ಅರ್ಹತಾ ದಾರಿದ್ರ‍್ಯದಿಂದ ಹೊರಬರುವುದು ಬೇಡವೇ ?
ಅರುಣ ಕಿರಣ್
ಡಿ.ಎಸ್.ಅರುಣ್
ಭಾರತವು ಇತ್ತೀಚೆಗಷ್ಟೇ ತನ್ನ ಘನ ಅಧ್ಯಕ್ಷತೆಯಲ್ಲಿ ಜಿ-೨೦ ಶೃಂಗಸಭೆಯನ್ನು ಯಶಸ್ವಿಯಾಗಿ ಪೂರೈಸಿದೆ. ಜಗತ್ತು ಭಾರತವನ್ನು, ಭಾರತದ ಬದಲಾವಣೆಯ ಗತಿಯನ್ನು, ಅಭಿವೃದ್ಧಿಯ ವೇಗವನ್ನು, ವಿಶ್ವ ರಾಜಕೀಯದಲ್ಲಿನ ಭಾರತದ ಅವಶ್ಯಕತೆಯನ್ನು ನಿಬ್ಬೆರಗಾಗಿ ನೋಡುತ್ತಿದೆ.
ಭಾರತವೆಂದರೆ ಕೇವಲ ರಾಷ್ಟ್ರವಲ್ಲ, ಪ್ರತಿಯೊಬ್ಬ ವ್ಯಕ್ತಿಯನ್ನೂ ಶಕ್ತಿಯಾಗಿ ಪರಿವರ್ತಿಸಿ ಸಂಸ್ಕಾರವೆಂಬ ಪವಿತ್ರ ಜಲವನ್ನು ಅಭಿಮಂತ್ರಿಸಿ, ಸಮಷ್ಟಿಗೆ ಸಾಧ್ಯವಾದ ಕೊಡುಗೆ ನೀಡಬಲ್ಲಂಥ ಚೇತನ ವನ್ನಾಗಿಸುವಂಥ ಸಮರ್ಪಣೆಯ ನೆಲ. ಬದಲಾಗುತ್ತಿರುವ ಭಾರತದ ಇಂದಿನ ಗತಿಯನ್ನು ಕಂಡರೆ, ಇಂದಲ್ಲ ನಾಳೆ ಭಾರತವು ವಿಶ್ವಗುರುವಾಗುವುದು ನಿಶ್ಚಿತ. ಜಗತ್ತಿನಲ್ಲೇ ಅತ್ಯಂತ ‘ಯುವರಾಷ್ಟ್ರ’ ಎಂದು ಭಾರತವನ್ನು ಕರೆಯುತ್ತಾರೆ. ಯುವಕರೇ ನಮ್ಮ ರಾಷ್ಟ್ರದ ಬೆನ್ನೆಲುಬು. ಇಂದಲ್ಲ ನಾಳೆ ಜಗತ್ತನ್ನು ಗೆಲ್ಲುವ ಭಾರತದಲ್ಲಿನ ಯುವಶಕ್ತಿಯು, ಜಗತ್ತಿಗೆ ದಾರಿತೋರುವ ಅರ್ಹತೆಯನ್ನು ಹೊಂದಿರಬೇಕಾದ್ದು ಅವಶ್ಯಕ.
