ವಿದ್ಯಾರ್ಥಿಗಳು ಬಲಿಪಶು ಆಗದಿರಲಿ
ಬದಲಾದ ಕಾಲಕ್ಕೆ ತಕ್ಕಂತೆ ಒಂದು ಶಿಕ್ಷಣ ನೀತಿಯನ್ನು ಜಾರಿ ಮಾಡುವುದು ಅಗತ್ಯ. ಇದನ್ನು ಮನಗಂಡೇ ಕೇಂದ್ರ ಸರಕಾರವು ಸಾಕಷ್ಟು ತಜ್ಞರ ಸಲಹೆ, ಸಾರ್ವಜನಿಕರಿಗೆ ಅದರ ಕರಡು ಪ್ರಕಟಣೆ, ಸಲಹೆ ಸೂಚನೆಗಳ ಸೇರ್ಪಡೆ ಇತ್ಯಾದಿಗಳೊಂದಿಗೆ ೨೦೨೦ರಲ್ಲಿ ಎನ್‌ಇಪಿಯನ್ನು ಅಂತಿಮಗೊಳಿಸಿದೆ. ಈ ನೀತಿಯು ೨೦೪೦ರ ವೇಳೆಗೆ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ. ಆದರೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ರದ್ದು ಮಾಡಲು ರಾಜ್ಯ ಸರಕಾರ ಹಠಕ್ಕೆ ಬಿದ್ದಂತಿದೆ. ಅದಕ್ಕೆ ಪರ್ಯಾಯವಾಗಿ ನೂತನ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಮುಂದಾಗಿದೆ. ರಾಜ್ಯ ಶಿಕ್ಷಣ ನೀತಿಯು ಸಿಬಿಎಸ್‌ಇ, ಐಸಿಎಸ್‌ಇ ಬೋರ್ಡ್‌ಗೆ ಅನ್ವಯ ಆಗುವುದಿಲ್ಲ. ಅದು ಕೇಂದ್ರ ಸರಕಾರದ ವ್ಯಾಪ್ತಿಗೆ ಬರುವುದರಿಂದ ಅದರಲ್ಲಿ ಯಾವುದೇ ಹಸ್ತಕ್ಷೇಪ ಮಾಡಲು ರಾಜ್ಯಕ್ಕೆ ಅಧಿಕಾರ ಇರುವುದಿಲ್ಲ. ಇದರಜತೆಗೆ ಕೇಂದ್ರೀಯ ವಿವಿಗಳು, ಖಾಸಗಿ ವಿವಿಗಳಿಗೂ ಈ ನೀತಿ ಅನ್ವಯ ಆಗುವುದಿಲ್ಲ. ಹೀಗಾಗಿ ನೂತನ ಶೈಕ್ಷಣಿಕ ನೀತಿಯ ಬಗ್ಗೆ ಈಗ ಚಿಂತಿತವಾಗಬೇಕಿರುವುದು ಸರಕಾರಿ ಶಾಲೆಗಳು ಮತ್ತು ಅನುದಾನಿತ ಶಾಲೆಗಳು ಮಾತ್ರ. ಈ ಗೊಂದಲವೇ ಬೇಡ ಎಂದು ಪೋಷಕರು ತಮ್ಮಮಕ್ಕಳನ್ನು ರಾಜ್ಯ ಶಿಕ್ಷಣ ಸಿಲೆಬಸ್ ಬದಲಿಗೆ ಕೇಂದ್ರ ಅಥವಾ ಐಸಿಎಸ್‌ಸಿಯ ಸಿಲೆಬಸ್ ಗೆ ಸೇರಿಸುವ ಸಾಧ್ಯತೆ ಇದೆ. ಹಾಗಾಗಿ ರಾಜ್ಯ ಸರಕಾರದ ವಿವೇಚನಾರಹಿತ ಕ್ರಮದಿಂದಾಗಿ ಅನುಕೂಲಕ್ಕಿಂತ ತೊಂದರೆಯೇ ಹೆಚ್ಚು. ಹೀಗಿರುವಾಗ, ಎನ್‌ಇಪಿ ರದ್ದು ಮಾಡಲು ಮುಂದಾಗಿರುವ ರಾಜ್ಯ ಸರಕಾರ ಯುವಜನತೆಗೆ ಯಾವ ಸಂದೇಶವನ್ನು ನೀಡುತ್ತಿದೆ? ಇದು ಯಾವ ರೀತಿಯ ರಾಜಕಾರಣ? ಕೇಂದ್ರದ ಸಮಗ್ರ ಶಿಕ್ಷಣ ನೀತಿಗೆ ರಾಜ್ಯದ ನೀತಿ ಪೂರಕವಾಗಿದ್ದರೆ ಏನು ತಪ್ಪು? ಕೇಂದ್ರವನ್ನು ವಿರೋಧಿಸಲೇಬೇಕು ಎಂಬ ಹಠ ಯಾಕೆ? ಸ್ಥಳೀಯ ಭಾಷೆಗಳಿಗೆ, ಸ್ಥಳೀಯ ವಿಷಯಗಳಿಗೆ ಹೆಚ್ಚು ಒತ್ತು ನೀಡುವ ಕುರಿತು ಎನ್‌ಇಪಿಯಲ್ಲಿ ಚಿಂತನೆ ನಡೆಸಿ ಸೂತ್ರಗಳನ್ನು ನೀಡಲಾಗಿದೆ. ಇದು ತಪ್ಪೇ? ಮಕ್ಕಳ ಶಿಕ್ಷಣದ ಭವಿಷ್ಯದ ಜತೆ ರಾಜಕೀಯ ಪಕ್ಷಗಳು ಚೆಲ್ಲಾಟ ಆಡಬಾರದು.