ಪಂಚರಾಜ್ಯದಲ್ಲಿ ನಡೆವುದೇ ಪಂಚತಂತ್ರ ?
ಭಾಸ್ಕರಾಯಣ
ಎಂ.ಕೆ.ಭಾಸ್ಕರರಾವ್
ಛತ್ತೀಸ್‌ಘಡದಲ್ಲಿ ಮತ್ತೆ ಅಧಿಕಾರ ಹಿಡಿಯುತ್ತೇವೆ, ಮಧ್ಯಪ್ರದೇಶದ ಆಡಳಿತವನ್ನು ಬಿಜೆಪಿಯಿಂದ ಕಿತ್ತುಕೊಳ್ಳುತ್ತೇವೆ ಎಂಬ ರಣೋತ್ಸಾಹದಲ್ಲಿರುವ ರಾಹುಲ್,ತಮ್ಮದೇ ಪಕ್ಷದ ಸರಕಾರ ಇರುವ ರಾಜಸ್ಥಾನದ ವಿಚಾರದಲ್ಲಿ ವ್ಯಕ್ತಪಡಿಸಿರುವ ಅಭಿಮತ ಪಕ್ಷದ ಕಾರ್ಯಕರ್ತರ, ಮುಖಂಡರ ಸ್ಥೈರ್ಯ ಉಡುಗಿಸಿರುವ ಬೆಳವಣಿಗೆ.
ಪಂಚರಾಜ್ಯ ವಿಧಾನಸಭಾ ಚುನಾವಣೆಯನ್ನು ಘೋಷಿಸುವ ಮೂಲಕ ಚುನಾವಣಾ ಆಯೋಗವು, ಅನ್ನಲೂ ಆಗದ ಅನುಭವಿಸಲೂ ಆಗದ ಸಂಕಟ ಸಂಚಲನ ವನ್ನು ರಾಜಕೀಯ ಪಕ್ಷಗಳಲ್ಲಿ ಮೂಡಿಸಿದೆ. ‘ಅವಧಿ ಮುಗಿದ ವಿಧಾನಸಭೆಗಳಿಗೆ ಚುನಾವಣೆ ನಡೆಯುವುದರಲ್ಲಿ ವಿಶೇಷವೇನಿದೆ, ಅದೊಂದು ಸಂವೈಧಾನಿಕ ಸಹಜ ಪ್ರಕ್ರಿಯೆ’ ಎಂದು ವಾದಿಸಬಹುದಾದರೂ, ಈ ಐದು ರಾಜ್ಯಗಳ ಚುನಾವಣೆ ಮತ್ತು ಅದು ಹೊರ ಹಾಕಲಿರುವ ಫಲಿತಾಂಶ ಸರಳ ರೇಖೆಯಲ್ಲಿ ಸಾಗುವಂಥದ್ದಲ್ಲ ಎಂಬ ಕಾರಣಕ್ಕಾಗಿಯೇ ಸಹಜವಲ್ಲದ ಸಂಚಲನಕ್ಕೆ ಅದು ಕಾರಣವಾಗಿದೆ.
