ಯೆಹೂದಿಗಳಿಗೆ ಈಗ ಇಂಥ ಪರಿಸ್ಥಿತಿ ಒದಗಿದ್ದೇಕೆ ?
ವಿದ್ಯಮಾನ
ಡಾ.ಟಿ.ಎನ್.ವಾಸುದೇವಮೂರ್ತಿ
ಇಸ್ರೇಲಿನಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ತಮ್ಮ ಹಲವು ಪ್ರವಚನಗಳಲ್ಲಿ ಪ್ರಸ್ತಾಪಿಸಿರುವ ‘ಓಶೋ’ ರಜನೀಶ್ ‘ಈ ಹಿಂಸಾಚಾರಕ್ಕೆ ೨೦೦೦ ವರ್ಷಗಳ ಇತಿಹಾಸವಿದೆ’ ಎಂದಿದ್ದಾರೆ. ಅಂಥ ಪ್ರವಚನಗಳ ಸಾರವನ್ನು ಸಂಗ್ರಹಿಸಿ ಒಂದು ಲೇಖನದ ರೂಪದಲ್ಲಿ ಇಲ್ಲಿ ನೀಡಲಾ ಗಿದೆ. ಇದು ಇಂದಿನ ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಅತ್ಯಂತ ಪ್ರಸ್ತುತವೆನಿಸಬಹುದು.
ನಾಜಿ ಜರ್ಮನಿಯಲ್ಲಿ ಹಿಟ್ಲರ್‌ನ ಸೈನಿಕರು ಒಂದು ಊರಿಗೆ ನುಗ್ಗಿ ಒಂದು ಕಡೆಯಿಂದ ಯೆಹೂದಿಗಳನ್ನು ಕೊಲ್ಲುತ್ತಾ ಬರುತ್ತಿದ್ದರು. ಇದನ್ನರಿತ ಕೆಲವು ಯೆಹೂದಿಗಳು ಜೀವ ಉಳಿಸಿಕೊಳ್ಳಲು ಒಂದು ಚರ್ಚ್‌ನ ಒಳ ಹೊಕ್ಕರು. ಅಂದು ಭಾನುವಾರವಾಗಿದ್ದರಿಂದ ಚರ್ಚ್‌ನ ತುಂಬ ಕ್ರಿಶ್ಚಿಯನ್ನರೇ ತುಂಬಿದ್ದರು. ಕೆಲವು ಯೆಹೂದಿ ಗಳು ಚರ್ಚ್‌ನೊಳಗೆ ಅಡಗಿರುವ ಸುದ್ದಿಯನ್ನು ಹೇಗೋ ತಿಳಿದ ಸೈನಿಕರು ನೇರವಾಗಿ ಅಲ್ಲಿಗೆ ಬಂದು ‘ಪ್ರಾರ್ಥನೆನಿಲ್ಲಿಸಿ’ ಎಂದು ಮುಖ್ಯಪಾದ್ರಿಗೆ ಹೇಳಿದರು.
ಸೇನಾ ಮುಖ್ಯಸ್ಥ ಚರ್ಚ್‌ನ ವೇದಿಕೆಯನ್ನೇರಿ ‘ನೀವು ನಮ್ಮನ್ನು ಯಾಮಾರಿಸಲಾರಿರಿ, ನೀವಿಲ್ಲಿ ಅಡಗಿರುವುದು ಗೊತ್ತಾಗಿದೆ. ಇಲ್ಲಿ ಯಾರಾದರೂ ಯೆಹೂದಿಗಳಿದ್ದರೆ ಹೊರಹೋಗಿ ಸಾಲಾಗಿ ನಿಲ್ಲಿ. ನಮ್ಮಾಜ್ಞೆ ಪಾಲಿಸಿದರೆ ಕಡೇಪಕ್ಷ ನಿಮ್ಮ ಜೀವವಾದರೂ ಉಳಿಯುತ್ತದೆ. ಯಾರಾದರೂ ನಮಗೆ ಮೋಸ ಮಾಡಲು ಯತ್ನಿಸಿದರೆ ಅವರ ಹೆಣಬೀಳುತ್ತದೆ’ ಎಂದು ಬೆದರಿಸಿದ. ಯೆಹೂದಿಗಳು ಒಬ್ಬೊಬ್ಬರಾಗಿ ಹೊರಬಂದು ನಿಂತರು. ಚರ್ಚ್ ನಲ್ಲಿ ನೆರೆದಿದ್ದ ಕ್ರಿಶ್ಚಿಯನ್ನರಿಗೆಲ್ಲ ಗಾಬರಿಯಾಗುವ ಒಂದು ಘಟನೆ ನಡೆಯಿತು. ಇದ್ದಕ್ಕಿದ್ದಂತೆ ವೇದಿಕೆಯಲ್ಲಿ ಅಗ್ರಸ್ಥಾನ ದಲ್ಲಿ ನಿಲ್ಲಿಸಲಾಗಿದ್ದ ಯೇಸುವಿನ ಮೂರ್ತಿ ಕಾಣೆಯಾಗಿತ್ತು.
