ಸಮಾಜ ಸೇವೆಗೆ ಹೊಸ ಭಾಷ್ಯ ಬರೆದ ಸಂಜೀವ್ ಮೆಹ್ತಾ
ಸಂಗತ
ವಿಜಯ್ ದರಡಾ
ಸಾಮಾನ್ಯವಾಗಿ ನಾನು ಈ ಅಂಕಣದಲ್ಲಿ ಯಾವುದೇ ವ್ಯಕ್ತಿಯ ಬಗ್ಗೆ ಬರೆಯಲು ಹೋಗುವುದಿಲ್ಲ. ಈ ಹಿಂದೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಬಗ್ಗೆ ಮಾತ್ರ ಬರೆದಿದ್ದೆ. ಕೆಲ ವ್ಯಕ್ತಿಗಳು ಇರುತ್ತಾರೆ; ಅವರ ಬಗ್ಗೆ ಬರೆಯದೇ ಇರಲು ಆಗುವುದಿಲ್ಲ. ಅವರು‘ಔಟ್ ಆಫ್ ದಿ ಬಾಕ್ಸ್’ ಯೋಚಿಸಿ, ಯಶಸ್ಸಿನ ಹೊಸ ಅಧ್ಯಾಯಗಳನ್ನೇ ಬರೆಯುತ್ತಾರೆ. ಅಂಥ ಒಬ್ಬ ಸಾಧಕ ಸಂಜೀವ್ ಮೆಹ್ತಾ ಅವರಿಗೆ ಈ ಅಂಕಣವನ್ನು ಅರ್ಪಿಸುತ್ತಿದ್ದೇನೆ. ಸ್ಪೂರ್ತಿದಾಯಕ ನಾಯಕತ್ವಕ್ಕೆ ಅವರೊಂದು ಅದ್ಭುತ ಉದಾಹರಣೆ.
ಕಾರ್ಪೊರೇಟ್ ಜಗತ್ತಿನಲ್ಲಿ ಸಂಜೀವ್ ಮೆಹ್ತಾ ಚಿರಪರಿಚಿತ ಹೆಸರು. ಸೃಜನಶೀಲ ಚಿಂತನೆಗಳಿಗೆ ಹಾಗೂ ಯಾರಿಗೂ ಹೊಳೆಯದ ವಿಶಿಷ್ಟ ಐಡಿಯಾಗಳ ಗಣಿಯಾಗಿ ಅವರು ಪ್ರಸಿದ್ಧರು. ದೇಶದ ಅತಿದೊಡ್ಡ ಕಂಪನಿಗಳಲ್ಲಿ ಒಂದಾದ ಹಿಂದುಸ್ತಾನ್ ಯುನಿಲಿವರ್ ಲಿಮಿಟೆಡ್‌ನ (ಎಚ್‌ಯುಎಲ್) ಚೇರ್ಮನ್/ಸಿಇಒ ಆಗಿ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಅವರು ಸೇವೆ ಸಲ್ಲಿಸಿದ್ದಾರೆ. ಹಾಗೆಯೇ ಹಿಂದುಸ್ತಾನ್ ಯುನಿಲಿವರ್‌ನ ದಕ್ಷಿಣ ಏಷ್ಯಾ ಚೇರ್ಮನ್ ಆಗಿಯೂ ಕೆಲಸ ಮಾಡಿದ್ದಾರೆ. ದೇಶದ ಕಾರ್ಪೊರೇಟ್ ಲೋಕದಲ್ಲಿ ಟಾಪ್ ಬಾಸ್‌ ಗಳ ದೊಡ್ಡ ಸೈನ್ಯವೇ ಇದ್ದರೂ, ಜನಸಾಮಾನ್ಯರನ್ನು ತಮ್ಮ ಹೃದಯದಲ್ಲಿಟ್ಟುಕೊಂಡು ತಮ್ಮ ಕಂಪನಿಯನ್ನು ಕಟ್ಟಿ ಬೆಳೆಸುವವರು ಬಹಳ ಕಡಿಮೆ. ಅಂಥ ಅಪರೂಪದ ತಳಿಯ ಉದ್ಯಮಿಗಳಲ್ಲಿ ಸಂಜೀವ್ ಒಬ್ಬರು. ಅವರ ಐಡಿಯಾಗಳು ಯಾವಾಗಲೂ ತಾಜಾ ಆಗಿರುತ್ತವೆ. ಜತೆಗೆ, ಅವು ಮೌಲ್ಯಗಳ ಮೂಸೆಯಿಂದ ಎದ್ದು ಬಂದಿರು ತ್ತವೆ.
