ಕಾಡುತ್ತಿದೆ ಮಾದೇಗೌಡರ ನಾಯಕತ್ವದ ಕೊರತೆ
ಪ್ರಸಕ್ತ
ಮರಿಲಿಂಗಗೌಡ ಮಾಲಿಪಾಟೀಲ್
ತಮಿಳುನಾಡಿಗೆ, ೧೫ ದಿನಗಳ ಕಾಲ ನಿತ್ಯವೂ ೫ ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿದೆ. ಆದರೆ, ಇಲ್ಲಿನ ಸ್ಥಿತಿಯೇ ಬೇರೆ. ಕಾವೇರಿ ನದಿಯ ಸುತ್ತಮುತ್ತಲಿನ ಪ್ರದೇಶದ ಬೆಳೆ ಉಳಿಸಿಕೊಳ್ಳಲು ಮತ್ತು ಕುಡಿಯುವ ನೀರಿಗಾಗಿ ೧೦೬ ಟಿಎಂಸಿ ನೀರಿನ ಅಗತ್ಯವಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಆಗಸ್ಟ್ ತಿಂಗಳ ಇತಿಹಾಸವನ್ನು ಪರಿಶೀಲಿಸಿದರೆ ೧೫೩ ವರ್ಷಗಳಲ್ಲಿಯೇ ಅತೀ ಕಡಿಮೆ ಮಳೆ ಬಿದ್ದಿದೆ. ಕಾವೇರಿ ಪಾತ್ರದ ಎಲ್ಲ ಜಲಾಶಯಗಳಲ್ಲಿಯೂ ಸೇರಿಸಿ ನೋಡಿದರೆ ಇರುವ ನೀರಿನ ಪ್ರಮಾಣವೇ ಅಷ್ಟಿಲ್ಲ, ಹೀಗಿರುವಾಗ ರಾಜ್ಯದ ಮುಂದಿನ ದಾರಿ ಏನು? ಇಂದಿನ ಸನ್ನಿವೇಶದಲ್ಲಿ ೧೫ ದಿನಗಳ ಕಾಲ ಇದೇ ರೀತಿ ನೀರು ಬಿಟ್ಟರೆ, ಕೆಆರ್ ಎಸ್ ಖಾಲಿ ಆಗುವುದು ಖಚಿತ. ಆದರೆ ನ್ಯಾಯಾಲಯಗಳ ಆದೇಶ ಪಾಲಿಸುವ ಅನಿವಾರ್ಯವೂ ಇದೆ. ರಾಜ್ಯದಲ್ಲಿ ಅಧಿಕಾರ ಹಿಡಿದವರು ನೇನೋ ಸರ್ಕಸ್ ಮಾಡು ತ್ತಿದ್ದಾರೆ. ಇತ್ತ ಒಂದಷ್ಟು ಸಂಘಟನೆಯವರು ಪ್ರತಿಭಟನೆಯನ್ನೂ ನಡೆಸುತ್ತಿದ್ದಾರೆ. ಹರಿದ ಅಂಗಿ, ಹರಿದ ಚಡ್ಡಿ ಧರಿಸಿ, ಅರೆಬೆತ್ತಲಾಗಿ ಕೈಯಲ್ಲಿ ಭಿಕ್ಷಾಪಾತ್ರೆ ಹಿಡಿದು, ಧಿಕ್ಕಾರದ ಘೋಷಣೆಗಳನ್ನು ಕೂಗುವುದಕ್ಕೆ ಪ್ರತಿಭಟನೆಗಳು ಸೀಮಿತವಾಗಿವೆ.