ಇದನ್ನು ಮನಗಂಡ ಕೇಂದ್ರ ಸರಕಾರವು, ಪದವಿ ಪಡೆದ ತಕ್ಷಣ ಕಂಪನಿಗಳ ಕದತಟ್ಟುವ ಯುವಕರನ್ನು ಕಂಪನಿಗಳೇ ಅರಸಿಕೊಂಡು ಬರುವಷ್ಟು ಮಟ್ಟಿಗೆ ತಯಾರಿಸಲು, ಪಂಚಾಯಿತಿಯ ಪುರಪ್ರಮುಖನಿಂದ ಹಿಡಿದು ವಿಶ್ವವಿದ್ಯಾಲಯದ ಕುಲಪತಿಗಳವರೆಗೂ ದೇಶದ ಪ್ರತಿಯೊಬ್ಬ ನಾಗರಿಕ ರಿಂದಲೂ ಸಲಹೆ-ಸೂಚನೆ ಪಡೆದು, ವಿಷಯತಜ್ಞರು, ಸಂಪನ್ಮೂಲ ವ್ಯಕ್ತಿಗಳು ಹಗಲಿರುಳೆನ್ನದೆ ಶ್ರಮಿಸಿ ಯುವಶಕ್ತಿಯನ್ನು ಸಜ್ಜುಗೊಳಿಸ ಲೆಂದು ರೂಪಿಸಿದ ಅದ್ಭುತವೇ ‘ರಾಷ್ಟ್ರೀಯ ಶಿಕ್ಷಣನೀತಿ-೨೦೨೦’. ಜಾಗತಿಕ ಮಟ್ಟದ ಶೈಕ್ಷಣಿಕ ರಂಗದಲ್ಲಿರು ವಂಥ ಎಲ್ಲಾ ಬೆಳವಣಿಗೆಗಳನ್ನು ಒಳಗೊಂಡ ಈ ಶಿಕ್ಷಣ ನೀತಿಯು, ಬಾಲ್ಯದ ೩ನೇ ವರ್ಷದಿಂದ ಪ್ರಾರಂಭವಾಗಿ ಪಿಎಚ್‌ಡಿ ಹಂತದವರೆಗೆ ವಿದ್ಯಾರ್ಥಿಗೆ ಬೇಕಾದ ಕಲಿಕೆ-ಕೌಶಲದ ಸಮಗ್ರ ಮಾರ್ಗೋ ಪಾಯಗಳನ್ನೂ ಒಳಗೊಂಡಿರುವಂಥದ್ದು; ಪ್ರತಿ ಹಂತದಲ್ಲೂ ವಿದ್ಯಾರ್ಥಿಯ ಪ್ರಗತಿಗೆ ಪೂರಕವಾದ ಅಂಶಗಳನ್ನೇ ಒಳಗೊಂಡಿರುವ ಈ ನೀತಿಯು ಭಾರತದ ಯುವಶಕ್ತಿಯ ಪಾಲಿಗೆ ವರದಾನವೆಂದರೆ ಅತಿಶಯೋಕ್ತಿಯಲ್ಲ.
ವಿಶೇಷವಾಗಿ ಉನ್ನತ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಿದ ಮೊದಲಿಗರು ನಾವೇ. ದುರದೃಷ್ಟಕರ ಸಂಗತಿಯೆಂದರೆ, ಹೀಗೆ ಅನುಷ್ಠಾನಗೊಂಡ ಬಳಿಕ ರಾಜಕೀಯ ಪ್ರತಿಷ್ಠೆಗೆ ಬಲಿಯಾಗುತ್ತಿರುವಂಥ ಶಿಕ್ಷಣ ನೀತಿ ಹೊಂದಿರುವ ರಾಜ್ಯವೆಂದರೆ ಅದು ಕರ್ನಾಟಕವೇ. ಈ ರಾಷ್ಟ್ರೀಯ ಶಿಕ್ಷಣನೀತಿಯ (ಎನ್‌ಇಪಿ) ಮೂಲ ಪರಿಕಲ್ಪನೆಯನ್ನು ತುಂಬಾ ಜನರಿಗೆ, ವಿಶೇಷವಾಗಿ ಯುವಕರಿಗೆ ಅರ್ಥ ಮಾಡಿಸುವಲ್ಲಿ ಸ್ವಲ್ಪ ಎಡವಿದ್ದೇವೆ ಎಂಬುದು ನನ್ನಭಿಪ್ರಾಯ.
