ಅಪ್ರತಿಮ ಕೊಡುಗೆಯಿತ್ತ ಸ್ವಾಮಿನಾಥನ್
ಸಂಸ್ಮರಣೆ
ನರೇಂದ್ರ ಮೋದಿ
ಕೆಲವು ದಿನಗಳ ಹಿಂದಷ್ಟೇ ಪ್ರೊಫೆಸರ್ ಎಂ.ಎಸ್. ಸ್ವಾಮಿನಾಥನ್ ಅವರು ನಮ್ಮನ್ನು ಅಗಲಿದರು. ಕೃಷಿ ವಿಜ್ಞಾನದಲ್ಲಿ ಕ್ರಾಂತಿ ತಂದ ದಾರ್ಶನಿಕ  ರೊಬ್ಬರನ್ನು ನಮ್ಮ ದೇಶವು ಕಳೆದುಕೊಂಡಿತು. ಆದರೂ ಭಾರತಕ್ಕೆ ಅವರಿತ್ತ ಕೊಡುಗೆಯು ಸುವರ್ಣಾಕ್ಷರಗಳಲ್ಲಿ ಕೆತ್ತಲ್ಪಟ್ಟಿದ್ದು, ಅದು ಅಚ್ಚಳಿಯದೆಅಜರಾಮರವಾಗಲಿದೆ.
ಭಾರತದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಸ್ವಾಮಿನಾಥನ್, ನಮ್ಮ ರಾಷ್ಟ್ರ, ವಿಶೇಷವಾಗಿ ನಮ್ಮ ರೈತರು ಸಮೃದ್ಧಿಯ ಜೀವನ ನಡೆಸಬೇಕೆಂದು ಬಯಸಿದ್ದರು. ಶೈಕ್ಷಣಿಕವಾಗಿ ಪ್ರತಿಭಾವಂತರಾಗಿದ್ದ ಅವರಿಗೆ ಯಾವುದೇ ವೃತ್ತಿಯನ್ನಾದರೂ ಆಯ್ದುಕೊಳ್ಳುವ ಅವಕಾಶವಿತ್ತು. ಆದರೆ, ೧೯೪೩ರ ಬಂಗಾಳದ ಕ್ಷಾಮ ಅವರ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ, ತಾವು ಮಾಡುವ ಒಂದೇ ಒಂದು ಕೆಲಸ ಯಾವುದಾದರೂ ಇದ್ದರೆ ಅದು ಕೃಷಿಯ ಅಧ್ಯಯನ ಎಂದು ಸ್ಪಷ್ಟ ಸಂಕಲ್ಪತೊಟ್ಟರು.
ವಯಸ್ಸಿನಲ್ಲಿ ಚಿಕ್ಕವರಾದರೂ ಅವರು ಡಾ. ನಾರ್ಮನ್ ಬೋರ್ಲಾಗ್‌ರ ಸಂಪರ್ಕಕ್ಕೆ ಬಂದರು, ಜತೆಗೆ ಅವರ ಕೆಲಸವನ್ನು ಆಳವಾಗಿ ಅನುಸರಿಸಿದರು. ೧೯೫೦ರ ದಶಕದಲ್ಲಿ ಅವರಿಗೆ ಅಮೆರಿಕದಲ್ಲಿ ಬೋಧಕರಾಗುವ ಅವಕಾಶ ಒದಗಿತು. ಆದರೆ ಅವರು ಭಾರತದಲ್ಲಿ ಮತ್ತು ಭಾರತಕ್ಕಾಗಿ ಕೆಲಸ ಮಾಡಲು ಬಯಸಿದ್ದರಿಂದ ಅದನ್ನು ತಿರಸ್ಕರಿಸಿದರು.
