ರಾಜಕಾರಣದ ಆದರ್ಶ ನಾಯಕ ವಾಜಪೇಯಿ
ಸಂಸ್ಮರಣೆ
ಮಾರುತೀಶ್ ಅಗ್ರಾರ
ಅಟಲ್ ಬಿಹಾರಿ ವಾಜಪೇಯಿ ಈ ದೇಶ ಕಂಡ ಧೀಮಂತ ನಾಯಕರೂ ಹೌದು, ದಿಟ್ಟ ಪ್ರಧಾನಿಗಳ ಸಾಲಿನಲ್ಲಿ ಎದ್ದುಕಾಣುವ ಹೆಸರೂ ಹೌದು. ಬರೀ ರಾಜಕಾರಣಿಯಷ್ಟೇ ಆಗಿರದೆ, ಶ್ರೇಷ್ಠ ವಾಗ್ಮಿ, ಕವಿ, ಚಿಂತಕ, ಪತ್ರಕರ್ತ, ದಾರ್ಶನಿಕ ಹಾಗೂ ಮಾನವತಾವಾದಿಯೂ ಆಗಿದ್ದ ಅವರು ಈಗ ನಮ್ಮೊಂದಿಗಿಲ್ಲ. ೨೦೧೮ರ ಆಗಸ್ಟ್ ೧೬ರಂದು ಅವರು ನಮ್ಮಿಂದ ದೂರವಾದರೂ, ಅವರ ವಿಚಾರಧಾರೆಗಳು ಚಿರಂತನ ಪ್ರೇರಣಾದಾಯಿ ಯಾಗಿವೆ.
ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮಾಪ್ರಸಾದ್ ಮುಖರ್ಜಿಯವರ ನಿಕಟ ವರ್ತಿಯಾಗಿ ಬೆಳೆದು, ನಂತರ ಭಾರತೀಯ ರಾಜಕಾರಣದಲ್ಲಿನ ಸಭ್ಯ ಹಾಗೂ ಗೌರವಾನ್ವಿತ ನಾಯಕನೆಂದು ತಮ್ಮ ವಿರೋಽಗಳಿಂದಲೇ ಕರೆಸಿಕೊಂಡ ಅಟಲ್‌ಜೀ, ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದು ೧೯೫೭ರಲ್ಲಿ. ಉತ್ತರ ಪ್ರದೇಶದ ಬಲರಾಂ ಪುರ ಕ್ಷೇತ್ರದಿಂದ ಆಯ್ಕೆಯಾದಾಗ ಅವರ ವಯಸ್ಸಿನ್ನೂ ೨೯ ವರ್ಷ. ಆದರೆ ಲೋಕಸಭೆ ಯಲ್ಲಿನ ಅವರ ಮೊದಲ ಭಾಷಣ ಸಂಸದರೆಲ್ಲರ ಮನಸ್ಸನ್ನು ಗೆದ್ದಿತ್ತು.
ವಿದೇಶಿ ರಾಜತಾಂತ್ರಿಕರೊಬ್ಬರು ಭಾರತಕ್ಕೆ ಬಂದಿದ್ದಾಗ, ‘ಈ ಹುಡುಗ ಮುಂದೊಂದು ದಿನ ಭಾರತದ ನಾಯಕನಾಗುತ್ತಾನೆ’ ಎಂದು ಅಂದಿನ ಪ್ರಧಾನಿ ನೆಹರು ಅವರೇ ಆ ಅಧಿಕಾರಿಗೆ ಪರಿಚಯಿಸಿದ್ದುಂಟು. ಮುಂದೆ ಅದು ನಿಜವಾಯಿತೆನ್ನಿ. ೧೯೭೭ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ, ದೇಶದ ಮೊದಲ ಕಾಂಗ್ರೆಸ್ಸೇತರ ಸರಕಾರ ಎನಿಸಿಕೊಂಡ ಜನತಾ ಪಕ್ಷದ ಸರಕಾರದಲ್ಲಿ ವಿದೇ ಶಾಂಗ ಸಚಿವರಾಗಿದ್ದರು ಅಟಲ್‌ಜೀ. ಇದಕ್ಕೂ ಮುನ್ನ ಸಂಸದರಾಗಿ ವಿದೇಶಾಂಗ ಸಚಿವಾಲಯಕ್ಕೆ ಭೇಟಿ ನೀಡಿದ್ದ ಅವರಿಗೆ ಎಲ್ಲೆಲ್ಲಿ ಏನೇನಿತ್ತು ಎಂಬುದರ ಪರಿಚಯವಿತ್ತು. ಆದರೆ ಸಚಿವರಾಗಿ ಅಧಿಕಾರ ವಹಿಸಿಕೊಂಡು ಬಂದಾಗ ಕಚೇರಿಯಲ್ಲೇನೋ ಬದಲಾವಣೆಯಾಗಿದ್ದು ಅವರ ಅರಿವಿಗೆ ಬಂತು. ಮುಂಚೆ ಇದ್ದ ನೆಹರು ಅವರ ಫೋಟೋ ಮಾಯವಾಗಿದ್ದು ಗೊತ್ತಾಗಿ ಸಂಬಂಧಪಟ್ಟವರನ್ನು ವಿಚಾರಿಸಿದಾಗ, ಅಟಲ್ ಜೀ ಬರುವುದಕ್ಕೂ ಮುನ್ನ ಅದನ್ನು ತೆಗೆದು ಹಾಕಿದ್ದು ಗೊತ್ತಾಯಿತು.
