ಸಾಕಾರಗೊಳ್ಳುತ್ತಿರುವ ಭ್ರಷ್ಟಾಚಾರರಹಿತ ಆಡಳಿತದ ಕಲ್ಪನೆ
ವಿಶ್ಲೇಷಣೆ
ಗಣೇಶ್ ಭಟ್, ವಾರಣಾಸಿ
ಭ್ರಷ್ಟಾಚಾರವಿಲ್ಲದೆಯೇ ಭಾರತದಲ್ಲಿ ರಾಜಕೀಯ ಮಾಡುವುದು, ಹಣ ಚೆಲ್ಲದೇ ಚುನಾವಣೆಗಳನ್ನು ಗೆಲ್ಲುವುದು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಭಾರತದಲ್ಲಿ ನಿರ್ಮಾಣವಾಗಿತ್ತು. ಬಹುತೇಕ ರಾಜಕೀಯ ನಾಯಕರು ರಾಜಕೀಯಕ್ಕೆ ಬರುವ ಉದ್ದೇಶವೇ ಹಣ ಮಾಡುವುದು ಎಂದಾಗಿದೆ. ದೇಶದ ಮೊದಲ ಪ್ರಧಾನಿಪಂಡಿತ್ ನೆಹರೂ ಅವರ ಸರಕಾರವು ೧೯೪೮ ರ ಜೀಪ್ ಖರೀದಿ ಹಗರಣದ ಆರೋಪವನ್ನೇ ಎದುರಿಸ ಬೇಕಾಯಿತು.
ಇಂದಿರಾಗಾಂಧಿ ಮೇಲೆ ಚುನಾವಣಾ ಅಕ್ರಮ ಹಗರಣವು ಕೋರ್ಟಿನಲ್ಲಿ ಸಾಬೀತಾಗಿತ್ತು ಹಾಗೂ ಇಂಧನ ಖರೀದಿ ಹಗರಣಗಳ ಆರೋಪವೂ ಆಕೆಯ ಮೇಲಿತ್ತು. ರಾಜೀವ್ ಗಾಂಧಿಯವರು ಭಾರತದ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಕನಸನ್ನು ಹೊಂದಿದ್ದರು ಹಾಗೂ ಅವರು ಸರಕಾರವು ಜನರಿಗಾಗಿ ಖರ್ಚು ಮಾಡುವ ಪ್ರತೀ ರುಪಾಯಿ ಯಲ್ಲಿ ಕೇವಲ ೧೫ ಪೈಸೆ ಮಾತ್ರ ಫಲಾನುಭವಿಗಳನ್ನು ಸೇರುತ್ತಿದೆ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದರು. ಆದರೆ ಅಂತಹ ರಾಜೀವ್ ಗಾಂಧಿಯವರೇ ಬೋಫೋರ್ಸ್ ಫಿರಂಗಿ ಖರೀದಿಯ ಹಗರಣದಲ್ಲಿ ಹೆಸರು ಕೆಡಿಸಿಕೊಂಡರು.
ಭಾರತದ ಆರ್ಥಿಕ ಉದಾರೀಕರಣದ ಹರಿಕಾರ ಪಿ.ವಿ.ನರಸಿಂಹರಾಯರ ಮೇಲೂ ವೋಟಿಗಾಗಿ ನೋಟು, ಸೈಂಟ್ ಕಿಟ್ಸ್ ಹಾಗೂ ಲಖೂ ಬಾಯಿ ಪಾಠಕ್ ವಂಚನೆಯ ಆರೋಪಗಳಿದ್ದವು. ೨೦೦೪ ರಿಂದ ೨೦೧೪ ರ ವರೆಗಿನ ಯುಪಿಎ ಸರಕಾರದ ಅವಽಯಲ್ಲಿ ನಡೆದ ಭ್ರಷ್ಟಾಚಾರಕ್ಕೆ ಮಿತಿಯಿಲ್ಲ. ೧೦ ವರ್ಷಗಳ ಅವಧಿಯಲ್ಲಿ ೨ಜಿ ಸ್ಪೆಕ್ಟ್ರಂ ಹಗರಣ, ಕಾಮನ್ವೆಲ್ತ ಗೇಮ್ಸ್ ಹಗರಣ, ಕಲ್ಲಿದ್ದಲು ಹಗರಣ… ಹೀಗೆ ಹಗರಣಗಳ ಮೇಲೆ ಹಗರಣಗಳು ನಡೆದರೂ ಮನಮೋಹನ್ ಸಿಂಗ್ ಮೂಕಪ್ರೇಕ್ಷಕರಾಗಿಯೇ ಉಳಿದರು. ಹೆಚ್ಚೇಕೆ, ಭ್ರಷ್ಟಾಚಾರದ ವಿರುದ್ಧದ ಆಂದೋಲನವನ್ನೇ ತನ್ನ ರಾಜಕೀಯ ಉನ್ನತಿಯ ಮೆಟ್ಟಿಲನ್ನಾಗಿಸಿ ದೆಹಲಿಯ ಮುಖ್ಯಮಂತ್ರಿಯಾದ ಕೇಜ್ರೀವಾಲರ ಆಮ್ ಆದ್ಮಿ ಪಕ್ಷದ ದೆಹಲಿ ಸರಕಾರದ ಉಪಮುಖ್ಯಮಂತ್ರಿ ಮನೀಶ್ ಸಿಸೋ ದಿಯಾ ಹಾಗೂ ಸತ್ಯೇಂದ್ರ ಜೈನ್ ಗುರುತರವಾದ ಭ್ರಷ್ಟಾಚಾರದ ಆರೋಪ ದೊಂದಿಗೆ ಜೈಲು ಸೇರಬೇಕಾಯಿತು.