ಕಾನ್ಪುರದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದರಿಂದ ಅವರಿಗೆ ಜನಸಾಮಾನ್ಯರ ಅಗತ್ಯಗಳು ಹಾಗೂ ಕಷ್ಟಗಳ ಬಗ್ಗೆ ಗೊತ್ತಿದೆ. ಹೀಗಾಗಿ ಯಾವಾಗಲೂ ಅವರು ತಮ್ಮ ಕಂಪನಿಯ ಉತ್ಪನ್ನಗಳನ್ನು ಜನಸಾಮಾನ್ಯರ ಕೈಗೆಟಕು ವಂತೆ ಸೋವಿ ದರದಲ್ಲಿ ನೀಡಬೇಕು ಎಂಬ ಬಗ್ಗೆಯೇ ತುಡಿಯುತ್ತಿರುತ್ತಾರೆ. ಹಾಗೆ ಯೋಚಿಸುತ್ತಲೇ ತಮ್ಮಲ್ಲಿರುವ ಅಸಾಧಾರಣ ನಾಯಕತ್ವದ ಗುಣಗಳು, ದೂರದೃಷ್ಟಿ, ಬದ್ಧತೆಯಿಂದ ಯಶಸ್ಸಿನ ತುತ್ತತುದಿಗೆ ಏರಿದ್ದಾರೆ.
೧೯೮೩ರಲ್ಲಿ ಈ ವ್ಯಕ್ತಿ ಯೂನಿಯನ್ ಕಾರ್ಬೈಡ್ ಕಂಪನಿಯ ಸೇಲ್ಸ್ ಮ್ಯಾನೇಜರ್ ಆಗಿ ವೃತ್ತಿಜೀವನ ಆರಂಭಿಸಿದಾಗ, ಮುಂದೊಂದು ದಿನ ಈತ ಜಗತ್ಪ್ರಸಿದ್ಧ ಉದ್ಯಮಿಯಾಗಿ ಬೆಳೆಯುತ್ತಾರೆಂದು ಯಾರು ಊಹಿಸಿದ್ದರು? ೧೯೯೨ರಲ್ಲಿ ಸಂಜೀವ್ ಹಿಂದು ಸ್ತಾನ್ ಯುನಿಲಿವರ್ ಕಂಪನಿ ಸೇರಿದರು. ತಮ್ಮ ಕಾರ್ಯದಕ್ಷತೆ ಯಿಂದಾಗಿ ಬಹಳ ಬೇಗ ಕಂಪನಿಯ ಭಾರತೀಯ ವ್ಯವ ಹಾರಗಳ ಮುಖ್ಯಸ್ಥರಾದರು. ನಂತರ ಈ ಬಹುರಾಷ್ಟ್ರೀಯ ಕಂಪನಿಯ ಅನೇಕ ಅಂತಾರಾಷ್ಟ್ರೀಯ ವಿಭಾಗಗಳ ಮುಖ್ಯಸ್ಥ ರಾಗಿ ಸೇವೆ ಸಲ್ಲಿಸಿದರು. ಆ ಅವಧಿಯಲ್ಲಿ ಎಚ್‌ಯುಎಲ್‌ನ ಪ್ರಯಾಣವನ್ನು ಹೊಸ ದಿಕ್ಕಿನಲ್ಲಿ ಕೊಂಡೊಯ್ದರು. ಎಚ್‌ಯುಎಲ್‌ನ ಉತ್ಪನ್ನಗಳು ಸದಾ ಮಾರುಕಟ್ಟೆಯಲ್ಲಿ ಲಭ್ಯವಿರುವಂತೆ ಅವರು ವಿಶೇಷ ಗಮನ ಹರಿಸಿದರು.
