ಬಿಜೆಪಿ ಎಡವುತ್ತಿರುವುದು ಎಲ್ಲಿ ?
ವಿಶ್ಲೇಷಣೆ
ಡಾ.ಸತೀಶ್ ಕೆ.ಪಾಟೀಲ್
ಕರ್ನಾಟಕ ಬಿಜೆಪಿ ಘಟಕದ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದಾಗ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆಮುಗಿದು, ಸರಕಾರ ರಚನೆಯಾಗಿ ಸಾಕಷ್ಟು ದಿನಗಳು ಕಳೆದಿದ್ದರೂ ಪ್ರತಿಪಕ್ಷದ ನಾಯಕನ ಆಯ್ಕೆಗೆ ಬಿಜೆಪಿ ಹೈಕಮಾಂಡ್ ಮನಸ್ಸು ಮಾಡದ ಕಾರಣ ರಾಜ್ಯದಲ್ಲಿ ಪಕ್ಷವು ನಾವಿಕನಿಲ್ಲದ ಹಡಗಿನಂತಾಗಿದೆ. ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆಯ ವಿಷಯಕ್ಕೂ ಇದು ಅನ್ವಯವಾಗುವ ಮಾತು.
ವಿಧಾನಸಭಾ ಚುನಾವಣೆಯಲ್ಲಿನ ಸೋಲಿನ ಬಳಿಕ ರಾಜ್ಯ ಬಿಜೆಪಿಗೆ ಮತ್ತಷ್ಟು ಉತ್ಸಾಹ ಮತ್ತು ಕಾರ್ಯಕರ್ತ ರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಆಗುತ್ತಿಲ್ಲ. ಅಷ್ಟಕ್ಕೂ ಈ ವಿಳಂಬವೇಕೆ? ಹೈಕಮಾಂಡ್ ಮುನಿಸಿಕೊಂಡಿ ರುವುದೇಕೆ? ಎಂಬ ಕಾರ್ಯ ಕರ್ತರ ಪ್ರಶ್ನೆಗಳಿಗೂ ಉತ್ತರ ಸಿಗುತ್ತಿಲ್ಲ. ಇಂಥ ಅನಿಶ್ಚಿತತೆಗೆ ರಾಜ್ಯ ಬಿಜೆಪಿ ನಾಯಕರ ಕೊಡುಗೆಯೆಷ್ಟು ಎಂಬುದನ್ನು ಅವಲೋಕಿಸುವುದಕ್ಕೂ ಮೊದಲು ಪಕ್ಷದ ಹೈಕಮಾಂಡ್‌ನ ಒಂದಿಷ್ಟು ನಡೆಗಳನ್ನು ವಿಶ್ಲೇಷಿಸೋಣ.
ರಾಜ್ಯದ ವಿಷಯದಲ್ಲಿ ಬಿಜೆಪಿ ಹೈಕಮಾಂಡ್ ಸಾಕಷ್ಟು ತಪ್ಪುಹೆಜ್ಜೆಗಳನ್ನು ಇಟ್ಟಿರುವುದನ್ನು ಗಮನಿಸಬಹುದು. ರಾಜ್ಯ ಬಿಜೆಪಿಯ ಇಂದಿನ ಸ್ಥಿತಿಗೆ ಹೈಕಮಂಡ್‌ನ ಕೆಲವು ನಿರ್ಧಾರ ಗಳೂ ಕಾರಣವಾಗಿವೆ. ಮೊದಲನೆಯದಾಗಿ, ಕರ್ನಾಟಕದಲ್ಲಿ ಪಕ್ಷವು ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಸರಕಾರದ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳರು ಸೇರಿದಂತೆ ಪಕ್ಷದ ನೆಲೆ ಗಟ್ಟಿನಲ್ಲೇ ಅನೇಕರು ಅಪಸ್ವರ ಎತ್ತಿದರು. ಅದರಲ್ಲೂ ಯತ್ನಾಳರಂತೂ ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರರನ್ನು ಗುರಿಯಾಗಿಸಿಕೊಂಡು ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದುಂಟು. ಇಂಥ ಬೆಳವಣಿಗೆಗಳನ್ನು ತಡೆಯಲು ಹೈಕಮಾಂಡ್ ಮುಂದಾಗಲಿಲ್ಲ. ಇದರಿಂದ ಈ ಸರಕಾರದ ಕುರಿತು ಜನಮಾನಸದಲ್ಲಿ ಬೇರೆಯದೇ ಅಭಿಪ್ರಾಯ ಗಳು ಹುಟ್ಟತೊಡಗಿದವು ಮತ್ತು ಪಕ್ಷದ ವರ್ಚಸ್ಸಿಗೆ ಅವು ಸಾಕಷ್ಟು ಹಾನಿಯುಂಟುಮಾಡಿದವು.
