ರೈಲುಮಾರ್ಗಕ್ಕೆ ವಿದ್ಯುದೀಕರಣದ ಸಾಥ್
ಪ್ರಕಾಶಪಥ
ಪ್ರಕಾಶ್ ಶೇಷರಾಘವಾಚಾರ್‌
ಭಾರತೀಯ ರೇಲ್ವೆಯು ೨೦೧೪ರ ತರುವಾಯ ಹೊಸ ಸಂಕಲ್ಪ ಮತ್ತು ಹೊಸತನದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಪ್ರಯಾಣಿಕರಿಗೆ ಸುಖಾನುಭವ ನೀಡಲು ಇಲಾಖೆಯು ಹಲವಾರು ಪ್ರಯಾಣಿಕ-ಸ್ನೇಹಿ ಪ್ರಕಲ್ಪಗಳನ್ನು ನೆಚ್ಚಿದ್ದು, ಅವು ರೈಲು ಪ್ರಯಾಣವನ್ನು ಹೊಸ ಎತ್ತರಕ್ಕೆ ತಲುಪಿಸಿವೆ. ಮುಂಬೈನಬೋರಿಬಂದರ್‌ನಿಂದ ಕಲ್ಯಾಣ್‌ವರೆಗೆ ೧೮೫೩ರಲ್ಲಿ ಆರಂಭ ವಾದ ಮೊದಲ ರೈಲುಸೇವೆಗೆ ಕಳೆದ ಒಂದೂವರೆ ಶತಮಾನದಲ್ಲಿ ಅನೇಕ ಸುಧಾರಣೆ-ಬದಲಾವಣೆ ಆಗಿವೆ, ತನ್ಮೂಲಕ ಭಾರತೀಯ ರೇಲ್ವೆಯು ವಿಶ್ವದ ಎರಡನೇ ಅತಿದೊಡ್ಡ ರೈಲುಸೇವೆಯಾಗಿ ಬೆಳೆದು ನಿಂತಿದೆ.
ಭಾರತೀಯ ರೇಲ್ವೆಯು ೧೯೯೨ರಲ್ಲಿ ತನ್ನೆಲ್ಲಾ ಮಾರ್ಗಗಳನ್ನು ಮೀಟರ್ ಮತ್ತು ನ್ಯಾರೋಗೇಜ್‌ಗಳಿಂದ ಬ್ರಾಡ್‌ ಗೇಜ್‌ಗೆ ಪರಿವರ್ತಿಸುವ ‘ಯೂನಿಗೇಜ್’ ಯೋಜನೆಯನ್ನು ಕೈಗೆತ್ತಿಕೊಂಡಿತು. ಅಂದಿನ ಪ್ರಧಾನಿ ಪಿ.ವಿ. ನರಸಿಂಹ ರಾವ್ ಈ ಯೋಜನೆಗೆ ಚಾಲನೆ ನೀಡಿದರು. ಅಂದು ರೇಲ್ವೆ ಸಚಿವರಾಗಿದ್ದ ಕರ್ನಾಟಕದ ಸಿ.ಕೆ.ಜಾಫರ್ ಷರೀಫರಿಗೆ ಈ ಯೋಜನೆ ಯನ್ನು ಅನುಷ್ಠಾನಗೊಳಿಸಿದ ಕೀರ್ತಿ ಸಲ್ಲುತ್ತದೆ. ಇದಕ್ಕೂ ಮುನ್ನ ೧೯೮೬ರಲ್ಲಿ ಮೊದಲ ಬಾರಿಗೆ ಗಣಕೀಕೃತ ಟಿಕೆಟ್ ಕಾಯ್ದಿರಿಸುವಿಕೆಯನ್ನು ಆರಂಭಿಸಲಾಗಿತ್ತು. ಆ ಕಾಲಘಟ್ಟದಲ್ಲಿ ಇಂಟರ್‌ನೆಟ್ ಜಾಲ ಇರದಿದ್ದ ಕಾರಣ, ಕೇವಲ ಆಯಾ ನಿಲ್ದಾಣ ಗಳಿಗೆ ಅದು ಸೀಮಿತವಾಗಿತ್ತು.
