ಮಾನಸಿಕ ಆರೋಗ್ಯ ಸದೃಢ ಸಮಾಜದ ತಳಹದಿ
ಮನಮಂಥನ
ಡಾ.ದಿಲೀಪ್ ಕುಮಾರ್‌ ಎಸ್.ನವಲೆ
ಉತ್ತಮ ಮಾನಸಿಕ ಆರೋಗ್ಯವು ಮನುಕುಲದ ಒಟ್ಟಾರೆ ಯೋಗಕ್ಷೇಮಕ್ಕೆ ಅತ್ಯಗತ್ಯ. ಆದರೂ ಜಾಗತಿಕವಾಗಿ ಪ್ರತಿ ಎಂಟು ಜನರಲ್ಲಿ ಒಬ್ಬರು ಮಾನಸಿಕ ಅನಾರೋಗ್ಯದ ಸ್ಥಿತಿಯೊಂದಿಗೆ ಜೀವಿಸುತ್ತಿದ್ದಾರೆ. ಇದು ಅವರ ದೈಹಿಕ ಆರೋಗ್ಯ, ಯೋಗಕ್ಷೇಮ, ಇತರರೊಂದಿಗೆ ಅವರು ಸಾಧಿಸುವ ಸಂಪರ್ಕ ಮತ್ತು ಜೀವನೋಪಾಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಬಹುದು.ಸದೃಢ ದೇಹದಲ್ಲಿ ಸದೃಢವಾದ ಮನಸ್ಸು ಇರುತ್ತದೆ ಎನ್ನುತ್ತಾರೆ ಬಲ್ಲವರು. ಈ ಸದೃಢ ಮನಸ್ಸು ಗೌರವಯುತ ಜೀವನಕ್ಕೆ ದಾರಿದೀಪವಾಗುತ್ತದೆ.‘ಮಾನವನ ಮಾನಸಿಕ ಆರೋಗ್ಯದ ರಕ್ಷಣೆಯು ವೈದ್ಯಕೀಯ ಲೋಕದಲ್ಲಿ ಅತಿಪವಿತ್ರವಾದ ಸೇವಾವಲಯವಾಗಿದೆ’ ಎಂದಿದ್ದಾರೆ ಡಚ್  ಮಾನವತಾ ವಾದಿ ಗ್ರೋಟಿಯಸ್. ಈ ವೈಜ್ಞಾನಿಕ ವಾಸ್ತವಿಕತೆಯ ಹಿನ್ನೆಲೆಯಲ್ಲಿ, ವಿಶ್ವದ ಜನ ಜೀವನದಲ್ಲಿ ಕಂಡುಬರುತ್ತಿರುವ ಏರುಪೇರುಗಳನ್ನು ಗಮನಿಸಿದರೆ, ಮಾನಸಿಕ ಆರೋಗ್ಯದ ಕುರಿತಾದ ಚಿಂತನ- ಮಂಥನ, ಸಂಶೋಧನೆ ಹಾಗೂ ಮಾನಸಿಕ ಆರೋಗ್ಯದ ಕುರಿತಾಗಿ ಜನಜಾಗೃತಿ ಮೂಡಿಸುವುದು ಅತ್ಯವಶ್ಯಕ ಎನಿಸುತ್ತದೆ. ಈ ಕಾರಣದಿಂದಲೇ ಪ್ರತಿ ವರ್ಷದ ಅಕ್ಟೋಬರ್ ೧೦ರಂದು ‘ವಿಶ್ವ ಮಾನಸಿಕ ಆರೋಗ್ಯ ದಿನ’ವನ್ನು ಆಚರಿಸಲಾಗುತ್ತದೆ.