ಇಂಥ ಸನ್ನಿವೇಶಗಳಲ್ಲಿ, ೨೦೦೧ ರಿಂದ ೨೦೧೪ ರ ವರೆಗಿನ ೧೩ ವರ್ಷಗಳ ಕಾಲದ ಗುಜರಾತ್ ಮುಖ್ಯಮಂತ್ರಿ ಪದವಿಯನ್ನು ಹಾಗೂ ೨೦೧೪ ರ ನಂತರದ ೯ ವರ್ಷಗಳ ಅವಧಿಯಲ್ಲಿ ಯಾವುದೇ ಕಳಂಕವಿಲ್ಲದೆ ಪ್ರಧಾನ ಮಂತ್ರಿ ಪದವಿ ಯನ್ನು ನರೇಂದ್ರ ಮೋದಿಯವರು ನಿರ್ವಹಿಸಿದ್ದಾರೆ ಎಂದರೆ ಭಾರತದ ರಾಜಕಾರಣದಲ್ಲಿ ಅದೊಂದು ಅದ್ಭುತವಾದ ಸಾಧನೆಯೇ. ನರೆಂದ್ರ ಮೋದಿಯವರು ‘ನ ಖಾವೂಂಗಾ, ನ ಖಾನೇ ದೂಂಗಾ(ತಾನು ಲಂಚ ತಿನ್ನುವುದಿಲ್ಲ, ಇತರರು ಲಂಚ ತಿನ್ನಲು ಬಿಡುವುದೂ ಇಲ್ಲ)’ ಎನ್ನುವ ಘೋಷವಾಕ್ಯದೊಂದಿಗೇ ಅಧಿಕಾರಕ್ಕೆ ಬಂದರಾದರೂ ಈ ಮಾತು ಗಳನ್ನು ಉಳಿಸಿಕೊಳ್ಳಲು ಅವರು ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತಾರೆ ಎಂಬುದರ ಬಗ್ಗೆ ಜನರಲ್ಲಿ ಸಂಶಯವಿತ್ತು.
