ಭಾರತೀಯ ಆಹಾರಕ್ರಮದ ನಿರ್ಲಕ್ಷ್ಯ ಸಲ್ಲ
ಸ್ವಾಸ್ಥ್ಯ ವೇದಿಕೆ
ಬಸವರಾಜ ಶಿವಪ್ಪ ಗಿರಗಾಂ
ಮನುಷ್ಯನು ಇಂದು ದೈಹಿಕ ಶ್ರಮಕ್ಕಿಂತ ಮಾನಸಿಕ ಶ್ರಮದಲ್ಲಿ ಮುಳುಗಿ ಅತಿ ಒತ್ತಡದ ಜೀವನವನ್ನು ನಡೆಸುತ್ತಿದ್ದಾನೆ. ಇದರ ಪರಿಣಾಮದಿಂದಾಗಿಪ್ರತಿಯೊಬ್ಬರ ಬದುಕಿನಲ್ಲಿ ಗೆಳೆತನ, ಸಂಬಂಧ, ನೈತಿಕತೆ ಹಾಗೂ ಕುಟುಂಬದೊಂದಿಗೆ ಬೆರೆಯುವ ಪ್ರವೃತ್ತಿಯು ತುಂಬಾ ಕಡಿಮೆಯಾಗಿದೆ. ಹೀಗಾಗಿ ಮಧುಮೇಹ ಹಾಗೂ ರಕ್ತದೊತ್ತಡದಂಥ ಸಮಸ್ಯೆಗಳು ಹೆಚ್ಚಾಗಿವೆ. ಒತ್ತಡ ದಾಯಕ ಬದುಕು ಮಾನವನ ಇನ್ನಿತರ ಅಂಗಗಳ ಆರೋಗ್ಯದ ಮೇಲೂ ತೀವ್ರ ದುಷ್ಪರಿಣಾಮ ಬೀರುತ್ತಿರುವುದು ಸುಳ್ಳೇನಲ್ಲ.
ಪ್ರಸಕ್ತ ದಿನಮಾನದ ನಾಗಾಲೋಟದ ಬದುಕಿನಲ್ಲಿ ಹಣಗಳಿಕೆಯೊಂದೇ ಮುಖ್ಯ ಗುರಿಯಾಗಿರುವುದು ಮತ್ತು ಅದೊಂದೇ ವೈಯಕ್ತಿಕ ಸಾಧನೆಯ ಮಾನದಂಡ ಎನಿಸಿಕೊಂಡಿರುವುದು ದುರದೃಷ್ಟಕರ. ಹೀಗಾಗಿ ಅನೈತಿಕ ಮಾರ್ಗದಿಂದಲಾದರೂ ಸರಿ, ಹಣ ಗಳಿಸಿ ಸುಖ-ಸಂತೋಷವನ್ನು ಅನುಭವಿಸಬೇಕು ಎಂಬ ಚಿತ್ತಸ್ಥಿತಿ ಬಹುತೇಕ ರಲ್ಲಿ ಮೂಡಿದೆ ಮತ್ತು ಯಾರಿಗೂ ಶಾಶ್ವತವಲ್ಲದ ಬದುಕು ಈ ಕಾರಣದಿಂದಾಗಿ ಪ್ರಸ್ತುತ ಕಷ್ಟಗಳಲ್ಲಿಯೇ ಮುನ್ನಡೆಯುವಂತಾಗಿದೆ.
