ಮಕ್ಕಳಿಗೆ ರಜಾ ದಿನಗಳು ಸಜೆಯಾಗದಿರಲಿ
ಹಿತಚಿಂತನೆ
ಬಸವನಗೌಡ ಹೆಬ್ಬಳಗೆರೆ
ನಾವು ವಿದ್ಯಾರ್ಥಿಗಳಾಗಿದ್ದಾಗ, ‘ಅಕ್ಟೋಬರ್ ೨’ ಯಾವಾಗ ಬರುತ್ತೋ ಅಂತ ಕಾದು ಕುಳಿತಿರುತ್ತಿದ್ದೆವು. ಕಾರಣ, ಅದಾದ ಮಾರನೇ ದಿನದಿಂದ ನಮಗೆ ದಸರಾ ರಜೆ ಇರುತ್ತಿತ್ತು! ಆ ರಜೆಯನ್ನು ಮುಗಿಸಿ ಮತ್ತೆ ನಾವು ಶಾಲೆಗೆ ಹಾಜರಾಗುತ್ತಿದ್ದುದು ನವೆಂಬರ್ ೧ಕ್ಕೆ. ಅಲ್ಲಿಂದ ಮುಂದಿನ ಬೇಸಗೆ ರಜೆಯವರೆಗೂ ಕಲಿಕಾ ಚಟುವಟಿಕೆಗಳ ಕಡೆಗೆ ನಮ್ಮ ಗಮನ ಇರುತ್ತಿತ್ತು.
ಇನ್ನು ರಜೆಯಲ್ಲಿ ನಮ್ಮ ಶಾಲೆಯಲ್ಲಿ ಅರ್ಧವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವುದನ್ನು ಬಿಟ್ಟರೆ ಮತ್ತಿನ್ಯಾವ ಹೋಮ್‌ವರ್ಕ್ ಅನ್ನೂ ಮೇಷ್ಟ್ರು ನಮಗೆ ಕೊಡುತ್ತಿರಲಿಲ್ಲ. ರಜೆಯಲ್ಲಿ ನಮ್ಮದು ಬರೀ ಆಟ. ನಮ್ಮದು ಮಾತ್ರವಲ್ಲ, ಬಹುತೇಕರದ್ದು ಹಿಂದೆಲ್ಲಾ ಹೀಗೆಯೇ ಇತ್ತು. ರಜೆ ಬಂತೆಂದರೆ ಸಾಕು ಕೆಲವರು ತಮ್ಮ ಅಜ್ಜ- ಅಜ್ಜಿಯ ಮನೆಗೋ, ನೆಂಟರ ಮನೆಗೋ ಹೋಗುತ್ತಿದ್ದರು. ಮತ್ತೆ ಕೆಲವರು ತಮ್ಮ ಅಪ್ಪ-ಅಮ್ಮಂದಿರ ಕೆಲಸ ಕಾರ್ಯಗಳಲ್ಲಿ ನೆರವಾಗುತ್ತಿದ್ದರು. ಇನ್ನೂ ಕೆಲವರು ಇಡೀ ದಿನ ಲಗೋರಿ, ಗೋಲಿ, ಬುಗುರಿ, ಮರಕೋತಿ, ಚಿನ್ನಿ ದಾಂಡು, ಸೈಕಲ್ ಸವಾರಿ ಮುಂತಾದ ಆಟಗಳನ್ನಾಡಿ ಕಾಲ ಕಳೆಯುತ್ತಿದ್ದರು.