ಸ್ವಾಮಿನಾಥನ್ ನಮ್ಮ ರಾಷ್ಟ್ರವನ್ನು ಸ್ವಾವಲಂಬನೆ ಮತ್ತು ಆತ್ಮವಿಶ್ವಾಸದ ಪಥದತ್ತ ಮುನ್ನಡೆಸಿದ ಸವಾಲಿನ ಸಂದರ್ಭಗಳ ಬಗ್ಗೆ ನೀವೆಲ್ಲರೂ ಯೋಚಿಸಬೇಕೆಂದು ಬಯಸುತ್ತೇನೆ. ಸ್ವಾತಂತ್ರ್ಯದ ನಂತರದ ಮೊದಲ ೨ ದಶಕ ಗಳಲ್ಲಿ ಅಪಾರ ಸವಾಲು ನಮ್ಮೆದುರಿದ್ದವು, ಅವುಗಳಲ್ಲಿ ಆಹಾರದ ಕೊರತೆಯೂ ಒಂದಾಗಿತ್ತು. ೧೯೬೦ರ ದಶಕದ ಆರಂಭದಲ್ಲಿ ಭಾರತವು ಕ್ಷಾಮದ ಕರಿಛಾಯೆಯೊಂದಿಗೆ ಹೋರಾಡುತ್ತಿತ್ತು. ಸರಿಯಾಗಿ ಇದೇ ವೇಳೆಗೆ ಸ್ವಾಮಿನಾಥನ್ ಅವರ ಅಚಲ ಬದ್ಧತೆ ಮತ್ತು ದೂರದೃಷ್ಟಿಯು ಕೃಷಿ ಸಮೃದ್ಧಿಯ ಹೊಸ ಯುಗಕ್ಕೆ ನಾಂದಿಹಾಡಿತು. ಕೃಷಿ ಹಾಗೂ ಗೋಧಿ ತಳಿಯ ಅಭಿವೃದ್ಧಿಯಂಥ ನಿರ್ದಿಷ್ಟ ಕ್ಷೇತ್ರಗಳಲ್ಲಿ ಸ್ವಾಮಿನಾಥನ್‌ರ ಮುಂಚೂಣಿ ಕೆಲಸವು ಗೋಧಿ ಉತ್ಪಾದನೆಯಲ್ಲಿ ಗಮನಾರ್ಹ ಹೆಚ್ಚಳಕ್ಕೆ ಕಾರಣ ವಾಯಿತು.
ಇದರಿಂದಾಗಿ ಭಾರತವು ಆಹಾರ ಕೊರತೆಯ ದೇಶದ ಹಂತದಿಂದ ಸ್ವಾವಲಂಬಿ ರಾಷ್ಟ್ವಾಗಿ ಪರಿವರ್ತನೆಯಾಯಿತು. ಈ ಅದ್ಭುತ ಸಾಧನೆಯು ಸ್ವಾಮಿ ನಾಥನ್‌ರಿಗೆ ‘ಭಾರತೀಯ ಹಸಿರು ಕ್ರಾಂತಿಯ ಪಿತಾಮಹ’ ಎಂಬ ಬಿರುದನ್ನು ಗಳಿಸಿಕೊಟ್ಟಿತು. ಭಾರತದಲ್ಲಿ ಅಂತರ್ಗತವಾಗಿದ್ದ ‘ನಾವು ಸಹ ಮಾಡಬಲ್ಲೆವು’ ಎಂಬ ಮನೋಭಾವದ ಒಂದು ಮುನ್ನೋಟವನ್ನು ಹಸಿರುಕ್ರಾಂತಿ ಒದಗಿಸಿತು. ನಮಗೆ ಶತಕೋಟಿ ಸವಾಲು ಗಳಿದ್ದರೇನಂತೆ, ಅವನ್ನು ಪರಿಹರಿಸಲು ನಾವೀನ್ಯದ ಜ್ವಾಲೆಯೊಂದಿಗೆ ಶತಕೋಟಿ ಮನಸ್ಸುಗಳೂ ಇಲ್ಲಿವೆ ಎಂಬ ಆಶಾಕಿರಣವನ್ನು ಹೊಮ್ಮಿಸಿತು. ಹಸಿರುಕ್ರಾಂತಿ ಪ್ರಾರಂಭವಾದ ೫ ದಶಕಗಳ ನಂತರ, ಭಾರತೀಯ ಕೃಷಿ ಹೆಚ್ಚು ಆಧುನಿಕ ಮತ್ತು ಪ್ರಗತಿಪರವಾಗಿದೆ. ಆದರೆ, ಇದಕ್ಕೆ ಸ್ವಾಮಿನಾಥನ್ ಹಾಕಿದ ಅಡಿಪಾಯವನ್ನು ಮರೆಯಲಾಗದು.