ಆದರೆ ಅಕ್ರಮ ಮಾರ್ಗದಿಂದ ಸಂಪಾದಿಸಿದ ಸಂಪತ್ತು- ಸವಲತ್ತುಗಳಿಂದ ಸುಖ-ಸಂತೋಷ ಅನುಭವಿಸುವ ಬದುಕು, ಬದುಕೇ ಅಲ್ಲ. ವಿಶ್ರಾಂತಿ ರಹಿತವಾಗಿರುವ ಮತ್ತು ಸಂಬಂಧಗಳಿಗೆ ಬೆಲೆಕೊಡದಂತಿರುವ ಬದುಕಿನ ಮಾರ್ಗಗಳು ಮಾನವೀಯತೆಗೆ ಮತ್ತು ಆರೋಗ್ಯಕ್ಕೆ ಹಾನಿಕಾರಕವಾಗಿವೆ ಎಂದರೆ ಅತಿಶಯೋಕ್ತಿಯಲ್ಲ. ಮುಂದಿನ ಪೀಳಿಗೆಗಾಗಿ ಏನಾದರೂ ಸಂಪಾದಿಸಿ ಕೊಡಬೇಕು ಎನ್ನುವುದು ಒಂದು ವರ್ಗದ ಜನರ ಬಯಕೆಯಾದರೆ, ಇನ್ನೊಂದು ವರ್ಗದ ಜನರು ಅದರಲ್ಲೂ ಕಷ್ಟಗಳನ್ನು ಅನುಭವಿಸಲು ಬಯಸದ ಯುವಜನರು, ಹಿರಿಯರು ಸಂಪಾದಿಸಿಟ್ಟಿರುವ ಸಂಪತ್ತಿನಲ್ಲಿ ಮೋಜು-ಮಸ್ತಿ ಮಾಡುತ್ತಿರುವುದು ಬಹಳ ದುಃಖಕರ ಸಂಗತಿಯಾಗಿದೆ.
ಪ್ರಾರಂಭದಲ್ಲಿ ಮಕ್ಕಳಿಗೆ ಕೊಟ್ಟ ಅತಿಯಾದ ಸಲುಗೆಯು, ಮುಂದೆ ಅದೇ ಮಕ್ಕಳು ಆ ಪಾಲಕರ ಮಾತುಗಳನ್ನೇ ತಿರಸ್ಕರಿಸುವಷ್ಟರ ಮಟ್ಟಿಗೆ ಬಲಶಾಲಿ ಗಳನ್ನಾಗಿ ಮಾಡುತ್ತಿರುವುದು ಖೇದಕರ ಸಂಗತಿಯಾಗಿದೆ. ಮತ್ತೊಂದೆಡೆ, ಇದೇ ಯುವಪೀಳಿಗೆಯುವರು ಸರಿಯಾದ ಆಹಾರದ ಕ್ರಮಗಳ ಪಾಲನೆಗೆ ಒಡ್ಡಿಕೊಳ್ಳದೆ, ಕೇವಲ ಬಾಯಿರುಚಿಯನ್ನು ತಣಿಸುವ ಸಲುವಾಗಿ ಸ್ನ್ಯಾಕ್ಸ್ ಮತ್ತು ಕುರುಕಲು ತಿಂಡಿಗಳಿಗೆ ಮಾರುಹೋಗಿ ತಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ.
ಭಾರತೀಯ ಆಹಾರಕ್ರಮಕ್ಕೆ ವಿರುದ್ಧವಾಗಿರುವ ಇಂಥ ಅಸಂಸ್ಕೃತ ಪದ್ಧತಿಯ ಫಲವಾಗಿ, ಇಂದಿನ ಆಹಾರಕ್ರಮವು ಸಂಪೂರ್ಣವಾಗಿ ಬದಲಾಗಿ ಆರೋಗ್ಯದ ಮೇಲೆ ವಿಪರೀತ ಹೊಡೆತ ಬೀಳುತ್ತಿರುವುದನ್ನು ನಾವು ನಂಬಲೇಬೇಕಾಗಿದೆ. ಆಹಾರ ಪದ್ಧತಿಯನ್ನು ಶಿಸ್ತಿನಿಂದ ನಿರ್ವಹಣೆ ಮಾಡಿದಾಗಲೇ ಮನುಕುಲದ ಆರೋಗ್ಯ ದೃಢವಾಗಿರುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಇಂದಿನ ಒತ್ತಡದ ಬದುಕಿನಲ್ಲಿ ಈ ಮಹತ್ವದ ಆಹಾರ ಪದ್ಧತಿಯನ್ನು ಶಿಸ್ತಿನಿಂದ ನಿರ್ವಹಿಸಲು ಬಹುತೇಕರಿಗೆ ಸಾಧ್ಯವಾಗದಿರುವುದು ದುರದೃಷ್ಟಕರ ಸಂಗತಿ.
