ಪ್ರಜೆಗಳ ಸಹಜ ನಿರೀಕ್ಷೆಗಳು ಈಡೇರಲಿ
ವಿಶ್ಲೇಷಣೆಶಿವಪ್ರಸಾದ್ ಎ
ಕರ್ನಾಟಕದಲ್ಲೂ ಹಿಂದುಳಿದ ಜಾತಿವರ್ಗಗಳ ಸಮೀಕ್ಷಾ ವರದಿಯನ್ನು ಸಾರ್ವಜನಿಕರ ಮುಂದೆ ಮಂಡಿಸಬೇಕೆಂಬ ಕೂಗೆದ್ದಿದೆ. ರಾಜ್ಯದಲ್ಲಿ ಚುನಾವಣಾ ಪ್ರಚಾರದ ವೇಳೆ ಇದನ್ನೇ ಅಸವನ್ನಾಗಿಸಿಕೊಂಡಿದ್ದ ಕಾಂಗ್ರೆಸ್ ಈಗ ಅಧಿಕಾರದಲ್ಲಿರುವುದರಿಂದ ವರದಿಯು ಬೇಗನೆ ಹೊರ ಬರಬಹುದೆಂಬ ನಿರೀಕ್ಷೆ ಹೆಚ್ಚಾಗಿದೆ.
ಲೋಕಸಭಾ ಚುನಾವಣೆಗೆ ಸಾಕಷ್ಟು ಸಮಯವಿರುವಾಗಲೇ ಪ್ರಮುಖ ರಾಜಕೀಯ ಪಕ್ಷಗಳು ಅದಕ್ಕಾಗಿ ಸಜ್ಜಾಗು ತ್ತಿವೆ. ಈ ಸಂಬಂಧ, ಬಿಹಾರದ ಜಾತಿ ಜನಗಣತಿ ವರದಿಯನ್ನು ಅಕ್ಟೋಬರ್ ೨ರಂದು ಬಿಡುಗಡೆ ಮಾಡಲಾಗಿದೆ. ಭಾರತದ ದೊಡ್ಡ ಮತ್ತು ಹೆಚ್ಚು ಜನಸಂಖ್ಯೆಯಿರುವ ರಾಜ್ಯಗಳಲ್ಲೊಂದಾದ ಬಿಹಾರದಲ್ಲಿ ಶೇ.೨೭.೧ರಷ್ಟು ಜನ ಹಿಂದುಳಿದ ವರ್ಗಕ್ಕೆ ಸೇರಿದ್ದರೆ, ಶೇ.೩೬ರಷ್ಟು ಜನ ಅತ್ಯಂತ ಹಿಂದುಳಿದ ವರ್ಗಗಳಿಗೆ (ಇಬಿಸಿ), ಕ್ರಮವಾಗಿ ಶೇ.೧೯.೭ ಮತ್ತು ಶೇ.೧.೭ರಷ್ಟು ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಸೇರಿದ್ದಾರೆ ಎನ್ನುತ್ತದೆ ಈ ವರದಿ. ೨೦೧೯ರ ಚುನಾವಣೆಗೆ ತಯಾರಿಯಾಗುತ್ತಿದ್ದಾಗ, ಬಿಜೆಪಿ-ವಿರೋಧಿ ಪಕ್ಷಗಳು ಪರಿಶಿಷ್ಟ ಜಾತಿಗಳ ಓಲೈಕೆಗೆ ಆದ್ಯಗಮನ ನೀಡಿದ್ದವು.