ಹಾಗಾದರೆ, ಮಾನಸಿಕ ಆರೋಗ್ಯ ಎಂದರೇನು? ಅದು ಕೆಡುವುದಕ್ಕೆ ಕಾರಣವೇನು? ಅದರ ರಕ್ಷಣೆ ಮಾಡುವುದು ಹೇಗೆ? ಹೀಗೆ ಹಲವು ಪ್ರಶ್ನೆಗಳು ಮೂಡುವುದು ಸಹಜ. ಸ್ಥೂಲವಾಗಿ ಹೇಳುವುದಾದರೆ, ವ್ಯಕ್ತಿಯಲ್ಲಿ ಕಂಡುಬರುವ ಒಂದು ಹಿತಕರ ಮನಸ್ಥಿತಿಯೇ ಮಾನಸಿಕ ಆರೋಗ್ಯ. ಕಾಯಿಲೆ ಅಥವಾ ನಿಶ್ಶಕ್ತಿ ಇಲ್ಲವೆಂದ ಮಾತ್ರಕ್ಕೆ ವ್ಯಕ್ತಿಯೊಬ್ಬ ನನ್ನು ‘ಆರೋಗ್ಯವಂತ’ ಎನ್ನಲಾಗದು. ಶಾರೀರಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಮತ್ತು ಅಧ್ಯಾತ್ಮಿಕವಾಗಿ ಸುಸ್ಥಿತಿಯಿಂದ ಇರುವುದೇ ‘ಆರೋಗ್ಯ’ ಎಂದು ಕರೆಸಿಕೊಳ್ಳುತ್ತದೆ.
ಈ ಪೈಕಿ ಮಾನಸಿಕ ಆರೋಗ್ಯವು ಕೆಡುವುದಕ್ಕೆ ಅನೇಕ ಕಾರಣಗಳಿವೆ. ಅತಿರೇಕದ ಆಸೆಗಳು, ಬೆವರು ಸುರಿಸದೆಯೇ ಗಳಿಸುವ ಹಣ, ತತ್ತ್ವ-ಸಿದ್ಧಾಂತ ಗಳಿಲ್ಲದ ರಾಜಕೀಯ, ಪ್ರಜ್ಞಾವಂತಿಕೆಯಿಲ್ಲದ ವೈಭವ, ಕಳಂಕಗೊಂಡ ಬುದ್ಧಿ ಮತ್ತು ಚಾರಿತ್ರ್ಯ, ಸದಾಚಾರಗಳಿಂದ ದೂರವಾದ ವ್ಯಾಪಾರ-ವ್ಯವಹಾರ, ಮಾನವೀಯತೆಗೆ ಅಡ್ಡಿಯಾಗುವ ವಿಜ್ಞಾನ ಹೀಗೆ ಹತ್ತು ಹಲವು ಕಾರಣಗಳಿಂದಾಗಿ ವ್ಯಕ್ತಿಯು ಮಾನಸಿಕವಾಗಿ ಪ್ರಯಾಸ ಪಡುವಂತಾ ಗುತ್ತದೆ. ನಮ್ಮ ಸಮಾಜದಲ್ಲಿ ವ್ಯಾಪಿಸಿರುವ ಗೊಂದಲಮಯ ವಾತಾವರಣಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಹೊಂದಿಕೊಂಡು ತಾನು ಹೇಗಾದರೂ ಬದುಕಿರಬೇಕು ಎಂಬ ಹಂಬಲದಿಂದ ವ್ಯಕ್ತಿಯು ತನ್ನ ದೈನಂದಿನ ವ್ಯವಹಾರಗಳಲ್ಲಿ ಕಪಟತನ ತೋರುತ್ತಿರುವುದು ಇದಕ್ಕೆ ಸ್ಪಷ್ಟ ನಿದರ್ಶನ.