ಕಂಪನಿಗೆ ‘ಶಿಕಾರ್’ ಎಂಬ ಆನ್‌ಲೈನ್ ಮಾರುಕಟ್ಟೆ ಆರಂಭಿಸಿ, ಚಿಲ್ಲರೆ ವ್ಯಾಪಾರಿಗಳು ತಮ್ಮ ಅಂಗಡಿಯಲ್ಲಿ ಕುಳಿತೇ ಎಚ್ಯುಎಲ್ ಉತ್ಪನ್ನಗಳನ್ನು ಸಲೀಸಾಗಿ ಅತ್ಯುತ್ತಮ ಬೆಲೆಗೆ ಖರೀದಿಸುವಂತೆ ಮಾಡಿದರು. ಗ್ರಾಹಕರು ಯಾವಾಗಲೂ ಮಾರುಕಟ್ಟೆಯಲ್ಲಿರುವ ‘ಹೊಸ’ ಉತ್ಪನ್ನಗಳತ್ತ ಆಕರ್ಷಿತರಾಗುತ್ತಾರೆ ಎಂಬುದು ಅವರಿಗೆ ಗೊತ್ತಿತ್ತು. ಹೀಗಾಗಿ ಮಾರುಕಟ್ಟೆಯಲ್ಲಿ ರಾಜನಾಗಿ ಮೆರೆಯಬೇಕೆಂದರೆ ಸದಾ ಒಂದಲ್ಲಾ ಒಂದು ಹೊಸ ಉತ್ಪನ್ನ ಬಿಡುಗಡೆ ಮಾಡುತ್ತಲೇ ಇರಬೇಕು,ಅದಕ್ಕಾಗಿ ಯಾವಾಗಲೂ ಸೃಜನಶೀಲವಾಗಿ ಕೆಲಸ ಮಾಡಬೇಕು ಎಂಬುದು ಅವರ ಚಿಂತನೆಯಾಗಿತ್ತು. ಅದಕ್ಕಾಗಿ ಗ್ರಾಹಕರ ಜತೆ ನೇರವಾಗಿ ಮಾತನಾಡಲು ಇಂಟರಾಕ್ಟಿವ್ ಆಪ್ ಬಿಡುಗಡೆ ಮಾಡಿದರು.
ಪರಿಣಾಮ, ಒಮ್ಮೆ ಲಾಗಿನ್ ಮಾಡಿದ ಗ್ರಾಹಕರು ಏನಾದರೊಂದು ಉತ್ಪನ್ನ ಖರೀದಿಸದೆ ಆಪ್‌ನಿಂದ ಹೊರಗೆ ಹೋಗುತ್ತಿರಲಿಲ್ಲ. ಸಂಜೀವ್ ಅವರ ಮಾರುಕಟ್ಟೆ ತಂತ್ರಗಳು ಹೊಸತಾಗಿರುತ್ತಿದ್ದವು. ಉದಾಹರಣೆಗೆ, ದೊಡ್ಡ ಶಾಂಪೂ ಬಾಟಲ್‌ಗೆ ಹೆಚ್ಚು ಡಿಸ್ಕೌಂಟ್ ಕೊಡುತ್ತಿದ್ದ ಅವರು, ಚಿಕ್ಕ ಶಾಂಪೂ ಪ್ಯಾಕೆಟ್‌ಗಳಿಗೂ ಬೆಲೆಯನ್ನು ಕಡಿಮೆ ಇರಿಸಿ ಬಡವರೂ ಅವನ್ನು ಸುಲಭವಾಗಿ ಖರೀದಿಸುವಂತೆ ಮಾಡಿದರು! ಅವರ ಪ್ರತಿಸ್ಪರ್ಧಿಗಳು ಹೀಗೆ ಮಾಡುತ್ತಿರಲಿಲ್ಲ. ಹಾಗಾಗಿ ಎಚ್‌ಯುಎಲ್ ಗೆದ್ದಿತು. ಸಂಜೀವ್ ತಮ್ಮ ಅವಧಿಯಲ್ಲಿ ‘ಕಾನ್ ಖಜೂರಾ ಟೇಸನ್’ ಎಂಬ ಭಾರತದ ಮೊಟ್ಟಮೊದಲ ಉಚಿತ ಮತ್ತು ಆನ್ ಡಿಮ್ಯಾಂಡ್ ಮನರಂಜನಾ ಮೊಬೈಲ್ ರೇಡಿಯೋ ಚಾನಲ್ ಆರಂಭಿಸಿದರು.
