲಿರುವ ಪ್ರೌಢ ಶಾಲಾ ಶಿಕ್ಷಕರ ಪಾಡು ಹೇಳತೀರದು. ಶಿಕ್ಷಕರ ವರ್ಗಾವಣೆಯನ್ನು, ಜಿಲ್ಲೆಯೊಳಗೆ, ವಿಭಾಗ ದೊಳಗೆ ಮತ್ತು ವಿಭಾಗದ ಹೊರಗೆ ಎಂಬ ಮೂರು ಹಂತ ಗಳಲ್ಲಿ ನಡೆಸಲಾಗುತ್ತದೆ. ಪ್ರಸ್ತುತ ಒಟ್ಟು ವರ್ಗಾವಣಾ ಮಿತಿ ಶೇ.೧೫ರಷ್ಟು. ಅದರಲ್ಲಿ ಶೇ.೪ರಷ್ಟು ಎರಡು ವರ್ಷಕ್ಕೊಮ್ಮೆ ನಡೆಯುವ ವಲಯ ವರ್ಗಾವಣೆ. ಇನ್ನುಳಿದ ಶೇ.೧೧ರಲ್ಲಿ, ಜಿಲ್ಲಾ ಹಂತದ ವರ್ಗಾವಣೆಗೆ ಶೇ.೭, ವಿಭಾಗೀಯ ಹಂತಕ್ಕೆ ಶೇ.೨ ಮತ್ತು ವಿಭಾಗದಿಂದ ಹೊರಗೆ ಶೇ.೨ ಎಂದು ವಿಭಜಿಸಲಾಗಿದೆ.
ಪ್ರೌಢಶಾಲಾ ಶಿಕ್ಷಕರ ನೇಮಕಾತಿಯು ವಿಭಾಗ ಮಟ್ಟದಲ್ಲಿ ನಡೆಯುವುದರಿಂದ, ಒಂದು ವಿಭಾಗದ ಯಾವುದೇ ಜಿಲ್ಲೆಯಲ್ಲಿ ಪರೀಕ್ಷೆ ಬರೆದರೂ ಆ ವಿಭಾಗದ ಇನ್ನಾವುದೋ ಜಿಲ್ಲೆಯಲ್ಲಿ, ಅಂದರೆ ತವರು ಜಿಲ್ಲೆಗಿಂತ ಹೊರಜಿಲ್ಲೆಗಳಲ್ಲಿ ನೇಮಕವಾಗುವವರ ಸಂಖ್ಯೆಯೇ ಹೆಚ್ಚಿರುತ್ತದೆ. ಹಾಗಾಗಿ ತವರುಜಿಲ್ಲೆಗೆ ವರ್ಗಾವಣೆ ಬಯಸುವ ಶಿಕ್ಷಕರ ಸಂಖ್ಯೆಯೂ ಹೆಚ್ಚಿರುತ್ತದೆ. ಆಗ ವಿಭಾಗದೊಳಗಿನ ಕೇವಲ ಶೇ.೨ರಷ್ಟು ಮಿತಿ ತುಂಬಾ ಬೇಗ ಮುಗಿದುಹೋಗಿರುತ್ತದೆ. ಹತ್ತಾರುವರ್ಷಗಳಾದರೂ, ಬೇರೆ ಜಿಲ್ಲೆಯಿಂದ ತವರುಜಿಲ್ಲೆಗೆ ಹೋಗಬೇಕೆಂಬ ಪ್ರೌಢಶಾಲಾ ಶಿಕ್ಷಕರ ಕನಸು ಗಗನಕುಸುಮ ವಾಗುತ್ತದೆ. ಆದರೆ ಜಿಲ್ಲೆಯೊಳಗಿನ ಶೇ.೭ರ ಮಿತಿ ಪ್ರೌಢಶಾಲಾ ಶಿಕ್ಷಕರಿಗೆ ಖಾಲಿಯಾಗುವುದೇ ಇಲ್ಲ. ಇದನ್ನು ಉದಾಹರಣೆ ಸಹಿತ ನೋಡುವುದಾದರೆ, ಒಂದು ಜಿಲ್ಲೆ ಯೊಳಗೆ ೧,೦೦೦ ಶಿಕ್ಷಕರ ಹುದ್ದೆಗಳ ಮಂಜೂರಾತಿಯಾಗಿದ್ದರೆ, ವರ್ಗಾವಣೆಗೆ ೭೦ ಜನರಿಗೆ ಅವಕಾಶವಿದೆ.
