ಹೋರಾಟದ ದ್ಯೋತಕ ಈ ರಥಯಾತ್ರೆ
ಧರ್ಮಕುಂಜ
ಆದರ್ಶ್‌ ಶೆಟ್ಟಿ, ಉಪ್ಪಿನಂಗಡಿ
ಸಮಾಜಕ್ಕೆ ಅನ್ಯರಿಂದ ಆಗಿರುವ ದೌರ್ಜನ್ಯವನ್ನು ಅಳಿಸುವುದು, ಹಿಂದೂ ಧರ್ಮದ ಅಡಿಪಾಯಗಳಾದ ಶ್ರದ್ಧಾಕೇಂದ್ರಗಳನ್ನು ಉಳಿಸಿ ಬೆಳೆಸಲುಉತ್ತೇಜಿಸುವುದು, ಸಮಾಜದಲ್ಲಿ ಸಾಮರಸ್ಯ ಭಾವನೆ ಮೂಡಿಸುವುದು ‘ಶೌರ್ಯ ಜಾಗರಣ ರಥಯಾತ್ರೆ’ಯ ಸಂಕಲ್ಪ.
ವಿಶ್ವ ಹಿಂದೂ ಪರಿಷತ್ (ವಿಹಿಂಪ), ಬಜರಂಗದಳ ಇವು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಜತೆಗೆ ಕರುಳುಬಳ್ಳಿ ಸಂಬಂಧ ಹೊಂದಿರುವ ಸಂಘಟನೆಗಳು. ದೇಶದ ಶ್ರದ್ಧಾಭಕ್ತಿ ಕೇಂದ್ರಗಳ ಅಳಿವು-ಉಳಿವಿನ ಪ್ರಶ್ನೆ, ಮತಾಂತರ,ಭಯೋತ್ಪಾದನೆ, ಗೋಹತ್ಯೆ, ಹಿಂದೂ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಹೀಗೆ ನಾನಾ ಸವಾಲು ಗಳನ್ನು ಮೆಟ್ಟಿನಿಂತ ಸಂಘಟನೆಗಳಿವು. ‘ವಿಹಿಂಪ’ದ ಶಕ್ತಿ ಏನೆಂಬುದು ಅಯೋಧ್ಯೆಯ ರಾಮಮಂದಿರದ ಆಂದೋಲನದ ಮೂಲಕ ಇಡೀ ಜಗತ್ತಿಗೆ ಗೊತ್ತಾಯಿತು.
ಜತೆಗೆ, ಜಮ್ಮು-ಕಾಶ್ಮೀರದ ಅಮರನಾಥ ದೇವಾಲಯ, ರಾಮಸೇತು ಉಳಿಸುವಿಕೆ, ಆಂಧ್ರಪ್ರದೇಶದ ತಿರುಪತಿ ಸಂರಕ್ಷಣೆ, ಕರ್ನಾಟಕದ ದತ್ತಪೀಠ ಇವುಗಳಿಗೆ ಸಂಬಂಧಿಸಿದ ಪರಿವಾರ ಸಂಘಟನೆಯ ಹೋರಾಟ/ಆಂದೋಲನ ಗಳು ಜನರ ಮನದಲ್ಲಿನ್ನೂ ಹಸಿರಾಗಿವೆ. ೧೯೬೪ರಲ್ಲಿ ಮುಂಬೈನ ಸಾಂದೀಪನಿ ಆಶ್ರಮದಲ್ಲಿ, ಶ್ರೀಕೃಷ್ಣ ಜನ್ಮಾಷ್ಟಮಿಯಂದು ಸ್ಥಾಪನೆಗೊಂಡ ‘ವಿಹಿಂಪ’, ಧರ್ಮರಕ್ಷಣೆಗೆ ಕಟಿಬದ್ಧವಾಗಿದೆ.