ಒಟ್ಟಾರೆಯಾಗಿ ಹೇಳುವುದಾದರೆ, ರಜೆಯ ಮಜದ ಕ್ಷಣಗಳು ನಮ್ಮ ಬಾಲ್ಯಗಳನ್ನು ಖುಷಿಯಾಗಿರಿಸಿ, ನಮ್ಮ ನೆನಪು ಗಳನ್ನು ಶ್ರೀಮಂತ ವಾಗಿರಿಸಿವೆ. ಇವು ನಮ್ಮ ಅನುಭವಗಳನ್ನು ಹೆಚ್ಚಿಸಿವೆ, ನಮಗೇ ಅರಿಯದಂತೆ ನಮ್ಮಲ್ಲಿ ಸಹಕಾರ ಗುಣ, ನಾಯಕತ್ವ, ಹೊಂದಾಣಿಕೆ ಹಾಗೂ ವಿವಿಧ ಕೌಶಲಗಳನ್ನು ಬೆಳೆಸಿವೆ. ಮನೆ ಯಲ್ಲಿ ಅಜ್ಜ-ಅಜ್ಜಿ ಹೇಳುತ್ತಿದ್ದ ಕಥೆಗಳು ನಮ್ಮಲ್ಲಿನ ನೈತಿಕ ಮೌಲ್ಯಗಳನ್ನು ಹೆಚ್ಚಿಸಿವೆ.
ಹಿಂದೆಲ್ಲಾ ಪೋಷಕರೂ ಹಾಗೆಯೇ ಇದ್ದರು, ಮಕ್ಕಳಿಗೆ ತೀರಾ ಒತ್ತಡ ಹಾಕದೆ ಮುಕ್ತವಾಗಿ ಬೆಳೆಯಲು ಬಿಡು ತ್ತಿದ್ದರು. ಆದರೆ ಕಾಲವೀಗ ಬದಲಾಗಿದೆ. ನಾವೆಲ್ಲ ‘ಮಾರ್ಕ್ಸ್’ವಾದಿಗಳಾಗಿ ಫಲಿತಾಂಶದ ವಿಷಯದಲ್ಲಿ ಪೈಪೋಟಿಗೆ ಬಿದ್ದಿದ್ದೇವೆ. ಕಾರಣ, ಜಗತ್ತು ನಾಗಾಲೋಟದಿಂದ ಸಾಗುತ್ತಿರುವುದರಿಂದ ಆ ವೇಗಕ್ಕೆ ತಕ್ಕಂತೆ ಇಂಥ ಪೈಪೋಟಿಯೂ ಇರಬೇಕೆಂಬುದು ನಮ್ಮ ಭ್ರಮೆ. ಹೀಗಾಗಿ, ಮಕ್ಕಳ ಮೂಲಕ ನಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಬೇಕು ಎಂದು ಅವರು ಹುಟ್ಟಿದಾಗಲೇ ತೀರ್ಮಾನಿಸಿದಂತೆ ವರ್ತಿಸುತ್ತಿದ್ದೇವೆ. ನಮ್ಮ ಈ ವರ್ತನೆಯಿಂದಾಗಿ ಇಂದು ಮಕ್ಕಳು ತಮ್ಮ ಬಾಲ್ಯವನ್ನು ಕಳೆದು ಕೊಳ್ಳುತ್ತಿದ್ದಾರೆ. ನಮ್ಮ ಬಾಲ್ಯ ಮತ್ತು ಈಗಿನ ಮಕ್ಕಳ ಬಾಲ್ಯವನ್ನು ನೋಡಿ ದರೆ ನನಗೆ ‘ಅಯ್ಯೋ ಪಾಪ’ ಎನಿಸುತ್ತದೆ. ಮಣಭಾರದ ಬ್ಯಾಗು ಗಳನ್ನು ಹೊತ್ತು ಶಾಲೆಗೆ ಹೋಗಿಬಂದು, ‘ಉಸ್ಸಪ್ಪಾ’ ಎಂದು ದಣಿವಾರಿಸಿ ಕೊಳ್ಳುವಷ್ಟ ರಲ್ಲಿ ಮತ್ತೆ ಅವರಿಗೆ ಟ್ಯೂಷನ್. ವಾರದ ರಜೆಯಲ್ಲಿ ಅವರಿಗೆ ಇಷ್ಟವಿರಲಿ ಇಲ್ಲದಿರಲಿ, ಸಂಗೀತ-ಡ್ರಾಯಿಂಗ್ ಕ್ಲಾಸು. ದಸರಾ ರಜೆಯು ಪಾಠದಲ್ಲಿ ಕಳೆದರೆ, ಬೇಸಗೆ ರಜೆ ಬಂದರೆ ‘ಸಮ್ಮರ್ ಕ್ಯಾಂಪ್’! ಒಟ್ಟಿನಲ್ಲಿ ಮಕ್ಕಳು ನಾವಾಡಿಸೋ ಗೊಂಬೆಗಳಾಗಿ ಬಿಟ್ಟಿದ್ದಾರೆ.