ಆಲೂಗಡ್ಡೆ ಬೆಳೆಗಳ ಮೇಲೆ ಪರಿಣಾಮ ಬೀರುವ ಪರಾವಲಂಬಿ ಜೀವಿಗಳನ್ನು ಎದುರಿಸುವ ಕುರಿತಾದ ಅವರ ಸಂಶೋಧನೆಯು ಈ ಬೆಳೆಗಳಿಗೆ ಶೀತ ಹವಾಮಾನವನ್ನು ತಡೆದುಕೊಳ್ಳಲು ಅನುವುಮಾಡಿಕೊಟ್ಟಿತು. ಇಂದು, ಜಗತ್ತು ‘ಸಿರಿಧಾನ್ಯಗಳು ಶಕ್ತಿಯುತ ಆಹಾರ’ ಎಂದು ಮಾತನಾಡುತ್ತಿದೆ. ಆದರೆ ಸ್ವಾಮಿನಾಥನ್ ೧೯೯೦ರ ದಶಕದಿಂದಲೇ ಸಿರಿ ಧಾನ್ಯಗಳ ಬಗೆಗಿನ ಚರ್ಚೆಯನ್ನು ಪ್ರೋತ್ಸಾಹಿಸಿದ್ದರು. ಸ್ವಾಮಿನಾಥನ್ ಜತೆಗಿನ ನನ್ನ ಒಡನಾಟಗಳು ವ್ಯಾಪಕವಾಗಿವೆ. ೨೦೦೧ರಲ್ಲಿ ನಾನು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವು ಪ್ರಾರಂಭವಾದವು. ಆ ದಿನಗಳಲ್ಲಿ, ಗುಜರಾತ್ ಕೃಷಿ ಪರಿಣತಿಗೆ ಅಷ್ಟೊಂದು ಹೆಸರುವಾಸಿಯಾಗಿರಲಿಲ್ಲ. ಸತತ ಬರಗಾಲ, ಪ್ರಚಂಡ ಚಂಡಮಾರುತ ಮತ್ತು ಭೂಕಂಪವು ರಾಜ್ಯದ ಪ್ರಗತಿಪಥದ ಮೇಲೆ ಪರಿಣಾಮ ಬೀರಿತ್ತು. ನಾವು ಪ್ರಾರಂಭಿಸಿದ ಅನೇಕ ಉಪಕ್ರಮಗಳಲ್ಲಿ, ಮಣ್ಣಿನ ಆರೋಗ್ಯ ಕಾರ್ಡ್ ಕೂಡ ಒಂದಾಗಿತ್ತು. ಇದು ಮಣ್ಣನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಸಮಸ್ಯೆಗಳು ಉದ್ಭವಿಸಿದರೆ ಅವನ್ನು ಪರಿಹರಿಸಲು ನಮಗೆ ಅನುವುಮಾಡಿಕೊಟ್ಟಿತು.