೨೦೦೨ರಲ್ಲಿ ಐಆರ್ ಸಿಟಿಸಿ ಮೂಲಕ ಆನ್‌ಲೈನ್ ಟಿಕೆಟ್ ಬುಕಿಂಗ್ ಶುರು ವಾಯಿತು. ೨೦೧೪ರ ಮೊದಲು ರೇಲ್ವೆ ಸೇವೆಯನ್ನು ಸಾರಿಗೆಯ ಉದ್ದೇಶಕ್ಕಾಗಿ ಪರಿಗಣಿಸಲಾಗಿತ್ತು. ಆದ್ದರಿಂದ ಕೇಂದ್ರ ಸರಕಾರ ಹೆಚ್ಚಿನ ಬಂಡವಾಳ ಹೂಡುತ್ತಿರಲಿಲ್ಲ. ಹೀಗಾಗಿ ರೇಲ್ವೆ ಅಭಿವೃದ್ಧಿ ಕಾಮಗಾರಿಗಳಿಗೆ ತನ್ನ ಆದಾಯದ ಮೂಲದಿಂದಲೇ ಬಂಡವಾಳ ವನ್ನು ಹೊಂಚ ಬೇಕಾಗಿತ್ತು. ೨೦೧೩ರ ಮುಂಗಡ ಪತ್ರದಲ್ಲಿ ರೇಲ್ವೆಗೆ ನೀಡಿದ ಒಟ್ಟು ಅನುದಾನ ೬೩,೦೦೦ ಕೋಟಿ ರುಪಾಯಿಗಳಾದರೆ, ಹತ್ತು ವರ್ಷದ ತರುವಾಯ ನೀಡಿದ್ದು ೨.೪ ಲಕ್ಷ ಕೋಟಿ ರು. ರೇಲ್ವೆಯು ಅಭಿವೃದ್ಧಿಯ ದಾರಿದೀಪ ಎಂಬುದಾಗಿ ಮೋದಿಸರಕಾರವು ಪರಿಗಣಿಸಿದ್ದೇ ಇದಕ್ಕೆ ಕಾರಣ. ಪರಿಣಾಮವಾಗಿ ಒಂದಿಡೀ ಚಿತ್ರಣವೇ ಬದಲಾಯಿತು.
೧೮೫೩ರಲ್ಲಿ ಮೊದಲ ರೈಲುಸೇವೆ ಆರಂಭವಾದ ೫೦ ವರ್ಷಗಳ ತರುವಾಯ ೧೯೦೯ರಲ್ಲಿ ರೈಲುಗಳಲ್ಲಿ ಮೊದಲ ಬಾರಿಗೆ ಟಾಯ್ಲೆಟ್ ಅಳವಡಿಸ ಲಾಗಿತ್ತು. ೨೦೧೫ರಲ್ಲಿ ಇವನ್ನು ‘ಬಯೋ ಟಾಯ್ಲೆಟ್’ಗೆ ಬದಲಾಯಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು ಹಾಗೂ ೭೯,೨೬೯ ಕೋಚ್‌ಗಳಲ್ಲಿಇಂಥ ಎರಡೂವರೆ ಲಕ್ಷ ಟಾಯ್ಲೆಟ್‌ಗಳನ್ನು ಅಳವಡಿಸುವ ಮೂಲಕ ಶೇ.೧೦೦ರಷ್ಟು ಪ್ರಗತಿ ಸಾಽಸಲಾಯಿತು. ಸ್ವಚ್ಛ ಭಾರತ ಯೋಜನೆಯ ಅಂಗವಾಗಿ ಸ್ವಚ್ಛ ರೈಲು ನಿಲ್ದಾಣ ಉಪಕ್ರಮವನ್ನು ಕೈಗೊಂಡಾಗ ರೈಲು ನಿಲ್ದಾಣಗಳು ಚೊಕ್ಕಗೊಂಡು ನಳನಳಿಸುವಂತಾಯಿತು.