ಈ ಐದು ರಾಜ್ಯಗಳ ಪೈಕಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಡ ಹಿಂದಿ ಭಾಷಿಕ ಪ್ರದೇಶದ ರಾಜ್ಯಗಳು. ಮಧ್ಯ ಪ್ರದೇಶದಲ್ಲಿ ಬಿಜೆಪಿ ಸರಕಾರವಿದ್ದರೆ ಉಳಿದೆರಡರಲ್ಲಿ ಕಾಂಗ್ರೆಸ್ ಆಡಳಿತವಿದೆ. ಮಿಜೋ ರಾಂ ಗುಡ್ಡ ಗಾಡು ರಾಜ್ಯ, ಅಲ್ಲಿ ಎನ್‌ಡಿಎ ಸದಸ್ಯ ಪಕ್ಷ ‘ಮಿಜೋರಾಂ ನ್ಯಾಷನಲ್ ಫ್ರಂಟ್’ ಅಧಿಕಾರದಲ್ಲಿದೆ. ದಕ್ಷಿಣದ ತೆಲಂಗಾಣದಲ್ಲಿ ‘ಭಾರತ ರಾಷ್ಟ್ರ ಸಮಿತಿ’ ಪಕ್ಷದ ಸರಕಾರವಿದೆ. ಬರಲಿರುವ ಲೋಕಸಭಾ ಚುನಾವಣೆಯನ್ನು ಗೆಲ್ಲಲೇಬೇಕೆಂದು ಹೊರಟಿರುವ ಎನ್‌ಡಿಎ ಒಕ್ಕೂಟ/ಬಿಜೆಪಿ ಹಾಗೂ ವಿಪಕ್ಷಗಳ ‘ಇಂಡಿಯ’ ಮೈತ್ರಿಕೂಟ/ಕಾಂಗ್ರೆಸ್‌ಗೆ ಈ ಚುನಾವಣೆ ಎನ್ನುವುದು ಸೆಮಿಫೈನಲ್ ಎಂದೇ ಹೇಳಬಹುದು.
ಮಿಜೋರಾಂ (ವಿಧಾನಸಭೆ ಸಾಮರ್ಥ್ಯ ೪೦ ಸದಸ್ಯ ಬಲ), ಛತ್ತೀಸ್‌ಗಡ (೯೦), ಮಧ್ಯ ಪ್ರದೇಶ (೨೩೦), ರಾಜಸ್ಥಾನ (೨೦೦) ಹಾಗೂ ತೆಲಂಗಾಣ (೧೧೯) ರಾಜ್ಯಗಳಿಂದ ಒಟ್ಟಾರೆ ೬೭೯ ಶಾಸಕರ ಆಯ್ಕೆಯಾಗಬೇಕಿದೆ. ಈ ಶಾಸಕರನ್ನು ಚುನಾಯಿಸುವ ಮತದಾರರ ಸಂಖ್ಯೆ ಬರೋಬ್ಬರಿ ೧೬ ಕೋಟಿ ಎನ್ನುವುದುಈ ಚುನಾವಣೆ ಹೇಗೆ ಸೆಮಿಫೈನಲ್ ಅನ್ನುವುದನ್ನು ವಿವರಿಸುತ್ತದೆ. ಬರಲಿರುವ ಲೋಕಸಭೆ ಚುನಾವಣೆ ಮೇಲೆ ನೇರ ಪರಿಣಾಮ ಬೀರುವ ಚುನಾವಣೆ ಇದಾಗಿ ರುವುದರಿಂದ ಮೂರನೇ ಬಾರಿಗೆ ಬಿಜೆಪಿ/ಎನ್‌ಡಿಎಯನ್ನು ಬಹುಮತದಲ್ಲಿ ಗೆಲ್ಲಿಸಿ ತೃತೀಯ ಅವಧಿಗೆ ಪ್ರಧಾನಿಯಾಗುವ ನರೇಂದ್ರ ಮೋದಿಯವರ ಆಸೆ ಈಡೇರುತ್ತದೆ ಅಥವಾ ಅದು ಅಷ್ಟೆಲ್ಲ ಸುಲಭವಲ್ಲ, ಕಷ್ಟದ ದಿನಗಳು ಮುಂದಿವೆ ಎಂಬ ಸಂದೇಶ ರವಾನೆ ಯಾಗುವ ಇಂಗಿತ ದಿನಗಳೆದಂತೆ ಸ್ಪಷ್ಟವಾಗುತ್ತಿದೆ.