ಹೈದರಾಬಾದ್‌ನಲ್ಲಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣ, ಭೀಮ್‌ಸೇನೆಯ ಚಂದ್ರಶೇಖರ ಆಜಾದ್ ಉತ್ತರ ಪ್ರದೇಶದಲ್ಲಿ ಮತ್ತು ಜಿಗ್ನೇಶ್ ಮೇವಾನಿ ಗುಜರಾತ್‌ನಲ್ಲಿ ಹೀಗೆ ಪರಿಶಿಷ್ಟ ಜಾತಿಯವರಿಗೆ ಸಂಬಂಧಿಸಿದ ವಿಷಯ ಗಳನ್ನು ಪ್ರಸ್ತಾಪಿಸುತ್ತಾ, ಇವರಿಗೆ ಬಿಜೆಪಿ ಅನ್ಯಾಯ ಮಾಡುತ್ತಿದೆಯೆಂದು ಹೇಳುತ್ತ, ಈ ಪಕ್ಷಗಳು ನ್ಯಾಯ ದೊರಕಿಸಿಕೊಡುವಲ್ಲಿ ಪ್ರಾಮಾಣಿಕವಾಗಿ ಯತ್ನಿಸುವುದಾಗಿ ಚುನಾವಣಾ ಪ್ರಚಾರ ಮಾಡಿದ್ದವು. ಆದರೆ ಈ ತಂತ್ರ ಫಲಿಸದೆ ಕೆಲವೇ ಪ್ರಾಂತ್ಯಗಳಲ್ಲಿ ದಲಿತರನ್ನು ತಮ್ಮೆಡೆಗೆ ಸೆಳೆದು ಬಿಜೆಪಿಯ ಸೋಲಿಗೆ ಅವು ಕಾರಣವಾದರೂ, ಇದರಿಂದ ರಾಷ್ಟ್ರವ್ಯಾಪಿ ಪರಿಣಾಮ ವಾಗದಿದ್ದುದು ವಿಪಕ್ಷಗಳ ನಿರಾಶೆಗೆ ಕಾರಣವಾಯಿತು. ಈಗ ೨೦೨೪ರ ಚುನಾವಣೆಗೂ ಮುನ್ನ ಇತರ ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ವರ್ಗಗಳ ಅಸ ಪ್ರಯೋಗಿಸಿ ಬಿಜೆಪಿಯನ್ನು ಹಣಿಯಲು ಅವು ಯತ್ನಿಸುತ್ತಿವೆ.
ಇದೇ ವಿಷಯವಾಗಿ ಕರ್ನಾಟಕದಲ್ಲೂ ಹಿಂದುಳಿದ ಜಾತಿವರ್ಗಗಳ ಸಮೀಕ್ಷಾ ವರದಿಯನ್ನು ಸಾರ್ವಜನಿಕರ ಮುಂದೆ ಮಂಡಿಸಬೇಕೆಂಬ ಕೂಗೆದ್ದಿದೆ. ರಾಜ್ಯದಲ್ಲಿ ಚುನಾವಣಾ ಪ್ರಚಾರದ ವೇಳೆ ಇದನ್ನೇ ಅಸ್ತ್ರವನ್ನಾಗಿಸಿಕೊಂಡಿದ್ದ ಕಾಂಗ್ರೆಸ್ ಈಗ ಅಧಿಕಾರದಲ್ಲಿರುವುದರಿಂದ ವರದಿಯು ಬೇಗನೆಹೊರಬರಬಹುದೆಂಬ ನಿರೀಕ್ಷೆ ಹೆಚ್ಚಾಗಿದೆ. ಕರ್ನಾಟಕ ಕಾಯಂ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹಾಗೂ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ೨೦೨೨ರ ಡಿಸೆಂಬರ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ವರದಿ ಸಲ್ಲಿಸಿದ್ದರು. ಈ ವರದಿಯ ಶಿಫಾರಸುಗಳ ಜಾರಿಗೆ ತಾನು ಬದ್ಧವೆಂದು ಸಿದ್ದರಾಮಯ್ಯರ ಸರಕಾರವು ಈಗ ಹೇಳುತ್ತಿರುವುದು ಕೂಡ ತನ್ನ ವೋಟ್ ಬ್ಯಾಂಕ್ ಅನ್ನು ಭದ್ರಪಡಿಸಿಕೊಳ್ಳುವಲ್ಲಿನ ಮತ್ತೊಂದು ಹೆಜ್ಜೆ ಎನಿಸುತ್ತದೆ.