ಎನ್‌ಇಪಿ ಬಗ್ಗೆ ಇಲ್ಲಸಲ್ಲದ ಅಪವಾದ ಮಾಡುತ್ತಿರುವ, ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಯುವಪೀಳಿಗೆಯ ಭವಿಷ್ಯವನ್ನು ಬಲಿಗೊಡುತ್ತಿರುವ ಇಂಥ ಪರಿಸ್ಥಿತಿಯಲ್ಲಿ ಕೆಲ ಅಂಶಗಳನ್ನು ಹಂಚಿಕೊಳ್ಳಬಯಸುವೆ. ‘ಸತ್ಯವು ಚಪ್ಪಲಿ ಹುಡುಕುವಷ್ಟರಲ್ಲಿ, ಸುಳ್ಳು ಊರು ಸುತ್ತಿತ್ತು’ ಎಂಬ ಗಾದೆಯೊಂದು ಹಳ್ಳಿಗಳಲ್ಲಿ ಚಾಲ್ತಿಯಲ್ಲಿದೆ. ಹಾಗೆಯೇ, ಎನ್‌ಇಪಿಯ ಮೂಲದ-ಮಹತ್ವದ, ಅದರಲ್ಲಿರುವ ಬದಲಾವಣೆಯ ಅವಶ್ಯಕತೆಗಳ ಬಗ್ಗೆ ಅರಿವಿಲ್ಲದೆ,ಅದರಲ್ಲಿರುವ ಮುಕ್ತ ಆಯ್ಕೆಗಳ ಅನಿವಾರ್ಯದ ಬಗ್ಗೆ ಜ್ಞಾನವಿಲ್ಲದೆ, ‘ಎನ್‌ಇಪಿಯು ಮಾತೃಭಾಷಾ-ವಿರೋಧಿ, ಸಾಮಾಜಿಕ ನ್ಯಾಯದ ಪರಿಕಲ್ಪನೆ ಯಿಲ್ಲದ, ಕೋಮುವಾದ ಪ್ರತಿಪಾದಿಸುವ ನೀತಿ’ ಎಂದು ಸುಳ್ಳಾಡುವ ಜನರು, ಎನ್ ಇಪಿಯ ಪ್ರತಿಯನ್ನೊಮ್ಮೆ ಕೂಲಂಕಷ ಓದಬೇಕೆಂದುಕೋರುವೆ.
ಕರ್ನಾಟಕದ ಪದವಿ ಕಾಲೇಜುಗಳಲ್ಲಿ ಎನ್‌ಇಪಿಯನ್ನು ಅನುಷ್ಠಾನಗೊಳಿಸಿದ ಎರಡೇ ವರ್ಷದಲ್ಲಿ ಈ ನೀತಿಯ ಬಗ್ಗೆ ಕೆಲ ಪ್ರಾಧ್ಯಾಪಕರು ಅಥವಾ ಪ್ರಾಧ್ಯಾಪಕರ ಮುಖವಾಡ ಧರಿಸಿರುವ ಕೆಲ ಪಕ್ಷದ ಕಾರ್ಯಕರ್ತರಂತಿರುವವರು, ಸಾಮಾಜಿಕ ಮಾಧ್ಯಮಗಳ ‘ಬಾಡಿಗೆ ಸತ್ಯಶೋಧಕರು’ ಹರಡಿದ ಸುಳ್ಳುಗಳ ಪಟ್ಟಿಮಾಡತೊಡಗಿದರೆ ಬಹುಶಃ ಒಂದು ಪುಸ್ತಕವನ್ನೇ ಬರೆಯಬಹುದೇನೋ! ಕಾಲಕಾಲಕ್ಕೆ ನೀಡಬೇಕಾದ ಸಿಲಬಸ್, ಮಾರ್ಗಸೂಚಿಗಳನ್ನು ನೀಡಿ ಮತ್ತು ವಿಶೇಷವಾಗಿ ಎನ್‌ಇಪಿ ಬಗೆಗಿನ ಕಾರ್ಯಾಗಾರಗಳನ್ನು ನಡೆಸಿ ಅದರ ಅನುಷ್ಠಾನದಲ್ಲಿ ಯಶಸ್ವಿ ಪಾತ್ರ ವಹಿಸಬೇಕಿದ್ದ  ವಿಶ್ವವಿದ್ಯಾಲಯ ಗಳು ವಿದ್ಯಾರ್ಥಿಗಳಲ್ಲೂ ಬೇಡವಾದಂಥ ಅನುಮಾನಗಳನ್ನು ತುಂಬಿ ಮಾಡಿದ ಎಡವಟ್ಟುಗಳ ಪೂರ್ಣಮೊತ್ತವೇ ಎನ್‌ಇಪಿ ಬಗ್ಗೆ ಮೂಡಿರುವ ಅನುಮಾನಗಳಿಗೆ ಮೂಲಕಾರಣ.
