ಸಾರೆ ಜಹಾನ್‌ ಸೆ ಅಚ್ಛಾ, ಹಿಂದೂಸ್ತಾನ ಹಮಾರಾ..
ಸ್ವಾತಂತ್ರ‍್ಯ ಸಂಭ್ರಮ
ಗಿರೀಶ್‌ ಬಡಿಗೇರ
ಭಾರತವು ತಾನು ಕಷ್ಟಪಟ್ಟು ಸಂಪಾದಿಸಿದ ಸ್ವಾತಂತ್ರ್ಯದ ೭೬ ಸಂವತ್ಸರಗಳನ್ನು ಪೂರೈಸಿ ೭೭ನೇ ವರ್ಷಕ್ಕೆ ಪದಾರ್ಪಣೆಮಾಡುತ್ತಿದೆ. ಜತೆಗೆ ಭಾರತದ ‘ಪರಮಾಣು ರಾಷ್ಟ್ರ’ದ ಘೋಷಣೆಗೆ ಈಗ ಬೆಳ್ಳಿಹಬ್ಬದ ಸಂಭ್ರಮ. ಜಗತ್ತಿನ ೫ನೇ ದೊಡ್ಡಆರ್ಥಿಕತೆಯಾಗಿರುವ ಭಾರತದ ಜಿಡಿಪಿ ಶೇ.೬.೪ ರಷ್ಟು, ವಿದೇಶಿ ವಿನಿಮಯ ಮೀಸಲು ೫೭೩.೭೨ ಶತಕೋಟಿ ಡಾಲರ್, ವಿದೇಶಿ ವ್ಯಾಪಾರ ೧.೬ ಟ್ರಿಲಿಯನ್ ಡಾಲರ್, ಆಹಾರ ಧಾನ್ಯ ಉತ್ಪಾದನೆ ೩೩೦.೫ ಮೆಟ್ರಿಕ್ ಟನ್, ಸಾಕ್ಷರತಾ ಪ್ರಮಾಣ ಶೇ.೭೭.೭೦ರಷ್ಟು ಮತ್ತು ರಕ್ಷಣಾ ಬಜೆಟ್ ೫.೯೪ ಲಕ್ಷ ಕೋಟಿ ರುಪಾಯಿಗಳು. ಭಾರತ ಹೀಗೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ಅದ್ಭುತ ಶಕ್ತಿಯಾಗಿ ಬೆಳೆದುನಿಂತಿದೆ.
ಭಾರತವು ಸಾರ್ವಭೌಮತ್ವವನ್ನು ಹೊಂದಿ ಇಷ್ಟು ವರ್ಷಗಳು ಉರುಳಿದರೂ, ಒಂದಿಷ್ಟು ಅನಿಷ್ಟಗಳಿಂದಾಗಿ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅವೆಂದರೆ, ಆಂತರಿಕ ಕಲಹ, ಪ್ರತ್ಯೇಕ ತಾವಾದ, ನಕ್ಸಲಿಸಂ, ಕೋಮುವಾದ, ಮಾವೋವಾದ, ಮೂಲಭೂತ ವಾದ, ಜನಾಂಗೀ ಯ ಸಂಘರ್ಷ, ಹವಾಮಾನ ಬದಲಾವಣೆ ಮತ್ತು ಭಯೋತ್ಪಾದನೆ. ಇವೆಲ್ಲ ಕ್ಕೂ ಕುಮ್ಮಕ್ಕು ನೀಡುತ್ತಿರುವುದು ಕೆಲವು ಬಾಹ್ಯಶಕ್ತಿಗಳು. ‘ನಿಮ್ಮ ಸ್ನೇಹಿತರನ್ನು ನೀವು ಆಯ್ಕೆಮಾಡಿಕೊಳ್ಳಬಹುದು, ಆದರೆ ನೆರೆಹೊರೆಯವರನ್ನಲ್ಲ’ ಎಂದಿದ್ದರು ಮಾಜಿ ಪ್ರಧಾನಿ ವಾಜಪೇಯಿಯವರು. ಅದರಂತೆ, ಭಾರತದ ಪ್ರಗತಿಯನ್ನು ಸಹಿಸಲಾಗದ ಕೆಲ ನೆರೆ‘ಹೊರೆ’ ದೇಶಗಳು ಗಡಿವಿವಾದ, ಭಯೋತ್ಪಾದನೆ, ನದಿನೀರು ವಿವಾದ, ಮಾದಕ ವಸ್ತುಗಳ ಕಳ್ಳಸಾಗಣೆ ಮತ್ತು ಜನಾಂಗೀಯ ಸಂಘರ್ಷಗಳ ಮೂಲಕ ಭಾರತದ ಓಟಕ್ಕೆ ಅಡ್ಡಿಯುಂಟುಮಾಡುತ್ತಿವೆ.