ನಂತರ ಸೂಕ್ತ ಕಾರಣ ನೀಡದೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಹೈಕಮಾಂಡ್ ಮಾಡಿದ ಎರಡನೇ ತಪ್ಪು. ಒಬ್ಬ ಮಾಸ್ ಲೀಡರ್ ಎನಿಸಿಕೊಂಡಿದ್ದ ಅವರನ್ನು ಹೀಗೆ ಕೆಳಗಿಳಿಸಿದ ನಂತರ ಆ ಗದ್ದುಗೆಗೆ ಜನಾಕರ್ಷಣೆಯ ನಾಯಕನನ್ನು ಆಯ್ಕೆ ಮಾಡದೆ, ಮೂಲತಃ ಜನತಾ ಪರಿವಾರದಿಂದ ಬಂದ ಹಾಗೂ ಮಾಸ್ ಲೀಡರ್ ಅಲ್ಲದ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಹೈಕಮಾಂಡ್‌ನ ಮತ್ತೊಂದು ತಪ್ಪು ನಿರ್ಧಾರ. ಆ ಘಟ್ಟದಲ್ಲಿ ಮೀಸಲಾತಿ ಚಳವಳಿಯ ಮೂಲಕ ಒಂದರ್ಥದಲ್ಲಿ ಮಾಸ್ ಲೀಡರ್ ಆಗಿ ಹೊರಹೊಮ್ಮಿದ್ದ  ಯತ್ನಾಳ ರನ್ನು ಸಿಎಂ ಗದ್ದುಗೆಯಲ್ಲಿ ಕೂರಿಸಿದ್ದಿದ್ದರೆ ಚುನಾವಣೆಯಲ್ಲಿ ಕಡೇಪಕ್ಷ ಪಂಚಮಸಾಲಿ ಜನಾಂಗದ ಬೆಂಬಲ ಪಡೆಯಬಹುದಾಗಿತ್ತು.
ಮಾತ್ರವಲ್ಲದೆ, ಪಕ್ಷದ ಹಿಂದುತ್ವದ ನಿಲುವಿಗೆ ಒತ್ತಾಸೆ ಒದಗಿದಂತಾಗಿ ಮೂಲ ಬಿಜೆಪಿ ಕಾರ್ಯಕರ್ತರಿಗೆ ನೆಮ್ಮದಿಯಾದರೂ ಸಿಗುತ್ತಿತ್ತು. ಈ ವಿಷಯ ದಲ್ಲೂ ಎಡವಿದ ಹೈಕಮಾಂಡ್ ತನ್ಮೂಲಕ ರಾಜಕೀಯ ಎದುರಾಳಿಗಳಿಗೆ ಹಾದಿಯನ್ನು ತಾನೇ ಸಲೀಸು ಮಾಡಿಕೊಟ್ಟಿತು ಎಂದರೆ ಅತಿಶಯೋಕ್ತಿ ಯಲ್ಲ. ಪಕ್ಷದ ಕಡೆಯಿಂದಾದ ಮತ್ತೊಂದು ದೋಷವು ಪಂಚಮಸಾಲಿ ಮೀಸಲಾತಿ ವಿಚಾರಕ್ಕೆ ಸಂಬಂಧಪಟ್ಟಿದ್ದು. ಬಿಜೆಪಿಯ ಮತಬ್ಯಾಂಕ್ ರಾಜ್ಯದ ಲಿಂಗಾಯತರು. ಈ ಸಮುದಾಯದಲ್ಲೇ ಶೇ.೮೦ರಷ್ಟು ಜನಸಂಖ್ಯೆ ಹೊಂದಿದ್ದ ಪಂಚಮಸಾಲಿ ಜನಾಂಗಕ್ಕೆ ಮೀಸಲಾತಿ ಘೋಷಣೆಯಲ್ಲಿ ವಿಳಂಬ ಮಾಡಿದ್ದು, ಆ ಜನಾಂಗದಲ್ಲಿ ಬಿಜೆಪಿಯ ಮೇಲೆ ಆಕ್ರೋಶ ಹುಟ್ಟಿಕೊಳ್ಳುವುದಕ್ಕೆ ಕಾರಣವಾಯಿತು.