ಅವನೂ ಯೆಹೂದಿಯೇ ಆಗಿದ್ದರಿಂದ ಹೊರಗೆ ಸಾಲುಗಟ್ಟಿದ್ದ ಜನರ ಮಧ್ಯೆ ನಿಂತಿದ್ದ. ಪಶ್ಚಿಮದ ಧರ್ಮಗಳು ಶತಶತಮಾನಗಳಿಂದಲೂ ಅದೇಕೆ ಒಂದೇ ಸಮನೆ ಯುದ್ಧನಿರತವಾಗಿವೆ, ಹುಚ್ಚು ಹಿಡಿದವರಂತೆ ಒಬ್ಬರನ್ನೊಬ್ಬರು ಕೊಲ್ಲುತ್ತಿದ್ದಾರೆ? ಇವೆಲ್ಲ ಸುಲಭ ವಾಗಿ ಅರ್ಥವಾಗುವ ವಿಷಯವಲ್ಲ. ನಮ್ಮ ಪರಂಪರೆ ಜನ್ಮ ನೀಡುವ ಅತಿದೊಡ್ಡ ಅವತಾರ ಪುರುಷರೂ ಕೆಲವೊಮ್ಮೆ ಬಾಲಿಶವಾಗಿ ವರ್ತಿಸುತ್ತಾರೆ. ಯೇಸು ತಾನು ದೇವರ ಏಕಮಾತ್ರ ಪುತ್ರ ಎಂದು ಹೇಳಿಕೊಳ್ಳುತ್ತಿದ್ದರು. ಸಹಜವಾಗಿಯೇ ಇಂಥವರು ಬುದ್ಧ ಅಥವಾ ಮಹಾವೀರ ಅಥವಾ ಲಾವೊತ್ಸು, ಬೋಧಿಧರ್ಮ ಮುಂತಾದವರನ್ನು ತಮ್ಮ ಒಡಹುಟ್ಟಿದ ವರೆಂದಾಗಲಿ, ತಮ್ಮ ದಾಯಾದಿ ಸಹೋದರರೆಂದಾಗಲಿ ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ.
ಇವರದ್ದು ಬಹಳ ಮಡಿವಂತಿಕೆಯ ಕುಟುಂಬ ಮಾತ್ರವಲ್ಲ, ಬಹಳ ವಿಚಿತ್ರವಾದ ಕುಟುಂಬ ಎನಿಸುತ್ತದೆ. ಯೇಸುವಿನ ಕುಟುಂಬದಲ್ಲಿ ಮಹಿಳೆಯರೇ ಕಾಣಸಿಗುವುದಿಲ್ಲ. ಮಹಿಳೆಯೇ ಕುಟುಂಬದ ಕೇಂದ್ರ. ಹೆಂಗಸರಿಲ್ಲದ ಮನೆ ಒಂದು ಕಟ್ಟಡ ಎನಿಸಿಕೊಳ್ಳಬಹುದೇ ವಿನಾ ಕುಟುಂಬ ಎನಿಸುವುದಿಲ್ಲ. ಆದರೆ ಇವರ ಕುಟುಂಬದ ಮೂವರು ಸದಸ್ಯರು ಯಾರೆಂದರೆ ತಂದೆಯಾದ ದೇವರು, ಮಗನಾದ ಯೇಸು ಮತ್ತು ಪವಿತ್ರಾತ್ಮ. ಈ ಪವಿತ್ರಾತ್ಮ ಗಂಡೋ ಹೆಣ್ಣೋ ಗೊತ್ತಾಗುವುದಿಲ್ಲ. ಸ್ವಲ್ಪ ವಿವೇಚನೆಯುಳ್ಳ ಕ್ರಿಶ್ಚಿಯನ್ನರು ಈ ತ್ರಿಮೂರ್ತಿಗಳಲ್ಲಿ ಹೆಣ್ಣಿಗೆ ಸ್ಥಾನವೇ ಇಲ್ಲವಲ್ಲ ಎಂದು ಕೇಳುತ್ತಿದ್ದಾರೆ.
ಆದರೆ ಪುರುಷ ದುರಭಿಮಾನ ಹೆಣ್ಣಿಗೆ ಸ್ಥಾನ ನೀಡಲು ಒಪ್ಪುವುದಿಲ್ಲ. ಆ ಪವಿತ್ರ ಕುಟುಂಬದಲ್ಲಿ ಯೇಸುವಿಗೆ ಜನ್ಮವಿತ್ತ ತಾಯಿ ಮೇರಿಗೂ ಜಾಗವಿಲ್ಲ. ಇವರು ತಮ್ಮ ಬಳಗದವರನ್ನು ಬಿಟ್ಟರೆ ಅನ್ಯರಿಗೆ ದೈವೀಕ ಸ್ಥಾನ ನೀಡುವುದಿಲ್ಲ. ಇವರ ಈ ಧೋರಣೆಯೇ ಇಂದು ಇಸ್ರೇಲಿನಲ್ಲಿ ದೊಡ್ಡ ತಲೆನೋವಾ ಗಿದೆ. ಇಂದು ಇಡೀ ಮಧ್ಯಪ್ರಾಚ್ಯ ಏಷ್ಯಾದಲ್ಲಿ ಇಸ್ಲಾಂನ ಪ್ರಭಾವವಿದೆ. ಆದರೆ ಇಸ್ಲಾಂ ಹುಟ್ಟಿದ್ದು ೧೪೦೦ ವರ್ಷಗಳ ಹಿಂದೆ. ಕ್ರಿಶ್ಚಿಯಾನಿಟಿಗೆಅದಕ್ಕಿಂತಲೂ ಪ್ರಾಚೀನ ಇತಿಹಾಸವಿದೆ, ಕ್ರಿಶ್ಚಿಯಾನಿಟಿ ೨೦೦೦ ವರ್ಷಗಳಷ್ಟು ಹಳೆಯದು.