ಅಂದಿನ ಭಾರತಕ್ಕೂ ಇಂದಿನ ಭಾರತಕ್ಕೂ ಅಗಾಧ ವ್ಯತ್ಯಾಸವಿದೆ. ಅಂದು ೨ ಜಾಗತಿಕ ಬಲಾಢ್ಯ ರಾಷ್ಟ್ರಗಳ ಕಚ್ಚಾಟದಲ್ಲಿ ಯಾರ ಬಾಲಂಗೋಚಿಯೂ ಆಗದೆ ಅನುಸರಿಸಿದ ‘ಅಲಿಪ್ತನೀತಿ’ಯಂಥ ಜಾಣನಡೆಯಿಂದಾಗಿ ಭಾರತವಿಂದು ದಕ್ಷಿಣಾರ್ಧ ಗೋಳದ ರಾಷ್ಟ್ರಗಳ ನಾಯಕನಾಗಿ ಹೊರಹೊಮ್ಮುವಷ್ಟು ಸಶಕ್ತವಾಗಿದೆ. ಇದಕ್ಕೆ ಪೂರಕವಾಗಿ ದೇಶದ ವಿದೇಶಾಂಗ ನೀತಿಯು ನೆಹರುರ ಆದರ್ಶ ವಾದದಿಂದ ಮೋದಿಯವರ ವಾಸ್ತವಿಕವಾದದ ಕಡೆಗೆ ಹೊರಳಿದೆ.
ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಶಾಶ್ವತ ಸ್ನೇಹಿತರಿಲ್ಲ ಅಥವಾ ದೀರ್ಘಕಾಲಿಕ ಶತ್ರುಗಳಿಲ್ಲ, ಶಾಶ್ವತ ರಾಷ್ಟ್ರೀಯ ಹಿತಾಸಕ್ತಿ ಗಳಿವೆ ಎಂಬಂತೆ ಪ್ರಸ್ತುತ ಭಾರತ ತನ್ನ ಹಿತಾಸಕ್ತಿಗಳಿಗೆ ಅನುಗುಣವಾಗಿ ಹೆಜ್ಜೆಹಾಕುತ್ತಿದೆ.ಭಾರತ ಒಂದು ರಾಷ್ಟ್ರವಾಗಿ ಹೊರ ಹೊಮ್ಮಿದ ದಿನ ದಿಂದಲೂ ನವವಸಾಹತುಶಾಹಿ ಮತ್ತು ಸಾಮ್ರಾಜ್ಯ ಶಾಹಿಯನ್ನು ವಿರೋಧಿಸುತ್ತಿದೆ. ಅಲಿಪ್ತ ನೀತಿಯೊಂದಿಗೆ ಭಗವಾನ್ ಬುದ್ಧ ಮತ್ತು ಗಾಂಧೀಜಿಯವರ ಅಹಿಂಸಾ ತತ್ತ್ವವನ್ನು ಪಾಲಿಸುತ್ತಾ ಬಂದಿದೆ. ಅಂತಾರಾಷ್ಟ್ರೀಯ ಕಾನೂನು ಮತ್ತು ನಿಯಮಗಳನ್ನು ಗೌರವಿಸುವ, ಪರಮಾಣು ಮುಕ್ತ ಜಗತ್ತಿಗಾಗಿ ಒತ್ತಾಯಿಸುವ ಭಾರತವು ಅಭಿವೃದ್ಧಿಶೀಲ ರಾಷ್ಟ್ರಗಳ ಧ್ವನಿಯಾಗಿ ‘ವಸುಧೈವ ಕುಟುಂಬಕಂ’ ಎಂಬ ಉದಾತ್ತ ಚಿಂತನೆಯನ್ನು ಪ್ರತಿಪಾದಿಸುತ್ತಿದೆ.