ಇದು ದಸರಾ ರಜೆಯ ಕಾಲಘಟ್ಟ. ನನ್ನ ಪರಿಚಿತರೊಬ್ಬರ ಮನೆಗೆ ಹೋದಾಗ ಅವರಾಗಲೇ ಈ ರಜೆಯಲ್ಲಿ ಅವರ ಮಕ್ಕಳು ಮಾಡಬಹುದಾದ ಚಟುವಟಿಕೆಗಳನ್ನು ಸಿದ್ಧಪಡಿಸಿಕೊಂಡು ಹೇಳುತ್ತಿದ್ದರು. ಮಕ್ಕಳಿಗೆ ಇದು ನುಂಗಲಾರದ ತುತ್ತಾಗಿತ್ತು ಎಂಬುದನ್ನು ಅವರ ಮುಖಭಾವ ನೋಡಿ ತಿಳಿದ ನಾನು, ‘ಮಕ್ಕಳು ತಮ್ಮಿಷ್ಟದಂತೆ ರಜೆ ಕಳೆಯಲಿ ಬಿಡಿ’ ಎಂದು ಸಲಹೆ ಯಿತ್ತೆ. ಆಗ ಅವರು ತಾವು ಮಾಡುತ್ತಿರುವುದೇ ಸರಿ ಎಂಬ ರೀತಿಯಲ್ಲಿ ನನಗೇ ಉಪದೇಶವಿತ್ತಾಗ ಸೋತು ಸುಮ್ಮನಾದೆ.
ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳಲು ಬಯಸಿದ್ದ ಪರಿಚಿತ ಶಿಕ್ಷಕರೊಬ್ಬರಿಗೆ, ‘ಸರ್, ನೀವು ತುಂಬಾ ಗ್ರೇಟ್’ ಎಂದು ಹೊಗಳಿದ್ದಕ್ಕೆ ಅವರು, ‘ಸರ್, ನನಗಿರುವ ಅವಧಿಯಲ್ಲಿ ಕಲಿಸಲು ಆಗದೇ ಈಗ ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುತ್ತಿರುವುದರಿಂದ, ಮಕ್ಕಳ ರಜೆಯ ಮನರಂಜನೆಯ ಅವಧಿಯನ್ನು ನಾನು ಕಸಿದು ಕೊಂಡ ಫೀಲಿಂಗ್ ಆಗುತ್ತಿದೆ’ ಎಂದಾಗ ನನಗೆ ಅಚ್ಚರಿಯಾಯಿತು. ಇಂದು ಅನೇಕ ಶಾಲೆಯವರು ಹೀಗೆ ರಜಾ ಅವಧಿಯಲ್ಲಿ ಮಕ್ಕಳಿಗೆ ಕ್ಲಾಸ್ ತೆಗೆದು ಕೊಳ್ಳುತ್ತಿದ್ದಾರೆ. ಇದರಿಂದ ಪೋಷಕ ರಂತೂ ಫುಲ್‌ಖುಷ್; ಆದರೆ ರಜೆಯ ಮಜಾ ಕಳೆದುಕೊಂಡಿದ್ದುಮಾತ್ರ ಮಕ್ಕಳು!
