ಶಾಂತಿಯ ತೋಟದಿ ಕೆಸರೆರಚಾಟ
ಅಭಿಮತ
ಜಿ.ಪ್ರತಾಪ ಕೊಡಂಚ
ಒಂದಾನೊಂದು ಕಾಲದಲ್ಲಿ ಕರ್ನಾಟಕವೆಂಬ ರಾಜ್ಯದಲ್ಲಿ ಜನಜೀವನ ನಿರ್ಭೀತವಾಗಿ ಸಾಗುತ್ತಿತ್ತು. ಚುನಾಯಿತ ಸರಕಾರಗಳು ಯಾವುದೇ ಪಕ್ಷ, ತತ್ತ್ವ, ಸಿದ್ಧಾಂತಗಳ ಆಧಾರದಲ್ಲಿ ಗೆದ್ದುಬಂದಿದ್ದರೂ, ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಪ್ರಜೆಗಳ ಹಿತರಕ್ಷಣೆಯ ಹೊಣೆಗಾರಿಕೆಯನ್ನು ಗಂಭೀರವಾಗಿಯೇ ತೆಗೆದುಕೊಳ್ಳುತ್ತಿದ್ದವು.
ಮತಧರ್ಮಗಳ ಪ್ರಭಾವವನ್ನೂ ಮೀರಿ, ಕಿಡಿಗೇಡಿಗಳನ್ನು, ಸಮಾಜದ ಸ್ವಾಸ್ಥ್ಯ ಕೆಡಿಸುವವರನ್ನು ಹೆಡೆಮುರಿಗೆ ಕಟ್ಟಿ ಜನರನ್ನು ಕಾಪಾಡುವಂಥ ಸ್ವಾತಂತ್ರ್ಯ ಅಧಿಕಾರಿಗಳಿಗೆ, ಪೊಲೀಸರಿಗೆ ಇತ್ತೆಂಬುದು ಇಂದಿಗೆ ನೆನಪಷ್ಟೇ! ಇಂಥ ಸಾಲುಗಳನ್ನು ಇತಿಹಾಸದ ಪುಸ್ತಕಗಳಲ್ಲಿ ಓದಬೇಕಾದ ಕಾಲ ಬರುತ್ತಿದೆಯೇ? ಛೇ! ನಾವೆಲ್ಲಿಗೆ ತಲುಪಿ ಬಿಟ್ಟಿದ್ದೇವೆ? ‘ಸರ್ವಜನಾಂಗದ ಶಾಂತಿಯ ತೋಟ’ ಎಂದ ರಸಋಷಿ ಕುವೆಂಪುರವರ ತವರುಜಿಲ್ಲೆಯಲ್ಲೇ ಇತ್ತೀಚೆಗೆ ನಡೆದ ಘಟನೆಯು ನಮಗೆ ಬಿಡಿ, ಕುವೆಂಪುರವರ ಆತ್ಮಕ್ಕೂ ಘಾಸಿ ಮಾಡಿರಲೇಬೇಕು.
ಸಮಾಜವೆತ್ತ ಸಾಗುತ್ತಿದೆ? ನಾವೆಲ್ಲಿಗೆ ತಲುಪುತ್ತಿದ್ದೇವೆ? ಎಂಬ ಯೋಚನೆ ಸಾಮಾನ್ಯರಿಗೆ ಭಯ ಮೂಡಿಸದಿರ ಲಿಕ್ಕಿಲ್ಲ. ಮತಬೇಟೆಯೇ ಅಧಿಕಾರಿಗಳ/ರಾಜಕಾರಣಿಗಳ ಒಂದಂಶದ ಗುರಿಯಾದರೆ, ಸರಕಾರವೆಂಬುದು ಅಧಿಕಾರವಂತರು ವಿರೋಧಿಗಳ ಮೇಲೆ ಸವಾರಿ ಮಾಡುವ, ಇನ್ನೊಮ್ಮೆ ಆರಿಸಿ ಬರುತ್ತೇವೋ ಇಲ್ಲವೋ ಎಂಬಂತೆ ತಿಂದುಂಡು ಮುಗಿಸುವ ಸಾಧನವಾಗಿಬಿಟ್ಟರೆ ಶಾಂತಿ-ಸುಭಿಕ್ಷೆಯ ಮಾತೆಲ್ಲಿ ಉಳಿಯಬೇಕು? ‘ನಾನು ಪಾಠ ಕಲಿಸಿದ ವಿದ್ಯಾರ್ಥಿಗಳೇ ನಮ್ಮನೆಯ ಮೇಲಿನ ದಾಳಿಯಲ್ಲಿದ್ದರು.