‘ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ನಾಣ್ಣುಡಿಯು ಸದ್ಯದ ಪರಿಸ್ಥಿತಿಯಲ್ಲಿ ಪಾಲನೆಯಾಗುತ್ತಿಲ್ಲ. ಇದರ ಪರಿಣಾಮ ವಾಗಿ ಇಂದು ಮಾನವನ ಮೇಲೆ ಅಸ್ವಾಭಾವಿಕ ಸಾವು ಹಾಗೂ ಚಿತ್ರವಿಚಿತ್ರವಾದ ರೋಗಗಳು ಎರಗುತ್ತಿವೆ. ಆದರೆ, ಇಷ್ಟೆಲ್ಲಾ ತೊಂದರೆಗಳಲ್ಲಿ ಸಿಲುಕಿ ಒದ್ದಾಡುತ್ತಿದ್ದರೂ, ಬಹುತೇಕ ಜನರು ಆರೋಗ್ಯದ ಸುಧಾರಣೆಯತ್ತ ಗಮನ ನೀಡದಿರುವುದು ಖೇದಕರ ಸಂಗತಿ. ಹಿಂದೆಲ್ಲ ನಮ್ಮ ಪೂರ್ವಜರು ಹೊಟ್ಟೆ ತುಂಬಾ ಊಟಮಾಡಿ, ಮೈಮುರಿಯುವಂತೆ ಕೆಲಸ- ಕಾರ್ಯಗಳನ್ನು ಮಾಡಿ, ಕಣ್ತುಂಬಾ ನಿದ್ರೆ ಮಾಡುತ್ತಿದ್ದುದನ್ನು ಕೇಳಿದ್ದೇವೆ, ಪುಸ್ತಕಗಳಲ್ಲಿ ಓದಿದ್ದೇವೆ.
ಕಾರಣ ಅಂದು ಅವರು ಬಳಸುತ್ತಿದ್ದ ಆಹಾರ ಪದಾರ್ಥಗಳು ಪುಷ್ಟಿದಾಯಕವಾಗಿದ್ದವು, ಅವುಗಳಲ್ಲಿ ಕಲಬೆರಕೆ ಇರುತ್ತಿರಲಿಲ್ಲ. ಇಂದಿನ ತಾಂತ್ರಿಕ ಯುಗದಲ್ಲಿ ಕಂಡುಬರುವ ‘ಸಂಸ್ಕರಣೆ’ ಎಂಬ ಭ್ರಮಾವ್ಯವಸ್ಥೆಯ ಕಪಿಮುಷ್ಟಿಯಲ್ಲಿ ಸಿಲುಕದೆ ಅವು ಶುದ್ಧತೆಯನ್ನು ಉಳಿಸಿಕೊಂಡಿದ್ದವು. ಆದರೆ ಪ್ರಸ್ತುತ ನಾವು ಬಳಸುತ್ತಿರುವ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಎಂಬುದು ಪಿಡುಗಾಗಿ ಪರಿಣಮಿಸಿಬಿಟ್ಟಿದೆ. ಈ ಸಮಸ್ಯೆಯನ್ನು ಸಾಧ್ಯವಾದಷ್ಟುಬೇಗ ಮೂಲೋತ್ಪಾಟನೆ ಮಾಡಬೇಕಿದೆ.
ಇನ್ನು, ಕೆಲ ಕಾಲದ ಹಿಂದೆ ಶುರುವಾಗಿ ಈಗ ಜನಪ್ರಿಯ ಟ್ರೆಂಡ್ ಆಗಿಬಿಟ್ಟಿರುವ ‘ಸಾಯಂಕಾಲದ ಚಾಟ್ಸ್’ ಅಥವಾ ‘ಸ್ನ್ಯಾಕ್ಸ್’ ಎಂಬ ಪರಿಪಾಠವು ಯುವಜನರನ್ನು ಇನ್ನಿಲ್ಲದಂತೆ ಸೆಳೆಯುತ್ತಿದ್ದು ಭರ್ಜರಿ ವಹಿವಾಟು