ಆದರೆ ಒಮ್ಮೆ ಊಹಿಸಿ ನೋಡೋಣ. ಒಂದೊಮ್ಮೆ ತಮಿಳುನಾಡಿನ ವಿರುದ್ಧ ಆದೇಶ ಬಂದಿದ್ದರೆ ಅಲ್ಲಿನ ಪ್ರತಿಭಟನೆಯ ಕಿಚ್ಚು ಯಾವ ಪ್ರಮಾಣದಲ್ಲಿರಬಹುದಿತ್ತು? ತಮಿಳುನಾಡಿಗೆ ತಮಿಳುನಾಡೇ ಬೀದಿಗಿಳಿಯುತ್ತಿತ್ತು. ಇದು ಕೇವಲ ಊಹೆಯಲ್ಲ. ಇತಿಹಾಸವ ದಾಖಲಿಸಿದ ವಾಸ್ತವ. ಒಂದು ಬಾರಿ ತಮಿಳುನಾಡಿನ ಅಷ್ಟೂ ಚಿತ್ರತಾರೆಗಳು ಕಾವೇರಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅದರಲ್ಲಿ ಭಾಗವಹಿಸಿದ ಮೂಲ ಕನ್ನಡಿಗ ರಜನಿಕಾಂತರ ಮೇಲೆ ಯಾವ ರೀತಿಯ ಒತ್ತಡಬಿದ್ದಿತ್ತೆಂದರೆ ಕೊನೆಗೆ ಅವರು ಒಂದುದಿನ ಪ್ರತ್ಯೇಕವಾಗಿ ತಾವೊಬ್ಬರೇ ಉಪವಾಸ ಸತ್ಯಾಗ್ರಹ ಕುಳಿತು ತಮ್ಮ ವಿರುದ್ಧ ಮೂಡಬಹುದಾದ ಅಭಿಪ್ರಾಯವನ್ನುಅಡಗಿಸಬೇಕಾಯಿತು. ತಮಿಳುನಾಡಿನಂಥ ಪ್ರತಿಭಟನೆಯ ಅಬ್ಬರ ಕರ್ನಾಟಕ ದಲ್ಲಿ ಕಂಡುಬರುತ್ತಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಾಣುವ ಸತ್ಯ.
ಇಲ್ಲಿನ ಪ್ರತಿಭಟನೆಗಳ ಹಿಂದೆ, ಅದಕ್ಕೆ ಕರೆ ಕೊಡುವುದರ ಹಿನ್ನೆಲೆಯಲ್ಲಿ ಯಾವ್ಯಾವುದೋ ಹಿತಾಸಕ್ತಿಗಳು. ಮಾದೇಗೌಡರ ಕಾಲವನ್ನೊಮ್ಮೆ ನೆನಪಿಸಿಕೊಳ್ಳಿ- ತಮಿಳುನಾಡಿನ ಮಾದರಿಯ ಹೋರಾಟಗಳು ಕರ್ನಾಟಕದಲ್ಲಿಯೂ ನಡೆಯುತ್ತಿತ್ತು. ಒಮ್ಮೆ ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಬಿಟ್ಟಾಗ ಮಾದೇಗೌಡರನಾಯಕತ್ವದಲ್ಲಿ ರೈತ ಹಿತರಕ್ಷಣಾ ಸಮಿತಿ ನೀಡಿದ ಹೋರಾಟದ ಕರೆಗೆ ಜನರು ಪಕ್ಷಾತೀತವಾಗಿ ಸ್ಪಂದಿಸಿ ಬೀದಿಗಿಳಿಸಿದ್ದರು. ಆಗೆಲ್ಲ ರೈತರ ಸಮಸ್ಯೆ ನಾಡಿನಸಮಸ್ಯೆ ಎಂದು ನಂಬುವ ಜನಪರ ಸಂಘಗಳು ಹೋರಾಟಕ್ಕೆ ಸಾಥ್ ನೀಡುತ್ತಿದ್ದವು. ಹೀಗಾಗಿ ಪ್ರತಿಭಟನೆಗೆ ತನ್ನಷ್ಟಕ್ಕೆ ತಾನೇ ಶಕ್ತಿ ಪ್ರಾಪ್ತವಾಗುತ್ತಿತ್ತು.
ಇದಕ್ಕೆ ಕಾರಣಗಳು ಇಲ್ಲದಿಲ್ಲ. ರಾಜಕೀಯಕ್ಕಾಗಿ ಮಾದೇಗೌಡರು ಹೋರಾಡಿಲ್ಲ. ಮಾತ್ರವಲ್ಲ, ಕಾವೇರಿ ವಿಚಾರದಲ್ಲಿ ನ್ಯಾಯಾಲಯಗಳಿಂದ ಬೈಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ರಾಜಕಾರಣಿಗಳಿಗೂ ಅವರು ಸೂಕ್ತ ತಿರುಗೇಟು ನೀಡುತ್ತಿದ್ದರು. ರಾಜ್ಯದ ಹಿತಾಸಕ್ತಿ ಕಡೆಗಣಿಸಿ ನೀರು ಹರಿಸುವ ನಿರ್ಧಾರಕ್ಕೆ ಬರುವ ಬದಲು, ರಾಜೀನಾಮೆ ಕೊಟ್ಟು ನಮ್ಮೊಡನೆ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ  ಎಂದು ಮಾದೇಗೌಡರು ಖಡಕ್ಕಾಗಿ ಹೇಳುತ್ತಿದ್ದರು. ರೈತರ ಹಿತ ಕಾಪಾಡುವುದು ಅಸಾಧ್ಯ ಎಂದಾದ ಮೇಲೆ ಅಂಥ ಅಽಕಾರವಾದರೂ ಯಾಕೆ ಬೇಕು ಎನ್ನುವುದು ಮಾದೇಗೌಡರ ನಿಲುವು ಆಗಿತ್ತು.