ಹಿಂದೆ ರಾಜ್ಯದಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರಿಗೇ ಹೆಚ್ಚಿನ ಪ್ರಾಮುಖ್ಯ ಸಿಗುತ್ತಿತ್ತೆಂಬುದು ಹಿಂದುಳಿದ ಜಾತಿಗಳವರ ಅಳಲು. ಮೇಲಾಗಿ ರಾಜ್ಯದಲ್ಲಿ ಬಿಜೆಪಿಯು ಲಿಂಗಾಯತರನ್ನೇ ಹೆಚ್ಚು ಓಲೈಸುತ್ತದೆ ಎಂಬ ಹಣೆಪಟ್ಟಿಯನ್ನು ವಿಪಕ್ಷಗಳು ಕಟ್ಟಿವೆ. ಈ ಹಣೆಪಟ್ಟಿಯ ದೆಸೆಯಿಂದಾಗಿ ಬಿಜೆಪಿಯು ಈಗಚುನಾವಣೆಗಳಲ್ಲಿ ಇತರ ಜಾತಿಗಳವರಿಗೆ ಟಿಕೆಟ್ ಕೊಟ್ಟರೂ, ತಂತಮ್ಮ ಕ್ಷೇತ್ರಗಳಲ್ಲಿ ಅವರು ಈ ಹಣೆಪಟ್ಟಿಯ ಹೊರೆ ಹೊತ್ತೇ ಚುನಾವಣೆ ಗೆಲ್ಲಬೇಕು. ಸಾಮಾನ್ಯವಾಗಿ ಲಿಂಗಾಯತರು ಹೆಚ್ಚಿರುವ ಕ್ಷೇತ್ರಗಳಲ್ಲಿ ಇದು ಬಿಜೆಪಿ ಅಭ್ಯರ್ಥಿಗೆ ಅನುಕೂಲವಾಗುತ್ತದೆಯಾದರೂ ಇತರ ಕ್ಷೇತ್ರಗಳಲ್ಲಿ ಇದೇ ಹೊರೆಯಾಗುವುದೂ ಉಂಟು.
ಕಾಂಗ್ರೆಸ್‌ನಲ್ಲೂ ಲಿಂಗಾಯತರಿಗೆ ಪ್ರಾತಿನಿಧ್ಯ ಸಿಗುತ್ತಿಲ್ಲವೆಂಬ ಗುಟುರು ಹಾಕಿರುವ ಶಾಮನೂರು ಶಿವಶಂಕರಪ್ಪನವರು, ದಾವಣಗೆರೆಯಲ್ಲಿ ಲಿಂಗಾಯತರ ಸಮಾವೇಶ ನಡೆಸುವುದಾಗಿ ಘೋಷಿಸಿದ್ದಾರೆ. ಒಂದೇ ಕಲ್ಲಿನಲ್ಲಿ ೨-೩ ಹಕ್ಕಿಗಳನ್ನು ಹೊಡೆವ ಹುನ್ನಾರ ಇದರಲ್ಲಿರುವುದು ಸ್ಪಷ್ಟ. ಜಾತಿಗಣತಿಯವರದಿಯ ಬಹಿರಂಗಕ್ಕಾಗಿನ ಆಗ್ರಹ ಒಂದೆಡೆ ಏರುದನಿಯಲ್ಲಿರುವಾಗ, ಇಲ್ಲಿಯವರೆಗೂ ಲಿಂಗಾಯತರು ಮತ್ತು ಒಕ್ಕಲಿಗರು ತಮ್ಮ ಜನಸಂಖ್ಯೆಗಿಂತ ಹೆಚ್ಚಿನ ಪ್ರಾತಿನಿಧ್ಯವನ್ನು ಸರಕಾರದಲ್ಲಿ, ಸರಕಾರಿ ಹುದ್ದೆಗಳಲ್ಲಿ ಅನುಭವಿಸುತ್ತಿರುವರೆಂಬುದು ಸ್ಪಷ್ಟವಾಗಿಬಿಡುತ್ತದೆಯೆಂಬ ಹಿನ್ನೆಲೆಯಲ್ಲಿ, ಲಿಂಗಾಯತರ ಬಲಪ್ರದರ್ಶನಕ್ಕೆ ಮುಂದಾಗುವುದರಿಂದ ಜಾತಿಗಣತಿ ವರದಿಯನ್ನು ಬಹಿರಂಗಪಡಿಸುವ ದಿಕ್ಕಿನಲ್ಲಿ ಸರಕಾರ ಜಾಗರೂಕ ಹೆಜ್ಜೆಯಿಡು ವಂತೆ ಮಾಡುವುದೇ ಈ ಸಮಾವೇಶದ ಘೋಷಣೆಯ ಉದ್ದೇಶ.
ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳನ್ನು ಘೋಷಿಸುವಾಗ, ಲಿಂಗಾಯತರಿಗೆ ಹೆಚ್ಚು ಪ್ರಾತಿನಿಧ್ಯ ದೊರಕುವಂಥ ಅನಿವಾರ್ಯ ಪರಿಸ್ಥಿತಿಯನ್ನು ನಿರ್ಮಿಸುವುದು ಇನ್ನೊಂದು ಉದ್ದೇಶ. ಸರಕಾರದಲ್ಲಿ, ಆಯಕಟ್ಟಿನ ಸರಕಾರಿ ಹುದ್ದೆಗಳಲ್ಲಿ ಲಿಂಗಾಯತರಿಗೆ ಮತ್ತಷ್ಟು ಪ್ರಾತಿನಿಧ್ಯ ನೀಡುವಂತೆ ಒತ್ತಡ ಹೇರುವುದು ಮತ್ತೊಂದು ಉದ್ದೇಶ. ಆರ್ಥಿಕವಾಗಿ ಸದೃಢರಾಗಿರುವ ಲಿಂಗಾಯತರನ್ನು ನಿರ್ಲಕ್ಷಿಸಿ ಇತರ ಜಾತಿಗಳ ವರಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವುದು ಕಾಂಗ್ರೆಸ್‌ಗೂ ಸುಲಭವಲ್ಲ.
ಒಂದೊಮ್ಮೆ ಜಾತಿಗಣತಿ ವರದಿಯಲ್ಲಿ ರಾಜ್ಯದ ೨ ಪ್ರಬಲ ಜಾತಿಗಳಿಗೆ ಅವರ ಜನಸಂಖ್ಯೆಗಿಂತ ಹೆಚ್ಚಾದ ಪ್ರಾತಿನಿಧ್ಯ ಆಗಲೇ ದೊರಕಿದೆ ಮತ್ತು ಕೆಲವು ದಶಕಗಳಿಂದ ಅವರು ಜನಸಂಖ್ಯೆಯ ಮಾನದಂಡದಂತೆ ಅರ್ಹತೆಗಿಂತ ಹೆಚ್ಚಿನ ಸ್ಥಾನ/ ಅಧಿಕಾರವನ್ನು ಅನುಭವಿಸುತ್ತಿದ್ದಾರೆಂಬುದು ಗೊತ್ತಾದರೆ, ಕಾಂಗ್ರೆಸ್ ಅನ್ನು ಬೆಂಬಲಿಸುತ್ತಿರುವ ‘ಅಹಿಂದ’ ಜನರು ತಮ್ಮ ಸಂಖ್ಯೆಗೆ ತಕ್ಕ ಪ್ರಾತಿನಿಧ್ಯ ನೀಡಬೇಕೆಂಬ ಒತ್ತಡವನ್ನು ತೀವ್ರಗೊಳಿಸುತ್ತಾರೆ. ಇದಕ್ಕೆ ಮಣಿದು ಅವರಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಿದರೆ, ಲಿಂಗಾಯತ ಮತ್ತು ಒಕ್ಕಲಿಗರ ಕೆಂಗಣ್ಣಿಗೆ ಕಾಂಗ್ರೆಸ್ ಗುರಿಯಾಗಬಹುದು.