ಕೆಂಡಾಮಂಡಲರಾದ ವಾಜಪೇಯಿಯವರು ತಕ್ಷಣವೇ ಅಧಿಕಾರಿಗಳನ್ನು ಕರೆಸಿ, ನೆಹರುರ ಫೋಟೋವನ್ನು ತರಿಸಿ ಮುಂಚೆ ಇದ್ದ ಸ್ಥಳದಲ್ಲೇ ಅದನ್ನು ತೂಗು ಹಾಕಿಸಿದರು. ವಾಜಪೇಯಿಯವರ ಮನಸ್ಸು ಎಷ್ಟು ನಿರ್ಮಲವಾಗಿತ್ತು ಎಂಬುದಕ್ಕೆ ಇದೊಂದು ಪುಟ್ಟ ಉದಾಹರಣೆಯಷ್ಟೇ. ತಮ್ಮ ವಿವೇಚನಾಯುಕ್ತ ಮಾತುಗಾರಿಕೆಯಿಂದ ದೇಶದ ಗಮನ ಸೆಳೆದಿದ್ದ ವಾಜಪೇಯಿಯವರಿಗೆಅಮೆರಿಕದ ಅಸೆಂಬ್ಲಿಯನ್ನು ಉದ್ದೇಶಿಸಿ ಮಾತಾಡುವ ಅವಕಾಶ ಒಮ್ಮೆ ಒದಗಿತ್ತು. ಆ ವೇಳೆ ಹಿಂದಿಯಲ್ಲಿ ಮಾತಾಡಿದ ಹೆಮ್ಮೆ ಅವರದ್ದು. ಬಿಜೆಪಿ ವತಿಯಿಂದ ಮೊದಲ ಬಾರಿಗೆ ಪ್ರಧಾನಿ ಗಾದಿಗೆ ಏರಿದ ಹೆಗ್ಗಳಿಕೆ ಅವರದ್ದು.
ವೈಯಕ್ತಿಕ ಹಾಗೂ ರಾಜಕೀಯ ಜೀವನದಲ್ಲಿ ‘ಅಜಾತಶತ್ರು’ ಎಂದೇ ಕರೆಸಿಕೊಂಡಿದ್ದ ಅವರು, ಪಕ್ಷವನ್ನು ತಳಮಟ್ಟದಿಂದಕಟ್ಟುವ ಕೈಂಕರ್ಯದಲ್ಲಿ ಅವಿರತವಾಗಿ ತೊಡಗಿಸಿಕೊಂಡು, ದೇಶದ ತುಂಬೆಲ್ಲಾ ಓಡಾಡುತ್ತಾ, ಕಾರ್ಯಕರ್ತರನ್ನೂಬೆಳೆಸಿದರು. ಹಣ, ಅಧಿಕಾರ, ದರ್ಪದ ಸುತ್ತಲೇ ಗಿರಕಿ ಹೊಡೆಯುತ್ತಾ, ಪಕ್ಷಕ್ಕಿಂತ, ಸಂಘಟನೆಗಿಂತ ತಮ್ಮ ಅಧಿಕಾರವೇ ದೊಡ್ಡದು ಎಂಬ ಭ್ರಾಂತಿಯಲ್ಲೇ ಮುಳುಗುವ ಕೆಲ ರಾಜಕೀಯ ನಾಯಕರು ವಾಜಪೇಯಿಯವರನ್ನು ಆದರ್ಶವಾಗಿ ಇಟ್ಟುಕೊಂಡರೆ ಒಳ್ಳೆಯದು.