೪ ವರ್ಷದ ಪದವಿಯೆಂಬುದು ಆಯ್ಕೆಯೇ ಹೊರತು ಕಡ್ಡಾಯವಲ್ಲ. ಜಾಗತಿಕ ಮಟ್ಟದಲ್ಲಿ ಎಲ್ಲಾ ಪದವಿಗಳು ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಎಲ್ಲಾ ವೃತ್ತಿಪರ ಕೋರ್ಸ್‌ಗಳು ೪ ವರ್ಷದ್ದೇ ನಡೆಯುತ್ತಿರುವುದರಿಂದ ಮತ್ತು ೨ ವರ್ಷದ ಸ್ನಾತಕೋತ್ತರ ಪದವಿಯನ್ನು ಒಂದೇ ವರ್ಷಕ್ಕೆ ಪೂರೈಸಲು ನೀಡಿದ್ದ ಒಂದು ಅವಕಾಶವಷ್ಟೇ. ಅದನ್ನೇ ಕೆಲವರು ಬಿಂಬಿಸಿದ ರೀತಿಯು, ಸ್ನಾತಕೋತ್ತರ ಪದವಿ ನೀಡುತ್ತಿರುವ ಸಂಸ್ಥೆಗಳೆಲ್ಲವೂ ನಾಳೆ ಬೆಳಗ್ಗೆಯೇ ಮುಚ್ಚಿ ಹೋಗುತ್ತವೆ ಎನ್ನುವಂತಿತ್ತು! ಇನ್ನು ನಮ್ಮ ವಿದ್ಯಾರ್ಥಿಗಳಿಗೆ ಎನ್‌ಇಪಿ ಎಂದರೆ ನೆನಪಾಗುವುದು ‘ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ’ (    ).
ಪದವಿಯ ದಾಖಲಾತಿ, ಓದುತ್ತಿರುವ ಪ್ರತಿ ವಿಷಯ, ಅದರಲ್ಲಿ ಪಡೆದ ಅಂಕ-ಹಾಜರಾತಿ-ವಿದ್ಯಾರ್ಥಿ ವೇತನದ ವಿವರಗಳು, ಪಡೆದ ಒಟ್ಟು ಕ್ರೆಡಿಟ್‌ಗಳ ವಿವರ ಹೀಗೆ ಪ್ರತಿಯೊಂದನ್ನೂ ಎಲ್ಲಿಯಾದರೂ, ಯಾವಾಗಲಾ ದರೂ ಬಳಸಬಹುದಾದ ಎಲ್ಲವನ್ನೂ ಒಳಗೊಂಡ ತಂತ್ರಾಂಶವೇ ‘ಯುಯುಸಿಎಂ ಎಸ್’. ಆದರೆ ಇದನ್ನು ಅರ್ಥಮಾಡಿಕೊಳ್ಳುವಲ್ಲಾದ ಅಥವಾ ಅರ್ಥಮಾಡಿಸುವ ಜಾಗದಲ್ಲಿದ್ದವರು ಮಾಡಿದ ಎಡವಟ್ಟಿನಿಂದ ಇಂದು ವಿದ್ಯಾರ್ಥಿ ಗಳು ಮತ್ತು ಪ್ರಾಧ್ಯಾಪಕರು ಯುಯುಸಿ ಎಂಎಸ್‌ಗೆ ಹಿಡಿಶಾಪ ಹಾಕುತ್ತಿದ್ದಾರೆ; ಆದರೆ ಕೆಲವರು ಎನ್ ಇಪಿ ಎಂದರೆ ಯುಯುಸಿಎಂಎಸ್ ಎಂದು ಮಾತನಾಡುತ್ತಾರೆ.