ಪರಿಣಾಮವಾಗಿ ವ್ಯಕ್ತಿಯ ಆಲೋಚನೆಗಳು, ಭಾವನೆಗಳು ಮತ್ತು ನಡೆ-ನುಡಿಗಳಲ್ಲಿ ಇಂದು ‘ದ್ವಿಮುಖ ನೀತಿ’ ತೂರಿಕೊಳ್ಳುತ್ತಿದೆ. ಅಂದರೆ, ಹೊರಗೆ ನಿಯಮಬದ್ಧತೆ-ಒಳಗೆ ಅಸ್ತವ್ಯಸ್ತತೆ, ಹೊರಗೆ ಪ್ರೇಮ ಪ್ರದರ್ಶನ-ಒಳಗೆ ಕಾಮಪೀಡೆ, ಹೊರಗೆ ಆತ್ಮಾನಂದ-ಒಳಗೆ ಅಗ್ನಿಕುಂಡ, ದೇಹಶೃಂಗಾರ-ಚಿತ್ತ ವಿಕಾರ, ಸ್ವಾತಂತ್ರ್ಯದ ಭರವಸೆ-ಪಾರತಂತ್ರದ ಸಿದ್ಧತೆ, ಸಮಾನತೆಯ ಘೋಷಣೆ-ದೀನದಲಿತರ ಶೋಷಣೆ ಹೀಗೆ ವ್ಯಕ್ತಿಯ ಎರಡು ಮುಖಗಳ ಕಪ್ಪು ಛಾಯೆಯಡಿ ಮಾನವೀಯತೆ ಬಸವಳಿಯುತ್ತಿದೆ. ಈ ಎಲ್ಲಾ ಕಾರಣಗಳಿಂದ ಮಾನಸಿಕ ಕಾಯಿಲೆಗಳು ಮನುಕುಲವನ್ನು ಅಪ್ಪಳಿಸುತ್ತಿವೆ.
ಹೀಗೆ ಜನರನ್ನು ಕಾಡುವ ಮಾನಸಿಕ ಕಾಯಿಲೆಗಳಲ್ಲಿ ಖಿನ್ನತೆ, ಆತಂಕ, ಅತಿರೇಕದ ಭಯ, ಉನ್ಮಾದ, ಗೀಳು,ಸ್ಕಿಜೋಫೆನಿಯಾ, ಇಳಿವಯಸ್ಸಿನಲ್ಲಿ ಮರೆವು, ವ್ಯಕ್ತಿತ್ವ ದೋಷ ಮೊದಲಾದವು ಸೇರಿವೆ. ಇವನ್ನೆಲ್ಲ ಕಂಡ ಕೆಲವರು, ಇದು ಮಾಟ-ಮಂತ್ರ-ತಂತ್ರಗಳ ಫಲ, ದೆವ್ವ-ಭೂತ- ಪಿಶಾಚಿಗಳ ಕಾಟ ಎಂದೆಲ್ಲ ಕಾರಣಗಳನ್ನು ನೀಡುವುದುಂಟು; ಮಾನಸಿಕ ಆರೋಗ್ಯ ಚಿಕಿತ್ಸೆಯ ಕುರಿತು ಸರಿಯಾದ ತಿಳಿವಳಿಕೆ ಇಲ್ಲದಿರುವುದು ಇದಕ್ಕೆ ಪ್ರಮುಖ ಕಾರಣ. ಮೇಲೆ ಉಲ್ಲೇಖಿಸಿರುವ ಎಲ್ಲಾ ಕಾಯಿಲೆಗಳಿಗೂ ಚಿಕಿತ್ಸೆಗಳುಂಟು. ಅಂದರೆ, ಔಷಧಿಗಳು, ಮನೋಚಿಕಿತ್ಸೆ, ನಡವಳಿಕೆ ಚಿಕಿತ್ಸೆ, ಮನೋವೈಜ್ಞಾನಿಕ ಆಪ್ತಸಲಹೆ- ಸಮಾಧಾನ, ಯೋಗ, ಧ್ಯಾನ ಇವೇ ಮೊದಲಾದ ಹತ್ತು ಹಲವು ಮಾರ್ಗೋಪಾಯಗಳಿವೆ.