ಮಕ್ಕಳನ್ನು ಮೊಬೈಲ್ ಚಟದಿಂದ ಪಾರುಮಾಡಲು ಕೆಲ ಪೋಷಕರು ರಜಾ ಅವಧಿಯಲ್ಲಿ ಅವರನ್ನು ಬ್ಯುಸಿಯಾಗಿಡಲು ಬಯಸುತ್ತಾರೆ. ಕೋವಿಡ್ ತರುವಾಯದಲ್ಲಿ ಮಕ್ಕಳು ಮೊಬೈಲ್ ಗೆ ಅಡಿಕ್ಟ್ ಆಗಿರುವುದು ಕಂಡುಬರುತ್ತಿದೆ. ಸಕಾರಾತ್ಮಕ ಕಲಿಕೆಯ ವಿಷಯದಲ್ಲಾಗಿದ್ದರೆ ಇದರಿಂದ ತೊಂದರೆ ಯಿಲ್ಲ; ಆದರೆ ಸರಿ-ತಪ್ಪು ಗುರುತಿಸಲಾಗದ ಈ ವಯಸ್ಸಿನಲ್ಲಿ, ಅಂತರ್ಜಾಲದಲ್ಲಿ ಲಭ್ಯವಿರುವ ಕೆಟ್ಟ ದೃಶ್ಯಾವಳಿ/ಮನಸ್ಸನ್ನು ಕೆರಳಿಸುವ ವಿಷಯಗಳು ಮಕ್ಕಳ ಮನಸ್ಸನ್ನು ಚಂಚಲಗೊಳಿಸುತ್ತವೆ. ಮೊಬೈಲ್‌ನ ಸದುಪಯೋಗದ ಬಗ್ಗೆ ಎಷ್ಟೇ ಬುದ್ಧಿ ಹೇಳಿದರೂ ಅದು ಹೊಳೆಯಲ್ಲಿ ಹುಣಿಸೇಹಣ್ಣು ಕಿವುಚಿದಂತೆ ವ್ಯರ್ಥವಷ್ಟೇ! ಅತಿರೇಕದ ಮೊಬೈಲ್ ಬಳಕೆಯನ್ನು ತಪ್ಪಿಸಲೆಂದೇ ಪೋಷಕರು ಮಕ್ಕಳನ್ನು ಟ್ಯೂಷನ್‌ಗೆ, ಹಾಸ್ಟೆಲ್‌ಗೆ ಸೇರಿಸಿರುವ ಉದಾಹರಣೆಗಳಿವೆ.
ಇದರಿಂದಾಗಿ ಪೋಷಕರ ಮತ್ತು ಮಕ್ಕಳ ಸಾಂಗತ್ಯ- ಸಂವಹನ ಕಡಿಮೆಯಾಗಿ ಭಾವನಾತ್ಮಕ ಸಂಬಂಧದ ಮೇಲೆ ಕರಿಛಾಯೆ ಮುಸುಕಬಹುದು. ಮಕ್ಕಳ ಮೊಬೈಲ್ ಗೀಳನ್ನು ಕಮ್ಮಿ ಮಾಡಿಸುವುದಕ್ಕೂ ಮೊದಲು ಪೋಷಕರು ತಾವು ಅದರ ಅತಿರೇಕದ ಬಳಕೆಯನ್ನು ತಗ್ಗಿಸಬೇಕು. ಮಕ್ಕಳು ಅನುಕರಣಾಪ್ರವೃತ್ತಿಯವರಾದ್ದರಿಂದ, ಅವರಿಂದ ನಾವೇನು ನಿರೀಕ್ಷಿಸುತ್ತೇವೆಯೇ ಅದನ್ನು ಮೊದಲು ನಾವೇ ಮಾಡಬೇಕು! ಕಲಿಕೆ ಎಂಬುದು ಬರೀ ನಾಲ್ಕು ಗೋಡೆಯ ಮಧ್ಯೆ ಆಗುತ್ತದೆ ಎಂಬ ಕಲ್ಪನೆ ನಮ್ಮ ಮನದಲ್ಲಿ ಬೇರೂರಿರುವುದರಿಂದ, ನಾವು ಮಗುವನ್ನು ಅದರ ಮಧ್ಯೆ ಇರಿಸಲು ಬಯಸುತ್ತೇವೆ. ಮಗುವಿನ ವ್ಯಕ್ತಿತ್ವ ವಿಕಾಸವಾಗಬೇಕೆಂದರೆ ಅವರನ್ನು ಈ ರೀತಿ ಕೂಡಿ ಹಾಕುವುದನ್ನು ಬಿಡಬೇಕು.