ಎಲ್ಲಾ ಅಂಶಗಳನ್ನು ಪರಿಗಣಿಸಿದರೂ, ಚುನಾವಣೆಗಳಲ್ಲಿ ಗೆಲ್ಲಲು ಹೇಗೆ ಹೆಚ್ಚಿನ ಮತ ಗಳಿಸಬೇಕಾದ ಅನಿವಾರ್ಯತೆ ಅಭ್ಯರ್ಥಿಗಳಿಗಿದೆಯೋ ಹಾಗೆಯೇಹಣಬಲವೂ ಮುಖ್ಯವಾಗುತ್ತದೆ. ರಾಜ್ಯದಲ್ಲಿ ಅತಿಹೆಚ್ಚು ಭೂಮಾಲೀಕ್ವ ಮತ್ತು ಉದ್ದಿಮೆ ವ್ಯಾಪಾರಗಳು ಈಗಲೂ ಬಹುಪಾಲು ಲಿಂಗಾಯತ ಮತ್ತು ಒಕ್ಕಲಿಗರ ಕೈಯಲ್ಲಿರುವುದರಿಂದ, ಇವರನ್ನು ಬದಿಗಿಟ್ಟು ‘ಅಹಿಂದ’ರಿಗೇ ಪ್ರಾತಿನಿಧ್ಯ ನೀಡಿ ಚುನಾವಣೆಯಲ್ಲಿ ಗೆಲ್ಲುವುದು ಸುಲಭವಲ್ಲ.
ಹೀಗಾಗಿ ಜಾತಿಗಣತಿ ವರದಿಯನ್ನು ಬಹಿರಂಗ ಪಡಿಸುವುದರಿಂದ ಮತ್ತು ಅದರಿಂದುಂಟಾಗಬಹುದಾದ ಪರಿಣಾಮಗಳಿಂದ ಲಾಭ-ನಷ್ಟಗಳನ್ನುಸರಿಯಾಗಿ ಲೆಕ್ಕಿಸಿಯೇ ಮುಂದಿನ ಹೆಜ್ಜೆಯಿಡಬೇಕಾದ ಅನಿವಾರ್ಯ ರಾಜ್ಯ ಕಾಂಗ್ರೆಸ್ಸಿಗರಿಗಿದೆ. ೧೯೯೦ರಲ್ಲಿ ವಿ.ಪಿ.ಸಿಂಗ್ ಸರಕಾರ ಕೇಂದ್ರದಲ್ಲಿ ಮಂಡಲ್ ಕಮಿಷನ್ ವರದಿಯನ್ನು ಜಾರಿ ಮಾಡಿ, ಉದ್ಯೋಗಗಳಲ್ಲಿ ಹಿಂದುಳಿದ ಜಾತಿಗಳವರಿಗೆ ಶೇ.೪೯ರಷ್ಟು ಮೀಸಲಾತಿ ಕೊಟ್ಟು, ರಾಜಕೀಯಉದ್ದೇಶಕ್ಕಾಗಿ ಜಾತಿಗಳನ್ನು ಒಡೆದಿತ್ತು. ನಂತರ ಬಿಜೆಪಿಯು ರಾಮಜನ್ಮಭೂಮಿ ಅಭಿಯಾನ ಶುರುಮಾಡಿ ಹಿಂದೂಗಳನ್ನೆಲ್ಲ ಒಂದೇ ಸೂರಿನಡಿಒಗ್ಗೂಡಿಸುವ ಪ್ರತಿತಂತ್ರ ಹೂಡಿ ಯಶಸ್ಸಾಗಿದ್ದರಿಂದ ಮತ್ತು ಆಡ್ವಾಣಿಯವರ ರಥಯಾತ್ರೆ ದೆಸೆಯಿಂದ ಮುಂದೆ ಕೇಂದ್ರದಲ್ಲಿ ಮೊದಲ ಬಾರಿಗೆಬಿಜೆಪಿ ಸರಕಾರ ರಚನೆಯಾಯಿತು.