ಏಕೆಂದರೆ ಭಾರತದ ರಾಜಕೀಯ ವ್ಯವಸ್ಥೆ ಅಷ್ಟೂ ಕೆಟ್ಟು ಹೋಗಿತ್ತು. ಆದರೆ ಕಳೆದ ೯ ವರ್ಷಗಳ ಆಡಳಿತದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಂಡ ನರೇಂದ್ರ ಮೋದಿ ಮತದಾರರು ತನ್ನ ಮೇಲೆ ಇಟ್ಟಿದ್ದ ಭರವಸೆಯನ್ನು ಉಳಿಸಿಕೊಂಡಿದ್ದಾರೆ. ಇಂದು ಬಿಜೆಪಿಯ ಕಟ್ಟರ್ ವಿರೋಧಿಗಳು ಕೂಡಾ ಮೋದಿ ಸರಕಾರದ ಬಗ್ಗೆ, ಅವರ ಮಂತ್ರಿಗಳ ಪ್ರಾಮಾಣಿಕತೆಯ ಬಗ್ಗೆ ಎರಡು ಮಾತನಾಡಲು ಸಾಧ್ಯವಿಲ್ಲ. ಇದರ ಪರಿಣಾಮವಾಗಿ ನರೇಂದ್ರ ಮೋದಿ ದೇಶದ ಅತ್ಯಂತ ಜನಪ್ರಿಯ ನಾಯಕನ ಪಟ್ಟವನ್ನು ಉಳಿಸಿಕೊಳ್ಳುತ್ತಲೇ ಹೋದರು. ಜಾಗತಿಕ ನಾಯಕರ ಜನಪ್ರಿಯತೆಯನ್ನು ಕಾಲಕಾಲಕ್ಕೆ ಅಳತೆ ಮಾಡಿ ಪ್ರಕಟಿಸುವ ಅಮೇರಿಕದಮಾರ್ನಿಂಗ್ ಕನ್ಸಲ್ಟ ಎನ್ನುವ ಸಂಸ್ಥೆಯು ಈ ವರ್ಷದ ಫೆಬ್ರವರಿ ತಿಂಗಳಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ೭೮% ಜನರ ಅನುಮೋದನೆಯನ್ನು ಪಡೆದ ನರೇಂದ್ರ ಮೋದಿ ಜಾಗತಿಕವಾಗಿ ಅತೀ ಹೆಚ್ಚು ಜನಪ್ರಿಯ ರಾಜಕೀಯ ನಾಯಕನಾಗಿ ಹೊರ ಹೊಮ್ಮಿದ್ದಾರೆ.
೨೦೧೪ ರ ವರೆಗೆ ನಡೆದ ಪ್ರತೀ ಲೋಕಸಭಾ ಚುನಾವಣೆ ಗಳಲ್ಲಿ ವಿರೋಧ ಪಕ್ಷಗಳಿಗೆ ಆಡಳಿತ ಪಕ್ಷದ ಭ್ರಷ್ಟಾಚಾರವು ಪ್ರಮುಖ ರಾಜಕೀಯ ವಿಚಾರ ಗಳಾಗಿದ್ದವು. ಆದರೆ ೨೦೧೯ ರ ಚುನಾವಣೆಯಲ್ಲಿ ಭ್ರಷ್ಟಾಚಾರದ ವಿಚಾರದಲ್ಲಿ ಕೇಂದ್ರ ಸರಕಾರವನ್ನು ಮೂಲೆಗೊತ್ತಲು ವಿಪಕ್ಷಗಳಿಗೆ ವಿಷಯಗಳೇ ಇರಲಿಲ್ಲ. ರಫೆಲ್ ವಿಮಾನಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ವಿಪಕ್ಷಗಳು ಸುಳ್ಳು ಆರೋಪ ಗಳನ್ನು ಮಾಡಿದವಾದರೂ, ಸುಪ್ರೀಂ ಕೋರ್ಟ್ ರಫೆಲ್‌ನಲ್ಲಿಯಾವುದೇ ಅವ್ಯವಹಾರ ಇಲ್ಲ ಅಂತ ತೀರ್ಪನ್ನು ಕೊಟ್ಟಿತು.
ಚೌಕೀದಾರ್ ಚೋರ್ ಹೈ ಎಂದು ಮೋದಿಯನ್ನು ಟೀಕಿಸಿದ್ದ ರಾಹುಲ್ ಗಾಂಧಿ ಕೊನೆಗೆ ಕೋರ್ಟಿನಲ್ಲಿ ಕ್ಷಮೆಯನ್ನು ಕೇಳಬೇಕಾಯಿತು. ಈ ವರ್ಷದ ಆರಂಭದಲ್ಲಿ ಹಿಂಡೆನ್ಬರ್ಗ್ ಹೆಸರಿನ ಅಮೇರಿಕದ ಶಾರ್ಟ್ ಸೆಲ್ಲರ್ ಸಂಸ್ಥೆಯು ಅದಾನಿ ಸಂಸ್ಥೆಯು ಅವ್ಯವಹಾರವನ್ನು ನಡೆಸಿದೆ ಎಂಬ ವರದಿಯನ್ನು ಪ್ರಕಟಿಸಿದಾಗ ವಿರೋಧ ಪಕ್ಷಗಳು ಅದಾನಿ ಹಾಗೂ ನರೇಂದ್ರ ಮೋದಿಯವರ ನಡುವೆ ಕಾಲ್ಪನಿಕ ಸಂಬಂಧವನ್ನು ಚಿತ್ರಿಸಿ ಮೋದಿಯವರನ್ನು ದಾಳಿ ಮಾಡಿದವು. ಹಿಂಡೆನ್ಬರ್ಗ್ವರದಿಯ ಸತ್ಯಾಸತ್ಯತೆಯನ್ನು ತಿಳಿಯಲು ಸುಪ್ರೀಂ ಕೋರ್ಟ್ ರಚಿಸಿದ ಸಮಿತಿಯು ಅದಾನಿ ಸಂಸ್ಥೆಯು ಕಾನೂನುಬದ್ಧವಾಗಿಯೇ ವ್ಯವಹಾರವನ್ನು ನಡೆಸಿದೆ ಎಂದು ವರದಿಯನ್ನು ಕೊಟ್ಟಿತು.