ಈ ಯೋಜನೆ ಹಿನ್ನೆಲೆಯಲ್ಲಿ ನಾನು ಸ್ವಾಮಿನಾಥನ್‌ರನ್ನು ಭೇಟಿಯಾಗಿದ್ದೆ. ಅವರು ಯೋಜನೆಯನ್ನು ಶ್ಲಾಸಿದ್ದರ ಜತೆಗೆ ಅಮೂಲ್ಯ ಸಲಹೆ-ಸೂಚನೆ ಗಳನ್ನು ನೀಡಿದರು. ಈ ಯೋಜನೆ ಬಗ್ಗೆ ಸಂದೇಹ ವಿದ್ದವರಿಗೆ ಮನವರಿಕೆ ಮಾಡಲು ಅವರ ಅನುಮೋದನೆಯೊಂದೇ ಸಾಕಾಗಿತ್ತು. ಇದು ಅಂತಿಮವಾಗಿ ಗುಜರಾತ್‌ನ ಕೃಷಿ ಯಶಸ್ಸಿಗೆ ವೇದಿಕೆಯನ್ನು ನಿರ್ಮಿಸಿತು. ನಾನು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗಲೂ ಈ ಒಡನಾಟ ಮುಂದುವರಿಯಿತು. ನಾನು ಅವರನ್ನು ೨೦೧೬ರಲ್ಲಿ ‘ಅಂತಾರಾಷ್ಟ್ರೀಯ ಕೃಷಿ-ಜೀವವೈವಿಧ್ಯ ಕಾಂಗ್ರೆಸ್’ನಲ್ಲಿ ಭೇಟಿಯಾಗಿದ್ದೆ. ಅದರ ಮುಂದಿನ ವರ್ಷ, ಅವರು ಬರೆದ ೨ ಭಾಗಗಳ ಪುಸ್ತಕ ಸರಣಿಯನ್ನು ಲೋಕಾರ್ಪಣೆ ಮಾಡಿದ್ದೆ.
ರೈತರು ಜಗತ್ತನ್ನು ಒಟ್ಟಿಗೆ ಬೆಸೆದು ಹಿಡಿದಿರುವ ಬಂಧಕ ಶಕ್ತಿ ಎಂದು ‘ಕುರಾಲ್’ ಕೃಷಿಕರನ್ನು ಬಣ್ಣಿಸುತ್ತದೆ. ಏಕೆಂದರೆ ಎಲ್ಲರನ್ನೂ ಪೋಷಿಸುವುದು ರೈತರೇ. ಸ್ವಾಮಿನಾಥನ್ ಅವರು ಈ ತತ್ತ್ವವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು. ಬಹಳಷ್ಟು ಜನರು ಅವರನ್ನು ‘ಕೃಷಿ ವಿಜ್ಞಾನಿ’ ಎಂದು ಕರೆಯು ತ್ತಾರೆ. ಆದರೆ, ಅವರು ಅದಕ್ಕೂ ಮಿಗಿಲಾದವರಾಗಿದ್ದರು ಎಂದು ನಾನು ನಂಬುತ್ತೇನೆ. ಅವರು ನಿಜವಾದ ‘ರೈತರ ವಿಜ್ಞಾನಿ’ ಆಗಿದ್ದರು. ಅವರ ಹೃದಯ ದಲ್ಲಿ ಒಬ್ಬ ರೈತನಿದ್ದ.ಅವರ ಕಾರ್ಯ-ಕೃತಿಗಳ ಯಶಸ್ಸು ಅವರ ಶೈಕ್ಷಣಿಕ ಉತ್ಕೃಷ್ಟತೆಗಷ್ಟೇ ಸೀಮಿತವಾಗಿಲ್ಲ; ಪ್ರಯೋಗಾಲಯಗಳ ಹೊರಗೆ, ಹೊಲ-ಗದ್ದೆಗಳಲ್ಲಿ ಅವು ಬೀರಿದ ಪರಿಣಾಮದಲ್ಲಿ ಇದು ಅಡಗಿದೆ. ಸ್ವಾಮಿನಾಥನ್ ಕೈಗೊಂಡ ಕಾರ್ಯವು ವೈಜ್ಞಾನಿಕ ಜ್ಞಾನ ಮತ್ತು ಅದರ ಪ್ರಾಯೋಗಿಕ ಅನ್ವಯದ ನಡುವಿನ ಅಂತರವನ್ನು ತಗ್ಗಿಸಿತು.