ಐದು ರಾಜ್ಯಗಳಿಂದ ಈ ಚುನಾವಣೆ ಬಳಿಕ ಕೆಲವೇ ತಿಂಗಳಲ್ಲಿ ಎದುರಾಗಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು ೮೩ ಸದಸ್ಯರು ಲೋಕಸಭೆಗೆ ಆಯ್ಕೆಯಾಗಬೇಕಿದೆ. ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಗರಿಷ್ಠ ಪ್ರಮಾಣದ ಬಿಜೆಪಿ ಸಂಸದರು ಐದು ವರ್ಷದ ಹಿಂದೆ ಆಯ್ಕೆಯಾಗಿದ್ದು ನಿಜ. ಈ ಬಾರಿಯೂ ಅದೇ ಫಲಿತಾಂಶ ಪುನರಾವರ್ತನೆ ಆಗಲಿದೆಯೇ….? ಕೆಟ್ಟ ಅನುಮಾನವಂತೂ ಇದ್ದೇ ಇದೆ. ಅಂಜದೆ ಅಳುಕದೆ ಚುನಾವಣೆ ಎದುರಿಸುವ ಛಲ ಜಗತ್ತಿನ ಅತ್ಯಂತ ದೊಡ್ಡ ಪಕ್ಷ ಎನಿಸಿರುವ ಬಿಜೆಪಿಯಲ್ಲಿ ಈಗ ಕಾಣಿಸುತ್ತಿಲ್ಲ ಎನ್ನುವುದೇ ಅನುಮಾನದ ಮೂಲ.
೨೦೧೯ರ ಲೋಕಸಭಾ ಚುನಾವಣೆಯಲ್ಲಿ ಮೂರು ನೂರಕ್ಕಿಂತ ಹೆಚ್ಚು ಸೀಟು ಗಳಿಸಿ ಅಜೇಯ ಎನಿಸಿದ್ದಲ್ಲದೆ ಅದಕ್ಕೂ ಐದು ವರ್ಷ ಹಿಂದಿನ ೨೦೧೪ರ ಲೋಕಸಭಾ ಚುನಾವಣೆ ಯಲ್ಲಿನ ಅದ್ಭುತ ಗೆಲುವು ಒಂದು ಆಕಸ್ಮಿಕವಲ್ಲ ಎಂದಿದ್ದ ಆ ಪಕ್ಷ ಈಗ ದಿನಗಳೆದಂತೆ ದುರ್ಬಲವಾಗುತ್ತಿದೆ. ತನ್ನ ಆಡಳಿತವಿದ್ದ ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ಮತದಾರರು ಬಿಜೆಪಿಯನ್ನು ತಿರಸ್ಕರಿಸಿದ ಬಳಿಕವಂತೂ ಲೋಕಸಭಾ ಚುನಾವಣೆಯನ್ನು ಹಿಂದಿನ ಎರಡು ಚುನಾವಣೆಯಲ್ಲಿ ಪಡೆದ ಬಹು ಮತದೊಂದಿಗೆ ಗೆದ್ದೇಗೆಲ್ಲುವ ನೈತಿಕ ಸ್ಥೈರ್ಯ ಎನ್‌ಡಿಎ/ಬಿಜೆಪಿಯಲ್ಲಿ ಉಡುಗಿರುವುದು ಮೇಲ್ನೋಟಕ್ಕೇ ರಾಚುತ್ತಿದೆ. ಮೋದಿ ಯವರಿಗಾಗಲೀ ಅವರ ಬಲಗೈ ಬಂಟ ಅಮಿತ್ ಶಾ ಅಥವಾ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಪಾಲಿಗಾಗಲೀ ಹಿಮಾಚಲ, ಕರ್ನಾಟಕದಲ್ಲಿ ಪಕ್ಷ ಕಂಡ ಪರಾಭವವು ಸೂತಕ ಮನಃ ಸ್ಥಿಯನ್ನು ತಂದಿತ್ತಿದೆ. ಇಂಥ ಸಂದರ್ಭದಲ್ಲಿ ಈ ಐದು ರಾಜ್ಯ ಚುನಾವಣೆಯು ಸತ್ವಪರೀಕ್ಷೆಯು ಸ್ವರೂಪವಾಗಿ ಬಂದಿದೆ.