ಇದರೊಂದಿಗೆ ಹಿಂಡೆನ್ಬರ್ಗ್ ವರದಿ ಇಟ್ಟುಕೊಂಡು ಮೋದಿಗೆ ಕಳಂಕವನ್ನು ಹಚ್ಚುವ ವಿಪಕ್ಷಗಳ ಮತ್ತೊಂದು ಪ್ರಯತ್ನವೂ ವಿಫಲವಾಯಿತು. ಪ್ರಸ್ತುತ ಕೇಂದ್ರ ಸರಕಾರವು ಸರಕಾರೀ ಸೌಲಭ್ಯಗಳು, ಸಹಾಯಧನಗಳು, ಪಿಂಚಣಿ, ವಿದ್ಯಾರ್ಥಿ ವೇತನ ಮೊದಲಾದವುಗಳು ಸ್ವಲ್ಪವೂ ಸೋರಿಕೆಯಾಗದೆ ಫಲಾನುಭವಿಗಳನ್ನುನೇರವಾಗಿ ತಲುಪುವಂತೆ ಮಾಡಲು ಡಿಜಿಟಲ್ ಮಾಧ್ಯಮ ವನ್ನು ಬಳಸಿದೆ. ಫಲಾನುಭವಿಯ ಬ್ಯಾಂಕ್ ಖಾತೆ, ಆಧಾರ್ ಹಾಗೂ ಮೊಬೈಲ್ ನಂಬರ್‌ಗಳನ್ನು ಬೆಸೆದ ಜೆಎಎಂ ವ್ಯವಸ್ಥೆಯಡಿ ಸರಕಾರವು ೩೧೨ ವಿವಿಧ ಯೋಜನೆಗಳಡಿಯಲ್ಲಿ ಬಿಡುಗಡೆ ಮಾಡಿದ ಧನವು ಜನರನ್ನು ನೇರವಾಗಿ ತಲುಪುತ್ತದೆ. ಪ್ರತೀ ದಿನ ವಿವಿಧ ಯೋಜನೆಗಳ ಅಡಿಯಲ್ಲಿ ಸುಮಾರು ೨೫ ಲಕ್ಷ ಫಲಾನುಭವಿಗಳ ಖಾತೆಗಳಿಗೆ ನೇರ ಸಹಾಯಧನವು ಲಭಿಸುತ್ತದೆ.