ನಡೆಸುತ್ತಿರುವುದನ್ನು ಬಿಡಿಸಿ ಹೇಳಬೇಕಿಲ್ಲ. ಅದರಲ್ಲೂ ವಿಶೇಷವಾಗಿ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಈ ಪರಿಪಾಠ ಬಹಳ ಜೋರಾಗಿದೆ, ಗ್ರಾಮೀಣ ಪ್ರದೇಶಗಳಿಗೂ ನಿಧಾನವಾಗಿ ನುಸುಳುತ್ತಿದೆ. ಇಂಥ ಸಾಯಂಕಾಲದ ಚಾಟ್ಸ್‌ನಲ್ಲಿ ಪ್ರಮುಖವಾಗಿ ಪಾನಿಪುರಿ, ಗೋಭಿ ಮಂಚೂರಿ, ವಡಾಪಾವ್, ಸೇವ್‌ಪುರಿ, ಭೇಲ್‌ಪುರಿ, ಭಜಿ/ಬೋಂಡಾ, ಚಿವಡಾ, ಪಾಪಡಿ ಸೇರಿದ್ದು,ಇವನ್ನು ಹೊರತುಪಡಿಸಿದ ಇನ್ನೂ ಹಲವು ಖಾದ್ಯಗಳೂ ಮಾರುಕಟ್ಟೆಯಲ್ಲಿ ಜನರ ಮನವನ್ನು ಸೆಳೆಯುತ್ತಿವೆ ಮತ್ತು ನಾಲಗೆಗೆ ಲಗ್ಗೆ ಹಾಕಿವೆ. ಮಕ್ಕಳು, ಯುವಕರು, ಮಹಿಳೆಯರು, ಮಧ್ಯವಯಸ್ಕರು, ವೃದ್ಧರು ಎಂಬ ಭೇದಭಾವ ವಿಲ್ಲದೆ ಬಹುತೇಕರು ಇವುಗಳ ರುಚಿಗೆ ಮನಸೋತಿರುವುದು ಸುಳ್ಳೇನಲ್ಲ.
ಹೀಗೆ ಈ ಖಾದ್ಯಗಳೆಡೆಗಿನ ಜನರ ಅತಿರೇಕದ ವಾಲುವಿಕೆ, ಪ್ರತಿಯಾಗಿ ಅವು ನೀಡುವ ಬಾಯಿರುಚಿ, ತನ್ಮೂಲಕ ಅವಕ್ಕೆ ದಕ್ಕಿರುವ ಜನಪ್ರಿಯತೆಯಿಂದಾಗಿಮತ್ತೊಂದು ಅನಪೇಕ್ಷಿತ ಬೆಳವಣಿಗೆಯಾಗಿದೆ. ಅದೆಂದರೆ, ಇವು ಈಗ ಕೇವಲ ಸಾಯಂಕಾಲದ ಚಾಟ್ಸ್ ಅಥವಾ ಸ್ನ್ಯಾಕ್ಸ್ ಆಗಿ ಉಳಿದಿಲ್ಲ, ಅದೊಂದೇ ಕಾಲಕ್ಕೆ ಸೀಮಿತವಾಗಿಲ್ಲ, ದಿನಪೂರ್ತಿ ಸವಿಯಲು ಇವು ಲಭ್ಯವಿರುತ್ತವೆ. ಹೀಗಾಗಿಯೇ, ಸೂಕ್ತ ಆಹಾರ ಕ್ರಮದ ಅನುಸರಣೆಗಾರರು ಮತ್ತು ಆರೋಗ್ಯರಕ್ಷಣೆಯ ವಿಷಯದಲ್ಲಿ ಕಾಳಜಿ ಹೊಂದಿರುವವರು ‘ಇಂಥ ಚಾಟ್ಸ್, ಸ್ನ್ಯಾಕ್ಸ್ ಮತ್ತು ಕುರುಕಲು ತಿಂಡಿಗಳು ಮನುಕುಲದ ಆರೋಗ್ಯಕ್ಕೆ ಸಹಕಾರಿ ಯಾಗಿವೆಯೇ?’ ಎಂದು ಪ್ರಶ್ನಿಸಿಕೊಂಡು ಆತಂಕಕ್ಕೆ ಒಳಗಾಗುವಂತಾಗಿದೆ.