ಮಧ್ಯಪ್ರಾಚ್ಯ ಏಷ್ಯಾದ ಅರೆಬಿಕ್ ಪ್ರಪಂಚದಲ್ಲಿ ಮುಸಲ್ಮಾನರಿಗಿಂತಲೂ ಹಿಂದೆ ಯೆಹೂದಿಗಳು ನೆಲೆಸಿದ್ದರು. ಆಮೇಲೆ ಕ್ರಿಶ್ಚಿಯನ್ನರು ಬಂದು ನೆಲೆಸಲಾರಂಭಿಸಿದರು. ಅಲ್ಲೊಂದು ಕಲ್ಲಿನ ಗುಮ್ಮಟವಿದೆ (ಡೂಮ್ ಆಫ್ ರಾಕ್). ಅದು ಜೆರುಸಲೇಂನಲ್ಲಿ ಸೋಲೋಮಾನ್ ದೊರೆ ಕಟ್ಟಿಸಿದ ಪ್ರಧಾನ ಯೆಹೂದಿ ದೇವಾಲಯದ ಮುಖ್ಯಭಾಗ. ಈ ದೇವಸ್ಥಾನವನ್ನು ಯೆಹೂದ್ಯೇತರ ಶಕ್ತಿಗಳು ಬಹಳ ಹಿಂದೆಯೇ ಧ್ವಂಸ ಮಾಡಿದ್ದರಾದರೂ ಕಲ್ಲು ಬಂಡೆ ಮಾತ್ರ ಭಗ್ನಗೊಳ್ಳದೆ ಉಳಿಯಿತು. ಈಗ ಯೆಹೂದಿಗಳು ಅದು ತಮ್ಮ ಪವಿತ್ರ ಯಾತ್ರಾಸ್ಥಳವೆನ್ನುತ್ತಿದ್ದಾರೆ.
ಇನ್ನು ಕ್ರಿಶ್ಚಿಯನ್ನರೂ ‘ಯೇಸುವನ್ನು ಈ ಶಿಲೆಯ ಮೇಲೇ ಶಿಲುಬೆಗೇರಿಸಿದ್ದು, ಹಾಗಾಗಿ ಇದು ನಮ್ಮದು’ ಎನ್ನುತ್ತಾರೆ. ಇವರಿಬ್ಬರು ಸಾಲದೆಂದು ೩ನೇಪ್ರತಿಸ್ಪಽಯಾದ ಮುಸ್ಲಿಮರೂ ಈ ಶಿಲೆ ತಮ್ಮ ಪೂಜಾಸ್ಥಳವೆಂದು ಹೇಳುತ್ತಾರೆ. ಯೇಸು ತೀರಿಕೊಂಡು ೬೦೦ ವರ್ಷಗಳಾದ ಮೇಲೆ ಪೈಗಂಬರ್ ಅರಬ್ ಜಗತ್ತಿನಲ್ಲಿ ಹೊಸ ಧರ್ಮವನ್ನು ಸ್ಥಾಪಿಸಿದರು. ಏಕೆಂದರೆ ಅಲ್ಲಿಯವರೆಗೆ, ಅರಬ್ಬರಿಗೆ ಅವರದ್ದೇ ಆದ ಧರ್ಮವಿರಲಿಲ್ಲ. ಅರಬ್ಬರು ಅಲೆಮಾರಿಗಳು. ಪೈಗಂಬರ್ ಅರಬ್ಬರನ್ನೆಲ್ಲ ಒಗ್ಗೂಡಿಸಿ ‘ಇಸ್ಲಾಂ’ ಎಂಬ ಹೊಸ ಧರ್ಮ ಸ್ಥಾಪಿಸಿದರು, ತಮ್ಮಿಡೀ ಆಯುಷ್ಯವನ್ನು ಯುದ್ಧದಲ್ಲಿ ಕಳೆದುಬಿಟ್ಟರು.
ವಿಪರ್ಯಾಸವೆಂದರೆ ಅವರ ಖಡ್ಗದ ಮೇಲೆ ‘ಶಾಂತಿಯೇ ನನ್ನ ಸಂದೇಶ’ ಎಂದು ಕೆತ್ತಲಾಗಿತ್ತು. ಆದರೆ ಪೈಗಂಬರರ ಶಾಂತಿಗೆ ಕೆಲವು ನಿಬಂಧನೆ ಗಳಿದ್ದವು. ಇಡೀ ಜಗತ್ತು ಇಸ್ಲಾಂಗೆ ಮತಾಂತರವಾದಾಗಲಷ್ಟೇ ಜಗತ್ತಿನಲ್ಲಿ ಶಾಂತಿಸ್ಥಾಪನೆ ಆಗುತ್ತದಂತೆ! ಶಾಂತಿಸ್ಥಾಪನೆಗಾಗಿ ಶಾಂತಿದೂತನು ತನ್ನಿಡೀ ಜೀವಿತವನ್ನು ಕೊಲೆ, ರಕ್ತಪಾತಗಳಿಗೆ ಮೀಸಲಿಡುವುದೇ!? ಪೈಗಂಬರ್ ಸ್ವರ್ಗಲೋಕಕ್ಕೆ ಸಶರೀರವಾಗಿಯೇ ಪ್ರಸ್ಥಾನಿಸಿದರು. ಅದೂ ಒಬ್ಬರೇ ಅಲ್ಲ, ತಾವು ಕುಳಿತಿದ್ದ ಕುದುರೆಯ ಸಮೇತ! ಹಾಗೆ ಗಗನಮಾರ್ಗದಲ್ಲಿ ತೆರಳುವ ಮುನ್ನ ಆ ಕಲ್ಲುಬಂಡೆಯ ಮೇಲೆ ಸ್ವಲ್ಪ ಹೊತ್ತು ವಿಶ್ರಮಿಸಿದ್ದರಂತೆ. ಈ ರೀತಿ ಆ ಬಂಡೆ ಮೂರೂ ಧರ್ಮಗಳ ನಡುವಿನ ಘರ್ಷಣೆಯ ಕೇಂದ್ರವಾಗಿದೆ.
