ನಮ್ಮ ನೋಟವನ್ನು ಬದಲಿಸೋಣ
ಅಭಿಮತ
ಮಹಾದೇವ ಬಸರಕೋಡ
ಯಾವುದಕ್ಕೂ ಸಮಯವೇ ಇಲ್ಲ ಎಂಬ ನೆಪವೊಡ್ಡಿ ನಾವು ಅನೇಕ ಬಾರಿ ಬದುಕಿನಲ್ಲಿ ಅಪ್‌ಡೇಟ್ ಆಗುವುದನ್ನು ಮರೆತುಬಿಡುತ್ತೇವೆ. ಲಗಾಮುಹಾಕಿದ ಕುದುರೆಯಂತೆ ಸುಮ್ಮನೇ ಓಡುತ್ತಲೇ ಇರುತ್ತೇವೆಯೇ ಹೊರತು ನಮ್ಮ ನೋಟವನ್ನು ಬದಲಾಯಿಸಿಕೊಳ್ಳುವುದೇ ಇಲ್ಲ.
ನಾವಿಂದು ತೀರಾ ಮುಂದುವರಿದ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ. ವೈಜ್ಞಾನಿಕ ಸಂಶೋಧನೆಗಳು ಇನ್ನಿಲ್ಲದಂತೆ ನಮ್ಮ ದೈನಂದಿನ ಬದುಕನ್ನು ಪ್ರಭಾವಿಸಿವೆ. ನಾಗರಿಕತೆಯು ಮುಂದುವರಿದಂತೆ ಕ್ರಮೇಣವಾಗಿ ನಿಸರ್ಗದ ಬಾಂಧವ್ಯಗಳಿಂದ ದೂರವಾಗುತ್ತಿದ್ದೇವೆ. ಪ್ರಕೃತಿಯೊಂದಿಗಿನ ಹೊಕ್ಕಳು ಬಳ್ಳಿಯ ಸಂಬಂಧವನ್ನು ಕಡಿದು ಕೊಂಡು ಬಿಟ್ಟಿದ್ದೇವೆ. ಅಭಿವೃದ್ಧಿಯ ಹೆಸರಿನಲ್ಲಿ ಯಂತ್ರ ನಾಗರಿಕತೆಯ ವಿಸ್ತರಣೋದ್ಯಮಗಳಲ್ಲಿ ಮುಳುಗಿಹೋದ ನಮ್ಮ ಬದುಕು ಕೂಡ ಇತ್ತೀಚೆಗೆ ತುಂಬಾ ಯಾಂತ್ರಿಕ ವಾಗುತ್ತಿದೆ. ಎಲ್ಲದರಲ್ಲೂ ಇನ್ನಿಲ್ಲದ ಧಾವಂತ.
ಒಂದಷ್ಟು ಸಾವಧಾನವಿಲ್ಲ, ಸಮಾಧಾನವಿಲ್ಲ. ಆತುರಾತುರದ ಬದುಕನ್ನು ನಮಗರಿವಿದ್ದೂ ಅನಿವಾರ್ಯ ವೆಂಬಂತೆ ಅಪ್ಪಿಕೊಳ್ಳುತ್ತಿದ್ದೇವೆ. ದೈನಂದಿನ ಕೆಲಸಗಳ ಕಾರ್ಯಭಾರವನ್ನು ನಮ್ಮ ಬರೀ ಬೇಕುಗಳ ತಟ್ಟೆಯ ಲ್ಲಿಟ್ಟು ತೂಗಿ ತೂಗಿ ಹೆಚ್ಚಿಸಿಕೊಳ್ಳುತ್ತಲಿದ್ದೇವೆ. ‘ನಮಗೆ ಕೊಂಚವೂ ವಿಶ್ರಾಂತಿಯೇ ಇಲ್ಲ, ಸಮಯವೂ ಸಾಕಾಗುತ್ತಿಲ್ಲ’ ಎಂದು ಗೊಣಗುತ್ತಿರುವುದು ಇತ್ತೀಚೆಗೆ ತೀರಾ ಸಾಮಾನ್ಯವೆನಿಸುತ್ತಿದೆ. ನಾವು ಒಪ್ಪಿಕೊಂಡ, ಇಲ್ಲವೇ ರೂಢಿಸಿಕೊಂಡ ನಮ್ಮ ದೈನಂದಿನ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿಯೇ ತುಂಬಾ ಬ್ಯುಸಿಯಾಗಿದ್ದೇವೆ.