ಅದು ಕೂಡ ದೊಡ್ಡ ಯಶಸ್ಸು ಗಳಿಸಿತು. ಸಂಜೀವ್ ಹೇಗೆ ಕೆಲಸ ಮಾಡುತ್ತಿದ್ದರು ಎಂಬುದಕ್ಕೆ ಇನ್ನೊಂದು ಉದಾಹರಣೆ: ಎಚ್‌ಯುಎಲ್ ತನ್ನ ಹೇರ್ ಆಯಿಲ್ಮಾರುಕಟ್ಟೆ ವಿಸ್ತರಿಸಲು ಯಾವುದಾದರೂ ಒಂದು ಜನಪ್ರಿಯ ಹೇರ್ ಆಯಿಲ್ ಕಂಪನಿಯನ್ನು ಖರೀದಿಸಲು ನಿರ್ಧರಿಸಿತು. ಆಗ ಸಂಜೀವ್ ದೇಶದ ಕಟ್ಟಕಡೆಯ ವ್ಯಕ್ತಿ ಯಾವ ಹೇರ್ ಆಯಿಲ್ ಬಳಸುತ್ತಾನೆ ಎಂಬುದನ್ನು ಕಂಡು ಹಿಡಿಯಲು ಚೆನ್ನೈನ ಕೊಳೆಗೇರಿಗಳಿಗೆ ಹೋಗಿ ಮಹಿಳೆಯರ ಸಂದರ್ಶನ ಮಾಡಿದರು. ‘ನೀವು ತಲೆಗೆ ಯಾವ ಎಣ್ಣೆ ಬಳಸು ತ್ತೀರಿ?’ ಎಂದು ಕೇಳಿದರು. ಅವರು ‘ಇಂದುಲೇಖಾ’ ಅಂದರು.
‘ಯಾಕೆ ಅದನ್ನೇ ಬಳಸುತ್ತೀರಿ?’ ಎಂದು ಇವರು ಕೇಳಿದರು. ‘ಆ ಎಣ್ಣೆ ಬಳಸಿದರೆ ಕೂದಲು ದಪ್ಪಗಾಗಿ, ಕಪ್ಪಾಗಿ, ಗಟ್ಟಿಯಾಗಿರುತ್ತದೆ’ ಎಂದು ಹೆಂಗಸರು ಹೇಳಿದರು. ನಂತರ ಬೋರ್ಡ್ ಮೀಟಿಂಗ್‌ನಲ್ಲಿ ಸಂಜೀವ್ ಈ ‘ಮಾರ್ಕೆಟ್ ಸರ್ವೇ’ ಬಗ್ಗೆ ಹೇಳಿದಾಗ ಎಲ್ಲಾ ನಿರ್ದೇಶಕರೂ ಅವಾಕ್ಕಾಗಿದ್ದರು. ‘ಇನ್ನು ಯಾವುದೇ ಸರ್ವೇ ಬೇಡ. ಇಂದುಲೇಖಾ ಆಯಿಲ್ ಬ್ರ್ಯಾಂಡ್ ಖರೀದಿಸೋಣ’ ಎಂದು ಸಂಜೀವ್ ಚರ್ಚೆಗೆ ತೆರೆ ಎಳೆದರು. ಅದರಂತೆ ಎಚ್‌ಯುಎಲ್ ಇಂದುಲೇಖಾ ಆಯಿಲ್ ಖರೀದಿಸಿತು. ನಂತರ ಅವರು ಗ್ಲಾಕ್ಸೋ ಸ್ಮಿತ್‌ಕ್ಲೈನ್ ಕನ್ಸ್ಯೂಮರ್ ಹೆಲ್ತ್‌ಕೇರ್ (ಜಿಎಸ್‌ಕೆ) ಕಂಪನಿಯನ್ನೂ ಎಚ್‌ಯುಎಲ್‌ನ ತೆಕ್ಕೆಗೆ ಎಳೆದುಕೊಳ್ಳುವ ಮೂಲಕ ದೊಡ್ಡ ವಾಣಿಜ್ಯ ಕ್ರಾಂತಿ ಮಾಡಿದರು.