ಅವರು ನಿಧನಾ ನಂತರ ಅಂಥದ್ದೇ ಗಟ್ಟಿದನಿಯ ನಾಯಕರು ಇಲ್ಲದಿರುವುದು ಕರ್ನಾಟಕದ ರೈತರ ಪಾಲಿಗೆ ಹಿನ್ನಡೆಯೇ ಹೌದು. ಒಂದು ಹಂತದಲ್ಲಿ ರೈತರ ನಾಯಕ ಪುಟ್ಟಣ್ಣಯ್ಯನವರೂ ದೊಡ್ಡದನಿಯಲ್ಲಿ ಮಾತನಾಡಿ ಪ್ರತಿಭಟನೆಗಳನ್ನು ಸಂಘಟಿಸುತ್ತಿದ್ದರು. ಅವರೂ ನಿಧನರಾದ ಬಳಿಕ ರೈತಪರ ಪ್ರತಿಭಟನೆಯ ಸೊಲ್ಲು ಕ್ಷೀಣಿಸಿದೆ. ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಪ್ರತಿಭಟನೆಗೆ ಮುಂದಾಗುತ್ತಿದ್ದರಾದರೂ ಅವರಿಗೆ ಅನುಭವದ ಕೊರತೆ ಕಾಡುತ್ತಿದೆ.ಅಪ್ಪನ ಸ್ಥಾನ ತುಂಬಲು ಸಮಯದ ಅಗತ್ಯವಿದೆ. ಇಂಥ ವಿಷಯದಲ್ಲಿ ಪ್ರತಿಭಟನೆಗಳು ಅನವಶ್ಯಕ. ಚಳವಳಿಗಳನ್ನು ಮಾಡಬೇಡಿ ಎನ್ನುವವರೂ ಇzರೆ. ಪ್ರತಿಭಟನೆಗಳಿಗೆ ಬದಲಾಗಿ ನ್ಯಾಯಾಲಯಗಳಲ್ಲಿ ಸಮರ್ಥ ವಾದ ಮಂಡಿಸಿ ಎನ್ನುವು ಅಭಿಪ್ರಾಯದ ಹಿಂದಿನ ಉದ್ದೇಶ.
ಆದರೆ ಒಂದು ಬಾರಿ ನ್ಯಾಯಾಲಯದ ತೀರ್ಪು ಬಂದ ಬಳಿಕ ಅದನ್ನು ಪಾಲಿಸಬೇಕಾದ ಅನಿವಾರ್ಯ ಇದೆ. ಕಾವೇರಿ ಕದನದ ಇತಿಹಾಸವನ್ನು ಸೂಕ್ಷವಾಗಿ ಪರಿಶೀಲಿಸಿದರೆ ಬಹುತೇಕ ಸಂದರ್ಭಗಳಲ್ಲಿ ಕರ್ನಾಟಕದ ವಿರುದ್ಧವಾಗಿಯೇ ತೀರ್ಪುಗಳು ಬಂದಿದ್ದರೂ ಒಂದು ಬಾರಿ ಮಾತ್ರ ಬಂಗಾರಪ್ಪ ಸುಗ್ರೀವಾಜ್ಞೆ ಹೊರಡಿಸಿದ್ದರು. ಅದು ಬಿಟ್ಟರೆ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿzಗ ನ್ಯಾಯಾಂಗ ನಿಂದನೆ ಆರೋಪವನ್ನೂ ಎದುರಿಸಬೇಕಾಯಿತು. ಅಂದರೆ ಕರ್ನಾಟಕ ಪಾಲಿಸಲು ಸಾಧ್ಯ ವಿಲ್ಲದಂತಹ ಆದೇಶಗಳು ಹೊರಬಿದ್ದಿತ್ತು ಎಂಬುದು ಗಮನಾರ್ಹ. ೨೦೧೬ರಲ್ಲಿ ಪ್ರತಿದಿನ ೧೨ ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ ಬಂದಿತ್ತು. ಈ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಕೋರಿದಾಗ ಒಟ್ಟು ೧೨ ಸಾವಿರ ಕ್ಯೂಸೆಕ್ ನೀರನ್ನು ಹರಿಸುವಂತೆ ಆದೇಶ ಮಾರ್ಪಾಡಾದ ಇತಿಹಾಸವೂ ಇದೆ. ಅಂದರೆ ಸಮರ್ಥ ವಾದದ ಮೂಲಕ ನಮ್ಮ ಅಸಹಾಯಕತೆಯನ್ನು ಮನದಟ್ಟು ಮಾಡಿದರೆ ಪರಿಸ್ಥಿತಿಯಲ್ಲಿ ಬದಲಾವಣೆ ಸಾಧ್ಯ ಎನ್ನುವುದು ಇತಿಹಾಸದಿಂದ ತಿಳಿದು ಬಂದ ಸತ್ಯ.