ಡಿಜಿಟಲ್ ಇಂಡಿಯಾ ಯೋಜನೆಯು ಜಾರಿಯಾದ ನಂತರ ಇದುವರೆಗೆ ೩೦.೫೭ ಲಕ್ಷ ಕೋಟಿ ರುಪಾಯಿಗಳು ಡಿಬಿಟಿ ಮುಖಾಂತರ ಅರ್ಹ ಹಾಗೂ ಬಡ ಫಲಾನುಭವಿಗಳ ಬ್ಯಾಂಕ್ ಖಾತೆಗಳನ್ನು ಸೇರಿವೆ. ಪ್ರತೀ ನಾಲ್ಕು ತಿಂಗಳಿಗೊಮ್ಮೆ ೨೦೦೦ ರುಪಾಯಿ ಗಳಂತೆ ಪ್ರತೀವರ್ಷ ೧೧.೨೫ ಕೋಟಿ ರೈತರ ಖಾತೆಗಳಿಗೆ ತಲಾ ೬೦೦೦ ರುಪಾಯಿಯಷ್ಟು ಪ್ರಧಾನ್ ಮಂತ್ರಿ ಕೃಷಿ ಸಮ್ಮಾನ್ ನಿಧಿಯು ವರ್ಗಾಯಿಸಲ್ಪಡುತ್ತದೆ. ನೇರ ಖಾತೆಗೆ ಹಣ ವರ್ಗಾವಣಾ ವ್ಯವಸ್ಥೆಯಿಂದಾಗಿ ಸರಕಾರದ ಸುಮಾರು ೨.೭೩ ಲಕ್ಷ ಕೋಟಿ ರುಪಾಯಿಗಳಷ್ಟು ಹಣವು ಮದ್ಯವರ್ತಿ ಗಳಿಗೆ ಸೋರಿಕೆಯಾಗುವುದು ನಿಂತು ಹೋಗಿದೆ ಎಂದುಅಂದಾಜಿಸಲಾಗಿದೆ. ರಸಗೊಬ್ಬರಗಳ ವಿತರಣೆಯು ಖರೀದಿ ದಾರನ ಆಧಾರ್‌ನ ಜೋಡಣೆಯ ಮೂಲಕವಾಗುತ್ತಿರುವುದರಿಂದ ಸರಕಾರದಿಂದ ಭಾರೀ ಸಬ್ಸಿಡಿಯನ್ನು ಗಳಿಸುತ್ತಿರುವ ರಸಗೊಬ್ಬರಗಳು ಕಳ್ಳಮಾರುಕಟ್ಟೆಯಲ್ಲಿ ಮಾರಾಟ ವಾಗುವುದು ನಿಂತುಹೋಗಿ ರೈತರಿಗೆ ಸಕಾಲದಲ್ಲಿ ಲಭಿಸುತ್ತಿವೆ.
ಉದ್ಯಮ ದಾರರು ಮಾಡುತ್ತಿದ್ದ ಸಾಲವಂಚನೆಯನ್ನು ತಡೆಗಟ್ಟಲು ನರೇಂದ್ರ ಮೋದಿ ಸರಕಾರವು ಇನ್ಸಾಲ್ವೆನ್ಸಿ ಆಂಡ್ ಬ್ಯಾಂಕ್ರಪ್ಟಸಿ ಕೋಡ್ ಎನ್ನುವ ಕಾಯಿದೆಯನ್ನು(ದಿವಾಳಿ ಕಾಯಿದೆ) ೨೦೧೬ ರಲ್ಲಿ ಜಾರಿಗೆ ತಂದಿತು. ಈ ಕಾನೂನಿನ ಅನ್ವಯ ದಿವಾಳಿ ಎಂದು ಘೋಷಿಸಲ್ಪಡುವ ಉದ್ಯಮವನ್ನುಸರಕಾರವು ತನ್ನ ವಶಕ್ಕೆ ತೆಗೆದುಕೊಂಡು ಇತರ ಸಂಸ್ಥೆಗಳಿಗೆ ಮಾರಾಟ ಮಾಡಿ ಬ್ಯಾಂಕ್‌ಗಳಿಗೆ ಸಾಲದ ಮೊತ್ತವನ್ನು ಮರುಪಾವತಿ ಮಾಡಲು, ಹೂಡಿಕೆದಾರರ ಹಾಗೂ ಶೇರುದಾರರ ಹಣವನ್ನು ಹಿಂದಿರುಗಿಸಲು ಮತ್ತು ಸಂಸ್ಥೆಯ ಉದ್ಯೋಗಿಗಳ ವೇತನವನ್ನು ಪಾವತಿಸಲು ಅವಕಾಶವಿದೆ.
ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಮುಂತಾದ ಉದ್ಯಮಿಗಳು ಭಾರೀ ಸಾಲ ಮಾಡಿ ಬ್ಯಾಂಕು ಗಳಿಗೆ ಮೋಸ ಮಾಡಿ ವಿದೇಶಗಳಿಗೆ ಪಲಾಯನ ಮಾಡಿದರು.ಆರ್ಥಿಕ ಅಪರಾಧಗಳನ್ನೆಸಗಿ ಬೇರೆದೇಶಗಳಿಗೆ ಓಡಿಹೋಗುವ ಇಂತಹ ಅಪರಾಧಿಗಳನ್ನು ದೇಶದ ಕಾನೂನಿನ ಕಟಕಟೆಗೆ ತರಲು-ಗ್ಯುಟಿವ್ಎಕನೋಮಿಕ್ಅ-ಂಡರ್ಸ್ಆಕ್ಟ್ (ಪಲಾಯನ ಮಾಡುವ ಆರ್ಥಿಕ ಅಪರಾಽಗಳ ವಿರುದ್ಧದಕಾಯಿದೆ) ಅನ್ನು ೨೦೧೮ ರಲ್ಲಿ ಜ್ಯಾರಿಗೆ ತರಲಾಯಿತು.