ನೂರರಿಂದ ನೂರೈವತ್ತು ಜನ ಶಿಕ್ಷಕರು ಅರ್ಜಿ ಸಲ್ಲಿಸಬಹುದು. ಹೆಚ್ಚು ಕಡಿಮೆ, ಇಲ್ಲಿ ಅರ್ಜಿ ಸಲ್ಲಿಸಿರುವ ಎಲ್ಲರಿಗೂ ವರ್ಗಾವಣೆ ಯಾಗುವ ಅವಕಾಶವಿದೆ. ಎಷ್ಟೋ ಜಿಲ್ಲೆಗಳಲ್ಲಿ ೭೦ ಜನರಿಗೆ ಕೇವಲ ೪೦ ಜನ ವರ್ಗಾವಣೆ ಪಡೆದು, ಉಳಿದವರು ಪಡೆಯಲು ಇಚ್ಛಿಸದೆ ಶೇ.೩-೪ರಷ್ಟು ಮಿತಿ ಉಳಿದು ಹೋಗಿರುವ ಉದಾಹರಣೆ ಗಳಿವೆ. ಆದರೆ ವಿಭಾಗದೊಳಗಿನ ವರ್ಗಾವಣೆಗೆ ಕೇವಲ ಶೇ.೨ರಷ್ಟು ಮಿತಿ ಇರುವುದರಿಂದ, ಒಂದು ವಿಭಾಗದಲ್ಲಿ ಸರಿಸುಮಾರು ೧೦,೦೦೦ ಮಂಜೂರಾದ ಹುದ್ದೆಗಳಿದ್ದಲ್ಲಿ ೨೦೦ ಜನರಿಗೆ ಮಾತ್ರ ವರ್ಗಾವಣೆಯ ಅವಕಾಶ ಒದಗುತ್ತದೆ. ಇದರಲ್ಲಿ ಅರ್ಜಿ ಸಲ್ಲಿಸುವವರ ಸಂಖ್ಯೆಯೇ ಹತ್ತಿರ ಹತ್ತಿರ ಒಂದೂವರೆ ಸಾವಿರ. ೨೦೦ ಶಿಕ್ಷಕರು ವರ್ಗಾವಣೆ ಪಡೆದರೆ ಸಾವಿರದ ಮುನ್ನೂರರಷ್ಟು ಶಿಕ್ಷಕರು ವರ್ಗಾವಣೆಯಿಂದ ವಂಚಿತರಾಗುತ್ತಾರೆ.
ಈ ಪೈಕಿ ೫೦೦-೬೦೦ ಶಿಕ್ಷಕರು ಕನಿಷ್ಠ ಒಂದೇ ಶಾಲೆಯಲ್ಲಿ ಹತ್ತಾರು ವರ್ಷ ಸೇವೆ ಸಲ್ಲಿಸಿದವರಾಗಿರುತ್ತಾರೆ ಎಂಬುದೇ ಸೋಜಿಗ. ವಿಭಾಗದ ಹೊರಗಿನ ವರ್ಗಾವಣೆಯ ಮಿತಿಯೂ ಶೇ.೨ರಷ್ಟೇ ಆದರೂ, ತಮ್ಮ ವಿಭಾಗದ ಹೊರಗೆ ನೇಮಕ ವಾಗುವ ಶಿಕ್ಷಕರ ಸಂಖ್ಯೆ ತುಂಬಾ ಕಡಿಮೆ ಹಾಗೂ ವರ್ಗಾವಣೆ ಬಯಸುವವರ ಸಂಖ್ಯೆಯೂ ತೀರಾ ಕಡಿಮೆ. ಹಾಗಾಗಿ ಪ್ರಸಕ್ತ ನಿಯಮದ ಪ್ರಕಾರ, ಬೇಗನೆ ವರ್ಗಾವಣೆ ಯಾಗುವ ಅವಕಾಶ ವಿಭಾಗದ ಹೊರಗೆ ಹೋಗುವವರಿಗೂ ದೊರೆಯುತ್ತದೆ. ಇದರಲ್ಲಿ ಪದೇಪದೆ ಅವಕಾಶ ವಂಚಿತರಾಗಿ ಹಿಂದಿರುಗು ತ್ತಿರುವವರು ವಿಭಾಗದೊಳಗೆ ವರ್ಗಾವಣೆ ಬಯಸುವ ಪ್ರೌಢಶಾಲಾ ಶಿಕ್ಷಕರು. ಹಾಗಾಗಿ ಇವರ ವರ್ಗಾವಣಾ ಮಿತಿಯನ್ನು ಈಗಿರುವ ಜಿಲ್ಲೆಯೊಳಗಿನ ಮಿತಿಯನ್ನು ಶೇ.೫ಕ್ಕೆ ಇಳಿಸಿ, ವಿಭಾಗದೊಳಗಿನ ಮಿತಿಯನ್ನು ಶೇ.೨ರಿಂದ ಕನಿಷ್ಠಶೇ.೪ಕ್ಕೆ ಹೆಚ್ಚಿಸಿದರೆ ಖಂಡಿತ ಅನೇಕ ವರ್ಗಾವಣಾಕಾಂಕ್ಷಿ ಶಿಕ್ಷಕರಿಗೆ ಕೊನೇಪಕ್ಷ ೧೦ ವರ್ಷಗಳ ನಂತರವಾದರೂ ತವರುಜಿಲ್ಲೆಗೆ ತಲುಪುವ ಅವಕಾಶ ದೊರೆಯುತ್ತದೆ.
ಇದರ ಜತೆಗೆ ಹೆಚ್ಚುವರಿಯಾಗುವ ಶಿಕ್ಷಕರ ಪರಿಸ್ಥಿತಿಯೂ ತೀರಾ ಕಷ್ಟಕರವಾಗಿದೆ. ಬೇರೆ ಜಿಲ್ಲೆಯ ಶಿಕ್ಷಕರು ಹೆಚ್ಚುವರಿಯಾದಾಗ ಅವರು ಕಾರ್ಯನಿರ್ವಹಿಸುವ ತಾಲೂಕಿನಲ್ಲಿಯ ಇನ್ನೊಂದು ಶಾಲೆಗೆ ವರ್ಗಾವಣೆ ಪಡೆಯಲು ಮಾತ್ರ ಅವಕಾಶವಿದೆ. ಈ ವರ್ಷ ಸಾಮಾನ್ಯ ವರ್ಗಾವಣೆ ಹೊಂದಲು ಅವರಿಗೂ ಒಂದು ಅವಕಾಶ ಮಾಡಿಕೊಡಲಾಗಿತ್ತು. ಆದರೆ ಈಗ ವರ್ಗಾವಣೆ ದೊರೆಯದಿದ್ದರೆ ಇನ್ನು ೩ ವರ್ಷ ಅವರು ವರ್ಗಾವಣೆಗೆ ಅರ್ಜಿ ಸಲ್ಲಿಸಲೂ ಅರ್ಹರಲ್ಲ.  ಹೆಚ್ಚುವರಿ ಯೆಂಬುದು ಶಿಕ್ಷಕರು ಬಯಸಿ ಪಡೆದ ಕೋರಿಕೆ ವರ್ಗಾವಣೆಯಲ್ಲ, ಹಾಗಾಗಿ ಹೆಚ್ಚುವರಿಯಾಗುವ ಸಂದರ್ಭದಲ್ಲಿಯೇ ಅವರು ಇಷ್ಟಪಡುವ ಜಿಲ್ಲೆಗೆ ವರ್ಗಾವಣೆ ಮಾಡಿದರೆ ಅವರಿಗೂ ಅನುಕೂಲವಾಗುತ್ತದೆ.
ಈ ವರ್ಷದ ವರ್ಗಾವಣೆಯಲ್ಲಿ ರಾಜ್ಯದ ೪೬ ತಾಲೂಕುಗಳನ್ನು ಮುಂದುವರಿದವೆಂದೂ, ಉಳಿದ ೧೬೪ ತಾಲೂಕು ಗಳನ್ನು ಹಿಂದುಳಿದವೆಂದೂ ವಿಭಾಗಿಸಿ, ಕನಿಷ್ಠ ೧೦ ವರ್ಷ ಒಂದೇ ತಾಲೂಕಿನಲ್ಲಿ ಅಥವಾ ಕನಿಷ್ಠ ೧೫ ವರ್ಷ ಒಂದೇ ತಾಲೂಕಿನ ವಿವಿಧ ವೃಂದಗಳಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರು ಮುಂದುವರಿದ ೪೬ ತಾಲೂಕಿನಿಂದ ಹೊರಗಡೆ ವರ್ಗಾವಣೆ ಪಡೆಯಲು ಶೇಕಡಾ ಮಿತಿಯು ಅನ್ವಯವಾಗುವುದಿಲ್ಲ ಎಂಬ ನಿಯಮವಾಗಿದೆ. ಇದರಿಂದ ಕೇವಲ ಆ ೪೬ ತಾಲೂಕಿನ ಶಿಕ್ಷಕರಿಗೆ ಅನುಕೂಲವಾಗುತ್ತದೆ. ಅದರ ಬದಲು, ೧೦ ವರ್ಷ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿದ ಎಲ್ಲಾ ಶಿಕ್ಷಕರಿಗೂ ಈ ನೀತಿ ಅನ್ವಯವಾದರೆ, ಶಿಕ್ಷಕರಿಗೂಅನುಕೂಲವಾಗುತ್ತದೆ ಮತ್ತು ಆ ತಾಲೂಕಿಗೆ ಶಿಕ್ಷಕರ ಕೊರತೆ ಅಷ್ಟೇನೂ ಕಾಡುವುದಿಲ್ಲ.