ಎರಡೂ ರಾಜ್ಯಗಳ ರೈತರ ಹಿತೃದೃಷ್ಟಿಯನ್ನು ನಾವು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಬೇಕಿದೆ. ಅವರು ಅಷ್ಟು ಬೇಗ ನ್ಯಾಯಾಲಯಕ್ಕೆ ಯಾಕೆಹೋದರೋ ಗೊತ್ತಿಲ್ಲ ಎನ್ನುತ್ತಾರೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್. ಹೌದು, ಪರಸ್ಪರ ಮಾತುಕತೆಗಳಲ್ಲಿ ಪರಿಹಾರವಾಗಬಹುದಾದ ಸಮಸ್ಯೆಯನ್ನುನ್ಯಾಯಾಲಯದ ಅಂಗಣಕ್ಕೆ ಎಳೆದೊಯ್ಯುವುದು ಅನವಶ್ಯಕ. ಹೀಗಿರುವಾಗ ಕೇಂದ್ರ ಮಧ್ಯಪ್ರವೇಶ ಅಗತ್ಯವಿದೆ. ಎರಡೂ ರಾಜ್ಯಗಳ ನಡುವೆ ಸಂಧಾನನಡೆಸಲು ಅವಕಾಶ ಇದ್ದೇ ಇದೆಯಲ್ಲವೇ? ಆದರೆ ಸಮಸ್ಯೆಯ ಗಂಭೀರತೆ ಕೇಂದ್ರಕ್ಕೆ ಅರ್ಥವಾಗಬೇಕು. ರಾಜ್ಯದ ಜನರೇ ಸ್ವಯಂ ಪ್ರೇರಿತರಾಗಿ ಹೋರಾಟಕ್ಕೆಧುಮುಕಿದರೆ ರಾಜ್ಯದಲ್ಲಿ ಸಮಸ್ಯೆ ಇದೆ ಎನ್ನುವುದು ಕೇಂದ್ರ ಸರಕಾರಕ್ಕೆ ಮನವರಿಕೆಯಾಗುತ್ತದೆ.
ಆದರೆ ಪ್ರತಿಭಟನೆಗಳೇ ಇಲ್ಲದಿದ್ದಲ್ಲಿ ರಾಜ್ಯದ ಸಮಸ್ಯೆಯ ಬಗ್ಗೆ ಕೇಂದ್ರ ನಾಯಕರು ಯಾಕಾದರೂ ತಲೆಕೆಡಿಸಿಕೊಳ್ಳುತ್ತಾರೆ? ಏನೇ ಸಭೆ ನಡೆಸಿ, ಮನವಿ ಸಲ್ಲಿಸಿದರೂ ನೋಡೋಣ ಎಂದು ಎರಡು ವಾರ ತಳ್ಳಿದರೆ ಅಲ್ಲಿಯವರೆಗೆ ಕರ್ನಾಟಕ ನೀರು ಬಿಡುತ್ತಲೇ ಇರಬೇಕಾಗುತ್ತದೆ. ಕೂಡಲೇ ಕ್ರಮ ಜರುಗಬೇಕು ಎಮದಾದರೆ ಸರಕಾರ ಸುಮ್ಮನೆ ಕುಳಿತುಕೊಳ್ಳಲಾಗದ ಮಟ್ಟದ ಪ್ರತಿಭಟನೆಗಳು ನಡೆಯಬೇಕಿದೆ. ಹಾಗೆಂದು ಪ್ರತಿಭಟನೆ ಎಂದರೆ ಹಿಂಸಾತ್ಮಕ ಖಂಡಿತಾ ಅಲ್ಲ! ಅದಕ್ಕೊಬ್ಬ ಸಮರ್ಥ ಮುಂದಾಳು ಇರಬೇಕು. ಅದರ ಕೊರತೆಯೇ ಸದ್ಯಕ್ಕೆ ಪ್ರತಿಭಟನೆಯ ಕಿಡಿ ಕಡಿಮೆಯಾಗಲು ಕಾರಣ ಎನ್ನುವ ಭಾವನೆ ಬಲವಾಗುತ್ತಿದೆ.