ವಿದೇಶಗಳಿಗೆ ಪರಾರಿಯಾಗುವ ಆರ್ಥಿಕ ಅಪರಾಧಿಗಳು ವಿದೇಶಗಳಲ್ಲಿ ಮಾಡಿಕೊಂಡಿರುವ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶವನ್ನು ಈ ಕಾನೂನು ಕಲ್ಪಿಸು ತ್ತದೆ. ಈ ಕಾನೂನಿನ ಪ್ರಕಾರ ವಿದೇಶಗಳಲ್ಲಿ ತಲೆಮರೆಸಿ ಕೊಂಡಿರುವ ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಮೊದಲಾದವರ ವಿದೇಶಗಳಲ್ಲಿರು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಬ್ಯಾಂಕ್ ಸಾಲಗಳನ್ನು ವಸೂಲಿ ಮಾಡಲಾಗುತ್ತಿದೆ. ಈ ಮೂವರ ಆಸ್ತಿಗಳನ್ನು ಮಾರಾಟ ಮಾಡಿ ೧೮೦೦೦ ಕೋಟಿ ರುಪಾಯಿಗಳನ್ನು ವಸೂಲಿ ಮಾಡಲಾಗಿದೆ. ಭಾರತದ ಸಂಪತ್ತನ್ನು ವಿದೇಶಗಳಿಗೆ ಅಕ್ರಮವಾಗಿ ಸಾಗಿಸಿ ಅಲ್ಲಿ ಹೂಡಿಕೆ ಮಾಡಲಾಗಿರುವು ದನ್ನು ಪ್ರಿವೆನ್ಷನ್ ಆಫ್ ಮನಿಲಾಂಡರಿಂಗ್ ಆಫ್ ಮೂಲಕ ಅಪರಾಧವೆಂದು ಸಾಬೀತುಪಡಿಸಿ, ವಶಪಡಿಸಿಕೊಳ್ಳಲಾಗಿದೆ.
ಇನ್ಸಾಲ್ವೆನ್ಸಿ ಹಾಗೂ ಬ್ಯಾಂಕ್ರಪ್ಟಿ ಕೋಡ್ ಕಾನೂನನ್ನು ಬಳಸಿ ದಿವಾಳಿಯೆಂದು ಘೋಷಿಸಿಕೊಂಡಿದ್ದ ಭೂಷಣ್ ಸ್ಟೀಲ್ಸ್ ಸಂಸ್ಥೆಯನ್ನು ಸರಕಾರವು ಟಾಟಾ ಸಂಸ್ಥೆಗೆ ಮಾರಾಟ ಮಾಡಿ ೩೫,೨೦೦ ಕೋಟಿ ರುಪಾಯಿಗಳ ಬ್ಯಾಂಕ್ ಸಾಲವನ್ನು ಮರುಪಾವತಿ ಮಾಡಿದೆ. ಎಲೆಕ್ಟ್ರೋ ಸ್ಟೀಲ್ ಸಂಸ್ಥೆಯನ್ನು ವೇದಾಂತ ಸಂಸ್ಥೆಗೆ ಮಾರಾಟ ಮಾಡಿ ೫೩೦೦ ಕೋಟಿ ಬ್ಯಾಂಕ್ ಸಾಲವನ್ನು ಮರುಪಾವತಿ ಮಾಡಲಾಗಿದೆ. ಎಸ್ಸಾರ್ ಸ್ಟೀಲ್ಸ್ ಸಂಸ್ಥೆಯ ೫೦ ಸಾವಿರ ಕೋಟಿ ರುಪಾಯಿಗಳಕೆಟ್ಟ ಸಾಲವನ್ನು ಮರುಪಾವತಿ ಮಾಡಿಕೊಳ್ಳಲಾಗಿದೆ.