ರೈಲುಮಾರ್ಗಗಳ ವಿದ್ಯುದೀಕರಣ ಪ್ರಾರಂಭವಾಗಿದ್ದು ೧೯೨೫ರಲ್ಲಿ. ದೇಶಕ್ಕೆ ಸ್ವಾತಂತ್ರ್ಯ ಬರುವ ಹೊತ್ತಿಗೆ ಕೇವಲ ೩೮೮ ಕಿ.ಮೀ.ನಷ್ಟು ಮಾರ್ಗ ಈ ಪ್ರಕ್ರಿಯೆಗೆ ಒಳಗಾಗಿತ್ತು. ತದನಂತರ ಇದು ತೆವಳುತ್ತಾ ಸಾಗಿ, ೧೯೪೭ರಿಂದ ೨೦೧೪ರ ತನಕ ೨೧,೮೦೦ ಆರ್‌ಕೆಎಂನಷ್ಟು (ರೂಟ್ ಕಿಲೋಮೀಟರ್)ಮಾರ್ಗ ವಿದ್ಯುದೀಕರಣಗೊಂಡಿತ್ತು. ೨೦೧೪ರಲ್ಲಿ ಮೋದಿಯವರ ಸರಕಾರ ಅಽಕಾರಕ್ಕೆ ಬಂದ ತರುವಾಯ ಎರಡೇ ವರ್ಷದಲ್ಲಿ ೩,೧೦೦ ಕಿ.ಮೀ. ಮಾರ್ಗವು ವಿದ್ಯುದೀಕರಣ ಗೊಂಡಿತು. ೨೦೧೬ರಲ್ಲಿ ಶೇ.೧೦೦ರಷ್ಟು ರೈಲುಮಾರ್ಗಗಳನ್ನು ವಿದ್ಯುತ್ ಜಾಲದಲ್ಲಿ ತರುವ ಯೋಜನೆಯನ್ನು ರೂಪಿಸಿದಅಂದಿನ ರೇಲ್ವೆ ಸಚಿವ ಸುರೇಶ್ ಪ್ರಭು ಅವರು, ತಮ್ಮ ಅವಧಿಯಲ್ಲಿ ದೇಶದ ೩೫,೦೦೦ ಕಿ.ಮೀ. ಮಾರ್ಗವನ್ನು ೩೫,೦೦೦ ಕೋಟಿ ರು. ವೆಚ್ಚದಲ್ಲಿ ವಿದ್ಯು ದೀಕರಣಗೊಳಿಸುವುದಕ್ಕೆ ಮುಂದಾದರು.
ಯೂನಿಗೇಜ್ ಯೋಜನೆ ನಂತರ ಭಾರತೀಯ ರೇಲ್ವೆಯು ಕೈಗೆತ್ತಿಕೊಂಡ ಬೃಹತ್ ಯೋಜನೆಗಳಲ್ಲಿ ಇದು ಒಂದೆನಿಸಿಕೊಂಡಿದೆ. ಈಗಾಗಲೇ ರೈಲುಗಳು ಡೀಸೆಲ್ ಎಂಜಿನ್ ನೆರವಿನಿಂದ ಓಡುತ್ತಿದ್ದು, ಇದರಿಂದ ಯಾವ ಸಮಸ್ಯೆಯೂ ಉಂಟಾಗಿಲ್ಲ. ಹೀಗಿರುವಾಗ ವಿದ್ಯುತ್ ಎಂಜಿನ್ ಮೂಲಕ ರೈಲು ಓಡಿಸುವ ಅಗತ್ಯವಿದೆಯೇ? ಎಂಬ ಪ್ರಶ್ನೆ ಕೆಲವರಲ್ಲಿ ಉದ್ಭವಿಸಬಹುದು. ರೈಲುಮಾರ್ಗಗಳ ವಿದ್ಯುದೀಕರಣದಿಂದ ಇಲಾಖೆಗೆ ಮಾತ್ರವಲ್ಲದೆ, ಪರಿಸರಕ್ಕೆ, ಪ್ರಯಾಣಿಕರಿಗೆ, ಉದ್ಯಮ ಹಾಗೂ ಕೃಷಿ ಕ್ಷೇತ್ರಕ್ಕೆ ಹಲವಾರು ಪ್ರಯೋಜನಗಳಿವೆ. ವಿದ್ಯುದೀಕರಣದ ಮೂಲಕ ೨೦೩೦ರೊಳಗೆ ಇಂಗಾಲದ ಶೂನ್ಯ ಹೊರಸೂಸುವಿಕೆಯ ಗುರಿ ಸಾಧಿಸಲು ಈ ಯೋಜನೆ ಅತ್ಯಾವಶ್ಯಕ. ರೇಲ್ವೆ ಇಲಾಖೆಯು ವಾರ್ಷಿಕವಾಗಿ ೨.೮೩ ಬಿಲಿಯನ್ ಲೀಟರ್ ಡೀಸೆಲ್ ಬಳಸು ತ್ತಿದ್ದು, ವಿದ್ಯುದೀಕರಣದಿಂದಾಗಿ ಡೀಸೆಲ್ ಖರೀದಿ ಕ್ರಮೇಣ ಸ್ಥಗಿತವಾಗುತ್ತಿದೆ.
ಇದರಿಂದ ಇಲಾಖೆಗೆ ವಾರ್ಷಿಕ ೧೪ ಸಾವಿರ ಕೋಟಿ ರು. ಉಳಿಯುತ್ತದೆ. ಜತೆಗೆ ಡೀಸೆಲ್ ಬಳಸದಿರುವುದರಿಂದ ದೇಶಕ್ಕೆ ವಿದೇಶಿ ವಿನಿಮಯ ಉಳಿಯು ತ್ತದೆ. ವಿದ್ಯುತ್ ಚಾಲಿತ ಎಂಜಿನ್‌ಗಳಿಂದ ರೈಲುಗಳ ವೇಗವು ಗಣನೀಯವಾಗಿ ಹೆಚ್ಚುವುದರಿಂದ, ಇಲಾಖೆಯು ಹೊಸ ಮಾರ್ಗಗಳಲ್ಲಿ ಪ್ರಯಾಣಿಕರ ರೈಲುಗಳನ್ನು ಹೆಚ್ಚಿನ ಸಂಖ್ಯೆ ಯಲ್ಲಿ ಓಡಿಸಲು ಸಾಧ್ಯವಾಗುತ್ತದೆ. ‘ಮಿಷನ್ರಫ್ತಾರ್’ ಯೋಜನೆ ಜಾರಿಗೆ ವಿದ್ಯುದೀಕರಣವು ಸಹಾಯಕವಾಗಿದೆ.ಈ ಮೊದಲು ವಿದ್ಯುದೀಕರಣವಾಗದ ಮಾರ್ಗದಲ್ಲಿ ಡೀಸೆಲ್ ಎಂಜಿನ್‌ಗಳಿಗೆ ಬದಲಾವಣೆ ಮಾಡಬೇಕಿತ್ತು; ಆದರೀಗ ಎಲ್ಲ ಮಾರ್ಗಗಳೂ ವಿದ್ಯುದೀ ಕರಣಗೊಂಡಿರುವುದರಿಂದ ತಡೆರಹಿತ ರೈಲುಸೇವೆ ನೀಡಬಹುದಾಗಿದೆ.