ಅದರಿಂದ ಬಿಡುಗಡೆ ಇಲ್ಲ ಎಂಬುದಾಗಿ ಪರಿಭಾವಿಸಿ ಅದರಲ್ಲಿಯೇ ನಮ್ಮೆಲ್ಲ ದಿನಗಳನ್ನು ದೂಡುತ್ತಿದ್ದೇವೆ. ನಡೆ-ನುಡಿ, ಕೆಲಸಗಳಲ್ಲಿ ಗಡಿಬಿಡಿಯೇ ಪ್ರಧಾನವಾಗುತ್ತಿದೆ. ಇನ್ನಷ್ಟು ಬೇಕು ಬೇಕು ಎಂಬ ತುಡಿತದ ಬೆನ್ನತ್ತಿ ವಿವೇಚನೆ ಯಿಲ್ಲದೆ ಯಾವುದೋ ಸಮ್ಮೋಹಿನಿಗೆ ಒಳಗಾದವರಂತೆ ವರ್ತಿಸು ತ್ತಿದ್ದೇವೆ. ಯಾವುದಕ್ಕೂ ಸಮಯವೇ ಇಲ್ಲ ಎಂಬ ಪೂರ್ವಗ್ರಹದ ಹಿನ್ನೆಲೆಯಲ್ಲಿ ನಾವು ಅನೇಕ ಬಾರಿ ನಮ್ಮ ಕೆಲಸಗಳಲ್ಲಿ, ಬದುಕಿನಲ್ಲಿ ಅಪ್‌ಡೇಟ್ ಆಗುವುದನ್ನು ಮರೆತುಬಿಡುತ್ತೇವೆ. ಲಗಾಮು ಹಾಕಿದ ಕುದುರೆಯಂತೆ ಸುಮ್ಮನೇ ಓಡುತ್ತಲೇ ಇರುತ್ತೇವೆಯೇ ಹೊರತು ನಮ್ಮ ನೋಟವನ್ನು ಬದಲಾಯಿಸಿಕೊಳ್ಳುವುದೇ ಇಲ್ಲ. ಕೊಂಚವೂ ವಿಶ್ರಮಿಸುವುದೇ ಇಲ್ಲ.
ಇದು ಅನೇಕ ಬಾರಿ ನಮ್ಮಲ್ಲಿರುವ ನೈಜ ಸಾಮರ್ಥ್ಯವನ್ನು ಉಪಯೋಗಿಸಿಕೊಳ್ಳಲು ಅಸಮರ್ಥರಾಗುವಂತೆ ಮಾಡುತ್ತದೆ ಹಾಗೂ ತನ್ಮೂಲಕ ನಾವು ಹಿನ್ನಡೆ ಅನುಭವಿಸಲು ಕಾರಣ ವಾಗುತ್ತದೆ. ಈ ಬೆಳವಣಿಗೆ ಮನಸ್ಸಿಗೆ ನೋವುಂಟುಮಾಡುವುದರಿಂದ ಕೆಲಸದಲ್ಲಿ ಕಿರಿಕಿರಿ ಅನುಭವಿಸುತ್ತ ಸೋಲಿನತ್ತಮುಖ ಮಾಡುತ್ತೇವೆ. ಮರ ಕಡಿಯುವ ಯುವಕನೊಬ್ಬ ತನ್ನ ಬದುಕನ್ನು ಮುನ್ನಡೆಸಲು ಕೆಲಸವೊಂದನ್ನು ಅರಸಿ ಒಬ್ಬ ಟಿಂಬರ್ ವ್ಯಾಪಾರಿಯ ಬಳಿ ಬಂದ. ತನ್ನ ಬದುಕಿನ ಬವಣೆಗಳನ್ನು ವಿವರಿಸಿ ಕೆಲಸ ಕೊಡುವಂತೆ ಅತ್ಯಂತ ದೈನ್ಯತೆಯಿಂದ ವಿನಂತಿಸಿದ.