‘ಮೈಮುರಿಯುವಷ್ಟು ಕೆಲಸ, ಹೊಟ್ಟೆ ತುಂಬಾ ಊಟ ಮತ್ತು ಕಣ್ತುಂಬಾ ನಿದ್ರೆ’ ಎಂಬ ನಮ್ಮ ಪೂರ್ವಜರ ಸಾಂಪ್ರದಾಯಿಕ ಜೀವನಕ್ರಮವು ಇಂದು ಬಹುತೇಕ ಇಲ್ಲವಾಗಿದೆ; ಏಕೆಂದರೆ ಮೇಲೆ ಉಲ್ಲೇಖಿಸಲಾಗಿರುವ ಸಾಯಂಕಾಲದ ಚಾಟ್ಸ್ ಈಗ ದಿನಪೂರ್ತಿ ಲಭ್ಯವಿರುವುದರಿಂದ ಕೆಲ ಜನರು ಸಮಯಕ್ಕೆ ಸರಿಯಾಗಿ ಊಟ ಮಾಡುವ ಪದ್ಧತಿಯನ್ನು ತ್ಯಜಿಸಿ, ಸಮಯದ ಪರಿವೆಯೇ ಇಲ್ಲದೆ ಮೇಲಿಂದ ಮೇಲೆ ಇಂಥ ಕುರುಕುಲುಗಳನ್ನು ಮೆಲ್ಲುತ್ತ ತಮ್ಮ ಆರೋಗ್ಯಕ್ಕೆ ಸ್ವತಃ ಸಂಚಕಾರ ತಂದುಕೊಳ್ಳುತ್ತಿದ್ದಾರೆ.
ಭಾರತೀಯ ಆಹಾರ ಶೈಲಿಯು ವೈವಿಧ್ಯವನ್ನು ಒಳಗೊಂಡಿರುವಂಥದ್ದು. ಋತುಮಾನಕ್ಕೆ ತಕ್ಕಂತಿರುವ ಮತ್ತು ಥರಹೇವಾರಿ ಸ್ವರೂಪದಲ್ಲಿರುವ ನಮ್ಮ ಆರೋಗ್ಯಕರ ಭಕ್ಷ್ಯ- ಭೋಜ್ಯಗಳು, ವ್ಯಂಜನಗಳು ವಿಶ್ವದಲ್ಲಿಯೇ ಪ್ರಸಿದ್ಧಿಯನ್ನು ಪಡೆದಿರುವಂಥವು ಎಂದು ಹೆಮ್ಮೆಯಿಂದಲೇ ಹೇಳಿಕೊಳ್ಳಬಹುದು. ಭಾರತದಲ್ಲಿ ಅನೂಚಾನವಾಗಿ ಬೆಳೆದು ಬಂದಿರುವ ಸಾಂಪ್ರದಾಯಿಕ ಖಾದ್ಯಗಳು ಮತ್ತು ತಿಂಡಿ- ತಿನಿಸುಗಳು ಹತ್ತು ಹಲವು ರೋಗಗಳಿಗೆ ರಾಮಬಾಣ ವಾಗಿರು ವುದಲ್ಲದೆ ಆಯಾ ಋತುಮಾನಕ್ಕೆ ತಕ್ಕಂತೆ ಮಾನವ ಶರೀರ ವನ್ನು ಕಾಪಾಡುವ ಒಂದಿಲ್ಲೊಂದು ಬಗೆಯ ಪುಷ್ಟಿದಾಯಕ ಧಾತುಗಳನ್ನು ಒಳಗೊಂಡಿರುವ ‘ಶಕ್ತಿವರ್ಧಕ ಆಹಾರ ಪ್ಯಾಕೇಜ್’ ಆಗಿವೆ ಎಂದರೆ ಅತಿಶಯೋಕ್ತಿಯಲ್ಲ.
ಆಹಾರವನ್ನು ಔಷಧದೊಂದಿಗೆ ಸಮೀಕರಿಸಿರುವ ಪರಂಪರೆ ನಮ್ಮದು. ಅಂತೆಯೇ, ‘ಆಹಾರವನ್ನು ಔಷಧವಾಗಿ ಪರಿಗಣಿಸಿ ಸೇವಿಸದಿದ್ದರೆ, ಮುಂದೊಂದು ದಿನ ಔಷಧ-ಮಾತ್ರೆಗಳನ್ನೇ ಆಹಾರವಾಗಿ ಸೇವಿಸಬೇಕಾದ ಅನಿವಾರ್ಯ ಎದುರಾಗಬಹುದು’ ಎಂಬ ಎಚ್ಚರಿಕೆಯನ್ನೂ ನೀಡುವ ಖಾದ್ಯಪದ್ಧತಿ ಭಾರತೀಯರದ್ದಾಗಿದೆ. ಆದರೀಗ ಈ ಸಾಂಪ್ರದಾಯಿಕ ಪದ್ಧತಿಯ ಮೇಲಾಗಿರುವ ‘ಸ್ನ್ಯಾಕ್ಸ್/ಚಾಟ್ಸ್’ ಹಾವಳಿಯಿಂದಾಗಿ ಭಾರತೀಯ ಶೈಲಿಯ ಆರೋಗ್ಯವರ್ಧಕ ಮತ್ತು ಮೂಲ ಆಹಾರ ಖಾದ್ಯಗಳ ಉಪಯೋಗ ಗಣನೀಯವಾಗಿ ತಗ್ಗುತ್ತಿದೆ.