ತರುವಾಯ ಅದು ಘೋಷಣೆಯಾದರೂ ಅಷ್ಟೊತ್ತಿಗೆ ಮೀಸಲಾತಿ ಚಳವಳಿ ಬಿಜೆಪಿಗೆ ಎಷ್ಟು ಹಾನಿ ಮಾಡಬೇಕಿತ್ತೋ ಅಷ್ಟು ಮಾಡಿತ್ತು. ಇದು ಮುಂದುವರಿದು ವಿಧಾನಸಭಾ ಚುನಾವಣೆ ವೇಳೆ ಈ ಜನಾಂಗವು ಬಿಜೆಪಿಯಿಂದ ಹಿಂದೆ ಸರಿಯುವಂತಾಗಿ ಪಕ್ಷಕ್ಕೆ ಹೊಡೆತ ನೀಡಿದ್ದನ್ನು ಫಲಿತಾಂಶ ಗಳೇ ಸಾರಿ ಹೇಳಿವೆ. ಒಳಮೀಸಲಾತಿ ನಿರ್ಣಯ ಬಿಜೆಪಿ ಸರಕಾರ ಮಾಡಿದ ಮತ್ತೊಂದು ಎಡವಟ್ಟು. ಒಳಮೀಸಲಾತಿ ಜಾರಿಗೆ ದಲಿತ ಪಂಗಡಗಳಲ್ಲಿ ಒಮ್ಮತವಿರಲಿಲ್ಲ. ಈ ಮೀಸಲಾತಿಯನ್ನು ದಲಿತರ ಎಡ ಸಮುದಾಯ ಮಾತ್ರ ಸ್ವಾಗತಿಸಿದರೆ, ಬಂಜಾರ, ಬೋವಿ, ಸಮಗಾರರು ಸೇರಿದಂತೆ ದಲಿತರ ಇತರ ಪಂಗಡಗಳ ಬೆಂಬಲವನ್ನು ಬಿಜೆಪಿ ಕಳೆದು ಕೊಳ್ಳಬೇಕಾಯಿತು.
ಈ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದ್ದ ಬಿಜೆಪಿ ಸರಕಾರ ತಪ್ಪುಮಾಡಿತು. ಈ ಅಂಶದಿಂದ ಅಸಮಾಧಾನಗೊಂಡಿದ್ದ ಇತರೆ ಪಂಗಡಗಳು ಚುನಾವಣೆಯಲ್ಲಿ ಬಿಜೆಪಿಯನ್ನು ಕೈಬಿಟ್ಟವು, ಅದರಿಂದ ಪಕ್ಷಕ್ಕೆ ಹಾನಿಯೂ ಆಯಿತು. ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತುನೀಡಿ ಜನರಿಗೆ ಅದರ ಪ್ರಯೋಜನ ತಲುಪಿಸಬೇಕಿದ್ದ ರಾಜ್ಯ ಬಿಜೆಪಿ ಸರಕಾರ ಹಲಾಲ್, ಹಿಜಾಬ್‌ನಂಥ ಅನಗತ್ಯ ವಿಷಯಗಳಿಗೆ ಮಹತ್ವ ನೀಡಿ ಕೈಸುಟ್ಟುಕೊಂಡಿತು. ಚುನಾವಣೆ ವೇಳೆ ರಾಜ್ಯದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದು ಬಿಜೆಪಿಯ ಇನ್ನೊಂದು ಪ್ರಮಾದ. ರಾಜಕೀಯದಲ್ಲಿ ಹೊಸಮುಖಗಳಿಗೆ ಮಣೆಹಾಕಬೇಕು ಎಂಬುದರಲ್ಲಿ ಎರಡು ಮಾತಿಲ್ಲ; ಆದರೆ ಅದಕ್ಕೆ ಅನುಸರಿಸಬೇಕಾದ ಮಾರ್ಗವೂ ಯಥೋಚಿತವಾಗಿರ ಬೇಕಲ್ಲವೇ? ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆಮಾಡುವಾಗ, ‘ಯಾರದ್ದೋ’ ಮಾತು ಕೇಳಿಕೊಂಡು ಪಕ್ಷ ಹೊಸತಪ್ಪು ಮಾಡಿತು.