ಆಗ ವ್ಯಾಪಾರಿ, ‘ನೀನು ದಿನಕ್ಕೆ ಎಷ್ಟು ಮರಗಳನ್ನು ಕಡಿಯಬಲ್ಲೆ?’ ಎಂದು ಪ್ರಶ್ನಿಸಿದ್ದಕ್ಕೆ, ‘ಒಂದು ದಿನಕ್ಕೆ ಸುಮಾರು ಇಪ್ಪತ್ತು’ ಎಂದು ಯುವಕ ಉತ್ತರಿಸಿದ. ಅವನ ಸಾಮರ್ಥ್ಯವನ್ನು ಗುರುತಿಸಿದ ಟಿಂಬರ್ ವ್ಯಾಪಾರಿ, ಮರುದಿನವೇ ಕೆಲಸ ಪ್ರಾರಂಭಿಸುವಂತೆ ತಿಳಿಸಿದ. ಯುವಕನಿಗೆ ತುಂಬಾ ಸಂತೋಷವಾಯಿತು, ತನ್ನ ಕಷ್ಟದ ದಿನಗಳಿನ್ನು ದೂರವಾದವು ಎಂಬ ಸಮಾಧಾನದ ಭಾವ ಅವನನ್ನು ಆವರಿಸಿತು. ವ್ಯಾಪಾರಿಗೆ ಧನ್ಯವಾದ ಹೇಳಿ ಮನೆಗೆ ತೆರಳಿದ. ಮರುದಿನ ಮುಂಜಾನೆ ಸಾಕಷ್ಟು ಮುಂಚೆಯೇ ತನ್ನ ಕಾರ್ಯಕ್ಷೇತ್ರಕ್ಕೆ ಆಗಮಿಸಿ ನಿಯೋಜಿತ ಕೆಲಸವನ್ನು ಶುರುವಿಟ್ಟುಕೊಂಡ.
ಅತ್ಯಂತ ಶ್ರದ್ಧೆ, ಪ್ರಾಮಾಣಿಕತೆ ಹಾಗೂ ಶ್ರಮದಿಂದ ಕೆಲಸ ಮಾಡುವ ಈ ಯುವಕನನ್ನು ನೋಡಿ ವ್ಯಾಪಾರಿಗೆ ಸಂತಸವಾಗಿ ಅವನಿಗೆ ಕೈತುಂಬಾ ಸಂಬಳನೀಡಿದ. ಬೇರೆಲ್ಲಿಗೂ ಹೋಗದೆ ತನ್ನಲ್ಲಿಯೇ ಕೆಲಸವನ್ನು ಮುಂದುವರಿಸುವಂತೆ ಸೂಚನೆಯಿತ್ತ. ಮಾಲೀಕ ತನ್ನ ಮೇಲಿಟ್ಟಿದ್ದ ನಂಬಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆ ಯುವಕ ಉತ್ತಮ ರೀತಿಯಲ್ಲಿಯೇ ತನ್ನ ಕೆಲಸವನ್ನು ಮುಂದುವರಿಸಿಕೊಂಡು ಹೋದ.