ಕಳೆದ ಒಂದೂವರೆ ಸಾವಿರ ವರ್ಷಗಳಿಂದ ಆ ಬಂಡೆಗಾಗಿ ಈ ಮೂರೂ ಧರ್ಮೀಯರ ನಡುವೆ ಕೊಲೆ ಹಿಂಸಾಚಾರ ನಡೆಯುತ್ತಲೇ ಇದೆ. ೨ನೇ ಮಹಾ ಯುದ್ಧ ಮುಗಿದ ಮೇಲೆ ಬ್ರಿಟನ್ ಮತ್ತು ಅಮೆರಿಕ (ಎರಡೂ ಕ್ರಿಶ್ಚಿಯನ್ ದೇಶಗಳು) ಈ ವ್ಯಾಜ್ಯವನ್ನಿಟ್ಟುಕೊಂಡು ಯೆಹೂದಿಗಳ ವಿರುದ್ಧ ಕೆಟ್ಟ ರಾಜಕೀಯ ಮಾಡಿದವು. ಯೆಹೂದಿಗಳು ಜಗತ್ತಿನಲ್ಲಿ ಅತಿಹೆಚ್ಚು ಯಾತನೆ ಅನುಭವಿಸಿದ ಜನಾಂಗ. ಇದಕ್ಕೆ ಅವರೂ ಸ್ವಲ್ಪಮಟ್ಟಿಗೆ ಕಾರಣಕರ್ತರೇ. ‘ಈ ಜಗತ್ತನ್ನು ಆಳಲು ಭಗವಂತ ನಮ್ಮನ್ನು ಆಯ್ಕೆ ಮಾಡಿದ್ದಾನೆ. ನಾವು ಉಳಿದ ಜನಾಂಗ ಗಳಿಗಿಂತ ಶ್ರೇಷ್ಠರು’ ಎಂದು ಅವರು ಹೇಳಿಕೊಳ್ಳುತ್ತಿದ್ದರು.
ಇದುವೇ ಅವರ ದುರಂತಕ್ಕೆ ಕಾರಣ. ಒಂದು ಜನಾಂಗ ಹೀಗೆ ಹೇಳಿಕೊಂಡಾಗ ಸಹಜವಾಗೇ ಅನ್ಯ ಜನಾಂಗಗಳು ಕೆರಳುತ್ತವೆ. ಆದ್ದರಿಂದ ಪ್ರತಿ ಜನಾಂಗ ವೂ ಯೆಹೂದಿಗಳನ್ನು ಬರ್ಬರವಾಗಿ ಹತ್ಯೆಮಾಡುತ್ತ ಬಂದಿತು. ಅಡಾಲ್ ಹಿಟ್ಲರ್ ಒಬ್ಬನೇ ೬ ಮಿಲಿಯನ್ ಗೂ ಅಧಿಕ ಸಂಖ್ಯೆಯ ಯೆಹೂದಿಗಳನ್ನು ಹತ್ಯೆಗೈದ. ಆದರೆ ೨ನೇ ಮಹಾಯುದ್ಧದ ಕೊನೆಕೊನೆಗೆ ಬ್ರಿಟನ್ -ಅಮೆರಿಕ ಸೇರಿಕೊಂಡು ಹಿಟ್ಲರ್‌ಗಿಂತಲೂ ಹೀನಾಯ ಕೆಲಸ ಮಾಡಿತು. ಅವರು ಮಾಡಿದ ಕುತಂತ್ರ ಯೆಹೂದಿಗಳಿಗೇ ಅರ್ಥವಾಗಲಿಲ್ಲ.