ಆಗ ರಾಜಕೀಯ ವಿಶ್ಲೇಷಕರು ಇದಕ್ಕೆ ‘ಮಂಡಲ್ ತಂತ್ರಕ್ಕೆ ಬಿಜೆಪಿಯ ಕಮಂಡಲ್ ಪ್ರತಿ ತಂತ್ರ’ ಎಂದಿದ್ದರು. ಈಗ ಇದೇ ಮಾದರಿಯಲ್ಲಿ ಹಿಂದೂಗಳೆಲ್ಲ ಒಂದೇ ಎಂಬಂತೆ ಚುನಾವಣೆಗಳಲ್ಲಿ ಮತ ನೀಡುತ್ತಿದ್ದರೆ, ‘ಇಂಡಿಯ’ ಮೈತ್ರಿಕೂಟ ರಾಜಕೀಯವಾಗಿ ಮತ್ತೆ ಎಡವೋದು ಶತಸಿದ್ಧವೆಂಬುದನ್ನು ಮನಗಂಡಿರುವ ಆ ಕೂಟದ ನಾಯಕರು ತಂತಮ್ಮ ದಾಳಗಳನ್ನುದುರಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ಉದಯನಿಧಿ ಸ್ಟಾಲಿನ್ ಸನಾತನದನಿರ್ಮೂಲನೆಯ ಹೇಳಿಕೆ ನೀಡಿದ್ದು, ಬಿಹಾರದಲ್ಲಿ ಜಾತಿಗಣತಿ ವರದಿ ಬಹಿರಂಗವಾಗಿರುವುದು ಮತ್ತು ಕರ್ನಾಟಕದಲ್ಲಿ ಈ ವರದಿ ಬಹಿರಂಗವಾಗ ಬೇಕೆಂಬ ಆಗ್ರಹ ಹೊಮ್ಮಿರುವುದು ಇವನ್ನೆಲ್ಲ ಗಮನಿಸಿದಾಗ, ಇವೆಲ್ಲವೂ ಹಿಂದೂಗಳನ್ನು ಜಾತಿಗಳಾಗಿ ಒಡೆದು ಮತಗಳಿಸುವ ‘ಇಂಡಿಯ’ ಮೈತ್ರಿಕೂಟದ ತಂತ್ರದ ಭಾಗವೇ ಎಂಬುದು ಅರಿವಾಗುತ್ತದೆ.
ಈಗ ಪುನರಾವರ್ತನೆಯಾಗುತ್ತಿರುವ ಮಂಡಲ್‌ನಂಥ ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ತಂತ್ರಕ್ಕೆ, ಬಿಜೆಪಿಯ ಕಮಂಡಲ್ ಪ್ರತಿತಂತ್ರವನ್ನು ಶೀಘ್ರವೇ ಉದ್ಘಾಟನೆಯಾಗಲಿರುವ ಅಯೋಧ್ಯೆಯ ರಾಮ ಮಂದಿರ ನೀಡಲಿದೆ ಎಂದರೆ ತಪ್ಪಾಗಲಾರದು. ಆದರೆ ಈ ತಂತ್ರ-ಪ್ರತಿತಂತ್ರಗಳ ಮೇಲಾಟಗಳ ನಡುವೆ, ಬಿಜೆಪಿ ದೇಶವ್ಯಾಪಿ ನೀಡಿರುವ ಆಡಳಿತ, ಅಭಿವೃದ್ಧಿ ಮತ್ತು ಉಗ್ರದಾಳಿಯಿಲ್ಲದ ಸುರಕ್ಷಿತ ವಾತಾವರಣವನ್ನು ತಮ್ಮ ಪಕ್ಷಗಳೂ ಹೇಗೆ ನೀಡುತ್ತವೆಂಬುದರ ಬಗ್ಗೆ ‘ಇಂಡಿಯ’ ಮೈತ್ರಿ ಕೂಟದ ನಾಯಕರು ಸ್ಪಷ್ಟಪಡಿಸಿದರೆ ಮತದಾರರ ಮನವೊಲಿಕೆಗೆ ಅದು ನೆರವಾಗಬಹುದು.
ಇಲ್ಲವಾದಲ್ಲಿ, ಕೇವಲ ಹಿಂದೂಗಳನ್ನು ಜಾತಿವಾರು ವಿಂಗಡಿಸಿ ಕೆಲವು ಜಾತಿಗಳಿಗೆ ಮೀಸಲಾತಿಯ ಮಿಠಾಯಿ ತಿನ್ನಿಸುವ ಭರವಸೆಯೊಂದನ್ನೇತಂತ್ರವಾಗಿಸಿಕೊಂಡು ೨೦೨೪ರ ಚುನಾವಣೆ ಎದುರಿಸುವ ಬದಲು, ದೇಶದ ಆರ್ಥಿಕ ಪ್ರಗತಿ, ಸುರಕ್ಷತೆ ಮತ್ತು ಅಭಿವೃದ್ಧಿಗಾಗಿ ಬಿಜೆಪಿ ಸರಕಾರ ಕಳೆದೊಂದು ದಶಕದಿಂದ ಮಾಡದಿರುವ ಯಾವ ಮಹತ್ತರ ಕೆಲಸವನ್ನು ಮಾಡಲಾಗುತ್ತದೆಯೆಂದು ಚುನಾವಣಾ ಪ್ರಚಾರದಲ್ಲಿ ಹೇಳಿದರೆ ಈಮೈತ್ರಿಕೂಟಕ್ಕೆ ಮತದಾರರ ಮನವೊಲಿಕೆ ಸುಲಭವಾಗುವುದೇನೋ.