ನಾವು-ನೀವು ಮಾನಸಿಕ ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳದಿದ್ದರೆ ಸಮಾಜವು ರೋಗಮುಕ್ತವಾಗಲು ಸಾಧ್ಯವೇ? ಮಾನವರ ಸಮಸ್ಯೆಗೆ ಕಾರಣ ವೇನು ಎಂಬುದನ್ನು ಸುಮಾರು ೨೫೦೦ ವರ್ಷಗಳ ಹಿಂದೆಯೇ ಕಂಡುಕೊಂಡ ವಿಶ್ವದ ಪ್ರಥಮ ಮನೋವಿಜ್ಞಾನಿ ಗೌತಮ ಬುದ್ಧ. ಮನುಷ್ಯನ ದೇಹ ಮತ್ತು ಮನಸ್ಸಿನ ನಡುವಿನ ಸಂಬಂಧಗಳನ್ನು ತನ್ನದೇ ಆದ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿದ ಈತ ‘ಆಸೆಯೇ ದುಃಖಕ್ಕೆ ಮೂಲ’ ಎಂದ. ಅತಿಯಾಗಿ ಆಸೆಪಡುವುದರಿಂದ ದುಃಖ ಉಂಟಾಗಿ ಮಾನಸಿಕ ಆರೋಗ್ಯದಲ್ಲಿ ಅಸಮತೋಲನ ಕಂಡುಬರುತ್ತದೆ. ಇದನ್ನು ಸಮಸ್ಥಿತಿಯಲ್ಲಿಡಲು ಪಂಚಶೀಲ ಮತ್ತು ಅಷ್ಟಾಂಗ ಮಾರ್ಗವನ್ನು ಬೋಧಿಸಿದ ಬುದ್ಧ, ಪ್ರಜ್ಞೆ, ಶೀಲ ಮತ್ತು ಕರುಣೆಯ ಮೂಲಕ ಸ್ವಸ್ಥ ಸಮಾಜಕ್ಕೆ ಅಡಿಪಾಯ ಹಾಕಿದ.
ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಜಗತ್ತಿನ ವಿವಿಧ ನೆಲೆಗಟ್ಟಿನಲ್ಲಿ ಆಗಿರುವ ಸಂಶೋಧನೆಗಳ ಪ್ರಕಾರ, ನಮ್ಮ ದೇಶದಲ್ಲಿ ಶೇ.೧೦ರಷ್ಟು ಮಂದಿ ಅಲ್ಪಪ್ರಮಾಣದ ಮಾನಸಿಕ ಕಾಯಿಲೆಗಳಿಂದ (ಮನೋಬೇನೆ), ಶೇ.೧ರಷ್ಟು ಮಂದಿ ತೀವ್ರಸ್ವರೂಪದ ಮನೋರೋಗಗಳಿಂದ, ಶೇ.೦.೫ರಷ್ಟು ಮಂದಿ ಅಲ್ಪಪ್ರಮಾಣದ ಬುದ್ಧಿಮಾಂದ್ಯತೆಯಿಂದ, ಶೇ.೪೦ ರಷ್ಟು ಮಂದಿ ಮಾನಸಿಕ ಹಾಗೂ ಭಾವನಾತ್ಮಕ ಅಸಮತೋಲನದಿಂದ ಬಳಲುತ್ತಿದ್ದಾರೆ. ಪ್ರತಿ ೪೦ ಸೆಕೆಂಡ್‌ಗೆ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ವರದಿಯೊಂದು; ಜಾಗತಿಕವಾಗಿ ಮಾನಸಿಕ ಅನಾರೋಗ್ಯದ ಸಮಸ್ಯೆ ಅದೆಷ್ಟು ತೀವ್ರ ವಾಗಿದೆ ಎಂಬುದಕ್ಕೆ ಇದು ಕೈಗನ್ನಡಿಯಾಗಬಲ್ಲದು.