‘ಕೋಣೆಕೂಸು ಕೊಳೀತು, ಬೀದಿ ಕೂಸು ಬೆಳೀತು’ ಎಂಬ ಮಾತು ಇದನ್ನೇ ತಿಳಿಸುತ್ತದೆ. ‘ಮಗುವು ತನ್ನ ಕಲಿಕೆಯ ಸ್ವಲ್ಪಭಾಗವನ್ನು ತನಗೆ  ಪಾಠ ಮಾಡುವ ಗುರುಗಳಿಂದ, ಉಳಿದ ಭಾಗವನ್ನು ಸ್ವಕಲಿಕೆ-ಸಹಪಾಠಿಗಳು-ಸ್ನೇಹಿತರಿಂದ, ಇನ್ನುಳಿದ ಭಾಗದ ಕಲಿಕೆಯನ್ನು ಸ್ವಾನುಭವದಿಂದ ಕ್ರಮೇಣ ಕಲಿಯುತ್ತದೆ’ ಎಂಬುದು ಕಲಿಕೆಗೆ ಸಂಬಂಧಿಸಿದ ಶ್ಲೋಕವೊಂದರ ಭಾವಾರ್ಥ. ಇದರ ಪ್ರಕಾರ, ‘ಕಲಿಕೆಗೆ ಎಲ್ಲೆಯಿಲ್ಲ, ಎಲ್ಲೆಡೆಗಳಿಂದಲೂ ಆಗಬಹುದು’ ಎಂದಾಯಿತಲ್ಲವೇ? ಆದರೆ ಮಕ್ಕಳು ಔಪಚಾರಿಕವಾಗಿ ಕಲಿತದ್ದನ್ನು ಮಾತ್ರ ನಾವು ಕಲಿಕೆ ಅಂದುಕೊಳ್ಳುತ್ತಿದ್ದೇವೆ.
ಶಾಲೆಯಿಂದ ಹೊರಗೆ ಅನೌಪಚಾರಿಕವಾಗಿಯೂ ಕಲಿಕೆ ಆಗಬಹುದು. ನಿಗದಿಪಡಿಸಲಾದ ಶಾಲಾ ಪಠ್ಯಕ್ರಮಕ್ಕಷ್ಟೇ ಮಕ್ಕಳು ಸೀಮಿತವಾದರೆ ಅವರಸರ್ವಾಂಗೀಣ ವಿಕಾಸ ಬರೀ ಕನಸಷ್ಟೇ. ‘ಮಕ್ಕಳು ಭತ್ತ ಬೆಳೆಯುವ ಗದ್ದೆಗಳಾಗಬೇಕೇ ಹೊರತು, ಭತ್ತ ತುಂಬುವ ಚೀಲಗಳಾಗಬಾರದು’ ಎಂಬ ರಾಷ್ಟ್ರ ಕವಿ ಕುವೆಂಪುರವರ ಮಾತೂ ಕಲಿಕೆಯು ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಅವಕಾಶ ಕೊಡಬೇಕು ಎಂಬುದನ್ನು ತಿಳಿಸುತ್ತದೆ. ಆದ್ದರಿಂದ ಮಗುವಿಕೆ ಸ್ವಕಲಿಕೆಗೆ ಹೆಚ್ಚು ಅವಕಾಶ ಕೊಡಬೇಕು, ಇದಕ್ಕೆ ರಜಾ ಅವಧಿಯನ್ನು ಬಳಸಿಕೊಳ್ಳಬೇಕು. ಇಂದು ಕೆಲವೊಂದು ಶಾಲೆಯ ‘ಪ್ರಾಜೆಕ್ಟ್ ವರ್ಕ್’ಗಳೆಂದರೆ, ಅಂಗಡಿಯಲ್ಲಿ ಸಿಗುವ ಚಿತ್ರಗಳನ್ನು ಪುಸ್ತಕಕ್ಕೆ ಅಂಟಿಸಿಕೊಡೋದು ಎಂದೇ ಕೆಲ ಪ್ರಭೃತಿಗಳು ಭಾವಿಸಿದ್ದಾರೆ!