ಮಾತ್ರವಲ್ಲ, ಧರ್ಮಕಾರ್ಯಗಳ ಮೇಲೆ ಆಕ್ರಮಣಗಳಾದಾಗ ಈ ಸಂಘಟನೆಯವರು ಯೋಧರಂತೆ ಶೌರ್ಯ ಮೆರೆದ ನಿದರ್ಶನಗಳಿವೆ. ಸ್ಥಾಪನೆಯಾಗಿ ೬೦ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ, ಹಿಂದೂಧರ್ಮದ ವೈಭವಯುತ ಚರಿತ್ರೆ, ಪರಾಕ್ರಮದ ಗತವೈಭವಗಳನ್ನು ಸಮಾಜಕ್ಕೆ ನೆನಪು ಮಾಡಿಕೊಡುವ ಉದ್ದೇಶದಿಂದ, ತನ್ಮೂಲಕ ಬಲಿಷ್ಠ ಹಿಂದೂ ಸಮಾಜ ಮತ್ತು ರಾಷ್ಟ್ರವನ್ನು ನಿರ್ಮಿಸುವ ಗುರಿಯಿಟ್ಟುಕೊಂಡು ‘ಶೌರ್ಯ ಜಾಗರಣ ರಥಯಾತ್ರೆ’ಯನ್ನು ಹಮ್ಮಿಕೊಳ್ಳ ಲಾಗಿತ್ತು. ಈ ವರ್ಷದ ಸೆಪ್ಟೆಂಬರ್ ೨೫ರಂದು ಚಿತ್ರದುರ್ಗದಿಂದ ಶುರುವಾದ ಈ ಯಾತ್ರೆ ಇಂದು (ಅ.೧೦) ಕರಾವಳಿಯ ಉಡುಪಿಯಲ್ಲಿ ಸಮಾಪನ ಗೊಳ್ಳಲಿದೆ.
ಇಂದು ಈ ಪರಿವಾರ ಸಂಘಟನೆಯಲ್ಲಿ, ಒಬ್ಬ ಸಾಮಾನ್ಯ ಕೂಲಿಕಾರ್ಮಿಕನಿಂದ ಹಿಡಿದು ಆಟೋ-ಬಸ್ ಚಾಲಕರು, ಅಸಂಘಟಿತ ಕಾರ್ಮಿಕರು ಹೀಗೆ ಸಮಾಜದ ವಿವಿಧ ಸ್ತರಗಳಲ್ಲಿ ತಮ್ಮದೇ ಆದ ವೃತ್ತಿಬದುಕನ್ನು ಅಪ್ಪಿರುವ ಗುಂಪುಗಳೇ ಅತಿಹೆಚ್ಚಿನ ಪ್ರಮಾಣದಲ್ಲಿ ಕಾಣಸಿಗುತ್ತವೆ. ಹೀಗೆ ಪರಿವಾರ ವ್ಯವಸ್ಥೆಯ ಮಧ್ಯೆ ಕಾರ್ಯನಿರ್ವಹಿಸುವ ಎಲ್ಲಾ ಸಂಘಟನೆಗಳ ಉದ್ದೇಶವು, ಆರೆಸ್ಸೆಸ್‌ನ ‘ಪರಂ ವೈಭವಂ ನೇತು ಮೇ ತತ್ತ್ವಸ್ವರಾಷ್ಟ್ರಂ’ ಎಂಬುದೇ ಆಗಿದೆ. ವಿಶ್ವಗುರು, ಜಗದ್ವಂದ್ಯ ಭಾರತದ ಪರಿಕಲ್ಪನೆಯ ಜತೆಜತೆಗೆ ಈ ರಾಷ್ಟ್ರವನ್ನು ಪರಮ ವೈಭವದ ಕಡೆಗೆ ಕೊಂಡೊಯ್ಯುವುದು ಇದರ ಜೀವಾಳ. ತಮ್ಮ ದುಡಿಮೆಯ ಒಂದಂಶವನ್ನು ಸಮಾಜಕ್ಕಾಗಿ ಮೀಸಲಿಟ್ಟು ಅದರ ಕಟ್ಟಕಡೆಯ ವ್ಯಕ್ತಿಯ ನೋವಿಗೆ ಮಿಡಿಯುವ ಮತ್ತು ದೇಶ-ಧರ್ಮದ ವಿಚಾರಬಂದಾಗ ತ್ಯಾಗಮಯ ಬದುಕು ನಡೆಸಿದ ಸಾವಿರಾರು ಕಾರ್ಯಕರ್ತರ ಪರಾಕ್ರಮವನ್ನು ನೆನಪಿಸುವ ಒಂದು ಕಾರ್ಯಕ್ರಮವೇ ‘ಶೌರ್ಯ ಜಾಗರಣ ರಥಯಾತ್ರೆ’.
ಸಮಾಜಕ್ಕೆ ಅನ್ಯರಿಂದ ಆಗಿರುವ ದಬ್ಬಾಳಿಕೆ, ದೌರ್ಜನ್ಯ ಮತ್ತು ಹಾನಿಯನ್ನು ಅಳಿಸಿ, ಗೌರವಯುತ ಸಮಾಜದ ನಿರ್ಮಾಣಕ್ಕೆ ಪ್ರೇರೇಪಣೆ ನೀಡುವುದು, ಹಿಂದೂ ಧರ್ಮದ ಅಡಿಪಾಯಗಳಾದ ಗೋವುಗಳನ್ನು ಮತ್ತು ಶ್ರದ್ಧಾಭಕ್ತಿಯ ಕೇಂದ್ರಗಳನ್ನು ಉಳಿಸಿ ಬೆಳೆಸಲು ಉತ್ತೇಜಿಸುವುದು, ಸಮಾಜದಲ್ಲಿ ಪರಸ್ಪರ ಸಾಮರಸ್ಯ ಭಾವನೆ ಮೂಡಿಸಿ ಒಂದಿಡೀ ವಿಶ್ವಕ್ಕೆ ಶುಭಹಾರೈಸುವುದು ಈ ‘ಶೌರ್ಯ ಜಾಗರಣ ರಥಯಾತ್ರೆ’ಯ ಸಂಕಲ್ಪವಾಗಿದೆ.