ಈ ವೇಳೆ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಸ್ ಮುಂಬರುವ ಚುನಾವಣೆಯನ್ನು ಒಂದಾಗಿ ಎದುರಿಸುವ ತಯಾರಿಯಲ್ಲಿರುವಾಗ, ಜೆಡಿಎಸ್ ನಲ್ಲಿ ಅಳಿದುಳಿದ ಅಲ್ಪಸಂಖ್ಯಾತ ನಾಯಕರು ಮತ್ತು ಬೆಂಬಲಿಗರು ತಾವೆಲ್ಲಿಗೆ ಹೋಗಬೇಕೆಂಬುದನ್ನು ಹುಡುಕಬೇಕಾಗಿ ಬಂದಿದೆ. ಕಾಂಗ್ರೆಸ್ ಜನಗಣತಿ ವರದಿಯನ್ನು ಬಹಿರಂಗಪಡಿಸಿ, ಅದರಲ್ಲಿನ ಅಂಶಗಳನ್ನು ಪರಿಗಣಿಸಿ ‘ಅಹಿಂದ’ರಿಗೆ ಹೆಚ್ಚಿನ ಪ್ರಾತಿನಿಧ್ಯವನ್ನು ಒಂದೊಮ್ಮೆ ಒದಗಿಸಿದಲ್ಲಿ,ಲಿಂಗಾಯತರು ಮತ್ತು ಒಕ್ಕಲಿಗರು ಕಾಂಗ್ರೆಸ್‌ನಿಂದ ಹಿಂಸರಿದು ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಬೆಂಬಲಿಸಿದರೆ, ಚುನಾವಣಾ ರಾಜಕೀಯದಸಮೀಕರಣಗಳು ಬುಡಮೇಲಾಗಬಹುದು.
ಏಕೆಂದರೆ, ಜನಬಲದಿಂದಷ್ಟೇ ಚುನಾವಣೆಯನ್ನು ಗೆಲ್ಲಲಾಗುವುದಿಲ್ಲವೆಂಬುದು ಅಪ್ರಿಯಸತ್ಯ. ಹೀಗಾಗಿ ಜಾತಿಗಣತಿ ವರದಿಯನ್ನು ಬಹಿರಂಗಪಡಿಸಿ ಅದರ ಪರಿಣಾಮವನ್ನೆದುರಿಸುವ ಛಾತಿ ಕಾಂಗ್ರೆಸ್‌ಗಿದೆಯೇ ಎಂಬುದೇ ಯಕ್ಷಪ್ರಶ್ನೆ. ದೇಶವ್ಯಾಪಿ ಚುನಾವಣೆ ಎದುರಿಸಲು ಕಾಂಗ್ರೆಸ್‌ಗೆ ಬೇಕಾಗುವ ಸಂಪನ್ಮೂಲ ಒದಗಿಸಬಲ್ಲ ರಾಜ್ಯಗಳಲ್ಲಿ ಕರ್ನಾಟಕ ಪ್ರಮುಖವಾಗಿದೆ. ರಾಜಸ್ಥಾನದಲ್ಲಿ ಮುಂಬರುವ ಅಸೆಂಬ್ಲಿ ಚುನಾವಣೆಗಳಲ್ಲಿ ಮತ್ತೆ ಅಧಿಕಾರ ಕ್ಕೇರುವುದು ಖಾತ್ರಿಯಿಲ್ಲದಿರುವುದರಿಂದ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿಯನ್ನು ಮಣಿಸಿ ಮತ್ತೆ ಅಧಿಕಾರ ಗಿಟ್ಟಿಸುವುದು ನಿಶ್ಚಿತವಿಲ್ಲದಿರುವುದರಿಂದ, ಕರ್ನಾಟಕದ ಕಾಂಗ್ರೆಸ್ಸಿಗರ ಮೇಲೆ ಸಂಪನ್ಮೂಲ ಕ್ರೋಡೀಕರಣದ ಹೊಣೆಯಿದೆ.