ನಮಗಿಲ್ಲಿ ಯಾರ ಮೇಲೂ ದ್ವೇಷವಿಲ್ಲ. ಹೀಗೇಕಾಯ್ತೋ ಅರ್ಥವಾಗುತ್ತಿಲ್ಲ’ ಎಂಬ ನೋವಿನ ಮಾತುಗಳನ್ನು ವೃದ್ಧ ದಂಪತಿ ಆಡುತ್ತಿದ್ದುದು ಕೇಳಿದಾಗ, ಕುವೆಂಪು ಅವರು ಉಲ್ಲೇಖಿಸಿದ ‘ಹಿಂದೂ ಕ್ರೈಸ್ತ ಮುಸಲ್ಮಾನ, ಪಾರಸಿಕ ಜೈನರುದ್ಯಾನ’ ಎಂಬ ಸಾಮರಸ್ಯದ ಸಾಲುಗಳು ನಾಡಗೀತೆಗಷ್ಟೇ ಸೀಮಿ ತವೆನ್ನಿಸುವುದಿಲ್ಲವೇ? ಗೃಹಮಂತ್ರಿಗಳು ‘ಎಲ್ಲೋ ಅದೊಂದು ಸಣ್ಣಪುಟ್ಟ ಘಟನೆ’ ಎಂದರೆ, ಮುಖ್ಯಮಂತ್ರಿಗಳು ‘ಗಲಭೆಯೇ? ಎಲ್ಲದು?’ ಎನ್ನುತ್ತಿದ್ದಾರೆ. ಮತ್ತೋರ್ವ ಹಿರಿಯ ಮಂತ್ರಿಗಳು ‘ವಿಪಕ್ಷದ ಕಾರ್ಯಕರ್ತರುಗಳೇ ವೇಷಾಂತರಿಸಿಕೊಂಡು ಮತೀಯ ಗಲಭೆಯ ಕಿಡಿ ಹೊತ್ತಿಸಲು ಮಾಡಿದ ದುಷ್ಕೃತ್ಯ’ ಎಂದು ಸುಮ್ಮನಾಗುತ್ತಾರೆ.
ಜಿಲ್ಲಾ ಉಸ್ತುವಾರಿ ಮಂತ್ರಿಗಳಂತೂ, ‘ಅಯ್ಯೋ ಪಾಪ ಬಿಡಿ, ಮೆರವಣಿಗೆಯಲ್ಲಿ ಬಳಸಿದ ಕತ್ತಿ ನಕಲಿ, ರಟ್ಟಿನದು! ಸಮಾಜದ ಹಿರಿಯರು ತಿಳಿ ಹೇಳಿದ ನಂತರವೂ ಕೇಳದ ತಂಟೆಕೋರರು ಎಲ್ಲೆಡೆ ಇರುತ್ತಾರೆ. ಅದೇನೂ ದೊಡ್ಡವಿಷಯ ವಲ್ಲ’ ಎಂದು ತಿಪ್ಪೆಸಾರಿಸುವ ಧೂರ್ತವಾದ ಮುಂದಿಡುತ್ತಾರೆ. ಆರಕ್ಷಕರಿಗೇ ಬೆದರಿಸಿದ, ಕಲ್ಲುಹೊಡೆದ ವಿಡಿಯೋಗಳು ಹರಿದಾಡುತ್ತಿವೆ. ‘ತಮ್ಮನ್ನೇ ರಕ್ಷಿಸಿಕೊಳ್ಳುವ ಸ್ವಾತಂತ್ರ್ಯದಿಂದ ವಂಚಿತರಾಗಿರುವ ಆರಕ್ಷಕ ರಿಂದ ಸಮಾಜ ರಕ್ಷಣೆ ಹೇಗೆ ಬಯಸೋದು?’ ಎಂಬ ಪ್ರಶ್ನೆ ಮೂಡದಿರುತ್ತದೆಯೇ? ಆಡಳಿತದ ಚುಕ್ಕಾಣಿ ಹಿಡಿದ ಮಂತ್ರಿಗಳು, ವಂಧಿಮಾಗಧರ ಜಾಣನಿರ್ಲಕ್ಷ್ಯ ಒಂದುಕಡೆಯಾದರೆ, ವಿಪಕ್ಷದವರದ್ದು ಇನ್ನೊಂದು ದುರಂತ ಕಥೆ.