ಕಳೆದ ೯ ವರ್ಷಗಳಲ್ಲಿ ನಾನ್ ಪರ್ಫಾರ್ಮಿಂಗ್ ಅಸೆಟ್ಸ್ (ಎನ್ ಪಿಎ), ರೈಟ್ ಆಫ್ ಮಾಡಲಾದ ಸಾಲಗಳೇ ಮೊದಲಾದ ಕೆಟ್ಟ ಸಾಲಗಳಲ್ಲಿ ೧೦.೧೬ ಲಕ್ಷ ಕೊಟಿರುಪಾಯಿಗಳನ್ನು ವಸೂಲಿ ಮಾಡಲಾಗಿದೆ ಎಂದು ಕೇಂದ್ರದ ವಿತ್ತರಾಜ್ಯ ಸಚಿವರಾದ ಡಾ.ಭಾಗ್ವತ್ ಕೃಷ್ಣರಾವ್ ಕರಾಡ್ ಅವರು ೨೭/೦೭/೨೦೨೩ ರಂದು ಲಿಖಿತವಾಗಿ ಲೋಕಸಭೆಗೆ ತಿಳಿಸಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಕೆಟ್ಟ ಸಾಲಗಳನ್ನು ವಸೂಲಿಮಾಡುವಲ್ಲಿ ಇನ್ಸಾಲ್ವೆನ್ಸಿ ಆಂಡ್ ಬ್ಯಾಂಕ್ರಪ್ಟಿ ಕೋಡ್ (ಐಬಿಸಿ) ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ಅವರು ಹೇಳಿದ್ದಾರೆ. ಬ್ಯಾಂಕುಗಳು ವಸೂಲಿಯಾಗದ ಸಾಲಗಳನ್ನು ತಾಂತ್ರಿಕವಾಗಿ ಪ್ರತ್ಯೇಕವಾಗಿ ತೋರಿಸುವ ಪ್ರಕ್ರಿಯೆಯನ್ನು ರೈಟ್ ಆಫ್ ಎಂದು ಕರೆಯಲಾಗುತ್ತದೆ.
ಆದರೆ ರೈಟ್ ಆಫ್ ಎಂದು ಪ್ರತ್ಯೇಕವಾಗಿ ತೋರಿಸಲಾದ ಸಾಲಕ್ಕೆ ಮರುಪಾವತಿಯಿಂದ ವಿನಾಯಿತಿಯೇನೂ ಇಲ್ಲ. ಅವು ಗಳನ್ನೂ ಸರಕಾರ ವಸೂಲಿ ಮಾಡಿಯೇ ಮಾಡುತ್ತದೆ. ಬ್ಯಾಂಕುಗಳು ರೈಟ್ ಆಫ್ ಮಾಡಿದ ಸಾಲಗಳಲ್ಲಿ ೧,೭೭,೫೮೪ ಕೊಟಿ ರುಪಾಯಿಗಳು ೨೦೧೭ ಹಾಗೂ ೨೦೨೨ ರ ನಡುವಿನಅವಽಯಲ್ಲಿ ವಸೂಲಾಗಿವೆ. ಆದರೆ ವಿರೋಧ ಪಕ್ಷಗಳು ರೈಟ್ ಆಫ್ ಎಂದರೆ ಉದ್ಯಮಿಗಳ ಸಾಲ ಮನ್ನಾ ಎಂದು ಸುಳ್ಳು ಹೇಳಿ ಜನಸಾಮಾನ್ಯರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿವೆ.
ಆರ್ಥಿಕ ಅಪರಾಧಗಳನ್ನು ಕಾನೂನಿನ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ದೇಶದ ತನಿಖಾ ಸಂಸ್ಥೆಗಳಾದ ಎನೋರ್ಸ್ಮೆಂಟ್ ಡೈರೆಕ್ಟೋರೇಟ (ಇಡಿ/ಜ್ಯಾರಿ ನಿರ್ದೇಶನಾಲಯ), ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್(ಸಿಬಿಐ), ಸೆಂಟ್ರಲ್ ವಿಜಿಲೆ ಕಮಿಷನ್(ಸಿವಿಸಿ) ಮೊದಲಾದ ಸಂಸ್ಥೆಗಳನ್ನು ಹೆಚ್ಚು ಸಬಲೀಕರಣಗೊಳಿಸಲಾಗಿದೆ. ೨೦೧೪ ರ ನಂತರ ಜಾರಿ ನಿರ್ದೇಶನಾಲಯವು ವಿವಿಧ ಸ್ತರಗಳಲ್ಲಿರುವ ಭ್ರಷ್ಟರ ಮೇಲೆ ದಾಳಿ ಮಾಡಿ ೧,೧೭,೫೬೮ ಕೋಟಿರುಪಾಯಿಗಳಷ್ಟು ಅಕ್ರಮ ಹಣವನ್ನು ವಶಪಡಿಸಿಕೊಂಡಿದೆ.