ಹಿಂದಿ ಭಾಷಿಕ ಪ್ರದೇಶದಲ್ಲಿ ಬಿಜೆಪಿಯನ್ನು ಮಣಿಸುವುದು ಕಷ್ಟ ಎಂಬ ಭಾವನೆ ಕೆಲವು ವರ್ಷಗಳಿಂದ ಇದೆ. ಜನಸಂಘದ ಕಾಲದಿಂದಲೂ ಉತ್ತರ ಭಾರತದ ಪಕ್ಷವೆಂಬ ಹಣೆಪಟ್ಟಿ ಬಿಜೆಪಿಗೆ ಅಂಟಿರುವುದನ್ನು ಆ ಪಕ್ಷದ ವರಿಷ್ಠರೂ ಅಲ್ಲಗಳೆಯುವುದಿಲ್ಲ. ತುಸು ಮಟ್ಟಿಗೆ ಆ ಪಟ್ಟಿಯನ್ನು ಪಕ್ಷ ಅಳಿಸಿಕೊಂಡಿದ್ದು ಕರ್ನಾಟಕದಲ್ಲಿ ಸರಕಾರ ರಚಿಸುವ ಮೂಲಕ. ಆದರೆ ೨೦೦೮ ಮತ್ತು ೨೦೧೮ರಲ್ಲಿ ಬಿಜೆಪಿ ಕರ್ನಾಟಕದಲ್ಲಿ ಸರಕಾರ ರಚಿಸಿದ್ದು ಜನಾಶೀರ್ವಾದದ ಬಹುಮತದಿಂದಲ್ಲ, ಬದಲಿಗೆ ‘ಆಪರೇಷನ್ ಕಮಲ’ದ ಮೂಲಕ. ೨೦೨೩ರಲ್ಲಿ ಪಕ್ಷಕ್ಕೆ ೬೬ ಸ್ಥಾನ ಪಡೆಯುವುದು ಮಾತ್ರವೇ ಸಾಧ್ಯವಾಯಿತು. ಈ ರಾಜ್ಯದ ಜನತೆ ತನ್ನ ವಿರುದ್ಧ ಮತ ಚಲಾಯಿಸಲು ಕಾರಣವೇನು ಎನ್ನುವುದು ಬಹಿರಂಗವಾಗುವುದು ಆ ಪಕ್ಷಕ್ಕೆ ಬೇಕಾಗಿಲ್ಲ.
ಇದು ಜನತಂತ್ರದಲ್ಲಿ ಅಧಿಕಾರದ ಪಾಲುದಾರಿಕೆ ಬಯಸುವ ರಾಜಕೀಯ ಪಕ್ಷವೊಂದರಲ್ಲಿ ಇರಬೇಕಾದ ವಿವೇಕದ ನಡತೆಯಲ್ಲ. ಮಧ್ಯಪ್ರದೇಶ ಮತ್ತು ಮಿಜೋರಾಂನಲ್ಲಿ ಎನ್‌ಡಿಎ/ಬಿಜೆಪಿ ಸರಕಾರಕ್ಕೆ ಆಡಳಿತ ವಿರೋಧಿ ಅಲೆ ಧೈರ್ಯ ಉಡುಗಿಸಿದ್ದರೆ ರಾಜಸ್ಥಾನ, ಛತ್ತೀಸ್‌ಘಡದಲ್ಲಿ ಇಂಥದೇ ಆಡಳಿತ ವಿರೋಧಿ ಅಲೆ ಕಾಂಗ್ರೆಸ್ಸನ್ನು ಕಂಗಾಲು ಮಾಡಿದೆ. ತೆಲಂಗಾಣದಲ್ಲಿ ಮತ್ತೆ ಗೆಲ್ಲುವ ಹಟದಲ್ಲಿ ಬಿಆರ್‌ಎಸ್ ಇದೆ. ಅಲ್ಲಿ ಬಿಜೆಪಿ, ಕಾಂಗ್ರೆಸ್ ಪ್ರಮುಖ ವಿರೋಧ ಪಕ್ಷಗಳು. ಈಎರಡೂ ಪಕ್ಷಗಳು ತನ್ನ ವಿರುದ್ಧ ಸ್ಪರ್ಧಿಗಳನ್ನು ಕಣಕ್ಕೆ ಇಳಿಸುವುದರಿಂದ ಆಡಳಿತದಲ್ಲಿ ಅಸಮಾಧಾನ ಸೂಚಿಸುವ ಸರಕಾರದ ವಿರುದ್ಧದ ಮತಗಳು ಹಂಚಿ ಹೋಗಿ ಬಿಆರ್ ಎಸ್ ಮತ್ತೆ ಅಧಿಕಾರ ಸೂತ್ರ ಹಿಡಿಯಲಿದೆ ಎಂಬ ವಿಶ್ವಾಸ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರದು.