ಇಂಥ ಸಮಸ್ಯೆಗಳ ಮೂಲ ಮಾನವರಲ್ಲಿ ಕೆನೆಗಟ್ಟಿರುವ ಅತಿ ವ್ಯಾಮೋಹ. ಆಸ್ತಿ, ಅಂತಸ್ತು, ಹೆಣ್ಣು, ಹಣ, ಸ್ಥಾನಮಾನ ಇತ್ಯಾದಿಗಳಿಗೆ ಸಂಬಂಧಿಸಿದ ಮೋಹಗಳಿಗೆ ಸೋತು ಸುಣ್ಣವಾಗಿ, ಬುದ್ಧಿಯನ್ನು ಮನಸ್ಸಿನ ಕೈಯಲ್ಲಿ ಕೊಟ್ಟು ಕಂಗಾಲಾಗಿ, ಶಾಂತಿ, ಸಂಯಮ, ಶಿಸ್ತು, ಪ್ರೀತಿ, ನೆಮ್ಮದಿಗಳಿಗೆ ಸಂಚಕಾರ ತಂದುಕೊಂಡು ಜನರು ದೈಹಿಕ ಮತ್ತು ಮಾನಸಿಕ ಆರೋಗ್ಯಗಳನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಇದರ ಜತೆಗೆ ಆತುರ, ಕಾತರ, ದುಗುಡ, ದ್ವಂದ್ವ, ದುಃಖ-ದುಮ್ಮಾನಗಳೂ ಸೇರಿಕೊಂಡು ಸಾಮಾನ್ಯ ಮನುಷ್ಯನು ಅಪಸಾಮಾನ್ಯ ವರ್ತನೆಗಳನ್ನು ಹೊಮ್ಮಿಸುತ್ತಿದ್ದಾನೆ.
ಈ ಅಪಸವ್ಯದ ಕೂಪದಿಂದ ಹೊರಬರುವಂತಾಗಲು ಮತ್ತು ಆ ನಿಟ್ಟಿನಲ್ಲಿ ಅರಿವು ತುಂಬಲು ‘ವಿಶ್ವ ಮಾನಸಿಕ ಆರೋಗ್ಯ ದಿನ’ವನ್ನು ಪ್ರತಿವರ್ಷದ ಅಕ್ಟೋಬರ್ ೧೦ರಂದು ಆಚರಿಸಿಕೊಂಡು ಬರಲಾಗುತ್ತಿದೆ. ಇದು ಮಾನಸಿಕ ಆರೋಗ್ಯದ ಕುರಿತಾದ ಜ್ಞಾನದ ಸುಧಾರಣೆಗೆ ಮತ್ತು ಜಾಗೃತಿ ಮೂಡಿಸುವು ದಕ್ಕೆ ಮೀಸಲಾದ ದಿನ. ಮಾನಸಿಕ ಆರೋಗ್ಯವು ಸಾರ್ವತ್ರಿಕ ಮಾನವ ಹಕ್ಕು ಎಂಬ ಪರಿಕಲ್ಪನೆಯಡಿ ಒಂದಾಗಲು ಈ ಸಂದರ್ಭವು ಒಂದು ಉತ್ತಮಅವಕಾಶವಾಗಿದೆ. ಏಕೆಂದರೆ, ಮಾನಸಿಕ ಆರೋಗ್ಯವು ಎಲ್ಲಾ ಜನರ ಮೂಲಭೂತ ಹಕ್ಕು. ಪ್ರತಿಯೊಬ್ಬರೂ ಎಲ್ಲೇ ಹೇಗೇ ಇದ್ದರೂ ಮಾನಸಿಕ ಆರೋ ಗ್ಯದ ಅತ್ಯುನ್ನತ ಮಾನದಂಡದ ಹಕ್ಕನ್ನು ಹೊಂದಿದ್ದಾರೆ.