ಮುಕ್ತ ಆಯ್ಕೆಯು ಎನ್‌ಪಿಯ ಮೂಲ ಆಶಯಗಳಲ್ಲೊಂದು. ಪ್ರತಿ ವಿದ್ಯಾರ್ಥಿಯೂ ತನ್ನಿಷ್ಟದ ಒಂದು ವಿಷಯವನ್ನು, ತಾನು ಓದುತ್ತಿರುವ ಕೋರ್ಸಿನ ಆಚೆಗೂ ಕಲಿಯಬಹುದಾದಂಥ ಒಂದು ವಿಶೇಷ ಅವಕಾಶ. ಆದರೆ ಪ್ರಾಧ್ಯಾಪಕರುಗಳಿಗೆ ಮತ್ತು ವಿವಿಗೆ ಇದರ ಅನುಷ್ಠಾನದಲ್ಲಿ ಎದುರಾಗಿರುವ ಗೊಂದಲಗಳಿಂದಾಗಿ ಹಾಗೂ ಕನಿಷ್ಠ ತರಗತಿ ಗಳನ್ನು ನಡೆಸಲು ಮೂಲಸೌಕರ್ಯಗಳನ್ನು ಒದಗಿಸಲಾಗದ ಅನಿವಾರ್ಯ ಸ್ಥಿತಿಯಲ್ಲಿರುವ ಕಾಲೇಜು ಗಳಿಂದಾಗಿ, ಇಂದು ‘ಮುಕ್ತ ಆಯ್ಕೆ’ ಎಂಬುದು ಕಾಲೇಜುಗಳಲ್ಲಿ ಬೇಕಾದವರಿಗೆ ‘ವರ್ಕ್ ಲೋಡ್’ ಸೃಷ್ಟಿಸುವ ಸಾಧನವಾಗಿದೆ, ಅಷ್ಟೇ.
ವಿವಿಗಳು ನೀಡಿರುವ ಸಿಲಬಸ್‌ನಲ್ಲಿ ಎಂಥ ಅದ್ಭುತವಾದ ಮುಕ್ತ ಆಯ್ಕೆಗಳಿವೆಯೆಂದರೆ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ‘ಅಂಡರ್‌ ಸ್ಟ್ಯಾಂಡಿಂಗ್ ಅಂಬೇಡ್ಕರ್’ ಎಂಬ ಒಂದು ವಿಷಯವಿದೆ. ಕುವೆಂಪು ವಿವಿಯ ಕನ್ನಡ ವಿಭಾಗದಿಂದ ‘ವಿದ್ಯಾರ್ಥಿಗಳಿಗೆ ಆತ್ಮಕಥೆಗಳು’ ಎಂಬ ಮುಕ್ತಆಯ್ಕೆಯಿದೆ. ಅದರಲ್ಲಿ ಸಿದ್ದಲಿಂಗಯ್ಯನವರ ‘ಊರು ಕೇರಿ’ಯ, ತಮಿಳು ಸೆಲ್ವಿಯವರ ಕಥೆಯ ಉಲ್ಲೇಖವಿದೆ. ಇಂಗ್ಲಿಷ್ ವಿಭಾಗದಿಂದ ನೀಡಿರುವ ಮುಕ್ತ ಆಯ್ಕೆಯಲ್ಲಿ, ಮಹಿಳಾ ಪ್ರಾತಿನಿಧ್ಯವನ್ನು ಪ್ರತಿಪಾದಿಸುವ ‘ಜೆಂಡರ್ ಸ್ಟಡೀಸ್’ ಮತ್ತು ‘ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇಂಗ್ಲಿಷ್ ಜ್ಞಾನ’ ವೆಂಬ ವಿಷಯ ಗಳಿವೆ.