‘ಡಾಟೆಡ್’ ಇಂಡಿಯ ಒಕ್ಕೂಟದ ೨೮ ಸದಸ್ಯ ಪಕ್ಷಗಳು ಈ ಚುನಾವಣೆಯಲ್ಲಿ ಸೀಟು ಹಂಚಿಕೆ ಕಾರಣವಾಗಿ ಪರಸ್ಪರ ರಾಜಿ ಮಾಡಿಕೊಳ್ಳಲಿವೆಯೇ ಅಥವಾ ಲೋಕಸಭಾ ಚುನಾವಣೆಯೊಂದಿಗೆ ಈ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳುವ ಯೋಚನೆಯಲ್ಲಿವೆಯೇ ಎನ್ನುವುದು ಈ ಕ್ಷಣದವರೆಗೂ ಸ್ಪಷ್ಟವಾಗಿಲ್ಲ. ಬಿಜೆಪಿಗೆ ಒಳಗೊಳಗೇ ಸಂತೋಷ ತರುವ ಸಂಗತಿ ಇದು. ಏತನ್ಮಧ್ಯೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜಸ್ಥಾನದಲ್ಲಿ ಮತ್ತೆ ಅಧಿಕಾರ ಹಿಡಿಯುವ ವಿಚಾರದಲ್ಲಿಅನುಮಾನ ವ್ಯಕ್ತಪಡಿಸಿರುವುದು ಆ ರಾಜ್ಯದ ಕಾಂಗ್ರೆಸ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಥ್‌ರನ್ನು ನಖಶಿಖಾಂತ ಕೆರಳಿಸಿದೆ.
ಛತ್ತೀಸ್‌ಘಡದಲ್ಲಿ ಮತ್ತೆ ಅಧಿಕಾರ ಹಿಡಿಯುತ್ತೇವೆ, ಮಧ್ಯಪ್ರದೇಶದ ಆಡಳಿತವನ್ನು ಬಿಜೆಪಿಯಿಂದ ಕಿತ್ತುಕೊಳ್ಳುತ್ತೇವೆ ಎಂಬ ರಣೋತ್ಸಾಹ ತರುವ ವಿಶ್ವಾಸ ದಲ್ಲಿರುವ ರಾಹುಲ್, ತಮ್ಮದೇ ಪಕ್ಷದ ಸರಕಾರ ಇರುವ ರಾಜಸ್ಥಾನದ ವಿಚಾರದಲ್ಲಿ ವ್ಯಕ್ತಪಡಿಸಿರುವ ಅಭಿಮತವು ಪಕ್ಷದ ಕಾರ್ಯ ಕರ್ತರ, ಮುಖಂಡರ ಸ್ಥೈರ್ಯಉಡುಗಿಸಿರುವ ಬೆಳವಣಿಗೆ. ರಾಜಸ್ಥಾನದಲ್ಲಿ ಇರುವುದು ಕಾಂಗ್ರೆಸ್ ಸರಕಾರವೇ ಹೌದಾದರೂ ಅದು ಸೋನಿಯಾ ಗಾಂಧಿ, ರಾಹುಲ್ ಇಲ್ಲವೇ ಪ್ರಿಯಾಂಕಾ ಗಾಂಧಿ ಸರಕಾರವಲ್ಲ ಎನ್ನುವುದು ಕಾಂಗ್ರೆಸ್ ರಾಜಕಾರಣದ ಒಳಹೊರಗು ಬಲ್ಲ ಎಲ್ಲರಿಗೂ ಗೊತ್ತಿರುವ ಸಂಗತಿ. ಆ ರಾಜ್ಯದಲ್ಲಿ ಸಚಿನ್ ಪೈಲಟ್‌ರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳ್ಳಿರಿಸುವ ಗಾಂಧಿ ತ್ರಯರ ಆಸೆಗೆ ಗೆಹ್ಲೋಥ್ ತಣ್ಣೀರನ್ನು ಎರಚಿದ್ದಾರೆಂಬ ಆಕ್ರೋಶದಲ್ಲಿ ರಾಹುಲರಿಂದ ಈ ಅಭಿಪ್ರಾಯ ಬಂದಿದೆ ಎನ್ನುವುದು ಗೆಹ್ಲೋಥ್ ಬಣದ ಭಾವನೆ.