ನೆರೆಹೊರೆಯ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಭಾರತ ಹಲವು ಕಾರ್ಯಕ್ರಮ ಮತ್ತು ನೀತಿಗಳನ್ನು ರೂಪಿಸಿದೆ. ಹೇಳಿಕೊಳ್ಳುವುದಕ್ಕೆ ಮಾತ್ರವೇ ಇದ್ದು, ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿರದ ಇಂಥ ಹೆಚ್ಚಿನ ನೀತಿಗಳಿಗೆ ಮೋದಿ ಸರಕಾರದಲ್ಲಿ ಹೆಚ್ಚಿನ ಉತ್ತೇಜನ ಸಿಕ್ಕಿದೆ. ‘ ’ ಮತ್ತು ‘ ’ ’ ನೀತಿಗಳು ಈ ಪೈಕಿ ಪ್ರಮುಖವಾದಂಥವು. ಇವುಗಳಡಿ ,  ಮತ್ತು  ದೇಶಗಳ ಜತೆ ಆರ್ಥಿಕ ಬೆಳವಣಿಗೆ, ಸಮಾನ ಪಾಲುದಾರಿಕೆ, ಪರಸ್ಪರ ಸಹಾಯ ದ ನಿಟ್ಟಿನಲ್ಲಿ ಭಾರತ ಕೈಜೋಡಿಸಿದೆ. ಇಷ್ಟು ಮಾತ್ರವಲ್ಲದೆ ಬಲಾಢ್ಯ ರಾಷ್ಟ್ರಗಳ ಬಹು ಪಕ್ಷೀಯ ಗುಂಪು ಮತ್ತು ಸಂಘಟನೆಗಳ ಸದಸ್ಯತ್ವವನ್ನೂ ಭಾರತ ಹೊಂದಿದೆ. ಈ ಪೈಕಿ ಎಸ್‌ಸಿಒ (ಮಧ್ಯ ಏಷ್ಯಾ ದೇಶಗಳು), ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ), ಕ್ವಾಡ್ (ಆಸ್ಟ್ರೇಲಿಯಾ, ಭಾರತ, ಜಪಾನ್ ಮತ್ತು ಅಮೆರಿಕ), ಐ೨ಯು೨ (ಭಾರತ, ಇಸ್ರೇಲ್, ಯುಎಇ ಮತ್ತು ಅಮೆರಿಕ), ಎಸ್‌ಸಿಆರ್‌ಐ (ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾ) ಸಂಘಟನೆ ಗಳನ್ನು ಹೆಸರಿಸಬಹುದು.
ಭಾರತದ ಅಭಿವೃದ್ಧಿಯನ್ನು ಕಂಡ ವಿವಿಧ ದೇಶಗಳು ನಮ್ಮಲ್ಲಿ ಹೂಡಿಕೆ ಮಾಡಿದ್ದು ೩೦೦೦ಕ್ಕೂ ಹೆಚ್ಚು ವಿದೇಶಿ ಕಂಪನಿಗಳು ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಭಾರತವೂ ವಿವಿಧ ದೇಶಗಳಿಗೆ ಸಹಾಯಹಸ್ತ ಚಾಚಿದೆ. ಇಂಥ ‘ಕೊಡು-ಕೊಳ್ಳುವಿಕೆಯ’ ಬಾಂಧವ್ಯಗಳಲ್ಲಿ ಕೆಲವನ್ನು ಹೆಸರಿಸುವುದಾದರೆ, ದೆಹಲಿ ಮೆಟ್ರೋ ಮತ್ತು ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲ್ ಕಾರಿಡಾರ್‌ಗೆ ಜಪಾನ್ ನೆರವು ನೀಡಿದೆ. ತಮಿಳುನಾಡಿನ ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರವನ್ನು ರಷ್ಯಾ ನಿರ್ಮಿಸಿ ನಿರ್ವಹಣೆ ಮಾಡುತ್ತಿದೆ.
ಅಂತೆಯೇ, ಅಫ್ಘಾನಿಸ್ತಾನದಲ್ಲಿ ಜರಂಜ್ ದೇಲರಾಮ್ ಹೆದ್ದಾರಿ, ಸಲ್ಮಾ ಅಣೆಕಟ್ಟು, ಸಂಸತ್ತಿನ ಮರುನಿರ್ಮಾಣ, ಹಾಜಿಗಕ್ ಕಬ್ಬಿಣದ ಅದಿರಿನ ಗಣಿಯಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗಿರುವ ಭಾರತ, ಇರಾನ್‌ನಲ್ಲಿ ಚಾಬಹಾರ್ ಬಂದರನ್ನು ನಿರ್ಮಿಸಿದೆ, ಭೂತಾನ್‌ನಲ್ಲಿ ಮಂಗ್ಡೆಚು ವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದೆ. ತಜಕಿಸ್ತಾನದಲ್ಲಿನ ಫಾರ್ಖೋರ್ ವಾಯುನೆಲೆಯು ಹೊರದೇಶದಲ್ಲಿನ ಭಾರತದ ಏಕೈಕ ವಾಯುನೆಲೆಯಾಗಿದೆ.