ಪ್ರತಿ ವಿವಿಯ ಸಿಲಬಸ್ ಅನ್ನು ಕೂಲಂಕಷವಾಗಿ ನೋಡಿದರೆ ಅವು ಅದ್ಭುತವಾಗಿ ಸಿದ್ಧಗೊಂಡಿರುವುದು ಅರಿವಾಗುತ್ತದೆ. ಇಲ್ಲಿ ಓದುವ ಪ್ರತಿಯೊಬ್ಬ ವಿದ್ಯಾರ್ಥಿಯ ಮನದಲ್ಲಿ ಸಹಿಷ್ಣುತೆ, ಸಮಾನತೆ, ಸತ್ಯಪರತೆ ಮತ್ತು ಕೌಶಲವರ್ಧನೆ ಮೂಡಲು ಇದು ಅತ್ಯಂತ ಸಹಕಾರಿಯಾಗಿದೆ. ಎಲ್ಲಾ ವಿಭಾಗದ ವಿದ್ಯಾರ್ಥಿಗಳಿಗೆ ಕೂಡ,  ,  ,  , ,    ,  ,   ಎಂಬಿತ್ಯಾದಿ ಕೆಲ ಕಡ್ಡಾಯ ವಿಷಯಗಳನ್ನು ಸೇರಿಸಿದ್ದಾರೆ. ಒಬ್ಬ ಬಿಎ ವಿದ್ಯಾರ್ಥಿ   ಓದುವುದು, ಬಿಎಸ್ಸಿ ವಿದ್ಯಾರ್ಥಿ   ವಿಷಯವನ್ನು ಓದುವುದು, ಬಿಕಾಂ ವಿದ್ಯಾರ್ಥಿ    ಓದು ವುದು ಕೆಲವರ ಅಭಿಪ್ರಾಯ ದಂತೆ ಕೋಮುವಾದವಂತೆ!
ಭಾರತದ ಅತಿದೊಡ್ಡ ಶಕ್ತಿಯಾಗಿರುವ ಯುವಶಕ್ತಿಗೆ ಅತ್ಯಂತ ತೊಡಕಾಗಿರುವುದು ಕೌಶಲವರ್ಧನೆ. ದೊಡ್ಡ ಕಂಪನಿಯ ಮಾಲೀಕರನ್ನೊಮ್ಮೆ ಕೇಳಿದರೆ, ‘ನಮ್ಮಲ್ಲಿ ಕೆಲಸವಿದೆ, ಆದರೆ ಅದಕ್ಕೆ ಸೂಕ್ತ ಅರ್ಹತೆಯಿರುವ ಅಭ್ಯರ್ಥಿ ಸಿಗುತ್ತಿಲ್ಲ. ಹೀಗಾಗಿ ಬೇರೆಡೆಗಳಿಂದ ಅಂಥವರನ್ನು ಹೆಚ್ಚು ಸಂಬಳ ಕೊಟ್ಟು ಕರೆಸಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ. ಹಾಗೆಯೇ ಪದವಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಯನ್ನು ಕೇಳಿದರೆ, ‘ತರಗತಿಗಳಲ್ಲಿ ಹೇಳಿಕೊಟ್ಟಯಾವ ವಿಷಯವೂ ಕಂಪನಿಯಲ್ಲಿ ಕೆಲಸಕ್ಕೆ ಬರುತ್ತಿಲ್ಲ; ನನ್ನ ಅಂಕಪಟ್ಟಿಯನ್ನು ಯಾವ ಕಂಪನಿಯೂ ನೋಡುತ್ತಿಲ್ಲ. ಕೌಶಲವಿದ್ದರೆ ಒಳಗೆ ಬಾ’ ಎನ್ನುತ್ತಿದ್ದಾರೆ’ ಅನ್ನುತ್ತಾನೆ.