ಕಾರ್ಪೊರೇಟ್ ಜಗತ್ತಿನಲ್ಲಿ ಅನೇಕ ಯಶೋಗಾಥೆಗಳನ್ನು ಬರೆದವರು ಸಂಜೀವ್. ಅದರ ಜತೆಗೆ ಸಾಮಾಜಿಕ ಕ್ಷೇತ್ರದಲ್ಲೂ ಸಾಕಷ್ಟು ಬದಲಾವಣೆಗೆ ಕಾರಣ ರಾದವರು. ಬೇರೆ ಕಾರ್ಪೊರೇಟ್ ದೈತ್ಯರಿಗಿಂತ ಅವರನ್ನು ವಿಭಿನ್ನವಾಗಿ ನಿಲ್ಲಿಸುವುದು ಎಚ್‌ಯುಎಲ್ ಮೂಲಕ ಅವರು ಮಾಡಿದ ವಿಶಿಷ್ಟವಾದ ಸಮಾಜ ಕಲ್ಯಾಣ ಕೆಲಸಗಳು. ದೇಶದಲ್ಲಿ ವಿದೇಶಿ ವಿನಿಮಯ ಸಮಸ್ಯೆ ಉಂಟಾದಾಗ ಅವರು ದೇಶದಲ್ಲೇ ಸ್ಥಳೀಯವಾಗಿ ಏನು ಸಿಗುತ್ತದೆಯೋ ಅದರ ಮೇಲೆ ಗಮನ ಕೇಂದ್ರೀಕರಿಸಿದರು. ಹಾಗೆ ಮಾಡುವ ಮೂಲಕ ದೇಶಕ್ಕೆ ಅಮೂಲ್ಯವಾದ ವಿದೇಶಿ ವಿನಿಮಯವನ್ನು ಉಳಿಸಿದರು. ತಮ್ಮ ಉತ್ಪಾದನಾ ಘಟಕಗಳಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ನೀರಿನ ಬಳಕೆಯನ್ನು ಅರ್ಧದಷ್ಟು ಕಡಿಮೆ ಮಾಡಿದರು.
‘ಲೋಕಮತ್’ ಜತೆ ಸೇರಿ ಎಚ್‌ಯುಎಲ್ ದೊಡ್ಡ ಪ್ರಮಾಣದಲ್ಲಿ ಮಹಾರಾಷ್ಟ್ರದಾದ್ಯಂತ ಜಲಸಂರಕ್ಷಣೆ ಆಂದೋಲನ ನಡೆಸಿತು. ಅದಕ್ಕೆ ‘ರಿನ್’ ಬ್ರ್ಯಾಂಡ್ ಮಧ್ಯವರ್ತಿಯಾಗಿ ಕೆಲಸ ಮಾಡಿತ್ತು. ಆ ಆಂದೋಲನದ ಮೂಲಕ ಹೆಚ್ಚುಕಮ್ಮಿ ೧.೩ ಲಕ್ಷ ಕೋಟಿ ಲೀಟರ್ ನೀರು ಉಳಿಸಲಾಯಿತು. ನಂತರ ಆ ಆಂದೋಲನ ವನ್ನು ಇಡೀ ದೇಶಕ್ಕೆ ವಿಸ್ತರಿಸಲಾಯಿತು. ಅದು ಎರಡು ವರ್ಷದಲ್ಲಿ ಇಡೀ ಭಾರತ ಕುಡಿಯುವಷ್ಟು ನೀರನ್ನು ಉಳಿಸಿತು!
ನೀರಿನ ಸಂರಕ್ಷಣೆಯ ಬಗ್ಗೆ ಸಂಜೀವ್ ತಮ್ಮದೇ ಆದ ಸಂಶೋಧನೆ ನಡೆಸಿದ್ದರು. ಆಗ ಅತಿಹೆಚ್ಚು ನೀರು ಬಳಕೆಯಾಗುವುದು ಟಾಯ್ಲೆಟ್‌ನಲ್ಲಿ, ಕೈ ತೊಳೆಯು ವುದಕ್ಕೆ, ಸ್ನಾನ ಮಾಡುವುದಕ್ಕೆ ಹಾಗೂ ಬಟ್ಟೆ ತೊಳೆಯುವುದಕ್ಕೆ ಎಂಬುದು ತಿಳಿಯಿತು. ನಂತರ ಅವರು ಸರಕಾರ ಹಾಗೂ ಬೃಹನ್ ಮುಂಬೈ ಮಹಾನಗರ ಪಾಲಿಕೆಯಿಂದ (ಬಿಎಂಸಿ) ಅನುಮತಿ ಪಡೆದು ‘ಪಬ್ಲಿಕ್ ಕನ್ವೀನಿಯನ್ಸ್ ಸೆಂಟರ್’ ಒಂದನ್ನು ನಿರ್ಮಿಸಿದರು. ಅದು ಸ್ಪಷ್ಟರೂಪ ಪಡೆಯಲು ಒಂದು ವರ್ಷಕ್ಕೂ ಹೆಚ್ಚು ಸಮಯ ಬೇಕಾಯಿತು. ಕೊನೆಗೂ ಘಾಟ್ಕೋಪರ್‌ನಲ್ಲಿ ನಿರ್ಮಿಸಿದ ಮೊದಲ ಕೇಂದ್ರ ಕಾರ್ಯಾರಂಭ ಮಾಡಿತು. ಅಲ್ಲಿಂದ ಈವರೆಗೆ ೧೨ ಕನ್ವೀನಿಯನ್ಸ್ ಸೆಂಟರ್‌ಗಳನ್ನು ನಿರ್ಮಿಸಲಾಗಿದೆ. ಅವುಗಳನ್ನು ೪೦,೦೦೦ ಜನರು ಪ್ರತಿದಿನ ಬಳಕೆ ಮಾಡುತ್ತಿದ್ದಾರೆ!