೨ನೇ ಮಹಾಯುದ್ಧ ಮುಗಿದ ಮೇಲೆ ಜೆರುಸಲೇಂ ಅನ್ನು ಬ್ರಿಟನ್ ಮತ್ತು ಅಮೆರಿಕ ತಮ್ಮ ವಶಕ್ಕೆ ತೆಗೆದುಕೊಂಡವು. ಪ್ಯಾಲೆಸ್ತೀನ್‌ಗೆ ಸೇರಿದ ಆ ಭಾಗಮುಸಲ್ಮಾನರು ಬಹುಸಂಖ್ಯೆಯಲ್ಲಿದ್ದ ಪ್ರಾಂತ್ಯವಾಗಿತ್ತು. ಯುದ್ಧ ಮುಗಿದ ಕೂಡಲೆ ‘ಡೂಮ್ ಆಫ್ ರಾಕ್’ ದೇಗುಲವಿದ್ದ ಪ್ರಾಂತ್ಯಕ್ಕೆ ಅಮೆರಿಕ ಶಸಸಜ್ಜಿತ ಮಿಲಿಟರಿಯನ್ನು ಕಳುಹಿಸಿ ಇಸ್ರೇಲನ್ನು ಯೆಹೂದಿಗಳಿಗೆಂದೇ ಮೀಸಲಾದ ಪ್ರತ್ಯೇಕ ರಾಷ್ಟ್ರವೆಂದು ಘೋಷಿಸಿತು. ಯೆಹೂದಿಗಳಿಗೆ ಇಂಥ ಪ್ರತ್ಯೇಕ ರಾಷ್ಟ್ರ ಶತಮಾನಗಳಿಂದಲೂ ಅಸ್ತಿತ್ವದಲ್ಲಿರಲಿಲ್ಲ. ಹಿಂದೆಂದೋ ಮೋಸೆಸ್‌ನ ಕಾಲದಲ್ಲಿ ಯೆಹೂದಿಗಳ ದೇಶವೊಂದಿತ್ತು, ಆದರೆ ಮುಸಲ್ಮಾ ನರು ತಲೆಯೆತ್ತಿದ ಮೇಲೆ ಅವರು ತಮ್ಮ ತಾಯ್ನೆಲವನ್ನು ಕಳೆದುಕೊಂಡರು.
ಮುಸಲ್ಮಾನರು ಆಕ್ರಮಿಸಿಕೊಂಡ ಪ್ರಾಂತ್ಯವನ್ನು ಮತ್ತೆ ವಶಕ್ಕೆ ಪಡೆಯಲು ಕ್ರಿಶ್ಚಿಯನ್ನರು ಮತ್ತು ಯೆಹೂದಿಗಳು ಸತತವಾಗಿ ಯತ್ನಿಸಿದರೂ ಯಶಸ್ವಿ ಯಾಗಲಿಲ್ಲ. ಏಕೆಂದರೆ ಮುಸ್ಲಿಮರು ಆಕ್ರಮಿಸಿಕೊಂಡಿದ್ದ ಪ್ರಾಂತ್ಯದಲ್ಲಿ ಶೇ.೬ರಷ್ಟು ಜನಸಂಖ್ಯೆ ಯೆಹೂದಿಗಳದ್ದಾಗಿತ್ತು, ಉಳಿದ ಶೇ.೯೪ರಷ್ಟು ಜನಸಂಖ್ಯೆ ಮುಸ್ಲಿಮರದ್ದಾಗಿತ್ತು. ಇಷ್ಟು ಅಲ್ಪಸಂಖ್ಯಾತ ಜನಾಂಗಕ್ಕೆ ಸಹಜವಾಗಿಯೇ ಇಸ್ರೇಲನ್ನು ತನ್ನ ಸಾಮ್ರಾಜ್ಯವೆಂದು ಘೋಷಿಸಿಕೊಳ್ಳಲುಸಾಧ್ಯವಾಗುವುದಿಲ್ಲ.
ಆದರೆ ಅಮೆರಿಕ ಶಸ್ತ್ರಾಸ್ತ್ರ ಬಲವನ್ನು ಉಪಯೋಗಿಸಿ ಬಲವಂತದಿಂದ ಇಸ್ರೇಲನ್ನು ಯೆಹೂದಿಗಳ ಸ್ವತಂತ್ರ ರಾಷ್ಟ್ರವೆಂದು ಘೋಷಿಸಿತು. ಅದು ಹೀಗೆ ಮಾಡಿದ್ದು ಯೆಹೂದಿಗಳ ಮೇಲಿನ ಕರುಣೆಯಿಂದಲ್ಲ. ಇದು ಅವರ ಧ್ವಂಸಕ್ಕೆ ಅಮೆರಿಕ ರೂಪಿಸಿದ ಯುದ್ಧತಂತ್ರ ವಾಗಿತ್ತು. ಈ ಕುಟಿಲತೆ ಪ್ರಪಂಚದಲ್ಲಿ ಯಾರೊಬ್ಬರಿಗೂ ಗೊತ್ತಾಗಲಿಲ್ಲ. ಕುದಿವ ಎಣ್ಣೆಯ ಕೊಪ್ಪರಿಗೆಯಲ್ಲಿ ಯೆಹೂದಿಗಳು ಶಾಶ್ವತವಾಗಿ ಬೇಯುವಂತೆ ಮಾಡುವುದು ಅಮೆರಿಕ-ಬ್ರಿಟನ್ನಿನ ಗುಪ್ತ ಯೋಜನೆಯಾಗಿತ್ತು. ಇದೊಂದು ಚಾಣಾಕ್ಷ ರಾಜತಾಂತ್ರಿಕ ನಿರ್ಣಯ ವಾಗಿತ್ತು. ಏಕೆಂದರೆ ಈ ನಿರ್ಧಾರದಿಂದ ಯೆಹೂದಿಗಳಿಗೂ ಸಂತಸವಾಗಿತ್ತು. ಹೀಗೆ ಅಮೆರಿಕ ಒಂದೇ ಕಲ್ಲಿಗೆ ೨ ಹಕ್ಕಿಗಳನ್ನು ಕೊಂದಿತು.