ಅಂದರೆ, ೩ ವರ್ಷ ಕಾಲೇಜಿನಲ್ಲಿ ಕಲಿಸಿದ್ದು ‘ಮಾರ್ಕ್ಸ್ ತೆಗೆಯುವುದು ಹೇಗೆ’ ಎಂಬುದನ್ನೇ ವಿನಾ, ಕೌಶಲವನ್ನಲ್ಲ ಎಂದರ್ಥವಲ್ಲವೇ! ಸಂಶೋಧನಾ ವರದಿಯೊಂದರ ಪ್ರಕಾರ, ಭಾರತದ ಶೇ.೬೫ರಷ್ಟು ವಿದ್ಯಾರ್ಥಿಗಳು ಪದವಿ ಪಡೆದಿದ್ದರೂ ಅವರಲ್ಲಿ ಅರ್ಹತೆ ಮತ್ತು ಕೌಶಲದ ಕೊರತೆಯಿರುವುದರಿಂದ ಉತ್ತಮ ಉದ್ಯೋಗವನ್ನು ಪಡೆಯಲಾಗುತ್ತಿಲ್ಲ. ಈ ಪರಿಸ್ಥಿತಿಯನ್ನು ಸರಿಪಡಿಸಲೆಂದೇ, ದೇಶವು ಅಮೃತಕಾಲಕ್ಕೆ ಅಡಿಯಿಡುತ್ತಿರುವ ಈ ಸಮಯದಲ್ಲಿ ಅರ್ಹತಾ ದಾರಿದ್ರ್ಯಕ್ಕೆ ಸಂಜೀವಿನಿಯಂತೆ ಮೂಡಿಬಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೂಲಂಕಷ ಅವಲೋಕಿಸಿ ಅನುಷ್ಠಾನಗೊಳಿಸಿದರೆ, ಪ್ರತಿವಿದ್ಯಾರ್ಥಿಯೂ ಭಾರತವನ್ನು ಗೆಲ್ಲಿಸಬಲ್ಲ, ಭಾರತದ ಕೀರ್ತಿಯನ್ನು ಮುಗಿಲೆತ್ತರಕ್ಕೆ ಒಯ್ಯಬಲ್ಲ ಸಾಧಕನಾಗಬಲ್ಲ.
ಬದಲಾವಣೆಯನ್ನು ಹೊತ್ತುತಂದ ಯಾವುದೇ ವಿಷಯವು ಮೊದಲು ಪ್ರತಿರೋಧಕ್ಕೆ ಒಳಗಾಗುವುದು ಸಹಜ. ಆದರೆ ಈ ಬದಲಾವಣೆಯನ್ನು ಮನದಲ್ಲಿಟ್ಟು ಕೊಂಡು, ಬದಲಾವಣೆಗೆ ಸೂಕ್ತ ಮಾರ್ಗೋಪಾಯವನ್ನು ತಜ್ಞರ ಮೂಲಕ ಕಂಡುಕೊಂಡು, ವಿದ್ಯಾರ್ಥಿಗಳಿಗೆ ಮತ್ತು ಪ್ರಾಧ್ಯಾಪಕರಿಗೆ ನೆರವಾಗಬಲ್ಲ ತರಬೇತಿ ನೀಡಿ, ಅನುಷ್ಠಾನ ದಲ್ಲಿರುವ ಗೊಂದಲಗಳನ್ನು ದೂರಮಾಡಿದರೆ ಮತ್ತು ಮೂಲಸೌಕರ್ಯದ ಅಭಿವೃದ್ಧಿಗೆ ಗಮನಹರಿಸಿದರೆ, ಎನ್ ಇಪಿಯು ಪ್ರತಿ ವಿದ್ಯಾರ್ಥಿಯನ್ನೂ ಸರ್ವಾಂಗೀಣವಾಗಿ ಸಶಕ್ತನನ್ನಾಗಿಸಬಲ್ಲದು.