ಜತೆಗೆ ಪಾಶ್ಚಾತ್ಯ ಸಂಸ್ಕೃತಿಯ ಲೇಪವಿರುವ ಬಗೆಬಗೆಯ ಮತ್ತು ಬಣ್ಣಬಣ್ಣದ ‘ಜಂಕ್ ಫುಡ್’ಗಳ ಸೆಳೆತಕ್ಕೆ ಮರುಳಾಗಿರುವ ಭಾರತೀಯರು ತಮ್ಮತನವನ್ನು ತೊರೆಯುತ್ತಿದ್ದಾರೆ. ನಮ್ಮವಲ್ಲದ ಇಂಥ ಆಹಾರ ಪದಾರ್ಥಗಳು ನಮ್ಮ ದೇಹಕ್ಕೂ ಮತ್ತು ಭಾರತೀಯ ಹವಾಮಾನಕ್ಕೂ ಸರಿಯಾಗಿ ಒಗ್ಗುವುದಿಲ್ಲ ಎಂಬ ಸೂಕ್ಷ್ಮವನ್ನು ಇವರೆಲ್ಲ ಮನಗಾಣುವುದು ಯಾವಾಗ? ಹಲವಾರು ವೈದ್ಯರು, ಆಹಾರಪಥ್ಯದ ತಜ್ಞರು ಹಾಗೂ ಆರೋಗ್ಯದ ಕುರಿತಾದ ಸಾಕಷ್ಟು ಪ್ರಯೋಗಗಳು ತಿಳಿಹೇಳುವಂತೆ, ಮನುಷ್ಯನು ಆರೋಗ್ಯವಂತನಾಗಿ ಬದುಕಲು ಶುದ್ಧವಾಗಿರುವ, ಸಮಗ್ರವಾಗಿರುವ ಮತ್ತು ಪೋಷಕಾಂಶಗಳ ಆಗರವಾಗಿರುವ ಆಹಾರಗಳು ಅವಶ್ಯವಾಗಿ ಬೇಕು.
ಒಮ್ಮೆ ಶುದ್ಧವಾದ ಮತ್ತು ಆರೋಗ್ಯಕರವಾದ ಆಹಾರವನ್ನು ಸೇವಿಸಿದ ಕನಿಷ್ಠ ೪ರಿಂದ ೫ ಗಂಟೆಗಳ ನಂತರ ಅಥವಾ ಮೊದಲು ಸೇವಿಸಿದ ಆಹಾರವು ಸಂಪೂರ್ಣವಾಗಿ ಪಚನಗೊಂಡ ನಂತರವಷ್ಟೇ ಮತ್ತದೇ ಶುದ್ಧ-ಪುಷ್ಟಿದಾಯಕ ಆಹಾರವನ್ನು ಸೇವಿಸಬೇಕು ಎಂಬುದು ನಮ್ಮ ತಜ್ಞರು ಹಾಕಿಕೊಟ್ಟಿರುವ ನಿಯಮ. ಇದರ ಅನುಸರಣೆ ತಪ್ಪಿದಲ್ಲಿ ಮನುಷ್ಯರ ಆರೋಗ್ಯವು ಹದಗೆಡುತ್ತದೆ ಎಂಬುದು ಸ್ಪಷ್ಟವಾಗಿರುವುದರಿಂದ ಇದು ಎಲ್ಲರೂ ಒಪ್ಪಿಕೊಳ್ಳಲೇಬೇಕಾದ ಸತ್ಯವಾಗಿದೆ.