ಮಾತ್ರವಲ್ಲ, ಪಾಶ್ಚಾತ್ಯರ ಅಂಧಾನುಕರಣೆಯಿಂದ ಯುವಪೀಳಿಗೆಯನ್ನು ಹೊರ ತಂದು ನಮ್ಮ ಹೆಮ್ಮೆಯ ಧರ್ಮಾಚರಣೆಗೆ ಪ್ರೇರಣೆ ನೀಡುವ, ವ್ಯಸನಗಳಿಂದ ಅವರನ್ನು ಮುಕ್ತಗೊಳಿಸುವ, ನಮ್ಮ ಹಿರಿಯರು ಮಾಡಿರುವ ತ್ಯಾಗ-ಬಲಿದಾನಗಳ ಕುರಿತಾಗಿ ಅವರಲ್ಲಿ ಅರಿವು ಮೂಡಿಸುವ ಜತೆಗೆ ದೇಶಕ್ಕಾಗಿ ಬದುಕುವಂತೆ ಅವರನ್ನು ಕಟಿಬದ್ಧರನ್ನಾಗಿಸುವ ಸದುದ್ದೇಶವನ್ನೂ ಈ ‘ಶೌರ್ಯ ಜಾಗರಣ ರಥಯಾತ್ರೆ’ ಹೊಂದಿದೆ.
ದೇಶದಲ್ಲಿ ಸಂಭವಿಸಿದ ಕ್ಷಾಮ, ಪ್ರವಾಹದಂಥ ಪ್ರಕೃತಿ ವಿಕೋಪಗಳು, ಭೀಕರ ದುರಂತಗಳ ಸಂದರ್ಭದಲ್ಲಿ ಜೀವದ ಹಂಗು ತೊರೆದು ಜನರಿಗೆ ಸಹಾಯ ಹಸ್ತ ಚಾಚಿದ ಹೆಗ್ಗಳಿಕೆ ‘ವಿಹಿಂಪ’-ಬಜರಂಗದಳ ಸಂಘಟನೆಗಳಿಗಿದೆ.ಅದರಲ್ಲೂ ನಿರ್ದಿಷ್ಟವಾಗಿ, ಜಗತ್ತನ್ನೇ ಬಾಧಿಸಿದ ಕೋವಿಡ್ ನಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಅಗತ್ಯ ಆಹಾರ ಕಿಟ್ ವಿತರಣೆ, ೨೦,೦೦೦ಕ್ಕೂ ಹೆಚ್ಚು ಯುನಿಟ್‌ನಷ್ಟು ರಕ್ತದಾನ, ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟೈಸೇಷನ್ ಕಾರ್ಯಗಳನ್ನು ನಡೆಸಲಾಗಿದೆ. ರಾಜ್ಯದ ಬಹುತೇಕ ಗ್ರಾಮಗಳಲ್ಲಿ ಕಾರ್ಯಕರ್ತರ ಪಡೆಯನ್ನು ಈ ಸಂಘಟನೆಗಳು ಹೊಂದಿದ್ದು, ಸೇವಾ ಚಟುವಟಿಕೆ ಯ ಅಂಗವಾಗಿ ವಾರ್ಷಿಕ ೫೦,೦೦೦ಕ್ಕೂ ಹೆಚ್ಚಿನ ಕಾರ್ಯಕರ್ತರು ರಕ್ತದಾನದಲ್ಲಿ ಪಾಲ್ಗೊಳ್ಳುತ್ತಾರೆ.