ಅಮೆರಿಕದಲ್ಲಿ ಯೆಹೂದಿಗಳು ಅತ್ಯಂತ ಶ್ರೀಮಂತ ಪ್ರಜೆಗಳಾಗಿದ್ದು ಅಮೆರಿಕನ್ ಕಾಂಗ್ರೆಸ್ ಮೇಲೆ ಸಂಪೂರ್ಣ ಪ್ರಾಬಲ್ಯ ಹೊಂದಿದ್ದಾರೆ. ರಾಜಕಾರಣಿ ಗಳು ಶ್ರೀಮಂತರ ದೇಣಿಗೆ ನೆಚ್ಚಿ ಚುನಾವಣೆಗೆ ನಿಲ್ಲುವುದರಿಂದ ಅಮೆರಿಕದಲ್ಲಿ ಯೆಹೂದಿಗಳದ್ದೇ ಆದ ದೊಡ್ಡ ಲಾಬಿಯಿದೆ. ಹಾಗಾಗಿ ಶ್ರೀಮಂತ ಯೆಹೂದಿಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ಅಮೆರಿಕನ್ನರು ಯೆಹೂದಿಗಳಿಗಾಗಿ ಪ್ರತ್ಯೇಕ ರಾಷ್ಟ್ರ ನಿರ್ಮಿಸಿ ಕೊಟ್ಟಿದ್ದರಾದರೂ ಮುಸಲ್ಮಾನರನ್ನು ನಿಗ್ರಹಿಸಿ ಆ ರಾಷ್ಟ್ರವನ್ನು ನಿರ್ಮಿಸಲಾಗಿತ್ತು. ಇಂಥ ನಿಗ್ರಹವನ್ನು ಯಾವುದೇ ಜನಾಂಗ ಸಹಿಸುವುದಿಲ್ಲ. ಮೊದಲೇ ಫ್ಯಾಸಿಸ್ಟ್ ಧೋರಣೆಯವರಾದ ಮುಸಲ್ಮಾನರಂತೂ ಇದನ್ನು ತಮಗಾದ ಅವಮಾನವೆಂದೇ ಭಾವಿಸಿ ಯೆಹೂದಿಗಳ ಮೇಲೆ ಯುದ್ಧ ಘೋಷಿಸಿದರು. ಅಂದು ಪ್ರಾರಂಭವಾದ ಕದನ ಇಂದಿಗೂ ಮುಂದುವರಿದೇ ಇದೆ!
ಈಗ ಇಸ್ರೇಲ್ ತನ್ನ ಉಳಿವಿಗಾಗಿ ಅಮೆರಿಕದಿಂದ ಯುದ್ಧಶಸ್ತ್ರಗಳನ್ನು ಖರೀದಿಸಬೇಕಾಗಿದೆ. ಅಮೆರಿಕದ ಯೆಹೂದಿಗಳು ಇಸ್ರೇಲಿನ ತಮ್ಮ ಬಾಂಧವರ ಉಳಿವಿಗಾಗಿ ಮಿಲಿಯನ್‌ಗಟ್ಟಲೆ ಡಾಲರುಗಳನ್ನು ಅಮೆರಿಕನ್ ಸರಕಾರಕ್ಕೆ ಸುರಿಯುತ್ತಿದ್ದಾರೆ. ಹೀಗೆ ಅಮೆರಿಕ ಹಿಟ್ಲರ್‌ಗಿಂತಲೂ ಹೆಚ್ಚಿನ ಸಂಖ್ಯೆಯ ಯೆಹೂದಿಗಳನ್ನು ಕೊಲ್ಲುವಲ್ಲಿ ಯಶಸ್ವಿಯಾಗಿದೆ. ಹಿಟ್ಲರ್ ಆದರೂ ಒಂದೇ ಹೊಡೆತಕ್ಕೆ ಅವರನ್ನು ಕೊಂದ. ಆದರೆ ಅಮೆರಿಕ ಇಸ್ರೇಲಿನಲ್ಲಿ ಒಬ್ಬನೇ ಒಬ್ಬ ಯೆಹೂದಿ ಉಳಿಯದ ಹಾಗೆ ಶತಮಾನ ಗಳವರೆಗೂ ನಿರಂತರ ಯುದ್ಧ ನಡೆವ ಹಾಗೆ ಶಾಶ್ವತ ಕಾರ್ಯಯೋಜನೆ ರೂಪಿಸಿದೆ. ಈ ಕುಟಿಲತಂತ್ರದ ಬಗ್ಗೆ ಯೆಹೂದಿಗಳ ಪರಮ ಮೇಧಾವಿ ಯಾದ ಮಾರ್ಟಿನ್ ಬೂಬರ್‌ಗೆ ಕಿಂಚಿತ್ತೂ ಅನುಮಾನ ಬರಲಿಲ್ಲ ವೆಂದರೆ ಇನ್ನೇನು ಹೇಳಬೇಕು? ಅಮೆರಿಕ ಮತ್ತು ಇಂಗ್ಲೆಂಡ್ ಎಂದಿಗೂ ಯೆಹೂದಿ ಗಳ ಹಿತೈಷಿಗಳಾಗಲಾರವು. ಅದಕ್ಕೆ ವ್ಯಾಟಿಕನ್ ಸಿಟಿಯೇ ಪ್ರಮಾಣ.