ದಿನಗಳು ಹೀಗೆಯೇ ಉರುಳುತ್ತಿದ್ದವು. ಆ ಯುವಕ ಮುಂಜಾನೆಯಿಂದ ಸಂಜೆಯ ವರೆಗೂ, ಮೊದಲಿಗಿಂತಲೂ ಹೆಚ್ಚೆಚ್ಚು ಅವಧಿಯ ವರೆಗೆ ಬೆವರು ಸುರಿಸಿ ಕೆಲಸ ಮಾಡುತ್ತಿದ್ದರೂ ಅದ್ಯಾಕೋ ಯಶವನ್ನು ಕಾಣಲಿಲ್ಲ. ಅಂದರೆ, ಮೊದಲಿನಷ್ಟು ಸಂಖ್ಯೆಯ ಮರಗಳನ್ನು ಕಡಿಯುವಲ್ಲಿ ಆತ ವಿಫಲ ನಾಗುತ್ತಾ ಹೋದ. ಹೀಗಾಗಿ ತನ್ನ ಶ್ರಮ ಮತ್ತು ಸಾಮರ್ಥ್ಯದ ಬಗ್ಗೆಯೇ ಅವನಿಗೆ ಅನುಮಾನ ಶುರುವಾಗತೊಡಗಿತು. ಮಾಲೀಕ ತನ್ನಲ್ಲಿಟ್ಟಿರುವ ನಂಬಿಕೆ ಮತ್ತು ವಿಶ್ವಾಸಗಳನ್ನು ಉಳಿಸಿಕೊಳ್ಳುವುದು ತನ್ನಿಂದ ಸಾಧ್ಯವಾಗುತ್ತಿಲ್ಲ, ಇದರಿಂದಾಗಿ ಮಾಲೀಕನಿಗೆ ಮೋಸವಾಗುತ್ತಿದೆ ಎಂಬ ತಪ್ಪಿತಸ್ಥ ಭಾವನೆ ಅವನನ್ನು ಕಾಡತೊಡಗಿತು.
ಹೀಗಾಗಿ ಮಾಲೀಕನ ಬಳಿ ತೆರಳಿದ ಯುವಕ, ‘ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ಅದೆಷ್ಟೇ ಪ್ರಯತ್ನ ಮಾಡಿದರೂ ಮೊದಲಿನಂತೆ ಕೆಲಸ ಮಾಡಲುನನಗಾಗುತ್ತಿಲ್ಲ. ಅದಕ್ಕೆ ಕಾರಣವೂ ತಿಳಿಯುತ್ತಿಲ್ಲ. ನೀವು ನನ್ನಲ್ಲಿಟ್ಟಿರುವ ನಂಬಿಕೆಗೆ ಚ್ಯುತಿ ಬರುತ್ತಿದೆಯಲ್ಲಾ ಎಂದು ನನಗೆ ವ್ಯಥೆಯಾಗುತ್ತಿದೆ. ಸಾಧ್ಯವಾದರೆ ನನ್ನ ಸಮಸ್ಯೆಗೆ ಪರಿಹಾರ ತಿಳಿಸಿ’ ಎಂದು ಬಿನ್ನವಿಸಿಕೊಂಡ. ಆಗ ಅವನನ್ನು ಅಡಿಯಿಂದ ಮುಡಿಯವರೆಗೂ ಒಮ್ಮೆ ಅವಲೋಕಿಸಿನಸುನಕ್ಕ ಮಾಲೀಕ ಕನಿಕರದ ದನಿಯಲ್ಲೇ, ‘ನಿನ್ನ ಕೊಡಲಿಗೆ ಕೊನೆಯ ಬಾರಿಗೆ ಸಾಣೆ ಹಿಡಿಸಿದ್ದು ಯಾವಾಗ?’ ಎಂದು ಪ್ರಶ್ನಿಸಿದ. ಅದಕ್ಕೆ ಯುವಕ. ‘ಸಾಣೆ ಹಿಡಿಸುವುದೇ? ನಿಮ್ಮ ನಂಬಿಕೆಯನ್ನು ಉಳಿಸಿಕೊಳ್ಳಬೇಕೆಂಬ ಯೋಚನೆಯಲ್ಲಿ ನಾನು ಮರ ಕಡಿಯುವಲ್ಲಿಯೇ ವ್ಯಸ್ತನಾಗಿದ್ದರಿಂದ ಕೊಡಲಿಗೆ ಸಾಣೆ ಹಿಡಿಸುವುದಕ್ಕೆ ನನಗೆ ಸಮಯವೂ ಸಿಗಲಿಲ್ಲ, ಅದು ನನಗೆ ನೆನಪಾಗಲೂ ಇಲ್ಲ’ ಎಂದುತ್ತರಿಸಿದ!