ಪಕ್ಷದೊಳಗಿನ ಬಣ ರಾಜಕೀಯವೇನೇ ಇದ್ದರೂ ಅದನ್ನು ಬಹಿರಂಗದಲ್ಲಿ ಹೊರಹಾಕಲು ರಾಹುಲ್ ಗಾಂಧಿ ಆರಿಸಿಕೊಂಡಿರುವ ಚುನಾವಣಾ ಪೂರ್ವ ಸಮಯ ಸೂಕ್ತ ಮುಹೂರ್ತ ಅಲ್ಲ ಎನ್ನುವುದು ಸಾರ್ವತ್ರಿಕ ಭಾವನೆ. ಈ ಐದು ರಾಜ್ಯಗಳಲ್ಲಿ ಬಿಜೆಪಿ ಒಕ್ಕೂಟ ಇಲ್ಲವೇ ಕಾಂಗ್ರೆಸ್ ಒಕ್ಕೂಟ ಎಷ್ಟೆಷ್ಟು ವಿಧಾನ ಸಭಾ ಸೀಟುಗಳನ್ನು ಗೆಲ್ಲಲಿವೆ ಎನ್ನುವುದು ಅಕ್ಷರಶಃ ಕುತೂಹಲ ಕೆರಳಿಸಿದೆ. ಲೋಕಸಭೆ ಸೀಟು ಗೆಲ್ಲುವುದಕ್ಕೆ ಶಾಸಕ ಸ್ಥಾನಬಲವೂ ಕಾರಣವಾಗುತ್ತದೆ. ಈ ಮಾತಿಗೆ ಅಲ್ಲಿ ಇಲ್ಲಿ ಅಪವಾದ ಇಲ್ಲವೆಂದಲ್ಲ. ಮೋದಿಯವರು ಲೋಕಸಭಾ ಚುನಾವಣೆ ಗೆಲ್ಲುವ ದೃಷ್ಟಿಯಿಂ ದಲೇ ಈ ವಿಧಾನಸಭಾ ಚುನಾವಣೆಯಲ್ಲಿ ಅಬ್ಬರದ ಪ್ರಚಾರ ಮಾಡಲಿದ್ದಾರೆ. ಆದರೆ ೨೬ ಅಬ್ಬರದ ರ‍್ಯಾಲಿಯನ್ನು ಅವರು ನಡೆಸಿಯೂ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಾಗಿದ್ದು ೬೬ ಸ್ಥಾನ ಮಾತ್ರ ಎನ್ನುವುದನ್ನು ಮರೆಯಬಾರದು.
ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದಕ್ಕೆ ರಾಹುಲ್‌ರ ಮಾತೇ ಸಾಕ್ಷ್ಯ ನುಡಿಯುತ್ತದೆ. ನವೆಂಬರ್ ೭ರಿಂದ ೩೦ರ ನಡುವೆ ಈ ಐದು ರಾಜ್ಯ ವಿಧಾನಸಭೆ ಚುನಾವಣೆಗಳು ನಡೆಯುತ್ತವೆ. ಡಿಸೆಂಬರ್ ೩ರಂದು ಮತದಾರರ ತೀರ್ಪು ಬಯಲಾಗುತ್ತದೆ. ಅಲ್ಲಿಯವರೆಗೂ ಕುತೂಹಲದ ಕಟ್ಟೆ ಒಡೆಯದೆ ನಮ್ಮನ್ನೆಲ್ಲ ಕಾಡಲಿದೆ!