ಮಾರ್ಗದುದ್ದಕ್ಕೂ ವಿಸ್ತರಿಸಿರುವ ವಿದ್ಯುತ್ ಜಾಲದಿಂದಾಗಿ ಸುಧಾರಿತ ವಿದ್ಯುತ್ ಸಿಗ್ನಲಿಂಗ್ ವ್ಯವಸ್ಥೆ ಅಳವಡಿಕೆಯಾಗಿ, ಸುರಕ್ಷಿತ ಪ್ರಯಾಣಕ್ಕೆ ಅದು ಪೂರಕವಾಗಿದೆ. ಸರಕು ಸಾಗಣೆಯೇ ರೇಲ್ವೆ ಆದಾಯಕ್ಕೆ ಮೂಲಾಧಾರ. ವಿದ್ಯುತ್ ಚಾಲಿತ ರೈಲುಗಳಲ್ಲಿ ಡೀಸೆಲ್ ರೈಲಿಗಿಂತ ಹೆಚ್ಚಿನ ಸರಕನ್ನು ಸಾಗಿಸಲು ಸಾಧ್ಯವಿರುವುದರಿಂದ ಇಲಾಖೆಗೆ ಅದು ಲಾಭದಾಯಕವಾಗುವುದು. ಜತೆಗೆ ಡೀಸೆಲ್ ಎಂಜಿನ್‌ಗಳಿಗೆ ಹೋಲಿಸಿದಾಗ ವಿದ್ಯುತ್ ಚಾಲಿತ ಎಂಜಿನ್‌ಗಳ ನಿರ್ವಹಣಾ ವೆಚ್ಚವು ಶೇ.೫೦ರಷ್ಟು ತಗ್ಗುತ್ತದೆ. ರೈಲುಗಳ ವೇಗವು ಹೆಚ್ಚಿರವುದರಿಂದ, ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಕ್ಷಿಪ್ರಸಾಗಣೆ ಸಾಧ್ಯ ವಾಗುತ್ತದೆ ಹಾಗೂ ಉತ್ಪನ್ನಗಳು ಹಾಳಾಗುವುದು ತಪ್ಪುತ್ತದೆ.
ಇದರಿಂದ ರೈತರ ಲಾಭವೂ, ರೇಲ್ವೆಯ ಆದಾಯವೂ ಹೆಚ್ಚುತ್ತದೆ. ಗುಜರಾತಿನ ಸಾನಂದ್‌ನಿಂದ ಉತ್ತರ ಪ್ರದೇಶದ ದಾದ್ರಿಗೆ ಹಾಲು ಪೂರೈಸುವ ಟ್ಯಾಂಕರ್ ರೈಲುಗಳು ಈಗ ಶೇ.೩೩ರಷ್ಟು ಸಮಯವನ್ನು ಉಳಿತಾಯ ಮಾಡುತ್ತಿವೆ. ಹೊಸದಾಗಿ ನಿರ್ಮಾಣವಾಗುತ್ತಿರುವ ಮೀಸಲು ಸರಕು ಸಾಗಣೆ ಮಾರ್ಗದಲ್ಲಿ ಡಬಲ್ ರೇಕ್ ಗಳಿರುವುದರಿಂದ, ಹೆಚ್ಚಿನ ವೇಗದಲ್ಲಿ ಸಂಚರಿಸಲು, ಹೆಚ್ಚಿನ ಸರಕು ಒಯ್ಯಲು ವಿದ್ಯುತ್ ಚಾಲಿತ ಎಂಜಿನ್ ಅವಶ್ಯಕ.ಪ್ರಸ್ತುತ ರೇಲ್ವೆ ಇಲಾಖೆ ೧೮.೫ ಬಿಲಿಯನ್ ಯೂನಿಟ್ ನಷ್ಟು ವಿದ್ಯುತ್ ಬಳಕೆ ಮಾಡುತ್ತಿದೆ. ಸಂಪೂರ್ಣ ವಿದ್ಯುದೀಕರಣದ ತರುವಾಯ ಇಲಾಖೆಗೆ ೪,೦೦೦ ಮೆಗಾವಾಟ್ ವಿದ್ಯುತ್ ಬೇಕಾಗುತ್ತದೆ. ಈ ಬೇಡಿಕೆಯು ಪರ್ಯಾಯ ಇಂಧನದ ಉತ್ಪಾದನೆಗೆ ಹೊಸಹೊಸ ಅವಕಾಶಗಳನ್ನು ತೆರೆದಿದೆ. ಪವನ ಮತ್ತು ಸೌರವಿದ್ಯುತ್ ಉತ್ಪಾದನೆಗೆ ಬೇಡಿಕೆ ಹೆಚ್ಚಾಗಲಿದೆ. ಇದರಿಂದಾಗಿ ಈ ಕ್ಷೇತ್ರದಲ್ಲಿ ಹೊಸ ಉದ್ಯಮಗಳನ್ನು ಆರಂಭಿಸುವ ಅವಕಾಶ ಒದಗಿದಂತಾ ಗಿದೆ.