ಈಗಲೂ ಇಸ್ರೇಲ್ ಒಂದು ಸ್ವತಂತ್ರರಾಷ್ಟ್ರ ಎಂದು ವ್ಯಾಟಿಕನ್ ಅನುಮೋದಿಸಿಲ್ಲ. ಒಂದೆಡೆ ಕ್ರಿಶ್ಚಿಯಾನಿಟಿ ಅದಕ್ಕೆ ಅಧಿಕೃತವಾಗಿ ಒಂದು ರಾಷ್ಟ್ರದ ಸ್ಥಾನಮಾನ ನೀಡದೇ ಮುಗುಮ್ಮಾಗಿದೆ, ಮತ್ತೊಂದೆಡೆ ಇದೇ ಕ್ರಿಶ್ಚಿಯಾನಿಟಿ ಶತ್ರುಗಳ ನೆಲದಲ್ಲಿ ಯೆಹೂದಿಗಳಿಗೆ ಒಂದು ಪ್ರತ್ಯೇಕ ರಾಷ್ಟ್ರ ನಿರ್ಮಿಸಿಕೊಟ್ಟು ಉಪಕರಿಸುವ ಸೋಗುಹಾಕಿದೆ. ಇಸ್ರೇಲಿನಲ್ಲಿ ಬಹುಸಂಖ್ಯಾತರಾದ ಮುಸಲ್ಮಾನರ ಕೈಗೆ ಸಿಲುಕಿ ಬಡಪಾಯಿ ಯೆಹೂದಿಗಳು ಸತ್ತೇ ಸಾಯುತ್ತಾರೆ.ಒಬ್ಬ ಮನುಷ್ಯನನ್ನು ಒಂದೇ ಒಂದು ಸಲ ಶಿಲುಬೆ ಗೇರಿಸಿದ ತಪ್ಪಿಗೆ ೨೦೦೦ ವರ್ಷಗಳಿಂದ ಮುಗ್ಧ ಯೆಹೂದಿಗಳು ಶಿಲುಬೆ ಏರುತ್ತಲೇ ಇದ್ದಾರೆ. ಅಂದು ಅಮಾಯಕ ಯೇಸು ತಮ್ಮ ಸಮಕಾಲೀನರ ಕೈಲಿ ಸತ್ತರೆ, ಇಂದು ಅಮಾಯಕ ಯೆಹೂದಿಗಳಿಗೂ ಅದೇ ಗತಿಯಾಗಿದೆ.
ಬರೀ ಇಸ್ರೇಲಿನಲ್ಲಲ್ಲ ರಷ್ಯಾ, ಜರ್ಮನಿ ಇತ್ಯಾದಿ ಯಾವೆಲ್ಲ ಕ್ರಿಶ್ಚಿಯನ್ ರಾಷ್ಟ್ರಗಳಲ್ಲಿ ಅವರು ನೆಲೆಸಿರುವರೋ ಆ ಎಲ್ಲೆಡೆ ಅವರು ಕಿರುಕುಳ ಅನುಭವಿಸುತ್ತಲೇ ಇದ್ದಾರೆ. ಈಗ ಇಸ್ರೇಲ್ ಕಟ್ಟಕಡೆಯ ರಣತಂತ್ರವಾಗಿದೆ. ಇಸ್ರೇಲ್ ಎಂಬ ದೇಶ ಮತ್ತೊಮ್ಮೆ ಪೂರ್ತಿಯಾಗಿ ಇಲ್ಲವಾಗಿ ಹೋಗುವವ ರೆಗೂ ಈ ರಣತಂತ್ರ ಜಾರಿಯಲ್ಲಿರುತ್ತದೆ. ಇಸ್ರೇಲಿನ ಜನನ ಅಸಲಿಗೆ ಯೆಹೂದಿಗಳನ್ನು ನಾಶಪಡಿಸಲು ಕ್ರಿಶ್ಚಿಯನ್ ರಾಜಕಾರಣಿಗಳು ಮಾಡಿದ ಕುತಂತ್ರವೆಂದು ಅಮೆರಿಕದ ಯಾವ ರಾಜಕೀಯ ಚಿಂತಕನೂ ಈತನಕ ಯೋಚಿಸಿದಂತಿಲ್ಲ. ಅವರು ನೇರವಾಗಿ ನಾಶಮಾಡುವುದಿಲ್ಲ, ತಮ್ಮ ಉದ್ದೇಶ ವನ್ನು ಮುಸಲ್ಮಾನರ ಮೂಲಕ ಈಡೇರಿಸಿಕೊಂಡು ತಾವು ಮಾತ್ರ ‘ನೋಡಿ, ನಾವು ಶತ್ರುಗಳಿಗೂ ಉಪಕರಿಸಲು ಸಿದ್ಧರಿದ್ದೇವೆ’ ಎಂದು ಜಗತ್ತಿನೆದುರು ಮುಖವಾಡ ತೋರಿಸಲು ಈ ಕುತಂತ್ರವನ್ನು ಹೆಣೆದಿದ್ದಾರೆ.
ಒಂದರ್ಥದಲ್ಲಿ ‘ಶತ್ರುವನ್ನೂ ಪ್ರೀತಿಸಿ’ ಎಂಬ ಯೇಸುವಿನ ಸಂದೇಶವನ್ನು ಪಾಲಿಸಿದ್ದಾರೆ. ಒಂದೆಡೆ ಕಳಪೆ ಶಸ್ತ್ರಾಸ್ತ್ರಗಳನ್ನು ಸಮುದ್ರಕ್ಕೆ ಎಸೆಯುವ ಬದಲು ಇಸ್ರೇಲಿಗೆ ದುಬಾರಿ ಬೆಲೆಗೆ ಸಾಗಿಸುತ್ತಿದ್ದಾರೆ. ಮತ್ತೊಂದೆಡೆ ಅಮೆರಿಕದ ರಾಜಕಾರಣಿಗಳು ‘ನಾವು ಇಸ್ರೇಲಿನಲ್ಲಿರುವ ನಿಮ್ಮ ಬಾಂಧವರಿಗೆ ನೆರವಾಗುತ್ತಿದ್ದೇವೆ’ ಎಂದು ನಂಬಿಸಿ ಅಮೆರಿಕದ ಶ್ರೀಮಂತ ಯೆಹೂದಿಗಳನ್ನು ನಂಬಿಸಿ ಅವರಿಂದ ಹಣ ಪಡೆಯುತ್ತಿದ್ದಾರೆ.