ಇಷ್ಟಕ್ಕೂ ಏನಿದು ಕನ್ವೀನಿಯನ್ಸ್ ಸೆಂಟರ್? ಅದು ಸಾರ್ವಜನಿಕ ನೈರ್ಮಲ್ಯ ಕೇಂದ್ರ. ಅಲ್ಲಿ ಬಳಕೆ ಮಾಡಿದ ಪ್ರತಿಯೊಂದು ಹನಿ ನೀರನ್ನೂ ಸಂಸ್ಕರಣೆ ಮಾಡಿ, ಶುದ್ಧೀಕರಣಗೊಳಿಸಿ, ಮರುಬಳಕೆ ಮಾಡಲಾಗುತ್ತದೆ. ಈಗ ಸರಕಾರವೇ ಎಚ್‌ಯುಎಲ್ ಬಳಿ ಇನ್ನಷ್ಟು ಅಂಥ ಕೇಂದ್ರಗಳನ್ನು ಸ್ಥಾಪಿಸುವಂತೆ ಕೇಳುತ್ತಿದೆ.ಹಿಂದೆಂದೂ ಕಂಡರಿಯದ ಕೋವಿಡ್ ಸಮಸ್ಯೆ ದೇಶವನ್ನು ಬಾಧಿಸಿದಾಗ ಧಾರಾವಿಯ ಸ್ಲಮ್‌ಗಳಲ್ಲಿ ಸಂಜೀವ್ ಮೆಹ್ತಾ ಸೋಪುಗಳನ್ನು ವಿತರಿಸಲು ಆರಂಭಿಸಿ ದರು. ಜನರು ಪದೇಪದೆ ಸೋಪಿನಲ್ಲಿ ಕೈತೊಳೆದುಕೊಂಡು ವೈರಸ್ ಹರಡುವುದನ್ನು ತಡೆಯಲಿ ಎಂಬುದು ಅವರ ಆಶಯವಾಗಿತ್ತು.
ಏನೇ ಮಾಡಿದರೂ ಕೋವಿಡ್ ಶರವೇಗದಲ್ಲಿ ಹರಡುತ್ತದೆ ಎಂಬುದು ಕೂಡ ಅವರಿಗೆ ಗೊತ್ತಿತ್ತು. ಹೀಗಾಗಿ ಮೊದಲೇ ಎಚ್ಚೆತ್ತುಕೊಂಡು ೭೦,೦೦೦ ಕೋವಿಡ್ ಟೆಸ್ಟ್ ಕಿಟ್‌ಗಳನ್ನು ಖರೀದಿಸಿ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶದಲ್ಲಿ ಉಚಿತವಾಗಿ ವಿತರಿಸಿದರು. ಸರಕಾರಕ್ಕೇ ಕೇವಲ ೧ ಲಕ್ಷ ಕೋವಿಡ್ ಟೆಸ್ಟ್ ಕಿಟ್‌ಗಳನ್ನು ಖರೀದಿಸಲು ಸಾಧ್ಯವಾಗಿದ್ದ ಹೊತ್ತಿನಲ್ಲಿ ಸಂಜೀವ್ ೭೦,೦೦೦ ಕಿಟ್‌ಗಳನ್ನು ಖಾಸಗಿಯಾಗಿ ಖರೀದಿಸಿ ವಿತರಿಸಿದ್ದರು! ತನ್ನ ಮಾತೃಕಂಪನಿಯ ಸಿಇಒ ಅವರ ಪ್ರಭಾವ ಬಳಸಿ ಎಚ್ ಯುಎಲ್ ೫೦೦೦ಕ್ಕೂ ಹೆಚ್ಚು ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ಅಮೆರಿಕ, ಚೀನಾ, ಬ್ರಿಟನ್ ಹಾಗೂ ಫ್ರಾನ್ಸ್‌ನಿಂದ ತರಿಸಿಭಾರತದಲ್ಲಿ ಜನರ ಜೀವ ಉಳಿಸಲು ನೆರವಾಗಿತ್ತು.