ನಿಲ್ದಾಣದ ಪ್ಲಾಟ್-ರ್ಮ್ ಚಾವಣಿಗಳು ಸೌರವಿದ್ಯುತ್ ಉತ್ಪಾದನೆಗೆ ಬಳಕೆಯಾಗುತ್ತಿವೆ. ಜಮ್ಮುವಿನ ಕಾಟ್ರ ನಿಲ್ದಾಣದ ಚಾವಣಿ ೫,೦೦೦ ಯೂನಿಟ್‌ ಗಳಷ್ಟು ಸೌರ ವಿದ್ಯುತ್ತನ್ನು ಉತ್ಪಾದಿಸುತ್ತಿದ್ದು, ನಿಲ್ದಾಣಕ್ಕೆಂದು ೨,೦೦೦ ಯೂನಿಟ್ ಬಳಕೆಯಾಗಿ ಉಳಿದದ್ದನ್ನು ಮಾರುತ್ತಿದೆ. ರೇಲ್ವೆ ಇಲಾಖೆಗೆ ಸೇರಿದ ಹೆಚ್ಚಿನ ಸ್ಥಳಗಳ ಲಭ್ಯತೆ ಇರುವುದರಿಂದ ಸೌರವಿದ್ಯುತ್ ಉತ್ಪಾದನೆಗೆ ಅದು ಪೂರಕವಾಗಿದೆ. ರೈಲುಮಾರ್ಗಗಳ ವಿದ್ಯುದೀಕರಣವನ್ನು ‘ಸೆಂಟ್ರಲ್ಆರ್ಗನೈಸೇಷನ್ ಫಾರ್ ರೇಲ್ವೆ ಎಲೆಕ್ಟ್ರಿಫಿಕೇಷನ್’ ಸಂಸ್ಥೆ ಕೈಗೊಳ್ಳುತ್ತಿದೆ. ೨೦೧೮ರಿಂದ ಈ ಪ್ರಕ್ರಿಯೆ ವೇಗವನ್ನು ಪಡೆಯಿತು. ೨೦೨೦-೨೦೨೩ರ ಅವಧಿ ಯಲ್ಲಿ ಸತತವಾಗಿ ೬,೦೦೦ ಕಿ.ಮೀ.ಗೂ ಹೆಚ್ಚು ಮಾರ್ಗದ ವಿದ್ಯುದೀಕರಣವಾಗಿದೆ.