ಮಾನವ ಪ್ರಗತಿ ಮತ್ತು ಪರಿಸರ ಸುಸ್ಥಿರತೆಯ ನಡುವಿನ ಸೂಕ್ಷ್ಮ ಸಮತೋಲನವನ್ನು ಒತ್ತಿ ಹೇಳುವ ಮೂಲಕ ಅವರು ಸುಸ್ಥಿರ ಕೃಷಿಯನ್ನು ನಿರಂತರಪ್ರತಿಪಾದಿಸಿದರು. ಸಣ್ಣ ರೈತರ ಜೀವನವನ್ನು ಸುಧಾರಿಸಲು ಮತ್ತು ಅಂಥ ರೈತರು ಸಹ ನಾವೀನ್ಯದ ಫಲಗಳನ್ನು ಆನಂದಿಸುವುದನ್ನು ಖಾತರಿಪಡಿಸಲು ಸ್ವಾಮಿನಾಥನ್ ನೀಡಿದ ವಿಶೇಷ ಮಹತ್ವವನ್ನು ನಾನಿಲ್ಲಿ ಒತ್ತಿಹೇಳಲೇಬೇಕು. ಮಹಿಳಾ ರೈತರ ಜೀವನವನ್ನು ಸುಧಾರಿಸುವ ಬಗ್ಗೆ ಅವರು ವಿಶೇಷವಾಗಿಉತ್ಸುಕರಾಗಿದ್ದರು.
ಸ್ವಾಮಿನಾಥನ್‌ರ ಬಗ್ಗೆ ಹೇಳಬೇಕಾದ ಮತ್ತೊಂದು ಗಮನಾರ್ಹ ವಿಷಯವಿದೆ. ಅವರು ನಾವೀನ್ಯ ಮತ್ತು ಮಾರ್ಗದರ್ಶನದ ಪರಾಕಾಷ್ಠೆಯಾಗಿ ನಿಂತಿದ್ದಾರೆ. ೧೯೮೭ರಲ್ಲಿ ಅವರು ‘ವಿಶ್ವ ಆಹಾರ ಪ್ರಶಸ್ತಿ’ಗೆ ಭಾಜನರಾದಾಗ, ಈ ಪ್ರತಿಷ್ಠಿತ ಗೌರವದ ಮೊದಲ ಪುರಸ್ಕೃತರೆನಿಸಿದ ಅವರು ಬಹುಮಾನವಾಗಿ ಬಂದ ಹಣವನ್ನು ಲಾಭರಹಿತ ಸಂಶೋಧನಾ ಪ್ರತಿಷ್ಠಾನದ ಸ್ಥಾಪನೆಗೆ ಬಳಸಿದರು. ಇಲ್ಲಿಯವರೆಗೆ, ಇದು ವಿವಿಧ ಕ್ಷೇತ್ರಗಳಲ್ಲಿ ವ್ಯಾಪಕವಾದ ಕೆಲಸವನ್ನು ಕೈಗೊಂಡಿದೆ. ಸ್ವಾಮಿನಾಥನ್ ಅಸಂಖ್ಯಾತ ಮನಸ್ಸುಗಳನ್ನು ಪೋಷಿಸಿದ್ದಾರೆ, ಅವರಲ್ಲಿ ಕಲಿಕೆ ಮತ್ತು ನಾವೀನ್ಯದ ಉತ್ಸಾಹ ತುಂಬಿದ್ದಾರೆ.ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ, ಸ್ವಾಮಿನಾಥನ್‌ರ ಜೀವನವು ಜ್ಞಾನ, ಮಾರ್ಗದರ್ಶನ ಮತ್ತು ನಾವೀನ್ಯದ ಅನಂತ ಶಕ್ತಿಯನ್ನು ನಮಗೆ ನೆನಪಿಸುತ್ತದೆ. ಅವರು ವಿವಿಧ ಸಂಸ್ಥೆಗಳ ನಿರ್ಮಾತೃವೂ ಆಗಿದ್ದರು, ಅಗಾಧ ಸಂಶೋಧನೆ ನಡೆಯುವ ಅನೇಕ ಕೇಂದ್ರಗಳನ್ನು ಅವರು ಹೊಂದಿದ್ದರು.