ಸಂಜೀವ್ ನಾಗ್ಪುರದ ಜತೆ ಸಂಪರ್ಕ ಹೊಂದಿರುವ ಚಾರ್ಟರ್ಡ್ ಅಕೌಂಟೆಂಟ್ ಕೂಡ ಹೌದು. ಪ್ರಸಿದ್ಧ ವಕೀಲ ಹರೀಶ್ ಸಾಳ್ವೆಯವರ ತಂದೆ ಹಾಗೂ ಕೇಂದ್ರದ ಮಾಜಿ ಸಚಿವ ಎನ್.ಪಿ.ಕೆ.ಸಾಳ್ವೆ ಅವರು ನಾಗ್ಪುರದಲ್ಲಿ ಸಿ.ಎ. ಸಂಸ್ಥೆ ಯೊಂದನ್ನು ನಡೆಸುತ್ತಿದ್ದರು. ಅದರಲ್ಲಿ ಸಂಜೀವ್ ಆರ್ಟಿಕಲ್ ಶಿಪ್ ಮಾಡಿದ್ದರು. ಇನ್ನು, ಎಚ್‌ಯುಎಲ್ ಮತ್ತು ಲೋಕಮತ್ ನಡುವೆಯೂ ಸುದೀರ್ಘ ಸಂಬಂಧಗಳಿವೆ. ಮುಂಬೈ ನಲ್ಲಿ ಡಾ.ದತ್ತ ಸಾಮಂತ್ ಅವರು ಮುಷ್ಕರ ನಡೆಸಿದಾಗ ಎಚ್ಯುಎಲ್‌ನ ಮುಂಬೈ ಕಾರ್ಖಾನೆ ಒಂದು ವರ್ಷಕ್ಕೂ ಹೆಚ್ಚು ಕಾಲ ಬಾಗಿಲು ಮುಚ್ಚಿತ್ತು. ಡಾ.ಅಶೋಕ್ ಗಂಗೂಲಿಯವರು ಆಗ ಕಂಪನಿಯ ಮುಖ್ಯಸ್ಥರಾಗಿದ್ದರು. ಅವರು ನನ್ನ ತಂದೆ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮಹಾರಾಷ್ಟ್ರದ ಆಗಿನ ಔದ್ಯೋಗಿಕ ಸಚಿವರಾಗಿದ್ದ ಜವಾಹರಲಾಲ್ ದರಡಾ ಅಲಿಯಾಸ್ ಬಾಬೂಜಿಯವರ ನೆರವು ಕೋರಿದ್ದರು.
ಬಾಬೂಜಿ ಗಂಗೂಲಿಗೆ ‘ನಿಮ್ಮ ಉತ್ಪಾದನಾ ಕೇಂದ್ರಗಳನ್ನು ವಿಕೇಂದ್ರೀಕರಣಗೊಳಿಸಿ, ಇಂಗ್ಲಿಷ್ ಬದಲು ಸ್ಥಳೀಯ ಭಾಷೆಯಲ್ಲಿ ಜನರು ಹಾಗೂ ಕಾರ್ಮಿಕ ರೊಂದಿಗೆ ವ್ಯವಹರಿಸಿ’ ಎಂದು ಸಲಹೆ ನೀಡಿದರು. ಎಚ್‌ಯುಎಲ್ ಹಾಗೇ ಮಾಡಿತು. ಬಾಬೂಜಿ ಯವತ್ಮಾಲ್‌ನಲ್ಲಿ ಎಚ್‌ಯುಎಲ್‌ಗೆ ರೆಡಿಮೇಡ್ ಶೆಡ್ ಒದಗಿಸಿದರು. ಅಲ್ಲಿ ಕಂಪನಿಯ ಹೊಸ ಸ್ಥಳೀಯ ಘಟಕದ ನಿರ್ಮಾಣ ಶುರುವಾಯಿತು. ನಂತರ ಅವರು ಎಚ್ ಯುಎಲ್‌ಗೆ ಖಮಗಾಂವ್‌ನಲ್ಲಿ ಭೂಮಿ ನೀಡಿದರು. ಅಲ್ಲಿ ಇಂದು ‘ಪಿಯರ್ಸ್ ಸೋಪ್’ ತಯಾರಾಗಿ ಜಗತ್ತಿನಾದ್ಯಂತ ಮಾರಾಟವಾಗುತ್ತಿದೆ. ಅದೇ ರೀತಿ ಬಾಬೂಜಿ ಸಲಹೆಯಂತೆ ಚಿಂದ್ವಾಡಾದಲ್ಲೂ ಎಚ್‌ಯು ಎಲ್‌ನ ಘಟಕ ಆರಂಭಿಸ ಲಾಯಿತು. ಗಂಗೂಲಿಯವರು ನಂತರದ ವರ್ಷ ಗಳಲ್ಲಿ ರಾಜ್ಯಸಭೆಯಲ್ಲಿ ನನ್ನ ಜತೆ ಸದಸ್ಯರಾಗಿದ್ದರು. ಆಗ ಬಾಬೂಜಿ ತಮಗೆ ಮಾಡಿದ್ದ ಸಹಾಯವನ್ನು ನೆನಪಿಸಿಕೊಂಡಿದ್ದರು.