ನಿರಾಡಳಿತದಿಂದ, ಸ್ವಯಂ ಕೃತಾಪರಾಧಗಳಿಂದ ಎಳೆಸಿಕೊಂಡ ಆಘಾತಕಾರಿ ಸೋಲಿನ ಹೊಣೆ ಹೊರಲಾರದೇ, ತಮ್ಮನ್ನು ಸೋಲಿಸಿದ ಮತದಾರರು ಅನುಭವಿಸಲಿ ಎಂಬುದು ಅವರ ನಿಲುವಿದ್ದಂತಿದೆ. ಕರ್ನಾಟಕ ಬಿಜೆಪಿ ನಾಯಕರ ನಿರ್ಲಜ್ಜತೆಗೆ ಬಿಸಿಮುಟ್ಟಿಸಿ ನೆಟ್ಟಗೆ ಮಾಡುವ ಬದಲು ಬಿಜೆಪಿ ಹೈಕಮಾಂಡು ಕನ್ನಡಿಗರ ಮೇಲೆಯೇ ಸೇಡುತೀರಿಸಿಕೊಂಡು ಹುಸಿನಗೆ ಬೀರುತ್ತಿರುವಂತಿದೆ. ಕಾಂಗ್ರೆಸ್ ಜಯಭೇರಿಯ ನಂತರ ನಾಯಕನ ಆಯ್ಕೆಗೆ ತೆಗೆದುಕೊಂಡ ೧೦-೧೨ ದಿನಗಳನ್ನು ‘ಒಳಜಗಳ, ಅರಾಜಕತೆ’ ಎಂದು ಬಿಂಬಿಸಿ ಬೊಬ್ಬಿರಿದ ಶಿಸ್ತಿನ ಪಕ್ಷ ಬಿಜೆಪಿ, ವಿಪಕ್ಷ ನಾಯಕನ ಆಯ್ಕೆಯ ವೈಫಲ್ಯದ ಶತ ದಿನೋತ್ಸವವನ್ನು ಸಂಭ್ರಮಿಸಿ ಮುನ್ನುಗ್ಗುತ್ತಿದೆ!
ಚುನಾವಣಾಪೂರ್ವ ಸಾಮೂಹಿಕ ನಾಯಕತ್ವದ ಪರಿಪಾಠ ನೋಡಿದ್ದೆವಾದರೂ, ಚುನಾಯಿತ ಸರಕಾರವೊಂದನ್ನು ಸಾಮೂಹಿಕ ನಾಯಕತ್ವದ ಆಧಾರದಲ್ಲಿ ಮೈತ್ರಿಪೂರ್ವಕವಾಗಿ ವಿರೋಧಿಸುವ ಹೊಣೆಗಾರಿಕೆಯು ಕರ್ನಾಟಕ ಬಿಜೆಪಿಯ ಹೊಚ್ಚಹೊಸ ಚಾಣಕ್ಯ ತಂತ್ರ ಎನ್ನಲಡ್ಡಿಯಿಲ್ಲ! ವ್ಯವಸ್ಥೆ ಶಿಥಿಲಗೊಂಡಿದ್ದು ಇಂದಿನಿಂದೇ ಅಲ್ಲ; ಹಿಂದಿನ ಸರಕಾರಗಳ ಭರಪೂರ ಕೊಡುಗೆಗಳು ಶಾಂತಿ-ಸುವ್ಯವಸ್ಥೆಯನ್ನು ಶಿಥಿಲಗೊಳಿಸಿದ್ದು ಕರುನಾಡು ಒಪ್ಪಿಕೊಳ್ಳಲೇಬೇಕಾದ ದುರಂತ.
ತಂತಮ್ಮ ರಾಜಕೀಯ ಲಾಭಕ್ಕಾಗಿ, ಜಾತಿ-ಮತಗಳ ಧ್ರುವೀಕರಣಕ್ಕೆ ರಾಜಕೀಯ ಪಕ್ಷಗಳೆಲ್ಲವೂ ತುಪ್ಪ ಸುರಿದಿವೆ, ಸುರಿಯುತ್ತಲೇ ಇವೆ. ವಿಪಕ್ಷಗಳ ಅನುಯಾಯಿಗಳು ವೇಷಾಂತರದಿಂದ ಗಲಭೆ ಮಾಡಿದ್ದಾರೆ ಎನ್ನುವ ಸರಕಾರ, ಅಂಥವರನ್ನು ಬಂಧಿಸಿ ಸಂಚು ಬಯಲುಗೊಳಿಸಲಿ. ವಿಪಕ್ಷಗಳೂ, ಪಕ್ಷಾತೀತವಾಗಿ ಸ್ಥಳೀಯ ನಾಯಕರೆಲ್ಲರೂ ಆಯಾ ಸೂಕ್ಷ್ಮ ಪ್ರದೇಶಗಳಲ್ಲಿ ಸಾಮರಸ್ಯದ ಬೆಳವಣಿಗೆಯಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಲಿ. ಲೋಪದೋಷಗಳನ್ನೆತ್ತಿ ಸ್ಥಳೀಯ ಆಡಳಿತದ ಮುಂದೆ ತಂದು ಬಗೆಹರಿಸುವ ಬದ್ಧತೆ ತೋರಿಸಲಿ. ಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡುವುದು, ವಿಪಕ್ಷದ (?) ನಾಯಕರು ಸತ್ಯಶೋಧಿಸುವ ಪ್ರಹಸನ ನಡೆಸುವುದು! ಇಬ್ಬರೂ ತೊಂದರೆಗೊಳಗಾದವರಿಗೆ ಪರಿಹಾರ ಘೋಷಿಸಿ ಉಗ್ರಹೋರಾಟದ ನಾಟಕದೊಂದಿಗೆ ಮುನ್ನಡೆಯುವುದರಿಂದ ಪ್ರಯೋಜನವಿಲ್ಲ.