ಇಸ್ರೇಲಿನಲ್ಲಿ ಯೆಹೂದಿಗಳು ನಿಜಕ್ಕೂ ಸಂಕಟದಲ್ಲಿದ್ದಾರೆ. ಅಲ್ಲಿ ಕೆಲವು ಯೆಹೂದಿಗಳು ಅತ್ಯಂತ ಪ್ರಾಚೀನ ಕಾಲದಿಂದ, ಮೋಸೆಸ್‌ನ ಕಾಲದಿಂದಲೂ ನೆಲೆಸಿದ್ದಾರೆ. ಅವರು ಹೊರಜಗತ್ತನ್ನೇ ಇದುವರೆಗೂ ನೋಡಿಲ್ಲ. ಈಗಲೂ ೪೦೦೦ ವರ್ಷಗಳಷ್ಟು ಹಿಂದುಳಿದಿದ್ದಾರೆ. ಯೆಹೂದಿಗಳ ಮತ್ತೊಂದು ಗುಂಪು ಇಸ್ರೇಲಿನಿಂದ ಹೊರಗೆ ನೆಲೆಸಿದೆ. ಅವರು ಇಸ್ರೇಲಿನ ಆ ಕೆಲವು ಯೆಹೂದಿಗಳಷ್ಟು ಸಂಪ್ರದಾಯಸ್ಥರಲ್ಲ. ಇನ್ನು ೩ನೇ ಗುಂಪೊಂದು ಅಮೆರಿಕ ದಲ್ಲಿ ನೆಲೆಸಿದೆ. ಅವರಿಗೆ ಯೆಹೂದಿ ಧರ್ಮವೆಂದರೆ ಏನೆಂದೇ ಗೊತ್ತಿಲ್ಲ. ಈ ಕಾರಣಗಳಿಂದ ಇಂದು ಯೆಹೂದಿಗಳು ತಮ್ಮ ತಮ್ಮಲ್ಲೇ ಕಿತ್ತಾಡುವಂತಾ ಗಿದೆ. ಮುಸ್ಲಿಮರಂತೂ ಹಿಂದಿನಿಂದಲೂ ಯೆಹೂದಿಗಳ ಕಗ್ಗೊಲೆ ಮಾಡಿಕೊಂಡೇ ಬಂದಿದ್ದಾರೆ.
ಆದರೆ ಈಗ ಇಸ್ರೇಲಿನ ಸಂಪ್ರದಾಯಸ್ಥ ಯೆಹೂದಿಗಳೂ ಆಧುನಿಕ ಯೆಹೂದಿಗಳ ಹತ್ಯೆಗೆ ತೊಡಗಿದ್ದಾರೆ. ಐರೋಪ್ಯ ಹಾಗೂ ಅಮೆರಿಕನ್ ಯೆಹೂದಿ ಗಳಿಗೆ ‘ನೀವು ಯೆಹೂದಿಗಳಲ್ಲ, ನಿಮ್ಮ ಜಾಗಕ್ಕೆ ಹಿಂದಿರುಗಿ, ಮೊದಲು ಇಲ್ಲಿಂದ ತೊಲಗಿ’ ಎಂದು ಆಗ್ರಹಿಸುತ್ತಿದ್ದಾರೆ. ಸಣ್ಣ ಪುಟ್ಟ ಕಾರಣಗಳಿಗೂ ಹಿಂಸಾಚಾರಕ್ಕಿಳಿಯುತ್ತಿದ್ದಾರೆ. ಈಗಂತೂ ಪರಿಸ್ಥಿತಿ ಇನ್ನೂ ಬಿಗಡಾಯಿಸಿದೆ. ಯೆಹೂದಿ ಗಳು ತಮ್ಮ ತಮ್ಮಲ್ಲೇ ಕಿತ್ತಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಮುಸಲ್ಮಾನರು ಜಗತ್ತಿನೆಲ್ಲ ಭಾಗಗಳಲ್ಲೂ ಉಗ್ರವಾದಿಗಳಾಗಿ ತಯಾರಾಗುತ್ತಿದ್ದು ಯೆಹೂದಿ ರಾಜ್ಯದ ಅಡಿಪಾಯವನ್ನೇ ನಾಶಮಾಡಲು ನಿಂತಿದ್ದಾರೆ. ವ್ಯಾಟಿಕನ್ ಸಹ ಇಸ್ರೇಲ್ ಒಂದು ಸ್ವತಂತ್ರ ರಾಷ್ಟ್ರವೆಂದು ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಇದು ಕ್ರಿಶ್ಚಿಯನ್ ಮೂಲಭೂತವಾದಿಗಳ ಮನಸ್ಥಿತಿಯ ದ್ಯೋತಕ.
(ಲೇಖಕರು ಸಹ ಪ್ರಾಧ್ಯಾಪಕರು, ಆದಿಚುಂಚನಗಿರಿವಿಶ್ವವಿದ್ಯಾಲಯ)