ವಿರೋಧಗಳ ನಡುವೆಯೂ ‘ಪ್ರಯೋಗಾತ್ಮಕವಾಗಿ’ ಹೊಸಬರಿಗೆ ಟಿಕೆಟ್ ನೀಡಿದ್ದೂ ಈ ತಪ್ಪುಗಳಲ್ಲೊಂದು. ಇನ್ನು ಸ್ವಂತ ಸಾಮರ್ಥ್ಯದ ಮೇಲೆ ಮತ್ತುಸರಕಾರದ ಸಾಧನೆ ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಾಗದ ರಾಜ್ಯ ಬಿಜೆಪಿಗರು, ಪ್ರಧಾನಿ ಮೋದಿಯವರನ್ನು ಚುನಾವಣೆ ವೇಳೆ ಹೆಚ್ಚಾಗಿ ಬಳಸಿಕೊಂಡರೆ ಗೆಲ್ಲಬಹುದು ಎಂಬ ಲೆಕ್ಕಾಚಾರ ಹಾಕಿದ್ದು ತಪ್ಪಾಯಿತು. ಏಕೆಂದರೆ, ಇದು ಕರ್ನಾಟಕ; ಗುಜರಾತ್ ಅಥವಾ ಉತ್ತರ ಪ್ರದೇಶ ಅಲ್ಲ.ಆದರೆ ಈ ಅಂಶ ರಾಜ್ಯ ಬಿಜೆಪಿಗರಿಗೆ ತಡವಾಗಿ ಅರ್ಥ ವಾಗಿದ್ದು ದುರದೃಷ್ಟಕರ. ಬಿಜೆಪಿ ಸರಕಾರದಲ್ಲಿನ ಖಾಲಿ ಸಚಿವ ಸ್ಥಾನಗಳನ್ನು ಕೊನೆಗೂ ತುಂಬದೇ ಹೋಗಿದ್ದು ಕೂಡ ಪಕ್ಷದ ವೈಫಲ್ಯಕ್ಕೆ ಕೊಡುಗೆ ನೀಡಿತೆನ್ನಬಹುದು; ಈ ಸ್ಥಾನಗಳನ್ನು ತುಂಬಿದ್ದಿದ್ದರೆ ಕೆಲವೆಡೆ ಪ್ರಭಾವ ಬೀರಬಹುದಾಗಿತ್ತು.
ಇನ್ನು, ತಾಲೂಕು, ಜಿಲ್ಲಾ ಪಂಚಾಯತಿ ಹಾಗೂ ಬಿಬಿಎಂಪಿಗಳಿಗೆ ಸಕಾಲದಲ್ಲಿ ಚುನಾವಣೆ ನಡೆಸಿದ್ದರೆ ಪಕ್ಷದ ಕಾರ್ಯಕರ್ತರಿಗೆ ಪ್ರಯೋಜನ ವಾಗುತ್ತಿತ್ತು, ಪಕ್ಷದ ವರ್ಚಸ್ಸಿನ ವರ್ಧನೆಗೂ ಅದು ನೆರವಾಗುತ್ತಿತ್ತು. ಈ ವಿಷಯದಲ್ಲೂ ಬಿಜೆಪಿ ಸರಕಾರ ಎಡವಿತು. ಮುಖ್ಯವಾಗಿ, ಕಾಂಗ್ರೆಸ್ ಪಕ್ಷದರಾಜ್ಯ ಘಟಕ ಆರಂಭಿಸಿದ ‘ಶೇ.೪೦ ಕಮಿಷನ್ ಆರೋಪ’ದ ಅಭಿಯಾನಕ್ಕೆ ತಕ್ಕ ಉತ್ತರ ನೀಡುವಲ್ಲಿ ಬಿಜೆಪಿ ವಿಫಲವಾಯಿತು. ಈ ಎಲ್ಲ ಅಂಶಗಳು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೂಮರಾಂಗ್ ಆಗಿದ್ದರ ಜತೆಗೆ, ಪಕ್ಷವು ಈಗಿರುವ ಸ್ಥಿತಿಗೆ ತಲುಪುವುದಕ್ಕೆ ಕಾರಣವಾಗಿದ್ದು ಖರೆ.