ಸ್ವಂತ ಊರಿನಿಂದ ಸುಮಾರು ೨೫೦ ಕಿ.ಮೀ. ಅಥವಾ ಅದಕ್ಕಿಂತ ಹೆಚ್ಚಿ ದೂರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಕನಿಷ್ಠ ೧೦ ವರ್ಷಗಳ ಸೇವೆಯ ನಂತರ ವಿಶೇಷ ಆದ್ಯತೆಯಲ್ಲಿ ವರ್ಗಾವಣೆಯನ್ನು ನೀಡಿ, ಕನಿಷ್ಠ ತಮ್ಮ ತವರುಜಿಲ್ಲೆಯನ್ನಾದರೂ ತಲುಪಲು ಅವಕಾಶ ಮಾಡಿಕೊಡುವಂತಾಗಬೇಕು. ಸಾಧ್ಯವಾದಷ್ಟು ಪ್ರತಿವರ್ಷ ವರ್ಗಾವಣೆ ನಡೆದರೂ ಸುಮಾರು ಶಿಕ್ಷಕರು ವರ್ಗಾವಣೆ ಭಾಗ್ಯ ಪಡೆಯುತ್ತಾರೆ. ತೀವ್ರತರ ಕಾಯಿಲೆ, ಅಂಗವೈಕಲ್ಯದಿಂದ ಬಳಲುತ್ತಿರುವವರಿಗೆ ಶೇಕಡಾ ಮಿತಿಯಿಂದ ಹೊರ ಗಿಟ್ಟಂತೆ ದಂಪತಿ ಪ್ರಕರಣದವರನ್ನು ಹೊರಗಿಟ್ಟು ವರ್ಗಾವಣೆ ನಡೆಸಿದರೂ ಅನೇಕ ಸಾಮಾನ್ಯಶಿಕ್ಷಕರಿಗೆ ವರ್ಗಾವಣೆ ಭಾಗ್ಯ ದೊರೆಯುತ್ತದೆ.ಇವಿಷ್ಟೇ ಅಲ್ಲದೆ ಇನ್ನೂ ಅನೇಕ ರೀತಿಯ ಸಮಸ್ಯೆಗಳು ಶಿಕ್ಷಕರ ವರ್ಗಾವಣೆಯಲ್ಲಿವೆ.
ಇಲಾಖೆಯೂ ಹಂತಹಂತ ವಾಗಿ ಸಮಸ್ಯೆಗಳನ್ನು ಪತ್ತೆಹಚ್ಚಿ ಬಗೆಹರಿಸುತ್ತಾ, ಶಿಕ್ಷಕರಿಗೆ ಅನುಕೂಲ ಮಾಡಿಕೊಡುವ ಹೆಜ್ಜೆ ಇಟ್ಟಿದೆ. ಹಿಂದಿನ ವರ್ಷಗಳ ಸುಮಾರು ಸಮಸ್ಯೆಗಳು ಈ ವರ್ಷ ಬಗೆಹರಿದಿವೆ. ಅತ್ಯಂತ ಪಾರದರ್ಶಕವಾಗಿ ಕೌನ್ಸಿಲಿಂಗ್ ಮೂಲಕ ನಡೆಯುವ ಶಿಕ್ಷಕರ ವರ್ಗಾವಣೆಗೆ ಶಿಸ್ತುಬದ್ಧತೆಯಿದೆ. ಅದರ ಹೊರತಾಗಿ ಸದ್ಯದ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಿ, ಶಿಕ್ಷಕರ ಹಿತ ಕಾಯುವ ಕಾರ್ಯವನ್ನು ಸರಕಾರ ಹಾಗೂ ಇಲಾಖೆ ಖಂಡಿತಾ ಮಾಡುತ್ತವೆ ಎಂಬುದು ವರ್ಗಾವಣೆಗಾಗಿ ಅನೇಕ ವರ್ಷಗಳಿಂದ ಚಾತಕಪಕ್ಷಿಯಂತೆ ಕಾದು ಕುಳಿತ ಶಿಕ್ಷಕರ ಆಶಾಭಾವನೆಯಾಗಿದೆ.