ಇಂದಿನ ದಿನಮಾನದಲ್ಲಿ ನಮ್ಮಲ್ಲಿ ಬಹುತೇಕರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ವಾಡಿಕೆಯ ಕೆಲಸ-ಕಾರ್ಯಗಳಲ್ಲಿಯೇ ಮುಳುಗಿ ಹೋಗುತ್ತಿರುವ ನಾವು ಉಳಿದೆಲ್ಲವನ್ನೂ ನೇಪಥ್ಯಕ್ಕೆ ಸರಿಸಿಬಿಡುತ್ತಿದ್ದೇವೆ. ಚಾಕರಿ ನಿರ್ವಹಣೆಯ ಧಾವಂತದಲ್ಲಿ ಬಹುತೇಕ ಬಾರಿ ಮನೆ, ಹೆಂಡತಿ-ಮಕ್ಕಳು, ತಂದೆ-ತಾಯಿ, ಬಂಧು-ಬಳಗ ಎಲ್ಲವನ್ನೂ ಮರೆತುಬಿಡುತ್ತೇವೆ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಕೆಲಸದಲ್ಲಿ, ಬದುಕಿನಲ್ಲಿ ಸಾಫಲ್ಯ ತಂದುಕೊಡ ಬಲ್ಲ ಅಗತ್ಯದ ಮತ್ತು ಮಹತ್ವದ ವಿಷಯಗಳ ಕಡೆಗೆ ಗಮನಹರಿಸುವುದನ್ನು ಬಿಟ್ಟುಬಿಡುತ್ತೇವೆ.
ಈ ಎಲ್ಲ ಕಾರಣಗಳಿಂದಾಗಿ ನಮ್ಮೊಳಗಿನ ನೈಜಸಾಮರ್ಥ್ಯದ ಮೇಲೆ ಕ್ರಮೇಣವಾಗಿ ‘ಯಾಂತ್ರಿಕತೆಯ ಹಾವಸೆ’ ಹಬ್ಬಿಕೊಳ್ಳುವಂತಾಗುವುದಕ್ಕೆ ನಾವೇ ರತ್ನಗಂಬಳಿ ಹಾಸಿ ಸ್ವಾಗತಿಸುತ್ತೇವೆ. ಇದು ಬದುಕಿನ ಸಾಧನಾ ಪಥದಲ್ಲಿನ ನಮ್ಮ ವೈಫಲ್ಯಕ್ಕೆ ಕಾರಣವಾಗುತ್ತದೆ, ಅಸಹನೆ-ಅಸಮಾಧಾನ-ಅಸಂತೋಷವನ್ನು ತಂದೊಡ್ಡುತ್ತದೆ. ಬದುಕಿನಲ್ಲಿ ಯಶಸ್ಸು ಗಳಿಸಲು ಕೇವಲ ಶ್ರಮವಹಿಸಿ ದುಡಿಯುವುದಷ್ಟೇ ಸಾಕಾಗದು; ದುಡಿಮೆಯ ಒತ್ತಡದನಡುವೆಯೂ ನಮ್ಮ ಆಸಕ್ತಿಯ ವಿಷಯಗಳ ಕುರಿತು ಮತ್ತು ಆಹ್ಲಾದಕರ ಆಯಾಮಗಳ ಬಗೆಗೆ ಚಿಂತನ-ಮಂಥನ ನಡೆಸುವುದು ಕೂಡ ತುಂಬಾ ಮುಖ್ಯವಾಗುತ್ತದೆ. ದಿನಕ್ಕಿರುವ ೨೪ ಗಂಟೆಗಳಲ್ಲೇ ಈ ಬಾಬತ್ತಿಗೂ ಕೊಂಚ ಸಮಯವನ್ನು ಮೀಸಲಿಡಬೇಕಾಗುತ್ತದೆ.