ಇದರ ಬದಲು, ವಿವಿಧ ಸಸ್ಯಗಳ ಎಲೆಗಳನ್ನು ಅಂಟಿಸಿಕೊಂಡು ತರುವಂತೆ ಮಕ್ಕಳಿಗೆ ತಿಳಿಸಬಹುದಲ್ಲವೇ? ನಿಗದಿಪಡಿಸಿದ ಪದ್ಯ-ಪಾಠಗಳನ್ನು ಓದಿಸುವುದರ ಜತೆಜತೆಗೆ, ವಿವಿಧ ಲೇಖಕರ ಪುಸ್ತಕಗಳನ್ನು, ಐತಿಹಾಸಿಕ-ಪೌರಾಣಿಕ ಕಥೆಗಳನ್ನು ಓದಿ ಅದರ ಬಗ್ಗೆ ಕನಿಷ್ಠಪಕ್ಷ ಒಂದೆರಡು ಪ್ಯಾರಾಗಳಲ್ಲಿಅನಿಸಿಕೆ ಬರೆದುಕೊಂಡು ಬರುವಂತೆ ಮಕ್ಕಳಿಗೆ ಸೂಚಿಸಬಹುದಲ್ಲವೇ? ಅಂಚೆ ಕಚೇರಿ, ಬ್ಯಾಂಕುಗಳಿಗೆ ಭೇಟಿಯಿತ್ತು ಅಲ್ಲಿ ಆದ ಅನುಭವಗಳನ್ನು ಬರೆದು ತರುವಂತೆ ತಿಳಸಬಹುದಲ್ಲವೇ? ಪತ್ರಿಕೆಗಳಲ್ಲಿ ಪ್ರಕಟವಾಗುವ ಮಾಹಿತಿಪೂರ್ಣ ಮತ್ತು ಸ್ವಾರಸ್ಯಕರ ಲೇಖನಗಳನ್ನು ಸಂಗ್ರಹಿಸಲು ಹೇಳಬಹು ದಲ್ಲವೇ? ಇದರಿಂದ ಮಕ್ಕಳ ಜ್ಞಾನದ ಪರಿಽ ವಿಸ್ತಾರಗೊಳ್ಳುವುದರ ಜತೆಗೆ ಶಾಲಾ ಕಲಿಕೆಗೂ ಅದು ಪೂರಕವಾಗುತ್ತದೆ.
ಈ ನಿಟ್ಟಿನಲ್ಲಿ ನಾವೇಕೆ ಯೋಚಿಸುತ್ತಿಲ್ಲ? ಇದನ್ನು ಬಿಟ್ಟು, ಮಕ್ಕಳ ಮನೋವಿಕಾಸಕ್ಕೆ ತಕ್ಕಂತೆ ಮನೋವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರು ನಿರ್ಧರಿಸಿದರಜೆಗಳನ್ನೂ ಪರೀಕ್ಷೆಯ ಅಂಕ, ಫಲಿತಾಂಶದ ಹೆಚ್ಚಳಕ್ಕಾಗಿ ಬಳಸೋದು ಎಷ್ಟು ಸರಿ ಎಂಬುದು ತಿಳಿಯುತ್ತಿಲ್ಲ. ಇನ್ನು ಕೆಲವರು, ತಮ್ಮ ಮಕ್ಕಳಿಗೆ ವಾಡಿಕೆಯ ದಿನಗಳಲ್ಲೂ ಸಣ್ಣಪುಟ್ಟ ಕೆಲಸಕ್ಕೂ ಹಚ್ಚದೇ ತಾವೇ ಅದನ್ನು ಮಾಡಿ, ಅವರನ್ನು ಓದಲು ಬಿಡುತ್ತಾರೆ. ಇದರ ಬಗ್ಗೆ ಕೇಳಿದರೆ, ‘ನಾವು ಕಷ್ಟಪಟ್ಟಿದ್ದೇ ಸಾಕು, ನಮ್ಮ ಮಕ್ಕಳು ಕಷ್ಟ ಅನುಭವಿಸೋದು ಬೇಡ’ ಎನ್ನುತ್ತಾರೆ.