ಬದಲಾಗುತ್ತಲೇ ಇರುವ ಭೂರಾಜಕೀಯ ಮತ್ತು ಅರ್ಥ ವ್ಯವಸ್ಥೆಯ ಸಂದರ್ಭದಲ್ಲಿ ಪ್ರಬಲ ರಾಷ್ಟ್ರಗಳು ತಮ್ಮಲ್ಲಿನ ಪರಮಾಣು ಶಕ್ತಿಯಿಂದಾಗಿ ಸಣ್ಣಪುಟ್ಟ ರಾಷ್ಟ್ರಗಳನ್ನು ಅನುಯಾಯಿಗಳನ್ನಾಗಿ ಮಾಡಿಕೊಳ್ಳುತ್ತಿವೆ. ‘ಆಪರೇಷನ್ ಶಕ್ತಿ’ ಮೂಲಕ ೧೯೯೮ ರಲ್ಲಿಯೇ ತನ್ನನ್ನು ಪರಮಾಣು ರಾಷ್ಟ್ರವಾಗಿ ಘೋಷಿಸಿಕೊಂಡಿರುವ ಭಾರತ ‘ಪರಮಾಣು ಶಕ್ತಿಯು ನಾಗರಿಕ ಬಳಕೆಗೇ ವಿನಾ ಮಿಲಿಟರಿ ಉದ್ದೇಶಕ್ಕಾಗಿ ಅಲ್ಲ’ ಎಂಬ ಸ್ಪಷ್ಟ ನಿಲುವನ್ನು ಹೊಂದಿದೆ.
ಒಂದು ಕಾಲದಲ್ಲಿ ‘ಹಾವಾಡಿಗರ ದೇಶ’ ಎಂದು ಕರೆಸಿಕೊಳ್ಳುತ್ತಿದ್ದ ಭಾರತದ ಸಮಗ್ರ ಚಿತ್ರಣವೇ ಇಂದು ಬದಲಾಗಿ ‘ವಿಶ್ವಗುರು’ ವಾಗಿ ಬೆಳೆಯುತ್ತಿದೆ. ಅಂತಾರಾಷ್ಟ್ರೀಯ ನಾಯಕರುಗಳಿಗೆ ಭಾರತ ನಂಬಿಕಸ್ಥ ಸ್ನೇಹಿತನಾಗಿದೆ. ಜಗತ್ತಿಗೆ ಭಾರತದ  ಹಿರಿಮೆ-ಗರಿಮೆಗಳನ್ನು ಪರಿಚಯಿಸಲು ಸೂಕ್ತ ವೇದಿಕೆಗಳಾಗಿರುವ ಎಸ್‌ಸಿಒ ಮತ್ತು ಜಿ-೨೦ ಒಕ್ಕೂಟಗಳ ವಾರ್ಷಿಕ ಸಭೆಗಳನ್ನು ಭಾರತ ಆಯೋಜಿಸಿದೆ. ಭಾರತದ ‘ಸಾಫ್ಟ್ ಪವರ್’ ರಾಜತಾಂತ್ರಿಕತೆಯಿಂದು ಜಗಮನ್ನಣೆಯನ್ನು ಪಡೆದಿದ್ದರೆ, ನಮ್ಮ ಆಯುರ್ವೇದ, ಯೋಗ, ಕಲೆಗಳು, ಹಿಂದೂ ಮತ್ತು ಬೌದ್ಧ ಧರ್ಮಗಳ ಆಚಾರ-ವಿಚಾರ, ಶಾಂತಿ ಸಂದೇಶಗಳು ಜಗತ್ತಿನ ಮೂಲೆಮೂಲೆಗೂ ಪಸರಿಸಿವೆ.