ಒಟ್ಟು ೬೫,೩೫೦ ಕಿ.ಮೀ. ರೈಲುಮಾರ್ಗದಲ್ಲಿ ಈಗಾಗಲೇ ೫೯,೫೨೪ ಕಿ.ಮೀ.ನಷ್ಟು ವಿದ್ಯುದೀಕರಣಗೊಂಡಿದ್ದು ಉಳಿದ ಭಾಗವನ್ನು ವಿದ್ಯುತ್ ಜಾಲ ದಲ್ಲಿ ತರಲು ೨೦೨೪ರ ಮಾರ್ಚ್ ಅಂತ್ಯದ ಗಡುವು ನೀಡಲಾಗಿದೆ. ಒಟ್ಟು ೧೪ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿದ್ಯುದೀಕರಣವುಶೇ.೧೦೦ರಷ್ಟು, ೬ ರಾಜ್ಯಗಳಲ್ಲಿ ಶೇ.೯೦ರಷ್ಟು ಮತ್ತು ೫ ರಾಜ್ಯಗಳಲ್ಲಿ ಶೇ.೭೫ರಷ್ಟು ಸಂಪನ್ನಗೊಂಡಿದೆ. ವಿದ್ಯುತ್ ಎಂಜಿನ್‌ನೆಡೆಗೆ ಹೊರಳಿರುವು ದರಿಂದ ಇಲಾಖೆಯಲ್ಲಿ ಈಗಾಗಲೇ ದೊಡ್ಡ ಪ್ರಮಾಣದಲ್ಲಿರುವ ಎಂಜಿನ್ ಗಳು ಅನುಪಯುಕ್ತವಾಗಿವೆ. ಹೀಗಾಗಿ ಕೆಲ ಎಂಜಿನ್‌ಗಳನ್ನು ತುರ್ತು ಉಪಯೋಗಕ್ಕೆಂದು ಸಂರಕ್ಷಿಸಬೇಕಾಗಿದೆ.
ಡೀಸೆಲ್ ಎಂಜಿನ್‌ಗಳನ್ನು ವಿದ್ಯುತ್ ಚಾಲಿತ ಎಂಜಿನ್ ಆಗಿ ಮಾರ್ಪಡಿಸುವುದು ೨ನೆಯ ದಾರಿ. ಈಗಾಗಲೇ ಬದಲಾವಣೆ ಮಾಡಿರುವ ಇಂಥ ಒಂದು ಎಂಜಿನ್‌ನ ರೈಲಿಗೆ ಪ್ರಧಾನಿ ಮೋದಿಯವರು ವಾರಾಣಾಸಿಯಲ್ಲಿ ಹಸಿರು ನಿಶಾನೆ ತೋರಿದರು. ಇಂಥ ಪರಿವರ್ತಿತ ಎಂಜಿನ್‌ಗಳ ಆರ್ಥಿಕ ಕಾರ್ಯಸಾಧ್ಯತೆಯ ಕುರಿತು ಅಧ್ಯಯನ ಮಾಡಿದ ತರುವಾಯ ಮುಂದೆ ಇತರ ಡೀಸೆಲ್ ಎಂಜಿನ್‌ಗಳ ಭವಿಷ್ಯದ ಬಗ್ಗೆ ಇಲಾಖೆ ತೀರ್ಮಾನಿಸಲಿದೆ ಎಂದು ತಿಳಿದುಬಂದಿದೆ.
ರೇಲ್ವೆಯಲ್ಲಿನ ಹಾಲಿ ಡೀಸೆಲ್ ಎಂಜಿನ್ ಸಾಮರ್ಥ್ಯ ೪,೫೦೦ ಎಚ್‌ಪಿ. ಆದರೆ ಈಗ ಬಳಸುತ್ತಿರುವ ವಿದ್ಯುತ್ ಎಂಜಿನ್‌ಗಳ ಸಾಮರ್ಥ್ಯ ೯,೦೦೦ ಎಚ್‌ಪಿ ಯಿಂದ ೧೨,೦೦೦ ಎಚ್‌ಪಿವರೆಗೆ ಇದೆ. ಹೀಗಾಗಿ ಇವುಗಳ ಪ್ರಸ್ತುತತೆಯ ಬಗ್ಗೆ ಅಧ್ಯಯನದ ಅವಶ್ಯಕತೆಯಿದೆ. ಕೈಗೆತ್ತಿಕೊಳ್ಳಲಾದ ಯೋಜನೆಗಳು ಗುರಿ ಮುಟ್ಟುವವರೆಗೂ ಅವುಗಳ ಬೆನ್ನತ್ತಿ ಪೂರ್ಣಗೊಳಿಸುವುದು ಮೋದಿ ಆಡಳಿತದ ವಿಶೇಷವಾಗಿದೆ.
(ಲೇಖಕರು ಬಿಜೆಪಿಯ ಮಾಜಿ ಮಾಧ್ಯಮಸಂಚಾಲಕರು)