ಕಾರ್ಯಕ್ರಮವೊಂದರ ನಿಮಿತ್ತ ಕಾನ್ಪುರಕ್ಕೆ ತೆರಳಿದ್ದರು ವಾಜಪೇಯಿ. ಅದು ಮುಗಿದ ನಂತರ ಮನೆಗೆ ತೆರಳಲು ಅವರೊಂದಿಗೆ ಸೋದರಿ ಹಾಗೂ ಸೊಸೆ ಕಾರು ಹತ್ತಲು ಬಂದಾಗ, ಅವರನ್ನು ಕಾರಿನಲ್ಲಿ ಕೂರಲು ಬಿಡದ ಅಟಲ್ ಜೀ, ‘ಇದು ಭಾರತದ ವಿದೇ ಶಾಂಗ ವ್ಯವಹಾರಗಳ ಸಚಿವರ ಕಾರು, ವಾಜಪೇಯಿಯ ಸ್ವಂತ ಕಾರಲ್ಲ’ ಎಂದಿದ್ದರು. ಬೇರೆ ವಾಹನದಲ್ಲಿ ಬರಲು ದುಡ್ಡಿಲ್ಲ ವೆಂದು ಅವರಿಬ್ಬರೂ ಗೋಗರೆದಾಗ ‘ನಡೆದೇ ಮನೆಗೆ ಬನ್ನಿ’ ಎಂದು ನಿಷ್ಠುರವಾಗಿ ಹೇಳಿ ತಾವೆಷ್ಟು ಪ್ರಾಮಾಣಿಕ ಎಂಬುದನ್ನು ತೋರಿಸಿದ್ದರು.
ಅವರು ನಂತರ ಪ್ರಧಾನಿ ಹುದ್ದೆಗೇರಿದಾಗಲೂ ಅಧಿಕಾರವನ್ನು ದುರುಪಯೋಗಪಡಿಸಿಕೊಂಡವರಲ್ಲ. ತಮ್ಮ ಅಧಿಕಾರ, ಪ್ರಭಾವವನ್ನು ಬಳಸಿಕೊಂಡು ವಾಮಮಾರ್ಗ ದಲ್ಲಿ ಯಾರಿಗೂ ನೆರವಾದವರಲ್ಲ. ಹಾಗಾಗಿ ಯಾವುದೇ ಹಗರಣ, ಭ್ರಷ್ಟಾಚಾರ ಗಳಲ್ಲಿ ಅವರು ಸಿಲುಕಲಿಲ್ಲ. ಅವರು ಸಚಿವರಾಗಿದ್ದಾಗ ಬಂಧುವೊಬ್ಬರು ಯಾವುದೋ ಕೆಲಸಕ್ಕೆ ಶಿಫಾರಸು ಕೇಳಿಕೊಂಡ ಬಂದಾಗ, ‘ನಿಮಗೆ ಒಂದು ಸಿನಿಮಾ ಟಿಕೆಟ್ ಕೊಡಿಸಲೂ ನನ್ನ ಪ್ರಭಾವವನ್ನು ಬಳಸಲಾರೆ’ ಎಂದಿದ್ದರು. ಇಂಥ ಪ್ರಾಮಾಣಿಕತೆ, ಆತ್ಮಸಂಯಮ, ನಿಷ್ಠುರತೆ ಗಳನ್ನು ನಮ್ಮ ಇಂದಿನ ಕೆಲ ರಾಜಕಾರಣಿಗಳು ಅನುಸರಿಸ ಬೇಕಿದೆ, ಅಲ್ಲವೇ? ಬಿಜೆಪಿಯು ಅಧಿಕೃತ ವಾಗಿ ಸ್ಥಾಪನೆಗೊಂಡು ‘ಕಮಲ’ ವನ್ನು ತನ್ನ ಚಿಹ್ನೆಯಾಗಿ ಆಯ್ದುಕೊಂಡಾಗ, ಕಮಲದ ವೈಶಿಷ್ಟ್ಯ ಹಾಗೂ ಪ್ರಸ್ತುತತೆಯ ಬಗ್ಗೆ ಅವರಾಡಿದ ಮಾತು ಗಳು, ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತ ಮತ್ತು ನಾಯಕರು ನಡೆಸಬೇಕಾದ ಸಾರ್ವಜನಿಕ ಜೀವನದ ಬಗೆಗಿನ ವ್ಯಾಖ್ಯಾನದಂತಿದ್ದವು.