ನಂತರ ಸಂಜೀವ್ ಅವರ ಪ್ರತಿಭೆ ಹಾಗೂ ಅಸಾಧಾರಣ ಬುದ್ಧಿವಂತಿಕೆಯು ಎಚ್‌ಯುಎಲ್ ಅಗಾಧ ಪ್ರಮಾಣದಲ್ಲಿ ಬೆಳೆದು ತನ್ನ ವ್ಯವಹಾರವನ್ನು ಅಂದಾಜು ೬೦,೦೦೦ ಕೋಟಿ ರು.ಗಳಿಗೆ ಏರಿಕೆ ಮಾಡಿಕೊಳ್ಳುವಲ್ಲಿ ಸಹಾಯಮಾಡಿದೆ. ದೇಶದಲ್ಲಿ ಈಗ ಸಂಸತ್ತಿನಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಾತಿನಿಧ್ಯ ಇರಬೇಕು ಎಂಬ ಕೂಗು ಕೇಳಿಬರುತ್ತಿದ್ದರೆ ಎಚ್‌ಯುಎಲ್ ಆ ಕೆಲಸವನ್ನು ಸಂಜೀವ್ ನಾಯಕತ್ವದಲ್ಲಿ ಬಹಳ ಹಿಂದೆಯೇ ಮಾಡಿದೆ. ಎಚ್‌ಯುಎಲ್‌ನಲ್ಲಿ ಮಹಿಳಾ ‘ಬಾಸ್‌ಗಳ’ ಸಂಖ್ಯೆ ಶೇ.೫೦ಕ್ಕಿಂತ ಹೆಚ್ಚಿದೆ. ಅವರಿಗೆ ಅತ್ಯುತ್ತಮ ತರಬೇತಿ ನೀಡಲಾಗುತ್ತದೆ. ಹೀಗಾಗಿ ಅದು ಮಹಿಳಾ ಕಾರ್ಪೊರೇಟ್ ನಾಯಕಿಯರನ್ನು ತಯಾರು ಮಾಡುವ ವಿಶ್ವವಿದ್ಯಾಲಯ ವಿದ್ದಂತೆ. ಅಲ್ಲಿ ‘ಪದವಿ’ ಪಡೆದು ಹೊರಗೆ ಬರುವವರು ಜಗತ್ತಿನಾದ್ಯಂತ ಕಾರ್ಪೊರೇಟ್ ಕಂಪನಿಗಳಲ್ಲಿ ದೊಡ್ಡ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ. ನಿವೃತ್ತಿಯ ಬಳಿಕ ಸಂಜೀವ್ ಮೆಹ್ತಾ ಏರ್ ಇಂಡಿಯಾದ ನಾನ್ ಎಕ್ಸಿಕ್ಯೂಟಿವ್ ಬೋರ್ಡ್ ಮೆಂಬರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿಜ ಹೇಳಬೇಕೆಂದರೆ ಅವರು ನಿಜಕ್ಕೂ ಈ ದೇಶದ ಅಮೂಲ್ಯ ಸಂಪತ್ತು!
(ಲೇಖಕರು ಹಿರಿಯ ಪತ್ರಕರ್ತರು ಹಾಗೂ ರಾಜ್ಯಸಭಾಸದಸ್ಯರು)