ಇಡಿಯು ಅಕ್ರಮ ಹಣ ವರ್ಗಾವಣಾ ಕಾನೂನಿನ ಆಡಿಯಲ್ಲಿ ಹೂಡಿರುವ ಕಾನೂನು ಹೋರಾಟದಲ್ಲಿ ೯೬% ಪರಾಧಿಗಳ ಅಪರಾಧಗಳು ಕೋರ್ಟಿನಲ್ಲಿ ಸಾಬೀತಾಗಿ ಅವರಿಗೆ ಶಿಕ್ಷೆಯು ಕೊಡಲ್ಪಟ್ಟಿರುವುದು ಈ ಎ ತನಿಖಾ ಸಂಸ್ಥೆಗಳ ಕಾರ್ಯಕ್ಷಮತೆಯು ಹೆಚ್ಚಾಗಿರುವುದರ ಸೂಚಕವಾಗಿದೆ. ಭಾರತದಲ್ಲಿ ಭ್ರಷ್ಟಾಚಾರವು ಕಡಿಮೆಯಾದುದರಿಂದ ದೇಶದಲ್ಲಿ ಆರ್ಥಿಕ ಅಭಿವೃದ್ಧಿಯಾಗುತ್ತಿದೆ, ವಿದೇಶೀ ಹೂಡಿಕೆ ಹೆಚ್ಚಾಗುತ್ತಿದೆ. ೨೦೧೩-೧೪ ರಲ್ಲಿ ಜಾಗತಿಕ ಆರ್ಥಿಕತೆಯಲ್ಲಿ ೧೦ ನೇ ಸ್ಥಾನದಲ್ಲಿದ್ದ ಭಾರತವಿಂದು ಜಗತ್ತಿನ ೫ ನೇ ಅತೀ ಪ್ರಬಲ ಆರ್ಥಿಕತೆಯುಳ್ಳ ದೇಶವಾಗಿ ಮೂಡಿಬಂದಿದೆ.
ಜಿಎಸ್‌ಟಿ ಆರ್ಥಿಕ ಸುಧಾರಣೆಯಿಂದಾಗಿ ತೆರಿಗೆ ವಂಚನೆ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ದಾಖಲೆ ಪ್ರಮಾಣದಲ್ಲಿ ಜಿಎಸ್‌ಟಿ ಸಂಗ್ರಹವಾಗುತ್ತಿದೆ. ೨೦೧೩-೧೪ ರಲ್ಲಿ ಭಾರತದ ಬಜೆಟ್‌ನ ಒಟ್ಟು ಮೊತ್ತ ೧೬.೫ ಲಕ್ಷ ಕೋಟಿ ರುಪಾಯಿಗಳಾಗಿದ್ದರೆ, ೨೦೨೩-೨೪ ರ ಬಜೆಟ್ ಮೊತ್ತ ೪೫ ಲಕ್ಷ ಕೋಟಿ ರುಪಾಯಿಗಳು. ೨೦೨೩-೨೪ ರ ಬಜೆಟ್ ನಲ್ಲಿ ರಸ್ತೆ, ಸೇತುವೆ, ಆಸ್ಪತ್ರೆ, ಕಟ್ಟಡ ಮೊದಲಾದ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆಂದೇ ೧೦ ಲಕ್ಷ ಕೋಟಿ ರುಪಾಯಿ ಗಳನ್ನು ಮೀಸಲಾಗಿಡಲಾಗಿದೆ. ಕೇಂದ್ರ ಸರಕಾರದ ವತಿಯಿಂದ ಇಷ್ಟೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದರೂ ಅಲ್ಲೂ ಅವ್ಯವಹಾರದ, ಲಂಚ, ಭ್ರಷ್ಟಾಚಾರಗಳ ವಾಸನೆ ಇಲ್ಲ. ಸ್ವಜನ ಪಕ್ಷಪಾತವಿಲ್ಲ. ಇದಲ್ಲವೇ ಶುದ್ಧ ಆಡಳಿತ? ಆದರೆ ರಾಜ್ಯ ಸರಕಾರಗಳು ಭ್ರಷ್ಟಾಚಾರ ನಿವಾರಣೆಯಲ್ಲಿ ಇನ್ನಷ್ಟು ದೂರ ವನ್ನು ಕ್ರಮಿಸಬೇಕಾಗಿದೆ.