‘ನಮ್ಮ ದೇಶದ ಎಲ್ಲಾ ಭಾಷೆಗಳ ಸಾಹಿತ್ಯದಲ್ಲೂ ಕಮಲವನ್ನು ವರ್ಣಿಸಿದಂತೆ ಬೇರಾವ ಹೂವನ್ನೂ ವರ್ಣಿಸಿಲ್ಲ. ಬಾಲ್ಯದಲ್ಲಿ ನಾನು ಕೊಳಗಳಲ್ಲಿ ಅರಳಿದ ಕಮಲಗಳನ್ನು ನೋಡುವಾಗ ಅಲ್ಲೊಂದು ಅಧ್ಯಾತ್ಮಿಕತೆ ನೆಲೆಸಿದ ಅನುಭವವಾಗುತ್ತಿತ್ತು. ಕಮಲ ಕೆಸರಿನಲ್ಲಿದ್ದರೂ ತನ್ನ ಸೌಂದರ್ಯವನ್ನು ಸದಾ ಹೊರಸೂಸುತ್ತದೆ,  ಅದನ್ನೇ ಪ್ರತಿನಿಽಸುತ್ತದೆ. ಕೆಸರಿನಿಂದ ಹೊರಬಂದ ಮೇಲೂ ತನ್ನ ಅಸ್ತಿತ್ವವನ್ನು ಪ್ರಕಟಿಸಲು ಯತ್ನಿಸುತ್ತದೆ. ಹುಟ್ಟಿನಿಂದಲೇ ಯಾರೂ ಮೇಲು-ಕೀಳು ಅಲ್ಲ ಎಂಬುದು ಕಮಲ ಸಾರುವ ಸಂದೇಶ.
ವಸ್ತು ಅಥವಾ ವ್ಯಕ್ತಿಯ ಮೌಲ್ಯವು ಅವನ ಚಾರಿತ್ರ್ಯ ಹಾಗೂ ಗುಣಗಳನ್ನು ಅವಲಂಬಿಸಿರುತ್ತದೆ ಎಂಬುದನ್ನು ಕಮಲದ ಹೂವು ಸಂಕೇತಿಸುತ್ತದೆ’ ಎಂದಿದ್ದರು ಅಟಲ್‌ಜೀ. ವಾಜಪೇಯಿಯವರದ್ದು ಸಮಚಿತ್ತದ ವ್ಯಕ್ತಿತ್ವ. ಹಾಸ್ಯ ಹಾಗೂ ಗಾಂಭೀರ್ಯ ಅದರಲ್ಲಿ ಹದವಾಗಿ ಮಿಳಿತಗೊಂಡಿ ದ್ದವು. ಸ್ವಭಾವತಃ ಮೃದುವಾಗಿದ್ದರೂ ಕೆಲ ವಿಚಾರಗಳಲ್ಲಿ ಅಷ್ಟೇ ನಿಷ್ಠುರ ನಿಲುವುಗಳನ್ನು ತಳೆಯುತ್ತಿದ್ದರು. ಸಂಸತ್ತಿನಲ್ಲಿ ಎಷ್ಟೋ ಬಾರಿ ಅವರ ಅವೇಶಭರಿತ ಭಾಷಣಕ್ಕೆ ವಿರೋಧಿ ಸದಸ್ಯರು ನಡುಗಿಹೋಗಿದ್ದುಂಟು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ತೀಕ್ಷ್ಣವಾಗಿ ಟೀಕಿಸಿದ್ದರು ಅಟಲ್‌ಜೀ.