ಮೊದಲು ಸೇವಿಸಿದ ಆಹಾರವೇ ಸಂಪೂರ್ಣ ಪಚನವಾಗದಿರುವಾಗ ಮತ್ತೆ ಆಹಾರವನ್ನು ಸೇವಿಸಿದಲ್ಲಿ ಶರೀರವು ಅನಾರೋಗ್ಯದ ಗೂಡಾಗುವ ಸಾಧ್ಯತೆ ಇರುತ್ತದೆ. ಈ ಅಪ್ರಿಯ ಸತ್ಯವನ್ನು ಪ್ರತಿಯೊಬ್ಬರೂ ಮನಗಾಣಬೇಕು. ಭಾರತದಲ್ಲಿ ಋತುಮಾನಕ್ಕೆ ಅನುಗುಣವಾಗಿ ಹಲವಾರು ಬಗೆಯ ಹಣ್ಣುಗಳು ಲಭ್ಯವಿವೆ. ಇವು ಪುಷ್ಟಿದಾಯಕ ಮತ್ತು ಆರೋಗ್ಯದಾಯಕ ಎಂಬುದು ಗೊತ್ತಿದ್ದರೂ ಇವುಗಳನ್ನಾಗಲೀ, ಇವುಗಳ ಶುದ್ಧರಸವನ್ನಾಗಲೀ ಸೇವಿಸುವ ಪರಿಪಾಠ ನಮ್ಮವರಲ್ಲಿ ಅದೇಕೋ ಕಡಿಮೆಯಾ ಗುತ್ತಿದೆ. ಕ್ರಿಮಿ-ಕೀಟ, ಪ್ರಾಣಿ-ಪಕ್ಷಿಗಳು, ಮನುಷ್ಯರು ಸೇರಿದಂತೆ ಈ ಭೂಮಿಯ ಮೇಲೆ ವಾಸಿಸುವಪ್ರತಿಯೊಂದು ಜೀವಿಯೂ ಆರೋಗ್ಯ ವಂತ ಬದುಕನ್ನು ಕಟ್ಟಿಕೊಳ್ಳುವಂತಾಗಲು ಆ ಭಗವಂತ ದಯ ಪಾಲಿಸಿರುವ ಅತಿ ಶ್ರೇಷ್ಠ ಆಹಾರವೇ ಈ ಹಣ್ಣುಗಳು ಎಂಬುದನ್ನು ನಾವು ಮರೆಯ ಬಾರದು.
ಏಕೆಂದರೆ ಹಣ್ಣುಗಳ ನಿಯತ ಸೇವನೆಯು ಆರೋಗ್ಯವಂತ ಬದುಕಿಗೆ ಸೋಪಾನವಾಗಿದೆ. ರಾಸಾಯನಿಕ ರಹಿತ ಸಾವಯವ ಕೃಷಿಯು ಶುದ್ಧ ಆಹಾರದ ಮೂಲವಾಗಿದೆ. ಇಂಥ ಸಾವಯವ ಆಹಾರ ಪದಾರ್ಥಗಳನ್ನು ಉಪಯೋಗಿಸಿ ಸಶಕ್ತರಾಗಿ ಅದರ ನೆರವಿ ನಿಂದ ಮೈದಣಿಯೆ ಕೆಲಸ ಮಾಡುವುದೇ ನಮ್ಮ ಪೂರ್ವಜರ ಆರೋಗ್ಯದ ಗುಟ್ಟಾಗಿತ್ತು, ಅವರ ರೋಗನಿರೋಧಕ ಶಕ್ತಿಯೂ ಮಹತ್ತರವಾಗಿತ್ತು. ಇಂಥ ಅಪೂರ್ವ ತಿಳಿವಳಿಕೆಯ ಕೊರತೆ ಯಿಂದಾಗಿಯೇ ಇಂದು ಹೊಸಹೊಸ ರೋಗಗಳು ಮಾನವನ ಮೇಲೆ ದಾಳಿ ಮಾಡುತ್ತಿವೆ ಎಂದರೆ ಅತಿಶಯೋಕ್ತಿ ಆಗಲಾ ರದು. ಅದರಲ್ಲೂತಿಳಿವಳಿಕೆಯುಳ್ಳವರು ಎನಿಸಿ ಕೊಂಡವ ರಿಂದಲೇ ಭಾರತೀಯ ಆಹಾರ ಕ್ರಮಗಳ ಉಲ್ಲಂಘನೆಯಾಗುತ್ತಿರುವುದು ದುರ್ದೈವದ ಸಂಗತಿ. ಆದದ್ದಾಯಿತು, ಇನ್ನಾದರೂ ಜಾಣ ರಾಗೋಣ.
(ಲೇಖಕರು ಕೃಷಿ ಸಾಹಿತಿ)