ಆದರೆ, ಇದನ್ನು ಸಕಾಲದಲ್ಲಿ ಮನವರಿಕೆ ಮಾಡಿಕೊಂಡು ನಷ್ಟಭರ್ತಿಗೆ ಮುಂದಾಗಬೇಕಿದ್ದ ಮತ್ತು ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಪ್ರಬಲ ಗೊಳಿಸಬೇಕಿದ್ದ ಹೈಕಮಾಂಡ್, ಮತ್ತದೇ ತಪ್ಪು ಮಾಡುತ್ತಿದೆ. ಪಕ್ಷದ ನೂತನ ಅಧ್ಯಕ್ಷರ, ವಿಪಕ್ಷ ನಾಯಕನ ಆಯ್ಕೆಯಲ್ಲಿ ನಿಧಾನಗತಿ ಮೆರೆಯುತ್ತಿದೆ. ಇದರ ಹಿಂದೆ ಅದ್ಯಾವ ಕಾರ್ಯತಂತ್ರ ಅಡಗಿದೆಯೋ ಭಗವಂತನೇ ಬಲ್ಲ! ಹೈಕಮಾಡ್‌ನ ಈ ಧೋರಣೆಯಿಂದ ಪಕ್ಷದ ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಅಸಮಾ ಧಾನವಾಗಿರುವುದು ಹೌದಾದರೂ, ಈ ನಡುವೆಯೂ ‘ಪ್ರತಿಪಕ್ಷದ ನಾಯಕ ಯಾರಾಗಬೇಕು?’ ಎಂಬ ಅಂಶವನ್ನಿಟ್ಟುಕೊಂಡು ಖಾಸಗಿ ನೆಲೆಯಲ್ಲಿ ಸಮೀಕ್ಷೆ ಮಾಡಿದಾಗ, ಸ್ವಲ್ಪ ಬಾಯಿ ಜೋರಾದರೂ ‘ಹಿಂದೂ ಫೈರ್‌ಬ್ರ್ಯಾಂಡ್’ ಎನಿಸಿಕೊಂಡು ‘ಕ್ಲೀನ್ ಇಮೇಜ್’ ಹೊಂದಿರುವ ಬಸನಗೌಡ ಪಾಟೀಲ್ ಯತ್ನಾಳರ ಕಡೆಗೆ ಬಹುತೇಕರ ಒಲವಿರುವುದು ಕಂಡು ಬಂದಿದೆ.
ಅವರು ಪ್ರಬಲ ಸಮುದಾಯದ ನಾಯಕರೂ ಹೌದು ಎಂಬುದಿಲ್ಲಿ ಉಲ್ಲೇಖನೀಯ. ಈ ನಿಟ್ಟಿನಲ್ಲಿ ಹೈಕಮಾಂಡ್ ಮೈಕೊಡವಿಕೊಂಡು ಏಳಬೇಕು, ಮತ್ತಷ್ಟು ವಿಳಂಬ ಮಾಡಿದರೆ ವ್ಯತಿರಿಕ್ತ ಪರಿಣಾಮ ಕಟ್ಟಿಟ್ಟಬುತ್ತಿ. ಏಕೆಂದರೆ ಸರಕಾರದ ಸಂಭಾವ್ಯ ಲೋಪದೋಷಗಳನ್ನು ಎತ್ತಿ ತೋರಿಸಿ, ಜನಕಲ್ಯಾಣದೆಡೆಗೆ ಸರಕಾರವನ್ನು ತಿರುಗುವಂತೆ ಮಾಡುವ ವಿಪಕ್ಷ ನಾಯಕನೊಬ್ಬನ ಅಗತ್ಯ ಹೆಚ್ಚಿದೆ. ಈ ಸೂಕ್ಷ್ಮವನ್ನು ಮನಗಂಡು ಹೈಕಮಾಂಡ್ ಕ್ಷಿಪ್ರನಿರ್ಣಯಕ್ಕೆ ಮುಂದಾದರೆ ಅದು ಪಕ್ಷದ ಭವಿಷ್ಯದ ದೃಷ್ಟಿಯಿಂದಲೂ ಒಳ್ಳೆಯದು.
(ಲೇಖಕರು ರಾಜಕೀಯ ವಿಶ್ಲೇಷಕರುಹಾಗೂ ಪ್ರಾಧ್ಯಾಪಕರು)