ಗಿಡವೊಂದರ ಬೇರು ಆಳಕ್ಕೆ ಹೋಗೋದು ಅದಕ್ಕೆ ಸಾಕಷ್ಟು ನೀರನ್ನು ಕೊಟ್ಟಾಗಲ್ಲ, ಬದಲಿಗೆ ಅದಕ್ಕೆ ನೀರಿನ ಕೊರತೆಯಾದಾಗ ಮಾತ್ರ ಎಂಬುದನ್ನು ಇಂಥವರು ಅರಿಯಬೇಕಿದೆ. ಅಂದರೆ, ಮಕ್ಕಳಿಗೂ ನಾವು ಕಷ್ಟದ ಅರಿವು ಮೂಡಿಸುವುದರ ಜತೆಗೆ, ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳಲು ಅವರನ್ನು ಬಿಡಬೇಕು. ಇದರಿಂದ ಮಕ್ಕಳಲ್ಲಿ ಸ್ವಯಂಶಿಸ್ತು, ಧೈರ್ಯ ಮೂಡುವುದರ ಜತೆಗೆ ಪೋಷಕರ ಕೆಲಸದಲ್ಲಿ ನೆರವಾಗಬೇಕು ಎಂಬ ಭಾವನೆ ಯೂ ಸುರಿಸುತ್ತದೆ.
ಶಾಲೆಯಿದ್ದಾಗ ಇದಕ್ಕೆ ಸಾಕಷ್ಟು ಸಮಯವಿಲ್ಲದೇ ಹೋದರೆ, ರಜಾ ಅವಧಿಯಲ್ಲಾದರೂ ಮಾಡಿಸಬಹುದಲ್ಲವೇ? ಈ ಮಾರ್ಗದಿಂದ ಪೋಷಕರುತಾವು ಮಾಡುವ ಕೃಷಿ, ಕಮ್ಮಾರಿಕೆ, ನೇಕಾರಿಕೆ, ವ್ಯಾಪಾರ ಇತ್ಯಾದಿ ಕಸುಬುಗಳನ್ನು ಮಕ್ಕಳಿಗೆ ಚಿಕ್ಕಂದಿನಿಂದಲೇ ಕಲಿಸಬಹುದು. ಗಾಂಧೀಜಿಯ ಮೂಲಶಿಕ್ಷಣದ ಪರಿಕಲ್ಪನೆ ಇದೇ ಆಶಯವನ್ನು ಒಳಗೊಂಡಿತ್ತು. ರಜಾ ಅವಽಯಲ್ಲಿ ಕುಟುಂಬದವರೆಲ್ಲಾ ಸೇರಿ ಪ್ರವಾಸಕ್ಕೆ ತೆರಳುವುದರಿಂದ ಬಾಂಧವ್ಯವು ವೃದ್ಧಿಸುವುದರ ಜತೆಗೆ ಮಕ್ಕಳಿಗೂ ಸಂತಸವಾಗುತ್ತದೆ. ಈ ಎಲ್ಲ ವಿಚಾರಗಳನ್ನು ಮನಗಂಡು, ಮಕ್ಕಳಿಗೆ ನಿಗದಿಪಡಿಸಿದ ರಜೆಯ ಮಜಾಅನುಭವಿಸಲು ಬಿಡೋಣ. ರಜೆಯು ಅವರಿಗೆ ಸಜೆಯಾಗದಿರು ವಂತೆ ನೋಡಿಕೊಳ್ಳೋಣ.
(ಲೇಖಕರು ಪ್ರೌಢಶಾಲಾ ಶಿಕ್ಷಕರು)