ಕಾವೇರಿ ನದಿ ನೀರು ಹಂಚಿಕೆಯಲ್ಲಿ ನಮಗೆ ಪರಿಣತಿಯಲ್ಲ ಎಂದು ಅಭಿಪ್ರಾಯ ಪಟ್ಟ ಸುಪ್ರೀಂ ಕೋರ್ಟ್ ಆ ಕಾರಣಕ್ಕಾಗಿಯೇ ಕಾವೇರಿ ನದಿನೀರುನಿರ್ವಹಣಾ ಪ್ರಾಧಿಕಾರವನ್ನು ರಚಿಸಲು ಹೇಳಿತ್ತು. ಹೀಗಾಗಿ ನಂತರದ ದಿನಗಳಲ್ಲಿ ಕಾವೇರಿ ನದಿ ನೀರು ಹಂಚಿಕೆಯ ಜವಾಬ್ದಾರಿ ಪ್ರಾಧಿಕಾರದ್ದೇ ಆಗಿತ್ತು.ಹೀಗಿರುವಾಗ ಅವಸರ ಮಾಡಿ ನ್ಯಾಯಾಲಯಕ್ಕೆ ಹೋಗಬೇಡಿ ಎಂದು ತಮಿಳುನಾಡಿಗೆ ಕಿವಿಮಾತು ಹೇಳುವ ಅಧಿಕಾರ ಖಂಡಿತ ಪ್ರಧಾನಿಗಿದೆ. ಅದಾಗಬೇಕಿದ್ದರೆ ಪಕ್ಷಭೇದ ಮರೆತು ರಾಜ್ಯದ ಜನಪ್ರತಿನಿಽಗಳು ಕೇಂದ್ರದ ಮೇಲೆ ಒತ್ತಡ ಹೇರಬೇಕಿದೆ. ಪ್ರಧಾನಿ ವಿರುದ್ಧದ ಮೈತ್ರಿಕೂಟದ ಹಿತಾಸಕ್ತಿಗಾಗಿ ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್ ನೀರು ಬಿಡುತ್ತಿದೆ ಎಂದು ಬಿಜೆಪಿ ಹೇಳುತ್ತಿದೆ. ಇಂಥ ಮಾತುಗಳನ್ನು ಬದಿಗಿರಿಸಿ ಎಲ್ಲ ಜನಪ್ರತಿನಿಧಿಗಳೂಕಾರ್ಯಪ್ರವೃತ್ತರಾಗಬೇಕಿದೆ. ಮಾದೇಗೌಡರಂಥ ನಾಯಕರು ಶತಮಾನಕ್ಕೊಮ್ಮೆ ಹುಟ್ಟಿ ಬರಬಹುದು. ಅವರಿಲ್ಲ ಎನ್ನುವ ಕಾರಣಕ್ಕೆ ರೈತರ ಹಿತಾಸಕ್ತಿಗಳನ್ನು ಬಲಿ ಕೊಡುವುದು ಸಮರ್ಥನೀಯವಲ್ಲ. ನ್ಯಾಯಾಲಯಕ್ಕೆ ಹೋಗುವ ಚಾಳಿಯನ್ನು ಪಕ್ಕಕ್ಕಿಟ್ಟು ಮಾತುಕತೆಗೆ ಬನ್ನಿ ಎಂದು ತಮಿಳುನಾಡನ್ನು ಸಂಧಾನದ ಮೇಜಿನ ಮುಂದಕ್ಕೆ ಕರೆಯುವುದು ಸದ್ಯದ ಅಗತ್ಯ.
(ಲೇಖಕರು ಸಾಮಾಜಿಕ ಕಾರ್ಯಕರ್ತ, ಹವ್ಯಾಸಿ ಬರಹಗಾರ)