ಸಮಾಜದ ಸ್ವಾಸ್ಥ್ಯ, ಸಾಮರಸ್ಯ ಕಾಪಾಡುವ ಹೊಣೆಗಾರಿಕೆ ಅಧಿಕಾರವಂತರಿಗಷ್ಟೇ ಸೀಮಿತವಲ್ಲ; ಸ್ಥಳೀಯಾಡಳಿತ, ರಾಜಕೀಯ ವ್ಯವಸ್ಥೆಯ ಸರ್ವರಿಗೂ ಇರಲೇಬೇಕಾದ ಕನಿಷ್ಠ ಪೌರಪ್ರಜ್ಞೆ, ಬದ್ಧತೆ. ಮತ, ಸಿದ್ಧಾಂತ ಯಾವುದಾದರೂ ಸಾಮಾಜಿಕ ಸ್ವಾಸ್ಥ್ಯ ಕೆಡಿಸುವವರ  ಡೆಮುರಿಗೆ ಕಟ್ಟುವುದು ಸರಕಾರಗಳ ಗುರಿಯಾಗಿರಬೇಕು. ಎಲ್ಲವನ್ನೂ ಸಿಎಂ, ಡಿಸಿಎಂ, ಮಂತ್ರಿಮಂಡಲವೇ ಹದ್ದುಬಸ್ತಿಗೆ ತರಬೇಕೆಂಬ ಹುಚ್ಚುನಿರೀಕ್ಷೆ ನಮಗಿಲ್ಲ.
ಕರುನಾಡಿನ ನಿಕಟಪೂರ್ವ ಗೃಹಮಂತ್ರಿಗಳ ನಿಷ್ಪ್ರಯೋಜಕ ಕಠಿಣ ಕ್ರಮವೂ ಬೇಕಿಲ್ಲ! ಕಿಡಿಗೇಡಿಗಳನ್ನು ನಿರ್ದಾಕ್ಷಿಣ್ಯವಾಗಿ ನಿಯಂತ್ರಿಸಿ ಹದ್ದುಬಸ್ತಿ ನಲ್ಲಿಡುವ ಸ್ವಾತಂತ್ರ್ಯವನ್ನು ಸ್ಥಳೀಯ ಅಧಿಕಾರಿ ವರ್ಗ, ಆರಕ್ಷಕ ಪಡೆಗಳಿಗೆ ನೀಡಬೇಕಾದ್ದು ಸರಕಾರದ ಆದ್ಯಕರ್ತವ್ಯ. ನಾಗರಿಕರ ರಕ್ಷಣೆಗೆ ಸಮಾಜವೇ ಮುಂದಾಗಬೇಕು ಎಂದಾದರೆ ಚುನಾಯಿತ ಸರಕಾರವೇಕೆ ಬೇಕು?! ನಾಗರಿಕರೆಡೆಗಿನ ಆಳುಗರ ನಿರ್ಲಕ್ಷ್ಯ ಹೀಗೇ ಮುಂದುವರಿದರೆ, ಸಮಾಜವು ಅಂಥ ವ್ಯವಸ್ಥೆಯನ್ನೇ ನಿರ್ಲಕ್ಷಿಸುವ ಹಂತಕ್ಕೆ ತಲುಪಬೇಕಾದೀತು. ಅಂಥ ಅರಾಜಕತೆ ಕರುನಾಡಿನಲ್ಲಿ ಬಾರದಿರಲಿ. ನಮ್ಮ ರಾಜಕೀಯ ವ್ಯವಸ್ಥೆಯು ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಿಡುವ ಹೊಣೆಗಾರಿಕೆ ಮತ್ತು ಪ್ರಬುದ್ಧತೆಯನ್ನು ಬೆಳೆಸಿಕೊಳ್ಳಲಿ.
(ಲೇಖಕರು ಹವ್ಯಾಸಿ ಬರಹಗಾರರು)