ಒಂದು ಕಾಲಕ್ಕೆ ಕೇವಲ ‘ಆಮದುಗಾರ’ ದೇಶವಾಗಿದ್ದ ಭಾರತವಿಂದು ‘ರಫ್ತುಗಾರ’ ದೇಶಗಳ ಪೈಕಿ ೧೪ನೇ ಸ್ಥಾನದಲ್ಲಿದ್ದು, ಭಾರತದ ಬಾಸ್ಮತಿ ಅಕ್ಕಿ, ಸಾಗರೋತ್ಪನ್ನ, ಚಿನ್ನಾಭರಣ, ಸಿರಿಧಾನ್ಯಗಳು ವಿಶ್ವಾದ್ಯಂತ ಹೆಸರುವಾಸಿ ಯಾಗಿವೆ. ಚೀನಾ ಹೊರತು ಪಡಿಸಿ ಎಲ್ಲ ನೆರೆರಾಷ್ಟ್ರಗಳೊಂದಿಗೂ ಉತ್ತಮ ವಾಣಿಜ್ಯನಂಟು ಹೊಂದಿರುವ ಭಾರತ, ಇತ್ತೀಚಿನ ದಿನಗಳಲ್ಲಿ ಅಮೆರಿಕ ಜತೆಗಿನ ವಾಣಿಜ್ಯ ವ್ಯವಹಾರಕ್ಕೆ ಏರುಗತಿ ನೀಡಿದೆ. ಸುಮಾರು ೮ ವರ್ಷಗಳ ಹಿಂದೆ ರಕ್ಷಣಾ ಉಪಕರಣಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತವಿಂದು, ಡಾರ್ನಿಯರ್-೨೨೮, ಸುಧಾರಿತ ಟೋವೆಡ್ ಆರ್ಟಿಲರಿ ಗನ್, ಬ್ರಹ್ಮೋಸ್ ಕ್ಷಿಪಣಿ, ರಾಡಾರ್, ಸಿಮ್ಯುಲೇಟರ್, ರಾಕೆಟ್ ಲಾಂಚರ್, ಧರ್ಮಲ್ ಇಮೇಜರ್, ಲಘು ಯುದ್ಧ ಹೆಲಿಕಾಪ್ಟರ್ ಮತ್ತು ವಿಮಾನ ವಾಹಕ ನೌಕೆಗಳನ್ನು ರಫ್ತು ಮಾಡುತ್ತಿದೆ.
ಪ್ರಸ್ತುತ ವಿಶ್ವದ ೮೫ ದೇಶಗಳಿಗೆ ಭಾರತದ ರಕ್ಷಣಾ ಉಪಕರಣಗಳ ರಫ್ತಾಗುತ್ತಿದೆ ಎಂಬುದು ಗಮನಿಸಬೇಕಾದ ಸಂಗತಿ. ಹೀಗೆ ಭಾರತವು ತನ್ನ ಸಾಮರ್ಥ್ಯವನ್ನು ದಿನದಿಂದ ದಿನಕ್ಕೆ ವರ್ಧಿಸಿಕೊಳ್ಳುತ್ತಿದ್ದರೆ, ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀ ಯರು ಮತ್ತು ಭಾರತೀಯ ಮೂಲದ ವಿದೇಶಿ ಪ್ರಜೆಗಳು ತಾಯ್ನಾಡಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ. ೨೦೦೫ರ ಭಾರತ-ಅಮೆರಿಕ ಪರಮಾಣು ಒಪ್ಪಂದ, ‘ಲಂಡನ್ ಬರೋ ಆಫ್ ಲ್ಯಾಂಬೆತ್’ನ ಮಾಜಿ ಮೇಯರ್ ಕನ್ನಡಿಗ ನೀರಜ ಪಾಟೀಲ ಅವರು ಥೇಮ್ಸ್ ನದಿಯ ಪಕ್ಕದಲ್ಲಿ ಸ್ಥಾಪಿಸಿದ ಜಗದ್ಗುರು ಬಸವೇಶ್ವರರ ಪ್ರತಿಮೆ ಮತ್ತು ಭಾರತೀಯ ಮೂಲದ ಅಮೆರಿಕನ್ ಕಾಂಗ್ರೆಸ್ ಸದಸ್ಯ ರೋ ಖನ್ನಾ ಅವರು ‘’ ನಿರ್ಬಂಧಗಳಿಂದ ಭಾರತವನ್ನು ವಿನಾಯಿತಿ ಗೊಳಿಸಬೇಕು ಎಂದು ಇತ್ತೀಚೆಗೆ ಸ್ವತಂತ್ರ ಮಸೂದೆಯನ್ನು ಪರಿಚಯಿಸಿದ್ದು ಬೆಳೆಯುತ್ತಿರುವ ಭಾರತದ ಪ್ರಭಾವಕ್ಕೆ ದ್ಯೋತಕ.