ಮನಿಲಾದ ‘ಅಂತಾರಾಷ್ಟ್ರೀಯ ಭತ್ತ ಸಂಶೋಧನಾ ಸಂಸ್ಥೆ’ಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ೨೦೧೮ ರಲ್ಲಿ ವಾರಣಾಸಿಯಲ್ಲಿ ‘ಅಂತಾ ರಾಷ್ಟ್ರೀಯ ಭತ್ತ ಸಂಶೋಧನಾ ಸಂಸ್ಥೆ’ಯ ದಕ್ಷಿಣ ಏಷ್ಯಾ ಪ್ರಾದೇಶಿಕ ಕೇಂದ್ರವನ್ನು ತೆರೆಯಲಾಯಿತು. ಸ್ವಾಮಿನಾಥನ್‌ರಿಗೆ ಗೌರವ ಸಲ್ಲಿಸಲು ನಾನು ಮತ್ತೆ ‘ಕುರಲ್’ ಅನ್ನು ಉಲ್ಲೇಖಿಸಲು ಬಯಸುತ್ತೇನೆ. ‘ಯೋಜನೆಯಲ್ಲಿ ದೃಢತೆಯಿರುವವರು, ತಾವು ಬಯಸಿದಂತೆ ಸಾಧಿಸುತ್ತಾರೆ’ ಎಂಬ ಉಲ್ಲೇಖ ಅದರಲ್ಲಿದೆ. ಕೃಷಿಯನ್ನು ಬಲಪಡಿಸಲು ಮತ್ತು ರೈತರಿಗೆ ಸೇವೆ ಸಲ್ಲಿಸಲು ಬಯಸುತ್ತೇನೆ ಎಂದು ತಮ್ಮ ಜೀವನದ ಆರಂಭದಲ್ಲೇ ಸಂಕಲ್ಪಿಸಿದ್ದ ಕಟ್ಟಾಳು ಅವರಾಗಿದ್ದರು. ಅಲ್ಲದೆ, ತಾವು ಅಂದುಕೊಂಡಿದ್ದನ್ನು ಅಸಾಧಾರಣವಾಗಿ, ನವೀನ ರೀತಿಯಲ್ಲಿ ಮತ್ತು ಭಾವೋತ್ಕರ್ಷದಿಂದ ಮಾಡಿದರು.
ನಾವು ಕೃಷಿ ನಾವೀನ್ಯ ಮತ್ತು ಸುಸ್ಥಿರತೆಯ ಹಾದಿಯಲ್ಲಿ ಸಾಗುತ್ತಿರುವ ಈ ಹೊತ್ತಿನಲ್ಲಿ ಡಾ.ಸ್ವಾಮಿನಾಥನ್‌ರ ಕೊಡುಗೆಗಳು ನಮಗೆ ಸ್ಪೂರ್ತಿ ಮತ್ತು ಮಾರ್ಗದರ್ಶನ ನೀಡುತ್ತಲೇ ಇರುತ್ತವೆ. ಅವರು ಪ್ರೀತಿಸುತ್ತಿದ್ದ ತತ್ತ್ವ ಗಳಿಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತಲೇ ಇರಬೇಕು, ರೈತರ ಹಿತಕ್ಕಾಗಿ ಹೋರಾಡಬೇಕು ಮತ್ತು ವೈಜ್ಞಾನಿಕ ಆವಿಷ್ಕಾರದ -ಲಗಳು ನಮ್ಮ ಕೃಷಿ ವಿಸ್ತಾರದ ಬೇರುಗಳನ್ನು ತಲುಪುವಂತೆ ಖಾತರಿಪಡಿಸಬೇಕು. ಮುಂದಿನಪೀಳಿಗೆಗಾಗಿ ಬೆಳವಣಿಗೆ, ಸುಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಬೇಕು.
(ಲೇಖಕರು ಭಾರತದ ಪ್ರಧಾನ ಮಂತ್ರಿಗಳು)