ಇದು ಮಾನಸಿಕ ಅನಾರೋಗ್ಯದ ಅಪಾಯದಿಂದ ಜನರನ್ನು ರಕ್ಷಿಸುವ ಹಕ್ಕು. ಇದು ಎಲ್ಲರಿಗೂ ಲಭ್ಯವಿರುವ, ಸ್ವೀಕಾರಾರ್ಹವಾದ ಮತ್ತು ಗುಣಮಟ್ಟದಆರೈಕೆಯ ಹಕ್ಕನ್ನು ಒಳಗೊಂಡಿದೆ. ಉತ್ತಮ ಮಾನಸಿಕ ಆರೋಗ್ಯವು ಮನುಕುಲದ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಅತ್ಯಗತ್ಯ. ಆದರೂಜಾಗತಿಕವಾಗಿ ಪ್ರತಿ ಎಂಟು ಜನರಲ್ಲಿ ಒಬ್ಬರು ಮಾನಸಿಕ ಅನಾರೋಗ್ಯದ ಸ್ಥಿತಿಯೊಂದಿಗೆ ಜೀವಿಸುತ್ತಿದ್ದಾರೆ. ಇದು ಅವರ ದೈಹಿಕ ಆರೋಗ್ಯ, ಯೋಗ ಕ್ಷೇಮ, ಇತರರೊಂದಿಗೆ ಅವರು ಸಾಧಿಸುವ ಸಂಪರ್ಕ ಮತ್ತು ಜೀವನೋಪಾಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಬಹುದು. ಮಾನಸಿಕಅನಾರೋಗ್ಯದ ಸ್ಥಿತಿಯನ್ನು ಹೊಂದಿರುವುದು, ವ್ಯಕ್ತಿಯ ಮಾನವ ಹಕ್ಕುಗಳನ್ನು ಕಸಿದುಕೊಳ್ಳಲು ಮತ್ತು ತಮ್ಮ ಆರೋಗ್ಯದ ಬಗೆಗಿನ ನಿರ್ಧಾರಗಳಿಂದ ಅವರನ್ನು ಹೊರಗಿಡಲು ಕಾರಣವಾಗಬಾರದು.
ಆದರೂ ವಿಶ್ವಾದ್ಯಂತ, ಮಾನಸಿಕ ಅನಾರೋಗ್ಯ ಸ್ಥಿತಿಯ ಬಲಿಪಶುಗಳಾಗಿರುವ ಜನರು ವ್ಯಾಪಕ ಶ್ರೇಣಿಯ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಅನುಭವಿಸುತ್ತಿದ್ದಾರೆ. ಅನೇಕರು ಸಮುದಾಯ ಜೀವನದಿಂದ ಹೊರಗಿಡಲ್ಪಟ್ಟಿದ್ದಾರೆ ಮತ್ತು ತಾರತಮ್ಯಕ್ಕೆ ಒಳಗಾಗಿದ್ದಾರೆ. ಇದು ಸರ್ವಥಾಸ್ವೀಕಾರಾರ್ಹವಲ್ಲದ ಮತ್ತು ತರವಲ್ಲದ ಬೆಳವಣಿಗೆ. ಆದ್ದರಿಂದ, ವ್ಯಕ್ತಿಯೋರ್ವನ ಮಾನಸಿಕ ಆರೋಗ್ಯವು ಮೌಲ್ಯಯುತವಾಗಿದೆ, ಅದನ್ನು ಉತ್ತೇಜಿಸಿ ರಕ್ಷಿಸಲಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಸಹಭಾಗಿ ಸಂಸ್ಥೆಗಳೊಂದಿಗೆ ನಿಗದಿತ ಕಾರ್ಯಭಾರ ಗಳನ್ನು ಮುಂದುವರಿಸಿದೆ. ಮಾತ್ರವಲ್ಲ, ಪ್ರತಿಯೊಬ್ಬರೂ ತಮ್ಮ ಮಾನವ ಹಕ್ಕುಗಳನ್ನು ಚಲಾಯಿಸಲು ಮತ್ತು ತಮಗೆ ಅಗತ್ಯವಿರುವ ಗುಣಮಟ್ಟದ ಮಾನಸಿಕ ಆರೋಗ್ಯದ ಲಭ್ಯತೆಗೆ ಪ್ರವೇಶಾವಕಾಶ ಪಡೆಯುವಂತಾಗಲು ಅದು ಕೆಲವಷ್ಟು ತುರ್ತು ಕ್ರಮಗಳನ್ನು ಕೈಗೊಂಡಿದೆ.