ಒಂದು ದೇಶಕ್ಕೆ ಸೈನ್ಯವೇಕೆ ಬೇಕು, ಯುದ್ಧವೇಕೆ ಅವಶ್ಯಕ ಎಂಬುದನ್ನು ಸಂಸತ್ತಿನಲ್ಲಿ ಮನದಟ್ಟು ಮಾಡಿ ಕೊಟ್ಟಿದ್ದ ಅವರು, ಕಾರ್ಗಿಲ್ ಯುದ್ಧದ ಸಮಯದಲ್ಲಿ ದೇಶದ ಪ್ರಧಾನಿಯಾಗಿ ಸೈನಿಕರಲ್ಲಿ ತುಂಬಿದ ಪ್ರೋತ್ಸಾಹ, ತರುವಾಯ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿದ ರೀತಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದವು. ಭಾರತವು ಅಣು ಬಾಂಬನ್ನು ಏಕೆ ತಯಾರಿಸಬೇಕು ಎಂಬುದನ್ನುಸಂಸತ್ತಿನಲ್ಲಿ ಸಮರ್ಥವಾಗಿ ಪ್ರತಿಪಾದಿಸಿದ್ದ ಅಟಲ್‌ಜೀ, ತಾವು ಪ್ರಧಾನಿಯಾದ ಮೇಲೆ ಹಲವು ರಾಜಕೀಯ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಪೋಖ್ರಾನ್‌ನಲ್ಲಿ ಪರಮಾಣು ಪರೀಕ್ಷೆ ನಡೆಸಿ, ಭಾರತದ ರಕ್ಷಣಾ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದರು.
ಇನ್ನು, ಅವರು ಜಾರಿಗೆ ತಂದ ‘ಸುವರ್ಣ ಚತುಷ್ಪಥ’, ‘ಪ್ರಧಾನಮಂತ್ರಿ ಗ್ರಾಮಸಡಕ್’, ‘ಸರ್ವಶಿಕ್ಷಾ ಅಭಿಯಾನ’ ಮುಂತಾದ ಜನಪರ ಯೋಜನೆಗಳು ಇಂದಿಗೂ ಸ್ವತಂತ್ರ ಭಾರತದ ಅಭಿವೃದ್ಧಿಯ ಮೈಲುಗಲ್ಲುಗಳಲ್ಲಿ ಎದ್ದುಕಾಣುವಂತಿವೆ. ತಮ್ಮ ಸುದೀರ್ಘ ಸಾರ್ವಜನಿಕ ಬದುಕಿನುದ್ದಕ್ಕೂ ಎದುರಾದ ಏಳು-ಬೀಳು ಗಳನ್ನೂ, ಅಡ್ಡಿ-ಆತಂಕಗಳನ್ನೂ ತಮ್ಮ ಕಷ್ಟ-ಕಾರ್ಪಣ್ಯ ಗಳ ನಡುವೆಯೇ ಅಚಲವಾಗಿ ಎದುರಿಸಿದ ಅಟಲ್‌ಜೀ, ಭಾರತೀಯ ವಿಚಾರಧಾರೆಗಳು, ಉದಾತ್ತತೆ ಮತ್ತು ಸಹಿಷ್ಣುತೆಗಳ ಸಾಕಾರಮೂರ್ತಿಯಾಗಿದ್ದರು. ರಾಜಕೀಯ ದಲ್ಲಿದ್ದೂ ಸಟಿಕದಷ್ಟು ಶುಭ್ರ ಪಾರದರ್ಶಕ ಜೀವನವನ್ನು ನಡೆಸಿ, ರಾಜಕೀಯ ಸ್ಥಿತ್ಯಂತರ-ಸಂಕಷ್ಟಗಳ ನಡುವೆಯೇ ‘ನ ದೈನ್ಯಂ, ನ ಪಲಾಯನಂ’ ಎಂಬ ಮಂತ್ರವನ್ನು ಪಠಿಸಿದ ವಾಜಪೇಯಿಯವರ ಮಾತು ಹಾಗೂ ಬದುಕಿನ ರೀತಿ ನಮ್ಮೆಲ್ಲರಿಗೂ ಮೇಲ್ಪಂಕ್ತಿಯಾಗಲಿ.