ಪ್ರಧಾನಿ ಮೋದಿಯವರ ೫ ಟ್ರಿಲಿಯನ್ ಆರ್ಥಿಕತೆಯು ಸಾಕಾರ ಗೊಳ್ಳಬೇಕಾದರೆ ಇಂಥವರ ಕೊಡುಗೆ ಗಮನಾರ್ಹವಾಗಿರುತ್ತದೆ ಎಂಬುದನ್ನು ಮರೆಯಲಾಗದು. ಭಾರತವು ಮತ್ತಷ್ಟು ಔನ್ನತ್ಯವನ್ನು ಕಂಡುಕೊಳ್ಳಬೇಕೆಂದರೆ ಒಂದಿಷ್ಟು ಬದಲಾವಣೆ ಗಳ ಅಗತ್ಯವಿದೆ. ಮಿಲಿಟರಿಯ ಆಧುನೀಕರಣ, ಗಡಿಗಳಲ್ಲಿ ಸುಸ್ಥಿರ ರಸ್ತೆ, ಮೂಲಸೌಕರ್ಯ ಗಳ ಉನ್ನತೀಕರಣ, ಸಾರ್ಕ್ ದೇಶಗಳೊಂದಿಗೆ ಉತ್ತಮ ಸ್ನೇಹ, ‘ರೆಡ್ ಟೇಪಿಸಂ’ ಎಂದೇ ಕರೆಯಲ್ಪಡುವ ಅತಿರೇಕದ ವಿಧಾನ-ವಿಳಂಬವನ್ನು ತಗ್ಗಿಸುವಿಕೆ, ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವಿಕೆ, ಸಮತೋಲಿತ ರಾಜತಾಂತ್ರಿಕ ನೀತಿಯ ಅನುಸರಣೆ ಇತ್ಯಾದಿಗಳಿಗೆ ಭಾರತ ಮುಂದಾಗಬೇಕು. ಜತೆಗೆ ಇಂಡೋ-ಪೆಸಿಫಿಕ್ ವಲಯ ದಂತೆಯೇ ಮಿಕ್ಕ ಪ್ರದೇಶಗಳಿಗೂ ಭಾರತ ಮಹತ್ವ ನೀಡುವ ಅಗತ್ಯವಿದೆ.
ಅಂದು ಭಾರತದ ಸಾರ್ವಭೌಮತ್ವಕ್ಕಾಗಿ ನೆತ್ತರು ಹರಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹೋರಾಟಗಾರರ ಋಣ ಮತ್ತು ಅದನ್ನು ಕಾಪಾಡಿಕೊಂಡು ಈ ಮಟ್ಟಿಗೆ ಬೆಳೆಸಿದ ಅಸಂಖ್ಯ ವೀರರ ಶ್ರಮ ಈ ಎರಡನ್ನೂ ಹಾಳುಮಾಡದಂತೆ ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಘನಕರ್ತವ್ಯ. ಇನ್ನು, ಇಷ್ಟೆಲ್ಲಾ ಶಕ್ತಿ, ಸಾಮರ್ಥ್ಯ, ಸಹಾನುಭೂತಿ ಮತ್ತು ಶ್ರೀಮಂತ ಪರಂಪರೆ ಯನ್ನು ಹೊಂದಿದ, ೧೪೫ ಕೋಟಿ ಜನಸಂಖ್ಯೆಯನ್ನು ಹೊಂದಿರುವ ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಬಾಗಿಲು ಮುಚ್ಚಿರುವುದು ವಿಷಾದನೀಯ. ಭಾರತಕ್ಕೆ ಇದರ ಕಾಯಂ ಸದಸ್ಯತ್ವ ಆದಷ್ಟು ಬೇಗ ಸಿಗಲೇಬೇಕು. ಭಾರತವನ್ನು ತೃತೀಯ ರಾಷ್ಟ್ರಗಳ ನಾಯಕನಾಗಿ ಹೊರಹೊಮ್ಮಿಸಲು ನಾವೆಲ್ಲ ಅನವರತ ಶ್ರಮಿಸೋಣ.