ಈ ಸಂದರ್ಭದಲ್ಲಿ ಒಂದಷ್ಟು ಮಹತ್ವದ ಅಂಶಗಳನ್ನು ನಮ್ಮ ಜನ ಮನವರಿಕೆ ಮಾಡಿಕೊಳ್ಳಬೇಕಾದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ. ಅವೆಂದರೆ, ಉತ್ತಮ ಮಾನಸಿಕ ಆರೋಗ್ಯವು ವ್ಯಕ್ತಿಗತ ಮತ್ತು ಸಾಮಾಜಿಕ ಆರೋಗ್ಯ ಹಾಗೂ ಯೋಗಕ್ಷೇಮದ ಅವಿಭಾಜ್ಯ ಅಂಗವಾಗಿದೆ. ವ್ಯಕ್ತಿಯೊಬ್ಬನ ಮಾನಸಿಕ ಆರೋಗ್ಯಕ್ಕೆ ಧಕ್ಕೆ ಒದಗಿದಾಗ, ಅದು ಒಟ್ಟಾರೆ ಸಮಾಜಕ್ಕೇ ಒದಗಬಲ್ಲ ಸಂಭಾವ್ಯ ಅಪಾಯ ಎಂದು ಗಂಭೀರವಾಗಿ ಪರಿಗಣಿಸಬೇಕು. ಗುಣಮಟ್ಟದಸಮುದಾಯ ಮಾನಸಿಕ ಆರೋಗ್ಯ ಸೇವೆಗಳು ಮತ್ತು ಬೆಂಬಲಗಳು, ನಮ್ಮೆಲ್ಲರ ಉತ್ತಮ ಭವಿಷ್ಯಕ್ಕಾಗಿ ನಿರ್ಣಾಯಕವಾಗಿವೆ. ಮಾನಸಿಕ ಆರೋಗ್ಯವನ್ನು ಸುತ್ತುವರಿಯುವ ಕಳಂಕ ಮತ್ತು ತಾರತಮ್ಯವನ್ನು ನಾವು ಪ್ರಶ್ನಿಸಬೇಕು.
ಮಾನಸಿಕ ಆರೋಗ್ಯವನ್ನು ಮನುಷ್ಯರ ಸಾರ್ವತ್ರಿಕ ಹಕ್ಕು ಎಂದು ಪರಿಗಣಿಸಲಾಗಿರವುದರಿಂದ, ಜನರು ತಮ್ಮ ಈ ಹಕ್ಕಿನ ಸಾಧನೆಗಾಗಿ ಎದ್ದು ನಿಲ್ಲಲು ಅದು ಅಧಿಕಾರ ನೀಡುತ್ತದೆ. ನಮಗೆಲ್ಲರಿಗೂ ಸ್ವಾವಲಂಬಿಯಾಗಿ ಬದುಕುವ ಮತ್ತು ಸಮುದಾಯಕ್ಕೆ ಸೇರುವ ಹಕ್ಕಿದೆ. ನಿಮ್ಮ ಮನಸ್ಸನ್ನು ನೀವು ಅರಿತಿರುವಂತೆಯೇ, ನಿಮ್ಮ ಹಕ್ಕುಗಳನ್ನೂ ತಿಳಿದುಕೊಳ್ಳಬೇಕಾದ್ದು ಅಗತ್ಯ. ಪ್ರತಿಯೊಬ್ಬ ವ್ಯಕ್ತಿಯ ಮನಸ್ಸೂ ಅದ್ಭುತ, ಸಂಕೀರ್ಣ ಮತ್ತು ವಿಭಿನ್ನ ವಾಗಿದೆ. ಆದರೆ ನಮಗಿರುವ ಹಕ್ಕುಗಳು ಒಂದೇ ಎಂಬುದನ್ನು ಮರೆಯದಿರೋಣ.
(ಲೇಖಕರು ಮನೋವಿಜ್ಞಾನಿ)