ಹೀಗಿರುವಾಗ ಕಾಂಗ್ರೆಸ್ ಸರಕಾರ ಜಾತಿಗಣತಿ ವರದಿಯನ್ನು ಬಹಿರಂಗಪಡಿಸುವುದೇ? ಪ್ರತಿ ರಾಜ್ಯದಲ್ಲೂ ಪ್ರಾದೇಶಿಕ ಪಕ್ಷಗಳೊಂದಿಗೆ ಕಾಂಗ್ರೆಸ್ ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ, ಆಯಾ ರಾಜ್ಯಗಳಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಸಾಧ್ಯತೆ ಇಲ್ಲವಾಗುತ್ತದೆಂಬುದು ಗಮನಾರ್ಹ. ಮತ್ತೊಂದೆಡೆ, ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಬಿಟ್ಟುಕೊಡಲು ಒಪ್ಪುತ್ತಿಲ್ಲವೆಂದು ಹಲವು ಪಕ್ಷಗಳು ಅದರೊಂದಿಗಿನ ಸಖ್ಯ ಮುರಿದುಕೊಂಡಿವೆ.ಪ್ರಸ್ತುತ ಬಿಜೆಪಿಗೆ ಮೋದಿ ನೇತೃತ್ವದ ಮೇಲೆ ಹಿಂದೆಂದಿಗಿಂತಲೂ ಹೆಚ್ಚು ಆತ್ಮವಿಶ್ವಾಸವಿರುವುದೇ ಇದಕ್ಕೆ ಕಾರಣ.
ಹೀಗಾಗಿ ಸಂಪನ್ಮೂಲ ಕ್ರೋಡೀಕರಣ, ಮತದಾರರ ಓಲೈಕೆಯ ನಿಟ್ಟಿನಲ್ಲಿ ಪ್ರಾದೇಶಿಕ ಪಕ್ಷಗಳ ಹಂಗಿಲ್ಲದೆ ಚುನಾವಣೆ ಎದುರಿಸುವ ಸಂದರ್ಭ ಬಿಜೆಪಿಗೆ ಒದಗಿದೆ. ಭಾರತದಲ್ಲೀಗ ಪ್ರಜಾತಂತ್ರ ವ್ಯವಸ್ಥೆಯು ಒಂದು ಪರ್ವಕಾಲದ ನಿರೀಕ್ಷೆಯಲ್ಲಿದೆ. ಈ ವೇಳೆ, ಅಮೆರಿಕದಲ್ಲಿರುವಂತೆ ನಮ್ಮಲ್ಲೂ ಕೇಂದ್ರ ಸರಕಾರದ ಅತ್ಯುಚ್ಚ ನೇತಾರ ನನ್ನು ಪ್ರಜೆಗಳೇ ನೇರವಾಗಿ ಚುನಾಯಿಸುವಂತಾಗಬೇಕು ಮತ್ತು ಕೇಂದ್ರದ ಸುಪರ್ದಿನಲ್ಲಿರುವ ಹಲವು ಇಲಾಖೆಗಳು ರಾಜ್ಯಗಳಿಗೆ ಹಸ್ತಾಂತರಗೊಳ್ಳಬೇಕು. ಆಗ ರಾಜ್ಯ ಸರಕಾರಗಳ ಅಧಿಕಾರ ವ್ಯಾಪ್ತಿಯೂ, ಪ್ರಜೆಗಳ ನಿರೀಕ್ಷೆಗಳು ಈಡೇರುವ ಸಾಧ್ಯತೆಯೂ ಹೆಚ್ಚುತ್ತದೆ.ಹೀಗಾದಾಗ ನೈಜಪ್ರಗತಿ ಸಾಧ್ಯವಾಗುತ್ತದೆ.
(ಲೇಖಕರು ಹವ್ಯಾಸಿ ಬರಹಗಾರರು)