ಹೀಗೆ ಮಾಡಿದಾಗ, ನಮ್ಮ ಒಂದಷ್ಟು ಮೌಲಿಕ ತಿಳಿವಳಿಕೆಯ ಆಕೃತಿಗಳನ್ನು ವರ್ತಮಾನದ ಅಗತ್ಯಗಳಿಗೆ ತಕ್ಕಂತೆ ಸಾಣೆ ಹಿಡಿದು ರೂಪಾಂತರಿಸುವುದು ಸಾಧ್ಯವಾಗಬಲ್ಲದು. ಇಂಥ ವೇಳೆಯಲ್ಲಿ ಸುರಿಸುವ ವಿಭಿನ್ನ ದೃಷ್ಟಿಕೋನವು ಕೆಲಸದಲ್ಲಿ ನಮ್ಮ ಶಕ್ತಿ – ಸಾಮರ್ಥ್ಯವನ್ನು ಹೆಚ್ಚಿಸುವ ವೇಗ ವರ್ಧಕದಂತೆ ವರ್ತಿಸಬಲ್ಲದು. ಇಷ್ಟು ಮಾತ್ರವಲ್ಲದೆ, ಬಿಡುವಿಲ್ಲದ ಕೆಲಸದ ನಡುವೆಯೂ ಪುಟ್ಟದೊಂದು ವಿಶ್ರಾಂತಿಗೆ ಒಡ್ಡಿಕೊಳ್ಳುವುದು ನಮ್ಮ ಆದ್ಯತೆ ಯಾಗಬೇಕು.
ಇದು ಉಸಿರುಗಟ್ಟುವ ವಾತಾವರಣದಂದ ನಮ್ಮನ್ನು ಹೊರತರಬಲ್ಲದು, ನಮ್ಮ ದೃಷ್ಟಿಕೋನ ಮತ್ತು ಸಾಮರ್ಥ್ಯಕ್ಕೆ ಮತ್ತಷ್ಟು ಸಾಣೆ ಹಿಡಿಯಲು ನೆರವಾಗಬಲ್ಲದು. ದೇಹ ಮತ್ತು ಮನಸ್ಸನ್ನು ಮತ್ತಷ್ಟು ಚುರುಕಾಗಿ, ಸೃಜನಶೀಲವಾಗಿ ಇರಿಸಿಕೊಳ್ಳಲು ಇಂಥದೊಂದು ವಿಶ್ರಾಂತಿ ಖಂಡಿತವಾಗಿಯೂಸಹಾಯಕ ವಾಗುತ್ತದೆ. ಕೆಲಸದ ಒತ್ತಡಗಳ ನಡುವೆಯೂ ಹೊರಗಿನ ಹತ್ತಾರು ಜನರೊಂದಿಗೆ ಸೇರಿ ಒಂದಷ್ಟು ಸಂತಸಪಡುವ ಅವಕಾಶವನ್ನು ಹೇಗಾದರೂ ಮಾಡಿ ನಾವೇ ಸೃಜಿಸಿಕೊಳ್ಳ ಬೇಕು. ಮೇಲೆ ವಿವರಿಸಲಾಗಿರುವ ಒಂದಷ್ಟು ಸರಳ ಪರಿಪಾಠ ಗಳು ನಮ್ಮ ಕಲ್ಪನಾಶಕ್ತಿ, ಸೃಜನಶೀಲತೆ,ಕಾರ್ಯಸಾಮರ್ಥ್ಯ, ಸೌಹಾರ್ದಭಾವ ಇತ್ಯಾದಿಗಳ ವಿಕಸನಕ್ಕೆ ಕಾರಣವಾಗುತ್ತವೆ. ವೈಫಲ್ಯದ ಪ್ರವಾಹದಲ್ಲಿ ನಾವು ಕೊಚ್ಚಿಹೋಗುವುದನ್ನು ತಡೆದು ಯಶಸ್ಸಿನ ದಾರಿಗೆ ‘ರಹದಾರಿ’ ನೀಡುತ್ತವೆ.