ಪರಿವಾರ ಸಂಘಟನೆಯಿಂದ ಕೈಗೊಳ್ಳುವ ಸಮಾಜಮುಖಿ ಚಟುವಟಿಕೆಗಳಲ್ಲಿ, ಲೋಕಕಲ್ಯಾಣಾರ್ಥದ ಧಾರ್ಮಿಕ ಕಾರ್ಯಕ್ರಮಗಳು, ಸುಸಜ್ಜಿತ ಬಸ್ತಂಗುದಾಣದ ನಿರ್ಮಾಣ/ನಿರ್ವಹಣೆ, ಆಂಬುಲೆನ್ಸ್‌ನ ತುರ್ತುಸೇವೆ, ಗೋವುಗಳ ಸಂರಕ್ಷಣೆ, ಬಡ ಹೆಣ್ಣುಮಕ್ಕಳ ಮದುವೆ, ಬುಡಕಟ್ಟು ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ಇತ್ಯಾದಿಗಳು ಸೇರಿವೆ. ಸಮಾಜದ ಔನ್ನತ್ಯದ ನಿಟ್ಟಿನಲ್ಲಿ ಸಂಘಟನೆಯು ಕೈಗೊಂಡಿರುವ ದಿಟ್ಟಹೆಜ್ಜೆಗಳು ಇವಾಗಿವೆ ಎನ್ನಲಡ್ಡಿಯಿಲ್ಲ.
ಸಾಮಾಜಿಕ ಪಿಡುಗು ಮತ್ತು ಸವಾಲುಗಳ ವಿರುದ್ಧದ ಸಂಘಟಿತ ಹೋರಾಟವು ಸಂಘಟನೆಯ ವತಿಯಿಂದ ನಿರಂತರವಾಗಿ ಸಾಗಿದೆ. ಸಮಾಜದಲ್ಲಿ ತಾಂಡವವಾಡುತ್ತಿರುವ ಅಸ್ಪೃಶ್ಯತೆಯ ನಿವಾರಣೆಗೆ, ಸಾಮಾಜಿಕ ಪರಿವರ್ತನೆಗೆ ಸಾಧು-ಸಂತರು ಮತ್ತು ಮಠಾಧೀಶರ ಮೂಲಕ ಜಾಗೃತಿ ಮೂಡಿಸ ಲಾಗುತ್ತಿದೆ. ಸಾವಿರಾರು ಸಂಘಟನಾತ್ಮಕ ಹೋರಾಟಗಳಲ್ಲಿ ಹಲವರ ಬಲಿದಾನ, ಜೈಲುವಾಸಗಳಾಗಿವೆ. ಗೋಲಿಬಾರ್, ಲಾಠಿಚಾರ್ಜ್‌ಗೆಒಳಗಾದವ ರಿದ್ದಾರೆ, ಹತ್ತಾರು ಮೊಕದ್ದಮೆಗಳನ್ನು ಎದುರಿಸಿದವರಿದ್ದಾರೆ. ಇಂಥ ಸವಾಲುಗಳೆಲ್ಲವನ್ನೂ ಎದುರಿಸಿ ಮುಂದೆ ಸಾಗಿಬಂದಿರುವ ಈ ಸಾಮಾಜಿಕ ಹೋರಾಟಗಳು ಆರೆಸ್ಸೆಸ್ ತಳಹದಿಯಲ್ಲೇ ಜೀವಂತವಾಗಿ ಉಳಿದಿವೆ.
‘ಸೇವೆ-ಸುರಕ್ಷೆ-ಸಂಸ್ಕಾರ’ ಎಂಬ ಧ್ಯೇಯದ ಅಡಿಯಲ್ಲಿ ಸಾಮಾಜಿಕ ಸೇವಾ ಕೈಂಕರ್ಯದಲ್ಲಿ ಅವು ತೊಡಗಿವೆ. ಸಂಘಟನೆಯ ಕಾರ್ಯಕರ್ತರು ತಮ್ಮ ವೈಯಕ್ತಿಕ ಬದುಕಿನ ಆಚೆಗೆ ಯೋಚಿಸಿ ಸಮಾಜಕ್ಕಾಗಿ ದುಡಿಯುವ, ಅದಕ್ಕಾಗಿ ಬದುಕುವ ಮತ್ತು ಸಮಯವನ್ನು ಮೀಸಲಿಡುವ, ಸಂದಿಗ್ಧ ಪರಿಸ್ಥಿತಿ ಯಲ್ಲಿ ಸಾಮಾಜಿಕ ಆಂದೋಲನಗಳಿಗೆ ಧುಮುಕುವ ಪರಿಪಾಠವು ಪರಿವಾರ ಸಂಘಟನೆಯಲ್ಲಿ ಸದಾ ಚಾಲ್ತಿಯಲ್ಲಿದೆ. ಮನೆ-ಮಠ ಎಲ್ಲವನ್ನೂ ತೊರೆದು ಪ್ರಚಾರಕರಾಗಿ ಧರ್ಮಕಾರ್ಯದಲ್ಲಿ ತೊಡಗಿಸಿಕೊಂಡ ಹಲವಾರು ಹಿರಿಯರನ್ನು ‘ವಿಹಿಂಪ’ದಲ್ಲಿ ಇಂದಿಗೂ ಕಾಣಬಹುದು.
(ಲೇಖಕರು ಹವ್ಯಾಸಿ ಬರಹಗಾರರು)