ಅಂದರೆ, ಕೇವಲ ವಿಷಯಗಳನ್ನು ಕ್ರೋಡೀಕರಿಸುವ ಪ್ರಕ್ರಿಯೆಯಿಂದ ಅವನನ್ನು ಬೇರ್ಪಡಿಸಿ, ವಿಷಯಗಳನ್ನು ಅರ್ಥೈಸಿ ಅನ್ವಯಿಸಿಕೊಳ್ಳುವ ಜ್ಞಾನದ ಕಡೆಗೆ ಕರೆದೊಯ್ಯುವುದು ಶತಸ್ಸಿದ್ಧ. ವಿದ್ಯಾರ್ಥಿಗಳನ್ನು ಚೀಲದಂತೆ ಮಾಡದೆ, ಬತ್ತ ಬೆಳೆಯುವ ಗದ್ದೆಯಂತೆ ಮಾಡುವುದು ಎನ್ ಇಪಿಯ ಮೂಲೋ ದ್ದೇಶ. ಶುದ್ಧ ಕುಡಿಯುವ ನೀರನ್ನು ಸಂಗ್ರಹಿಸುವ ತೊಟ್ಟಿಯಲ್ಲಿ ಕಸ ಕಂಡುಬಂದಾಗ ತೊಟ್ಟಿಯನ್ನು ಚೊಕ್ಕಗೊಳಿಸಬೇಕೇ ಹೊರತು ನಲ್ಲಿಯನ್ನು ಕಿತ್ತು ಹಾಕುವುದು ಮೂರ್ಖತನ! ಖಾಸಗಿ ಕಾಲೇಜಿನಲ್ಲಿ ಲಕ್ಷಗಟ್ಟಲೆ ಶುಲ್ಕ ಪೀಕಿ ಕಲಿಯುವ ವಿದ್ಯಾರ್ಥಿಗಳು ಅಗತ್ಯ ಕೌಶಲಗಳನ್ನು ಪಡೆಯುತ್ತಾರೆ. ಅವರಿಗೆ ಮತ್ತು ಎನ್‌ಇಪಿ ಇರಲಿ ಬಿಡಲಿ ಜಾಗತಿಕ ಮಟ್ಟದ ಪ್ರತಿಷ್ಠಿತ ವಿದ್ಯೆ ನೀಡುವಂಥ ದೊಡ್ಡ ಕಾಲೇಜುಗಳಿಗೆ ಯಾವುದೇ ವ್ಯತ್ಯಾಸವಾಗುವುದಿಲ್ಲ.
ಆದರೆ ಎನ್‌ಇಪಿ ಬೇಕಾಗಿರುವುದು ಗ್ರಾಮೀಣ ಭಾಗದ ಮಕ್ಕಳಿಗೆ, ಮುಖ್ಯ ವಾಗಿ ರೈತಾಪಿ ಕುಟುಂಬದ ವಿದ್ಯಾರ್ಥಿಗಳಿಗೆ. ನಾವು ರಾಜಕೀಯವನ್ನು ಪಕ್ಕಕ್ಕಿಟ್ಟು ಯುವಪೀಳಿಗೆ ಗಾಗಿ ಒಂದಾ ಗೋಣ. ನಮ್ಮ ಮಕ್ಕಳಿಗೆ ಗೆಲ್ಲುವ ಚೈತನ್ಯ ತುಂಬುವ ಎನ್‌ಇಪಿಯನ್ನು ಬೆಂಬಲಿಸೋಣ.
(ಲೇಖಕರು ವಿಧಾನ ಪರಿಷತ್ ಸದಸ್ಯರು)